ಇಸ್ಲಾಮೋಫೋಬಿಯಾ ಮತ್ತು ಚುನಾವಣಾ ಕಥನಗಳು
ಗಾಂಧಿ ಮತ್ತು ಅಂಬೇಡ್ಕರ್ ಜೀವಂತವಿರುತ್ತಿದ್ದರೆ ಇದನ್ನು ವಿರೋಧಿಸಿ ಹೋರಾಟಗಳನ್ನು ಮಾಡುತ್ತಿದ್ದರೋ ಎನೊ?. ದುರಂತವೆಂದರೆ ಅಂಬೇಡ್ಕರ್‌ರನ್ನು ಇಸ್ಲಾಮೋಫೋಬಿಯಾ ಕಥನಗಳಲ್ಲಿ ಸಕ್ರಮೀಕರಣಗೊಳಿಸಲಾಗಿದೆ. ಗಾಂಧಿಯನ್ನು ಭಾರತದ ‘ತುಷ್ಟೀಕರಣ’ಕ್ಕೆ ದೂಷಿಸಲಾಗುತ್ತಿದೆ, ಇಂದಿನ ದುಸ್ಥಿತಿಗೆ ಹೊಣೆಗಾರರನ್ನಾಗಿಸಲಾಗುತ್ತಿದೆ
ಭಾಗ- 2
1990ರ ದಶಕದ ವಸಾಹತೋತ್ತರ ಕಾಲಾವಧಿಯಲ್ಲಿ ಇಸ್ಲಾಮೋಫೋಬಿಯಾ ತೀವ್ರವಾಗಿ ಒಂದು ಪ್ರಬಲ ತಾತ್ವಿಕವಾಗಿ, ನಂಬಿಕೆಯಾಗಿ, ಭಾರತವನ್ನು ಒಳಗೊಂಡಂತೆ ವಿಶ್ವವ್ಯಾಪಿಯಾಗಿ ಪಸರಿಸಿತ್ತು.ರಾಜಕೀಯ ಶಾಸ್ತ್ರಜ್ಞ ಮತ್ತು ಅಮೆರಿಕದ ಬಹುದೊಡ್ಟ ಚಿಂತಕ ಸ್ಯಾಮುವೆಲ್‌ಹಂಟಿಂಗ್‌ಟನ್‌ನ ಪುಸ್ತಕ, ‘ಕ್ಲಾಷ್ ಆಫ್ ಸಿವಿಲೈಜೇಶನ್’(ನಾಗರಿಕತೆಗಳ ಸಂಘರ್ಷ) ತಾತ್ವಿಕತೆಯ ಬುನಾದಿಯನ್ನು ಹಾಕಿದರೆ, ಜಾಗತಿಕ ವ್ಯಾಪಾರ ಸಂಸ್ಥೆಯ ಮೇಲಿನ ವಿಮಾನ ದಾಳಿ, ತಾಲಿಬಾನ್ ಮತ್ತು ಐಸಿಸ್‌ನಂತಹ ಜಾಗತಿಕ ಭಯೋತ್ಪಾದಕ ಗುಂಪುಗಳ ಬೆಳವಣಿಗೆ, ಇಸ್ಲಾಮೋಫೋಬಿಯಾವನ್ನು ತೀವ್ರಗೊಳಿಸಿತ್ತು. ಇದರ ಮುಂದುವರಿಕೆಯ ಭಾಗವಾಗಿ ಅಫ್ಘಾನಿಸ್ತಾನ್, ಲಿಬಿಯಾ, ಇರಾಕ್ ಮೇಲೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ದಾಳಿ ನಡೆಸಿದವು. ಹಂಟಿಂಗ್‌ಟನ್‌ನ ಗ್ರಂಥ ಈ ಸಂದರ್ಭದಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಸೋವಿಯತ್‌ಯೂನಿಯನ್ ಛಿದ್ರಗೊಂಡ ನಂತರ ಅಮೆರಿಕಕ್ಕೆ ಒಬ್ಬ ಶಾಶ್ವತ ವೈರಿ ಬೇಕಾಗಿತ್ತು, ಕಾರಣ ಸ್ಪಷ್ಟ: ವೈರಿಗಳಿದ್ದರೆ ಮಾತ್ರ ಅದರ ಮಿಲಿಟರಿ- ಕೈಗಾರಿಕೆಗೆ ಬೇಡಿಕೆ ಬರುತ್ತಿತ್ತು, ಅಮೆರಿಕಕ್ಕೆ ಆದಾಯವೂ ಬರುತ್ತಿತ್ತು, ಅದರ ಆರ್ಥಿಕತೆಯೂ ಸ್ಥಿರಗೊಳ್ಳುತ್ತಿತ್ತು. ಹಂಟಿಂಗ್‌ಟನ್ ಒಂದು ಹೊಸ ಸಿದ್ಧಾಂತವನ್ನು ಮುಂದಿಡುತ್ತಾನೆ. ಅವನ ಪ್ರಕಾರ ಅಂದಿನ ಸಂದರ್ಭದಲ್ಲಿ ಏಳು ನಾಗರಿಕತೆಗಳು ಒಂದಕ್ಕೊಂದು ಸಂಘರ್ಷದ ರೂಪದಲ್ಲಿ ಮುಖಾಮುಖಿಯಾಗಿರುತ್ತವೆ. ಈ ನಾಗರಿಕತೆಗಳಲ್ಲಿ ಇಸ್ಲಾಮಿಕ್ ನಾಗರಿಕತೆ ಒಂದೆಡೆಯಾದರೆ ಆಂಗ್ಲೋ-ಸಾಕ್ಸನ್ ನಾಗರಿಕತೆ ಮತ್ತೊಂದೆಡೆ. ಅವುಗಳು ತೀವ್ರವಾದ ಘರ್ಷಣೆಯಲ್ಲಿ ತೊಡಗಿಕೊಂಡಿರುತ್ತದೆ. ಇಲ್ಲಿ ಇಸ್ಲಾಮಿಕ್ ನಾಗರಿಕತೆಯನ್ನು ವಿಭಿನ್ನತೆಗಳ ಸ್ತರಗಳಲ್ಲಿ ವಿಶ್ಲೇಷಿಸದೆ, ಏಕರೂಪಿಯಾಗಿ ನೋಡುತ್ತಾನೆ. ಇಸ್ಲಾಮಿಕ್ ನಾಗರಿಕತೆಯನ್ನು ಪಾಶ್ಚಾತ್ಯ ನಾಗರಿಕತೆಯ ಪ್ರಥಮ ಮತ್ತು ಶಾಶ್ವತ ವೈರಿಯೆಂದು ಚಿತ್ರಿಸುತ್ತಾನೆ. ಇದು ಇಸ್ಲಾಮಿಕ್ ಜಗತ್ತು ಭಯೋತ್ವಾದಕರನ್ನು ಹುಟ್ಟು ಹಾಕುವ, ಪೋಷಿಸುವ ಮತ್ತು ವಿಸ್ತರಿಸುವ ಜಗತ್ತು ಎಂದೆಲ್ಲಾ ಚಿತ್ರಿಸಲು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಅನುವು ಮಾಡಿಕೊಟ್ಟಿತ್ತು.
1990ರ ದಶಕದಲ್ಲಿ ವೇಗವಾಗಿ ಹುಟ್ಟಿಕೊಂಡ ಇಸ್ಲಾಮೋಫೋಬಿಯಾ ಯುದ್ಧದಲ್ಲಿ ಮಾತ್ರ ಕೊನೆಗೊಳ್ಳಲಿಲ್ಲ. ಅದು ಬೇರೆ ಬೇರೆ ದೇಶಗಳಲ್ಲಿ ವಿವಿಧ ಆಯಾಮಗಳನ್ನು ಪಡೆಯಿತು. ಫ್ರಾನ್ಸ್ ನಲ್ಲಿ ಹಿಜಾಬ್ ನಿಷೇಧದಲ್ಲೂ, ಆಸ್ಟ್ರಿಯಾದಲ್ಲಿ ಸಮುದಾಯದ ಮೇಲೆ ನಿಗಾ ಇಡಲು ಹೊಸ ಕಾನೂನು-ಇಸ್ಲಾಮಿಕ್ ಕಾನೂನು 2015-ಜಾರಿಗೊಳಿಸಲಾಯಿತು, ಅಮೆರಿಕ ಕೆಲವು ದೇಶಗಳ ವಲಸಿಗ ಪ್ರಜೆಗಳನ್ನು ನಿಷೇಧಿಸಿತ್ತು. ವಾಸ್ತವವಾಗಿ ಸರಕಾರಗಳಲ್ಲದೆ ರಾಷ್ಟ್ರೀಯ ಪಕ್ಷಗಳು ಕೂಡ ಇಸ್ಲಾಮೋಫೋಬಿಯಾವನ್ನು ತಮ್ಮ ಪ್ರಣಾಳಿಕೆಯ ಭಾಗವನ್ನಾಗಿಸಿದವು(ಆಲ್ಟರ್ನೇಟಿವ್ ಫಾರ್‌ಜರ್ಮನಿ). ಮಾತ್ರವಲ್ಲದೆ ಅದನ್ನು ಬೆಂಬಲಿಸಿದವು. ಯುರೋಪ್ ಮತ್ತು ಅಮೆರಿಕದಲ್ಲಿ ಇಸ್ಲಾಮೋಫೋಬಿಯಾ ಸಾಂಸ್ಕೃತಿಕ ವರ್ಣನೀತಿಯಾಗಿ ಪರಿವರ್ತಿತವಾಯಿತು. ಇಲ್ಲಿ ಪದೇ ಪದೇ ಮೂರು ಬಹು ಮುಖ್ಯವಾದ ವಾದಗಳನ್ನು ಮುಂದಿಡಲಾಗುತ್ತದೆ. ಮೊದಲನೆದಾಗಿ, ವಲಸೆ ಮತ್ತು ಜನಸಂಖ್ಯಾ ಸ್ಫೋಟದಿಂದಾಗಿ ಐರೋಪ್ಯ ದೇಶಗಳ ಇಸ್ಲಾಮೀಕರಣ, ಎರಡನೆಯದಾಗಿ ಮುಸಲ್ಮಾನರು ದೇಶದ ಮುಖ್ಯವಾಹಿನಿಗೆ ಸೇರದೆ, ಅನ್ಯರಾಗಿ ಜೀವಿಸುತ್ತಾರೆ. ಮೂರನೆಯದಾಗಿ, ರಾಜಕೀಯ ಇಸ್ಲಾಮ್ ಅನ್ನು ಬೆಂಬಲಿಸುವ ಮುಸಲ್ಮಾನರೆಲ್ಲರೂ ಭಯೋತ್ಪಾದಕರು. ಹಾಗಾಗಿ ಅವರ ಆಸ್ತಿ ಮತ್ತು ಪ್ರಾರ್ಥನಾ ಸ್ಥಳಗಳ ಮೇಲೆ, ಹಿಜಾಬ್ ಮತ್ತು ಬುರ್ಕಾದಾರಿಗಳ ಮೇಲೆ ಹಠಾತ್ ಆಕ್ರಮಣ ದಿನನಿತ್ಯದ ವಿಷಯಗಳಾದವು. ಜರ್ಮನಿಯಲ್ಲಿ 2017ರ ನಂತರ ಪ್ರತೀ ವರ್ಷ 700-1,000 ಇಸ್ಲಾಮೋಪೋಬಿಯಾ ಪ್ರಕರಣಗಳು, ಮುಖ್ಯವಾಗಿ ಅವಮಾನಿಸುವ, ಎತ್ತಿಕಟ್ಟುವ, ಭೀತಿಯನ್ನು ಹುಟ್ಟಿಸುವ, ಆಸ್ತಿಯನ್ನು ನಾಶಮಾಡುವ ಇತ್ಯಾದಿ ಪ್ರಕರಣಗಳು ದಾಖಲಾಗುತ್ತಿವೆ.
ಭಾರತದಲ್ಲಿ ಇಸ್ಲಾಮೋಫೋಬಿಯಾವನ್ನು ವಸಾಹತುಶಾಹಿ, ವಸಾಹತೋತ್ತರ/ಪಾಶ್ಚಾತ್ಯ ಮತ್ತು ಹಿಂದುತ್ವದ, ನಂಬಿಕೆ, ತತ್ವ ಮತ್ತು ಸಂಘರ್ಷದ ಮುಂದುವರಿಕೆಯಾಗಿ ನೋಡಿದರೂ, ಅದರ ತೀವ್ರತೆ ಆರಂಭಗೊಂಡದ್ದು 1990ರ ದಶಕದ ನಂತರ, ಅದರಲ್ಲೂ ಅಯೋಧ್ಯೆ ಘಟನೆಯ ನಂತರವೆಂದೇ ಹೇಳಬೇಕು. 1990ರ ದಶಕದ ಪೂರ್ವದಲ್ಲಿ ಅದು ತುಷ್ಟೀಕರಣ ವಾದದಲ್ಲಿ, 370ನೇ ವಿಧಿಯ ವಾದದಲ್ಲಿ, ಅಲಿಗಡ ವಿಶ್ವವಿದ್ಯಾನಿಲಯದ ವಾದದಲ್ಲಿ, ತ್ರಿವಳಿ ತಲಾಕ್ ಇತ್ಯಾದಿ ವಿಷಯದೊಳಗೆ ಅಂತರ್ಗತವಾಗಿತ್ತು. ಅಲ್ಲದೆ ಇತಿಹಾಸದ ಪುಸ್ತಕಗಳನ್ನು ಪುನರ್‌ರಚಿಸುವ ಯತ್ನದಲ್ಲೂ, ಕೋಮು ಗಲಭೆಗಳಲ್ಲೂ ಕಂಡುಬರುತ್ತದೆ. ಕಾಶ್ಮೀರ ಭಯೋತ್ಪಾದನೆ, ಮುಂಬೈ ದಾಳಿ ಮತ್ತು ಸ್ಫೋಟ, ಪಾರ್ಲಿಮೆಂಟ್ ಮೇಲಿನ ದಾಳಿ ಇತ್ಯಾದಿಗಳು ಇಸ್ಲಾಮೋಫೋಬಿಯಾವನ್ನು ಇನ್ನಷ್ಟು ತೀವ್ರಗೊಳಿಸಿತ್ತು. ಇದಕ್ಕೆ ಪೂರಕವೆಂಬಂತೆ ಇತಿಹಾಸದ ಪುನರ್‌ರಚನೆಯೊಂದಿಗೆ ಮಧ್ಯಕಾಲೀನ ದೌರ್ಜನ್ಯಗಳಿಗೆ, ಭಾರತದ ವಿಭಜನೆಗೆ, ಭಾರತದ ಅನಭಿವೃದ್ಧಿಗೆ, ಭಾರತದ ಜನಸಂಖ್ಯಾ ಸ್ಫೋಟಕ್ಕೆ ಅಲ್ಪಸಂಖ್ಯಾತರನ್ನು ಉತ್ತರದಾಯಿಯನ್ನಾಗಿಸಲಾಯಿತು. ಇದು ಭಾರತದ ವಿವಿಧೆಡೆ ಪೂರ್ವಾಗ್ರಹವಾಗಿ, ಪ್ರಾಕಲ್ಪನೆಯಾಗಿ, ಆಳವಾದ ನಂಬಿಕೆಯಾಗಿ ಮತ್ತು ತತ್ವವಾಗಿ ಹರಡಿದರೆ ಕರ್ನಾಟಕ ಇದಕ್ಕಿಂತ ವಿಭಿನ್ನವಾಗಿತ್ತು. ಇಲ್ಲಿ ಹಿಜಾಬ್, ಹಲಾಲ್, ಅಝಾನ್ ಇತ್ಯಾದಿ ವಿಷಯಗಳು ತೀವ್ರತರವಾದ ಇಸ್ಲಾಮೋಫೋಬಿಯವನ್ನು ದಿನನಿತ್ಯದ ವಿಷಯವಾದರೂ ಒಂದು ತತ್ವವಾಗಿ ಪರಿವರ್ತಿತವಾಗಲಿಲ್ಲ. ಇವುಗಳ ನಡುವೆ ಕನ್ನಡದಲ್ಲೂ ಒಂದೆರಡು ಪುಸ್ತಕಗಳು ಇಸ್ಲಾಮೋಫೋಬಿಯಾದ ಮುಂದುವರಿಕೆಯಾಗಿ ಬಂದರೂ ಅವುಗಳು ಕರ್ನಾಟಕದ ಸಾಂಸ್ಕೃತಿಕ, ಸೌಹಾರ್ದ, ಜಾತ್ಯತೀತ ಪರಂಪರೆಯನ್ನು ಹಾನಿ ಮಾಡಲಿಲ್ಲ. ಅದರಲ್ಲಿ ಸಾಹಿತಿ ಎಸ್. ಎಲ್ ಭೈರಪ್ಪರ ಕಾದಂಬರಿ ‘ಆವರಣ’ವೂ(2007) ಒಂದು. ಅದು ಪ್ರವಾದಿಯವರ ಪತ್ನಿಯವರನ್ನು ಅತ್ಯಂತ ಕೆಟ್ಟದಾಗಿ, ವೇಶ್ಯೆಯರಂತೆ ಚಿತ್ರಿಸಿದರೂ, ಯಾವುದೇ ಅಹಿತಕರ ಘಟನೆಗೆ ದಾರಿಮಾಡಿಕೊಡಲಿಲ್ಲ. ಅಡ್ಡಂಡ ಕಾರ್ಯಪ್ಪರ ಇತ್ತೀಚಿನ ನಾಟಕ, ‘ಟಿಪ್ಪುವಿನ ನಿಜ ಕನಸುಗಳು’ -ಕೋಮು ಧ್ರುವೀಕರಣಕ್ಕೆ ಮತ್ತು ಸಂಘರ್ಷಕ್ಕೆ ಅವಕಾಶ ಮಾಡಿಕೊಡಲಿಲ್ಲ, ಹೊರತು ಸೋತಿತ್ತು. ಹಾಗೆ ನೋಡುವುದಾದರೆ ವಸಾಹತು ಶಾಹಿ ಇತಿಹಾಸಕಾರರಿಗೆ ಟಿಪ್ಪುವಿನ ಬಗ್ಗೆ ಅಸಹನೀಯತೆ ಇತ್ತು. ಅಷ್ಟೇ ಅಸಹನೀಯತೆ ಧರ್ಮದ ಕುರಿತು ಕೂಡ ಇತ್ತು.
ಇವುಗಳ ಚೌಕಟ್ಟಿನೊಳಗೆ ಚುನಾವಣಾ ಭಾಷಣಗಳನ್ನು, ಕಥನಗಳನ್ನು ನೋಡಬೇಕು. ಅದನ್ನು ಒಟ್ಟಾರೆಯಾಗಿ ವಸಾಹತುಶಾಹಿ, ವಸಾಹತೋತ್ತರ/ಪಾಶ್ಚಾತ್ಯ ಮತ್ತು ದೇಸಿಯ/ಹಿಂದುತ್ವದ ಇಸ್ಲಾಮೋಫೋಬಿಯಗಳ ಮುಂದುವರಿಕೆಯ ಭಾಗವಾಗಿ ನೋಡಬೇಕು-ಅವುಗಳಲ್ಲಿ ಕೆಲವು ವಾದಗಳು ಭಾರತದ ಸಂದರ್ಭದಲ್ಲಿ ವಿಭಿನ್ನ ಮತ್ತು ವಿಶಿಷ್ಟವಾದರೂ, ಅದರಲ್ಲೂ ಗಲಭೆಕೋರರನ್ನು ಅವರ ಬಟ್ಟೆಯಿಂದ ಗುರುತಿಸಬಹುದು, ಸಂಪತ್ತಿನ ಮೊದಲ ಹಕ್ಕುದಾರರು, ಅಯೋಧ್ಯೆಗೆ ಬಾಬರಿ ಬೀಗ, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಧರ್ಮದ ಆಧಾರದಲ್ಲಿ ಹಂಚಿಕೆ, ನುಸುಳುಕೋರರು, ‘ಮುಲ್ಲಾಗಳು’, ‘ಮುಜ್ರಾಗಳು’, ‘ಲವ್ ಜಿಹಾದ್, ಲ್ಯಾಂಡ್‌ಜಿಹಾದ್’ ಇತ್ಯಾದಿ, ಅವು ಅಂತಿಮವಾಗಿ ಇಸ್ಲಾಮೋಫೋಬಿಯಾವನ್ನು ಪ್ರತಿನಿಧಿಸುತ್ತದೆ. ಈ ಹಿಂದೆ ಕೂಡ ಇದೇ ರೀತಿಯ ಶಬ್ದಗಳನ್ನು ಪ್ರಯೋಗಿಸಲಾಗಿತ್ತು-ಬಟ್ಟೆಗಳ ಮೂಲಕ ಗಲಭೆಕೋರರನ್ನು ಗುರುತಿಸಬಹುದು, ಖಬರಸ್ತಾನ್-ಸ್ಮಶಾನ್ ಇತ್ಯಾದಿಗಳು. ಕೋವಿಡ್ ಸಂದರ್ಭದಲ್ಲಿ ಕೋವಿಡ್ ಹರಡುವವರು ಎಂದೆಲ್ಲಾ ಸಾರ್ವಜನಿಕ ಪೂರ್ವಾಗ್ರಹಕ್ಕೆ ಬಲಿಪಶುವಾಗಬೇಕಾಯಿತು.ವಾಸ್ತವವಾಗಿ ಈ ಸಲದ ಚುನಾವಣೆಯಲ್ಲಿ ಇಂತಹ ಶಬ್ದಗಳ ಬಳಕೆ ಭಾರತ ಸಾಗುತ್ತಿರುವ ದಾರಿಯನ್ನು ಸೂಚಿಸುತ್ತದೆ. ಗಾಂಧಿ ಮತ್ತು ಅಂಬೇಡ್ಕರ್ ಜೀವಂತವಿರುತ್ತಿದ್ದರೆ ಇದನ್ನು ವಿರೋಧಿಸಿ ಹೋರಾಟಗಳನ್ನು ಮಾಡುತ್ತಿದ್ದರೋ ಎನೊ?. ದುರಂತವೆಂದರೆ ಅಂಬೇಡ್ಕರ್‌ರನ್ನು ಇಸ್ಲಾಮೋಫೋಬಿಯಾ ಕಥನಗಳಲ್ಲಿ ಸಕ್ರಮೀಕರಣಗೊಳಿಸಲಾಗಿದೆ. ಗಾಂಧಿಯನ್ನು ಭಾರತದ ‘ತುಷ್ಟೀಕರಣ’ಕ್ಕೆ ದೂಷಿಸಲಾಗುತ್ತಿದೆ, ಇಂದಿನ ದುಸ್ಥಿತಿಗೆ ಹೊಣೆಗಾರರನ್ನಾಗಿಸಲಾಗುತ್ತಿದೆ