ಸಾಂಸ್ಕೃತಿಕ ಕೇಂದ್ರವಾಗಿದ್ದ ಆದಿಮ, ಈಗ ರಂಗಭೂಮಿ ಶಿಕ್ಷಣ ಕೇಂದ್ರ

Update: 2024-06-24 09:18 GMT

ಕೋಲಾರ: ಹದಿನೆಂಟು ವರ್ಷಗಳಿಂದಲೂ ಕೋಲಾರದ ಅಂತರಗಂಗೆ ಬೆಟ್ಟದ ಶಿವಗಂಗೆ ಗ್ರಾಮದ ಸುಂದರ ಪರಿಸರದಲ್ಲಿ ಸಾಂಸ್ಕೃತಿಕ ಕೇಂದ್ರವಾಗಿ ಕನ್ನಡ ನಾಡು ಹಾಗೂ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿರುವ ಆದಿಮ ಸಾಂಸ್ಕೃತಿಕ ಕೇಂದ್ರವು ಈಗ ಅಧಿಕೃತವಾಗಿ ರಂಗಭೂಮಿ ಶಿಕ್ಷಣ ಕೇಂದ್ರವಾಗಿ ಮಾರ್ಪಟ್ಟಿದೆ. ಆದಿಮ ಸಾರಥ್ಯ ವಹಿಸಿದವರ ಹದಿನೆಂಟು ವರ್ಷಗಳ ಸತತ ಪ್ರಯತ್ನಕ್ಕೆ ಫಲ ಸಿಕ್ಕಂತೆ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದಡಿ ರಂಗಭೂಮಿ ಶಿಕ್ಷಣ ಕೇಂದ್ರವನ್ನು ಶಾಶ್ವತ ಅನುದಾನ ರಹಿತ ಕೇಂದ್ರವಾಗಿ ಪ್ರಸಕ್ತ ಶೈಕ್ಷಣಕ ವರ್ಷದಲ್ಲಿಯೇ ಆರಂಭಿಸಲು 2024 ಫೆಬ್ರವರಿಯಲ್ಲಿ ಅನುಮತಿ ನೀಡಲಾಗಿದೆ.

ಹುಣ್ಣಿಮೆ ಹಾಡು: ಕೋಲಾರದಲ್ಲಿ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕಡಿಮೆ ಇದ್ದ ಸಂದರ್ಭದಲ್ಲಿ ಆದಿಮ ಹುಣ್ಣಿಮೆ ಹಾಡು ಕಾರ್ಯಕ್ರಮ ಆರಂಭಿಸಿತ್ತು. 2006ರ ಆಗಸ್ಟ್ 10ರಿಂದ ಪ್ರತೀ ಹುಣ್ಣಿಮೆಗೆ ಆದಿಮ ಬಯಲು ರಂಗ ಮಂದಿರದಲ್ಲಿ ಹುಣ್ಣಿಮೆ ಹಾಡು ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಈವರೆಗೂ 206 ಕಾರ್ಯಕ್ರಮಗಳು ನಾಟಕ, ಹಾಡು, ತತ್ವಪದ, ನೃತ್ಯರೂಪಕ, ಜಾನಪದ ಕಲಾ ಪ್ರಕಾರಗಳ ಪ್ರದರ್ಶನ, ಗದ್ದುಗೆ ಗೌರವ, ನುಡಿ ನಮನ ಹೀಗೆ ಬಹುವಿಧದ ಕಲೆ, ಕಲಾವಿದರಿಗೆ ವೇದಿಕೆ ಒದಗಿಸಿದೆ. ನೂರಾರು ಕಲಾವಿದರನ್ನು ಸೃಷ್ಠಿಸಿ ಕನ್ನಡ ಕಲಾಲೋಕಕ್ಕೆ ಕೊಡುಗೆ ನೀಡಿದೆ.

ಚುಕ್ಕಿಮೇಳ: ಹುಣ್ಣಿಮೆ ಹಾಡು ಕಾರ್ಯಕ್ರಮದ ಜೊತೆಗೆ ಆದಿಮ ಪ್ರತಿ ವರ್ಷ ನಡೆಸುವ ಚುಕ್ಕಿಮೇಳ ಹೆಸರಿನ ಮಕ್ಕಳ ಬೇಸಿಗೆ ಶಿಬಿರಕ್ಕೂ ಹೆಸರಾಗಿದೆ. ಮಕ್ಕಳಿಗೆ ರಂಗ ಚಟುವಟಿಕೆಗಳ ಪರಿಚಯಿಸುವುದರ ಜೊತೆಗೆ ಅವರ ಸಮಗ್ರ ವ್ಯಕ್ತಿತ್ವ ವಿಕಸನಕ್ಕೂ ದಾರಿ ದೀಪವಾಗಿದೆ.

ಸಾಂಪ್ರದಾಯಿಕ ಕೊಠಡಿ, ಕಪ್ಪುಹಲಗೆ ಕಲಿಕೆಯಿಂದ ಹೊರತಾಗಿ ಸಾಂಸ್ಕೃತಿಕ ಚಟುವಟಿಕೆ, ಮಣ್ಣಿನ ಆಟಿಕೆಗಳ ತಯಾರಿಕೆ, ಚಿತ್ರಕಲೆ, ಪೇಪರ್ ಕ್ರಾಫ್ಟ್, ನಾಟಕ, ತಮಟೆ ವಾದನ, ಡೊಳ್ಳುಕುಣಿತ, ಕೋಲಾಟ, ಪಟದ ಕುಣತ, ನಗಾರಿ, ನೃತ್ಯರೂಪಕ, ಸ್ಥಳೀಯ ಕಲಾ ಪ್ರಕಾರಗಳಲ್ಲಿ ಮಕ್ಕಳು ಚುಕ್ಕಿಮೇಳದ ಮೂಲಕ ನುರಿತ ಕಲಾವಿದರಾಗಿ ವಿಜೃಂಭಿಸಿ ಗಮನ ಸೆಳೆದಿದ್ದಾರೆ. ಕಲಾವಿದರಾಗಿ ರೂಪುಗೊಂಡಿದ್ದಾರೆ.

ಆದಿಮ ಪ್ರಕಾಶನ: ಅರ್ಥಪೂರ್ಣ ಸಾಂಸ್ಕೃತಿಕ ಸಂವಾದಕ್ಕೆ ಆಶಯವಾದ ಪೂರಕವಾದ ಜೀವಪರ ಚಟುವಟಿಕೆಗೆ ಪುಸ್ತಕ ಪ್ರಕಟನೆಯು ಅತ್ಯಗತ್ಯ ಎನ್ನುವುದನ್ನು ಆದಿಮ ಮನಗಂಡಿದೆ. ಆದ್ದರಿಂದ ಪುಸ್ತಕ ಪ್ರಕಾಶನಕ್ಕೂ ಕೈ ಹಾಕಿ ಈವರೆಗೆ 12ಕ್ಕೂ ಹೆಚ್ಚು ಮಹತ್ವದ ಕೃತಿಗಳನ್ನು ಹೊರ ತಂದಿದೆ. ಕಾವ್ಯ, ಸಂಸ್ಕೃತಿ, ವಿಚಾರಧಾರೆ, ಸ್ಥಳೀಯ ಜ್ಞಾನಕ್ಕೆ ಪೂರಕವಾದ ವಿವಿಧ ರೀತಿಯ ಪುಸ್ತಕಗಳನ್ನು ಪ್ರಕಟಿಸಿ ಕನ್ನಡ ಪುಸ್ತಕ ಲೋಕಕ್ಕೆ ಕೊಡುಗೆ ನೀಡಿದೆ.

ಆದರ್ಶ ಗ್ರಂಥಾಲಯ: ಆದರ್ಶ ಎಂಬ ಬಾಲಕನ ನೆನಪಿನಲ್ಲಿ ಆದಿಮ ಆದರ್ಶ ಗ್ರಂಥಾಲಯಕ್ಕೂ ವೇದಿಕೆಯಾಗಿದೆ. ಗ್ರಂಥಾಲಯವು ವಿದ್ಯಾರ್ಥಿ, ಯುವ ಜನತೆಗೆ ಸಂಶೋಧನೆಗೆ ಮತ್ತು ಅಧ್ಯಯನಶೀಲರಿಗೆ ಸಹಕಾರಿಯಾಗಿದೆ. ದೇಶ ವಿದೇಶಿ ವಿದ್ಯಾರ್ಥಿ ಯುವಕರು ಈ ಗ್ರಂಥಾಲಯದ ಪ್ರಯೋಜನ ಪಡೆದಕೊಂಡಿದ್ದಾರೆ. ಆದಿಮ ಹಿತೈಷಿಗಳು ತಮ್ಮಲ್ಲಿರುವ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆ ನೀಡಿ ಬೆಳೆಸುತ್ತಿದ್ದಾರೆ. ನಾಟಕ, ವಿಮರ್ಶೆ, ಸಾಹಿತ್ಯ, ಆತ್ಮಕಥನ, ಮಕ್ಕಳ ಜನಪ್ರಿಯ ಪುಸ್ತಕಗಳು, ವಿಜ್ಞಾನ ಸಾಹಿತ್ಯ ಮತ್ತು ಹಲವಾರು ಮೌಲಿಕ ಸಾಹಿತ್ಯ ಪ್ರಕಾರದ ಪುಸ್ತಕಗಳು ಗ್ರಂಥಾಲಯದ ಮಹತ್ವವನ್ನು ಹೆಚ್ಚಿಸಿದೆ.

ಆದಿಮ ಈವರೆಗೂ ನಡೆಸಿದ ರಂಗಭೂಮಿ ಪ್ರಯೋಗಗಳನ್ನು ರಂಗಭೂಮಿ ಶಿಕ್ಷಣ ಕೇಂದ್ರದ ಮೂಲಕ ಕಲಿಸಲು ಮುಂದಾಗಿದೆ, ನಾಡಿನ ರಂಗಾಯಣ, ನೀನಾಸಂ, ಸಾಣೇಹಳ್ಳಿ ರಂಗ ಶಿಕ್ಷಣ ಕೇಂದ್ರಗಳಿಗಿಂತಲೂ ವಿಭಿನ್ನವಾಗಿ ರಂಗ ಕರ್ಮಿಗಳನ್ನು ರೂಪಿಸಲು ಅವಕಾಶ ಸಿಕ್ಕಿದೆ. ಪ್ರತಿ ಪ್ರೌಢಶಾಲೆಯಲ್ಲಿ ರಂಗಭೂಮಿ ಶಿಕ್ಷಕರು ಇರಬೇಕು ಎಂಬ ಆಶಯ ಈಡೇರಿಸಲು ಅರ್ಹರನ್ನು ಡಿಪ್ಲೊಮೋ ಕಲಿಕೆ ಮೂಲಕ ರೂಪಿಸುವ ಉದ್ದೇಶವಿದೆ.

- ಹ.ಮಾ.ರಾಮಚಂದ್ರ, ಆಡಳಿತಾಧಿಕಾರಿ, ಆದಿಮ ರಂಗಭೂಮಿ ಶಿಕ್ಷಣ ಕೇಂದ್ರ

‘ದಿನಕ್ಕೊಂದು ರೂಪಾಯಿ’ಯಲ್ಲಿ ಆರಂಭಗೊಂಡ ಕೇಂದ್ರ

ಸಮಾನ ಮನಸ್ಕರು ಹಾಗೂ ಆಸಕ್ತರಿಂದ ಮನೆಗೊಂದು ಹುಂಡಿ, ದಿನಕ್ಕೊಂದು ರೂಪಾಯಿ ಸಂಗ್ರಹಿಸುವ ನೇಮದೊಂದಿಗೆ ಸಂಗ್ರಹಿಸಲ್ಪಟ್ಟ 36 ಸಾವಿರ ರೂ.ಗಳ ಸಂಗ್ರಹದೊಂದಿಗೆ ಆರಂಭವಾಗಿದ್ದೇ ಆದಿಮ ಸಾಂಸ್ಕೃತಿಕ ಕೇಂದ್ರ. ಆರಂಭದಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಆದಿಮ ಸಾರಥ್ಯವಹಿಸಿಕೊಂಡಿದ್ದರೆ, ಈಗ ಎನ್.ಮುನಿಸ್ವಾಮಿ, ಕೊಮ್ಮಣ್ಣ ಹಾಗೂ ಹ.ಮಾ.ರಾಮಚಂದ್ರ ಮತ್ತಿತರರ ನಾಯಕತ್ವದಲ್ಲಿ ಮುನ್ನುಗ್ಗುತ್ತಾ ಸಾಂಸ್ಕೃತಿಕ ಲೋಕದಲ್ಲಿ ದಾಪುಗಾಲು ಇಟ್ಟಿದೆ. ಅಂತರಗಂಗೆ ಬೆಟ್ಟದ ಏಳು ಜನವಸತಿ ಗ್ರಾಮಗಳ ಪೈಕಿ ಒಂದಾಗಿರುವ ಶಿವಗಂಗೆಯನ್ನು ನೆಲೆಯಾಗಿಸಿಕೊಂಡು ಆರಂಭವಾದ ಆದಿಮ, ಈಗ ಕೇವಲ ಬೆಟ್ಟಕ್ಕೆ ಮಾತ್ರವಲ್ಲ, ಭಾರತ ದೇಶದಲ್ಲಿಯೇ ಜನಪದ ಆದಿಮ ಕಲೆಗಳ ಕೀರ್ತಿ ಕಿರೀಟವಾಗಿ ರೂಪುಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News