ಅಮೆರಿಕನ್ ಅಜ್ಜಿಯ ಕನ್ನಡ ಪ್ರೇಮ

Update: 2024-07-22 07:27 GMT

ಹಾಸನ: ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ನಿವಾಸಿ ಡಾ.ಸುಝೆನ್ ಹ್ಯಾಂಚೆಟ್(83)ಅವರು ಇತ್ತೀಚೆಗೆ ಕಾರ್ಯಕ್ರಮದ ನಿಮಿತ್ತ ಹಾಸನ ಜಿಲ್ಲೆಯ ಗೊರೂರು ಗ್ರಾಮಕ್ಕೆ ಬಂದಿದ್ದರು. ಕನ್ನಡದ ಪ್ರೇಮಿಯಾಗಿರುವ ಅವರು ಸಾಮಾಜಿಕ ಮಾನವ ಶಾಸ್ತ್ರಜ್ಞೆಯಾಗಿದ್ದಾರೆ.

ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋ ನಿವಾಸಿಯಾಗಿರುವ ಅವರು ತಮ್ಮ ಪತಿ ಸ್ಟ್ಯಾನ್ಲಿ ರೆಗೆಲ್ಸನ್‌ಅವರೊಂದಿಗೆ ಸುಮಾರು 58 ವರ್ಷಗಳ ಹಿಂದೆ ಹಾಸನದ ಗೊರೂರು ಗ್ರಾಮಕ್ಕೆ ಬಂದು ಪತಿಯೊಂದಿಗೆ ಗ್ರಾಮ ಅಧ್ಯಯನದ ಸಂದರ್ಭದಲ್ಲಿ ಕಲಿತ ಕನ್ನಡ ಭಾಷೆಯನ್ನು ಇನ್ನೂ ಮರೆತಿಲ್ಲ. ಕನ್ನಡವನ್ನು ಸಾಕಷ್ಟು ಅಚ್ಚುಕಟ್ಟಾಗಿ ಮಾತನಾಡುವ ಸುಝೆನ್ ಅವರು ಕನ್ನಡವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತಾರೆ. ನಿರ್ಗಳವಾಗಿ ಎಲ್ಲರೊಂದಿಗೆ ಸಂವಹನ ಮಾಡುತ್ತಾರೆ.

ಸುಝೆನ್ ಅವರ ಪತಿ ಸ್ಟ್ಯಾನ್ಲಿ ರೆಗೆಲ್ಸನ್ ಅವರು ಗ್ರಾಮ ಅಧ್ಯಯನದ ವಿಷಯದಲ್ಲಿ ಪಿಎಚ್‌ಡಿ ಅಧ್ಯಯನಕ್ಕೆ ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಗೊರೂರು ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದರು.

ಡಾ.ಸುಝೆನ್ ಹ್ಯಾಂಚೆಟ್ ಅವರು ತಮ್ಮ 83ನೇ ವಯಸ್ಸಿನಲ್ಲಿಯೂ ಕನ್ನಡ ಬರೆಯುವ ಹಂಬಲ ವ್ಯಕ್ತಪಡಿಸುತ್ತಾರೆ. ಎರಡು ಪುಸ್ತಕಗಳು ಪೂರ್ಣ ಗೊಳಿಸಬೇಕು ಎಂದು ಹೇಳುತ್ತಾರೆ. ಸುಝೆನ್‌ಕೊಲಂಬಿಯ ವಿಶ್ವವಿದ್ಯಾನಿಲಯದಿಂದ ಕ್ವೀನ್ಸ್ ಕಾಲೇಜ್, ಸಿಟಿ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್, ಬಾರ್ಡ್ ಕಾಲೇಜ್, ಬರ್ನಾಡ್ ಕಾಲೇಜಿನಲ್ಲಿ 10ವರ್ಷಗಳ ಕಾಲ ಬೋಧಕರಾಗಿ ಕೆಲಸ ಮಾಡಿದ್ದಾರೆ.

ನಂತರ ಕರ್ನಾಟಕದಲ್ಲಿ ಮೂಲಭೂತ ಜನಾಂಗೀಯ ಸಂಶೋಧನೆಯನ್ನು ನಡೆಸಿದ ಅವರು 1979ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಮಾನವ ಶಾಸ್ತ್ರಜ್ಞರಾಗಿ ಕೆಲಸ ಮಾಡಲು ಆರಂಭಿಸಿದರು. ಅವರು 1991ರವರೆಗೆ ಸಮುದಾಯ ಅಭಿವೃದ್ಧಿ, ಸಂತಾನೋತ್ಪತ್ತಿ, ಆರೋಗ್ಯ ಮತ್ತು ಮಕ್ಕಳ ಕಲ್ಯಾಣಕ್ಕೆ ಸಂಬಂಧಿಸಿದಂತೆ ಸೇವೆ ಸಲ್ಲಿಸಿದ್ದಾರೆ.

ಸುಝೆನ್ ಅವರು ಮುಖ್ಯವಾಗಿ ಬಾಂಗ್ಲಾದೇಶದಲ್ಲಿ ಅಂತರ್‌ರಾಷ್ಟ್ರೀಯ ಅಭಿವೃದ್ಧಿ ಸಲಹೆಗಾರರಾಗಿ ಕೆಲಸ ಮಾಡಲು ಆರಂಭಿಸಿದರು. ಇದರೊಂದಿಗೆ ಯುನಿಸೆಫ್ ಕೇರ್ ಮತ್ತು ವಾಟರ್ ಹೆಡ್‌ನಂತಹ ಅನೇಕ ಅಭಿವೃದ್ಧಿ ಮೈನ್ ಏಜೆನ್ಸಿಗಳೊಂದಿಗೆ ಸೇವೆ ಸಲ್ಲಿಸಿದ್ದಾರೆ.

ಸಮಾಜದ ಎಲ್ಲ ವರ್ಗದ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಅವರ ಹೋರಾಟದ ಮುಖ್ಯ ಗುರಿ ಅಭಿವೃದ್ಧಿ, ಕುಡಿಯುವ ನೀರಿನ ಗುಣಮಟ್ಟವನ್ನು ಸುಧಾರಿಸುವುದು ಮತ್ತು ನೈರ್ಮಲ್ಯದಲ್ಲಿ ಮಹಿಳೆಯರ ಹಕ್ಕು.

ಸುಝೆನ್ ಅವರು ಅಮೆರಿಕನ್ ಆಂಥ್ರೂಪಾಲಜಿಕಲ್ ಅಸೋಸಿಯೇಷನ್‌ನ ಸದಸ್ಯರಾಗಿದ್ದಾರೆ ಮತ್ತು ಸೊಸೈಟಿ ಫಾರ್ ಅಪ್ಲೈಡ್ ಆಂಥ್ರೂಪಾಲಜಿಯ ಫೆಲೋ ಆಗಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಮಾನ್ಯತೆ ಪಡೆದ ಎನ್‌ಜಿಒ, ಅಂತರ್‌ರಾಷ್ಟ್ರೀಯ ಮಹಿಳಾ ಮಾನವ ಶಾಸ್ತ್ರ ಸಮ್ಮೇಳನದ (IWAC)ಯಲ್ಲಿ ಸಹ ಅಧಕ್ಷೆಯಾಗಿದ್ದಾರೆ. ಸುಝೆನ್ ಅವರ ಪತಿ ಸ್ಟ್ಯಾನ್ಲಿ ರೆಗೆಲ್ಸನ್ ( (1934 - 2016 ) ಒಬ್ಬ ಮಾನವ ಶಾಸ್ತ್ರೀಯ ಭಾಷಾ ಶಾಸ್ತ್ರಜ್ಞರಾಗಿದ್ದರು.

ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡಿದರು. ಅವರು ಸ್ಟೇಟ್ ಯೂನಿವರ್ಸಿಟಿ ಸ್ಟೋನಿ ಬ್ರೂಕ್ ಮತ್ತು ನ್ಯೂಯಾರ್ಕ್ ಸಿಟಿ ಯೂನಿವರ್ಸಿಟಿಯ ಲೆಹ್ಮನ್ ಕಾಲೇಜಿನಲ್ಲಿ ಮಾನವ ಶಾಸ್ತ್ರವನ್ನು ಕಲಿಸಿದರು. ಅವರು ನ್ಯೂಯಾರ್ಕ್ ಸಿಟಿ ಸರಕಾರದಲ್ಲಿ ಸುದೀರ್ಘ ನಿವೃತ್ತಿ ಜೀವನವನ್ನು ಹೊಂದಿದ್ದರು.

ಸೂಸನ್ ಅವರ ಪತಿ ಸ್ಟ್ಯಾನ್ಲಿ ರೆಗೆಲ್ಸನ್ 2014ರಲ್ಲಿ ನಿವೃತ್ತರಾದರು. 2016ರಲ್ಲಿ ನಿಧನ ಹೊಂದಿದರು. ಪತಿಯ ಅಗಲಿಕೆಯ ನಂತರವೂ ಸುಝೆನ್ ಅವರು ತಮ್ಮ ಸಮಾಜಮುಖಿ ಕೆಲಸಗಳನ್ನು ಮುಂದುವರಿಸಿದ್ದಾರೆ.

ಇಲ್ಲಿಯ ಜನ, ಭಾಷೆ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ನನಗೆ ಕನ್ನಡ ಕಲಿಸಿದ ಸ್ನೇಹಿತೆ ಸಾವಿತ್ರಮ್ಮ, ನನಗೆ ಆಗ ಸುಮಾರು 23 ವಯಸ್ಸು, ಸಾವಿತ್ರಮ್ಮಗೆ 15 ಇರಬಹುದು.ಅಂದು ಕಲಿತ ಕನ್ನಡ ಇಂದಿಗೂ ಮರೆಯಲು ಸಾಧ್ಯವಾಗಲಿಲ್ಲ.

► ಸುಝೆನ್ ಹ್ಯಾಂಚೆಟ್, ಸಾಮಾಜಿಕ ಮಾನವ ಶಾಸ್ತ್ರಜ್ಞೆ

ಸುಝೆನ್ ಹ್ಯಾಂಚೆಟ್‌ಗೆ ಕನ್ನಡ ಕಲಿಯುವ ಆಸಕ್ತಿಯಿತ್ತು

ಸುಝೆನ್ ಹ್ಯಾಂಚೆಟ್ ಅವರಿಗೆ ಕನ್ನಡ ಕಲಿಯುವ ಹಂಬಲವಿತ್ತು. ಅವರಿಗೆ ಕನ್ನಡದ ಭಾಷೆ ಹೇಳಿಕೊಡುವ ಜೊತೆಗೆ ನಾನು ಸಾಕಷ್ಟು ಇಂಗ್ಲಿಷ್ ಭಾಷೆಯನ್ನು ಕಲಿತೆ. ಅವರಿಗೆ ಇಲ್ಲಿಯ ಸೊಗಡಿನ ಬಗ್ಗೆಯೂ ಬಹಳ ಆಸಕ್ತಿ ಇತ್ತು, ದೇಸಿ ಪದ್ಧ್ದತಿಗಳನ್ನು, ಆಚರಣೆಗಳನ್ನು ತಿಳಿದು ಕೊಳ್ಳಲು ಶ್ರಮಿಸುತ್ತಿದ್ದರು. ಇವರು 1967-68ರಲ್ಲಿ ಗೂರೂರಿಗೆ ಬಂದಿದ್ದರು. ನಂತರ 1974ರಲ್ಲಿ ಒಮ್ಮೆ ಬಂದಿದ್ದರು. ಮತ್ತೆ ಈಗ ಬಂದಿದ್ದಾರೆ.

► ಸಾವಿತ್ರಮ್ಮ, ನಿವಾಸಿ, ಗೊರೂರು

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಮಲ್ನಾಡ್ ಮೆಹಬೂಬ್

contributor

Similar News