ಪುತ್ತೂರಿನಲ್ಲೊಬ್ಬ ಸ್ವಚ್ಛತಾ ಸೇನಾನಿ!
ಪುತ್ತೂರು: ಇವರೊಬ್ಬ ಸ್ವಚ್ಛತಾ ಸೇನಾನಿ. ರಸ್ತೆ ಬದಿಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ, ಸರಕಾರಿ ಕಚೇರಿ ಮುಂಭಾಗದಲ್ಲಿ ಎಲ್ಲಿ ಕಸ, ತ್ಯಾಜ್ಯ ಕಂಡರೂ ತಕ್ಷಣವೇ ತನ್ನ ಮೊಬೈಲ್ ಫೋನ್ ಮೂಲಕ ಅದರ ಫೋಟೊ ತೆಗೆದು ಅಧಿಕಾರಿಗಳಿಗೆ ಕಳುಹಿಸುವುದು ಇವರ ಕಾಯಕ. ಅಲ್ಲಿನ ಕಸ, ತ್ಯಾಜ್ಯ ವಿಲೇ ವಾರಿಯಾಗುವ ತನಕ ಇವರು ವಿರಮಿಸುವುದಿಲ್ಲ. ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ಸ್ವಚ್ಛ ಭಾರತದ ಪರಿಕಲ್ಪನೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಇವರ ಹೆಸರು ರೊಸಾರಿಯೋ ಓಸ್ವಾಲ್ಡ್ ಸಲ್ದಾನ.
77 ವರ್ಷದ ಹಿರಿಯರಾಗಿರುವ ಇವರು ಪುತ್ತೂರು ನಗರದ ದರ್ಬೆ ನಿವಾಸಿ. ಸ್ವಚ್ಛತೆ ಕೇವಲ ಕಣ್ಣ ಮುಂದೆ ಇರುವ ಕಸವನ್ನು ತೆಗೆ ಯುವುದಷ್ಟೇ ಅಲ್ಲ. ಅಂತರಂಗ ಮತ್ತು ಬಹಿರಂಗವಾಗಿ ಸ್ವಚ್ಛತೆ ಕಾಪಾ ಡುವ ಕೆಲಸವಾಗಬೇಕು ಎಂದು ಹೇಳುವ ಓಸ್ವಾಲ್ಡ್ ಸಲ್ದಾನ, ತಾವು ಪ್ರಯಾಣಿಸುವ ಸಂದರ್ಭ ಎಲ್ಲೇ ಕಸ, ತ್ಯಾಜ್ಯ ಎಸೆದಿರುವುದು ಕಾಣಿ ಸಿದರೂ ಆ ಕ್ಷಣವೇ ತನ್ನ ಮೊಬೈಲ್ ಫೋನ್‌ನಲ್ಲಿ ಅದರ ಫೋಟೊ ಸೆರೆ ಹಿಡಿಯುತ್ತಾರೆ. ಬಳಿಕ ಆ ಫೋಟೊವನ್ನು ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಿ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತಾರೆ. ಈ ತನಕ ಸುಮಾರು ಒಂದು ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿನ ಫೋಟೊ ತೆಗೆದು ಸಂಬಂಧಪಟ್ಟವರಿಗೆ ಪತ್ರ ಬರೆದು ತಿಳಿಸಿ ಕಸ ವಿಲೇವಾರಿಗಾಗಿ ಶ್ರಮಿಸಿದ್ದಾರೆ. ಒಂದೊಮ್ಮೆ ಮೈಸೂರಿಗೆ ಹೋಗಿದ್ದ ವೇಳೆ ಅಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಸದ ರಾಶಿ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿಗೆ ಓಸ್ವಾಲ್ಡ್ ಸಲ್ದಾನ ಪತ್ರ ಬರೆದು ಗಮನಸೆಳೆದಿದ್ದರು.
ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆ ಯುವ ಓಸ್ವಾಲ್ಡ್ ಸಲ್ದಾನ ‘ಸ್ವಚ್ಛತೆಯೇ ಸಮೃದ್ಧಿ’ ಎಂಬ ಒಕ್ಕಣೆ ಯೊಂದಿಗೆ ಪತ್ರ ಆರಂಭಿಸುತ್ತಾರೆ. ಪತ್ರದಲ್ಲಿ ಯಾರ ಮೇಲೂ ಆರೋಪ, ಆಪಾದನೆ ಹೊರಿಸದೆ, ಪರಿಹಾರದ ಬಗ್ಗೆ ಮಾತ್ರ ಭಿನ್ನವಿ ಸುತ್ತಾರೆ. ಈ ರೀತಿ ಸ್ವಚ್ಛತೆಗಾಗಿ ಅವರು ಬರೆದಿರುವ ಎಲ್ಲಾ ಪತ್ರಗಳ ಪ್ರತಿಗಳು ಹಾಗೂ ಇದಕ್ಕೆ ಸಂಬಂಧಿಸಿ ಅಧಿಕಾರಿಗಳಿಂದ ಬಂದಿರುವ ಉತ್ತರಗಳ ಪ್ರತಿಯನ್ನು ಇರಿಸಿಕೊಂಡಿದ್ದಾರೆ. ಜೊತೆಗೆ ಇದಕ್ಕೆ ಪೂರಕ ವಾದ ಸಾಕಷ್ಟು ಫೋಟೊಗಳು ಅವರ ಮೊಬೈಲ್‌ನಲ್ಲಿವೆ.
ಸ್ವಚ್ಛತೆ ಕಷ್ಟದ ಕೆಲಸವಲ್ಲ. ಕಸ, ತ್ಯಾಜ್ಯದ ವಿಲೇವಾರಿ ವಿಚಾರದಲ್ಲಿ ನಮ್ಮ ಧೋರಣೆ ಬದಲಾಗಬೇಕು. ನಮ್ಮ ಮನೆಯ ಪರಿಸರದಲ್ಲಿ ಕಸಗಳನ್ನು ಎಸೆದಾಗ ಅದನ್ನು ನೋಡುವ ಜವಾಬ್ದಾರಿ ನಮ್ಮದು ಹೊರತು ಅಧಿಕಾರಿಗಳದ್ದು ಅಲ್ಲ ಎಂದು ಹೇಳುವ ಓಸ್ವಾಲ್ಡ್ ಸಲ್ದಾನ, ಸ್ವಯಂ ಸ್ವಚ್ಛತಾ ಸೇನಾನಿಗಳು ಹೆಚ್ಚಾಗಬೇಕು ಎನ್ನುತ್ತಾರೆ.
ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ನಿವೃತ್ತರಾದ ಬಳಿಕ ಸ್ವಚ್ಛತಾ ಸೇನಾನಿಯಾಗಿ ಜಿಲ್ಲಾದ್ಯಂತ ಸಂಚರಿಸುತ್ತಾ ಕಸಮುಕ್ತ ಪರಿಸರ ನಿರ್ಮಾಣಕ್ಕಾಗಿ ಅಳಿಲು ಸೇವೆ ಸಲ್ಲಿಸುತ್ತಿರುವ ಈ ಹಿರಿಯ ವ್ಯಕ್ತಿ ಮಾದರಿಯಾಗಿದ್ದಾರೆ.
ಪ್ಲಾಸ್ಟಿಕ್ ಎಂಬ ಅಪಾಯಕಾರಿ ಕಸವನ್ನು ನಾವು ಎಲ್ಲೆಂದರಲ್ಲಿ ಕಾಣುತ್ತೇವೆ. ಪ್ಲಾಸ್ಟಿಕ್ ಬಳಕೆ ಅನಿವಾರ್ಯವಲ್ಲ. ಪ್ಲಾಸ್ಟಿಕ್ ಬಳಕೆ ವ್ಯಾಪಕವಾಗುವುದಕ್ಕಿಂತ ಮೊದಲು ನಾವು ಬಟ್ಟೆಯ ಚೀಲಗಳನ್ನು ಬಳಸುತ್ತಿದ್ದೆವು. ಸ್ಟೀಲ್ ಬದಲು ಮಣ್ಣಿನ ಲೋಟಗಳನ್ನು ಬಳಸುತ್ತಿದ್ದೆವು. ಈಗವೂ ಕಾಲ ಮಿಂಚಿಲ್ಲ. ಮತ್ತೆ ಬಟ್ಟೆ ಚೀಲಗಳನ್ನು ಬಳಸಲು ಮುಂದಾಗಬೇಕಿದೆ.
-ರೊಸಾರಿಯೊ ಓಸ್ವಾಲ್ಡ್ ಸಲ್ದಾನ
ಪರಿಸರ ಪ್ರೇಮಿ ರೊಸಾರಿಯೋ ಓಸ್ವಾಲ್ಡ್ ಸಲ್ದಾನ ಅವರ ಪರಿಸರ ಕಾಳಜಿ ಮಾದರಿಯಾಗಿದೆ. ಅಂತಹ ಪರಿಸರ ಪ್ರಜ್ಞೆ ಎಲ್ಲರಿಗೂ ಬಂದರೆ ಪರಿಸರದಲ್ಲಿ ಎಲ್ಲೂ ಕಸವನ್ನು ಕಾಣಲು ಸಾಧ್ಯವಿಲ್ಲ. ಜಿಲ್ಲೆಯಿಡಿ ತಿರುಗಾಡುತ್ತಾ ಕಸ ತ್ಯಾಜ್ಯ ಕಂಡಾಗ ಫೋಟೊ ತೆಗೆದು, ವಾಯ್ಸ್ ಮೆಸೇಜ್ ಹಾಕಿ, ಪತ್ರ ಬರೆದು ಅಧಿಕಾರಿಗಳನ್ನು ಎಚ್ಚರಿಸುವ ಅವರು ನೈಜ ಸ್ವಚ್ಛತಾ ಸೇನಾನಿಯಾಗಿದ್ದಾರೆ.
-ಕೃಷ್ಣ ಮೂಲ್ಯ, ನಿರ್ದೇಶಕರು, ಜನ ಶಿಕ್ಷಣ ಟ್ರಸ್ಟ್