ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿರುವ ಬಾಲ್ಯವಿವಾಹ ಪಿಡುಗು
ಬಾಲ್ಯವಿವಾಹಗಳ ಪ್ರಮಾಣ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ನಡೆಯುತ್ತವೆ. ಗ್ರಾಮೀಣ ಭಾರತದ ಅನೇಕ ಭಾಗಗಳಲ್ಲಿ ಆಚರಣೆಯಲ್ಲಿರುವ ವರದಕ್ಷಿಣೆ ವ್ಯವಸ್ಥೆ, ಜಾತಿ ಪರಿಗಣನೆಗಳು ಮತ್ತು ಕುಟುಂಬದ ಗೌರವವನ್ನು ಕಾಪಾಡುವ ನೆಪದಲ್ಲಿ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ರೂಢಿಗಳು ಮತ್ತು ಸಂಪ್ರದಾಯಗಳು ಬಾಲ್ಯ ವಿವಾಹದ ನಿರಂತರತೆಗೆ ಪ್ರಮುಖ ಕಾರಣಗಳಾಗಿವೆ. ಬಡತನ, ಶಿಕ್ಷಣದ ಕೊರತೆ ಮತ್ತು ಸೀಮಿತ ಆರ್ಥಿಕ ಅವಕಾಶಗಳು ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಲು ಪ್ರೇರೇಪಿಸುತ್ತವೆ. ಇದು ಹದಿಹರೆಯದ ಗರ್ಭಧಾರಣೆಯ ಹೆಚ್ಚಳಕ್ಕೆ ಕಾರಣವಾಗುತ್ತವೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಬಾಲ್ಯ ವಿವಾಹಗಳು ಹೆಚ್ಚು ನಡೆದಿರುವ ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯ ಕೂಡ ಒಂದು ಎಂಬುದು ಕಳವಳಕಾರಿ ಸಂಗತಿಯಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್-5) ಹಾಗೂ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿ-ಅಂಶಗಳ ಪ್ರಕಾರ 2023ರ ಜನವರಿಯಿಂದ ಡಿಸೆಂಬರ್ 15ರವರೆಗೆೆ ಕರ್ನಾಟಕದಲ್ಲಿ 1,042 ಬಾಲ್ಯ ವಿವಾಹಗಳು ನಡೆದಿವೆ. 2018ರಿಂದ 2022ರ ಅವಧಿಯಲ್ಲಿ ಭಾರತದಲ್ಲಿ ಒಟ್ಟು 3,524 ಬಾಲ್ಯ ವಿವಾಹಗಳು ನಡೆದಿವೆ.
ದೇಶದಲ್ಲಿನ ಪ್ರತೀ ಕುಟುಂಬದ ಸ್ಥಿತಿಗತಿ ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಪ್ರತೀ ಐದು ವರ್ಷಕ್ಕೊಮ್ಮೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ನು ನಡೆಸುತ್ತದೆ. ಕುಟುಂಬದ ಪ್ರತೀ ಸದಸ್ಯರ ಆರೋಗ್ಯ, ವೈವಾಹಿಕ ಸ್ಥಿತಿಗತಿ, ವಿವಾಹವಾದ ವಯಸ್ಸು ಸೇರಿದಂತೆ ಹಲವು ಮಾಹಿತಿಗಳನ್ನು ಕಲೆಹಾಕಲಾಗುತ್ತದೆ. ಇಂತಹ ಐದನೇ ಸುತ್ತಿನ ಸಮೀಕ್ಷೆಯನ್ನು (ಎನ್‌ಎಫ್‌ಎಚ್‌ಎಸ್-5) 2020-21ರಲ್ಲಿ ನಡೆಸಲಾಗಿತ್ತು. 2022ರಲ್ಲಿ ವರದಿಯನ್ನು ಬಿಡುಗಡೆ ಮಾಡಲಾಗಿತ್ತು. ಇತ್ತೀಚೆಗೆ ವಿಧಾನಪರಿಷತ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಕರ್ನಾಟಕದಲ್ಲಿ ಒಂದೇ ವರ್ಷದಲ್ಲಿ 906 ಬಾಲ್ಯವಿವಾಹ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಮೂರು ವರ್ಷಗಳಲ್ಲಿ 986 ಬಾಲಕಿಯರು ತಾಯಂದಿರಾಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡುವ ಸಂದರ್ಭದಲ್ಲಿ ತಿಳಿಸಿದ್ದಾರೆ. ಈ ಅಂಕಿ-ಅಂಶಗಳ ನಿಖರತೆಯ ವಿಷಯದ ಕುರಿತಾಗಿಯೂ ಸದನದಲ್ಲಿ ಚರ್ಚೆಯಾಗಿದೆ.
18 ವರ್ಷದ ಒಳಗಿನ ಬಾಲಕಿ ಮತ್ತು 21ವರ್ಷದ ಒಳಗಿನ ಹುಡುಗರ ನಡುವೆ ನಡೆಯುವ ವಿವಾಹವು ಬಾಲ್ಯ ವಿವಾಹ ಎನಿಸುತ್ತದೆ. ಇಂತಹ ದಂಪತಿಗಳಲ್ಲಿ ಯಾರಾದರೊಬ್ಬರು ನಿಗದಿತ ವಯಸ್ಸಿನ ಒಳಗಿನವರಾಗಿದ್ದರೂ ಆ ಮದುವೆಯನ್ನು ಬಾಲ್ಯವಿವಾಹ ಎಂದು ಪರಿಗಣಿಸಲಾಗುತ್ತದೆ. ಅಂಕಿಅಂಶಗಳ ಪ್ರಕಾರ 2018ರಿಂದ 2022ರ ಅವಧಿಯಲ್ಲಿ ಕರ್ನಾಟಕದಲ್ಲಿ 706, ಅಸ್ಸಾಮಿನಲ್ಲಿ 554, ತಮಿಳುನಾಡಿನಲ್ಲಿ 414, ಪಶ್ಚಿಮ ಬಂಗಾಳದಲ್ಲಿ 390, ಮಹಾರಾಷ್ಟ್ರದಲ್ಲಿ 185 ಬಾಲ್ಯ ವಿವಾಹಗಳು ನಡೆದಿವೆ.
2030ರೊಳಗೆ ಭಾರತವನ್ನು ಬಾಲ್ಯ ವಿವಾಹ ಮುಕ್ತ ದೇಶವಾಗಿ ರೂಪಿಸುವ ಗುರಿಯೊಂದಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಜಾರಿಗೊಳಿಸಲಾಯಿತು. ಆದರೆ ಕಾಯ್ದೆ ಜಾರಿಯಾಗಿ 16 ವರ್ಷಗಳು ಕಳೆದರೂ ಅಂತಹ ಯಶಸ್ಸನ್ನು ಇನ್ನೂ ಸಾಧಿಸಲಾಗಿಲ್ಲ. ಅಸ್ಸಾಂ ಸೇರಿ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಾಲ್ಯವಿವಾಹವು ದೊಡ್ಡ ಪ್ರಮಾಣದಲ್ಲಿ ನಡೆದಿರುವುದನ್ನು ಸರಕಾರದ ಅಂಕಿ-ಅಂಶಗಳೇ ಹೇಳುತ್ತವೆ. ಇಂತಹ ಬಾಲ್ಯವಿವಾಹಗಳ ವಿರುದ್ಧ ಎಷ್ಟೋ ಘಟನೆಗಳಲ್ಲಿ ಪ್ರಕರಣಗಳೇ ದಾಖಲಾಗುತ್ತಿಲ್ಲ ಎಂಬುದನ್ನೂ ಸರಕಾರದ ದಾಖಲೆಗಳು ತೋರಿಸುತ್ತವೆ. ಉದಾಹರಣೆಗೆ, 2021ರಲ್ಲಿ ದೇಶದಾದ್ಯಂತ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಸಂಖ್ಯೆ 1,050 ಮಾತ್ರ.
ಕಾನೂನಿನಂತೆ 18 ವರ್ಷ ಮೀರದ ಬಾಲಕಿಯನ್ನು ಮದುವೆ ಮಾಡಿಕೊಂಡ ವರ, ಬಾಲಕಿಯ ಮತ್ತು ವರನ ಪೋಷಕರು, ಮದುವೆಯಲ್ಲಿ ಭಾಗಿಯಾಗಿದ್ದವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ದೂರು ದಾಖಲಿಸಬೇಕು. ಆದರೆ ಹೆಚ್ಚಿನ ಘಟನೆಗಳಲ್ಲಿ ಪ್ರಕರಣ ದಾಖಲಿಸದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪೋಷಕರೊಂದಿಗೆ ಶಾಮೀಲಾಗಿ ಹೆಸರಿಗೆ ಮಾತ್ರ ಒಂದೆರಡು ದಿನಗಳ ಕಾಲ ಬಾಲಕಿಯನ್ನು ಸಾಂತ್ವನ ಕೇಂದ್ರದಲ್ಲಿಟ್ಟುಕೊಂಡು ಬಳಿಕ ಪೋಷಕರೊಂದಿಗೆ ಬಿಟ್ಟು ಕಳುಹಿಸುತ್ತಿರುವ ಘಟನೆಗಳು ಕೂಡ ನಡೆಯುತ್ತಿವೆ. ಎಷ್ಟೋ ಘಟನೆಗಳಲ್ಲಿ ಹೀಗೆ ಸಾಂತ್ವನ ಕೇಂದ್ರದಿಂದ ಹೊರ ಹೋದ ಬಾಲಕಿ ಈಗ ಎಲ್ಲಿದ್ದಾಳೆ ಎಂಬುದನ್ನು ಪರಿಶೀಲಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಇದರಿಂದಾಗಿ ಪೋಷಕರು ಮದುವೆಯಾದ ಬಾಲಕಿಯನ್ನು ಮತ್ತೆ ಪತಿಯ ಮನೆಗೆ ಕಳುಹಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.
ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ಪ್ರಕಾರ ಶಿಕ್ಷಣ, ಕಂದಾಯ, ಪಂಚಾಯತ್‌ರಾಜ್, ಆರೋಗ್ಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ವಯಂಸೇವಾ ಸಂಸ್ಥೆಗಳು, ಸ್ತ್ರೀಶಕ್ತಿ ಸಂಘದ ಸದಸ್ಯರನ್ನೊಳಗೊಂಡ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯನ್ನು ಸರಕಾರ ಈಗಾಗಲೇ ರಚಿಸಿದೆ. ಈ ಸಮಿತಿಯು ಬಾಲ್ಯವಿವಾಹ ತಡೆಯುವ ಉದ್ದೇಶದಿಂದ ಅವುಗಳನ್ನು ಗುರುತಿಸುವುದು, ಕಂಡುಬಂದರೆ ತಕ್ಷಣ ನಿಲ್ಲಿಸುವುದು, ಮಕ್ಕಳ ರಕ್ಷಣೆ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ, ಮಕ್ಕಳ ಪುನರ್ವಸತಿ ಹಾಗೂ ಅನುಸರಣಾ ಕ್ರಮಗಳನ್ನು ಕೈಗೊಳ್ಳಲು ಕ್ರಮಬದ್ಧ ಕಾರ್ಯ ವಿಧಾನವನ್ನು ಕೂಡ ಜಾರಿಗೆ ತಂದಿದೆ. ಪ್ರತೀ ಪೊಲೀಸ್ ಅಧಿಕಾರಿ ತನ್ನ ವ್ಯಾಪಿಯಲ್ಲಿ ಬಾಲ್ಯ ವಿವಾಹ ಕಂಡುಬಂದರೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಲು ಅವಕಾಶ ಇದೆ. ಇಂತಹ ಪ್ರಕರಣಗಳಲ್ಲಿ ಭಾಗಿಯಾದವರಿಗೆ 2ವರ್ಷವರೆಗೆ ಜೈಲು ಶಿಕ್ಷೆ ಮತ್ತು ದಂಡ ಹಾಕಲು ಅವಕಾಶವಿದೆ.
ಬಾಲ್ಯವಿವಾಹಗಳ ಪ್ರಮಾಣ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ನಡೆಯುತ್ತವೆ. ಗ್ರಾಮೀಣ ಭಾರತದ ಅನೇಕ ಭಾಗಗಳಲ್ಲಿ ಆಚರಣೆಯಲ್ಲಿರುವ ವರದಕ್ಷಿಣೆ ವ್ಯವಸ್ಥೆ, ಜಾತಿ ಪರಿಗಣನೆಗಳು ಮತ್ತು ಕುಟುಂಬದ ಗೌರವವನ್ನು ಕಾಪಾಡುವ ನೆಪದಲ್ಲಿ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ರೂಢಿಗಳು ಮತ್ತು ಸಂಪ್ರದಾಯಗಳು ಬಾಲ್ಯ ವಿವಾಹದ ನಿರಂತರತೆಗೆ ಪ್ರಮುಖ ಕಾರಣಗಳಾಗಿವೆ. ಬಡತನ, ಶಿಕ್ಷಣದ ಕೊರತೆ ಮತ್ತು ಸೀಮಿತ ಆರ್ಥಿಕ ಅವಕಾಶಗಳು ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಲು ಪ್ರೇರೇಪಿಸುತ್ತವೆ. ಇದು ಹದಿಹರೆಯದ ಗರ್ಭಧಾರಣೆಯ ಹೆಚ್ಚಳಕ್ಕೆ ಕಾರಣವಾಗುತ್ತವೆ. ಬಾಲಕಿಯರು ಮತ್ತು ಮಹಿಳೆಯರಿಗೆ ಸೀಮಿತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಸೇರಿದಂತೆ ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿರುವ ಲಿಂಗ ಅಸಮಾನತೆಗಳು ಈ ಅಪಾಯವನ್ನು ಇನ್ನಷ್ಟು ಉಲ್ಬಣಗೊಳಿಸುತ್ತಿವೆ. 10ರಿಂದ 19 ವರ್ಷ ವಯಸ್ಸಿನ ಹುಡುಗಿಯರಲ್ಲಿ ಸಂಭವಿಸುವ ಗರ್ಭಧಾರಣೆಯನ್ನು ಹದಿಹರೆಯದ ಗರ್ಭಧಾರಣೆ ಎಂದು ವ್ಯಾಖ್ಯಾನಿಸಲಾಗಿದೆ. ಹುಡುಗಿಯರಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿದಾಗ ಅವರು ಬೇಗನೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಮತ್ತು ಆರಂಭಿಕ ಗರ್ಭಧಾರಣೆಯ ಹೆಚ್ಚಿನ ಅಪಾಯವನ್ನು ಎದುರಿಸುವ ಸಾಧ್ಯತೆಗಳು ಹೆಚ್ಚುತ್ತಿವೆ. ಬಾಲ್ಯವಿವಾಹಗಳು ಹೆಣ್ಣು ಮಕ್ಕಳ ಸಾಮಾಜಿಕ, ಆರ್ಥಿಕ, ಆರೋಗ್ಯ ಸೇರಿದಂತೆ ಹಲವು ಅಂಶಗಳ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತವೆ. ಆರಂಭಿಕ ವಿವಾಹವು ಹದಿಹರೆಯದ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದು ತಾಯಿ ಮತ್ತು ಮಗುವಿಗೆ ಗಮನಾರ್ಹವಾದ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ವಿವಾಹ ಮತ್ತು ಹದಿಹರೆಯದ ಗರ್ಭಧಾರಣೆ ಮತ್ತು ಗರ್ಭಧಾರಣೆಯ ನಡುವಿನ ಕಡಿಮೆ ಅಂತರದೊಂದಿಗೆ ಆಗಾಗ ಹೆರಿಗೆಯು ಭಾರತದಲ್ಲಿ ಗಮನಾರ್ಹ ಸವಾಲಾಗಿ ಉಳಿದಿದೆ.
ಹದಿಹರೆಯದ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಹಲವು ಹೆಣ್ಣು ಮಕ್ಕಳಲ್ಲಿ ಹಲವು ಸಮಸ್ಯೆಗಳು ಉಂಟಾಗುತ್ತವೆ. ಅನೇಕ ಸಂದರ್ಭಗಳಲ್ಲಿ ಶಿಶು ಮರಣದ ಪ್ರಮಾಣವನ್ನು ಹೆಚ್ಚಿಸುವ ಜೊತೆಗೆ ತಾಯಿಯ ಪ್ರಾಣಹಾನಿ ಕೂಡ ಸಂಭವಿಸಬಹುದು. ಯುವ ತಾಯಂದಿರು ಮತ್ತು ಅವರ ಮಕ್ಕಳ ಯೋಗಕ್ಷೇಮ ಮತ್ತು ಅಭಿವೃದ್ಧಿಗೆ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅಪ್ರಾಪ್ತ ವಯಸ್ಕ ತಾಯಂದಿರಿಗೆ ಜನಿಸಿದ ಮಕ್ಕಳು ತಮ್ಮ ದೈಹಿಕ, ಭಾವನಾತ್ಮಕ ಮತ್ತು ಅರಿವಿನ ಬೆಳವಣಿಗೆಯಲ್ಲಿ ಸವಾಲುಗಳನ್ನು ಎದುರಿಸಬಹುದು. ಬಾಲ್ಯವಿವಾಹಕ್ಕೆ ಒಳಪಡುವ ಅಪ್ರಾಪ್ತ ವಯಸ್ಕ ವಧುಗಳು ತಮ್ಮ ವೈವಾಹಿಕ ಸಂಬಂಧಗಳಲ್ಲಿ ದುರ್ಬಲತೆ, ಪ್ರತ್ಯೇಕತೆ ಮತ್ತು ಸೀಮಿತ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಇದು ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಹೆಣ್ಣು ಮಕ್ಕಳ ಶಿಕ್ಷಣ, ಕೌಶಲ್ಯ ತರಬೇತಿ, ಸಬಲೀಕರಣ ಮತ್ತು ಆರೋಗ್ಯ ರಕ್ಷಣೆಯ ಮೂಲಕ ಭಾರತವು ಬಾಲ್ಯ ವಿವಾಹವನ್ನು ತೊಡೆದುಹಾಕಲು ಮತ್ತು ಉಜ್ವಲ ಭವಿಷ್ಯವನ್ನು ನಿರ್ಮಿಸಲು ಹಲವು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಹೆಣ್ಣುಮಕ್ಕಳ ಶಿಕ್ಷಣ, ಕೌಶಲ್ಯ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವುದನ್ನು ಕೂಡ ಮುಂದುವರಿಸಿದೆ. ಆದರೂ ಜನರಲ್ಲಿ ಜಾಗೃತಿ ಮತ್ತು ಜವಾಬ್ದಾರಿಗಳು ಉಂಟಾಗದೆ ಕೇವಲ ಸರಕಾರ ಮತ್ತು ಸರಕಾರ ತರುವ ಯೋಜನೆಗಳಿಂದ ಮಾತ್ರ ಇಂತಹ ಸಾಮಾಜಿಕ ಸಮಸ್ಯೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಿಲ್ಲ. ನಾಗರಿಕರು, ಅಧಿಕಾರಿಗಳು, ವಿಶೇಷವಾಗಿ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಮಟ್ಟದ ಜನಪ್ರತಿನಿಧಿಗಳು, ಮಹಿಳಾ ಸ್ವ-ಸಹಾಯ ಗುಂಪುಗಳು, ಮಹಿಳಾ ಸಂಘಟನೆಗಳು ಶ್ರಮಿಸಿದರೆ ಬಾಲ್ಯವಿವಾಹ ಪ್ರಕರಣಗಳ ಪ್ರಮಾಣವನ್ನು ಕಡಿಮೆ ಮಾಡಬಹುದು. ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ಶಿಕ್ಷಕರು ಅದರಲ್ಲೂ ವಿಶೇಷವಾಗಿ ಶಿಕ್ಷಕಿಯರು ಶಾಲೆಗಳಲ್ಲಿ ಸಮಗ್ರ ಮತ್ತು ವಯಸ್ಸಿಗೆ ಸೂಕ್ತವಾದ ಲೈಂಗಿಕ ಶಿಕ್ಷಣವನ್ನು ಹೆಣ್ಣು ಮಕ್ಕಳಿಗೆ ನೀಡಬೇಕು. ಇದು ಹದಿಹರೆಯದವರಿಗೆ ಸಂತಾನೋತ್ಪತ್ತಿ, ಆರೋಗ್ಯ, ಗರ್ಭನಿರೋಧಕ ಮತ್ತು ಜವಾಬ್ದಾರಿಯುತ ಲೈಂಗಿಕ ನಡವಳಿಕೆಯ ಬಗ್ಗೆ ಜ್ಞಾನವನ್ನು ನೀಡುತ್ತದೆ.
ಜಾಗತಿಕವಾಗಿ ಬಾಲ್ಯವಿವಾಹ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಅಲ್ಪಪ್ರಮಾಣದ ಪ್ರಗತಿ ಸಾಧಿಸಲಾಗಿದೆ. ಭಾರತದಲ್ಲಿ ಕೂಡ ಬಾಲ್ಯವಿವಾಹಗಳ ಪ್ರಮಾಣದಲ್ಲಿ ಇದೇ ಪ್ರವೃತ್ತಿ ಇದೆ. 2005ರಲ್ಲಿ ಶೇ.47.4ರಷ್ಟಿದ್ದ ಬಾಲ್ಯವಿವಾಹ ಪ್ರಕರಣಗಳು 2021ರ ವೇಳೆಗೆ ಶೇ.23.3ಕ್ಕೆ ಇಳಿದಿದೆ. ಇದು ಗಮನಾರ್ಹ ಸಂಗತಿಯೂ ಕೂಡ ಆಗಿದೆ. ಈ ಸಂಕೀರ್ಣ ಸಮಸ್ಯೆಯನ್ನು ಪರಿಹರಿಸುವಲ್ಲಿ ಭಾರತವು ಇನ್ನೂ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದೆ.