ರೈತ, ಜಾನುವಾರು ಸ್ನೇಹಿ ಪಶು ವೈದ್ಯ ಡಾ.ಮಂಜುನಾಥ್

Update: 2024-05-20 09:51 GMT

ತುಮಕೂರು: ಪಶು ವೈದ್ಯಕೀಯ ವೃತ್ತಿ ನೇರವಾಗಿ ರೈತರು ಮತ್ತು ಹೈನುಗಾರರೊಂದಿಗೆ ಸಂಬಂಧ ಹೊಂದಿರುವ ಕೆಲಸ. ವೈದ್ಯೋ ನಾರಾಯಣೋ ಹರಿ ಎಂಬುದು ಕೇವಲ ಮನುಷ್ಯರಿಗಷ್ಟೇ ಸಿಮೀತವಲ್ಲ. ಪ್ರಾಣಿ, ಪಕ್ಷಿಗಳಿಗೂ ಅದರಲ್ಲಿಯೂ ರೈತರ ಅದಾಯದ ಮೂಲವಾಗಿರುವ ದನಕರುಗಳಿಗೂ ಅನ್ವಯವಾಗುತ್ತದೆ. ಸರಕಾರಿ ವೃತ್ತಿಯನ್ನು ಕೇವಲ ವೇತನಕ್ಕಾಗಿ ಮಾಡದೆ, ಅದರಲ್ಲಿಯೇ ಆತ್ಮ ತೃಪ್ತಿಯ ಜೊತೆಗೆ, ದೇವರನ್ನು ಕಾಣುವ ಅನೇಕರಿದ್ದಾರೆ. ಅವರಲ್ಲಿ ಹಾಲಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕು ನೊಣವಿನಕೆರೆ ಸರಕಾರಿ ಪಶು ಅಸ್ಪತ್ರೆಯ ಹಿರಿಯ ವೈದ್ಯ ಡಾ.ಮಂಜುನಾಥ ಮೊದಲಿಗರು ಎನ್ನಬಹುದು.

ಹಸು, ಕರು, ಎಮ್ಮೆ, ಕೋಣ, ಆಡು, ಕುರಿ ಸೇರಿದಂತೆ ಯಾವುದೇ ಪ್ರಾಣಿಗಳಾಗಲಿ, ಜಾನುವಾರು ಮಾಲಕರು ಇವರಲ್ಲಿಗೆ ಕರೆ ತಂದಾಗ, ಇಲ್ಲವೇ ಇವರೇ ಮಾಲಕರ ಕೋರಿಕೆಯ ಮೇರೆಗೆ ಜಾನುವಾರುಗಳ ಬಳಿ ಭೇಟಿ ನೀಡಿದಾಗ, ಪಶುವಿನ ಸ್ಥಿತಿಯನ್ನು ನೋಡಿ, ಅದರ ಚಲನವಲನಗಳ ಆಧಾರದ ಮೇಲೆ ಇಂತಹದ್ದೇ ರೋಗದಿಂದ ಬಳಲುತ್ತಿದೆ ಎಂದು ಕರಾರುವಕ್ಕಾಗಿ ಗುರುತಿಸಬಲ್ಲ ಮತ್ತು ಅದಕ್ಕೆ ಶಸ್ತ್ರಚಿಕಿತ್ಸೆ ಇಲ್ಲವೇ ಚಿಕಿತ್ಸೆಯ ಮೂಲಕ ಪರಿಹಾರ ಒದಗಿಸುವುದರಲ್ಲಿ ನಿಸ್ಸೀಮರೆನಿಸಿದ್ದಾರೆ ಡಾ.ಮಂಜುನಾಥ್.

ಎಕ್ಸ್-ರೇ, ಸ್ಕಾನಿಂಗ್‌ನಂತಹ ಆಧುನಿಕ ತಂತ್ರಜ್ಞಾನಗಳಿಲ್ಲದ ಸಮಯದಲ್ಲಿ ಕ್ಲಿಷ್ಟಕರವಾದ ರೋಗಗಳನ್ನು ಪತ್ತೆಹಚ್ಚಿ ಜಾನುವಾರುಗಳನ್ನು ಬದುಕಿಸುವಲ್ಲಿ ಡಾ.ಮಂಜುನಾಥ್ ಸಿದ್ದಹಸ್ತರು.ಜಾನುವಾರುಗಳ ಉದರ ಸಂಬಂಧಿ ಖಾಯಿಲೆ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಪರಿಣಿತರಾಗಿರುವ ಇವರು, ರೈತರ ಮನೆ ಬಾಗಿಲಿನಲ್ಲಿಯೇ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ. ಗರ್ಭಿಣಿ ಹಸುಗಳಲ್ಲಿಯೂ ಕರುಳಿನ ಶಸ್ತ್ರಚಿಕಿತ್ಸೆಗಳನ್ನು ನಡೆಸಿ ತಾಯಿ ಮತ್ತು ಕರುಗಳೆರಡನ್ನೂ ಅನೇಕ ಬಾರಿ ಸಾವಿನಿಂದ ಪಾರು ಮಾಡಿರುವ ನಿದರ್ಶನಗಳಿವೆ. ಅತೀ ಕಡಿಮೆ ಖರ್ಚಿನಲ್ಲಿ ಸೇವೆ ಒದಗಿಸಿ ರಾಜ್ಯದಲ್ಲಿಯೇ ಡಾ. ಮಂಜುನಾಥ್ ಮನೆ ಮಾತಾಗಿದ್ದಾರೆ.

ವೃತ್ತಿಯ ಜೊತೆಗೆ ಸಂಶೋಧನೆಯಲ್ಲಿಯೂ ತೊಡಗಿರುವ ಡಾ.ಮಂಜುನಾಥ ಪಶುವೈದ್ಯಕೀಯ ವಿಜ್ಞಾನದಲ್ಲಿ ಅನೇಕ ಆವಿಷ್ಕಾರಗಳಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ದನಗಳಲ್ಲಿ ರಕ್ತವರ್ಗಾವಣೆ ಪದ್ಧತಿಯ ಸರಳೀಕರಣ, ದನಗಳ ಅಬೋಮೇಸಮ್ ಅಂಗದ ಸ್ಥಾನಪಲ್ಲಟದ ಪತ್ತೆ ಹಚ್ಚುವಿಕೆ ಮತ್ತು ಶಸ್ತ್ರಚಿಕಿತ್ಸೆಯ ನೂತನ ಪದ್ಧತಿ, ದನ-ಎಮ್ಮೆಗಳ ಪಾದದಲ್ಲಿನ ತೊಂದರೆಗೆ ಮರದ ಹಲಗೆ ಉಪಯೋಗಿಸಿ ಚಿಕಿತ್ಸೆ, ಹಾಸನ ಮತ್ತು ತುಮಕೂರಿನ ಹಳ್ಳಿಗಳಲ್ಲಿ ಕಣ್ಣಿನ ತೊಂದರೆಗಳಿಗೆ ಮೂಲ ಕಾರಣವಾದ ತೆಲೇಜಿಯಾ ಜಂತುವಿನ ಪತ್ತೆಹಚ್ಚುವಿಕೆ, ದನಗಳಲ್ಲಿ ಕಂಡು ಬರುವ ಭಿನ್ನ ಕಣ್ಣಿನ ಕ್ಯಾನ್ಸರ್‌ಗೆ ಚಿಕಿತ್ಸೆ, ಜಾನುವಾರುಗಳಲ್ಲಿ ಹೊಟ್ಟೆಯ ಭಾಗದ ತೊಂದರೆಗಳಿಗೆ ಅತೀ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಪತ್ತೆ ಹೆಚ್ಚಿದ್ದಾರೆ.

ಶಸ್ತ್ರಚಿಕಿತ್ಸಾ ತಜ್ಞರಾಗಿರುವ ಡಾ.ಮಂಜುನಾಥ್ ಇದುವರೆಗೂ ಸುಮಾರು 100 ದನ, ಎಮ್ಮೆಗಳು ಆಕಸ್ಮಿಕವಾಗಿ ಸೇವಿಸಿದ್ದ ತಂತಿ, ಸೂಜಿ, ಚಮಚಗಳನ್ನು ತೆರೆದ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿದ್ದು, ಸಾವಿರಕ್ಕೂ ಹೆಚ್ಚಿನ ದನಗಳ ಕಣ್ಣಿನ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ, ಸುಮಾರು 200 ದನ-ಎಮ್ಮೆಗಳು ಮತ್ತು ಸುಮಾರು 50 ಕುರಿ-ಮೇಕೆಗಳಿಗೆ ಸಿಸೇರಿಯನ್, ಸುಮಾರು 50ಕ್ಕೂ ಹೆಚ್ಚಿನ ದನ ಎಮ್ಮೆಗಳಿಗೆ ಮೂಳೆ ಜೋಡಿಸುವ ಶಸ್ತ್ರಚಿಕಿತ್ಸೆ, ಸುಮಾರು 100 ದನಗಳಿಗೆ ಕರುಳು ಜೋಡಿಸುವ, ನಾಲ್ಕನೇ ಹೊಟ್ಟೆಯ ಮತ್ತಿತರ ಉದರ ಸಂಬಂಧಿತ ರೋಗಗಳಿಗೆ ಶಸ್ತ್ರಚಿಕಿತ್ಸೆ, 100 ದನಗಳಿಗೆ ಕೊಂಬಿನ ಶಸ್ತ್ರಚಿಕಿತ್ಸೆ, 200 ದನಗಳಲ್ಲಿ ರಕ್ತವರ್ಗಾವಣೆ, ಸುಮಾರು ನೂರಕ್ಕೂ ಹೆಚ್ಚಿನ ಜಾನುವಾರುಗಳ ಮೂತ್ರ ವಿಸರ್ಜನೆ ಸಮಸ್ಯೆಯ ಶಸ್ತ್ರಚಿಕಿತ್ಸೆ ನಡೆಸಿ ಗುಣಪಡಿಸುವ ಮೂಲಕ ರೈತರಿಗೆ ನೆರವಾಗಿದ್ದಾರೆ.

ಪ್ರಶಸ್ತಿಗಳು

ಸರಕಾರ ಇವರ ಸೇವೆಯನ್ನು ಗುರುತಿಸಿ 2020-2021ನೇ ಸಾಲಿನಲ್ಲಿ ಹಾಸನ ಜಿಲ್ಲೆಯಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ, 2021-2022ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ, ಇಂಡಿಯನ್ ಸೊಸೈಟಿ ಫಾರ್ ವೆಟರ್ನರಿ ಸರ್ಜರಿರವರಿಂದ 2017ರಲ್ಲಿ ಎಂ.ಆರ್.ಪಟೇಲ್ ಬೆಸ್ಟ್ ಫೀಲ್ಡ್ ವೆಟರ್ನೇರಿಯನ್ ಪ್ರಶಸ್ತಿ, ಇಂಡಿಯನ್ ಸೊಸೈಟಿ ಫಾರ್ ವೆಟರ್ನರಿ ಸರ್ಜರಿರವರಿಂದ 2022ರಲ್ಲಿ ಯುವ ವಿಜ್ಞಾನಿ ಪ್ರಶಸ್ತಿ ಮತ್ತು ಚಿನ್ನದ ಪದಕ, ಇಂಡಿಯನ್ ಸೊಸೈಟಿ ಫಾರ್ ವೆಟರ್ನರಿ ಸರ್ಜರಿರವರಿಂದ 2022, 2023, ಭಾರತೀಯ ಪಶುವೈದ್ಯಕೀಯ ಸಂಘದಿಂದ 2022ರಲ್ಲಿ ಕರ್ನಾಟಕದ ಅತ್ಯುತ್ತಮ ಪಶುವೈದ್ಯ ಪ್ರಶಸ್ತಿ ಸಹಿತ 20ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಕ್ಷ-ಕಿರಣ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದಿದ್ದರೂ ರೈತರ ಮನೆ ಬಾಗಿಲಲ್ಲಿಯೇ ದನ, ಕರು, ಎಮ್ಮೆಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ, ನೂರಾರು ಜಾನುವಾರುಗಳ ಜೀವ ಉಳಿಸಿದ್ದಾರೆ. ಹೈನುಗಾರಿಕೆಯೇ ಗ್ರಾಮೀಣ ಜನರ ಮೂಲ ಅದಾಯವಾಗುತ್ತಿರುವ ಕಾಲದಲ್ಲಿ ಡಾ.ಮಂಜುನಾಥ್ ಅವರ ಸೇವೆ ಶ್ಲಾಘನೀಯ.

-ಡಾ.ರುದ್ರಪ್ರಸಾದ್, ಪಶು ವೈದ್ಯಾಧಿಕಾರಿ ಹಾಗೂ ಮಾಜಿ ಅಧ್ಯಕ್ಷರು ಪಶು ವೈದ್ಯಕೀಯ ಸಂಘ ತುಮಕೂರು

ನಮ್ಮ ಮನೆಯ ಹಸು ತೋಟದಲ್ಲಿ ಮೇಯಲು ಬಿಟ್ಟಾಗ ಕಬ್ಬಿಣದ ತಂತಿ ನುಂಗಿ ನೋವು ಅನುಭವಿಸುತಿತ್ತು. ಚಿಕಿತ್ಸೆ ಮಾಡಿದ ನಂತರವೂ ರೋಗ ವಾಸಿಯಾಗದ ಕಾರಣ, ಶಸ್ತ್ರಚಿಕಿತ್ಸೆ ನಡೆಸಿ, ಹಸುವಿನ ಹೊಟ್ಟೆಯಲ್ಲಿದ್ದ ತಂತಿಯನ್ನು ನಮ್ಮ ಕಣ್ಣು ಮುಂದೆಯೇ ತೆಗೆದು ತೋರಿಸಿದರು. ವೈದ್ಯರಾದ ಮಂಜುನಾಥ್ ಅವರ ಕೈಗುಣ ಒಳ್ಳೆಯದಿದೆ. ಮೇವು ತಿನ್ನದೇ ಸಾಯುವ ಹಂತದಲ್ಲಿದ್ದ ಹಸುವನ್ನೂ ಬದುಕಿಸಿ ಕೊಟ್ಟಿದ್ದಾರೆ.

-ನವೀನ್ ಕುಮಾರ್, ನೊಣವಿನಕೆರೆ

ಡಾ.ಮಂಜುನಾಥ್ ಹಿನ್ನೆಲೆ

ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಗ್ರಾಮದವರಾದ ಡಾ. ಮಂಜುನಾಥ್ ಎಸ್.ಪಿ., ಬೆಂಗಳೂರಿನ ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನಲ್ಲಿ ಬಿವಿಎಸ್‌ಸಿ ಸ್ನಾತಕ ಪದವಿ ವ್ಯಾಸಂಗ ಮಾಡಿ ನಂತರ ಬೀದರ್‌ನ ಪಶುವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರ ಚಿಕಿತ್ಸೆ ಮತ್ತು ಕ್ಷ-ಕಿರಣ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿರುತ್ತಾರೆ. ಸರಕಾರದಿಂದ ಪಶುವೈದ್ಯಾಧಿಕಾರಿಯಾಗಿ ನೇಮಕಗೊಂಡು ಮೊದಲು ಚಾಮರಾಜನಗರದಲ್ಲಿ ಎಂಟು ತಿಂಗಳ ಕಾಲ ಕಾರ್ಯನಿರ್ವಹಿಸಿ ನಂತರ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಅಣತಿ ಗ್ರಾಮದಲ್ಲಿ 9 ವರ್ಷ ಸೇವೆ ಸಲ್ಲಿಸಿರುತ್ತಾರೆ. ನಂತರ ತುಮಕೂರಿನ ನೊಣವಿನಕೆರೆಗೆ ವರ್ಗಾವಣೆಗೊಂಡು ಎರಡೂವರೆ ವರ್ಷಗಳಿಂದ ಹಿರಿಯ ಪಶುವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತ್ನಿ ಡಾ. ಚೈತ್ರ ವೈ. ಸಹ ಪಶುವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

5 ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ

ಇದುವರೆಗೂ ರೈತರ ಮನೆಬಾಗಿಲಲ್ಲೇ ಸುಮಾರು 5 ಸಾವಿರಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆ ನಡೆಸಿರುವ ಡಾ.ಮಂಜುನಾಥ್, ಅತೀ ಕಡಿಮೆ ಖರ್ಚಿನಲ್ಲಿ ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿ ಜನಪ್ರಿಯರಾಗಿದ್ದಾರೆ. ತುಮಕೂರಿನಲ್ಲಷ್ಟೇ ಅಲ್ಲದೇ, ಹಾಸನ, ಮಂಡ್ಯ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲೂ ಶಸ್ತ್ರ ಚಿಕಿತ್ಸೆಗಳನ್ನು ನಡೆಸಿರುತ್ತಾರೆ. 12 ವರ್ಷಗಳಿಂದ ಪಶುವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಇಲಾಖಾ ಕಾರ್ಯಕ್ರಮಗಳಾದ ಲಸಿಕಾ ಅಭಿಯಾನಗಳು, ಸವಲತ್ತು ವಿತರಣೆ, ಜಾನುವಾರು ವಿಮೆ, ಮರಣೋತ್ತರ ಪರೀಕ್ಷೆಗಳು, ಪ್ರಾಕೃತಿಕ ವಿಪತ್ತು ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸಿರುತ್ತಾರೆ. ಅನೇಕ ಬಾರಿ ರೈತರು ತಮ್ಮ ಖಾಯಿಲೆ ಇರುವ ಜಾನುವಾರುಗಳನ್ನು ಮಾರಲು ಹೊರಟಾಗ ಅವರಲ್ಲಿ ಧೈರ್ಯ ತುಂಬಿ ಯಶಸ್ವಿ ಶಸ್ತ್ರ ಚಿಕಿತ್ಸೆಗಳನ್ನು ನಡೆಸಿರುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ರಂಗರಾಜು ಎನ್.ಡಿ.

contributor

Similar News