ಅತಿಯಾದ ಪ್ಲಾಸ್ಟಿಕ್ ಪ್ರೀತಿ

Update: 2023-08-18 06:26 GMT

ಬಸನಗೌಡ ಮಂಜುನಾಥಗೌಡ ಪಾಟೀಲ 

ಮೊನ್ನೆ ಯುಟ್ಯೂಬ್ ನಲ್ಲಿ ರೀಲ್ಸ್ ವೊಂದನ್ನು ನೋಡುತ್ತಿದ್ದೆ. ಆ ವೀಡಿಯೊದಲ್ಲಿ ಸಮುದ್ರದಲ್ಲಿ ಹೋಗುತ್ತಿದ್ದ ದೋಣಿಯಲ್ಲಿದ್ದ ಒಬ್ಬ ಕೊಕ್ಕೆಯೊಂದರ ಸಹಾಯದಿಂದ ತೇಲುತ್ತಿದ್ದ ಆಮೆಯೊಂದನ್ನು ಹಿಡಿದು ಅದಕ್ಕೆ ಉರುಳಾಗಿದ್ದ ಪ್ಲಾಸ್ಟಿಕ್ ಚೀಲವೊಂದನ್ನು ತೆಗೆದು ಮತ್ತೆ ಅದನ್ನು ಹಾಯಾಗಿ ಈಜುವಂತೆ ಮಾಡಿದ್ದ. ವೀಡಿಯೊಗೆ ಲಕ್ಷಗಟ್ಟಲೆ ಲೈಕ್ ಗಳು ಬಂದಿದ್ದವು. ನಾಡಲ್ಲಿ ಹೆಚ್ಚಾಗಿದ್ದ ಪ್ಲಾಸ್ಟಿಕ್ ಭೂತದ ಹಾವಳಿ ಇಂದು ಕಾಡು, ನೀರಲ್ಲದೆ, ವಾತಾವರಣದ ಗಾಳಿಯಲ್ಲಿಯೂ ಮೈಕ್ರೋ ಗಾತ್ರದಲ್ಲಿ ಕಂಡು ಬಂದಿದ್ದು, ಹಲವೆಡೆ ವರದಿಯಾದಂತೆ ಮನುಷ್ಯರ ರಕ್ತದಲ್ಲಿಯೂ ಪ್ಲಾಸ್ಟಿಕ್ ಆಂಶ ಇರುವುದು ಪತ್ತೆಯಾಗಿದೆ.

ಇದೀಗ ‘ಅರ್ಥ್ ಓವರ್ ಶೂಟ್ 2023’ ಎಂಬ ಹೆಸರಿನ ವರದಿಯೊಂದು ಬಂದಿದ್ದು, ಇದು ನಮ್ಮ ಬದುಕಿನಲ್ಲಿ ಪ್ಲಾಸ್ಟಿಕ್ ಅವಲಂಬನೆ ಎಷ್ಟರ ಮಟ್ಟಿಗೆ ಉತ್ತುಂಗಕ್ಕೆ ಮುಟ್ಟಿದೆ ಎಂದು ಕನ್ನಡಿ ಹಿಡಿದ ಹಾಗೆ ವರದಿ ಮಾಡಿದೆ. ಆ ವರದಿಯ ಪ್ರಮುಖ ಆಂಶಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

2023ರಲ್ಲಿ ಜಗತ್ತಿನಲ್ಲಿ ಅಜಾಗರೂಕತೆಯಿಂದ ಅಥವಾ ಅಸಮರ್ಪಕ ನಿರ್ವಹಣೆಯಿಂದ ಪ್ರತೀ ವ್ಯಕ್ತಿಯು ಕನಿಷ್ಠ 8.8 ಕೆಜಿ ಪ್ಲಾಸ್ಟಿಕ್ ವಾತಾವರಣ ಸೇರುವಂತೆ ಮಾಡಿದ್ದಾನೆ. ಒಟ್ಟಾರೆಯಾಗಿ ಜಗತ್ತಿನಲ್ಲಿ ಕೋಟಿಗಟ್ಟಲೆ ಟನ್ ಪ್ಲಾಸ್ಟಿಕ್ ಅಸಮರ್ಪಕ ನಿರ್ವಹಣೆಯಿಂದ ವಾತಾವರಣ ಸೇರಿದೆ. ದೇಶಗಳ ಪೈಕಿ ನೋಡುವುದಾದರೆ ಮಾಲ್ಡೋವಾ ದೇಶದ ಜನರು ವ್ಯಕ್ತಿಗತವಾಗಿ ಅತೀ ಹೆಚ್ಚು ಅಂದರೆ 135 ಕೆಜಿ ಪ್ಲಾಸ್ಟಿಕ್ ತಾಜ್ಯಕ್ಕೆ ಕಾರಣರಾಗಿದ್ದಾರೆ.

‘ಅರ್ಥ್ ಓವರ್ ಶೂಟ್ 2023’ ವರದಿಯನ್ವಯ 2040ರ ವೇಳೆಗೆ ಈಗಿರುವ ಪ್ಲಾಸ್ಟಿಕ್ ಉತ್ಪಾದನೆ ಎರಡು ಪಟ್ಟು ಮತ್ತು ಪ್ಲ್ಯಾಸ್ಟಿಕ್ ಮಾಲಿನ್ಯ ಮೂರು ಪಟ್ಟಾಗಲಿದೆ. ಪ್ರಪಂಚದಲ್ಲಿಯೇ ಪ್ಲಾಸ್ಟಿಕ್ ಅಸಮರ್ಪಕ ನಿರ್ವಹಣೆಯಲ್ಲಿ ಶೇ. 52ರಷ್ಟು ಕೊಡುಗೆ ಕೊಡುತ್ತಿರುವ 12 ದೇಶಗಳಲ್ಲಿ ಭಾರತವೂ ಒಂದು. ಇತರ ದೇಶಗಳು ಯಾವುವೆಂದರೆ ಚೀನಾ, ಬ್ರೆಝಿಲ್, ಇಂಡೋನೇಶ್ಯ, ಥಾಯ್ಲೆಂಡ್, ರಶ್ಯ, ಮೆಕ್ಸಿಕೋ, ಅಮೆರಿಕ, ಸೌದಿ ಅರೇಬಿಯ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಇರಾನ್, ಕಜಕಿಸ್ತಾನ್. ಕಡಿಮೆ ಅವಧಿಗೆ ಬಳಕೆಯಾಗುವ ಪ್ಲಾಸ್ಟಿಕ್ ಸಹಿತ 159 ಮಿಲಿಯನ್ ಟನ್ ಈ ವರ್ಷ ಉತ್ಪಾದನೆಯಾಗಿರುವುದು ನಾವಿಂದು ಎಷ್ಟರ ಮಟ್ಟಿಗೆ ಪ್ಲ್ಯಾಸ್ಟಿಕನ್ನು ಅವಲಂಬಿಸಿದ್ದೇವೆ ಎಂದು ತಿಳಿಸುತ್ತದೆ.

ಭಾರತದಲ್ಲಿ ತಲಾವಾರು ಬಳಕೆಯಾಗುತ್ತಿರುವ ಪ್ಲಾಸ್ಟಿಕ್ ವಾರ್ಷಿಕ ಪ್ರಮಾಣ 5.3 ಕೆಜಿ. ಜಗತ್ತಿನಲ್ಲಿಯೇ ನೋಡುವುದಾದರೆ ತಲಾವಾರು ಪ್ರತಿಯೊಬ್ಬರು 20.9 ಕೆಜಿ ಪ್ಲಾಸ್ಟಿಕ್ ಬಳಸುತ್ತಿದ್ದೇವೆ. ಈ ವರದಿಯಿಂದ ನಾವು ಎಷ್ಟರ ಮಟ್ಟಿಗೆ ಪ್ಲಾಸ್ಟಿಕ್ ಪ್ರೀತಿಸುತ್ತಿದೇವೆ ಎಂದು ತಿಳಿಯುತ್ತಿದೆ ಅಲ್ಲವೇ?

ಸೆಣಬು, ಹತ್ತಿ ಬಟ್ಟೆ, ಮರುಬಳಕೆ ಮಾಡಬಹುದಾದ ವಸ್ತುಗಳಿಂದ ತಯಾರಾದ ಉತ್ಪನ್ನಗಳನ್ನು ನಾವಿಂದು ಬಳಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದನ್ನು ಕಡ್ಡಾಯವಾಗಿ ನಾವು ಮಾಡಲೇಬೇಕು. ಅಭಿವೃದ್ದಿಯ ಹೆಸರಲ್ಲಿ ಶ್ವಾಸವಾಯು(ಆಮ್ಲಜನಕ) ನೀಡುತ್ತಿದ್ದ ಮರಗಳ ಬುಡಕ್ಕೆ ಕೊಡಲಿ ಹಾಕಿ ಮುಗಿಲೆತ್ತರಕ್ಕೆ ಹೊಗೆ ಉಗುಳುವ ಕಾರ್ಖಾನೆ ಕಟ್ಟುತ್ತಿದ್ದೇವೆ. ನದಿಗಳ ನೈಸರ್ಗಿಕ ದಿಕ್ಕು ಬದಲಿಸಿ ನಮ್ಮ ಅನುಕೂಲಕ್ಕೆ ತಕ್ಕ ಹಾಗೆ ಮಾಡಿಕೊಳ್ಳುತ್ತಿದ್ದೇವೆ. ಭೂ ತಾಯಿಯ ಒಡಲ ಮೇಲೆ ಬೃಹತ್ ಪ್ರಮಾಣದ ನೀರನ್ನು ನಿಲ್ಲಿಸಿದ ಗೋಡೆಗಳಿಗೆ ಅಣೆಕಟ್ಟು ಎಂದು ಹೆಸರು ಕೊಟ್ಟಿದ್ದೇವೆ. ಭೂ ತಾಯಿ ಎದೆ ಸೀಳಿ ಬಂಗಾರ, ಕಲ್ಲಿದ್ದಲು, ಯುರೇನಿಯಂ, ಮ್ಯಾಂಗನೀಸ್ನಂತಹ ಮುಗಿದು ಹೋಗುವ ಸ್ವತ್ತಿನ ಹಿಂದೆ ಬಿದ್ದಿದ್ದೇವೆ. ಭೂಮಿಯನ್ನು ಆಂತರಿಕವಾಗಿ ಸಂಶೋಧನೆ ಮತ್ತು ನೈಸರ್ಗಿಕ ಸಂಪತ್ತಿನ ಹೆಸರಲ್ಲಿ ನುಜ್ಜುಗುಜ್ಜು ಮಾಡಿದ ನಾವು, ಬಾಹ್ಯವಾಗಿ ಎಲ್ಲೆಂದರಲ್ಲಿ ಮಲ-ಮೂತ್ರ ವಿಸರ್ಜಿಸುತ್ತ, ಪ್ಲಾಸ್ಟಿಕ್ ಎಸೆಯುತ್ತ ಅಸಹ್ಯವಾಗಿ ನಡೆದುಕೊಳ್ಳುತ್ತಿದ್ದೇವೆ. ಪ್ಲಾಸ್ಟಿಕ್ ನಿಯಂತ್ರಣದ ದಿನ, ಸಾಗರದ ದಿನ, ಪರಿಸರದ ದಿನ ಸಾಮಾಜಿಕ ಕಳಕಳಿ ಇರುವವರ ಹಾಗೇ ನಾಟಕ ಮಾಡುತ್ತ ಜಾಲತಾಣದಲ್ಲಿ ಸಿಗುವ ಲೈಕ್, ಕಮೆಂಟ್ಗಾಗಿ ಜೀವನ ಮಾಡದೇ ಪ್ರಕೃತಿಗೆ ಸಾಧ್ಯವಾದಷ್ಟು ಒಳ್ಳೆಯದನ್ನು ಹಿಂದಿರುಗಿಸೋಣ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News