ಚಿಕ್ಕಮಗಳೂರು: ಅಕ್ರಮ ಭೂ ಮಂಜೂರಾತಿ ಹಗರಣ; ತನಿಖಾ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಡಿಸಿಗೆ ಸರಕಾರ ಸೂಚನೆ

Update: 2024-05-16 05:22 GMT

ಸಾಂದ್ರಭಿಕ ಚಿತ್ರ Photo: freepik 

ಚಿಕ್ಕಮಗಳೂರು: ರಾಜ್ಯಮಟ್ಟದಲ್ಲಿ ಗಮನಸೆಳೆದಿದ್ದ ಕಡೂರು ಮತ್ತು ಮೂಡಿಗೆರೆ ತಾಲೂಕಿನ ಅಕ್ರಮ ಭೂ ಮಂಜೂರು ಹಗರಣ ಕುರಿತಂತೆ ರಚಿಸಲಾದ 15 ಅಧಿಕಾರಿಗಳ ತನಿಖಾ ತಂಡ ನೀಡಿದ ವರದಿಯನ್ನು ಆಧರಿಸಿ ತಪ್ಪಿತಸ್ಥರು ಎಂದು ಗುರುತಿಸಿರುವ ಜಿಲ್ಲೆಯ ನೂರಕ್ಕೂ ಅಧಿಕ ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರವು ಜಿಲ್ಲಾಧಿಕಾರಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

2019ರಿಂದ 2021ರ ಅವಧಿಯಲ್ಲಿ ಕಡೂರು, ಮೂಡಿಗೆರೆ ಹಾಗೂ ಕಳಸ ತಾಲೂಕುಗಳ ವ್ಯಾಪ್ತಿಯಲ್ಲಿ ಸರಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಂಜೂರು ಮಾಡಿರುವ ಪ್ರಕರಣದ ಕುರಿತಂತೆ ಸ್ಥಳೀಯರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ತರೀಕೆರೆ ಹಾಗೂ ಚಿಕ್ಕಮಗಳೂರು ಕಂದಾಯ ಉಪವಿಭಾಗಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದರು.

ಕಂದಾಯ ಉಪವಿಭಾಗಾಧಿಕಾರಿಗಳ ತನಿಖೆಯಲ್ಲಿ ಭಾರೀ ಪ್ರಮಾಣದ ಭೂ ಅಕ್ರಮ ಮಂಜೂರು ಬಹಿರಂಗಗೊಂಡಿತ್ತಾದರೂ ಆ ಬಗ್ಗೆ ತಪ್ಪಿತಸ್ಥ ಅಧಿಕಾರಿ, ಭೂ ಮಾಲಕರ ವಿರುದ್ಧ ಶಿಸ್ತಿನ ಕ್ರಮ ಆಗದೇ ಅಧಿಕಾರಿ, ಸಿಬ್ಬಂದಿ ನಡುವಿನ ಚರ್ಚೆಯ ವಿಷಯವಾಗಿತ್ತು. ಈ ಪ್ರಕರಣದಲ್ಲಿ ಮೂಡಿಗೆರೆ ಹಾಗೂ ಕಡೂರು ತಾಲೂಕಿನ ಈ ಹಿಂದಿನ ಇಬ್ಬರು ತಹಶೀಲ್ದಾರ್‌ಗಳು ಮತ್ತು ಕೆಲ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಕಡೂರು ತಹಶೀಲ್ದಾರ್ ಉಮೇಶ್‌ರ ಬಂಧನವೂ ಆಗಿತ್ತು. ಅಲ್ಲದೇ, ಮೂಡಿಗೆರೆ, ಕಡೂರು ತಾಲೂಕುಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಂಜೂರಾಗಿದ್ದ ನೂರಾರು ಎಕರೆ ಸರಕಾರಿ ಜಾಗವನ್ನು ಜಿಲ್ಲಾಡಳಿತ ತೆರವು ಮಾಡಿ ವಶಕ್ಕೂ ಪಡೆದಿತ್ತು.

ಕಡೂರು ತಾಲೂಕಿನಲ್ಲಿ ನಡೆದಿದ್ದ ಭಾರೀ ಭೂ ಅಕ್ರಮದ ಬಗ್ಗೆ ಕಡೂರಿನ ಹಾಲಿ ಶಾಸಕ ಆನಂದ್, ಪ್ರಕರಣದ ಸೂಕ್ಷ್ಮತೆಯ ಮಾಹಿತಿ ತಿಳಿದು ಆಗಿನ ಶಾಸಕರ ವಿರುದ್ಧ ಆರೋಪಿಸುವ ನಿಟ್ಟಿನಲ್ಲಿ ಕಡೂರು ತಾಲೂಕಿನಲ್ಲಿ ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ನಡೆಸಿದ ಭಾರೀ ಪ್ರಮಾಣದ ಭೂ ಹಗರಣದ ಬೆನ್ನು ಹತ್ತಿದ್ದರು. ಆನಂತರ ಚುನಾವಣೆ ನಡೆದು ಅವರು ಶಾಸಕರಾಗಿ ಆಯ್ಕೆಯಾದ ನಂತರ ಅಕ್ರಮ ಭೂ ಮಂಜೂರು ಹಗರಣದ ತನಿಖೆಗೆ ಸರಕಾರವನ್ನು ಒತ್ತಾಯಿಸತೊಡಗಿದ್ದರು.

ಅದೇ ಸಂದರ್ಭದಲ್ಲಿ ಪ್ರಾಮಾಣಿಕ ಅಧಿಕಾರಿಗಳಲ್ಲಿ ಓರ್ವರಾದ ರಾಜೇಂದ್ರ ಕುಮಾರ್ ಕಟಾರಿಯಾ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರ ಜೊತೆಗೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿಯೂ ನಿಯುಕ್ತಿಗೊಂಡರು. ಈ ಹಿನ್ನೆಲೆಯಲ್ಲಿ ಶಾಸಕ ಆನಂದ್ ಈ ಭೂ ಹಗರಣದ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಒತ್ತಾಯ ಮುಂದುವರಿಸಿದ್ದರು.

ಹೀಗಾಗಿ ಕಟಾರಿಯಾ ತಕ್ಷಣ ಜಿಲ್ಲೆಗೆ ಆಗಮಿಸಿ ಕಡೂರು ತಾಲೂಕು ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದಲ್ಲದೆ, ಭೂ ಹಗರಣ ಕುರಿತಂತೆ ಅಪಾರ ದೂರುಗಳ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕು ಕಚೇರಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಎರಡೂ ತಾಲೂಕುಗಳಲ್ಲಿ ಅಪಾರ ಪ್ರಮಾಣದ ಸರಕಾರಿ ಭೂಮಿ ಖಾಸಗಿ ಪಾಲಾಗಿರುವುದು ಅವರಿಗೆ ಖಾತರಿಯಾಗಿತ್ತು.

ಅವುಗಳ ಮಾಹಿತಿ ಸಂಗ್ರಹಿಸಿ ರಾಜಧಾನಿಗೆ ತೆರಳಿದ ಕಟಾರಿಯಾ, ರಾಜ್ಯದಲ್ಲಿ ಅತ್ಯಂತ ದಕ್ಷ ಎಂದು ಹೆಸರು ಪಡೆದ 15 ತಹಶೀಲ್ದಾರ್ ಹಂತದ ಅಧಿಕಾರಿಗಳನ್ನು ಪಟ್ಟಿ ಮಾಡಿ ಅವರಿಗೆ ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ನಡೆದಿರಬಹುದಾದ ಭೂ ಹಗರಣದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು.

ಅವರ ಆದೇಶದನ್ವಯ ತನಿಖಾ ತಂಡ ಜಿಲ್ಲೆಗೆ ಆಗಮಿಸಿ ಈ ಎರಡೂ ತಾಲೂಕುಗಳಲ್ಲಿ ಸಾವಿರಾರು ಎಕರೆ ಸರಕಾರಿ ಭೂಮಿಯನ್ನು ತಹಶೀ ಲ್ದಾರ್‌ಗಳು, ಕಂದಾಯ ಅಧಿಕಾರಿಗಳು, ಗ್ರಾಮ ಸಹಾಯಕರು, ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಗುಮಾಸ್ತರುಗಳು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ದಾಖಲೆ ಮಾಡಿಕೊಟ್ಟಿರುವುದನ್ನು ಪತ್ತೆಹಚ್ಚಿ ಸರಕಾರಕ್ಕೆ ವರದಿ ಸಲ್ಲಿಸಿದ್ದರು.

ತನಿಖಾ ವರದಿಯಲ್ಲಿ ಅಕ್ರಮ ಎಸಗಿದವರ ಎಲ್ಲ ವಿವರಗಳನ್ನು ದಾಖಲಿಸಲಾಗಿದ್ದು, ಅವರುಗಳು ಎಸಗಿರುವ ಲೋಪಗಳನ್ನು ಗುರುತಿಸಲಾಗಿತ್ತು. ಹೀಗಾಗಿ ವರದಿಯನ್ನು ಪರಿಶೀಲಿಸಿದ ಸರಕಾರ ತಪ್ಪಿತಸ್ಥರ ಪಟ್ಟಿಯನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಕಳುಹಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ. ಈ ಸೂಚನೆಯನ್ನು ಆಧರಿಸಿ ತಪ್ಪಿತಸ್ಥರಿಗೆ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು ಮತ್ತು ಸರಕಾರದ ಹಂತದಲ್ಲಿ ಕಾನೂನು ಕ್ರಮ ಆಗಬೇಕಾಗಿದ್ದು, ಆ ಬಗ್ಗೆ ಜಿಲ್ಲಾಧಿಕಾರಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂಬುದು ಜಿಲ್ಲೆಯ ನಾಗರಿಕರ ಆಗ್ರಹವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ. ಎಲ್ ಶಿವು

contributor

Similar News