ದಿಲ್ಲಿ ಸರಕಾರದ ಅಧಿಕಾರ ಕಿತ್ತುಕೊಳ್ಳುವ ದಿಲ್ಲಿ ಸೇವೆಗಳ ಮಸೂದೆ

Update: 2023-08-05 06:11 GMT
Editor : Safwan | Byline : ಎನ್.ಕೆ.

ಪ್ರತಿಪಕ್ಷಗಳ ಸಂಸದರ ಭಾರೀ ಪ್ರತಿಭಟನೆಗಳ ನಡುವೆಯೇ ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಸೇವೆಗಳ ನಿಯಂತ್ರಣ ಕುರಿತ ವಿವಾದಾತ್ಮಕ ದಿಲ್ಲಿ ಸುಗ್ರೀವಾಜ್ಞೆಗೆ ಬದಲಾಗಿ ದಿಲ್ಲಿ ರಾಷ್ಟ್ರ ರಾಜಧಾನಿ ಪ್ರದೇಶದ ಸರಕಾರ (ತಿದ್ದುಪಡಿಗಳು) ಮಸೂದೆ, 2023 ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಈ ಮಸೂದೆಯು ಅಸಾಂವಿಧಾನಿಕ ಎಂದು ಪ್ರತಿಪಕ್ಷಗಳು ಬಣ್ಣಿಸಿವೆ. ಮೋದಿ ಸರಕಾರವು ಒಕ್ಕೂಟವಾದವನ್ನು ದುರ್ಬಲಗೊಳಿಸುತ್ತಿದೆ ಎಂದೂ ಅವು ಆರೋಪಿಸಿವೆ.

ಕೇಂದ್ರವು ದಿಲ್ಲಿಯ ಚುನಾಯಿತ ಸರಕಾರವು ಮಾತ್ರ ಸರಕಾರಿ ನೌಕರರ ಮೇಲೆ ಅಧಿಕಾರವನ್ನು ಹೊಂದಿದೆ ಎಂಬ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಅತಿಕ್ರಮಿಸಿ ಮೇ 19ರಂದು ದಿಲ್ಲಿ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು. ಭೂಮಿ, ಪೊಲೀಸ್ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ ಸಂವಿಧಾನದಡಿ ಲೆಫ್ಟಿನೆಂಟ್ ಗವರ್ನರ್ (ಎಲ್ಜಿ) ಅವರು ಯಾವುದೇ ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿಲ್ಲ ಎಂದೂ ಸರ್ವೋಚ್ಚ ನ್ಯಾಯಾಲಯವು ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು.

ಭಾರತದ ರಾಜಧಾನಿಯಾಗಿರುವ ದಿಲ್ಲಿಯು ವಿಶಿಷ್ಟ ಸ್ಥಾನಮಾನವನ್ನು ಮತ್ತು ಕೆಲವು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ ಮತ್ತು ದಿಲ್ಲಿ ನಿವಾಸಿಗಳ ಆಕಾಂಕ್ಷೆಗಳಿಗೆ ಧಕ್ಕೆಯಾಗದಂತೆ ರಾಷ್ಟ್ರೀಯ ಹಿತಾಸಕ್ತಿಗಳನ್ನು ಉತ್ತೇಜಿಸುವ ಅಗತ್ಯವಿದೆ. ಸಂವಿಧಾನದ 1ನೇ ವಿಧಿಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿರುವ ಭಾರತದ ಭೂಪ್ರದೇಶವನ್ನು ವ್ಯಾಖ್ಯಾನಿಸುತ್ತದೆ ಹಾಗೂ ವಿಧಿ 239ರೊಂದಿಗೆ ಓದಲಾದ ವಿಧಿ 1 ರಾಷ್ಟ್ರಪತಿಗಳು ಮಾತ್ರ ಕೇಂದ್ರಾಡಳಿತ ಪ್ರದೇಶಗಳ ಆಡಳಿತವನ್ನು ನಡೆಸಬೇಕು ಎಂದು ಹೇಳುತ್ತದೆ ಎಂದು ಮಸೂದೆಯ ಕಾರಣಗಳು ಮತ್ತು ಉದ್ದೇಶಗಳ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎಸ್.ಬಾಲಕೃಷ್ಣನ್ ಸಮಿತಿಯ ಶಿಫಾರಸುಗಳನ್ನು ಅನುಸರಿಸಿ ವಿಧಿ 239ಎಎ ದಿಲ್ಲಿಗೆ ವಿಶೇಷ ಸ್ಥಾನಮಾನವನ್ನು ನೀಡುತ್ತದೆ. 1991ರಲ್ಲಿ 69ನೇ ತಿದ್ದುಪಡಿಯ ಮೂಲಕ ಇದನ್ನು ಸಂವಿಧಾನದಲ್ಲಿ ಸೇರಿಸಲಾಗಿತ್ತು.

ಸುಗ್ರೀವಾಜ್ಞೆಯ ವಿವಾದಾತ್ಮಕ ವಿಧಿ 3ಎ ಅನ್ನು ತೆಗೆದುಹಾಕಿದರೂ ಮಸೂದೆಯು ಎಲ್ಜಿಗೆ ಅಧಿಕಾರವನ್ನು ನೀಡುತ್ತದೆ, ಹೇಗೆ?

ಹೊಸ ಮಸೂದೆಯು ಸಂವಿಧಾನದ ಏಳನೇ ಶೆಡ್ಯೂಲ್ನ ಪಟ್ಟಿ 2ರ ನಮೂದು 41ರಡಿಯ ಸೇವೆಗಳ ಮೇಲೆ ದಿಲ್ಲಿ ವಿಧಾನಸಭೆಯು ನಿಯಂತ್ರಣವನ್ನು ಹೊಂದಿರುವುದಿಲ್ಲ ಎನ್ನುವುದನ್ನು ಎತ್ತಿ ಹಿಡಿದಿರುವ ಸುಗ್ರೀವಾಜ್ಞೆಯಲ್ಲಿನ ವಿವಾದಾತ್ಮಕ ಕಲಂ 31 ಅನ್ನು ತೆಗೆದುಹಾಕುತ್ತದೆ; ಎಲ್ಜಿಗೆ ಅಧಿಕಾರ ನೀಡುತ್ತದೆ ಮತ್ತು ಹಲವಾರು ಪ್ರಮುಖ ವಿಷಯಗಳಲ್ಲಿ ಅವರ ನಿರ್ಧಾರವನ್ನು ಅಂತಿಮವಾಗಿಸುತ್ತದೆ. ಸಂವಿಧಾನದ ಏಳನೇ ಶೆಡ್ಯೂಲ್ನ ಪಟ್ಟಿ 2ರ ನಮೂದು 41 ರಾಜ್ಯ ಪಟ್ಟಿಯಡಿ ರಾಜ್ಯ ಸರಕಾರಿ ಸೇವೆಗಳು ಮತ್ತು ರಾಜ್ಯ ಲೋಕಸೇವಾ ಆಯೋಗವನ್ನು ಒಳಗೊಂಡಿದೆ.

ಮಸೂದೆಯು ರಾಷ್ಟ್ರ ರಾಜಧಾನಿ ಸರಕಾರಿ ಸೇವೆಗಳ ಪ್ರಾಧಿಕಾರ (ಎನ್ಸಿಸಿಎಸ್ಎ)ವನ್ನು ಸ್ಥಾಪಿಸಲು ಉದ್ದೇಶಿಸಿದೆ ಮತ್ತು ಇದು ಕೇಂದ್ರ ಸರಕಾರದಿಂದ ನೇಮಕಗೊಂಡ ಎಲ್ಜಿಗೆ ಶಿಫಾರಸುಗಳನ್ನು ಮಾಡುತ್ತದೆ.

ಎನ್ಸಿಸಿಎಸ್ಎ ಅಧ್ಯಕ್ಷರಾಗಿ ದಿಲ್ಲಿ ಮುಖ್ಯಮಂತ್ರಿ, ಸದಸ್ಯ ಕಾರ್ಯದರ್ಶಿಯಾಗಿ ದಿಲ್ಲಿಯ ಪ್ರಧಾನ ಗೃಹ ಕಾರ್ಯದರ್ಶಿ ಮತ್ತು ಸದಸ್ಯರಾಗಿ ದಿಲ್ಲಿಯ ಮುಖ್ಯ ಕಾರ್ಯದರ್ಶಿಗಳನ್ನು ಒಳಗೊಂಡಿರುತ್ತದೆ.

ಪ್ರಧಾನ ಗೃಹ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿ ಇಬ್ಬರನ್ನೂ ಕೇಂದ್ರ ಸರಕಾರವೇ ನೇಮಕಗೊಳಿಸುತ್ತದೆ.

ಎನ್ಸಿಸಿಎಸ್ಎ ಅಖಿಲ ಭಾರತ ಸೇವೆಗಳ (ಐಪಿಎಸ್ ಹೊರತುಪಡಿಸಿ) ಹಾಗೂ ದಿಲ್ಲಿ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ, ದಮನ್ ಮತ್ತು ದಿಯು ಹಾಗೂ ದಾದ್ರಾ ಮತ್ತು ನಗರ ಹವೇಲಿ (ಸರಕಾರಿ) ಸೇವೆಗಳ ಗ್ರೂಪ್ ಎ ಸರಕಾರಿ ಅಧಿಕಾರಿಗಳ ವರ್ಗಾವಣೆಗಳು ಮತ್ತು ನಿಯೋಜನೆಗಳು, ವಿಜಿಲನ್ಸ್, ಶಿಸ್ತು ಕ್ರಮಗಳು ಮತ್ತು ಕಾನೂನು ಕ್ರಮಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಎಲ್ಜಿಗೆ ಶಿಫಾರಸು ಮಾಡುತ್ತದೆ.

ಎನ್ಸಿಸಿಎಸ್ಎ ನಿರ್ಧಾರಗಳು ಬಹುಮತವನ್ನು ಆಧರಿಸಿರುತ್ತವೆ, ಹೀಗಾಗಿ ಕೇಂದ್ರದಿಂದ ನೇಮಕಗೊಂಡ ಸದಸ್ಯರು ಮುಖ್ಯಮಂತ್ರಿಯ ನಿರ್ಧಾರಗಳನ್ನು ಕಡೆಗಣಿಸುವ ಸಾಧ್ಯತೆಯನ್ನು ಸೃಷ್ಟಿಸುತ್ತದೆ.

ಎನ್ಸಿಸಿಎಸ್ಎ ಶಿಫಾರಸುಗಳನ್ನು ಅನುಮೋದಿಸುವ ಅಥವಾ ಪುನರ್ಪರಿಶೀಲನೆಗಾಗಿ ಕೋರುವ ಅಧಿಕಾರವನ್ನು ಎಲ್ಜಿ ಹೊಂದಿರುತ್ತಾರೆ. ಭಿನ್ನಾಭಿಪ್ರಾಯಗಳಿದ್ದಲ್ಲಿ ಎಲ್ಜಿ ನಿರ್ಧಾರವು ಅಂತಿಮವಾಗಿರುತ್ತದೆ. ಮಸೂದೆಯು ಹಲವಾರು ವಿಷಯಗಳ ಕುರಿತು ತನ್ನ ‘ಸ್ವಂತ ವಿವೇಚನೆ’ಯನ್ನು ಚಲಾಯಿಸಲು ಎಲ್ಜಿಗೆ ಅಧಿಕಾರ ನೀಡುತ್ತದೆ.

ಎಲ್ಜಿಯ ಸ್ವಂತ ವಿವೇಚನೆಯಲ್ಲಿರುವ ವಿಷಯಗಳಲ್ಲಿ ದಿಲ್ಲಿ ವಿಧಾನಸಭೆಯ ಶಾಸಕಾಂಗ ಸಾಮರ್ಥ್ಯದ ಹೊರಗಿನ ಆದರೆ ಎಲ್ಜಿಗೆ ನಿಯೋಜಿಸಲಾಗಿರುವ ವಿಷಯಗಳು ಅಥವಾ ಕಾನೂನಿನಂತೆ ಅವರು ತನ್ನ ವಿವೇಚನೆಯಲ್ಲಿ ಕ್ರಮವನ್ನು ಕೈಗೊಳ್ಳುವುದನ್ನು ಅಥವಾ ಯಾವುದೇ ನ್ಯಾಯಾಂಗ ಅಥವಾ ಅರೆ ನ್ಯಾಯಾಂಗ ಕಾರ್ಯವನ್ನು ನಿರ್ವಹಿಸುವುದನ್ನು ಅಗತ್ಯವಾಗಿಸುವ ವಿಷಯಗಳು ಒಳಗೊಂಡಿವೆ.

ದಿಲ್ಲಿಯಲ್ಲಿ ಶಾಂತಿ ಮತ್ತು ನೆಮ್ಮದಿಯ ಮೇಲೆ ಪರಿಣಾಮ ಬೀರುವ ವಿಷಯಗಳು, ಕೇಂದ್ರ ಸರಕಾರ ಅಥವಾ ಯಾವುದೇ ರಾಜ್ಯ ಸರಕಾರ, ಸರ್ವೋಚ್ಚ ನ್ಯಾಯಾಲಯ ಅಥವಾ ದಿಲ್ಲಿ ಉಚ್ಚ ನ್ಯಾಯಾಲಯ ಮತ್ತು ಇಂತಹ ಇತರ ಪ್ರಾಧಿಕಾರಗಳೊಂದಿಗೆ ದಿಲ್ಲಿ ಸರಕಾರದ ಸಂಬಂಧಗಳ ಮೇಲೆ ಪರಿಣಾಮ ಬೀರುವ ವಿಷಯಗಳು, ವಿಧಾನ ಸಭೆಯನ್ನು ಕರೆಯುವ, ಮುಂದೂಡುವ ಅಥವಾ ವಿಸರ್ಜಿಸುವ ಇತ್ಯಾದಿ ವಿಷಯಗಳು ಇವುಗಳಲ್ಲಿ ಸೇರಿವೆ.

ಇಲಾಖಾ ಕಾರ್ಯದರ್ಶಿಗಳು ಸಂಬಂಧಿಸಿದ ಸಚಿವರೊಂದಿಗೆ ಸಮಾಲೋಚಿಸದೆ ವಿಷಯಗಳನ್ನು ಎಲ್ಜಿ, ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಬಳಿ ಕೊಂಡೊಯ್ಯಲೂ ಮಸೂದೆಯು ಅವಕಾಶ ಕಲ್ಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಎನ್.ಕೆ.

contributor

Similar News