ಚಂದ್ರಶೇಖರ್ ಆಝಾದ್ ಗೆಲುವು: ಉತ್ತರ ಪ್ರದೇಶದಲ್ಲಿ ಹೊಸ ದಲಿತ ನಾಯಕನ ಉದಯ

Update: 2024-06-06 10:15 GMT
Editor : Thouheed | Byline : ಚಿನ್ಮಯಿ

ದಲಿತ ನಾಯಕ, ಕಟ್ಟಾ ಅಂಬೇಡ್ಕರ್ ವಾದಿ ಮತ್ತು ಆಝಾದ್ ಸಮಾಜ ಪಕ್ಷ (ಕಾನ್ಶಿ ರಾಮ್)ದ ನಾಯಕ ಚಂದ್ರಶೇಖರ್ ಆಝಾದ್ ಅವರು ಉತ್ತರ ಪ್ರದೇಶದ ನಗೀನಾ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವುದರೊಂದಿಗೆ ಹೊಸ ದಲಿತ ನಾಯಕನ ಉದಯವಾದಂತಾಗಿದೆ.

ದಲಿತ ನಾಯಕಿ ಮಾಯಾವತಿಯವರ ಬಿಎಸ್ಪಿ ಪಕ್ಷ ಅಪ್ರಸ್ತುತವಾಗಿರುವಾಗ ಅದೇ ಪಕ್ಷದ ಸ್ಥಾಪಕ ಕಾನ್ಸಿರಾಮ್ ಅವರ ಹೆಸರನ್ನಿಟ್ಟುಕೊಂಡ ಹೊಸ ಪಕ್ಷದ ನಾಯಕ ಸಂಸತ್ ಸದಸ್ಯನಾಗಿ ಆಯ್ಕೆಯಾಗಿದ್ದಾರೆ.

ಆಝಾದ್ ಅವರು ಬಿಜೆಪಿಯ ಓಂ ಕುಮಾರ್ ಅವರನ್ನು 1.5 ಲಕ್ಷ ಮತಗಳಿಂದ ಸೋಲಿಸಿದ್ದಾರೆ.

ಆಝಾದ್ 5,12,552 ಮತಗಳನ್ನು ಪಡೆದರೆ, ಕುಮಾರ್ 3,61,079 ಮತಗಳನ್ನು ಪಡೆದಿದ್ದಾರೆ.

ಸಮಾಜವಾದಿ ಪಕ್ಷದ ಮನೋಜ್ ಕುಮಾರ್ 1,02,374 ಮತಗಳನ್ನು ಪಡೆದರೆ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಸುರೇಂದ್ರ ಪಾಲ್ ಸಿಂಗ್ 13,272 ಮತಗಳನ್ನಷ್ಟೇ ಪಡೆದಿದ್ದಾರೆ.

2019ರಲ್ಲಿ ಈ ಕ್ಷೇತ್ರದಲ್ಲಿ ಬಿಎಸ್‌ಪಿಯ ಗಿರೀಶ್‌ಚಂದ್ರ ಅವರು ಬಿಜೆಪಿ ಅಭ್ಯರ್ಥಿ ಯಶವಂತ್ ಸಿಂಗ್ ಅವರನ್ನು 1,66,832 ಮತಗಳಿಂದ ಸೋಲಿಸಿ ಗೆದ್ದಿದ್ದರು.

2014ರಲ್ಲಿ ಈ ಕ್ಷೇತ್ರ ಬಿಜೆಪಿ ಪಾಲಾಗಿತ್ತು.

2009ರಲ್ಲಿ ಸಮಾಜವಾದಿ ಪಕ್ಷ ಇಲ್ಲಿ ಗೆದ್ದಿತ್ತು.

ಚಂದ್ರಶೇಖರ್ ಆಝಾದ್ ಅವರು ಭೀಮ್ ಆರ್ಮಿಯನ್ನು ಕಟ್ಟಿದ್ದು 2015ರಲ್ಲಿ.

ಅಧಿಕೃತವಾಗಿ ಇದನ್ನು ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಎಂದು ಕರೆಯಲಾಗುತ್ತದೆ.

ಭೀಮ್ ಆರ್ಮಿ ಕಟ್ಟುವ ಮೂಲಕ ಮುನ್ನೆಲೆಗೆ ಬಂದ ಆಝಾದ್, ಈ ಸಂಘಟನೆಯ ಮೂಲಕ ದಲಿತರ ಹಕ್ಕುಗಳಿಗಾಗಿ ದನಿಯೆತ್ತತೊಡಗಿದರು.

ಆ ಹೊತ್ತಿನಲ್ಲಿ ದೇಶದಲ್ಲಿ ನಡೆದ ಹಲವಾರು ದಲಿತ ಚಳವಳಿಗಳಲ್ಲಿ ಆಝಾದ್ ಮುಂಚೂಣಿಯಲ್ಲಿದ್ದರು.

ಎಪ್ರಿಲ್ 2017 ರಲ್ಲಿ ಸಹರಾನ್ ಪುರದಲ್ಲಿ ದಲಿತರ ಕಾಲನಿಗೆ ನುಗ್ಗಿದ ಠಾಕೂರ್ ಸಮುದಾಯದ ಜೊತೆ ನಡೆದ ಘರ್ಷಣೆ ಹಾಗೂ ಹಿಂಸೆಯ ಪ್ರಕರಣದಲ್ಲಿ ಚಂದ್ರಶೇಖರ್ ಅವರನ್ನು ನ್ಯಾಷನಲ್ ಸೆಕ್ಯೂರಿಟಿ ಆ್ಯಕ್ಟ್ ಕಾಯ್ದೆಯಡಿ ಬಂಧಿಸಲಾಗಿತ್ತು. ಬಳಿಕ ಅವರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿತು.

2019 ರಲ್ಲಿ ಚಂದ್ರಶೇಖರ್ ಆಝಾದ್ ವಾರಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಿದ್ದರು.

ಆಗ ಆಝಾದ್ ರ ಪಕ್ಷವನ್ನು ಸ್ಥಾಪಿಸಿದ್ದೇ ಬಿಜೆಪಿ, ಆತ ಬಿಜೆಪಿಯ ಏಜೆಂಟ್. ಆತ ದಲಿತರ ಓಟುಗಳನ್ನು ವಿಭಜಿಸಲು ಕೆಲಸ ಮಾಡುತ್ತಿದ್ದಾನೆ ಎಂದು ಮಾಯಾವತಿ ಆರೋಪಿಸಿದ್ದರು.

ಫೈರ್‌ಬ್ರ್ಯಾಂಡ್ ನಾಯಕ ಆಝಾದ್ 2020ರ ಮಾಚ್‌ರ್ನಲ್ಲಿ ರಾಜಕೀಯ ಸಂಘಟನೆಯಾದ ಆಝಾದ್ ಸಮಾಜ ಪಕ್ಷವನ್ನು ಕಟ್ಟಿದರು.

ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳದ ಹಲವಾರು ನಾಯಕರು ಆ ಪಕ್ಷವನ್ನು ಸೇರಿದರು.

2021 ರಲ್ಲಿ ಜಾಗತಿಕ ಟೈಮ್ ಮ್ಯಾಗಝಿನ್ ಭವಿಷ್ಯ ರೂಪಿಸುವ ನೂರು ಪ್ರಭಾವಿ ನಾಯಕರ ಪಟ್ಟಿಯಲ್ಲಿ ಚಂದ್ರಶೇಖರ್ ಅಝಾದ್ ರನ್ನು ಸೇರಿಸಿತ್ತು.

ಸಿಎಎ ವಿರುದ್ಧದ ಹೋರಾಟದಲ್ಲೂ ಭಾಗಿಯಾಗಿದ್ದ ಆಝಾದ್ ರನ್ನು ದಿಲ್ಲಿಯ ಜಾಮಿಯಾ ಮಸೀದಿ ಬಳಿಯ ಪ್ರತಿಭಟನಾ ಸ್ಥಳಕ್ಕೆ ಹೋಗುವಾಗ ದಿಲ್ಲಿ ಪೊಲೀಸರು ಬಂಧಿಸಿ ಕೆಲವು ದಿನಗಳ ಕಾಲ ಜೈಲಿನಲ್ಲಿಟ್ಟಿದ್ದರು.

2008ರ ಕ್ಷೇತ್ರ ಪುನರ್ವಿಂಗಡಣೆ ಬಳಿಕ ನಗೀನಾ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು.

ಅದು ಪರಿಶಿಷ್ಟ ಜಾತಿಗಳಿಗೆ ಮೀಸಲಾದ ಸ್ಥಾನವಾಗಿದ್ದು, ಸುಮಾರು ಶೇ.21ರಷ್ಟು ಎಸ್‌ಸಿ ಮತದಾರರಿದ್ದಾರೆ.

ಕ್ಷೇತ್ರದಲ್ಲಿ ಶೇ.50ಕ್ಕೂ ಹೆಚ್ಚು ಮುಸ್ಲಿಮ್ ಮತದಾರರಿದ್ದಾರೆ.

ನಗೀನಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿವೆ.

ಅವುಗಳಲ್ಲಿ ಮೂರರಲ್ಲಿ ಈಗ ಎಸ್‌ಪಿ ಶಾಸಕರಿದ್ದರೆ, ಎರಡರಲ್ಲಿ ಬಿಜೆಪಿ ಶಾಸಕರಿದ್ಧಾರೆ.

ಒಂದು ಕಾಲದಲ್ಲಿ ಉತ್ತರ ಪ್ರದೇಶದ ಪ್ರಬಲ ಪಕ್ಷವಾಗಿ ಮೆರೆದಿದ್ದ ಬಿಎಸ್ಪಿ, ಈ ಬಾರಿ ಹೇಳ ಹೆಸರಿಲ್ಲದಂತಾಗಿದೆ.

ಸ್ಪರ್ಧೆ ಮಾಡಿದ್ದ 79 ಕ್ಷೇತ್ರಗಳಲ್ಲಿ ಹಾಗೂ ದೇಶಾದ್ಯಂತ 424 ಕ್ಷೇತ್ರಗಳಲ್ಲಿ ಒಂದರಲ್ಲೂ ಮುನ್ನಡೆ ಸಾಧಿಸಿಲ್ಲ.

ಉತ್ತರ ಪ್ರದೇಶದಲ್ಲಿ ಬಿಜೆಪಿ 33, ಸಮಾಜವಾದಿ ಪಕ್ಷ 37, ಕಾಂಗ್ರೆಸ್ 6 , ಆರ್‌ಎಲ್‌ಡಿ 2 ಹಾಗೂ ಇತರರು 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆೆ.

ಒಂದೂ ಸ್ಥಾನವನ್ನು ಗೆಲ್ಲಲಾರದ ಬಿಎಸ್ಪಿ ನೇಪಥ್ಯಕ್ಕೆ ಸರಿದಂತೆ ಕಾಣಿಸುತ್ತದೆ.

ಈ ನಡುವೆ ಅದರ ಭಾವಿ ನಾಯಕ ಎಂದೇ ಬಿಂಬಿಸಲಾಗಿದ್ದ ಆಕಾಶ್ ಆನಂದ್ ಅವರನ್ನೂ ಚುನಾವಣೆಯ ನಡುವೆಯೇ ಮಾಯಾವತಿ ಕೆಳಗಿಳಿಸಿ ಬಿಟ್ಟರು.

ಇದು ಬಿಎಸ್ಪಿಯ ಯುಗಾಂತ್ಯವೇ ಎಂಬ ಪ್ರಶ್ನೆಗಳು ಮೂಡಿರುವ ಹೊತ್ತಲ್ಲಿ ದಲಿತರ ಪರ ದನಿಯಾದ ಭೀಮ್ ಆರ್ಮಿ ಮೂಲಕ ಆಝಾದ್ ಹೊಸ ದಲಿತ ನಾಯಕನಾಗಿ ಹೊರಹೊಮ್ಮಿದ್ದಾರೆ.

ಈ ಹೊತ್ತಿನಲ್ಲಿನ ಆಝಾದ್ ಗೆಲುವು ಹೊಸ ಇತಿಹಾಸ.

ಆಝಾದ್ ಅವರ ಆಜಾದ್ ಸಮಾಜ ಪಕ್ಷ ಲೋಕಸಭಾ ಚುನಾವಣೆ ಎದುರಿಸಿದ್ದು ಇದೇ ಮೊದಲ ಸಲ.

ಕೇವಲ ನಾಲ್ಕು ವರ್ಷ ಹಳೆಯ ಪಕ್ಷವಾಗಿರುವ ಇದರ ಗುರಿ ಸಾಮಾಜಿಕ ಪರಿವರ್ತನೆ ಎಂಬುದು ಆಝಾದ್ ಪ್ರತಿಪಾದನೆ.

ಬಡವರ ಮಕ್ಕಳು ಆಡಳಿತ ನಡೆಸಬೇಕು ಎಂಬ ಧ್ಯೆಯದೊಂದಿಗೆ ಚುನಾವಣೆ ಎದುರಿಸಿದ್ದ ಅದರ ಗೆಲುವು ಮಹತ್ವದ ವಿದ್ಯಮಾನ.

ಅಂಬೇಡ್ಕರ್ ವಾದಿ ಮತ್ತು ಜಾತಿ ವಿರೋಧಿ ಹೋರಾಟಗಾರ ಆಝಾದ್ ಇಂಡಿಯಾ ಒಕ್ಕೂಟದೊಂದಿಗೆ ಮೈತ್ರಿಯನ್ನೂ ನಿರಾಕರಿಸಿದ್ದರು.

ನಾನು ಬಿಜೆಪಿಯನ್ನು ಸೋಲಿಸಲು ಅವರ ಜೊತೆ ಕೈಗೂಡಿಸಬಯಸಿದ್ದೆ. ಆದರೆ ಅವರು ನನ್ನನ್ನೇ ಸೋಲಿಸಲು ನೋಡುತ್ತಿದ್ದಾರೆ.

ನಾನು ಅವರಿಗೆ ಥ್ರೆಟ್ ಆಗಿ ಕಾಣಿಸತೊಡಗಿದ್ದೇನೆ ಎಂದು ಆ ಹೊತ್ತಲ್ಲಿ ಅವರು ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಈಗ ಸ್ವತಂತ್ರವಾಗಿಯೇ ಅವರ ಗೆಲುವು ಸಾಧ್ಯವಾಗಿರುವುದು ದಲಿತ ಶಕ್ತಿಯ ಒಂದು ನಿದರ್ಶನದಂತೆ ಕಾಣಿಸತೊಡಗಿದೆ.

ಬಿಜೆಪಿ ವಿರುದ್ಧದ ಹೋರಾಟದಲ್ಲಿ ಬಿಎಸ್ಪಿ ಅಪ್ರಸ್ತುತವಾಗಿದ್ದೇ ಅದರ ಸೋಲಿಗೆ ಕಾರಣ ಎಂದು ಆಝಾದ್ ಅವರು ಮಾಯಾವತಿ ವಿಫಲತೆಯನ್ನು ವ್ಯಾಖ್ಯಾನಿಸುತ್ತಾರೆ.

ಬಹಳ ದೀರ್ಘಕಾಲದಿಂದ ಬಿಎಸ್ಪಿಗೆ ಮತ ಹಾಕಿದ ಜನರಿಗೆ ಈಗ ಬಿಎಸ್ಪಿ ನಡೆಯಿಂದ ತಾವು ವಂಚಿತರಾಗಿದ್ದೇವೆ ಎಂದೆನ್ನಿಸಿದೆ ಎನ್ನುತ್ತಾರೆ ಅವರು.

ನಾನು ರಾಜಕೀಯಕ್ಕೆ ಬಂದಿರುವುದು ಜನಸೇವೆಗಾಗಿಯೇ ಹೊರತು ಯಾವುದೇ ಪಕ್ಷಕ್ಕೆ ಸವಾಲು ಹಾಕುವುದಕ್ಕಲ್ಲ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಪರವಾಗಿ ನನ್ನ ರಾಜಕೀಯ.

ಮಹಿಳೆಯರು, ಯುವಕರು, ರೈತರು, ನಿರುದ್ಯೋಗಿಗಳಿಗಾಗಿ ನನ್ನ ರಾಜಕೀಯ ಎಂಬುದು ಆಝಾದ್ ನಿಲುವು.

ತಾನು ಮಾಡಿದ ಕೆಲಸವೇ ಈ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸುತ್ತದೆ ಎಂಬ ವಿಶ್ವಾಸ ಅವರದಾಗಿತ್ತು. ಅದೇ ಕಡೆಗೆ ನಿಜವೂ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಚಿನ್ಮಯಿ

contributor

Similar News