ನೆಡುವವರ-ಕಡಿಯುವವರ ನಡುವೆ...

ಜೂನ್ 5ರಂದು ಮಾತ್ರ ಪರಿಸರ ದಿನಾಚರಣೆಯಲ್ಲ, ವರ್ಷ ಪೂರ್ತಿ ಪರಿಸರ ದಿನಾಚರಣೆ ಮಾಡಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ. ಇಂದಿನ ತಾಪಮಾನ ಮತ್ತು ಕುಗ್ಗುತ್ತಿರುವ ಅಂತರ್ಜಲಕ್ಕೆ ಪೂರಕವಾಗಿ ನಾವು ಎಷ್ಟು ಹೆಚ್ಚು ಗಿಡಗಳನ್ನು ನೆಟ್ಟು ಸಾಕಿ ಸಲಹುತ್ತೇವೋ ಅಷ್ಟು ನಮ್ಮ ಭವಿಷ್ಯದ ಭದ್ರತೆ ಆದೀತು.

Update: 2024-06-06 07:11 GMT

ರಾಜ್ಯವನ್ನೇ ಕಂಗೆಡಿಸಿರುವ ಬರಗಾಲವೆಂಬ ಕರಾಳ ಛಾಯೆ ಮಾಯವಾಗುತ್ತಾ ಮಳೆ ಎಂಬ ಮಾಯೆ ನಮ್ಮನ್ನಾವರಿಸುತ್ತಾ ಇದೆ. ಮೊನ್ನೆ ನೀರಿಲ್ಲದೇ ತೀವ್ರ ಬರಗಾಲ, ಇನ್ನೊಂದು ತಿಂಗಳಲ್ಲೇ ಅತೀ ಮಳೆಯಾಗಿ ಜಲ ಪ್ರವಾಹ, ಭೂಕುಸಿತದಂತಹ ಪ್ರಾಕೃತಿಕ ದುರಂತ! ಬರ ಮತ್ತು ಪ್ರವಾಹದ ನಡುವೆ ಬದುಕು ಕಟ್ಟಿಕೊಳ್ಳುತ್ತಿರುವ ಜನತೆ ಇದನ್ನು ಅರಗಿಸಿಕೊಳ್ಳುವುದೇ ವಿನಃ ಬರಗಾಲ ಯಾಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ, ಮಳೆ ಬಿದ್ದ ಕೂಡಲೇ ಗುಡ್ಡ, ಬೆಟ್ಟಗಳೇ ಯಾಕೆ ಕೊಚ್ಚಿ ಹೋಗುತ್ತಿವೆ ಎಂಬುದನ್ನು ಚಿಂತಿಸಲು ಯಾರಿಗೂ ಪುರುಸೊತ್ತೇ ಇಲ್ಲ. ಮೊನ್ನೆ ಬಿಸಿಲಿನ ಉರಿ ತಾಪ ತಡೆಯದೇ ಮಳೆ ಬಂದರೆ ಸಾಕಪ್ಪ ಅನ್ನುವವರೇ ಮಳೆ ವಿಪರೀತ ಆದಾಗ ಅದೇ ಮಳೆಗೆ ಶಾಪ ಹಾಕುತ್ತಾರೆ. ಇಲ್ಲಿ ಗಮನಿಸಬೇಕಾದದ್ದು ಈ ಇಳೆಯ ಅತೀ ಬುದ್ದಿವಂತ ಜನರಿಗೆ ತಾವು ಮನೆಯಲ್ಲಿ ಸೋಫಾದಲ್ಲಿ ಕುಳಿತು ಟೀಪಾಯ ಮೇಲೆ ಕಾಲು ಹಾಕಿ ರಿಮೋಟ್ ಮೂಲಕ ಚಾನೆಲ್ ಬದಲಾಯಿಸುತ್ತಿದ್ದಂತೆ ಈ ಪ್ರಕೃತಿಯ ಪ್ರಕ್ರಿಯೆ ಕೂಡಾ ತಾನು ಎಣಿಸಿದಂತೆ ಆಗಬೇಕು ಎಂಬ ಅತೀ ಆಸೆಯಿಂದಲೇ ಇಂದು ಪ್ರಾಕೃತಿಕ ದುರಂತಗಳಿಗೆ ಕಾರಣ.

ಪಶ್ಚಿಮ ಘಟ್ಟದ ಸೂಕ್ಷ್ಮ ಜೀವ ಸಂಕುಲಗಳಿಗೆ ಮಾನವ ತನ್ನ ಮೋಜು, ಬದುಕು, ದುರಾಸೆಗಳ ಮೂಲಕ ಎಷ್ಟೊಂದು ಗೀರು ಗಾಯ ಮಾಡಿರುವನೆಂದು ಲೆಕ್ಕ ಇಟ್ಟವರಾರು? ಇಡೀ ಶರೀರದ ಚರ್ಮ ಕಿತ್ತು ಹೋದ ಮಾನವ ಎಷ್ಟು ಆರೋಗ್ಯವಂತನಾಗಿ ಬದುಕಿಯಾನು? ಅದೇ ರೀತಿ ಈ ಭುವಿಯ ನೆಲದ ಹಸಿರು ಹೊದಿಕೆಯನ್ನು ಈ ಭುವಿಯ ಫಲಾನುಭವಿಯಾದ ಮಾನವ ಎಷ್ಟು ಕಿತ್ತು, ಕತ್ತರಿಸಿ ಎಸೆದಿದ್ದಾನೆ? ‘ಅಭಿವೃದ್ಧಿ’ ಎಂಬ ನೆಪದಲ್ಲಿ, ಧನದಾಸೆಯ ಜಪದಲ್ಲಿ ನಮ್ಮನ್ನಾಳುವ ರಾಜಕೀಯ ವ್ಯವಸ್ಥೆ ಎಷ್ಟೊಂದು ಮರ, ಗಿಡಗಳನ್ನು ಮುಲಾಜಿಲ್ಲದೆ ಕಿತ್ತು, ಕತ್ತರಿಸಿದಾಗ, ನದಿಗಳನ್ನು ಮಲಿನ ಮಾಡಿ ಅಸಂಬದ್ಧ ಯೋಜನೆಗಳನ್ನು ಮಾಡಿ ನದಿಗಳನ್ನು ಬಡಕಲು ಮಾಡಿದಾಗ ನಮ್ಮ ಜನರು ಎಷ್ಟು ಪ್ರಶ್ನಿಸಿದ್ದಾರೆ? ಎಷ್ಟು ತಡೆದಿದ್ದಾರೆ? ನದಿಗಳಿಂದ ಮರಳು ಕಸಿದಾಗ, ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ ಮಾಡಿ ಭೂತಾಯಿಯ ಗರ್ಭವನ್ನೇ ಸೀಳಿದಾಗ, ವನ್ಯ ಜೀವಿಗಳನ್ನು ಕೊಂದು, ತಿಂದು ತೇಗುವ ಅಕ್ರಮ ರೆಸಾರ್ಟುಗಳ ಅಬ್ಬರ ಅತಿಯಾದಾಗ ಇದೇ ಸರಕಾರಿ ವ್ಯವಸ್ಥೆಗೆ ಮತ ನೀಡಿರುವ ಮತದಾರರು ಎಷ್ಟು ಪ್ರತಿಭಟಿಸಿದ್ದಾರೆ? ಆ ಪಕ್ಷ, ಈ ಪಕ್ಷ ಎಂದು ಪಕ್ಷದ ಪರ ವಹಿಸಿದರೇ ಹೊರತು ವೃಕ್ಷಗಳ ನೋವು, ವೇದನೆಗೆ ಕಿವಿಯಾಗಲೇ ಇಲ್ಲ. ವೃಕ್ಷಗಳು ನಮ್ಮನ್ನು ಉಳಿಸುತ್ತವೆ, ಪಕ್ಷಗಳು ನಮ್ಮನ್ನು ಅಳಿಸುತ್ತವೆ ಎಂದು ತಿಳಿದಿದ್ದರೂ ಪ್ರಕೃತಿಯ ಹಂತಕರನ್ನೇ ಪೀಠದಲ್ಲಿ ಕುಳಿಸಿದ ಮೇಲೆ ಬರಗಾಲ ಬರದೇ ಇನ್ನೇನಾಗಬೇಕು?

ಇದೀಗ ಮತ್ತೆ ವಿಶ್ವ ಪರಿಸರ ದಿನಾಚರಣೆಯ ಕಾಲ. ಜೀವ ಮಾನದಲ್ಲಿ ಗಿಡವನ್ನೇ ಮುಟ್ಟದವರು ಪರಿಸರ ದಿನಾಚರಣೆಯಂದು ಅಬ್ಬಬ್ಬಾ ಸೂಟು ಬೂಟಿನಲ್ಲಿ ಕೆಸರು ಕೊಳೆ ಮಣ್ಣು ತಾಗದಂತೆ ಏನು ಗಿಡ ನೆಡುವ ಸಂಭ್ರಮ?! ಏನು ಗೌಜಿ?! ಅಲ್ಲಿ ಸಾವಿರ ಗಿಡ ನೆಟ್ಟರಂತೆ, ಇಲ್ಲಿ ಲಕ್ಷ ಗಿಡ ನೆಟ್ಟರಂತೆ, ಇನ್ನು ಸರಕಾರದ ಮಟ್ಟದಲ್ಲಿ ‘ಕೋಟಿ ವೃಕ್ಷ ಆಂದೋಲನವಂತೆ ’...ಪರಿಸರ ದಿನಾಚರಣೆಯಂದು ಪ್ರತೀ ವರುಷ ಕೋಟಿ, ಕೋಟಿ ಗಿಡಗಳನ್ನು ನೆಟ್ಟು ಅದು ಪೂರ್ತಿ ಬಿಡಿ ಅರ್ಧದಷ್ಟಾದರೂ ನೆಟ್ಟ ಗಿಡಗಳು ಬದುಕ್ಕಿದ್ದರೆ ಇಡೀ ರಾಜ್ಯವೇ ಹಸುರಿನಿಂದ ಕಂಗೊಳಿಸುತ್ತಿತ್ತು. ಪರಿಸರ ದಿನಾಚರಣೆಯ ಮುಂದಿನ ವಾರ ನೆಟ್ಟ ಗಿಡಗಳ ಕುತ್ತಿ ಸಹಿತ ಇರುವುದಿಲ್ಲ. ಇಂತಹ ಶೋಕಿ ಪರಿಸರ ಪ್ರೇಮಿಗಳು (ನೈಜ ಆಸಕ್ತಿಯಿಂದ, ಪರಿಸರ ಕಾಳಜಿಯಿಂದ ನೆಟ್ಟು ಸಾಕಿ ಸಲಹುವವರು ಇದ್ದಾರೆ, ಇಲ್ಲವೆಂದಲ್ಲ ) ಗಿಡ ನೆಡುವುದಕ್ಕಿಂತ ಗಿಡ ನೆಡದೇ ಇರುವುದು ಒಳಿತು. ಯಾಕೆಂದರೆ ಇವರು ನೆಡುವ ಗಿಡ ಎಲ್ಲೋ ನರ್ಸರಿಯಲ್ಲೋ ಜೀವಂತವಾಗಿ ಇರುತ್ತಿತ್ತು. ಇವರು ನೆಡಲು ತಂದು ಅದನ್ನು ಕೊಲ್ಲುವುದೆಂದರೆ ಅದು ವನ ಮಹೋತ್ಸವವಲ್ಲ, ಗಿಡಗಳ ಹೆಣ ಮಹೋತ್ಸವ ಆದೀತು.

ಜೂನ್ 5ರಂದು ಮಾತ್ರ ಪರಿಸರ ದಿನಾಚರಣೆಯಲ್ಲ, ವರ್ಷ ಪೂರ್ತಿ ಪರಿಸರ ದಿನಾಚರಣೆ ಮಾಡಬೇಕಾದ ಸಂದಿಗ್ಧ್ದ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ. ಇಂದಿನ ತಾಪಮಾನ ಮತ್ತು ಕುಗ್ಗುತ್ತಿರುವ ಅಂತರ್ಜಲಕ್ಕೆ ಪೂರಕವಾಗಿ ನಾವು ಎಷ್ಟು ಹೆಚ್ಚು ಗಿಡಗಳನ್ನು ನೆಟ್ಟು ಸಾಕಿ ಸಲಹುತ್ತೇವೋ ಅಷ್ಟು ನಮ್ಮ ಭವಿಷ್ಯದ ಭದ್ರತೆ ಆದೀತು.

ಗಿಡ ನೆಟ್ಟು ಬಿಟ್ಟರೆ ಸಾಲದು. ಜೊತೆಗೆ ಕಳೆದ ವರ್ಷ ನೆಟ್ಟ ಗಿಡ ಈಗ ಎಷ್ಟು ಬೆಳೆದಿದೆ, ಇಂದು ನೆಟ್ಟ ಗಿಡ ಮುಂದಿನ ವರುಷದ ಪರಿಸರ ದಿನಾಚರಣೆಯಂದು ಎಷ್ಟು ಎತ್ತರಕ್ಕೆ ಬೆಳೆದಿದೆ ಎಂಬ ಶ್ರದ್ಧೆ, ಕಾಳಜಿಯೇ ನೈಜ ಪರಿಸರ ದಿನಾಚರಣೆ. ಗಿಡ ನೆಟ್ಟವರು ನಮ್ಮ ಸುತ್ತಮುತ್ತ ಯಾರಾದರೂ ಗಿಡ, ಮರಗಳನ್ನು ಕಡಿಯುವಾಗ ಅದನ್ನು ತಡೆಯದೇ ಇದ್ದರೆ ವಿಶ್ವ ಪರಿಸರ ದಿನದಂದು ಗಿಡ ನೆಡುವುದಕ್ಕೆ ಯಾವುದೇ ಅರ್ಥವಿಲ್ಲ. ಇಲ್ಲಿ ನೆಡುವುದು, ಅಲ್ಲಿ ಕಡಿಯುವುದು. ನೆಟ್ಟಾಗ ಇರುವ ಖುಶಿ, ಸಂಭ್ರಮ ಕಡಿಯುವಾಗ ಅದನ್ನು ತಡೆದು ಹತ್ಯೆಯಾಗುವ ಮರದ ಜೀವ ಉಳಿಸಿದ್ದೇವೆಂದು ಮತ್ತೆ ಅದೇ ಖುಶಿ, ಸಂಭ್ರಮ ಇರಬೇಕು. ಅದು ನಗರ, ಗ್ರಾಮೀಣ ಪರಿಸರ ಮಾತ್ರವಲ್ಲ ಪಶ್ಚಿಮ ಘಟ್ಟದಲ್ಲಿ ಯಾವುದೋ ಅಸಂಬದ್ಧ ಯೋಜನೆಗೆ ಸಾವಿರಾರು ಮರ ಕಡಿಯುವಾಗಲೂ ತಡೆಯಬೇಕಾದದ್ದು ನೈಜ ಪರಿಸರ ಪ್ರೇಮಿಯ ಕಾಳಜಿ ಮತ್ತು ಜವಾಬ್ದಾರಿ.

ಬೆಂಗಳೂರು, ಮಂಗಳೂರು ಎಂಬ ಮಹಾ ನಗರಗಳಲ್ಲಿ ಇಂದು ತಾಪ ವಿಪರೀತ ಹೆಚ್ಚುತ್ತಿದೆ. ಯಾವಾಗ ಈ ನಗರಗಳನ್ನು ಸ್ಮಾರ್ಟ್ ಸಿಟಿ ಎಂಬ ಅಲಂಕಾರ ಮಾಡಿದರೋ ಆಗ ನಗರದ ತಂಪು ಕಡಿಮೆಯಾಗಿ ತಾಪ ಹೆಚ್ಚಿತು. ಇದ್ದಲ್ಲೆಲ್ಲಾ ಕಾಂಕ್ರಿಟ್ ರಸ್ತೆ, ಇದ್ದ ಅಲ್ಪ ಸ್ವಲ್ಪ ಮರಗಳನ್ನು ಕಡಿದು ಬಿಟ್ಟರೆ ತಾಪ ಹೆಚ್ಚಾಗದೇ ಇನ್ನೇನಾಗಬೇಕು?

ಇಂತಹ ಸಂದರ್ಭದಲ್ಲಿ ನಗರದ ಒಳಗೆ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಮರ, ಗಿಡಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿಯುತ್ತಿರುವಾಗ ಇದೇ ವಿಶ್ವ ಪರಿಸರ ದಿನಾಚರಣೆಯಂದು ಶೋಕಿಗಾಗಿ ಗಿಡಗಳನ್ನು ನೆಡುವವರು ಎಷ್ಟು ತಡೆದಿದ್ದಾರೆ? ಎಷ್ಟು ಉಳಿಸಿದ್ದಾರೆ?

ನೆಲದ ಹಸಿರು ಹೊದಿಕೆಯನ್ನು ಇನ್ನಷ್ಟು ಹೆಚ್ಚಿಸಬೇಕು, ತಾಪವನ್ನು ಕಡಿಮೆ ಮಾಡಿ ತಂಪು ಹೆಚ್ಚಾಗುವಂತೆ ಮಾಡಿ ಅಂತರ್ ಜಲ ವೃದ್ಧಿಸುವಂತೆ ಮಾಡುವ ನೈಜ ಕಾಳಜಿ, ಉದ್ದೇಶಗಳೊಂದಿಗೆ ಗಿಡಗಳನ್ನು ನೆಡುವ ಕಾರ್ಯಕ್ರಮಗಳು ಜರುಗಲಿ. ನಮಗೆ, ನಿಮಗೆ ಅಲ್ಲದಿದ್ದರೂ ನಮ್ಮ, ನಿಮ್ಮ ಮಕ್ಕಳ ಭವಿಷ್ಯದ ಭದ್ರತೆಗಾದರೂ ಒಂದಿಷ್ಟು ಗಿಡಗಳನ್ನು ನೆಟ್ಟು ಸಾಕಿ, ಸಲಹಿ ಭೂಮಿ ತಾಯಿಯ ಪ್ರೀತಿಯನ್ನು ಗಳಿಸೋಣ. ಇಳೆಗೆ ಹಸಿರು ಅಲಂಕಾರದ ತೋರಣ ಕಟ್ಟೋಣ.

Writer - ವಾರ್ತಾಭಾರತಿ

contributor

Editor - Thouheed

contributor

Byline - ದಿನೇಶ್ ಹೊಳ್ಳ

contributor

Similar News