ಕಾರವಾರದಲ್ಲಿ ನಿರ್ಮಾಣಗೊಳ್ಳಲಿದೆ ಆಲಿವ್ ರಿಡ್ಲೆ ಕಡಲಾಮೆಗಳ ಅಧ್ಯಯನ ಕೇಂದ್ರ

Update: 2024-10-14 07:29 GMT

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡಲತೀರದಲ್ಲಿ ವಿವಿಧ ಪ್ರಜಾತಿಯ ಆಮೆಗಳ ಸಂತತಿಗಳು ಪತ್ತೆಯಾಗುತ್ತಿದ್ದು ಜನರನ್ನು ಆಕರ್ಷಿಸುತ್ತಿದೆ. ಜಿಲ್ಲೆಯ ಕರಾವಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಮೆಗಳ ಸಂರಕ್ಷಣೆ ಮಾಡುತ್ತಿರುವುದು ಹೆಚ್ಚು ಸದ್ದು ಮಾಡುತ್ತಿದೆ.

ಕಡಲಾಮೆಗಳಲ್ಲಿ ವಿಶೇಷ ಪ್ರಜಾತಿಯಾಗಿರುವ ಆಲಿವ್ ರಿಡ್ಲೆ ಆಮೆಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವ ಕಾರಣದಿಂದ ಆಲಿವ್ ರಿಡ್ಲೆ ಕಡಲ ಆಮೆಗಳ ರಕ್ಷಣೆಯ ಹಾಗೂ ಅವುಗಳ ಅಧ್ಯಯನದ ತಾಣ ಕಾರವಾರದಲ್ಲಿ ನಿರ್ಮಾಣಗೊಳ್ಳಲಿದೆ. ಇದಕ್ಕೆ ವಿಶ್ವ ಬ್ಯಾಂಕ್ ನೆರವಿನ ಕೆ-ಶೋರ್ ಯೋಜನೆಯಡಿ ಮರೈ ಮೆಗಾ ಫೌನಾ ರೆಸ್ಕ್ಯೂ ಆ್ಯಂಡ್ ರಿ ಹ್ಯಾಬಿಲಿಟೇಶನ್ ಸೆಂಟರ್ ಸ್ಥಾಪನೆಗೆ ಕಾರವಾರ ಅರಣ್ಯ ವಿಭಾಗವು ಯೋಜಿಸಿದೆ.

ಆಲಿವ್ ರಿಡ್ಲೆ ಎಂಬ ಅಳಿವಿನಂಚಿನಲ್ಲಿರುವ ಆಮೆಗಳು ಕಾರವಾರದಿಂದ ಹೊನ್ನಾವರದವರೆಗೆ ಕಡಲ ತೀರದಲ್ಲಿ ಬಂದು ಮೊಟ್ಟೆ ಇಡುತ್ತಿವೆ. ಸ್ಥಳೀಯ ಮೀನುಗಾರರ ಸಹಯೋಗದೊಂದಿಗೆ ಅರಣ್ಯ ಇಲಾಖೆ ವಿಭಾಗದಲ್ಲಿ ಮರೈನ್ ಆ್ಯಂಡ್ ಇಕೋ ಸಿಸ್ಟಂ ಸೆಲ್ ತೆರೆಯಲಾಗಿತ್ತು. ಈ ಆಮೆ ಮೊಟ್ಟೆಗಳನ್ನು ಸಂರಕ್ಷಣೆ ಮಾಡಿ ಮರಿಯಾದ ಬಳಿಕ ಕಡಲಿಗೆ ಬಿಡುವ ಕಾರ್ಯವನ್ನು ಅರಣ್ಯ ಇಲಾಖೆ ಈಗ ಮಾಡುತ್ತಿದೆ. ಈಗ ಕಡಲ ಆಮೆಗಳ ಅಧ್ಯಯನಕ್ಕೆ ಕಾರವಾರ ವಿಭಾಗದಿಂದ ಕ್ರಮ ವಹಿಸಲಾಗುತ್ತಿದೆ. ಸುಮಾರು ೪ ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಯೋಜನೆಯಂತೆ ಡಿಪಿಆರ್‌ಗೆ ಅನುಮತಿ ದೊರೆತರೆ ಬರುವ ಡಿಸೆಂಬರ್ ಅವಧಿಯಲ್ಲಿ ಕೆಲಸ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಕಾರವಾರ ವಿಭಾಗದ ಡಿಎಫ್‌ಒ ಸಿ.ರವಿಶಂಕರ್ ಮಾಹಿತಿ ನೀಡಿದ್ದಾರೆ. ವಿಸ್ತ್ರತ ಯೋಜನಾ ವರದಿ ತಯಾರಿಸುವ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಯೋಜನೆ ಕಾರ್ಯ ರೂಪಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೂ ಹೆಚ್ಚಿನ ಪ್ರಾಶಸ್ತ್ಯ ಲಭ್ಯವಾಗಲಿದೆ.

ಮಾಹಿತಿ ಕೇಂದ್ರ, ಮ್ಯೂಸಿಯಂ ನಿರ್ಮಾಣ

ನಗರದ ಕೋಡಿಬಾಗದ ಟ್ರೀ ಪಾರ್ಕ್‌ನಲ್ಲಿ ಸಿಆರ್‌ಝಡ್ ವ್ಯಾಪ್ತಿಯ ಹೊರಗೆ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಇದೇ ಸ್ಥಳದಲ್ಲಿ ಆಲಿವ್ ರಿಡ್ಲೆ ಆಮೆಗಳ ಬಗ್ಗೆ ಮಾಹಿತಿ ಕೇಂದ್ರ, ಮ್ಯೂಸಿಯಂ ಕೂಡ ನಿರ್ಮಾಣವಾಗಲಿದೆ. ಆಮೆಗಳ ಅಧ್ಯಯನ ಕೇಂದ್ರದಲ್ಲಿ ಮರಿ ಮಾಡಿ ಬಿಟ್ಟ ಆಮೆಗಳು ಅರಬ್ಬಿ ಸಮುದ್ರದಲ್ಲಿ ಎಷ್ಟು ದೂರ ಕ್ರಮಿಸುತ್ತವೆ?, ಅವು ಹೇಗೆ ವಾಪಸ್ ಇದೇ ಸ್ಥಳಕ್ಕೆ ಮೊಟ್ಟೆ ಇಡಲು ಬರುತ್ತವೆ? ಎನ್ನುವುದರ ಬಗ್ಗೆ ಮಾಹಿತಿ ಕಲೆ ಹಾಕಿ ಅಧ್ಯಯನ ಮಾಡಲಾಗುವುದು. ರಕ್ಷಣೆ ಮಾಡಿ ಚಿಕಿತ್ಸೆ ನೀಡುವ ಪುನರ್ವಸತಿ ಕೇಂದ್ರಗಳನ್ನೂ ತೆರೆಯಲಾಗುತ್ತಿದೆ. ಸಮುದ್ರ ಜೀವಿಗಳಿಗೆ ಚಿಕಿತ್ಸೆ ನೀಡಲು ವೈದ್ಯರನ್ನೂ ನೇಮಕ ಮಾಡಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಆಲಿವ್ ರಿಡ್ಲೆ ಆಮೆಗಳು ಪರಿಸರ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ಆಮೆ. ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಆಮೆಗಳು ಸಮುದ್ರದ ಜೀವನ ಚಕ್ರದ ಪ್ರಮುಖ ಭಾಗವಾಗಿವೆ. ಈ ವಿಶಿಷ್ಟ ಆಮೆಗಳ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಾಗಿದೆ. ಶೀಘ್ರವೇ ಕಾರವಾರದಲ್ಲಿ ರಿಡ್ಲೆ ಕಡಲ ಆಮೆಗಳ ರಕ್ಷಣೆಯ ಹಾಗೂ ಅವುಗಳ ಅಧ್ಯಯನದ ತಾಣ ನಿರ್ಮಾಣಗೊಳ್ಳಲಿದೆ.

-ಸಿ.ರವಿಶಂಕರ್, ಡಿಎಫ್‌ಒ, ಕಾರವಾರ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಶ್ರೀನಿವಾಸ ಬಾಡ್ಕರ್

contributor

Similar News