ಮೋದಿಯವರ 100 ದಿನಗಳ ಯೋಜನೆಗಳು ಏನಾದವು?

ಚುನಾವಣಾ ಪ್ರಚಾರ ಸಂದರ್ಭದ ಇಂಟರ್‌ವ್ಯೆನಲ್ಲಿ ಮೋದಿ ಪ್ಲ್ಯಾನ್ ತಯಾರಿದೆ ಎಂದಿದ್ದರು. ಸುದೀರ್ಘ ಸಮಾಲೋಚನೆ ಮಾಡಿ ಪ್ಲ್ಯಾನ್ ತಯಾರು ಮಾಡಲಾಗಿದೆ ಎಂದಿದ್ದರು. ಇಷ್ಟು ಹೇಳಿ, ಸರಕಾರವನ್ನು ರಚಿಸಿದವರು ಈಗೇಕೆ ಸಮಯ ಹಾಳು ಮಾಡುತ್ತಿದ್ದಾರೆ? ರೆಡಿ ಇರುವ ಪ್ಲ್ಯಾನ್ ಮೇಲೆ ಕೆಲಸ ಆಗಲೇ ಶುರು ಮಾಡಿರಬೇಕಿತ್ತಲ್ಲವೇ? ತಯಾರಿದೆ ಎಂದವರು ದೇಶದೆದುರು ಇಡುವುದಕ್ಕೆ ಯಾಕೆ ಇನ್ನೂ ಮುಂದಾಗಿಲ್ಲ?

Update: 2024-07-22 10:36 GMT

ತಿಂಗಳಾನುಗಟ್ಟಲೆ ಮಡಿಲ ಮಾಧ್ಯಮಗಳಲ್ಲಿ ಒಂದೇ ವಿಷಯದ ಮೇಲೆ ಸುದ್ದಿ ಪ್ರಕಟವಾಗುತ್ತದೆ ಮತ್ತು ಮೋದಿ ಸರಕಾರ ಅದೆಷ್ಟು ಕೆಲಸ ಮಾಡುತ್ತದೆ ಎಂಬ ಇಮೇಜ್ ಸೃಷ್ಟಿಸಲಾಗುತ್ತದೆ.

ಆದರೆ ಆಮೇಲೆ ನಿಜವಾಗಿ ಎಷ್ಟು ಕೆಲಸ ನಡೆದಿದೆ ಎಂಬುದನ್ನು ಮಾತ್ರ ಯಾವ ಮೀಡಿಯಾ ಕೂಡ ಹೇಳುವುದೇ ಇಲ್ಲ.

ಮೋದಿ ಮೂರನೇ ಅವಧಿಯ ಮೊದಲ 100 ದಿನಗಳಿಗಾಗಿ 50ರಿಂದ 70 ಗುರಿಗಳನ್ನು ಇಟ್ಟುಕೊಳ್ಳಲಾಗಿದೆ, 75ರಿಂದ 80 ಪ್ಲ್ಯಾನ್‌ಗಳು ಪಟ್ಟಿಯಲ್ಲಿವೆ ಎಂದೆಲ್ಲ ಅವುಗಳು ಬೊಬ್ಬೆ ಹೊಡೆದದ್ದೇ ಹೊಡೆದದ್ದು. ಆದರೆ ಈಗ 50 ದಿನಗಳೇ ಆಗುತ್ತಾ ಬಂದರೂ ಅವಕ್ಕೆ ಬಾಯಿಯೇ ಇಲ್ಲದಂತಾಗಿದೆ.

ಅಜೆಂಡಾ, ಅಜೆಂಡಾ ಎನ್ನಲಾಯಿತೇ ಹೊರತು, 50ರಿಂದ 70ರಷ್ಟು ಗುರಿಗಳು, 75ರಿಂದ 80 ಪ್ಲ್ಯಾನ್‌ಗಳು ಎನ್ನಲಾಯಿತೇ ಹೊರತು, ಏನು ಯೋಜನೆ ಎಂದು ಆಗಲೂ ಹೇಳಲಿಲ್ಲ ಈಗಂತೂ ಹೇಳುವುದೇ ಇಲ್ಲ.

ಬರೀ ನಂಬರುಗಳನ್ನು ತೋರಿಸಿ ಮರುಳು ಮಾಡುವುದಕ್ಕಷ್ಟೇ ಮೀಡಿಯಾಗಳ ಅರಚಾಟ ಸೀಮಿತವಾಗಿತ್ತು.

ಚುನಾವಣಾ ಪ್ರಚಾರ ಸಂದರ್ಭದ ಇಂಟರ್‌ವ್ಯೆನಲ್ಲಿ ಮೋದಿ ಕೂಡ ಪ್ಲ್ಯಾನ್ ತಯಾರಿದೆ ಎಂದಿದ್ದರು. ಸುದೀರ್ಘ ಸಮಾಲೋಚನೆ ಮಾಡಿ ಪ್ಲ್ಯಾನ್ ತಯಾರು ಮಾಡಲಾಗಿದೆ ಎಂದಿದ್ದರು. ಇಷ್ಟು ಹೇಳಿ, ಸರಕಾರವನ್ನು ರಚಿಸಿದವರು ಈಗೇಕೆ ಸಮಯ ಹಾಳು ಮಾಡುತ್ತಿದ್ದಾರೆ? ರೆಡಿ ಇರುವ ಪ್ಲ್ಯಾನ್ ಮೇಲೆ ಕೆಲಸ ಆಗಲೇ ಶುರು ಮಾಡಿರಬೇಕಿತ್ತಲ್ಲವೇ? ತಯಾರಿದೆ ಎಂದವರು ದೇಶದೆದುರು ಇಡುವುದಕ್ಕೆ ಯಾಕೆ ಇನ್ನೂ ಮುಂದಾಗಿಲ್ಲ?

ಹೆಡ್‌ಲೈನ್‌ಗಳಲ್ಲಿ ಮಾತ್ರವೇ ಕೆಲಸ ಮಾಡುತ್ತಿರುವ ಹಾಗೆ ತೋರಿಸಿಕೊಳ್ಳುವ ಸರಕಾರದ ಕೆಲಸ ಈಗಲೂ ಏನೂ ಕಾಣುತ್ತಿಲ್ಲ. ಜನರು ಹೆಡ್‌ಲೈನ್‌ಗಳನ್ನು ನೋಡಿ ಸಂಭ್ರಮಪಡಬೇಕೇ?

ಅಧಿಕಾರಕ್ಕೆ ಬಂದ ಮೇಲೆ ಮೊದಲ 100 ದಿನಗಳಿಗಾಗಿ ನಿಮ್ಮ ಪ್ಲ್ಯಾನ್ ಏನು ಎಂದು ಮೋದಿ ಮಂತ್ರಿಗಳನ್ನು ಕೇಳಿದರು ಎಂದು ಸುದ್ದಿ ಪ್ರಕಟವಾದಾಗ ಮೋದಿ ಎಷ್ಟೊಂದು ದೂರದ ಆಲೋಚನೆ ಮಾಡುತ್ತಾರಲ್ಲ ಎಂದು ಎಲ್ಲರೂ ಅಂದುಕೊಂಡಿರಲೇಬೇಕು.

ವಿಕಸಿತ ಭಾರತ 2047ಕ್ಕಾಗಿ

ಮೋದಿ ವಿಷನ್ ಏನು?

ವಿಕಸಿತ ಭಾರತಕ್ಕಾಗಿ ಎರಡು ವರ್ಷಗಳ ಬ್ಲೂಪ್ರಿಂಟ್ ತಯಾರಾಗಿಬಿಟ್ಟಿದೆ ಎಂದು ಹೇಳಲಾಗುತ್ತದೆ.

ನೂರು ದಿನಗಳ ಮತ್ತು ಐದು ವರ್ಷಗಳ ಪ್ಲ್ಯಾನ್ ರೆಡಿ ಮಾಡಿ ಎಂದು ಮಂತ್ರಿಗಳಿಗೆಲ್ಲ ಮೋದಿ ತಾಕೀತು ಮಾಡಿದ್ದಾರೆ ಎಂದು ಬರೆಯಲಾಗುತ್ತದೆ.

ವಿಕಸಿತ ಭಾರತ ಪ್ಲ್ಯಾನ್ ತಯಾರು ಮಾಡಲು ಮೋದಿ ಸರಕಾರ 2,700ಕ್ಕೂ ಹೆಚ್ಚು ಸಭೆಗಳು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳನ್ನು ಆಯೋಜಿಸಿದೆ ಮತ್ತು 20 ಲಕ್ಷಕ್ಕೂ ಹೆಚ್ಚು ಯುವಕರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದೆಲ್ಲ ಹೇಳಿಕೊಳ್ಳಲಾಗಿತ್ತು.

ಇಷ್ಟೆಲ್ಲ ಆದ ಮೇಲೂ ಅಜೆಂಡಾ ಏನಿದೆ, ಪ್ಲ್ಯಾನ್ ಏನಿದೆ ಎನ್ನುವುದು ಮಾತ್ರ ಯಾರಿಗೂ ಗೊತ್ತಿಲ್ಲ.

ಮೊನ್ನೆ ಜುಲೈ 17ರಂದು ಒಂದು ಸುದ್ದಿ ಪ್ರಕಟವಾಗುತ್ತದೆ.

ಸರಕಾರದ 100 ದಿನಗಳಲ್ಲಿ ಪ್ರತೀ ಸಚಿವಾಲಯಕ್ಕೂ ಒಂದೊಂದು ಪ್ಲ್ಯಾನ್ ಜಾರಿಗೆ ಕ್ಯಾಬಿನೆಟ್ ಕಾರ್ಯದರ್ಶಿ ಸೂಚಿಸಿದ್ದಾರೆ ಎಂದೂ, ಅದರಿಂದ ಜನಸಾಮಾನ್ಯರ ಬಾಳು ಬೆಳಗಿಬಿಡಲಿದೆ ಎನ್ನುವ ಹಾಗೆಯೂ ಬರೆಯಲಾಗುತ್ತದೆ.

ಇದೆಲ್ಲ ಸರಕಾರ ಏನೋ ಮಾಡುತ್ತಿದೆ ಎಂದು ಜನರಿಗೆ ಅನ್ನಿಸಬೇಕು. ಅಬ್ಬರ ಎಬ್ಬಿಸುತ್ತಲೇ ಇರಬೇಕು, ಜನ ಮೋಡಿಗೊಳಗಾಗುತ್ತಲೇ ಇರಬೇಕು, ಮೈಮರೆಯುತ್ತಲೇ ಇರಬೇಕು ಎನ್ನುವಂತಿದೆ.

ಇದರ ನಡುವೆಯೇ ಮತ್ತೂ ಒಂದು ಸುದ್ದಿ ಏನೆಂದರೆ, ಬಜೆಟ್ ಬಳಿಕ 100 ದಿನಗಳ ಅಜೆಂಡಾ ಘೋಷಣೆಯಾಗಲಿದೆ ಅನ್ನುವುದು.

ಬಜೆಟ್ ನಂತರ ಮಂತ್ರಿಗಳೊಂದಿಗೆ ಮೋದಿ ಈ ವಿಚಾರವಾಗಿ ಸಭೆ ನಡೆಸುತ್ತಾರಂತೆ. ಸಚಿವಾಲಯಗಳು ನೂರು ದಿನಗಳ ಪ್ಲ್ಯಾನ್‌ಗೆ ಅಂತಿಮ ರೂಪ ನೀಡಲಿವೆಯಂತೆ. ಎಲ್ಲ ಅಂತೆ ಕಂತೆ.

ಚುನಾವಣೆಗೂ ಮೊದಲೇ ಪ್ಲ್ಯಾನ್ ರೆಡಿ ಎಂದಿದ್ದೂ ಈ ಮೀಡಿಯಾಗಳೇ. ಈಗ ಬಜೆಟ್ ಬಳಿಕ ಸಭೆ ಎನ್ನುತ್ತಿರುವುದೂ ಇದೇ ಮೀಡಿಯಾಗಳೇ.

ಏನಿದು ಅವುಗಳಲ್ಲಿಯೇ ಇರುವ ಗೊಂದಲ? ಯಾಕೆ ಹೀಗೆ ಭ್ರಮೆ ಸೃಷ್ಟಿಸುವ ಆಟ?

ಕೆಲ ಮಂತ್ರಿಗಳು ಉನ್ನತ ಮಟ್ಟದ ಸಭೆ ನಡೆಸಿದರು ಎಂಬ ಸುದ್ದಿಗಳಿವೆ. ಆ ಸಭೆಗಳಲ್ಲಿ ಈಗಾಗಲೇ ಇರುವ ಯೋಜನೆಗಳ ಬಗ್ಗೆ ಚರ್ಚೆಯಾಯಿತು ಎಂದು ಹೇಳಲಾಗಿದೆ.

ಹಾಗಾದರೆ 100 ದಿನಗಳ ಹೊಸ ಪ್ಲ್ಯಾನ್ ಏನು, ಎಲ್ಲಿ?

ದಿಲ್ಲಿಯಲ್ಲಿ ಲೋಕಸಂವರ್ಧನ್ ಪರ್ವ ಉದ್ಘಾಟನೆ ಎಂಬ ಸುದ್ದಿಯೂ ಒಂದಿದೆ.

ಮಂತ್ರಿ ಕಿರಣ್ ರಿಜಿಜು ಅಲ್ಪಸಂಖ್ಯಾತರ ಯೋಜನೆಗಳ ವಿಚಾರದಲ್ಲಿನ ಸರಕಾರದ ಸಾಧನೆಗಳ ಬಗ್ಗೆ ಈ 10 ದಿನಗಳ ಪರ್ವದಲ್ಲಿ ಬಿಂಬಿಸಲು ಮುಂದಾಗಿದ್ದಾರೆ. ಇದು ಕೂಡ 100 ದಿನಗಳ ಪ್ಲ್ಯಾನ್‌ನ ಭಾಗವೇ ಆಗಿದೆಯೆಂದು ಮಾಧ್ಯಮಗಳು ಹೇಳುತ್ತಿವೆ.

ಇನ್ನೊಂದೆಡೆ ಮಂತ್ರಿ ಜೋತಿರಾದಿತ್ಯ ಸಿಂಧಿಯಾ ಇನ್ನೂ ಡಾಕ್ ಕಮ್ಯುನಿಟಿ ಡೆವಲಪ್‌ಮೆಂಟ್ ಪ್ರೋಗ್ರಾಮ್ ಬಗ್ಗೆಯೇ ಮಾತಾಡುತ್ತಿದ್ದಾರೆ.

ಇವಾವುದೂ ಹೊಸ ಯೋಜನೆಗಳಂತೂ ಅಲ್ಲ.

ಅಂದಮೇಲೆ 100 ದಿನಗಳ ಹೊಸ ಪ್ಲ್ಯಾನ್ ಯಾವುದು?

ಕಳೆದ ಆರೂವರೆ ತಿಂಗಳಿಂದ ಅಬ್ಬರಿಸಿ ಬೊಬ್ಬಿಟ್ಟಿದ್ದು ಇಷ್ಟಕ್ಕೆಯೇ? ಹಳೆಯ ಸಣ್ಣಪುಟ್ಟ ಯೋಜನೆಗಳನ್ನೇ ಎತ್ತಿಕೊಂಡು 100 ದಿನಗಳ ಪ್ಲ್ಯಾನ್ ಎಂದು ಈಗ ಯಾಕೆ ತೋರಿಸಲಾಗುತ್ತಿದೆ?

ಸ್ಕೂಲು ಶರುವಾಗುವ ಮೊದಲೇ ಹೋಂ ವರ್ಕ್ ಮುಗಿಸಿಬಿಟ್ಟ ಹಾಗೆ ಸರಕಾರ 100 ದಿನಗಳ ಪ್ಲ್ಯಾನ್ ಎಂದು ಕೊಚ್ಚಿಕೊಂಡದ್ದು ಯಾಕೆ? ಯಾವುದು ನಿಜವಾಗಿಯೂ ಇವರ ಅಜೆಂಡಾ ಅಗಿತ್ತು? ಸುಳ್ಳು ಹೇಳಿ ಗೆಲ್ಲುವುದಾಗಿತ್ತೇ?

ನಿಮ್ಮ ಅಂಗಡಿಗಳಲ್ಲಿ ನಿಮ್ಮ ಹೆಸರು ಹಾಕಿ ಎಂದು ಅಲ್ಲಿ ಬೆದರಿಸುವುದು, ಇಲ್ಲಿ ಅವರಿಗಾಗಿ ತಮ್ಮ ಯೋಜನೆಗಳ ಬಗ್ಗೆ ಬಡಾಯಿ ಕೊಚ್ಚುವುದು ಎರಡೂ ಒಂದೇ ಸಮಯದಲ್ಲಿ ನಡೆಯುತ್ತವೆ.

ನೋಟ್ ಬ್ಯಾನ್ ಮಾಡಿದಾಗ ಐವತ್ತು ದಿನ ಕೊಡಿ, ಎಲ್ಲ ಸರಿ ಮಾಡುತ್ತೇವೆ ಅಂದಿದ್ದರು ಮೋದಿ. ಆದರೆ ನಂತರ ಆದದ್ದೇನು?

2022ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ, ನಗರಗಳಲ್ಲಿ ಪ್ರತಿಯೊಬ್ಬರಿಗೂ ಮನೆ ಸಿಗುವ ಹಾಗೆ ಮಾಡುತ್ತೇವೆ ಅಂದಿದ್ದರು ಮೋದಿ. ಅದು ಸಾಧ್ಯವಾಯಿತೇ?

2024ರಲ್ಲೇ ಪ್ರತಿ ವರ್ಷ ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಂದಿದ್ದರು ಮೋದಿ. ಆದರೆ ಇದ್ದ ಉದ್ಯೋಗಗಳೂ ಇಲ್ಲವಾಯಿತು.

ಇನ್ನು ಜನತೆ ಈ ಸರಕಾರದಿಂದ ಯಾವ ನಿರೀಕ್ಷೆ ಇರಿಸಿಕೊಳ್ಳಲು ಸಾಧ್ಯ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಎಚ್.ಕೆ.

contributor

Similar News