ಭಾರತವನ್ನು ಕಾಡುತ್ತಿರುವ ಆಹಾರ ಅಭದ್ರತೆ ಶಾಪ

Update: 2024-10-16 07:30 GMT

ಸ್ವಾತಂತ್ರ್ಯ ದೊರೆತು ಏಳು ದಶಕಗಳು ಕಳೆದರೂ ಭಾರತವನ್ನು ಹಸಿವು ಮುಕ್ತ ರಾಷ್ಟ್ರವನ್ನಾಗಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಡಳಿತ ವ್ಯವಸ್ಥೆಯ ಪ್ರಯತ್ನಗಳು ವಿಫಲವಾಗಿರುವುದು ಶೋಚನೀಯ ಸಂಗತಿ. ಈ ಬಗ್ಗೆ ಕಾಲ ಕಾಲಕ್ಕೆ ಬಂದ ಜಾಗತಿಕ ಸೂಚ್ಯಂಕವೂ ಅದಕ್ಕೆ ಕೈಗನ್ನಡಿಯಾಗಿ ನಿಂತಿದೆ.

2024 ಹಸಿವಿನ ಸೂಚ್ಯಂಕದಲ್ಲಿ ಭಾರತ

2024ರ ಜಿಎಚ್‌ಐನ ಹಸಿವು ವರದಿಯಲ್ಲಿ ಭಾರತವು 127 ದೇಶಗಳ ಪೈಕಿ 105ನೇ ಸ್ಥಾನ ಪಡೆದುಕೊಂಡಿದೆ. ಜೊತೆಗೆ ಭಾರತದ ಹಸಿವಿನ ಸ್ಥಿತಿಯನ್ನಾಧರಿಸಿ ಭಾರತವನ್ನು ಗಂಭೀರ(ಸೀರಿಯಸ್) ವಿಭಾಗದಲ್ಲಿ ಗುರುತಿಸಲಾಗಿದೆ. ಹಾಗಿದ್ದರೂ ಭಾರತ ಸರಕಾರ ಈ ವರದಿಯ ಮಾನದಂಡದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.

ಜಿಎಚ್‌ಐ ನಾಲ್ಕು ಮುಖ್ಯ ಆಧಾರಗಳನ್ನು ಅನುಸರಿಸಿ ಆ ದೇಶದ ಹಸಿವಿನ ವರದಿಯನ್ನು ತಯಾರಿಸುತ್ತದೆ.

ಪೌಷ್ಟಿಕತೆಯ ಕೊರತೆ

ಒಂದು ಮಗು ತನ್ನ ಶಾರೀರಿಕ ಬೆಳವಣಿಗೆಗೆ ಅನುಗುಣವಾಗಿ ಸೂಕ್ತವಾದಷ್ಟು ಕ್ಯಾಲರಿ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನು ಪಡೆಯಲಾಗದೆ ಇರುವುದು. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ. 13.7ರಷ್ಟು ಜನರು ಅಪೌಷ್ಟಿಕತೆಯಿಂದಾಗಿ ಬಳಲುತ್ತಿದ್ದಾರೆ.

ಮಗುವಿನ ಕುಂಠಿತ ಬೆಳವಣಿಗೆ

ಐದು ವರ್ಷದೊಳಗಿನ ಮಗು ಸೂಕ್ತವಾದ ಪೌಷ್ಟಿಕಾಂಶಯುಕ್ತ ಆಹಾರವನ್ನು ಪಡೆಯಲಾಗದೆ ಅದರ ಶಾರೀರಿಕ ಎತ್ತರದಲ್ಲಿ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಈ ವರದಿಯನುಸಾರ ಭಾರತದಲ್ಲಿ ಒಟ್ಟು ಜನಸಂಖ್ಯೆಯಲ್ಲಿ 35.5ರಷ್ಟು ಮಕ್ಕಳು ಈ ಸಮಸ್ಯೆಯನ್ನು ಎದುರಿಸುತ್ತಿವೆ.

ಮಗುವಿನ ತೂಕದಲ್ಲಿ ವ್ಯತ್ಯಾಸ

ಐದು ವರ್ಷದ ಮಗುವಿಗೆ ಸೂಕ್ತವಾದ ಪೌಷ್ಟಿಕಾಂಶಯುಕ್ತ ಆಹಾರ ದೊರೆಯುತ್ತಿದ್ದಲ್ಲಿ ಸಾಮಾನ್ಯವಾಗಿಯೇ ಅದರ ತೂಕದಲ್ಲಿ ಗಣನೀಯ ವ್ಯತ್ಯಾಸವನ್ನು ಕಾಣಬಹುದಾಗಿದೆ ಭಾರತದಲ್ಲಿ ಒಟ್ಟು ಜನಸಂಖ್ಯೆಯ ಶೇ. 18.7ರಷ್ಟು ಮಕ್ಕಳು ತೂಕ ವ್ಯತ್ಯಾಸದಿಂದ ಬಳಲುತ್ತಿದ್ದಾರೆ.

ಮಕ್ಕಳ ಜನನ ಮರಣ ಪ್ರಮಾಣ

ಐದು ವರ್ಷದ ಮಗುವಿಗೆ ಅಥವಾ ಹೊಟ್ಟೆಯಲ್ಲಿ ಇರುವ ಮಗುವಿಗೆ ಸೂಕ್ತವಾದ ಪೌಷ್ಟಿಕಾಂಶಯುಕ್ತ ಆಹಾರ ದೊರೆಯದ ಕಾರಣ ಭಾರತದಲ್ಲಿ ಒಟ್ಟು ಜನಸಂಖ್ಯೆಯ 2.9ರಷ್ಟು ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಈ ನಾಲ್ಕು ಮುಖ್ಯ ಅಂಶಗಳನ್ನಾಧರಿಸಿ ಜಿಎಚ್‌ಐ ವರದಿಯನ್ನು ಬಿಡುಗಡೆ ಮಾಡಿದೆ.

ಹಿಂದಿನ ವರದಿಗಳಲ್ಲಿ ಭಾರತದ ಸ್ಥಾನ

ಪ್ರತೀ ವರ್ಷ ಹಲವಾರು ದೇಶಗಳ ಅಪೌಷ್ಟಿಕತೆ, ಆರೋಗ್ಯದ ಪ್ರಮಾಣ, ಅಭಿವೃದ್ಧಿ ಹಿತದೃಷ್ಟಿಯಿಂದ ಸ್ವತಂತ್ರ ಸಂಸ್ಥೆಗಳಾದ ಐರ್‌ಲ್ಯಾಂಡ್‌ನ ಛಿoಟಿಛಿeಡಿಟಿ ತಿoಡಿಟಜ-ತಿiಜe ಮತ್ತು ಜರ್ಮನ್ ದೇಶದ welthungerhilfe ಸಂಸ್ಥೆಗಳು 2023ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ 125 ದೇಶಗಳ ಪೈಕಿ ಭಾರತಕ್ಕೆ 111ನೇ ಸ್ಥಾನ, 2022ರಲ್ಲಿ 121 ದೇಶಗಳ ಪೈಕಿ 107 ಸ್ಥಾನ, ಇದೇ ಸಂಸ್ಥೆಯ 2021ರ ವರದಿಯಲ್ಲಿ 116 ದೇಶಗಳ ಪೈಕಿ ಭಾರತ ದೇಶ 101ನೇ ಸ್ಥಾನದಲ್ಲಿದೆ. 2020ರ ಸಮೀಕ್ಷೆಯಲ್ಲಿ 94ನೇ ಸ್ಥಾನಗಳಲ್ಲಿ ಗುರುತಿಸಿಕೊಂಡಿದೆ.

ವಿಶ್ವಸಂಸ್ಥೆ ಅಹಾರ ಭದ್ರತಾ ಯೋಜನೆ 

ವರದಿಗಳು

2023 ಸೆಪ್ಟಂಬರ್‌ನಲ್ಲಿ ಡಬ್ಲ್ಯು.ಎಫ್.ಪಿ.ಯು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಜಾಗತಿಕ ಹಸಿವು ಬಿಕ್ಕಟ್ಟಿನ ತೀವ್ರತೆಯ ಬಗ್ಗೆ ಉಲ್ಲೇಖಿಸಿದೆ. ಅದರ ವರದಿ ಪ್ರಕಾರ ಜಗತ್ತಿನಲ್ಲಿ 700 ದಶಲಕ್ಷಕ್ಕೂ ಹೆಚ್ಚಿನ ಜನರು ಹಸಿವಿನ ಸಂಕಟದಲ್ಲಿದ್ದಾರೆ ಮತ್ತು 50ಕ್ಕೂ ಅಧಿಕ ದೇಶಗಳ ಸುಮಾರು 47 ದಶಲಕ್ಷ ಜನತೆ ಬರಗಾಲದಿಂದಾಗಿ ಒಂದು ಹೆಜ್ಜೆ ಹಿಂದೆ ಇಟ್ಟಿದ್ದಾರೆ. ಜೊತೆಗೆ 5 ವರ್ಷದೊಳಗಿನ 45 ದಶಲಕ್ಷ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಸುಮಾರು 79 ದೇಶಗಳ 783 ದಶಲಕ್ಷ ಜನತೆಗೆ ಈ ವರ್ಷ ಅಧಿಕ ಮಟ್ಟದ ಆಹಾರ ಅಭದ್ರತೆ ಕಾಡುತ್ತಿದೆ. ಇದು 2021ಕ್ಕೆ(ಕೋವಿಡ್ ಸೋಂಕಿನ ಆರಂಭಕ್ಕೂ ಮುನ್ನ) ಹೋಲಿಸಿದರೆ ಇಂದು ಸುಮಾರು 200 ದಶಲಕ್ಷದಷ್ಟು ಏರಿಕೆಯಾಗಿದೆ. ಹವಾಮಾನ ವೈಪರೀತ್ಯ, ಆರ್ಥಿಕ ಆಘಾತ, ಘರ್ಷಣೆ ಮತ್ತು ಗೊಬ್ಬರಗಳ ಬೆಲೆ ಏರಿಕೆ ಇತ್ಯಾದಿ ಸಮಸ್ಯೆಗಳು ಇದಕ್ಕೆ ಮೂಲ ಕಾರಣವಾಗಿದೆ ಎಂದಿದೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ವರದಿ-2020

ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಭಾರತದಲ್ಲಿ 70.5ರಷ್ಟು ಜನರಿಗೆ ಆರೋಗ್ಯಕರ ಆಹಾರ ದೊರೆಯುತ್ತಿಲ್ಲ ಎಂದು ವರದಿ ಮಾಡಿತ್ತು. ಭಾರತದ ಜನರ ವಯಸ್ಸನ್ನು ಆಧಾರವಾಗಿಟ್ಟುಕೊಂಡು ಈ ಸಂಸ್ಥೆ ಅಧ್ಯಯನ ನಡೆಸಿ ವರದಿಮಾಡಿದೆ. ಇದರ ಪ್ರಕಾರ ಶೇ. 17.3ರಷ್ಟು ಮಕ್ಕಳು ಪೋಷಕಾಂಶಗಳ ಕೊರತೆ ಎದುರಿಸುತ್ತಿವೆ ಮತ್ತು ವಯಸ್ಸಿಗೆ ತಕ್ಕಂತೆ ಬೆಳವಣಿಗೆಯಾಗದಿರುವ ಮಕ್ಕಳ ಸಂಖ್ಯೆ ಭಾರತದಲ್ಲಿ ಶೇ.30.9ರಷ್ಟಿದೆ ಎಂದು ವರದಿ ಮಾಡಿತ್ತು. ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ರಕ್ತಹೀನತೆ ಎದುರಿಸುತ್ತಿದ್ದಾರೆ. ಇದು ನೆರೆಯ ದೇಶಗಳಿಗಿಂತ ಹೆಚ್ಚಿದೆ. ಹಾಗಾಗಿ ಭಾರತದಲ್ಲಿ ದುರ್ಬಲ ವರ್ಗಗಳಿಗೆ ಆಹಾರ ಕೈಗೆಟುಕುವ ದರದಲ್ಲಿ ದೊರೆಯುವಂತೆ ಮಾಡಬೇಕಿದೆ ಎಂದು ವರದಿ ಹೇಳಿದೆ.

ನಮ್ಮನ್ನಾಳುವ ಸರಕಾರ ವಿಭಿನ್ನ ಯೋಜನೆಗಳ ಮೂಲಕ ದೇಶದ ಜನತೆಗೆ ಆಹಾರ ಭದ್ರತೆ ಒದಗಿಸುವಲ್ಲಿ ಇನ್ನಾದರೂ ಸೂಕ್ತ ಹೆಜ್ಜೆ ಇಡಬೇಕಾಗಿದೆ. ದೇಶದಿಂದ ವಿದೇಶಕ್ಕೆ ರಪ್ತುಗೊಳ್ಳುತ್ತಿರುವ ಉತ್ಕೃಷ್ಟ ಮತ್ತು ಪೌಷ್ಟಿಕಾಂಶಗಳುಳ್ಳ ಆಹಾರ ಧಾನ್ಯಗಳು ಮೊದಲು ದೇಶದ ಜನರಿಗೆ ದೊರೆಯಬೇಕಾಗಿದೆ. ಆ ಮೂಲಕ 2030 ವೇಳೆಗೆ ಆಹಾರ ಅಭದ್ರತೆ ಇತ್ಯಾದಿ ಸಮಸ್ಯೆಗಳನ್ನು ಕೊನೆಗೊಳಿಸುವ ಗುರಿಹೊಂದಿರುವ ವಿಶ್ವಸಂಸ್ಥೆಯೊಂದಿಗೆ ಭಾರತವೂ ಕೈಜೋಡಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವರಾಜ ಎಂ.ಕೆ. ಮಾಚೇನಹಳ್ಳಿ

contributor

Similar News