ಭಾರತವನ್ನು ಅದರ ಪಾಡಿಗೆ ಬಿಟ್ಟುಬಿಡೋಣ, ಮೋದಿ ಸಾಹೇಬರೇ
ಮೋದಿ ಸಾಹೇಬರೇ, ನಮಸ್ಕಾರ.
ಐ ಥಿಂಕ್, ನಮ್ಮ ಕೆಲಸ ಆಗಿ ಬಿಟ್ಟಿದೆ.
ಉಳಿದದ್ದನ್ನು ಬಿಟ್ಟುಬಿಡೋಣ.
ಮುಸಲ್ಮಾನರನ್ನು ಬೆದರಿಸಿದ್ದಾಯಿತು,
ಹಿಂದೂಗಳನ್ನು ಬಡಿದೆಬ್ಬಿಸಿದ್ದಾಯಿತು,
ಎಲ್ಲಾ ಬಿಟ್ಟು ಮಂದಿರ ಕಟ್ಟಿದ್ದೂ ಆಯಿತು.
ಮಿತ್ರರಿಗೆ ಕೊಡಬೇಕಾದದ್ದನ್ನೆಲ್ಲ ಕೊಟ್ಟಾಯಿತು.
ಶತ್ರುಗಳನ್ನು ಸತಾಯಿಸಿ, ಹಿಂಸಿಸಿ ಉಸಿರುಗಟ್ಟಿಸಿದ್ದಾಯಿತು,
ಬೇಕಾದಷ್ಟು ಸುಳ್ಳು ಹೇಳಿದ್ದಾಯಿತು,
ಅಲ್ಲಲ್ಲಿ ವಿಷ ಬೆರೆಸಿ ಉಣಿಸಿದ್ದಾಯಿತು,
ಖರೀದಿಸಬೇಕಾದವರನ್ನು ಖರೀದಿಸಿದ್ದಾಯಿತು,
ಬಂಧಿಸ ಬೇಕಾದವರನ್ನು ಬಂಧಿಸಿದ್ದೂ ಆಯಿತು,
ಇನ್ನಾದರೂ ನಾವು ವಿರಮಿಸದಿದ್ದರೆ ಮೋದಿ ಸಾಹೇಬರೇ,
ಸಂಪೂರ್ಣ ಭಾರತ ಗುಜರಾತ್ನಂತಾಗಿ ಬಿಟ್ಟೀತು.
ನೆನಪಿರಲಿ! ಪಂಜಾಬ್, ಗುಜರಾತ್ ಅಲ್ಲ.
ಮಣಿಪುರವೂ ಗುಜರಾತ್ ಅಲ್ಲ.
ಗುಜರಾತ್ ಆಗಲು ತಮಿಳ್ನಾಡು ತಯಾರಿಲ್ಲ.
ಗೋವಾವನ್ನು ಗೋವಾ ಆಗಿರಲು ಬಿಟ್ಟುಬಿಡೋಣ,
ಲದ್ದಾಕ್ನಿಂದ ನದಿಗಳು ಹರಿಯುತ್ತಿರಲು ಬಿಡೋಣ,
ಐ ಥಿಂಕ್, ನಮ್ಮ ಕೆಲಸ ಮುಗಿದಿದೆ.
ಉಳಿದದ್ದನ್ನು ಅದರ ಪಾಡಿಗೆ ಬಿಟ್ಟು ಬಿಡೋಣ.
ಈಗಾಗಲೆ ಜನರಿಗೆ ನಮ್ಮ ಬಗ್ಗೆ ತುಂಬಾ ಅಂಜಿಕೆ ಇದೆ,
ಇನ್ನು ಎಷ್ಟೆಂದು ಹೆದರಿಸೋಣ?
ಇನ್ನಷ್ಟು ಹೆದರಿಸಿದರೆ, ಆಲೋಚಿಸಬಲ್ಲವರೆಲ್ಲಾ ಎಲ್ಲಿಗೆ ಹೋಗಬೇಕು?
ಎಲ್ಲರನ್ನೂ ನಾವು ಖರೀದಿಸಲು ಹೊರಟರೆ,
ತಮ್ಮನ್ನು ಮಾರಿಕೊಳ್ಳಲು ಸಿದ್ಧರಿಲ್ಲದವರು ಇಲ್ಲಿ ಎಷ್ಟು ಕಾಲ ನಿಲ್ಲಬಲ್ಲರು?
ನಾವೀಗ ಎಲ್ಲ ಹುಲಿ, ಆನೆ ಮತ್ತು ದಿಗ್ಗಜರನ್ನು ಮುಗಿಸಿಬಿಟ್ಟರೆ,
ಎಲ್ಲರನ್ನೂ ನಾವು ಹೆಕ್ಕಿ ಹೆಕ್ಕಿ ಇಲ್ಲವಾಗಿಸಿ ಬಿಟ್ಟರೆ,
ಕೇವಲ, ದನ, ಕುರಿ, ಪಾರಿವಾಳಗಳನ್ನು ಉಳಿಸಿಕೊಂಡು,
ಈ ದೇಶವನ್ನು ಮುನ್ನಡೆಸಲು ನಮಗೆ ಹೇಗೆ ತಾನೇ ಸಾಧ್ಯವಾದೀತು?
ಇನ್ನಂತೂ ಮೋದಿ ಸಾಹೇಬರೇ, ನಿಮ್ಮಿಂದ ನಮ್ಮನ್ನು ನೀವೇ ಕಾಪಾಡಬೇಕಷ್ಟೇ.
ನಿಮ್ಮನ್ನು ಹೇಗೆ ಸ್ಮರಿಸಲಾಗುವುದು ಎಂಬುದನ್ನು ನೀವು ಮಾತ್ರ ತಿಳಿಸಬಲ್ಲಿರಿ,
ನೀವು ದೊಡ್ಡವರು ಮೋದಿ ಸಾಹೇಬರೇ,
ಒಂದಷ್ಟು ದೊಡ್ಡತನ ತೋರಲು ನಿಮಗೆ ಸಾಧ್ಯವೇ, ಮೋದಿ ಸಾಹೇಬರೇ?
ಐ ಥಿಂಕ್, ನಮ್ಮ ಕೆಲಸ ಮುಗಿದಿದೆ,
ಇನ್ನಾದರೂ ಭಾರತವನ್ನು ಭಾರತವಾಗಿರಲು ಬಿಟ್ಟುಬಿಡೋಣ,
ಜೈ ಹಿಂದ್, ಮೋದಿ ಸಾಹೇಬರೇ.
ಹಿಂದಿ ಮೂಲ: ವಿನೀತ್ ಕೆಕೆಎನ್ ಪಂಚಿ
ಕವಿ, ಸಿನೆಮಾ ನಿರ್ಮಾಪಕ ಮತ್ತು ಸಂವಹನ ತಜ್ಞ
ಕನ್ನಡಕ್ಕೆ: ರೂಹೀ, ಪುತ್ತಿಗೆ