ಇಸ್ರೇಲ್-ಇರಾನ್ ಸಂಘರ್ಷ ಮೂರನೇ ವಿಶ್ವ ಯುದ್ಧಕ್ಕೆ ಮುನ್ನುಡಿ?
ಈಗ ಇರಾನ್ ಮತ್ತು ಇಸ್ರೇಲ್ ಮುಖಾಮುಖಿಯಾದರೆ ಮಹಾಯದ್ಧವನ್ನು ತಡೆಯುವುದೇ ಅಸಾಧ್ಯವಾಗಬಹುದು. ಅಮೆರಿಕ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್, ಅಮೆರಿಕದ ಈ ನಡೆಯ ಹಿಂದೆ ಇಸ್ರೇಲ್‌ನ ಪ್ರಭಾವವಿದೆ ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ. ಅಲ್ಲಿ ಫೆಲೆಸ್ತೀನ್ ಹಕ್ಕುಗಳ ಬಗ್ಗೆ ಯಾರೂ ಮಾತಾಡುವುದಿಲ್ಲ. ಈಗ ಇರಾನ್ ದಾಳಿ ಬಳಿಕ, ಇಸ್ರೇಲ್ ಪ್ರತಿದಾಳಿಯ ಬಳಿಕ ವಿಶ್ವದಲ್ಲಿ ದೊಡ್ಡ ಯುದ್ಧ ಆದೀತೆಂಬ ಆತಂಕದ ಕಾರ್ಮೋಡ ಕವಿದಿದೆ. ಈ ಎರಡು ದೇಶಗಳು ಎದುರು ಬದುರಾದರೆ ವಿಶ್ವಯುದ್ಧ ತಡೆಯುವುದು ಸಾಧ್ಯವಾಗಲಾರದು.
ಇರಾನ್‌ನಿಂದ ಉಡಾವಣೆಯಾದ 200 ಕ್ಷಿಪಣಿಗಳ ವೀಡಿಯೊ ಟಿವಿ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಜಗತ್ತೇ ದೊಡ್ಡ ಯುದ್ಧದಲ್ಲಿ ಸಿಲುಕಿಕೊಳ್ಳುವ ಆತಂಕ ವ್ಯಕ್ತವಾಗಿದೆ.
ಮಧ್ಯಪ್ರಾಚ್ಯದ ಅಮೆರಿಕನ್ ಪರ ದೇಶಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು, ಅಮೆರಿಕ ಮತ್ತು ಇಸ್ರೇಲ್ ನಡುವಿನ ಸ್ನೇಹ ಮತ್ತು ಪ್ರತ್ಯೇಕವಾಗಿರುವ ಇರಾನ್‌ನ ಅಪಾಯಗಳ ಬಗ್ಗೆ ಚರ್ಚಿಸಬೇಕಿದೆ.
ಕಳೆದೊಂದು ವರ್ಷದಿಂದ ಗಾಝಾ ಮೇಲೆ ಇಸ್ರೇಲ್ ನಿರಂತರ ದಾಳಿ ನಡೆಸುತ್ತಲೇ ಇದೆ. ಇನ್ನೊಂದೆಡೆ ಅಮೆರಿಕ ಶಸ್ತ್ರಾಸ್ತ್ರ ಪೂರೈಕೆಯಿಂದ ಹಿಡಿದು ಹಲವಾರು ರೀತಿಯಲ್ಲಿ ಇಸ್ರೇಲ್ ಪರವಾಗಿ ನಿಂತಿದೆ. ಅಮೆರಿಕದ ಈ ಯುದ್ಧದಾಹಿ ನಡೆಗೆ ವಿಶ್ವಾದ್ಯಂತ ವ್ಯಾಪಕ ಖಂಡನೆಗಳು ವ್ಯಕ್ತವಾಗುತ್ತಲೇ ಇವೆ. ಅಮೆರಿಕದಲ್ಲೇ ಅಮೆರಿಕದ ಬಗ್ಗೆ ಕಟು ಟೀಕೆಗಳು ವ್ಯಕ್ತವಾಗಿವೆ. ಅಮೆರಿಕದ ಅನೇಕ ವಿಶ್ವವಿದ್ಯಾನಿಲಯಗಳು ಇದು ಪರದೆಯ ಹಿಂದೆ ನಿಂತು ಯುದ್ಧ ನಡೆಸುತ್ತಿರುವ ರೀತಿ ಎಂದು ಅಮೆರಿಕದ ನೀತಿಯನ್ನು ಟೀಕಿಸಿವೆ.
ಕಳೆದೊಂದು ವರ್ಷದಿಂದ ನಡೆದುಬಂದಿದ್ದ ಯುದ್ಧ ಈಗ ಇಸ್ರೇಲ್-ಇರಾನ್ ಯುದ್ಧವಾಗಿ ಬದಲಾಗಿದೆ. ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸುವುದರೊಂದಿಗೆ ಇದು ಶುರುವಾಗಿದೆ.
ಇಸ್ರೇಲ್ ಮೇಲೆ ಸುಮಾರು 200 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸುರಿಮಳೆಯಾಗಿದೆ ಎಂದು ವರದಿಗಳಿವೆ. ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆಯ ಬಳಿಕ ಈ ಕ್ಷಿಪಣಿ ದಾಳಿಯನ್ನು ಇರಾನ್ ನಡೆಸಿದೆ. ಇದಕ್ಕೆ ಉತ್ತರವಾಗಿ ಇಸ್ರೇಲ್ ಪ್ರತಿದಾಳಿ ಆರಂಭಿಸುತ್ತದೆ. ನೆಪಗಳನ್ನು ಹುಡುಕುತ್ತಲೇ ಇರುವ ಯುದ್ಧದಾಹಿ ಅದು. ಹೀಗಾಗಿ ಏನಾದರೂ ಆಗಿಯೇಬಿಡುತ್ತದೆ ಎಂಬ ಆತಂಕ ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕಾಡುತ್ತಿದೆ.
ಕ್ರೂಸ್ ಮಿಸೈಲ್‌ಗಿಂತಲೂ ಬ್ಯಾಲಿಸ್ಟಿಕ್ ಮಿಸೈಲ್‌ಗಳು ಹೆಚ್ಚು ತೀವ್ರತೆ ಉಳ್ಳವಾಗಿರುತ್ತವೆ. 12 ನಿಮಿಷಗಳಲ್ಲೇ ಇರಾನ್‌ನಿಂದ ಇಸ್ರೇಲ್‌ನ ಟೆಲ್‌ಅವೀವ್ ಅನ್ನು ಕ್ಷಿಪಣಿಗಳು ಮುಟ್ಟಿವೆ.
ಇದಕ್ಕೂ ಮೊದಲು ಕ್ರೂಸ್ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ಇರಾನ್ ನಡೆಸಿತ್ತಾದರೂ, ಅದನ್ನು ಇಸ್ರೇಲ್ ನಿಶ್ಶಸ್ತ್ರೀಕರಿಸಿತು ಎನ್ನಲಾಗಿದೆ. ಇಸ್ರೇಲ್ ಬಳಿ ಕ್ಷಿಪಣಿ ದಾಳಿ ತಡೆಯುವ ಮಿಸೈಲ್ ವಿರೋಧಕ ವ್ಯವಸ್ಥೆಯಿದೆ. ಆದರೆ ಈ ಬಾರಿ ಇರಾನ್ ನಡೆಸಿದ ದಾಳಿಗಳು ತೀಕ್ಷ್ಣವಾಗಿದ್ದವು. ಆದರೆ ಹಾನಿಯೇನೂ ಆಗಿಲ್ಲ ಎಂದು ಇಸ್ರೇಲ್ ಹೇಳಿಕೊಂಡಿದೆ.
ಈ ದಾಳಿಯ ಮೂಲಕ ಇರಾನ್ ದೊಡ್ಡ ತಪ್ಪು ಮಾಡಿದೆ. ಇದಕ್ಕಾಗಿ ಇರಾನ್ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇರಾನ್ ಫೆಲೆಸ್ತೀನ್ ಪರವಿರುವ ದೇಶ. ಹಿಜ್ಬುಲ್ಲಾ ನಾಯಕನ ಹತ್ಯೆಗೆ ಪ್ರತೀಕಾರವಾಗಿ ಅದು ಈ ದಾಳಿ ನಡೆಸಿದ್ದಾಗಿ ಹೇಳಿದೆ. ನಮಗೆ ನಮ್ಮನ್ನು ರಕ್ಷಿಸಿಕೊಳ್ಳುವ ಪೂರ್ತಿ ಹಕ್ಕು ಇದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಹೇಳಿದ್ದಾರೆ.
ಹಮಾಸ್ ದಾಳಿಯ ಬಳಿಕ ಇಸ್ರೇಲ್ ಕೂಡ ತಮ್ಮನ್ನು ರಕ್ಷಿಸಿಕೊಳ್ಳಲು ಅಧಿಕಾರ ಇರುವುದಾಗಿ ಹೇಳಿತ್ತು. ಇದೇ ಆತ್ಮರಕ್ಷಣೆ ನೆಪದಲ್ಲಿ ಗಾಝಾದ ನೆಲದಲ್ಲಿ ಅದು ನೆತ್ತರು ಹರಿಸಿತ್ತು. ಮಕ್ಕಳನ್ನೂ ಬಿಡದೆ ಕೊಂದಿತ್ತು. ಲಕ್ಷಾಂತರ ಜನರು ಗಾಯಾಳುಗಳಾಗಿದ್ದರು. ಗಾಝಾವನ್ನು ಸರ್ವನಾಶ ಮಾಡಿ ಹಾಕಿದೆ ಇಸ್ರೇಲ್. ಈಗ ಇರಾನ್ ಕೂಡ ಅದೇ ಆತ್ಮರಕ್ಷಣೆಯ ಮಾತಾಡುತ್ತಿದೆ.
ವಿಶ್ವ ಸಂಸ್ಥೆಯಲ್ಲಿ ಇಸ್ರೇಲ್ ವಿರುದ್ಧ ಪ್ರಸ್ತಾವಗಳು ಬಂದಿವೆ. ಅಂತರ್‌ರಾಷ್ಟ್ರೀಯ ನ್ಯಾಯಾಲಯ ಕೂಡ ಇಸ್ರೇಲ್ ಬಗ್ಗೆ ಟೀಕಿಸಿದೆ. ನಿಂದನೆಗಳು ವ್ಯಾಪಕವಾಗಿ ವ್ಯಕ್ತವಾಗಿದೆ. ಆದರೆ ಅದಾವುದೂ ಇಸ್ರೇಲ್ ಅನ್ನು ತಡೆಯುವಲ್ಲಿ ಯಶಸ್ವಿಯಾಗಿಲ್ಲ.
ಲೆಬನಾನ್‌ನಲ್ಲಿ ಪೇಜರ್ ಸ್ಫೋಟದ ಮೂಲಕವೇ ದಾಳಿ ನಡೆಸಿರುವ ಇಸ್ರೇಲ್, ಇಡೀ ಜಗತ್ತನ್ನು ವಿಚಿತ್ರ ಇಕ್ಕಟ್ಟಿನಲ್ಲಿ ಸಿಲುಕಿಸುತ್ತಿರುವುದು ಅದೇ ಆತ್ಮರಕ್ಷಣೆಯ ನೆಪದಲ್ಲಿಯೇ. ಲೆಬನಾನ್ ರಾಜಧಾನಿ ಬೈರೂತ್‌ನಲ್ಲಿ ನಡೆಸಲಾಗಿರುವ ಕ್ಷಿಪಣಿ ದಾಳಿಗಳನ್ನು ಆತ್ಮರಕ್ಷಣೆ ಎಂಬ ಹಣೆಪಟ್ಟಿಯಡಿಯಲ್ಲೇ ಮಾಡಲಾಗಿದೆ.
ಗಾಝಾದಲ್ಲಿ ಗೆದ್ದಿರುವುದಾಗಿ ಹೇಳಿಕೊಂಡಿರುವ ಇಸ್ರೇಲ್, ಈ ಯಶಸ್ಸನ್ನು ಪಡೆದಿದ್ದೇನೆ ಎಂದುಕೊಳ್ಳುವಂತಾಗಲು ಇಡೀ ಒಂದು ವರ್ಷ ಯುದ್ಧ ನಡೆಸಬೇಕಾಗಿ ಬಂತು. ಯುದ್ಧ ಇನ್ನೂ ಮುಗಿದಿಲ್ಲ. ಇನ್ನೂ ನಡೆಯುತ್ತಲೇ ಇದೆ. ಲೆಬನಾನ್ ಜೊತೆ ಯುದ್ಧ ಮಾಡುವಾಗಲೇ ಇರಾನ್ ವಿರುದ್ಧವೂ ಇಸ್ರೇಲ್ ಯುದ್ಧ ನಡೆದಿದೆ.
ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ನಾಯಕತ್ವ ಮರು ನಿರ್ಮಾಣದ ಬಗ್ಗೆ 5 ಸಾವಿರ ಪದಗಳ ಲೇಖನ ಪ್ರಕಟಿಸಿದ ದಿನವೇ ಇರಾನ್-ಇಸ್ರೇಲ್ ಕದನವೂ ಶುರುವಾಗಿದೆ.
ಆ್ಯಂಟನಿ ಬ್ಲಿಂಕನ್ ಶಾಂತಿಯ ಪ್ರತಿಪಾದಕನಿರಬೇಕು ಎನ್ನುವಂತೆ ಆ ಬರಹವಿದ್ದರೂ, ಇದೇ ಅಮೆರಿಕ ಗಾಝಾ ಮೇಲೆ ಕದನಕ್ಕಾಗಿ ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿತ್ತು. ಆರ್ಥಿಕವಾಗಿಯೂ ನೆರವಾಗಿತ್ತು.
2023ರ ಅಕ್ಟೋಬರ್ ನಂತರ ಕೂಡ ಬೈಡನ್ ಸರಕಾರ ಇಸ್ರೇಲ್‌ಗೆ ಮಿಲಿಟರಿ ನೆರವು ನೀಡಿತ್ತು. ಎರಡು ಬಾರಿ ಹೀಗೆ ಮಿಲಿಟರಿ ನೆರವು ರವಾನಿಸುವ ವೆಚ್ಚವೇ 250 ಮಿಲಿಯನ್ ಡಾಲರ್. ಮೊನ್ನೆಯಷ್ಟೇ ಅಮೆರಿಕ ಮತ್ತೆ ಇಸ್ರೇಲ್‌ಗೆ 8.7 ಬಿಲಿಯನ್ ಡಾಲರ್ ಒದಗಿಸಿದೆ.
ಆದರೆ ಅಮೆರಿಕದ ವಿದೇಶಾಂಗ ಸಚಿವರು ಗಾಝಾ ಸ್ಥಿತಿಯ ಬಗ್ಗೆ, ಅಲ್ಲಿ ಹಸಿವಿನಿಂದ ಸಾಯುತ್ತಿರುವವರ ಬಗ್ಗೆ ಮರುಗಿ ಲೇಖನ ಬರೆಯುತ್ತಾರೆ.
2023ರ ಅಕ್ಟೋಬರ್‌ನಿಂದ 2024ರ ಮೇ ವರೆಗೆ ಅಮೆರಿಕವು ಇಸ್ರೇಲ್‌ಗೆ ಮಾಡಿದ ಆರ್ಥಿಕ ಸಹಾಯವೇ ಒಂದು ಲಕ್ಷ ಕೋಟಿ ರೂ.ಗೂ ಹೆಚ್ಚಿದೆ.
ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಸುವುದೂ ಅದೇ ದೇಶ, ಗಾಝಾ ಸ್ಥಿತಿಯ ಬಗ್ಗೆ ಮರುಗುವುದೂ ಅದೇ ದೇಶ. ಇದಕ್ಕಿಂತ ದೊಡ್ಡ ಸೋಗಲಾಡಿತನ ಇದೆಯೇ?
ಭಾರತದಲ್ಲಿನ ಬಲಪಂಥೀಯ ಸೋಷಿಯಲ್ ಮೀಡಿಯಾ ಮಂದಿಯಂತೂ ಇಸ್ರೇಲ್ ಸಮರ್ಥನೆಯಲ್ಲಿಯೇ ತೊಡಗಿದ್ದಾರೆಯೇ ಹೊರತು ಅದರ ಹಿಕಮತ್ತುಗಳ ಬಗ್ಗೆ ಯೋಚಿಸಲಾರರು.
ಸೌದಿ ಅರೇಬಿಯ ಹಸನ್ ನಸ್ರಲ್ಲಾ ಹತ್ಯೆ ಬಳಿಕ ನೀಡಿದ್ದ ಹೇಳಿಕೆಯಲ್ಲಿ, ಲೆಬನಾನ್ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿತ್ತು. ಲೆಬನಾನ್‌ನ ಸಾರ್ವಭೌಮತ್ವಕ್ಕೆ ಧಕ್ಕೆಯಾಗಬಾರದು ಎಂದಿತ್ತು. ಆದರೆ ಎಲ್ಲೂ ಹಸನ್ ನಸ್ರಲ್ಲಾ ಹೆಸರಿನ ಉಲೇಖವಿರಲಿಲ್ಲ.
ಇರಾನ್, ಇಸ್ರೇಲ್, ಲೆಬನಾನ್, ಸಿರಿಯಾ, ಯೆಮನ್, ಜೋರ್ಡಾನ್, ಈಜಿಪ್ಟ್ , ಸೌದಿ ಅರೇಬಿಯ, ಯುನೈಟೆಡ್ ಅರಬ್ ಎಮಿರೇಟ್ಸ್ , ಖತರ್, ಬಹರೈನ್ ಈ ಎಲ್ಲ ದೇಶಗಳಲ್ಲಿ ಕೆಲವಂತೂ ಹಸನ್ ನಸ್ರಲ್ ಹತ್ಯೆ ಬಗ್ಗೆ ಏನನ್ನೂ ಹೇಳಿಲ್ಲ.
ಗಾಝಾ ಮೇಲೆ ದಾಳಿ ಮಾಡಿದ ಇಸ್ರೇಲ್ ಅನ್ನು ಟೀಕಿಸುವವರೇ ಆನಂತರ ಅದರ ನೆರವಿಗೂ ನಿಲ್ಲುವುದು ದೊಡ್ಡ ವಿಪರ್ಯಾಸ.
ಬ್ರಿಟನ್ ಸಂಸದ, ಲೇಬರ್ ಪಾರ್ಟಿಯ ಮಾಜಿ ಅಧ್ಯಕ್ಷ ಜೆರೆಮಿ ಕಾರ್ಬಿನ್, ‘‘ಕಳೆದೊಂದು ವರ್ಷದಲ್ಲಿ ಜಗತ್ತಿನೆಲ್ಲೆಡೆ ಲಕ್ಷಾಂತರ ಜನರು ಪ್ರತಿಭಟನೆ ಮಾಡಿದರು. ಯುದ್ಧ ನಿಲ್ಲಬೇಕು ಎಂಬ ನಮ್ಮ ಒತ್ತಾಯ ಯಾರಿಗೂ ಕೇಳಲಿಲ್ಲ’’ ಎನ್ನುತ್ತಾರೆ.
ಬ್ರಿಟನ್‌ನ ಲೇಬರ್ ಪಾರ್ಟಿಯ ಹೊಸ ಸರಕಾರ ಇಸ್ರೇಲ್ ಅನ್ನು ಸಮರ್ಥಿಸಿಕೊಂಡೇ ಹೇಳಿಕೆ ನೀಡಿದೆ.
ಭಾರತದಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಗಾಝಾ ಕುರಿತು ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡುತ್ತಾರೆ.
‘‘ನೆತನ್ಯಾಹು ಇದನ್ನು ಬರ್ಬರತೆ ಮತ್ತು ಸಭ್ಯತೆ ನಡುವಿನ ಕದನವಾಗಿದೆ ಎನ್ನುತ್ತಾರೆ. ನೆತನ್ಯಾಹು ಹೇಳುವುದು ಸರಿ. ಆದರೆ ಬರ್ಬರತೆಯನ್ನು ಅವರೇ ಮಾಡುತ್ತಿದ್ದಾರೆ. ಅವರ ಸರಕಾರವೇ ಮಾಡುತ್ತಿದೆ, ಅದನ್ನು ಪಶ್ಚಿಮದ ಸರಕಾರ ಸಮರ್ಥಿಸುತ್ತಿದೆ, ಇದನ್ನು ನೋಡಲು ನಾಚಿಕೆಯಾಗುತ್ತದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಈಗ ಇರಾನ್ ಮತ್ತು ಇಸ್ರೇಲ್ ಮುಖಾಮುಖಿಯಾದರೆ ಮಹಾಯದ್ಧವನ್ನು ತಡೆಯುವುದೇ ಅಸಾಧ್ಯವಾಗಬಹುದು.
ಅಮೆರಿಕ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್, ಅಮೆರಿಕದ ಈ ನಡೆಯ ಹಿಂದೆ ಇಸ್ರೇಲ್‌ನ ಪ್ರಭಾವವಿದೆ ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ. ಅಲ್ಲಿ ಫೆಲೆಸ್ತೀನ್ ಹಕ್ಕುಗಳ ಬಗ್ಗೆ ಯಾರೂ ಮಾತಾಡುವುದಿಲ್ಲ.
ಈಗ ಇರಾನ್ ದಾಳಿ ಬಳಿಕ, ಇಸ್ರೇಲ್ ಪ್ರತಿದಾಳಿಯ ಬಳಿಕ ವಿಶ್ವದಲ್ಲಿ ದೊಡ್ಡ ಯುದ್ಧ ಆದೀತೆಂಬ ಆತಂಕದ ಕಾರ್ಮೋಡ ಕವಿದಿದೆ.
ಈ ಎರಡು ದೇಶಗಳು ಎದುರು ಬದುರಾದರೆ ವಿಶ್ವಯುದ್ಧ ತಡೆಯುವುದು ಸಾಧ್ಯವಾಗಲಾರದು.
1945 ಸೆಪ್ಟಂಬರ್‌ನಲ್ಲಿ ಎರಡನೇ ಮಹಾಯುದ್ಧ ಮುಗಿದ ಬಳಿಕ ಮೂರನೇ ಮಹಾಯುದ್ಧದ ಆತಂಕ ಸಾವಿರಾರು ಬಾರಿ ತಲೆದೋರಿರಬಹುದು.
2022ರಲ್ಲಿ ರಶ್ಯ ಉಕ್ರೇನ್ ಮೇಲೆ ದಾಳಿ ಮಾಡಿದಾಗಲೂ ಮೂರನೇ ಮಹಾಯುದ್ಧ ಆಗಬಹುದು ಎನ್ನಲಾಗಿತ್ತು.
ಉಕ್ರೇನ್‌ಗೆ ಹಲವು ದೇಶಗಳು ನೆರವಾದವು. ಆರ್ಥಿಕ ನೆರವು, ಶಸ್ತ್ರಾಸ್ತ್ರ ಎಲ್ಲವನ್ನೂ ಒದಗಿಸಿದವು.
ಫೆಲೆಸ್ತೀನ್ ಪರ ಇದ್ದ ದೇಶಗಳಲ್ಲಿ ಹೆಚ್ಚಿನವು ಒಂದೊಂದಾಗಿ ಇಸ್ರೇಲ್ ಜೊತೆ ಸೇರಿಕೊಂಡವು.
ಇಲ್ಲಿ ಇಸ್ರೇಲ್‌ನ ಉದ್ದೇಶವೇನು ಎನ್ನುವುದೇ ಮುಖ್ಯ ಪ್ರಶ್ನೆ.
ಅರಬ್ ದೇಶಗಳ ನಡುವಿನ ಸಾಮರಸ್ಯವನ್ನು ಪೂರ್ತಿ ಹಾಳು ಮಾಡುವುದು ಇಸ್ರೇಲ್‌ಗೆ ಬೇಕಾಗಿದೆ.
ಅರಬ್ ದೇಶಗಳಿಗೆ ಫೆಲೆಸ್ತೀನ್ ದೊಡ್ಡ ವಿಷಯವಾಗಿಲ್ಲ.
ಅಮೆರಿಕ ವಿರುದ್ಧ ನಿಂತು ಇಸ್ರೇಲ್ ವಿರುದ್ಧ ಅವು ಹೋರಾಡುತ್ತವೆ ಎಂದು ನಿರೀಕ್ಷಿಸುವುದೇ ತಪ್ಪಾಗುತ್ತದೆ. ಇರಾನ್‌ನ ಸುಪ್ರೀಂ ಲೀಡರ್‌ಗೆ ಅರಬ್ ರಾಷ್ಟ್ರಗಳ ಮೇಲೆ ಭರವಸೆ ಇಲ್ಲವಾಗಿದೆ. ಯಾಕೆ ಭರವಸೆಯಿಲ್ಲ ಎಂಬುದನ್ನು ಅವರು ಹೇಳಿದ್ದಾರೆ.
ದೊಡ್ಡ ಯುದ್ಧವಾಗಿಬಿಟ್ಟರೆ ಎಲ್ಲರೂ ಅಮೆರಿಕದ ಹಿಂದೆ ಹೋಗಬೇಕಾಗಿ ಬರಬಹುದು.
ಫೆಲೆಸ್ತೀನ್ ಆಂತರಿಕ ಶಕ್ತಿಯನ್ನೂ ಹಾಳುಮಾಡಲಾಗಿದೆ, ಫೆಲೆಸ್ತೀನ್ ಸರಕಾರವನ್ನು ದುರ್ಬಲಗೊಳಿಸುವ ಯತ್ನ ನಡೆದೇ ಇದೆ. ಅದರ ಬಗ್ಗೆ ಮಾತಾಡುವ ಮಧ್ಯಪ್ರಾಚ್ಯ ದೇಶವೆಂದರೆ ಅದು ಇರಾನ್ ಮಾತ್ರ.
ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದಾಗ ತನ್ನ ದೊಡ್ಡ ಬಲದಿಂದ ಇಸ್ರೇಲ್ ಅದನ್ನು ಎದುರಿಸಿತು. ಕೊನೆಗೆ ಹಮಾಸ್ ಅನ್ನು ಪೂರ್ತಿ ಮುಗಿಸುವ ಹೆಸರಲ್ಲಿ ಗಾಝಾವನ್ನು ಸರ್ವನಾಶ ಮಾಡಿ ಹಾಕಿತು.
ಲೆಬನಾನ್‌ನಲ್ಲಿ ಫೆಲೆಸ್ತೀನ್ ಅನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಇದ್ದ ಪ್ರಬಲ ಗುಂಪು ಹಿಜ್ಬುಲ್ಲಾ. ಅದರ ಮುಖ್ಯಸ್ಥರನ್ನೇ ಇಸ್ರೇಲ್ ಈಗ ಕೊಂದಿದೆ.
ಇರಾನ್ ತನ್ನ ಸ್ವಂತ ಬಲದ ಮೇಲೆ ಇಸ್ರೇಲ್ ಅನ್ನು, ಅಮೆರಿಕವನ್ನು ಎದುರಿಸಬಲ್ಲುದೆ?
ಇರಾನ್ ಅನ್ನು ಹೇಗಾದರೂ ಕದನಕ್ಕೆ ಇಳಿಸಬೇಕೆಂದೇ ನೆತನ್ಯಾಹು ಕಾದಿದ್ದುದು ನಿಜ. ಇರಾನ್ ತಾಳ್ಮೆಯ ಕಟ್ಟೆ ಈಗ ಒಡೆದಂತೆ ಕಾಣುತ್ತಿದೆ.ಹಾಗೆಯೇ ಹಿಜ್ಬುಲ್ಲಾ ಕೂಡ ತಾಳ್ಮೆ ಕಳೆದುಕೊಂಡೇ ದಾಳಿ ನಡೆಸಿತು.ವರ್ಷದಿಂದ ಯುದ್ಧ ಮಾಡಿಕೊಂಡೇ ಬಂದಿರುವ ಇಸ್ರೇಲ್ ಎದುರು ಈಗಿನ್ನೂ ಶುರು ಮಾಡಿರುವ ಇರಾನ್ ಸಮರ್ಥವಾಗಿ ಎದುರಿಸಬಲ್ಲದೇ? ಆದರೆ ಕ್ಷಿಪಣಿ ದಾಳಿ ಮೂಲಕ ಇರಾನ್ ತನ್ನ ಜನರಲ್ಲಿ ಹೊಸ ಭರವಸೆಯನ್ನಂತೂ ಮೂಡಿಸಿದೆ.
ಅಮೆರಿಕ ಇಸ್ರೇಲ್ ಪರ ನಿಂತು, ಇರಾನ್‌ಗೇ ಬುದ್ಧಿ ಹೇಳತೊಡಗಿದೆ.
ಇರಾನ್ ಅನ್ನು ಬಿಡುವ ಮಾತೇ ಇಲ್ಲ ಎಂದು ಮತ್ತೆ ಮತ್ತೆ ಹೇಳಲಾಗುತ್ತಿದೆ.
ನೆತನ್ಯಾಹು ಮುಂದೆ ಇಡೀ ಜಗತ್ತು ಮಣಿಯುವಂತೆ ಕಾಣುತ್ತದೆ.
ಟರ್ಕಿ ಮಾತ್ರ ಲೆಬನಾನ್ ಅನ್ನು ಸಮರ್ಥಿಸಿಕೊಂಡಿದೆ.
ಜರ್ಮನಿ ತನ್ನ ನಾಗರಿಕರಿಗೆ ಇರಾನ್ ತ್ಯಜಿಸಲು ಕೇಳಿಕೊಂಡಿದೆ.
ಇರಾನ್-ಇಸ್ರೇಲ್ ಮಧ್ಯೆ ಯುದ್ಧ ನಡೆದರೆ, 70 ಸಾವಿರ ಟನ್‌ಗೂ ಅಧಿಕ ತೂಕದ ಬಾಂಬ್‌ಗಳನ್ನು ಹಾಕಿದರೆ ಗತಿಯೇನಾಗಬೇಕು?
ಇಸ್ರೇಲ್‌ಗೆ ಕರುಣೆಯಿಲ್ಲ ಎಂಬುದು ಒಂದು ಕಡೆಯಾದರೆ, ಅಮೆರಿಕ ಕೂಡ ಸೇರಿಕೊಂಡುಬಿಟ್ಟಿರುವ ಈ ಸಂಘರ್ಷ ಎಲ್ಲಿಗೆ ಮುಟ್ಟೀತು?