ಗುಜರಾತ್: ಮಕ್ಕಳನ್ನು ಕಾಡುತ್ತಿರುವ ಚಂಡಿಪುರ ವೈರಸ್

Update: 2024-07-22 06:19 GMT
Editor : Thouheed | Byline : ಎನ್.ಕೆ.

ಗುಜರಾತಿನಲ್ಲಿ ಶಂಕಿತ ಚಂಡಿಪುರ ವೈರಲ್ ಎನ್ಸೆಫಾಲಿಟಿಸ್ (ಸಿಎಚ್‌ಪಿವಿ) ಪ್ರಕರಣಗಳ ಸಂಖ್ಯೆ ಗುರುವಾರ 20ಕ್ಕೇರಿದ್ದು,ಅಹ್ಮದಾಬಾದ್ ನಗರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಸಿಎಚ್‌ಪಿವಿ ಲಕ್ಷಣಗಳನ್ನು ಹೊಂದಿರುವ 35 ವ್ಯಕ್ತಿಗಳು ವಿವಿಧ ಜಿಲ್ಲಾ ಆಸ್ಪತ್ರೆಗಳಿಗೆ ದಾಖಲಾಗಿರುವುದು ಆತಂಕವನ್ನು ಸೃಷ್ಟಿಸಿದೆ.

ಗಮನಾರ್ಹವಾಗಿ ಚಂಡಿಪುರ ವೈರಸ್‌ನಿಂದ ಮೃತರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದರು.

ಹೈದರಾಬಾದ್‌ನ ಕೇರ್ ಹಾಸ್ಪಿಟಲ್ಸ್‌ನ ಇಂಟರ್ನಲ್ ಮೆಡಿಸಿನ್ ಕನ್ಸಲ್ಟಂಟ್ ಡಾ.ಅಥೆರ್ ಪಾಶಾ ಅವರ ಪ್ರಕಾರ,ಚಂಡಿಪುರ ವೈರಸ್ ಸೋಂಕು ಯಾರಿಗೂ ತಗಲಬಹುದು,ಆದರೆ ಮಕ್ಕಳಲ್ಲಿಯ ದುರ್ಬಲ ರೋಗನಿರೋಧಕ ವ್ಯವಸ್ಥೆ ಮತ್ತು ಕ್ಷಿಪ್ರಗತಿಯಲ್ಲಿ ರೋಗಲಕ್ಷಣಗಳ ಹೆಚ್ಚುವಿಕೆಯಿಂದಾಗಿ ಹೆಚ್ಚಾಗಿ ಈ ವೈರಸ್ ಅವರಲ್ಲಿ ಮಾರಣಾಂತಿಕವಾಗಿದೆ.

1965ರಲ್ಲಿ ಭಾರತದಲ್ಲಿ ಗುರುತಿಸಲಾದ ಚಂಡಿಪುರ ವೈರಸ್ ರಾಬ್ಡೊವೈರಿಡೆ ಕುಟುಂಬಕ್ಕೆ ಸೇರಿದ್ದು,ಎನ್ಸೆಫಾಲಿಟಿಸ್ (ಮಿದುಳಿನ ಉರಿಯೂತ)ಗೆ ಕಾರಣವಾಗುತ್ತದೆ. ಮುಖ್ಯವಾಗಿ ಮರಳುನೊಣಗಳಿಂದ ಹರಡುವ ಈ ವೈರಸ್ ತನ್ನ ಕ್ಷಿಪ್ರ ಪ್ರಗತಿ ಮತ್ತು ಕೇಂದ್ರ ನರಮಂಡಲದ ಮೇಲೆ ಪರಿಣಾಮದಿಂದಾಗಿ ಗುಜರಾತಿನಲ್ಲಿ,ವಿಶೇಷವಾಗಿ ಮಕ್ಕಳ ಸಾವುಗಳಿಗೆ ಕಾರಣವಾಗಿದೆ ಎಂದು ಡಾ.ಪಾಶಾ ಬೆಟ್ಟು ಮಾಡಿದರು.

ವಯಸ್ಕರೂ ವೈರಸ್ ಸೋಂಕಿಗೆ ತುತ್ತಾಗಬಹುದಾದರೂ ಸಾಮಾನ್ಯವಾಗಿ ಅವರಲ್ಲಿ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ ಮತ್ತು ಸಾವಿನ ಪ್ರಮಾಣವೂ ಕಡಿಮೆಯಾಗಿರುತ್ತದೆ ಎಂದು ಹೇಳಿದ ಡಾ.ಪಾಶಾ,ಮಕ್ಕಳಲ್ಲಿ ಚಂಡಿಪುರ ವೈರಸ್‌ನ ತೀವ್ರ ಸೋಂಕಿಗೆ ಕಾರಣಗಳನ್ನು ವಿವರಿಸಿದರು.

<ದುರ್ಬಲ ರೋಗ ನಿರೋಧಕ ವ್ಯವಸ್ಥೆ: ಮಕ್ಕಳಲ್ಲಿ ಇನ್ನೂ ರೋಗ ನಿರೋಧಕ ವ್ಯವಸ್ಥೆ ಅಭಿವೃದ್ಧಿಗೊಂಡಿರುವುದಿಲ್ಲ ಇದರಿಂದಾಗಿ ವೈರಸ್ ವಿರುದ್ಧ ಪರಿಣಾಮಕಾರಿ ಹೋರಾಟ ಸಾಧ್ಯವಾಗುವುದಿಲ್ಲ.

<ಅಪಾಯಕ್ಕೆ ಒಡ್ಡಿಕೊಳ್ಳುವಿಕೆ: ಮಕ್ಕಳು ಹೊರಾಂಗಣದಲ್ಲಿ ಆಟವಾಡುವ ಸಾಧ್ಯತೆಗಳು ಹೆಚ್ಚು ಮತ್ತು ವಯಸ್ಕರಂತೆ ರಕ್ಷಣಾ ಕ್ರಮಗಳನ್ನು ಬಳಸದಿರಬಹುದು.

ವಯೋಗುಂಪು: ವೈರಸ್ ಸೋಂಕು ವಿಶೇಷವಾಗಿ 15 ವರ್ಷದೊಳಗಿನ ಮಕ್ಕಳಲ್ಲಿ ತೀವ್ರವಾಗಿರುತ್ತದೆ ಮತ್ತು 10 ವರ್ಷದೊಳಗಿನ ಮಕ್ಕಳು ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ.

► ಎಚ್ಚರಿಕೆಯ ಲಕ್ಷಣಗಳು

ಅತಿಯಾದ ಜ್ವರ,ತೀವ್ರ ತಲೆನೋವುಗಳು,

ವಾಂತಿ,ಸೆಳವುಗಳು,ಬದಲಾದ ಮಾನಸಿಕ ಸ್ಥಿತಿ(ಗೊಂದಲ,ನಿದ್ರೆಯ ಮಂಪರು),ಕೋಮಾ (ಗಂಭೀರ ಪ್ರಕರಣಗಳಲ್ಲಿ) ವೈರಸ್ ಸೋಂಕಿತ ಮರಳುನೊಣದ ಕಡಿತದ ಮೂಲಕ ಹರಡುತ್ತದೆ. ಈ ಮರಳುನೊಣಗಳು ವೈರಸ್ ಹೊಂದಿರುವ ಪ್ರಾಣಿಗಳನ್ನು ಕಚ್ಚುವ ಮೂಲಕ ಸೋಂಕಿಗೊಳಗಾಗುತ್ತವೆ ಮತ್ತು ನಂತರ ಅದನ್ನು ಮನುಷ್ಯರಿಗೆ ಹರಡುತ್ತವೆ.

ಮಕ್ಕಳು ಮತ್ತು ವಯಸ್ಕರಲ್ಲಿ ಸೋಂಕು ತಡೆಯುವುದು ಹೇಗೆ?

ಮೇಲೆ ಹೇಳಲಾದ ರೋಗಲಕ್ಷಣಗಳು ಉಲ್ಬಣಗೊಂಡಾಗ ಶೀಘ್ರ ರೋಗನಿರ್ಣಯ ಮತ್ತು ಚಿಕಿತ್ಸೆ ಅಗತ್ಯವಾಗುತ್ತವೆ ಎಂದು ಡಾ.ಪಾಶಾ ಹೇಳಿದರು. ದುರದೃಷ್ಟವಶಾತ್ ವಿಳಂಬಿತ ರೋಗನಿರ್ಣಯ,ನಿರ್ದಿಷ್ಟ ಆ್ಯಂಟಿವೈರಲ್ ಚಿಕಿತ್ಸೆಗಳ ಕೊರತೆ ಮತ್ತು ಪೀಡಿತ ಪ್ರದೇಶಗಳಲ್ಲಿ ಸೀಮಿತ ತೀವ್ರ ನಿಗಾ ಸೌಲಭ್ಯ ಇವು ಸಾವುಗಳು ಹೆಚ್ಚಲು ಮುಖ್ಯಕಾರಣಗಳಾಗಿವೆ.

ಚಂಡಿಪುರ ವೈರಸ್‌ನಿಂದ ರಕ್ಷಿಸಿಕೊಳ್ಳುವುದು ಹೇಗೆ?

► ಕೀಟ ನಿವಾರಕಗಳು: ಡೀಟ್ ಅಥವಾ ಇತರ ಪರಿಣಾಮಕಾರಿ ರಾಸಾಯನಿಕವನ್ನು ಒಳಗೊಂಡಿರುವ ರಿಪೆಲ್ಲೆಂಟ್‌ಗಳನ್ನು ಚರ್ಮಕ್ಕೆ ಲೇಪಿಸಿ.

► ರಕ್ಷಣಾತ್ಮಕ ಉಡುಗೆ: ಮರಳುನೊಣಗಳ ಚಟುವಟಿಕೆ ತೀವ್ರವಾಗಿರುವ ನಸುಕಿನಲ್ಲಿ ಮತ್ತು ಮುಸ್ಸಂಜೆ ವೇಳೆಯಲ್ಲಿ ಉದ್ದತೋಳಿನ ಶರ್ಟ್ ಮತ್ತು ಪ್ಯಾಂಟ್ ಧರಿಸಿ.

ಕೀಟನಾಶಕದಿಂದ ಸಂಸ್ಕರಿತ ನೆಟ್‌ಗಳು: ಮಲಗುವಾಗ ಕಡಿತದಿಂದ ಪಾರಾಗಲು ಕೀಟನಾಶಕದಿಂದ ಸಂಸ್ಕರಿತ ನೆಟ್‌ಗಳನ್ನು ಬಳಸಿ.

ಪರಿಸರ ನಿರ್ವಹಣೆ: ಮನೆಯ ಸುತ್ತಲಿನ ಮತ್ತು ಪರಿಸರದಲ್ಲಿನ ಮರಳುನೊಣ ಸಂತಾನೋತ್ಪತ್ತಿ ತಾಣಗಳನ್ನು ನಿವಾರಿಸಿ. ನೀರು ನಿಲ್ಲಲು ಅವಕಾಶ ನೀಡಬೇಡಿ. ಸಾವಯವ ತ್ಯಾಜ್ಯಗಳಿದ್ದರೆ ಅದನ್ನು ತೆಗೆದುಹಾಕಿ.

► ಅರಿವು ಮತ್ತು ಶಿಕ್ಷಣ: ವೈರಸ್,ಅದರ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.

ತ್ವರಿತ ವೈದ್ಯಕೀಯ ಚಿಕಿತ್ಸೆ,ಸುಧಾರಿತ ಆರೋಗ್ಯ ಮೂಲಸೌಕರ್ಯ ಮತ್ತು ಪರಿಣಾಮಕಾರಿ ವೈರಸ್ ನಿಯಂತ್ರಣ ಕಾರ್ಯಕ್ರಮಗಳು ವಿಶೇಷವಾಗಿ ಮಕ್ಕಳನ್ನು ಚಂಡಿಪುರ ವೈರಸ್‌ನಿಂದ ರಕ್ಷಿಸುವಲ್ಲಿ ನಿರ್ಣಾಯಕವಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎನ್.ಕೆ.

contributor

Similar News