ಮೌಲ್ವೀ ಬರ್ಖತುಲ್ಲಾ-ಭಾರತದ ಮೊದಲ ಪ್ರಧಾನ ಮಂತ್ರಿ

Update: 2023-11-12 03:58 GMT

ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್‌ನೆಹರೂ ಅವರ ಮಹತ್ವವನ್ನು ತುಚ್ಛೀಕರಿಸುವ ಉದ್ದೇಶದಿಂದ ಬಿಜೆಪಿ ಭಕ್ತರು ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮೊದಲಿಗೆ ಅವರ ವಿರುದ್ಧ ಸರ್ದಾರ್ ವಲ್ಲಭಭಾಯಿ ಪಟೇಲರನ್ನು ಎತ್ತಿ ಕಟ್ಟಿದರು, ಪಟೇಲರ ಭವ್ಯ ಪ್ರತಿಮೆಯನ್ನು ನಿರ್ಮಿಸಿದರು. ಪಟೇಲರೇ ಆರೆಸ್ಸೆಸ್. ಸಂಘಟನೆಯನ್ನು ಬಹಿಷ್ಕರಿಸಿದ್ದರು ಎಂದು ಭಕ್ತರ ವಿರೋಧಿಗಳು ಪದೇ ಪದೇ ಜ್ಞಾಪಿಸಿದಾಗ ಈಗ ಆ ವಾದ ಹಿಂದೆ ಬಿದ್ದಿದೆ. ಈಗ ನೆಹರೂ ವಿರುದ್ಧ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರನ್ನು ಎತ್ತಿ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ನೆಹರೂ ಅವರು ಭಾರತದ ಮೊದಲನೆಯ ಪ್ರಧಾನ ಮಂತ್ರಿಗಳಾಗಿರಲಿಲ್ಲ, ಸುಭಾಶ್ ಚಂದ್ರ ಬೋಸ್ ಅವರಾಗಿದ್ದರು ಎಂದು ಸಾಧಿಸುತ್ತಿದ್ದಾರೆ.

ಎರಡನೇ ಮಹಾಯುದ್ಧದ ಸಮಯದಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯ ನೇತೃತ್ವ ವಹಿಸಿದ ಬೋಸ್ ಅವರು 1846ರ ಸೆಪ್ಟಂಬರ್ 2ರಂದು ಭಾರತದ ಗಡಿಯಿಂದಾಚೆ ಸಿಂಗಾಪುರದಲ್ಲಿ ಘೋಷಿಸಿದ ತಾತ್ಕಾಲಿಕ ಸರಕಾರವನ್ನು ಉಲ್ಲೇಖಿಸುತ್ತ ಈ ಭಕ್ತರು ಆ ಸರಕಾರದಲ್ಲಿ ಬೋಸ್ ಅವರು ಅಧ್ಯಕ್ಷರು ಹಾಗೂ ಪ್ರಧಾನ ಮಂತ್ರಿಗಳೂ ಆಗಿದ್ದನ್ನು ಹೇಳಿ, ಆ ಕಾರಣದಿಂದ ಬೋಸ್ ಅವರು ಭಾರತದ ಮೊದಲ ಪ್ರಧಾನ ಮಂತ್ರಿಗಳಾಗಿದ್ದರೆಂದು ವಾದಿಸುತ್ತಾರೆ.

ತಾಜ್ ಮಹಲನ್ನು ಒಬ್ಬ ಹಿಂದೂ ರಾಜ ಒಂದು ಮಂದಿರವನ್ನಾಗಿ ನಿರ್ಮಿಸಿದ್ದ ಎನ್ನುವ ಇವರ ಇತಿಹಾಸ ಪ್ರಜ್ಞೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಮೊದಲ ಮಹಾಯುದ್ಧದ ಅವಧಿಯಲ್ಲಿ 1915ರ ಡಿಸೆಂಬರ್ 1 ರಂದು ಭಾರತದ ಗಡಿಯಿಂದಾಚೆ ಘೋಷಿಸಿದ ಮೊದಲ ತಾತ್ಕಾಲಿಕ ಸರಕಾರವನ್ನು ಇವರು ಮರೆಮಾಚುತ್ತಾರೆ. ಯಾಕೆಂದರೆ ಇದು ರಚನೆಯಾಗಿದ್ದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲಿನಲ್ಲಿ. ಆ ಸರಕಾರದಲ್ಲಿ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಅವರು ಅಧ್ಯಕ್ಷರೂ, ಅಬ್ದುಲ್ ಹಾಫಿಝ್ ಮುಹಮ್ಮದ್ ಬರ್ಖತುಲ್ಲಾ ಅವರು ಉಪಾಧ್ಯಕ್ಷರೂ, ಮೌಲ್ವೀ ಬರ್ಖತುಲ್ಲಾ ಅವರು ಪ್ರಧಾನ ಮಂತ್ರಿಗಳೂ ಆಗಿದ್ದರು. ಅವರಲ್ಲದೆ ಉಬೈದ್ ಅಲ್-ಸಿಂಧಿ ಅವರು ಭಾರತಕ್ಕೆ ಸಂಬಂದಪಟ್ಟ ವಿಚಾರಗಳ ಮಂತ್ರಿಗಳೂ, ಮೌಲ್ವಿ ಬಶೀರ್ ಅವರು ಯುದ್ಧ-ಮಂತ್ರಿಗಳೂ ಹಾಗೂ ಚಂಪಕ ಚರಣ ಪಿಳ್ಳೈ ಅವರು ವಿದೇಶಾಂಗ ಮಂತ್ರಿಗಳೂ ಆಗಿದ್ದರು. ಇಷ್ಟು ಜನ ಮುಸಲ್ಮಾನರು ಮಂತ್ರಿಗಳಾಗಿದ್ದ ಭಾರತದ ಮೊದಲ ತಾತ್ಕಾಲಿಕ ಸರಕಾರವನ್ನು ಭಕ್ತರು ನೆನಪಿಸುವುದು ಸಾಧ್ಯವೇ?

ಭಾರತದ ಈ ಮೊದಲ ತಾತ್ಕಾಲಿಕ ಸರಕಾರವನ್ನು ಭಕ್ತರು ನೆನಪಿಸದಿರಲು ಇನ್ನೂ ಒಂದು ಕಾರಣವಿದೆ. ಆ ಸರಕಾರದಲ್ಲಿ ಅಧ್ಯಕ್ಷರಾಗಿದ್ದ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಅವರು ಭಾರತದ ಎರಡನೆಯ ಲೋಕಸಭೆಗೆ ಮಥುರಾ ಮತಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಅಂದಿನ ಭಾರತೀಯ ಜನಸಂಘದ ನಾಯಕ ಅಟಲ್ ಬಿಹಾರಿ ವಾಜಪೇಯಿಯವರನ್ನು ಹೀನಾಯವಾಗಿ ಸೋಲಿಸಿ ಲೋಕಸಭೆಯ ಸದಸ್ಯರಾಗಿ ಚುನಾಯಿತರಾಗಿದ್ದರು. ಈ ಮೊದಲು 1955ರಲ್ಲಿ ಲೋಕಸಭೆಗೆ ನಡೆದ ಒಂದು ಮರುಚುನಾವಣೆಯಲ್ಲಿ ಸೋತಿದ್ದ ವಾಜಪೇಯಿಯವರು 1967ರ ಎರಡನೆಯ ಚುನಾವಣೆಯಲ್ಲಿ ಒಂದಲ್ಲ, ಎರಡಲ್ಲ ಮೂರು ಚುನಾವಣಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು - ಲಖನೌ, ಬಲರಾಮಪುರ ಮತ್ತು ಮಥುರಾ. ಮಥುರಾದಲ್ಲಿ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಅವರೂ ಸೇರಿದಂತೆ ಇದ್ದ ಒಟ್ಟು ಐದು ಅಭ್ಯರ್ಥಿಗಳಲ್ಲಿ ವಾಜಪೇಯಿ ನಾಲ್ಕನೆಯ ಸ್ಥಾನ ಗಳಿಸಿದ್ದರು. ಮಥುರಾದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಅವರು ವಾಜಪೇಯಿ ಅವರನ್ನು 71,582 ಮತಗಳಿಂದ ಸೋಲಿಸಿದರು. ಲಖನೌನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಾಜಪೇಯಿಯವರನ್ನು 12,485 ಮತಗಳಿಂದ ಸೋಲಿಸಿದರು. ಬಲರಾಮಪುರದಲ್ಲಿ ಮಾತ್ರ ವಾಜಪೇಯಿ ಬರೀ 9,812 ಮತಗಳ ಅಂತರದಿಂದ ಗೆದ್ದು ಮಾನ ಉಳಿಸಿಕೊಂಡಿದ್ದರು. ನಂತರ ಭಾರತ ಸರಕಾರ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಅವರ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಮುದ್ರಿಸಿತ್ತು.

ಆದರೆ ಆನಂತರ ಭಾರತದ ಮೂರನೆಯ ತಾತ್ಕಾಲಿಕ ಸರಕಾರವನ್ನು ಬ್ರಿಟಿಷರು ರಚಿಸಿದರು. ಆಗಲೇ ವೈಸರಾಯ್ ಅವರೇ ಅಧ್ಯಕ್ಷರಾಗಿದ್ದ ಅವರ ಎಕ್ಸಿಕ್ಯುಟಿವ್ ಕೌನ್ಸಿಲ್‌ಗೆ ಜವಾಹರಲಾಲ್ ನೆಹರೂ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅವರಲ್ಲದೆ ಪಟೇಲ್, ರಾಜೇಂದ್ರ ಪ್ರಸಾದ್ ಮೊದಲಾದ 11 ಜನರನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು. ಇದನ್ನೇ ನಂತರ ಅಕ್ಟೋಬರ್ 1946ರಲ್ಲಿ ಮಂತ್ರಿಮಂಡಲದಲ್ಲಿ ಪರಿವರ್ತಿಸಲಾಯಿತು ಹಾಗೂ ಜವಾಹರಲಾಲ್ ನೆಹರೂ ಅವರನ್ನು ಪ್ರಧಾನ ಮಂತ್ರಿಗಳೆಂದು ಘೋಷಿಸಲಾಯಿತು. ಈ ರೀತಿ ಭಾರತಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ ಮೊದಲೇ ನೆಹರೂ ಅವರು ಪರತಂತ್ರ ಭಾರತದ ಮೂರನೆಯ ಪ್ರಧಾನ ಮಂತ್ರಿಯಾಗಿದ್ದರು. ನಂತರ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ನೆಹರೂ ಅವರು 15 ಅಗಸ್ಟ್ 1947ರಂದು ಮತ್ತೆ ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಭಕ್ತರು ಇತಿಹಾಸವನ್ನು ಓದುವುದಿಲ್ಲವಷ್ಟೇ ಅಲ್ಲ, ಇರುವ ಇತಿಹಾಸವನ್ನು ತಿರುಚುತ್ತಾರೆ ಕೂಡ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಾಪು ಹೆದ್ದೂರಶೆಟ್ಟಿ

contributor

Similar News