ಸೃಜನಶೀಲ ಬೆಳಗಿನ ಪರಿ
ಬೇಂದ್ರೆಯವರ ಬೆಳಗು ಕವಿತೆಯನ್ನು ನೀವು ಓದಿರಬಹುದು. ಓದಿರದಿದ್ದರೆ, ಪುಟ್ಟಣ್ಣ ಕಣಗಾಲ್ ಬೆಳ್ಳಿ ಮೋಡ ಸಿನೆಮಾದಲ್ಲಿ ಮಿನುಗುತಾರೆ ಕಲ್ಪನಾ-ಕಲ್ಯಾಣ್‌ಕುಮಾರ್ ಸುತ್ತ ಚಿತ್ರೀಕರಿಸಿರುವ ವಿಜಯಭಾಸ್ಕರ್ ಸಂಗೀತ ನಿರ್ದೇಶನದ ಹಾಡನ್ನು ನೋಡಿರಬಹುದು; ಕೇಳಿಸಿಕೊಂಡಿರಬಹುದು. ಈ ಸಿನೆಮಾ ಹಾಡಿನಲ್ಲಿ ಬೆಳಗು ಕವಿತೆಯ ಕೊನೆಯ ಸಾಲು ಇಲ್ಲ! ಅದು ಹಾಡಿನ ಅಳತೆಗೆ ಜಾಸ್ತಿಯಾಯಿತೆಂದೋ, ಚಿತ್ರೀಕರಣದ ರೊಮ್ಯಾಂಟಿಕ್ ಮೂಡಿಗೆ ಅಥವಾ ರಾಗಕ್ಕೆ ಒಗ್ಗುವುದಿಲ್ಲವೆಂದೋ ಅದನ್ನು ಕೈ ಬಿಟ್ಟಿರಬಹುದು! ಆದ್ದರಿಂದಲೋ ಏನೋ, ಇದು ಬರಿ ಬೆಳಗಲ್ಲೋ ಅಣ್ಣ! ಎಂಬ ಈ ಕವಿತೆಯ ಕೊನೆಯ ಸಾಲು ಅನೇಕರಿಗೆ ನೆನಪಿಲ್ಲ.
ನೀವು ತಿಳಿದಂತೆ ಬೆಳಗು ಕವಿತೆ ಬರೀ ಬೆಳಗಿನ ಪ್ರಕೃತಿಯ ವರ್ಣನೆಯಲ್ಲ; ಇದರ ಅರ್ಥ ಇನ್ನೂ ವಿಸ್ತಾರವಾಗಿದೆ ಎಂದು ಕವಿತೆಯ ಕೊನೆಯ ಸಾಲು ನಮ್ಮನ್ನು ಕೆಣಕುವಂತಿದೆ! ಕೊಂಚ ಹತ್ತಿರದಿಂದ ಓದಿ ನೋಡಿದರೆ, ಇದು ಬರಿ ಬೆಳಗಲ್ಲೋ ದಡ್ಡ! ಎಂದು ಓದುಗನನ್ನು ಕೂಡ ಕವಿ ಕಾಲೆಳೆದಂತಿದೆ.
ಪ್ರತೀ ಬೆಳಗೂ ಬರಿ ಬೆಳಗಾಗದೆ, ಪ್ರತೀದಿನವೂ ಒಂದು ಸುಂದರ ಗೀಳು ನಮ್ಮನ್ನು ಆವರಿಸಿದರೆ ಅಥವಾ ನಿನ್ನೆಯ ಸುಂದರ ಗೀಳು ಇವತ್ತೂ ಮುಂದುವರಿದರೆ ಪ್ರತೀ ದಿನವೂ ಎಷ್ಟೊಂದು ಸೃಜನಶೀಲವಾಗಿರಬಲ್ಲದು! ಕೆಲ ವರ್ಷಗಳ ಕೆಳಗೆ ಲಂಕೇಶರ ಪ್ರಾತಿನಿಧಿಕ ಬರಹಗಳ ಇಂಗ್ಲಿಷ್ ಅನುವಾದಗಳ ಸಂಕಲನಕ್ಕೆ ಅವರ ಕತೆ, ಬರಹಗಳನ್ನು ಅಚ್ಚಿ
ಗೆ ಸಿದ್ಧಪಡಿಸುತ್ತಿದ್ದೆ; ನಾನು ಸದಾ ಇಷ್ಟ ಪಡುವ ಸೃಜನಶೀಲ ಒತ್ತಡದ ಗಳಿಗೆಗಳು ಇಂಥವು. ಯಾವುದೇ ಮುಖ್ಯವಾದ ಕೆಲಸ ಹೀಗೆ ಸುಂದರವಾದ ಗೀಳಿನಂತೆ ಎ ಲವ್ಲಿ ಅಬ್ಸೆಶನ್ ಥರ- ನಮ್ಮನ್ನು ಪಟ್ಟಾಗಿ ಹಿಡಿದರೆ, ಮಾಡುವ ಕೆಲಸದ ಶ್ರಮವೇ ತಿಳಿಯುವುದಿಲ್ಲ. ಇಲ್ಲಿ ಸುಂದರ ಗೀಳು ಎಂಬ ಬಣ್ಣನೆಯನ್ನು ಪಾಸಿಟಿವ್ ಅರ್ಥದಲ್ಲಿ ಬಳಸಿರುವೆ. ಅವತ್ತು ನನಗೆ ಆದದ್ದು ಹಾಗೆಯೇ. ಆ ಸೃಜನಶೀಲ ಒತ್ತಡದ ಬೆಳಗಿನ ಸುಂದರ ಗೀಳಿನಲ್ಲಿ ನಾನು ಓದು, ಬರಹದ ಕೆಲಸದಲ್ಲಿ ಅಕ್ಷರಶಃ ಮೈ ಮರೆತೆ!
ಬೆಳ್ಳಂಬೆಳಗಿನ ಇಂಥ ಸುಂದರ ಒತ್ತಡದ ರೀತಿಗಳ ಬಗ್ಗೆ ನಾನು ಕಂಡುಕೊಂಡಿರುವುದನ್ನು ಹೇಳಿ ಮುಂದೆ ಸಾಗುತ್ತೇನೆ: ನನಗನ್ನಿಸುವಂತೆ, ಪ್ರತೀ ದಿನ ಬೆಳಗಾಗ ನಾನೆದ್ದು ಏನು ಮಾಡಬೇಕು ಎಂಬ ಪ್ರಶ್ನೆಯೇ ಏಳದಂತೆ ಹಿಂದಿನ ದಿನದ ಕೆಲಸ ಬೆಳ್ಳಂಬೆಳಗಿನಿಂದಲೇ ಮುಂದುವರಿಯಬೇಕು; ಅಥವಾ ಹೊಸ ಕೆಲಸವೊಂದು ಆ ಬೆಳಗು ಬಂದು ನಮ್ಮನ್ನು ಪಟ್ಟಾಗಿ ಹಿಡಿಯಬೇಕು. ಹೀಗಾದರೆ ಮಾತ್ರ ನಾವು ಜೀವಂತವಾಗಿರುತ್ತೇವೆ. ಇದು ನನ್ನ ಅನುಭವ ಮತ್ತು ನಂಬಿಕೆ.
ಈ ಅರಿವು ನನಗೆ ಬಂದದ್ದು ಹಲವು ದಶಕಗಳ ಹಿಂದಿನ ನಮ್ಮ ಹಳ್ಳಿಯ ರೈತರ ಜೀವನ ಕ್ರಮ ಒಂದು ದಿನ ನನ್ನ ಕಣ್ಣೆದುರು ಬಂದಿದ್ದರಿಂದ. ಬಾಲ್ಯದಲ್ಲಿ ರೈತಾಪಿ ಜೀವನವನ್ನು ಹತ್ತಿರದಿಂದ ನೋಡುತ್ತಿದ್ದಾಗ ಅದು ನನಗೆ ಅರ್ಥವಾಗಿರಲಿಲ್ಲ; ಊರು ಬಿಟ್ಟ ಹಲವು ವರ್ಷಗಳ ನಂತರ ಹಳ್ಳಿಗರ ಜೀವನಕ್ರಮದ ಒಂದು ಸುಂದರ ಸಂದೇಶ ನನ್ನ ಅರಿವಿಗೆ ಬರತೊಡಗಿತು: ಕೋಳಿ ಕೂಗುವ ಹೊತ್ತಿಗೆ ಎದ್ದ ರೈತ ಸಣ್ಣಯ್ಯನ ತಲೆ ತುಂಬಾ ಇವತ್ತು ಯಾವ ಹೊಲದಲ್ಲಿ ಉಕ್ಕೆ ಹೊಡೆಯಬೇಕು, ಎಲ್ಲಿ ಯಾವ ಗಿಡ ಸವರಬೇಕು, ಯಾರ ಮನೆಯಿಂದ ಬಿತ್ತನೆ ಬೀಜ ತರಬೇಕು...ಹೀಗೆ ಆ ದಿನದ ಕೆಲಸಗಳು ಆವರಿಸಿರುತ್ತಿದ್ದವು. ಬೆಳಗಾಗೆದ್ದು ಇಷ್ಟೊಂದು ಕೆಲಸಗಳ ಬೆನ್ನು ಹತ್ತಿದ ಸಣ್ಣಯ್ಯನಿಗೆ ಬಿಡುವೆಂಬುದೇ ಇರುತ್ತಿರಲಿಲ್ಲ; ಯಾರ ಮನೆ ಮುರಿಯಬೇಕು ಎಂಬ ಹಲ್ಲಂಡೆಗೂ ಅವನ ತಲೆಯಲ್ಲಿ ಜಾಗ ಇರುತ್ತಿರಲಿಲ್ಲ,
ಬುದ್ಧನಿಗೆ ಜ್ಞ್ಞಾನೋದಯವಾದ ಹಾಗೆ ಒಂದು ದಿನ ನನಗೆ ಈ ಜೀವನಕ್ರಮದ ಮಹತ್ವ ಅರ್ಥವಾಯಿತು. ಅದು ಮತ್ತೆ ನನಗೆ ನೆನಪಾದದ್ದು ಒಂದು ಬೆಳಗಿನ ಜಾವ ಸೂಸನ್ ಡೇನಿಯಲ್ ಅನುವಾದಿಸಿದ ಲಂಕೇಶರ ದಾಳಿ ಕತೆಯ ಇಂಗ್ಲಿಷ್ ಅನುವಾದ ದ ಇನ್ವೇಶನ್ ಕತೆಯನ್ನು ಅಚ್ಚಿಗೆ ಸಿದ್ಧಪಡಿಸುತ್ತಿದ್ದಾಗ. ಆ ಕತೆಯ ಸಣ್ಣ ಪುಟ್ಟ ಎಡಿಟಿಂಗ್ ಮಾಡುತ್ತಾ ಮತ್ತೆ ಮತ್ತೆ ಕೆಲವು ಪ್ಯಾರಾಗಳನ್ನು ಓದುತ್ತಿದ್ದೆ. ನೋಡನೋಡುತ್ತಲೇ ಗಂಟೆ ಬೆಳಗ್ಗೆ ಆರೂವರೆ ಆಗತೊಡಗಿತ್ತು. ಓದುತ್ತಾ ಓದುತ್ತಾಇದು ಯಾವ ಕತೆ, ಇದು ಯಾವ ಭಾಷೆಯ ಕತೆ ಎಂಬುದೇ ಮರೆತು ಹೋಗಿ ಕೇವಲ ಕಥಾಲೋಕವೊಂದೇ ನನ್ನೆದುರಿಗಿತ್ತು.
ದಾಳಿ ಕತೆಯ ಬಿಡಿ ವಿವರಗಳು, ಘಟನಾವಳಿಗಳು, ಪಾತ್ರ-ಸನ್ನಿವೇಶಗಳ ಉದ್ವಿಗ್ನತೆ, ಭಯ, ನಿರೀಕ್ಷೆ, ಪ್ರೇಮ, ಕಾಮ, ಬಿಗಿದ ತಂತಿಯಿಂದ ಠಣ್ಣೆಂದು ಚಿಮ್ಮಿದ ಸ್ವರದಂತಿದ್ದ ಗದ್ಯ ಲಯ, ಸೇಡು, ರೋಮಾಂಚನ; ಜಾತಿ, ಧರ್ಮಗಳ ವಿಚಿತ್ರ ಒಳಸತ್ಯಗಳು, ಎಲ್ಲ ಎಲ್ಲೆಗಳನ್ನೂ ಮೀರುವ ಮಾನವ ಚೈತನ್ಯ, ಕತೆಯೇ ಉಸುರುವ ವಿಶಿಷ್ಟ ಸತ್ಯಗಳು, ಚರಿತ್ರೆಯ ಘಟನಾವಳಿಗಳ ಹೊಸ ಅರ್ಥಗಳು, ಸಂಕೇತಗಳು, ಮಾತಿನ ಪರಿಣಾಮ, ಭಾಷೆಯ ತೀವ್ರತೆ... ಇನ್ನೂ ಏನೇನೋ ನನ್ನನ್ನು ಆವರಿಸಿಕೊಳ್ಳತೊಡಗಿದವು. ಇಂಗ್ಲಿಷ್ ಭಾಷೆಯಲ್ಲೂ ಲಂಕೇಶರ ಕನ್ನಡದ ಒಗರು, ಬನಿ, ತಕ್ಷಣ ತಾಕುವ ಗುಣ...ಇವೆಲ್ಲ ಹಾಗೇ ಉಳಿದಿದ್ದವು.
ಅರೆರೆ! ಈ ಕತೆ ನಿಜಕ್ಕೂ ವಿಶಿಷ್ಟ ಕತೆ ಎನ್ನಿಸತೊಡಗಿತು. ಬರಬರುತ್ತಾ ಅದದ್ದು ಮಾತ್ರ ನಿಜಕ್ಕೂ ಸ್ಪಿರಿಚುವಲ್ ಅನುಭವ! ಆಗ ಏನಾಯಿತೆಂದರೆ, ಇದು ಲಂಕೇಶ್ ಕತೆಯೋ, ತೇಜಸ್ವಿ ಕತೆಯೋ ಇದ್ಯಾವುದೂ ನನ್ನ ಪ್ರಜ್ಞೆಯಲ್ಲೇ ಇರದೆ ಕೇವಲ ಕತೆಯಷ್ಟೇ ನನ್ನ ಜೊತೆ ಮಾತಾಡತೊಡಗಿತು. ಮೂಲದಲ್ಲಿ ಇದೊಂದು ಕನ್ನಡ ಕತೆ ಎಂಬುದು ಕೂಡ ಮರೆತು ಹೋಗಿ ಇಂಗ್ಲಿಷ್ ಕತೆಯಷ್ಟೇ ನನ್ನೊಡನೆ ಮಾತಾಡತೊಡಗಿತು. ಕತೆ ತನ್ನ ಅಸಾಮಾನ್ಯ ಗುಣಗಳನ್ನು ನನಗೆ ಮತ್ತೆ ಮನವರಿಕೆ ಮಾಡಿಕೊಡತೊಡಗಿತು.
ಇದು ಕತೆಯೊಂದು ತನ್ನ ಸೃಷ್ಟಿಕರ್ತನ ಹಂಗು ಕಳೆದುಕೊಂಡು ನಮ್ಮದಾಗುವ ಪರಿ. ಯಾವುದೇ ಬರಹವೊಂದು ತನ್ನ ಮೂಲ ಅಥವಾ ಬರೆದವರ ಹೆಸರು, ಹಿನ್ನೆಲೆ ಯಾವುದರ ಹೊರೆಯೂ ಇಲ್ಲದೆ, ಅದು ನಿಜಕ್ಕೂ ಶ್ರೇಷ್ಠವೆಂದು ನಮ್ಮೊಳಗು ಮೆಚ್ಚಿ ಅಹುದಹುದು ಎಂದು ಒಪ್ಪುವಂತೆ ಮಾಡುವ ವಿಸ್ಮಯಕರ ರೀತಿ ಇದು. ಇದೇ ನಿಜವಾದ ವಸ್ತುನಿಷ್ಠ ಆಯ್ಕೆಯತ್ತ ನಮ್ಮನ್ನು ಕರೆದೊಯ್ಯುವ ಅಪ್ರಜ್ಞ್ಞಾಪೂರ್ವಕ ಹಾದಿ. ಇದು ನಮ್ಮ ಓದು, ಆಯ್ಕೆ, ವಿಮರ್ಶೆಗಳಲ್ಲಿ ಸಾಧ್ಯವಾದಾಗ ಮಾತ್ರ ಎಲ್ಲ ಹಂಗು ಮೀರಿದ ಗ್ರಹಿಕೆ ಮತ್ತು ಆಯ್ಕೆ ಸಾಧ್ಯವಾಗಬಲ್ಲದು.
ಈ ಥರ ನಿಮಗೂ ಆಗುತ್ತಿದ್ದರೆ ಮಾತ್ರ ನೀವು ಮುಕ್ತ ಓದುಗ-ಓದುಗಿಯರು ಎಂದರ್ಥ! ಆಗ ನಿಮ್ಮ ಕೈಯಲ್ಲಿರುವ ಕೃತಿಯ ದೋಷಗಳೂ ಹೊಳೆಯಬಹುದು. ಅದು ಕೂಡ ವಸ್ತುನಿಷ್ಠ ಓದಿನ ಭಾಗವೇ. ಲೇಖಕ, ಲೇಖಕಿಯರ ಪ್ರಭಾವಳಿ ಮೀರಿ ಕೃತಿಯ ಗುಣ, ದೋಷಗಳು ಕಾಣುವ ಈ ಬಗೆ ಒಂದು ದೃಷ್ಟಿಯಿಂದ ಐಡಿಯಲ್. ಅಲ್ಲಿ ಕಂಡ ಗುಣ, ದೋಷಗಳೆರಡೂ ನಮಗೆ ಗುರುಗಳೇ: ಗುಣ ಕಂಡಾಗ ಈ ಥರ ಬರೆಯಬಹುದು ಎನ್ನುವ ಮಾದರಿ; ದೋಷ ಕಂಡಾಗ, ಈ ಥರ ಬರೆಯಬಾರದೆನ್ನುವ ಎಚ್ಚರಿಕೆ! ಇದಕ್ಕಿಂತ ಸಹಜ ಏಕಲವ್ಯ ಕಲಿಕೆ ಇನ್ಯಾವುದಿದೆ!
ಜೀವನದಲ್ಲಿ ಏನನ್ನು ತಪ್ಪಿಸಿಕೊಂಡರೂ, ಅದೃಷ್ಟವಶಾತ್ ಲೋಕದ ಶ್ರೇಷ್ಠ ಕೃತಿಗಳ ಸಂಗವನ್ನು ಮಾತ್ರ ಎಂದೂ ತಪ್ಪಿಸಿಕೊಳ್ಳದ ನನಗೆ ಈ ಥರದ ಪರವಶತೆಯ, ಕಲಿಕೆಯ ಅನುಭವ ಆಗಾಗ್ಗ್ಗ ಆಗುತ್ತಿರುತ್ತದೆ. ಎಷ್ಟೋ ಸಲ ಪ್ರತೀ ನಿತ್ಯ, ಹಗಲು-ರಾತ್ರಿ ಈ ಅನುಭವ ಆಗುತ್ತಿರುತ್ತದೆ! ಇದು ಕತೆ, ಥಿಯರಿ, ಕಾವ್ಯ, ತತ್ವಜ್ಞಾನ, ನಾಟಕ...ಹೀಗೆ ಯಾವ ಥರದ ಕೃತಿಗಳಿಂದಲಾದರೂ ಆಗುತ್ತಿರಬಹುದು. ಈ ವಿಷಯದಲ್ಲಿ ಮಾತ್ರ ನಾನು ಭಾಗ್ಯಶಾಲಿ. ಬರೆದವರ ಹೆಸರು, ಪುಸ್ತಕದ ಹೆಸರು ಎಲ್ಲ ಮರೆತು ಹೋದರೂ ಕೃತಿಗಳ ಅನುಭವ ಮಾತ್ರ ನನ್ನಲ್ಲಿ ಉಳಿದು ಬೆರೆತು ಹೋಗಿರುತ್ತದೆ; ಕರೆಯದಿದ್ದರೂ, ಕರುಣಾಳು ಬೆಳಕಿನಂತೆ ಬಂದು ಎಂಥೆಂಥದೋ ಮಬ್ಬಿನಲ್ಲಿ ಕೈ ಹಿಡಿದು ಮುನ್ನಡೆಸುತ್ತಿರುತ್ತದೆ.
ಹೀಗೆ ಯಾವ ಕೆಲಸವಾದರೂ ನಮಗರಿವಿಲ್ಲದೆಯೇ ನಮ್ಮನ್ನು ಹಿಡಿದರೆ ಮಾತ್ರ ಅದು ನಮ್ಮನ್ನು ಕ್ರಿಯೇಟಿವ್ ಆಗಿ ಇರಿಸುತ್ತದೆ; ಇದನ್ನೇ ನಾನು ಸುಂದರ ಗೀಳು ಅಥವಾ ಲವ್ಲಿ ಅಬ್ಸೆಶನ್ ಎಂದಿದ್ದು! ಹೀಗೆ ಒಬ್ಬ ಪ್ರೇಮಿಯ ಇಂಥ ಸುಂದರ ಗೀಳು-ಅಥವಾ ಲವ್ಲಿ ಅಬ್ಸೆಶನ್-ಇಲ್ಲದಿದ್ದರೆ ಯಾರೂ ಒಳ್ಳೆಯ ಲೇಖಕಿ-ಲೇಖಕ-ಓದುಗಿ-ಓದುಗ-ಪತ್ರಕರ್ತ-ಪತ್ರಕರ್ತೆ-ಟೀಚರ್-ವಿಜ್ಞ್ಞಾನಿ... ಏನೂ ಆಗುವುದಿಲ್ಲ; ನಮಗೆ ಇಂಥ ಸುಂದರ ಗೀಳಿಲ್ಲದಿದ್ದರೆ ಮೇಲೆ ಹೇಳಿದ ಎಲ್ಲ ವಲಯಗಳಲ್ಲೂ ಸಾಧಾರಣವಾದ, ಕಳಪೆಯಾದ ಅಥವಾ ಉತ್ತಮವಾದ ಜೀತಗಾರರಾಗಬಹುದು ಅಷ್ಟೆ! ನಮ್ಮ ಆಳದಲ್ಲಿ ಇಷ್ಟವಾಗದೆ, ನಮ್ಮ ಮನಸ್ಸಿಗೆ ಒಗ್ಗದೆ, ನಾವು ಮಾಡುವ ಕೆಲಸವೆಲ್ಲವೂ ಜೀತವೇ ಎಂಬರ್ಥದ ಮಾತುಗಳನ್ನು ಲಂಕೇಶರ ನೀಲು ಉಸುರಿದ ನೆನಪು.
ವಿಷಾದವೆಂದರೆ, ಎಲ್ಲ ಬೆಳಗುಗಳಲ್ಲೂ ನಮ್ಮ ಮನಸ್ಸಿಗೆ ಒಗ್ಗುವ ಕೆಲಸ ನಮ್ಮನ್ನು ಮುತ್ತದೇ ಇರಬಹುದು. ಆದರೆ ಬಹುತೇಕ ಬೆಳಗುಗಳಾದರೂ ಹೀಗಿದ್ದರೆ ನಾವು ಮಾಡಿದ್ದು ಅರ್ಥಪೂರ್ಣವಾಗಿರಬಲ್ಲದು.