ಎನ್‌ಕೌಂಟರ್‌ಗೆ ಮಾನ್ಯತೆ ನೀಡುವುದು ಎಷ್ಟು ಸರಿ?
ನ್ಯಾಯಾಲಯದಲ್ಲಿ ಆತ ಅಪರಾಧಿ ಎಂದು ಸಾಬೀತಾಗುವ ಮುನ್ನವೇ ಅಕ್ಷಯ್ ಶಿಂದೆ ಎನ್‌ಕೌಂಟರ್ ನಡೆದುಹೋಗಿದೆ. ಆತ ಪೊಲೀಸ್ ಬಂದೂಕಿನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮೊದಲು ಸುದ್ದಿ ಹಬ್ಬಿತ್ತು. ಆಮೇಲೆ, ಆತ ಪೊಲೀಸರಿಂದ ತಪ್ಪಿಸಿಕೊಂಡು ಓಡಲು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ. ಆಗ ಆತ್ಮರಕ್ಷಣೆಗಾಗಿ ಆತನ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ. ಆದರೆ ಕೈಗಳನ್ನು ಹಿಂದಕ್ಕೆ ಕಟ್ಟಿ ಕರೆದೊಯ್ಯುತ್ತಿದ್ದಾಗ ಹೇಗೆ ಆತ ಗುಂಡು ಹಾರಿಸಲು ಸಾಧ್ಯ ಎಂಬ ಅನುಮಾನ ವ್ಯಕ್ತವಾಗಿದೆ. ಬಹುಶಃ ಚುನಾವಣೆಗಾಗಿ ಜನರ ಎದುರು ಹೋಗಲು ಮುಖವಿಲ್ಲದಂತಾಗಿದ್ದ ಫಡ್ನವೀಸ್‌ಗೆ ಚುನಾವಣೆಗೆ ಹೋಗಲು ದಾರಿ ಇದಾಯಿತೆ?
ಉತ್ತರಪ್ರದೇಶದಂತೆ ಮಹಾರಾಷ್ಟ್ರದಲ್ಲೂ ಎನ್‌ಕೌಂಟರ್ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಅದನ್ನು ನಕಲಿ ಎನ್‌ಕೌಂಟರ್ ಎಂದು ಕಾಣಿಸಲು ಸರಕಾರವೇ ಬಯಸುತ್ತದೆಯೇ? ಈ ರೀತಿಯಲ್ಲಿ ಆರೋಪಿಗಳನ್ನು ಮುಗಿಸಿಬಿಡುವ ಮೂಲಕ ತಕ್ಷಣದ ನ್ಯಾಯ ಒದಗಿಸುವ ಉದ್ದೇಶವನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆಯೆ?
ಬದ್ಲಾಪುರ ಆರೋಪಿ ಹತ್ಯೆಯ ಬಳಿಕ ಅದು ಪಡೆದುಕೊಂಡಿರುವ ರಾಜಕೀಯ ತಿರುವು ಹಲವು ಪ್ರಶ್ನೆಗಳನ್ನೂ ಎತ್ತುತ್ತದೆ.
ಎನ್‌ಕೌಂಟರ್ ಮೂಲಕ ಆರೋಪಿಯನ್ನು ಕೊಂದಿರುವುದನ್ನು ‘ದೇವಾ ಕಾ ನ್ಯಾಯ್’ ಎಂದು ಹೇಳುವ ಪೋಸ್ಟರುಗಳು ಮಹಾರಾಷ್ಟ್ರದಲ್ಲಿ ಕಾಣಿಸತೊಡಗಿವೆ. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಅವರನ್ನು ದೇವಾ ಎನ್ನಲಾಗುತ್ತದೆ.
‘ಈ ಎನ್‌ಕೌಂಟರ್‌ನಿಂದಾಗಿ ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಕ್ಕಿದಂತಾಗಿದೆ. ಮಹಾರಾಷ್ಟ್ರದಲ್ಲಿ ಈಗಿರುವುದು ಮಹಾವಿಕಾಸ್ ಅಘಾಡಿ ಸರಕಾರವಲ್ಲ, ಬದಲಿಗೆ ದೇವಾ ಸರಕಾರ’ ಎಂದೆಲ್ಲ ಬರೆಯಲಾಗಿರುವ ಪೋಸ್ಟರುಗಳು ಮಿಂಚುತ್ತಿವೆ.
ತಮಾಷೆಯೆಂದರೆ, ಮಹಾರಾಷ್ಟ್ರದಲ್ಲಿರುವುದು ಶಿಂದೆ ಸರಕಾರ.
ಶಿಂದೆ ಸರಕಾರ ಎನ್ನಬೇಕೆ ಹೊರತು, ದೇವಾ ಸರಕಾರ ಹೇಗಾಯಿತು?
ಬಹುಶಃ ಚುನಾವಣೆಗಾಗಿ ಜನರ ಎದುರು ಹೋಗಲು ಮುಖವಿಲ್ಲದಂತಾಗಿದ್ದ ಫಡ್ನವೀಸ್‌ಗೆ ಚುನಾವಣೆಗೆ ಹೋಗಲು ದಾರಿ ಇದಾಯಿತೆ? ಆರೋಪಿಯೊಬ್ಬನನ್ನು ಬಲಿಹಾಕಿ ನಾಯಕನೊಬ್ಬ ಮರುಜನ್ಮ ಪಡೆಯುವ ಸ್ಥಿತಿಯೇ ಇದು?
ಮಹಾರಾಷ್ಟ್ರದ ಬದ್ಲಾಪುರದಲ್ಲಿ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಲ್ಲಿ ಅಕ್ಷಯ್ ಶಿಂದೆ ಬಂಧನವಾಗಿತ್ತು. ನ್ಯಾಯಾಲಯದಲ್ಲಿ ಆತ ಅಪರಾಧಿ ಎಂದು ಸಾಬೀತಾಗುವ ಮುನ್ನವೇ ಆತನ ಎನ್‌ಕೌಂಟರ್ ನಡೆದುಹೋಗಿದೆ.
ಆತ ಪೊಲೀಸ್ ಬಂದೂಕಿನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮೊದಲು ಸುದ್ದಿ ಹಬ್ಬಿತ್ತು.
ಆಮೇಲೆ, ಆತ ಪೊಲೀಸರಿಂದ ತಪ್ಪಿಸಿಕೊಂಡು ಓಡಲು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ. ಆಗ ಆತ್ಮರಕ್ಷಣೆಗಾಗಿ ಆತನ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಆದರೆ ಕೈಗಳನ್ನು ಹಿಂದಕ್ಕೆ ಕಟ್ಟಿ ಕರೆದೊಯ್ಯುತ್ತಿದ್ದಾಗ ಹೇಗೆ ಆತ ಗುಂಡು ಹಾರಿಸಲು ಸಾಧ್ಯ ಎಂಬ ಅನುಮಾನ ವ್ಯಕ್ತವಾಗಿದೆ. ಯಾರೂ ಕಸಿಯದ ರೀತಿಯಲ್ಲಿ ಬಂದೂಕಿನ ವಿನ್ಯಾಸವಿದ್ದು, ಹೇಗೆ ಅದನ್ನು ಕಸಿಯಲು ಸಾಧ್ಯ ಎಂದೂ ಕೇಳಲಾಗುತ್ತಿದೆ.
ಪೊಲೀಸರ ಆರೋಪಗಳ ಬಗ್ಗೆ ಹತ್ಯೆಗೀಡಾದವನ ಕುಟುಂಬಸ್ಥರು ಕೂಡ ಆಕ್ಷೇಪವೆತ್ತಿದ್ದಾರೆ.
ನನ್ನ ಮಗ ಪಟಾಕಿ ಸಿಡಿಸುವುದಕ್ಕೂ ಅಂಜುತ್ತಿದ್ದ. ಆತ ಹೇಗೆ ಪೊಲೀಸರ ಮೇಲೆ ಗುಂಡು ಹಾರಿಸುತ್ತಾನೆ? ಪೊಲೀಸರು ನಮ್ಮ ಮಗನನ್ನು ಕೊಂದಿದ್ದಾರೆ. ಘಟನೆಯ ತನಿಖೆಯಾಗಲಿ ಎಂದು ಆತನ ತಾಯಿ ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಪ್ಪೊಪ್ಪಿಗೆ ನೀಡುವಂತೆ ಪೊಲೀಸರು ಆತನ ಮೇಲೆ ಒತ್ತಡ ಹೇರಿದ್ದರು ಎಂದು ಶಿಂದೆ ಸಂಬಂಧಿಕರು ಹೇಳಿದ್ದಾರೆ.
ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್ ಶಿಂದೆ ಸಾವಿನ ಕುರಿತು ಸಿಐಡಿ ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಮಂಗಳವಾರ ಸಂಜೆ ವಿಧಿವಿಜ್ಞಾನ ತಜ್ಞರ ತಂಡವು ಪೊಲೀಸ್ ವಾಹನವನ್ನು ಪರೀಕ್ಷಿಸಿದ್ದು, ಸೋಮವಾರ ಸಂಜೆ ಶಿಂದೆ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಘಟನೆ ಪೊಲೀಸ್ ಕಸ್ಟಡಿಯಲ್ಲಿನ ಸಾವಿಗೆ ಸಂಬಂಧಿಸಿದ್ದು, ಇದನ್ನು ಮಹಾರಾಷ್ಟ್ರ ಸಿಐಡಿ ತನಿಖೆ ನಡೆಸಲಿದೆ ಎಂದು ತಿಳಿದುಬಂದಿದೆ.
ಘಟನೆ ನಡೆದ ಮುಂಬ್ರಾ ಬೈಪಾಸ್‌ನಲ್ಲಿ ಸ್ಥಳಕ್ಕೆ ಸಿಐಡಿ ಅಧಿಕಾರಿಗಳ ತಂಡ ಭೇಟಿ ನೀಡಲಿದ್ದು, ಆ ವೇಳೆ ವಾಹನದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ಹೇಳಿವೆ.
ಶಿಂದೆ ಮೃತದೇಹವನ್ನು ಮಂಗಳವಾರ ಬೆಳಗ್ಗೆ ಥಾಣೆಯ ಕಲ್ವಾ ನಾಗರಿಕ ಆಸ್ಪತ್ರೆಯಿಂದ ನೆರೆಯ ಮುಂಬೈನ ಸರಕಾರಿ ಜೆಜೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಯಿತು.
ಅಕ್ಷಯ್ ಶಿಂದೆ ಪೊಲೀಸ್ ಬಂದೂಕು ಕಿತ್ತುಕೊಂಡು ಮೂರು ಸುತ್ತು ಗುಂಡು ಹಾರಿಸಿದ್ದಾಗ ಪೊಲೀಸ್ ಅಧಿಕಾರಿಯೂ ಗಾಯಗೊಂಡಿದ್ದಾಗಿ ಹೇಳಲಾಗಿದೆ.
ಗಾಯಾಳು ಪೊಲೀಸ್ ಅಧಿಕಾರಿಯನ್ನು ಸಿಎಂ ಏಕನಾಥ್ ಶಿಂದೆ ಮತ್ತಿತರರು ಆಸ್ಪತ್ರೆಗೆ ಹೋಗಿ ಭೇಟಿಯಾಗಿದ್ದಾರೆ.
ಎನ್‌ಕೌಂಟರ್ ಅನ್ನು ಸಮರ್ಥಿಸಿಕೊಳ್ಳುವ ಕೆಲಸವೂ ಸೋಷಿಯಲ್ ಮೀಡಿಯಾದಲ್ಲಿ ನಡೆದಿದೆ.
ಘಟನೆಯನ್ನು ಶಿವಸೇನಾ ಯುಬಿಟಿ ಬಣದ ಆದಿತ್ಯ ಠಾಕ್ರೆ ಖಂಡಿಸಿದ್ದಾರೆ. ಎನ್‌ಸಿಪಿ ಶರದ್ ಪವಾರ್ ಬಣದ ಶಾಸಕ ಜಿತೇಂದ್ರ ಆವ್ಹಾಡ್ ಕೂಡ ಪೊಲೀಸರನ್ನು ಪ್ರಶ್ನಿಸಿದ್ದು, ಶಿಂದೆ ಮೇಲಿನ ಆರೋಪ ಆಧಾರ ರಹಿತ ಎಂದಿದ್ದಾರೆ.
ಐವರು ಪೊಲೀಸರು ಸುತ್ತುವರಿದಿರುವಾಗ ಕೈಕೋಳ ಹಿಡಿದ ಆರೋಪಿಯೊಬ್ಬ ಪೊಲೀಸರ ರಿವಾಲ್ವರ್ ಕಿತ್ತುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸುವುದು ಹೇಗೆ ಎಂದು ಆವ್ಹಾಡ್ ಪ್ರಶ್ನಿಸಿದ್ದಾರೆ.
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಘಟನೆಯ ಲಾಭವನ್ನು ಆಡಳಿತ ಪಕ್ಷ ತೆಗೆದುಕೊಳ್ಳುತ್ತದೆ ಎಂದು ಅವರು ಆರೋಪಿಸಿದ್ದಾರೆ. ಅವನನ್ನು ಯೋಜಿಸಿ ಕೊಲ್ಲಲಾಗಿದೆ ಎಂಬುದು ಖಚಿತ ಎಂದು ಜಿತೇಂದ್ರ ಆವ್ಹಾಡ್ ಹೇಳಿದ್ದಾರೆ.
ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್, ಕೈಕೋಳ ಹಾಕಿರುವ ವ್ಯಕ್ತಿಯಿಂದ ಗುಂಡು ಹಾರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಎನ್‌ಸಿಪಿ ಶರದ್ ಪವಾರ್ ಬಣದ ಸಂಸದೆ ಸುಪ್ರಿಯಾ ಸುಳೆ, ಈ ಬೆಳವಣಿಗೆ ಮಹಾರಾಷ್ಟ್ರದಲ್ಲಿ ಕಾನೂನು ಜಾರಿ ಮತ್ತು ನ್ಯಾಯ ವ್ಯವಸ್ಥೆಯ ಸಂಪೂರ್ಣ ಸ್ಥಗಿತವಾಗಿರುವುದರ ಸೂಚಕ ಎಂದು ಹೇಳಿದ್ದಾರೆ.
ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಇದು ಎನ್‌ಕೌಂಟರ್ ಎಂದು ಯಾರೂ ನಂಬುವುದಿಲ್ಲ. ಪ್ರಸಕ್ತ ಮಹಾರಾಷ್ಟ್ರ ಪೊಲೀಸರನ್ನು ನಾನು ನಂಬುವುದಿಲ್ಲ. ನಿಜವಾದ ಅಪರಾಧಿಗಳು ಎಂದಿಗೂ ಪತ್ತೆಯಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಹೇಳಿದ್ಧಾರೆ.
ಮಹಾರಾಷ್ಟ್ರದಲ್ಲಿ ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.
ಆದರೆ ಆಡಳಿತಾರೂಢ ಬಿಜೆಪಿ ಮೈತ್ರಿಕೂಟ ತೀರಾ ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಅಲ್ಲಿ ಕಾಂಗ್ರೆಸ್ ನಂಬರ್ ಒನ್ ಪಕ್ಷವಾಗಿ ಮೂಡಿ ಬಂದಿದೆ.
ಈಗ ಬಿಜೆಪಿ ಜೊತೆಗಿರುವ ಅಜಿತ್ ಪವಾರ್ ಬಣ ಶರದ್ ಪವಾರ್ ಜೊತೆ ವಾಪಸ್ ಹೋಗುವ ವದಂತಿಗಳಿವೆ. ಜೊತೆಗೆ ಶಿಂದೆ ಜೊತೆಗಿರುವ ಶಿವಸೇನಾ ಶಾಸಕರಲ್ಲೂ ಕೆಲವರು ಉದ್ಧವ್ ಠಾಕ್ರೆ ಪಕ್ಷಕ್ಕೆ ಮರಳುವ ಸಾಧ್ಯತೆ ಕಾಣುತ್ತಿದೆ. ಬಿಜೆಪಿಯಿಂದಲೂ ಕೆಲವು ಹಾಲಿ ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ದೊಡ್ಡ ಸೋಲು ಕಾದಿದೆ ಎಂಬ ವರದಿಗಳೇ ಬರುತ್ತಿವೆ.
ಹೀಗಿರುವಾಗಲೇ ಬಿಜೆಪಿ ಗೃಹ ಸಚಿವರ ಅಧೀನದಲ್ಲಿ ಹೀಗೊಂದು ಎನಕೌಂಟರ್ ನಡೆದು ಬಿಟ್ಟಿದೆ.
ಅದರ ಬೆನ್ನಿಗೇ ಸಿಎಂ ಅನ್ನು ಬಿಟ್ಟು ಗೃಹ ಸಚಿವರ ಹೆಸರಲ್ಲೇ ಪೋಸ್ಟರ್‌ಗಳೂ, ಸೋಷಿಯಲ್ ಮೀಡಿಯಾ ಪ್ರಚಾರವೂ ನಡೆಯುತ್ತಿದೆ. ಅಮಿತ್ ಶಾ ಬೇರೆ ಮುಂಬೈಗೆ ಬಂದಿಳಿದಿದ್ದಾರೆ. ಇವೆಲ್ಲವೂ ಏನನ್ನು ಸೂಚಿಸುತ್ತಿವೆ?
ಉತ್ತರ ಭಾರತ ಮತ್ತು ಹೈದರಾಬಾದ್‌ನಲ್ಲಿಯ ಹಾಗೆಯೇ ಮಹಾರಾಷ್ಟ್ರ ಎನ್‌ಕೌಂಟರ್ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಸರಕಾರದಲ್ಲಿ ಯೋಗಿ ಆದಿತ್ಯನಾಥ್ ಮಾದರಿ ತಯಾರಾಗಿದೆಯೇ ಎಂಬ ಅನುಮಾನ ಮೂಡುವಂತಾಗಿದೆ.
ಉತ್ತರ ಪ್ರದೇಶದಲ್ಲಿ ಮಂಗೇಶ್ ಯಾದವ್ ಎನ್‌ಕೌಂಟರ್‌ವಿಚಾರದಲ್ಲಿಯೂ ಪ್ರಶ್ನೆಗಳು ಎದ್ದಿದ್ದವು, ಪ್ರಶ್ನೆ ಜಾತಿಯ ವಿಚಾರದ್ದು ಮಾತ್ರವಾಗಿರಲಿಲ್ಲ. ಎನ್‌ಕೌಂಟರ್ ರೀತಿ ಸರಿಯಾಗಿದೆಯೇ? ನಿಜವಾಗಿಯೂ ಆತ ತಪ್ಪಿತಸ್ಥನೇ ಎಂಬ ಪ್ರಶ್ನೆಗಳು ಅವಾಗಿದ್ದವು.
ಉನ್ನಾವೋದಲ್ಲಿ ಅನುಪ್ ಪ್ರತಾಪ್ ಸಿಂಗ್ ಎನ್‌ಕೌಂಟರ್ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಟ್ವೀಟ್ ಮಾಡಿರುವ ಎಸ್‌ಪಿ ನಾಯಕ ಅಖಿಲೇಶ್ ಯಾದವ್, ದುರ್ಬಲರೇ ಎನ್‌ಕೌಂಟರ್‌ಗೆ ಬಲಿಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
‘‘ಹಿಂಸೆ ಮತ್ತು ನೆತ್ತರು ಯುಪಿ ಭವಿಷ್ಯಕ್ಕೆ ಒಳ್ಳೆಯದಲ್ಲ’’ ಎಂದು ಟ್ವೀಟ್‌ನಲ್ಲಿ ಅವರು ಬರೆದಿದ್ದಾರೆ.
ಆಡಳಿತಾರೂಢರಿಗೆ ತಾವು ಮತ್ತೆ ಗೆಲ್ಲುವುದಿಲ್ಲ ಎಂಬುದು ತಿಳಿದುಹೋಗಿದೆ. ಹಿಂದಿನ ಚುನಾವಣೆಯಲ್ಲಿ ಜನರು ಸೋಲಿಸಿದರೂ ಬಿಜೆಪಿ ಪಾಠ ಕಲಿತಿಲ್ಲ ಎಂದಿದ್ದಾರೆ.
ಎನ್‌ಕೌಂಟರ್ ಹಿಂದಿನ ರಾಜಕೀಯವೂ ಒಂದೆಡೆಯಿರುವಾಗ, ಎನ್‌ಕೌಂಟರ್ ಒಪ್ಪುವಂಥದ್ದೇ ಎಂಬ ಪ್ರಶ್ನೆಗಳಿವೆ.
ಅದಕ್ಕೆ ಮಾನ್ಯತೆ ನೀಡುವುದು ಎಷ್ಟು ಸರಿ?