ರಾಜಕೀಯ ಪಕ್ಷದ ಕಚೇರಿಯಲ್ಲಿ ಅಕಾಡಮಿಗಳ ಸಭೆ: ಸಾಹಿತ್ಯ ಲೋಕದ ಆತಂಕಗಳ ಪ್ರತೀಕ

ಮನುಷ್ಯನ ಹುಡುಕಾಟಗಳೆಲ್ಲ ರಾಜಪ್ರಭುತ್ವಕ್ಕೆ ವಿಚ್ಛಿದ್ರಕ ಚಳವಳಿಗಳಂತೆ ಕಾಣಿಸುವುದು ಇಂದು ನಿನ್ನೆಯ ಸಂಗತಿಗಳೇನಲ್ಲ. ಇಲ್ಲಿನ ಪ್ರಾಬ್ಲಂ ಏನೆಂದರೆ ಸಾಹಿತಿಗಳಿಗೂ ಇರುವ ಜಾತಿ ಮೋಹ...ವಶೀಲಿಬಾಜಿ, ಸ್ವಜನ ಪಕ್ಷಪಾತ ಇತ್ಯಾದಿ. ಪ್ರಭುತ್ವ ಮತ್ತು ಸಾಹಿತ್ಯದ ನಡುವೆ ಕರುಳು ಬಳ್ಳಿಯ ಸಂಬಂಧವಿರಬೇಕಾಗಿತ್ತು. ಆದರೆ ರಕ್ತ ಸಂಬಂಧಿತ ಜಾತಿ, ಸ್ವಜನ ಪಕ್ಷಪಾತಗಳೇ ಕಳ್ಳುಬಳ್ಳಿ ಎಂದುಕೊಂಡಿದ್ದೇ ಈ ಹೊತ್ತಿನ ದುರಂತ.

Update: 2024-06-26 07:41 GMT

‘‘ಕನ್ನಡದಲ್ಲಿ ಇರುವುದೆಲ್ಲ ಗಟ್ಟಿಯಾದ ಸಾಹಿತ್ಯವೇನಲ್ಲ. ಅದರಲ್ಲೂ ಸಾಕಷ್ಟು ಬೂಸಾ ಸಾಹಿತ್ಯವಿದೆ’’ಎಂದು ಮಂತ್ರಿ ಬಸವಲಿಂಗಪ್ಪನವರು ಸಮಾರಂಭವೊಂದರಲ್ಲಿ ಪ್ರಾಸಂಗಿಕವಾಗಿ ಹೇಳಿದ್ದ ಮಾತಿಗೀಗ (18-11-1973)ಬರೋಬ್ಬರಿ ಐವತ್ತು ವರುಷಗಳು ಸರಿದು ಹೋಗಿವೆ.

ಈ ಮಾತಿನಿಂದ ಕರ್ನಾಟಕದಲ್ಲಿ ಹೊಸ ಸಾಹಿತ್ಯ ಚಿಂತನೆಗಳು ಪ್ರಾರಂಭವಾಯಿತು, ಅಷ್ಟೇ ಅಲ್ಲ, ದಲಿತ ಚಳವಳಿಯ ಹುಟ್ಟಿಗೂ ನಾಂದಿಯಾಯಿತು.

‘ಇಲಸ್ಟ್ರೇಟೆಡ್ ವೀಕ್ಲಿ’ಯ ಸಂಪಾದಕರಾಗಿದ್ದ ಖುಷವಂತ್ ಸಿಂಗ್ ಕೂಡ ‘ಬಸವಲಿಂಗಪ್ಪನವರು ಕೇವಲ ಕನ್ನಡ ಸಾಹಿತ್ಯದ ಬಗ್ಗೆ ಹೇಳಿದ್ದಾರೆ. ಆದರೆ ಭಾರತದ ಭಾಷೆಗಳಲ್ಲಿ ಇರುವ ಬಹುತೇಕ ಸಾಹಿತ್ಯ ಬೂಸಾ ಎಂದು ಹೇಳಬೇಕಿತ್ತು’ ಎಂದು ತಮ್ಮ ಸಂಪಾದಕೀಯದಲ್ಲಿ ಬರೆಯುವುದರ ಮೂಲಕ ನೈತಿಕ ಬೆಂಬಲವನ್ನು ಘೋಷಿಸಿದರು.

ಅಂದಿನ ಮಂತ್ರಿಗಳ ಹೇಳಿಕೆಗಳಿಗೆ ಕನ್ನಡದ ಅಗ್ರ ಲೇಖಕ ಕುವೆಂಪು ಕೂಡ,

‘‘....ಸಾಹಿತ್ಯದ ಬಹುಭಾಗ ಇರುವುದೆಲ್ಲವೂ ಬೂಸಾ ಸಾಹಿತ್ಯವೇ. ಅದರಲ್ಲಿ ಸ್ವಲ್ಪಮಟ್ಟಿಗೆ ಹಿಂಡಿ ಸಾಹಿತ್ಯ, ಹತ್ತಿಕಾಳು ಸಾಹಿತ್ಯವಿರುತ್ತದೆ’’ ಎಂದು ಬೆಂಬಲಿಸಿದರು.

**

‘‘ಹೇಲು-ಉಚ್ಚಿ ಹೊರುವಂಥದನ್ನು ನಾನು ನಿಲ್ಲಿಸಿದೆ. ಪತ್ರಿಕೆಗಳಲ್ಲೆಲ್ಲ ಮಲ-ಮೂತ್ರ ಹೊರುವುದನ್ನು ನಿಲ್ಲಿಸಲು ಬಸವಲಿಂಗಪ್ಪ ಪ್ರಯತ್ನ ಮಾಡುತ್ತಿದ್ದಾನೆ ಎಂದು ಬರೆದರೇ ಹೊರತು, ಹೇಲು-ಉಚ್ಚಿ ಎಂದು ಒಬ್ಬರೂ ಬರೆಯಲಿಲ್ಲ.ಮಲಾನೂ ಸಂಸ್ಕೃತ, ಮೂತ್ರನೂ ಸಂಸ್ಕೃತ. ಯಾರಿಗೆ ಅರ್ಥವಾಗುತ್ತದೆ? ನಾನು ವೇದಿಕೆಯಿಂದ ಹೇಲು-ಉಚ್ಚಿ ಅಂತ ಹೇಳಿದರೆ ಅಸಿಸಿಸೀ ಅಂತ ಹೇಳುತ್ತಿದ್ದರು. ಹೇಳಿದ್ದನ್ನು ಕೇಳಿಯೇ ‘ಅಸಿಸಿಸೀ’ಅಂದರೆ, ಅದನ್ನು ತಲೆ ಮೇಲೆ ಹೊರುವಂತಹ ವ್ಯಕ್ತಿಗೆ ಅದು ಹೇಗಿರಬೇಕು?’’ ಎಂದು ದೇವರಾಜ ಅರಸು ಸಂಪುಟದಲ್ಲಿ ಮಂತ್ರಿಯಾಗಿದ್ದ ಬಸವಲಿಂಗಪ್ಪ ಅಂದು ವಿಶ್ಲೇಷಿಸಿದ್ದರು.

**

ಇದೀಗ ಕರ್ನಾಟಕ ರಾಜ್ಯದ ಮಂತ್ರಿಯೋರ್ವರು ತಮ್ಮ ಪಕ್ಷದ ಪರವಾಗಿ ಕೆಲಸ ನಿರ್ವಹಿಸುವಂತೆ ಮತ್ತು ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ನಡೆದುಕೊಳ್ಳುವಂತೆ ಬಹಿರಂಗವಾಗಿಯೇ ಹೇಳಿಕೆಯನ್ನು ನೀಡಿದ್ದಾರೆ. ಅದನ್ನು ಸಮರ್ಥಿಸಿಕೊಂಡು ಕನ್ನಡ ಮತ್ತು ಸಂಸ್ಕೃತಿ ಸಚಿವರೂ ಸಾಹಿತ್ಯ, ನಾಟಕ, ಸಂಗೀತ, ಭಾಷಾ ಭಾರತಿ ಮುಂತಾದ ಅಕಾಡಮಿಗಳ ಅಧ್ಯಕ್ಷರು ಮತ್ತು ಸದಸ್ಯರು ಪಕ್ಷದ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿದರೆ ತಪ್ಪೇನು? ಎಂದೂ ಹೇಳಿದ್ದಾರೆ. ಪಕ್ಷದ ವಕ್ತಾರರಂತೂ, ಕೆಲವರನ್ನು ಹೊರತುಪಡಿಸಿ ಬಹುತೇಕ ಸಾಹಿತಿಗಳೆಲ್ಲ ಪದವಿ, ಪ್ರಶಸ್ತಿಗಳಿಗಾಗಿ ಲಾಬಿ ಮಾಡಿದವರೇ ಆಗಿರುತ್ತಾರೆ, ಹೀಗಾಗಿ ಅವರೂ ರಾಜಕಾರಣಿಗಳೇ ಎಂಬ ಅರ್ಥದಲ್ಲಿ ಹೇಳಿದ್ದಾರೆ.

ಮೇಲಿನ ಎರಡೂ ಘಟನೆಗಳೂ ರಾಜಕೀಯ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟಿರುವಂಥವುಗಳೇ. ಆದರೆ ಮೊದಲನೆಯದು, ರಾಜಕೀಯ ಸ್ಥಿತ್ಯಂತರಗಳಿಗೆ ಮತ್ತು ಸಾಹಿತ್ಯಿಕ ವಲಯದಲ್ಲಿ ಹೊಸತನದ ಗಾಳಿ ಬೀಸಲು ಕಾರಣವಾದರೆ, ಪ್ರಸ್ತುತದ ಮಂತ್ರಿವರ್ಯರ ನಡೆಗಳು ಯಾವ ರಾಜಕೀಯ, ಸಾಹಿತ್ಯಿಕ ಸ್ಥಿತ್ಯಂತರಗಳಿಗೆ ಒಳಗಾಗದೆ ಇರುವುದೂ ಕೂಡ ವರ್ತಮಾನದ ವ್ಯಂಗ್ಯದಂತೆಯೂ ಕಾಣಿಸುತ್ತಿದೆ.

ರಾಜಕೀಯ ಮಾರುಕಟ್ಟೆಯೊಂದು ತನಗೆ ಅನಗತ್ಯವಾದುದನ್ನು ಹೇಗೆ ಮೂಲೆಗೆ ತಳ್ಳುತ್ತದೆ ಎಂಬುದಕ್ಕೆ ಮೊನ್ನೆಯ ದಿನ, ರಾಜಕೀಯ ಪಕ್ಷವೊಂದು ತನ್ನ ಪಕ್ಷದ ಸಿದ್ಧಾಂತಗಳೊಂದಿಗೆ ವಿವಿಧ ಅಕಾಡಮಿಗಳ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯೇ ಸಾಕ್ಷಿ.

ತಮ್ಮನ್ನು ಅನುಸರಿಸುವವರ ಕ್ಷೇಮಕ್ಕಾಗಿ, ಅವರೆಲ್ಲರ ಒಳಿತಿಗಾಗಿ ಸಾಹಿತಿಗಳನ್ನು, ಕಲಾವಿದರನ್ನು ಕೋಲು ಹಿಡಿದು ಬೆದರಿಸಲೂ ಹಿಂಜರಿಯದವರಂತೆ ರಾಜಕಾರಣಿಯೊಬ್ಬರು ಸಭೆಯಲ್ಲಿ ಮಾತನಾಡಿದ್ದಾರೆಂದು ವರದಿಯಾಗಿದೆ.

ಇದೊಂದು ರೀತಿಯ ಹಿಂಸೆ. ಇದರ ಸ್ವರೂಪ ಹೇಗಿರುತ್ತದೆ ಎಂದರೆ, ಒಂದು ಸ್ಥಳವನ್ನು ರಸ್ತೆ ಅಗಲೀಕರಣದ ನೆಪದಲ್ಲಿ, ನಗರ ಸೌಂದರ್ಯ ವನ್ನು ಆಸ್ವಾದಿಸುವವರಂತೆ ತೋರುವ ಜನರು ಒಂದು ಕಡೆಯಾದರೆ ಇನ್ನೊಂದು ಮಗ್ಗುಲಿನಲ್ಲಿ ಆ ರಸ್ತೆಯ ಮನೆಗಳು ನೆಲಸಮವಾಗುವ ದುರಂತವನ್ನು ಅರಿಯಲಾರದಂತಹ ಪರಿಸ್ಥಿತಿ. ಇಂತಹ ಭಾವ ನಿರಪೇಕ್ಷ ಕ್ರಿಯೆ ಬಹುತೇಕ ರಾಜಕಾರಣಿಗಳಲ್ಲಿ ಹೆಚ್ಚಾಗಿ ಆವರಿಸಿಕೊಂಡಿರುತ್ತದೆ.

ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಮನುಷ್ಯನ ಪ್ರಜ್ಞೆಯ ಆಳದಿಂದ ಉದಯಿಸಿದಂತಹವು. ಇದರ ನಷ್ಟವನ್ನು ಯಾವುದೇ ಪ್ರಮಾಣದ ಸರಕಾರಿ ಪರಿಹಾರಗಳು ಸರಿದೂಗಿಸಲಾರವು. ಸಾಧಾರಣವಾಗಿ ಈ ಎಲ್ಲ ಆಸಕ್ತಿಗಳನ್ನು ಕಳೆದುಕೊಂಡ ರಾಜಕಾರಣಿಯೊಬ್ಬ ಸ್ಯಾಡಿಸ್ಟ್ ಆಗಬಲ್ಲನೇ ಹೊರತು ಮತ್ತೇನೂ ಆಗಲು ಸಾಧ್ಯವಿಲ್ಲ.

ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ, ವೈದ್ಯಸೌಲಭ್ಯದ ಪೂರೈಕೆಯು ಚಿಕಿತ್ಸೆಯ ಅಗತ್ಯಕ್ಕಿಂತ ತುಂಬಾ ಕಡಿಮೆಯಾಗಿರುವ ವಿಶೇಷ ಸಂದರ್ಭಗಳಲ್ಲಿ ದುರ್ಬಲವಾಗಿದ್ದ ಪೆನ್ಸಿಲಿನ್ ಮದ್ದನ್ನು ಯಾವ ರೋಗಿಗಳಿಗೆ ಮೊದಲು ಒದಗಿಸಬೇಕು ಎಂಬುದನ್ನು ನಿರ್ಧರಿಸುವ ಗೊಂದಲವುಂಟಾಯಿತು. ಆ ಸಂದರ್ಭದಲ್ಲಿ, ‘‘ಕೆಲವು ಸೈನಿಕರು ಯುದ್ಧರಂಗದಲ್ಲಿ ಗಾಯಗೊಂಡಿದ್ದರು.ಇನ್ನು ಕೆಲವರಿಗೆ ಸೂಳೆಗೇರಿಗಳಿಂದ ರೋಗ ಹತ್ತಿತ್ತು. ಆಗ -ಯುದ್ಧದ ಗಾಯಾಳುಗಳನ್ನು ಉಳಿಸಿಕೊಳ್ಳಲಾಗದಿದ್ದರೂ ಸರಿಯೆ, ಮೊದಲು ಗುಹ್ಯರೋಗಿಗಳಿಗೇ ಪೆನ್ಸಿಲಿನ್ ಕೊಡಬೇಕು’’ ಪ್ರಭುತ್ವವು ಹೀಗೆ ನಿರ್ಣಯಿಸಿತು.

ಹಾಗೆ, ರಾಜಕೀಯ ಮತ್ತದರ ನಾಯಕಮಣಿಗಳಿಗೆ ಸಾಹಿತ್ಯಿಕ ಸಮಾಜವೊಂದರ ಕಾರ್ಯಚಟುವಟಿಕೆಗಳೆಲ್ಲ ಸೆಕೆಂಡರಿ ಆಯ್ಕೆಗಳಾಗಿ ಕಾಣಿಸುತ್ತವೆ.

ಪ್ರಸಕ್ತ ಕರ್ನಾಟಕ ರಾಜ್ಯದಲ್ಲಿ ರಾಜಕೀಯ ಬೃಹತ್ ಸಮೂಹಕ್ಕೆ ಈ ಸಾಹಿತಿಗಳು, ಕಲಾವಿದರು, ನಾಟಕಕಾರರು....ಇತ್ಯಾದಿಗಳೆಲ್ಲ ಅನಪೇಕ್ಷಿಣೀಯರೂ, ‘ಚಿಲ್ಲರೆ ಮಂದಿ’ ಮತ್ತು ತ್ಯಾಜ್ಯರಂತೆ ಕಾಣಿಸುತ್ತಿದ್ದಾರೆನಿಸುತ್ತಿದೆ. ಈ ಸಂದರ್ಭದಲ್ಲಿ ಬೆಂಥಮ್‌ನ ಸಿದ್ಧಾಂತವೊಂದು ನೆನಪಾಗುತ್ತಿದೆ. ಜೆರೆಮಿ ಬೆಂಥಮ್ ಯೋಜಿಸಿದ ಆ ಸಿದ್ಧಾಂತದಲ್ಲಿ, ಆ ತ್ಯಾಜ್ಯ ಜನವರ್ಗಗಳನ್ನೆಲ್ಲ ಒಂದು ಕೇಂದ್ರೀಕೃತ ಸಂಸ್ಥೆಯಲ್ಲಿ ಕೂಡಿಡುವ ಯೋಜನೆಯಾಗಿತ್ತು. ಅಂತಹ ತ್ಯಾಜ್ಯ ವರ್ಗಗಳ ಮೇಲೆ ಖಾಯಂ ನಿಗಾ ಇಟ್ಟು, ಸರಕಾರವು ಅವರನ್ನು ದುಡಿಸಿಕೊಳ್ಳುವ ಯೋಜನೆ ಅದಾಗಿತ್ತು.

ಇವತ್ತಿನ ಸಾಹಿತಿಗಳು ಸಹ ಸರ್ವರಿಂದಲೂ ಬಳಸಲ್ಪಡುವ ಸಮೂಹ ಆಗಬೇಕಿತ್ತು. ಸಾರ್ವಜನಿಕರ ಸ್ವತ್ತಾಗಬೇಕಿತ್ತು. ಅವರ ಸಾಹಿತ್ಯವೂ ಕೂಡ ಸಾಮಾನ್ಯ ಸಂಪತ್ತು ಆಗಬೇಕಿತ್ತು. ಆದರೆ ಹಾಗಾಗಲಿಲ್ಲ. ಈ ಹೊತ್ತಿಗೂ ಕೂಡ ಪಾವಿತ್ರ್ಯದ ಕಲ್ಪನೆಯಿಂದ ಹೊರಬರದ ಎಷ್ಟೋ ಸಾಹಿತಿಗಳು ನಮ್ಮೊಂದಿಗಿದ್ದಾರೆ. ಸಾಹಿತ್ಯ ಎಂಬುದು ಸದಾ ಚಲನಶೀಲ ಆಗಿರಬೇಕು. ಅದು ಅಶುದ್ಧತೆಯ ಗರ್ಭದಿಂದ ಉದಯಿಸಿ ಶುದ್ಧತೆಯ ಕಡೆಗೆ ಚಲಿಸಬೇಕು. ಇಲ್ಲದಿದ್ದರೆ ಅದೊಂದು ಧಾರ್ಮಿಕ ಪ್ರವಚನವಾದೀತಷ್ಟೆ.

ಮನುಷ್ಯನ ಹುಡುಕಾಟಗಳೆಲ್ಲ ರಾಜಪ್ರಭುತ್ವಕ್ಕೆ ವಿಚ್ಛಿದ್ರಕ ಚಳವಳಿಗಳಂತೆ ಕಾಣಿಸುವುದು ಇಂದು ನಿನ್ನೆಯ ಸಂಗತಿಗಳೇನಲ್ಲ. ಇಲ್ಲಿನ ಪ್ರಾಬ್ಲಂ ಏನೆಂದರೆ ಸಾಹಿತಿಗಳಿಗೂ ಇರುವ ಜಾತಿ ಮೋಹ...ವಶೀಲಿಬಾಜಿ, ಸ್ವಜನ ಪಕ್ಷಪಾತ ಇತ್ಯಾದಿ.

ಪ್ರಭುತ್ವ ಮತ್ತು ಸಾಹಿತ್ಯದ ನಡುವೆ ಕರುಳು ಬಳ್ಳಿಯ ಸಂಬಂಧವಿರಬೇಕಾಗಿತ್ತು. ಆದರೆ ರಕ್ತ ಸಂಬಂಧಿತ ಜಾತಿ, ಸ್ವಜನ ಪಕ್ಷಪಾತಗಳೇ ಕಳ್ಳುಬಳ್ಳಿ ಎಂದುಕೊಂಡಿದ್ದೇ ಈ ಹೊತ್ತಿನ ದುರಂತ.

ಈ ಹೊತ್ತಿನ ಸಾಹಿತ್ಯ ಮತ್ತು ಸಾಹಿತಿಗಳು ಏನೆಲ್ಲಾ ಹೇಳುತ್ತಾರೆ ಎಂಬುದಕ್ಕಿಂತ ಕುತೂಹಲವಾದದ್ದು ಏನೆಂದರೆ-ಅವರು ಯಾವೆಲ್ಲ ಸಂಗತಿಗಳ ಕುರಿತು ಮೌನ ವಹಿಸುತ್ತಾರೆ ಎಂಬ ವಿಚಾರ.

ಇನ್ನು, ರಾಜಕಾರಣಿಗಳಿಗೂ ವಿವೇಕ ಎನ್ನುವುದು ಮುದಿವಯಸ್ಸಿನ ಹಾಗೆ, ಅನಿವಾರ್ಯವಾಗಿ ಬಂದೇ ಬರುತ್ತದೆ. ಆದರೆ ಅದನ್ನು ಮೂಡಿಸುವ ಲೇಖಕರಿಗೆ ಮೊದಲು ಜವಾಬ್ದಾರಿ ಇರಬೇಕು.

ಈ ಹಿಂದೆಯೂ ಈ ತರಹದ ಬೆಳವಣಿಗೆಗಳು ನಡೆದೇ ಇಲ್ಲ ಎನ್ನುವಂತಿಲ್ಲ. ತಾನು ನಂಬಿದ್ದ ಸಿದ್ಧಾಂತಗಳಿಗೆ ವಿರೋಧಿಯಾಗಿದೆ ಎಂದು ಗೊತ್ತಿದ್ದರೂ ಸಹ ದಲಿತ ಕವಿಯೊಬ್ಬರು ಆ ಪಕ್ಷದೊಂದಿಗೆ ಗುರುತಿಸಿಕೊಂಡರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ, ಮುಂದೊಂದು ದಿನ ಆ ಪಕ್ಷದ ವಿಧಾನ ಪರಿಷತ್ ಸದಸ್ಯರೂ ಆದರು. ಅವರನ್ನು ರೋಲ್ ಮಾಡೆಲ್ ಎಂದು ಆರಾಧಿಸುತ್ತಿದ್ದ ಸಾಹಿತ್ಯದ ಒಂದು ವರ್ಗ ತೀವ್ರ ನಿರಾಸೆಗೊಂಡಿತು. ಆಗ ಆ ಸಾಹಿತಿ ತನ್ನ ಆಪ್ತರೊಂದಿಗೆ ‘‘ನೋಡಿ, ನಾನೂ ನಿವೃತ್ತನಾಗಿದೀನಿ. ನನ್ನ ಮನೆಯ ಸಾಲದ ಇ.ಎಂ.ಐ. ಹಣವನ್ನು ಪಾವತಿಸಲು ಇದನ್ನು ಒಪ್ಪಿಕೊಳ್ಳಲೇಬೇಕು’’ ಎಂದು ಹೇಳಿಕೊಂಡರಂತೆ.

ನಮಗೆ ದೇಶವೆಂದರೆ ಪ್ರೀತಿ ಇರಬೇಕು ನಿಜ, ಆದರೆ ಪ್ರಭುತ್ವವೆಂದರೆ ದ್ವೇಷವೇ ಇರಬೇಕೆಂದೇನಿಲ್ಲ, ಒಂದಷ್ಟು ಅಂತರ ಇದ್ದರೆ ಸಾಕು ಎಂಬುದನ್ನು ಸಾಹಿತ್ಯ ವಲಯ ಅರ್ಥಮಾಡಿಕೊಳ್ಳಬೇಕು.

ವೀರೇಂದ್ರ ಪಾಟೀಲರ ಕಾಲದಲ್ಲಿ ಸಾಹಿತಿಗಳ ಪಿಸುಮಾತು ಕೇಳಿಸುತ್ತಿತ್ತು. ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಸಾಹಿತಿಗಳ ಮಾತು ಕೇಳಿಸುತ್ತಿದ್ದವು.ವೀರಪ್ಪ ಮೊಯ್ಲಿಯವರೂ ತಮ್ಮ ಕಾಲದಲ್ಲಿ ಕನ್ನಡದ ಅಸ್ಮಿತೆಯ ಪ್ರತೀಕವೆಂಬಂತೆ ಕನ್ನಡ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಕಾರಣರಾದರು. ಬಂಗಾರಪ್ಪನವರ ಕಾಲದಲ್ಲಿ ಜೋರಾಗಿಯೇ ಡೊಳ್ಳಿನ ಸದ್ದು ಕೇಳಿಸಿತು. ಪಟೇಲರ ಕಾಲದಲ್ಲಿ ಕೂಡ ಕೇಳಿಸಿದವು. ಕುಮಾರಸ್ವಾಮಿಯವರ ಕಾಲದಲ್ಲಿ ‘‘ಯಾರ್ರೀ ಅನಂತಮೂರ್ತಿ?’’ ಎಂದೂ ಪ್ರಶ್ನಿಸಿದರು. ಇದೀಗ ಆಡಳಿತಾರೂಢ ಮಂತ್ರಿಗಳ ದೃಷ್ಟಿಯಲ್ಲಿ ಸಾಹಿತ್ಯಲೋಕದ ತಾರೆಗಳು ಎಂದು ಭಾವಿಸಿಕೊಂಡವರೆಲ್ಲ ಪಕ್ಷದ ಗುಲಾಮರು ಎಂಬಂತೆ ಮಾತನಾಡಿದ್ದಾರೆ.

ಸರ್ವಾಧಿಕಾರಿ ಹಿಟ್ಲರ್‌ನ ಜರ್ಮನಿಯಲ್ಲಿ ತ್ಯಾಜ್ಯ ವರ್ಗಗಳ ಜನರನ್ನು ‘ನಿಷ್ಪ್ರಯೋಜಕ ಕೂಳಿನವರು’ಎಂಬ ಹೆಸರಿನಿಂದ ಕರೆಯತ್ತಿದ್ದರಂತೆ ಎಂಬುದೂ ವರ್ತಮಾನದಲ್ಲಿ ನೆನಪಾಗುತ್ತಿದೆ.

**

ಅಂತೂ, ರಾಜಕೀಯ ಪಕ್ಷ ಸಿದ್ಧಾಂತದ ನಾಯಕರೊಂದಿಗೆ ನಡೆಸಲಾದ ಅಕಾಡಮಿಗಳ ಸಭೆ: ಸಾಹಿತ್ಯ ಲೋಕದ ಆತಂಕಗಳ ಪ್ರತೀಕದಂತೆ ಕಾಣಿಸುತ್ತಿರುವುದು ಮತ್ತು ಮುಂದೆ ಎದುರಾಗಲಿರುವ ದುರಂತಗಳಿಗೆ ಮುನ್ನುಡಿಯಂತೆ ಗೋಚರಿಸುತ್ತಿರುವುದು ಸುಳ್ಳಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಿ.ಶ್ರೀನಿವಾಸ

contributor

Similar News