ಕಚ್ಚತೀವು ಒಂದು ಅವಲೋಕನ
ಎರಡು ರಾಷ್ಟ್ರಗಳು UNCLOS (ಯುಎನ್ ಕನ್ವೆನ್ಷನ್ ಆನ್ ದಿ ಲಾ ಆಫ್ ದಿ ಸೀ) ಅಡಿಯಲ್ಲಿ 70ರ ಒಪ್ಪಂದಗಳನ್ನು ಮಾಡಿಕೊಂಡಿದ್ದು ಏಕಪಕ್ಷೀಯವಾಗಿ ಯಾವುದೇ ರಾಷ್ಟ್ರವು ಒಪ್ಪಂದದಿಂದ ಹಿಂದೆಸರಿಯಲು ಸಾಧ್ಯವಿಲ್ಲ. ಅಂತರ್ರಾಷ್ಟ್ರೀಯ ಕಾನೂನಿನಡಿಯಲ್ಲಿ ಇಂತಹ ನಿರ್ಧಾರಗಳನ್ನು ಅಪರಾಧವೆಂದು ಘೋಷಿಸಲಾಗಿದೆ. ಭವಿಷ್ಯದಲ್ಲಿ ಶ್ರೀಲಂಕಾವು ಸಹ ಕಚ್ಚತೀವುವನ್ನು ಹಿಂದಿರುಗಿಸುವ ಸಾಧ್ಯತೆಗಳಿಲ್ಲ. ಇಂತಹ ಸಂದರ್ಭದಲ್ಲಿ ಶ್ರೀಲಂಕಾದ ಮೇಲೆ ಹೆಚ್ಚಿನ ಒತ್ತಡ ಹೇರುವುದರಿಂದ ನೆರೆರಾಷ್ಟ್ರದ ಬಾಂಧವ್ಯಕ್ಕೆ ಧಕ್ಕೆ ಬರಬಹುದು.
ಇತ್ತೀಚೆಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವಸತಿಯಿಲ್ಲದ 285 ಎಕರೆ ವಿಸ್ತೀರ್ಣದ ದ್ವೀಪವಾದ ಕಚ್ಚತೀವು ವಿವಾದವನ್ನು ಮುನ್ನೆಲೆಗೆ ತಂದಿದ್ದಾರೆ. ಈ ದ್ವೀಪವು ಸೈಂಟ್ ಆಂಥೋನಿ ಚರ್ಚ್ ಅನ್ನು ಉತ್ತರದಲ್ಲಿ ಹೊಂದಿದ್ದು, ಮಾರ್ಚ್ನಲ್ಲಿ ವಾರ್ಷಿಕ ನಾಲ್ಕು ದಿನಗಳ ಕಾಲ ಕ್ರಿಶ್ಚಿಯನ್ ಹಬ್ಬಕ್ಕಾಗಿ ಭಾರತ ಮತ್ತು ಶ್ರೀಲಂಕಾ ಎರಡೂ ರಾಷ್ಟ್ರದಿಂದ ಬರುವ ಯಾತ್ರಿಕರನ್ನು ಆಕರ್ಷಿಸುತ್ತದೆ.
ಕಚ್ಚತೀವು ದ್ವೀಪವು ಜ್ವಾಲಾಮುಖಿಯಿಂದ ಉತ್ಪತ್ತಿಯಾಗಿದ್ದು, ಆರಂಭಿಕ ಮಧ್ಯಕಾಲೀನ ಅವಧಿಯಲ್ಲಿ, ದ್ವೀಪವು ಶ್ರೀಲಂಕಾದ ಜಾಫ್ನಾ ಸಾಮ್ರಾಜ್ಯದಿಂದ ನಿಯಂತ್ರಿಸಲ್ಪಟ್ಟಿತು. ನಂತರ ಪೋರ್ಚುಗೀಸ್ ಮತ್ತು ಡಚ್ಚರ ಆಳ್ವಿಕೆಗೆ ಒಳಪಟ್ಟಿತ್ತು. ಅಂತಿಮವಾಗಿ ಭಾರತದ ರಾಮನಾಡ್ ಸಾಮ್ರಾಜ್ಯದ ರಾಮನಾಥಪುರದ ಆಳ್ವಿಕೆಗೆ ಒಳಪಟ್ಟಿತು. ಬ್ರಿಟಿಷ್ ಆಳ್ವಿಕೆಯಲ್ಲಿದ್ದಾಗ, ಇದು ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿ ಆಡಳಿತ ನಡೆಸಿತು. 1921ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಭಾರತ ಮತ್ತು ಶ್ರೀಲಂಕಾವು ಪಾಲ್ಕ್ ಜಲಸಂಧಿ ಮತ್ತು ಮನ್ನಾರ್ ಕೊಲ್ಲಿಯಲ್ಲಿ ಗಡಿ ರೇಖೆಯನ್ನು ನಿರ್ಧರಿಸುವ ಪ್ರಯತ್ನ ಮಾಡಿದವು. ಹಾಗಿದ್ದರೂ ಮದ್ರಾಸ್ ನಿಯೋಗವು, ಭಾರತದ ಒಪ್ಪಂದವು ದ್ವೀಪಕ್ಕೆ ಯಾವುದೇ ಸಂಭಾವ್ಯ ಪ್ರಾದೇಶಿಕ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಸೂಚಿಸುವ ನಿಬಂಧನೆಯನ್ನು ಹಾಕಿತು. ವಿಶೇಷವಾಗಿ, ಮಾರ್ಚ್ 8, 1923ರಂದು ಬರೆದ ಪತ್ರದಲ್ಲಿ, ಬ್ರಿಟಿಷ್ ಭಾರತ ಸರಕಾರವು ಶ್ರೀಲಂಕಾದ ಕಚ್ಚತೀವು ಹಕ್ಕಿಗೆ ತನ್ನ ಬೆಂಬಲವನ್ನು ಪುನರುಚ್ಚರಿಸಿತು. ಸ್ವಾತಂತ್ರ್ಯದ ನಂತರ, ಭಾರತ ಮತ್ತು ಶ್ರೀಲಂಕಾ ಕಚ್ಚತೀವು ಮಾಲಕತ್ವವನ್ನು ವಿವಾದವಾಗಿಸಿದವು.
ಸಾಗರ ಒಪ್ಪಂದಗಳು:
1974ರಲ್ಲಿ, ಭಾರತ ಮತ್ತು ಶ್ರೀಲಂಕಾ ಜೂನ್ 26 ರಂದು ಸಾಗರ ಒಪ್ಪಂದಕ್ಕೆ ಸಹಿ ಹಾಕಿದವು. ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ, ಒಪ್ಪಂದವು ಕಚ್ಚತೀವು ದ್ವೀಪವನ್ನು ಶ್ರೀಲಂಕಾದ ಅಧಿಕಾರವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಇರಿಸಿತು. ಒಪ್ಪಂದದ ಆರ್ಟಿಕಲ್ 5 ಭಾರತೀಯ ಮೀನುಗಾರರಿಗೆ ತಮ್ಮ ಬಲೆಗಳನ್ನು ಒಣಗಿಸುವ, ವಿಶ್ರಮಿಸುವ ಮತ್ತು ಧಾರ್ಮಿಕ ಉದ್ದೇಶಗಳಿಗಾಗಿ ಭೇಟಿ ನೀಡುವ ಹಕ್ಕುಗಳನ್ನು ನೀಡಿದೆ. ಭಾರತೀಯ ಮೀನುಗಾರರು ಈ ಒಪ್ಪಂದದ ಮೂಲಕ ಕಚ್ಚತೀವಿನಲ್ಲಿ ಮೀನು ಹಿಡಿಯುವ ಅಧಿಕಾರವನ್ನು ಕಳೆದುಕೊಂಡರು. 1976ರಲ್ಲಿ, ಭಾರತ ಮತ್ತು ಶ್ರೀಲಂಕಾಗಳು ಪ್ರಾದೇಶಿಕ ಮಿತಿಗಳು ಮತ್ತು ಮೀನುಗಾರಿಕೆ ಹಕ್ಕುಗಳನ್ನು ನಿರೂಪಿಸುವ ಗುರಿಯೊಂದಿಗೆ ಮನ್ನಾರ್ ಕೊಲ್ಲಿ ಮತ್ತು ಬಂಗಾಳ ಕೊಲ್ಲಿಯಲ್ಲಿ ಸಾಗರ ಗಡಿ ಒಪ್ಪಂದವನ್ನು ಮಾಡಿಕೊಂಡವು. ಈ ಒಪ್ಪಂದದ ಪ್ರಕಾರ ಭಾರತ ಮತ್ತು ಶ್ರೀಲಂಕಾ ಮೀನುಗಾರರು ತಮ್ಮ ದೇಶದ ಸಮುದ್ರ ಗಡಿಯಾಚೆಗಿನ ಪ್ರದೇಶದಲ್ಲಿ ಮೀನುಗಾರಿಕೆ ಮಾಡುವ ಅವಕಾಶವನ್ನು ಕಳೆದುಕೊಂಡರು. ಇದು ವಿಶೇಷವಾಗಿ ತಮಿಳುನಾಡಿನ ಮೀನುಗಾರರ ಪಾರಂಪರಿಕ ಮೀನುಗಾರಿಕಾ ಹಕ್ಕನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಂತೆ ಮಾಡಿತು.
ತಮಿಳುನಾಡಿನ ಮೀನುಗಾರರು ಕಚ್ಚತೀವು ದ್ವೀಪದ ಸುತ್ತಲೂ ಮೀನುಗಾರಿಕೆಯನ್ನು ಮುಂದುವರಿಸಿದ್ದರಿಂದ ಹಲವಾರು ಮೀನುಗಾರರು ಶ್ರೀಲಂಕಾದ ನೌಕಾಪಡೆಯವರಿಂದ ಬಂಧನಕ್ಕೆ ಒಳಗಾದರು ಹಾಗೂ ಕೆಲವೊಮ್ಮೆ ಅವರ ಅಚಾತುರ್ಯದ ಗುಂಡೇಟಿಗೆ ಹತರಾದರು. ಇದರಿಂದ ಕಚ್ಚತೀವು ವಿವಾದವು ಮತ್ತಷ್ಟು ಹೆಚ್ಚಾಯಿತು.
ಈಗ ಈ ಚರ್ಚೆ ಏಕೆ?
ಇದೇ ವರ್ಷದ ಫೆಬ್ರವರಿಯಲ್ಲಿ ತಮಿಳುನಾಡಿನ ಮೀನುಗಾರಿಕಾ ಸಂಘಟನೆಯು ಮೊದಲ ಬಾರಿಗೆ ಸೈಂಟ್ ಆಂಥೋನಿ ಉತ್ಸವವನ್ನು ಬಹಿಷ್ಕರಿಸಿ ತಮ್ಮ ಸಹದ್ಯೋಗಿ ಮಿತ್ರರ ಬಿಡುಗಡೆಗಾಗಿ ಒಂದು ವಾರದ ಪ್ರತಿಭಟನೆಯನ್ನು ಮಾಡಿದ್ದರು. ಆನಂತರ ತಮಿಳು ನಾಡಿನ ಮುಖ್ಯಮಂತ್ರಿಗಳಾದ ಸ್ಟಾಲಿನ್ ಸಂದರ್ಶನವೊಂದರಲ್ಲಿ ‘‘ಕೇಂದ್ರದ ಬಿಜೆಪಿ ಸರಕಾರವು ಕಚ್ಚತೀವು ದ್ವೀಪವನ್ನು ಮರಳಿ ಪಡೆಯುವುದು ಮತ್ತು ಮೀನುಗಾರರ ರಕ್ಷಣೆಯ ಕುರಿತು ಯಾವುದೇ ಹೆಜ್ಜೆ ಇರಿಸಿಲ್ಲ’’ ಎಂದು ಕಿಡಿಕಾರಿದರು. ಇದೇ ಸಂದರ್ಭದಲ್ಲಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಸಲ್ಲಿಸಿದ ಆರ್ಟಿಐ ಅರ್ಜಿಗೆ ಬಂದ ಉತ್ತರವು, ಡಿಎಂಕೆ ಮತ್ತು ಕಾಂಗ್ರೆಸ್ ಇಬ್ಬರೂ ಕಚ್ಚತೀವು ಹಸ್ತಾಂತರದಲ್ಲಿ ಪಾಲುಗಾರರೆಂದು ನಿರೂಪಿಸಿತು. ಇದರ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾಡಿದ ಟ್ವೀಟ್ ಕಚ್ಚತೀವಿನ ದೊಡ್ಡ ಕಿಡಿಯನ್ನೇ ಹಚ್ಚಿತು. ಪ್ರಧಾನ ಮಂತ್ರಿಯವರ ಟ್ವೀಟ್ಗೆ ಧ್ವನಿಗೂಡಿಸಿದ ವಿದೇಶಾಂಗ ಮಂತ್ರಿ ಎಸ್.ಜಯಶಂಕರ್ರವರು ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ಜಂಟಿಯಾಗಿ ಕಚ್ಚತೀವು ಮೇಲಿನ ಭಾರತೀಯ ಮೀನುಗಾರರ ಹಕ್ಕನ್ನು ಬಿಟ್ಟುಕೊಟ್ಟರು ಎಂದು ಕಟುವಾಗಿ ಟೀಕಿಸಿದರು. ಇದು ವಾದ ಪ್ರತಿವಾದಗಳಿಗೆ ನಾಂದಿಯಾಗಿದೆ.
ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಹುಟ್ಟಿಕೊಂಡ ಈ ವಿವಾದವು ರಾಜಕೀಯ ಪ್ರೇರಿತ ಚುನಾವಣಾ ತಂತ್ರವಾಗಿ ಕಂಡರೂ ಭಾರತದ ಭದ್ರತೆಯ ಆಯಾಮಗಳನ್ನು ಒಳಗೊಂಡಿದೆ. ಅನೇಕ ಮೇಧಾವಿ ಭದ್ರತಾ ವಿಶ್ಲೇಷಕರ ಪ್ರಕಾರ ಚೀನಾವು ಶ್ರೀಲಂಕಾದ ಜಾಫ್ನಾದಲ್ಲಿ ನಿರ್ಮಿಸುತ್ತಿರುವ ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು ಮುಂದೆ ಕಚ್ಚತೀವು ದ್ವೀಪಕ್ಕೂ ಬರುವ ಸಾಧ್ಯತೆಗಳಿವೆ. ಈ ವ್ಯವಸ್ಥೆಗಳಲ್ಲಿ ಚೀನಾವು ನಿಗೂಢವಾಗಿ ಭಾರತದ ಆಗು ಹೋಗುಗಳನ್ನು ತಿಳಿಯಲು ನೌಕಾ ಚಲನವಲನಗಳನ್ನು ಅರಿಯಬಲ್ಲ ಕಣ್ಗಾವಲು ಸಾಧನವನ್ನು ಇರಿಸುವ ಸಾಧ್ಯತೆಗಳಿವೆ. ಇದು ಭಾರತದ ಭದ್ರತೆಗೆ ಮಾರಕವಾಗಿ ಪರಿಣಮಿಸಲಿದೆ. ಇಂದು ಶ್ರೀಲಂಕಾ ಚೀನಾದ ಆರ್ಥಿಕ ನೆರವಿನ ಸಾಲದಲ್ಲಿದೆ. ಭಾರತವು ಶ್ರೀಲಂಕಾದ ಯಾವುದೇ ರಾಜಕೀಯ ಪಕ್ಷದ ಮೇಲೆ ತನ್ನ ಸಂಪೂರ್ಣ ಭರವಸೆಯಿರಿಸಿ ತನ್ನ ಭದ್ರತೆಯನ್ನು ಕಡೆಗಣಿಸಲು ಸಾಧ್ಯವಿಲ್ಲ. ರಾಮೇಶ್ವರಂನ ಹಲವು ಮೀನುಗಾರರ ಪ್ರಕಾರ ಕಚ್ಚತೀವು ದ್ವೀಪವು ಭಾರತದ ಅಧೀನಕ್ಕೆ ಬಂದರೆ ಮೀನುಗಾರರ ಬಂಧನಗಳು ಗಣನೀಯವಾಗಿ ಇಳಿಕೆಯಾಗಬಹುದೆಂದು ವಾದಿಸುತ್ತಾರೆ.
ಶ್ರೀಲಂಕಾದ ಪ್ರತಿಕ್ರಿಯೆ:
ಶ್ರೀಲಂಕಾದ ವಿದೇಶಾಂಗ ಮಂತ್ರಿ ಇತ್ತೀಚೆಗೆ ತನ್ನ ರಾಷ್ಟ್ರದ ಮಾಧ್ಯಮವೊಂದಕ್ಕೆ ನೀಡಿದ ಉತ್ತರದಲ್ಲಿ ‘‘ಬಗೆಹರಿದ ವಿಷಯದಲ್ಲಿ ಮಾತನಾಡಲು ಇಷ್ಟವಿಲ್ಲ’’ ಎನ್ನುತ್ತಲೇ ಕಚ್ಚತೀವು ತಮ್ಮ ರಾಷ್ಟ್ರದ ಅವಿಭಾಜ್ಯ ಅಂಗ ಎನ್ನುವ ಸೂಚನೆ ನೀಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಶ್ರೀಲಂಕಾ ಸರಕಾರವು ಭಾರತದಲ್ಲಿನ ಬೆಳವಣಿಗೆಯನ್ನು ಚುನಾವಣಾ ಪ್ರೇರಿತವೆಂದು ಪರಿಗಣಿಸಿದ್ದು ಚರ್ಚೆಯಿರುವುದು ಕಚ್ಚತೀವು ಯಾರ ಬಳಿಯಲ್ಲಿ ಇದೆ ಎನ್ನುವುದಲ್ಲ ಬದಲಾಗಿ ಯಾರು ದ್ವೀಪವನ್ನು ಕೊಟ್ಟವರೆಂದು. ಭಾರತ ಸರಕಾರವು ಮೂಲ ಸಮಸ್ಯೆಗಳಾದ ಅಕ್ರಮ ಮೀನುಗಾರಿಕೆ ಮತ್ತು ಭಾರತೀಯ ಮೀನುಗಾರರು ಬಳಸುವ ಬಾಟಮ್ ಟ್ರೋಲರ್ಸ್ (ಬಲೆಗಳನ್ನು ಸಮುದ್ರದ ತಳದವರೆಗೂ ಹಾಕಿ ಮೀನು ಹಿಡಿಯುವ ಯಂತ್ರ)ಗಳನ್ನು ನಿಷೇಧಿಸಲಾಗದೆ ತನ್ನ ವೈಫಲ್ಯಗಳಿಂದ ನುಣುಚಿಕೊಳ್ಳಲು ಈ ರೀತಿಯಾದಂತಹ ಚರ್ಚೆಗಳನ್ನು ಹುಟ್ಟಿಸಿದ್ದಾರೆ ಎಂದು ಜಾಫ್ನಾದ ಮೀನುಗಾರರು ಆರೋಪಿಸಿದ್ದಾರೆ. ಭಾರತದ ಇಂತಹ ವರ್ತನೆಗಳು ಶ್ರೀಲಂಕಾದ ಭದ್ರತೆಗೆ ಎಚ್ಚರಿಕೆಯಾಗಿದ್ದು ಅದು ತನ್ನ ಮಿತ್ರತ್ವವನ್ನು ಭದ್ರತೆಯ ದೃಷ್ಟಿಯಿಂದ ಬೇರೆಲ್ಲಾದರೂ ಹುಡುಕುವುದು ಸೂಕ್ತವೆಂದು ಶ್ರೀಲಂಕಾದ ಪತ್ರಿಕೆಗಳು ಅಭಿಪ್ರಾಯ ಪಟ್ಟಿವೆ.
ಅಂತಿಮವಾಗಿ ಕಚ್ಚತೀವು ಯಾರಿಗೆ ಸೇರಿದ್ದು?
ತಮಿಳುನಾಡಿನ ರಾಮನಾಡ್ನ ರಾಜನ ಜಮೀನ್ದಾರಿತ್ವದ ಮೂಲಕ ಭಾರತವು ದ್ವೀಪಕ್ಕೆ ತನ್ನ ಐತಿಹಾಸಿಕ ಸಂಪರ್ಕವನ್ನು ಪ್ರತಿಪಾದಿಸುತ್ತದೆ. ಈ ದ್ವೀಪವನ್ನು ಪರ್ಲ್ ಡೈವಿಂಗ್ಗಾಗಿ ಬಳಸಲಾಯಿತು ಮತ್ತು 1802ರಲ್ಲಿ ಅವರಿಗೆ ಗುತ್ತಿಗೆ ನೀಡಲಾಯಿತು ಎಂದು ರಾಮನಾಡಿನ ಸೇತುಪತಿ ಮನೆತನದವರು ವಾದಿಸುತ್ತಾರೆ. ಹಾಗಿದ್ದರೂ, ಈ ಹಕ್ಕುಗಳು ಸಾರ್ವಭೌಮತ್ವವನ್ನು ನೀಡುತ್ತವೆಯೇ ಎಂಬ ಬಗ್ಗೆ ಅನಿಶ್ಚಿತತೆಯಿದೆ. ಆದರೂ ಒಂದು ವಾದದ ಪ್ರಕಾರ ಜಮೀನ್ದಾರಿಕೆಯನ್ನು ರದ್ದುಪಡಿಸಿದ ನಂತರ ಅಧಿಕಾರವೆಲ್ಲವೂ ಸಾರ್ವಭೌಮ ರಾಷ್ಟ್ರಕ್ಕೆ ಹಿಂದಿರುಗಬೇಕೆಂದು ಹೇಳುತ್ತಾರೆ. ಏಕೆಂದರೆ ಜಮೀನ್ದಾರರಿಗೆ ಆದಾಯ ಸಂಗ್ರಹ ಅಧಿಕಾರವನ್ನು ನಿಯೋಜಿಸಿದ್ದದ್ದು ಸಾರ್ವಭೌಮ ರಾಷ್ಟ್ರದ ಸರಕಾರ.
ತನ್ನ ಪುರಾತನ ನಕ್ಷೆಗಳಲ್ಲಿ ಕಚ್ಚತೀವಿನ ಇರುವಿಕೆ ಮತ್ತು ಜಾಫ್ನಾ ಡಯಾಸಿಸ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಸೈಂಟ್ ಆಂಥೋನಿ ಚರ್ಚ್ ನ ಉಪಸ್ಥಿತಿಯನ್ನು ಉಲ್ಲೇಖಿಸಿ ಶ್ರೀಲಂಕಾ ಕಚ್ಚತೀವು ಮೇಲಿನ ಭಾರತದ ಹಕ್ಕುಗಳನ್ನು ವಿರೋಧಿಸುತ್ತದೆ. ಆದರೂ, ಭಾರತವು ಸಾಂವಿಧಾನಿಕ ತಿದ್ದುಪಡಿಯಿಲ್ಲದೆ ತನ್ನ ಭೂಪ್ರದೇಶವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ, ಹಾಗಾಗಿ ಕೇಂದ್ರ ಸರಕಾರವು ಕಚ್ಚತೀವನ್ನು ವಿವಾದಿತ ಪ್ರದೇಶವೆಂದು ಘೋಷಿಸಿದೆ.
ಭಾರತದ ಕೇಂದ್ರ ಸರಕಾರವು 2013 ಮತ್ತು 2022ರಲ್ಲಿ ಎರಡು ಪ್ರತ್ಯೇಕ ಸನ್ನಿವೇಶದಲ್ಲಿ ಉತ್ತರಿಸುವಾಗ ಕಚ್ಚತೀವು ಶ್ರೀಲಂಕಾದ ಅಧೀನಕ್ಕೆ ಒಳಪಟ್ಟ ಪ್ರದೇಶದೊಳಗೆ ಬರುವುದರಿಂದ ಅದು ಶ್ರೀಲಂಕಾದ ಭಾಗವೆಂದು ಹೇಳಿದ್ದಾರೆ.
ಕಚ್ಚತೀವನ್ನು ಮರಳಿ ಪಡೆಯಬಹುದೇ?
ಆಗಸ್ಟ್ 2014ರಲ್ಲಿ, ಅಟಾರ್ನಿ ಜನರಲ್ ಆಗಿದ್ದ ಮುಕುಲ್ ರೋಹಟಗಿ ಅವರು ಸುಪ್ರೀಂ ಕೋರ್ಟ್ ಗೆ ‘‘ಭಾರತವು ಯುದ್ಧದ ಮೂಲಕ ಮಾತ್ರ ಕಚ್ಚತೀವನ್ನು ಹಿಂಪಡೆಯಬಹುದು ಮತ್ತು ಯುದ್ಧದ ಯೋಜನೆಗಳಿಲ್ಲ’’ ಎಂದು ಹೇಳಿದರು. ಎರಡು ರಾಷ್ಟ್ರಗಳು UNCLOS (ಯುಎನ್ ಕನ್ವೆನ್ಷನ್ ಆನ್ ದಿ ಲಾ ಆಫ್ ದಿ ಸೀ) ಅಡಿಯಲ್ಲಿ 70ರ ಒಪ್ಪಂದಗಳನ್ನು ಮಾಡಿಕೊಂಡಿದ್ದು ಏಕಪಕ್ಷೀಯವಾಗಿ ಯಾವುದೇ ರಾಷ್ಟ್ರವು ಒಪ್ಪಂದದಿಂದ ಹಿಂದೆಸರಿಯಲು ಸಾಧ್ಯವಿಲ್ಲ. ಅಂತರ್ರಾಷ್ಟ್ರೀಯ ಕಾನೂನಿನಡಿಯಲ್ಲಿ ಇಂತಹ ನಿರ್ಧಾರಗಳನ್ನು ಅಪರಾಧವೆಂದು ಘೋಷಿಸಲಾಗಿದೆ. ಭವಿಷ್ಯದಲ್ಲಿ ಶ್ರೀಲಂಕಾವು ಸಹ ಕಚ್ಚತೀವುವನ್ನು ಹಿಂದಿರುಗಿಸುವ ಸಾಧ್ಯತೆಗಳಿಲ್ಲ. ಇಂತಹ ಸಂದರ್ಭದಲ್ಲಿ ಶ್ರೀಲಂಕಾದ ಮೇಲೆ ಹೆಚ್ಚಿನ ಒತ್ತಡ ಹೇರುವುದರಿಂದ ನೆರೆರಾಷ್ಟ್ರದ ಬಾಂಧವ್ಯಕ್ಕೆ ಧಕ್ಕೆ ಬರಬಹುದು. 1974 ಮತ್ತು 76ರ ಒಪ್ಪಂದಗಳಿಂದ ಭಾರತಕ್ಕೆ ಸಾಕಷ್ಟು ಲಾಭವೇ ಆಗಿದೆ.
1974ರ ಒಪ್ಪಂದದಲ್ಲಿ ಭಾರತವು ಸಮಪ್ರಮಾಣಕ್ಕಿಂತಲೂ ಹೆಚ್ಚಿನ ಜಲ ಪ್ರದೇಶವನ್ನು ತನ್ನ ಅಧೀನಕ್ಕೆ ಪಡೆದುಕೊಂಡಿತು. ಎರಡನೆಯದಾಗಿ ತನ್ನ ಮೀನುಗಾರರಿಗೆ ವಿಶ್ರಮಿಸಲು, ಮೀನಿನ ಬಲೆಗಳನ್ನು ಒಣಗಿಸಲು ಮತ್ತು ತೀರ್ಥಯಾತ್ರೆಗಳನ್ನು ಕೈಗೊಳ್ಳುವ ಹಕ್ಕುಗಳನ್ನು ಪಡೆಯಿತು. 1976ರ ಒಪ್ಪಂದದಲ್ಲಿ ವಿವಾದಿತ ವಾಡ್ಜ್ ಬ್ಯಾಂಕ್ ದ್ವೀಪದ ಮೇಲಿನ ಒಡೆತನವನ್ನು ತನ್ನದಾಗಿಸಿತು. ವಾಡ್ಜ್ ಬ್ಯಾಂಕ್ ಕಚ್ಚತೀವುಗಿಂತಲೂ ವಿಸ್ತಾರವಾದ ದ್ವೀಪವಾಗಿದ್ದು ಇದರ ಕಿನಾರೆಗಳಲ್ಲಿ ಸಂಪನ್ಮೂಲಗಳು ಹೇರಳವಾಗಿ ಸಿಗುತ್ತದೆ ಎನ್ನಲಾಗಿದೆ. ಭಾರತವೇನಾದರೂ ಒಪ್ಪಂದದಿಂದ ಏಕಪಕ್ಷೀಯವಾಗಿ ಹಿಮ್ಮೆಟ್ಟಿದರೆ ಇವುಗಳನ್ನೆಲ್ಲಾ ಕಳೆದುಕೊಳ್ಳಬೇಕಾಗಬಹುದು. ಮತ್ತೊಂದು ಬಹುಮುಖ್ಯವಾಗಿ ಕಾಡುವ ಪ್ರಶ್ನೆಗಳು ಏನೆಂದರೆ ಇಂತಹ ಕಾರ್ಯಗಳಿಂದ ಭಾರತದ ನಾಯಕರು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪರವಾಗಿ ಯಾವ ತೆರನಾದ ಚಿತ್ರಣವನ್ನು ನಿರ್ಮಿಸಲು ಆಶಿಸಿದ್ದಾರೆ ಮತ್ತು ಮರು ಮಾತುಕತೆಯಲ್ಲಿ ಭಾರತವು ಯಾವ ರೀತಿಯ ಪರಿಹಾರವನ್ನು ನೀಡಲು ಸಿದ್ಧರಿದ್ದಾರೆ?. ಕಚ್ಚತೀವನ್ನು ಹಿಂಪಡೆಯುವುದರಿಂದ ನಮ್ಮ ಮೀನುಗಾರರ ಸಮಸ್ಯೆಗಳೆಲ್ಲಾ ಮುಗಿಯುವುದಿಲ್ಲ ಬದಲಾಗಿ ಭಾರತವು ತನ್ನ ನೆರೆಯ ರಾಷ್ಟ್ರಗಳ ನಂಬಿಕೆ ವಿಶ್ವಾಸಗಳನ್ನು ಕಳೆದುಕೊಳ್ಳಬಹುದು ಹಾಗೂ ಚೀನಾದ ಕಾರ್ಯತಂತ್ರಗಳನ್ನು ಸುಗಮಗೊಳಿಸಬಹುದು.