ಮುಸ್ಲಿಮ್ ಜನಸಂಖ್ಯೆ ಮತ್ತು ಪ್ರಧಾನಿಯವರ ಹತಾಶ ಸುಳ್ಳು
ಊಹೆ ಎಂಬುದು ಲಗಾಮಿಲ್ಲದ ಹುಚ್ಚು ಕುದುರೆಯಂತೆ. ಲಗಾಮು ಇಲ್ಲವೆಂದಮೇಲೆ ಅದು ಯಾವ ದಿಕ್ಕಿನಲ್ಲೂ ಓಡಬಹುದು, ಎಷ್ಟು ವೇಗವಾಗಿಯೂ ಓಡಬಹುದು. ಯಾವ ನೆಲೆಯನ್ನೂ ತಲುಪಬಹುದು. ಆದರೆ ಮಾನವ ಸಮಾಜಗಳ ಚರಿತ್ರೆ ನೋಡಿದರೆ ಅದು ಆ ರೀತಿ ಲಗಾಮಿಲ್ಲದೆ ಮುನ್ನುಗ್ಗುತ್ತಾ ಹೋಗುವುದಿಲ್ಲ. ಕೆಲವೊಮ್ಮೆ ತುಂಬಾ ಸರಳ ಮತ್ತು ಕೆಲವೊಮ್ಮೆ ಸಾಕಷ್ಟು ಸಂಕೀರ್ಣವಾದ ಹಲವಾರು ಗಣನೀಯ ಅಂಶಗಳು ಅವುಗಳ ಚಲನೆಯ ದಿಕ್ಕು, ವೇಗ, ದೂರ, ಗುರಿ ಇತ್ಯಾದಿಗಳನ್ನು ನಿಯಂತ್ರಿಸುತ್ತಾ, ಪ್ರಭಾವಿಸುತ್ತಾ ಇರುತ್ತವೆ.
ಭಾಗ- 1
ಎಪ್ರಿಲ್ 21ರಂದು ರಾಜಸ್ಥಾನದಲ್ಲಿ ಪ್ರಧಾನಿ ಮೋದಿಯವರು ಮಾಡಿದ ಭಾಷಣದಲ್ಲಿ ಸುಳ್ಳು ಹೇಳುವ ಪ್ರತಿಭೆಯಲ್ಲಿ ತಮ್ಮದೇ ಹಲವಾರು ಹಳೆಯ ದಾಖಲೆಗಳನ್ನು ಮುರಿದು ಹೊಸದೊಂದು ದಾಖಲೆ ರಚಿಸಿದರು. ಸ್ವತಃ ತನ್ನ, ತನ್ನ ಸರಕಾರದ ಅಥವಾ ತನ್ನ ಪಕ್ಷದ ಸಾಧನೆಯ ಬಗ್ಗೆ ಹೇಳಲು ಅವರ ಬಳಿ ಏನೂ ಉಳಿದಿರಲಿಲ್ಲ. ಇತರರ ವಿರುದ್ಧವೂ ಸತ್ಯ ಹೇಳುವುದಕ್ಕೆ ಅವರ ಬಳಿ ಏನೂ ಇರಲಿಲ್ಲ. ಆದ್ದರಿಂದ ಅವರು ಕೆಲವೇ ನಿಮಿಷಗಳಲ್ಲಿ ಪುಂಖಾನುಪುಂಖವಾಗಿ ಕಾಂಗ್ರೆಸ್ ಪಕ್ಷದ ಬಗ್ಗೆ, ಅದರ ಪ್ರಣಾಳಿಕೆಯ ಬಗ್ಗೆ, 2006ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನೀಡಿದ್ದ ಒಂದು ಹೇಳಿಕೆಯ ಬಗ್ಗೆ ಮತ್ತು ದೇಶದ ಮುಸ್ಲಿಮ್ ಸಮಾಜದ ಬಗ್ಗೆ ವಿಷಪೂರಿತವಾದ, ಹತಾಶ ಸುಳ್ಳುಗಳ ಒಂದು ಸರಮಾಲೆಯನ್ನೇ ಉದುರಿಸಿ ಬಿಟ್ಟರು:
‘‘.... ಹಿಂದೆ ಅವರ ಸರಕಾರ ಇದ್ದಾಗ ಅವರು, ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಇರುವುದು ಮುಸಲ್ಮಾನರಿಗೆ ಎಂದು ಹೇಳಿದ್ದರು. ಇದರ ಅರ್ಥ - ಇವರು ಸಂಪತ್ತನ್ನೆಲ್ಲಾ ಒಟ್ಟುಸೇರಿಸಿ ಯಾರಿಗೆ ವಿತರಿಸಲಿದ್ದಾರೆ? ಯಾರಿಗೆ ಹೆಚ್ಚು ಮಕ್ಕಳಿರುತ್ತಾರೋ ಅವರಿಗೆ ವಿತರಿಸಲಿದ್ದಾರೆ. ಅಕ್ರಮ ವಲಸಿಗರಿಗೆ ವಿತರಿಸಲಿದ್ದಾರೆ. ಏನು ನಿಮ್ಮ ಪರಿಶ್ರಮದ ಹಣವನ್ನು ಅಕ್ರಮ ವಲಸಿಗರಿಗೆ ವಿತರಿಸುವುದೇ? ಇದಕ್ಕೆ ನಿಮ್ಮ ಒಪ್ಪಿಗೆ ಇದೆಯೇ? ಕಾಂಗ್ರೆಸ್ ಪ್ರಣಾಳಿಕೆ ಇದನ್ನೇ ಹೇಳುತ್ತಿದೆ. ಅವರು ನಮ್ಮ ತಾಯಂದಿರು ಮತ್ತು ಸಹೋದರಿಯರ ಬಳಿ ಎಷ್ಟು ಚಿನ್ನ ಇದೆ ಎಂದು ಲೆಕ್ಕ ಹಾಕಲಿದ್ದಾರೆ. ಅದನ್ನೆಲ್ಲಾ ಜಪ್ತಿ ಮಾಡಲಿದ್ದಾರೆ. ಆಬಳಿಕ ಅದನ್ನು ಹಂಚಿ ಬಿಡಲಿದ್ದಾರೆ ಮತ್ತು ಮನಮೋಹನ್ ಸಿಂಗ್ ಅವರು ಹೇಳಿದ್ದಂತೆ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸ್ಲಿಮರಿಗೆ ಇರುವುದರಿಂದ ಅವರಿಗೆ ಹಂಚಲಿದ್ದಾರೆ. ಸಹೋದರ-ಸಹೋದರಿಯರೇ, ನನ್ನ ಮಾತೆಯರೇ ಮತ್ತು ಸಹೋದರಿಯರೇ, ಅರ್ಬನ್ ನಕ್ಸಲ್‌ಗಳ ಈ ವಿಚಾರ ಧಾರೆ, ನಿಮಗೆ ನಿಮ್ಮ ಮಂಗಳ ಸೂತ್ರವನ್ನೂ ಉಳಿಸಲು ಬಿಡದು - ಆ ಮಟ್ಟಕ್ಕೂ ಅವರು ಹೋಗುವರು......’’
ಇಲ್ಲಿ ಕಾಂಗ್ರೆಸ್ ಪಕ್ಷ, ಅದರ ಪ್ರಣಾಳಿಕೆ ಮತ್ತು ಮನಮೋಹನ್ ಸಿಂಗ್ ಅವರ ಹಳೆಯ ಹೇಳಿಕೆಯ ಕುರಿತು ಹೇಳಲಾಗಿರುವ ಸುಳ್ಳುಗಳನ್ನು ಕಾಂಗ್ರೆಸ್‌ನವರು ಈಗಾಗಲೇ ಚೆನ್ನಾಗಿ ಬಯಲಿಗೆಳೆದಿದ್ದಾರೆ. ಪ್ರಧಾನಿಯವರು ತಮ್ಮ ಭಾಷಣದಲ್ಲಿ ಮುಸ್ಲಿಮರನ್ನು ಹೆಸರಿಸಿ, 1. ಬಹಳಷ್ಟು ಮಕ್ಕಳಿರುವವರು ಮತ್ತು 2. ಅಕ್ರಮ ವಲಸಿಗರು ಎಂಬ ಎರಡೆರಡು ಸುಳ್ಳಾರೋಪಗಳನ್ನು ಹೊರಿಸಿ ಅವರನ್ನು ಹೀಗಳೆದಿದ್ದಾರೆ. ಅವರ ಈ ಎರಡೂ ಸುಳ್ಳುಗಳು ಹೊಸದೇನಲ್ಲವಾದರೂ ಆ ಕುರಿತು ಕೆಲವು ವಾಸ್ತವಗಳನ್ನು, ಅವರ ಹಸಿ ಸುಳ್ಳುಗಳಿಗೆ ಬಲಿಯಾಗ ಬಹುದಾದ ಮುಗ್ಧರ ರಕ್ಷಣೆಗಾಗಿ ನೆನಪಿಸಬೇಕಾಗಿದೆ.
ಭಾರತದಲ್ಲಿ ಮುಸಲ್ಮಾನರೆಂದರೆ ಪ್ರತಿಯೊಬ್ಬರೂ ತಲಾ ನಾಲ್ಕು ಮದುವೆಯಾಗಿ ಒಬ್ಬೊಬ್ಬ ಪತ್ನಿಯ ಮೂಲಕವೂ ಡಜನ್ ಗಟ್ಟಲೆ ಮಕ್ಕಳನ್ನು ಪಡೆಯುವವರು ಎಂಬ ಸುಳ್ಳನ್ನು ಮೋದಿ ಪಾಳಯದವರು ಹಲವು ದಶಕಗಳಿಂದ ಹರಡುತ್ತಾ ಬಂದಿದ್ದಾರೆ. ಸಾಲದ್ದಕ್ಕೆ, ಈ ರೀತಿ ಕ್ಷಿಪ್ರವಾಗಿ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಂಡು ಮುಸ್ಲಿಮರು ಶೀಘ್ರವೇ ಭಾರತದಲ್ಲಿ ಬಹುಸಂಖ್ಯಾತರಾಗಿ ಬಿಡುತ್ತಾರೆ, ಭಾರತವನ್ನು ಮುಸ್ಲಿಮ್ ರಾಷ್ಟ್ರವಾಗಿ ಪರಿವರ್ತಿಸುತ್ತಾರೆ ಮತ್ತು ಇತರರೆಲ್ಲಾ ಅವರ ಗುಲಾಮರಾಗಿ ಬದುಕಬೇಕಾಗುತ್ತದೆ ಎಂದು ಅವರು ಜನರನ್ನು ಬೆದರಿಸುತ್ತಲೂ ಬಂದಿದ್ದಾರೆ. ಮನೆಮನೆಗಳಿಗೆ ಹೋಗಿ, ಶೀಘ್ರವೇ ನೀವು ಅಲ್ಪಸಂಖ್ಯಾತರಾಗಲಿದ್ದೀರಿ, ನಿಮ್ಮ ಬದುಕು ನರಕವಾಗಲಿದೆ, ನಿಮ್ಮ ಹೆಣ್ಣುಮಕ್ಕಳು ಅರಕ್ಷಿತರಾಗಲಿದ್ದಾರೆ ಎಂದೆಲ್ಲಾ ಜನರನ್ನು ಬೆದರಿಸುವ ಸಂಘಟಿತ ಅಭಿಯಾನಗಳನ್ನು ನಡೆಸುತ್ತಾರೆ. ಅವರ ಈ ಬಗೆಯ ವಿಪರೀತ ಸುಳ್ಳುಗಳಿಂದಾಗಿಯೇ ಇರಬಹುದು ಜನರು ಮೋದಿಯವರನ್ನು ಫೇಕೂ ಮಹಾರಾಜ್, ಆರೆಸ್ಸೆಸ್ ಅನ್ನು ರಾಷ್ಟ್ರೀಯ ಸುಳ್ಳರ ಸಂಘ ಮತ್ತು ಬಿಜೆಪಿಯನ್ನು ಭಾರತೀಯ ಝೂಟಾ ಪಾರ್ಟಿ ಎಂಬಿತ್ಯಾದಿ ಬಿರುದುಗಳಿಂದ ಗುರುತಿಸುತ್ತಿರುವುದು.
ಮುಸ್ಲಿಮ್ ಜನಸಂಖ್ಯೆಯ ಕುರಿತಂತೆ ಮಾಡಲಾಗಿರುವ ಆರೋಪದ ಹಿನ್ನೆಲೆಯಲ್ಲಿ ಸತ್ಯವೇನೆಂಬುದನ್ನು ಅಧಿಕೃತ ಮಾಹಿತಿಗಳ ಆಧಾರದಲ್ಲಿ ಪರಿಶೀಲಿಸೋಣ:
1951ರಲ್ಲಿ ಸ್ವತಂತ್ರ ಭಾರತದ ಮೊದಲ ಜನಗಣತಿ ನಡೆದಾಗ ದೇಶದ ಒಟ್ಟು ಜನಸಂಖ್ಯೆ 36.11 ಕೋಟಿಯಷ್ಟಿತ್ತು. ಆ ಪೈಕಿ ಹಿಂದೂಗಳ ಸಂಖ್ಯೆ 30.4 ಕೋಟಿ ಮತ್ತು ಮುಸ್ಲಿಮರ ಜನಸಂಖ್ಯೆ 3.5 ಕೋಟಿಯಷ್ಟಿತ್ತು. ಆರು ದಶಕಗಳ ಬಳಿಕ ನಡೆದ 2011ರ ಜನಗಣತಿಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆ 121.08 ಕೋಟಿಗೆ ತಲುಪಿತ್ತು. ಅಂದರೆ ಆರು ದಶಕಗಳ ಅವಧಿಯಲ್ಲಿ 84.97 ಕೋಟಿಯಷ್ಟು ಜನಸಂಖ್ಯೆ ವೃದ್ಧಿಯಾಗಿ ಬಿಟ್ಟಿತ್ತು. ಆದರೆ, ದೇಶದಲ್ಲಿ ಮುಸ್ಲಿಮರು ಮಾತ್ರ ಮಕ್ಕಳನ್ನು ಹುಟ್ಟಿಸುತ್ತಾರೆ ಮತ್ತು ಜನ ಸಂಖ್ಯಾವೃದ್ಧಿಗೆ ಕೊಡುಗೆ ನೀಡುವವರು ಮುಸ್ಲಿಮರು ಮಾತ್ರ ಎಂಬ ವಾದದಲ್ಲಿ ಹುರುಳೇನಾದರೂ ಇದ್ದಿದ್ದರೆ 2011ರ ವೇಳೆ ಹಿಂದೂಗಳ ಸಂಖ್ಯೆ 30.4 ಕೋಟಿಯಲ್ಲೇ ಸ್ಥಿರವಾಗಿದ್ದು ಮುಸಲ್ಮಾನರ ಸಂಖ್ಯೆ 88 ಕೋಟಿ ದಾಟಿರಬೇಕಿತ್ತು. ಆದರೆ ಹಾಗೇನೂ ಆಗಲಿಲ್ಲ.
ಭಾರತದಲ್ಲಿ ಹೆಚ್ಚುತ್ತಿರುವುದು ಕೇವಲ ಮುಸ್ಲಿಮರ ಜನಸಂಖ್ಯೆ ಮಾತ್ರವೇ?
1951ರ ಜನಗಣತಿ ನಡೆದಾಗ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ 3.5 ಕೋಟಿಯಷ್ಟಿತ್ತು. 2011ರ ಜನಗಣತಿಯ ಹೊತ್ತಿಗೆ ಅಂದರೆ 60 ವರ್ಷಗಳ ಬಳಿಕ ಅವರ ಜನಸಂಖ್ಯೆ 17.2 ಕೋಟಿಗೆ ತಲುಪಿತ್ತು. ಆದರೆ ಈ ಅವಧಿಯಲ್ಲಿ ಹೆಚ್ಚಳವಾಗಿರುವುದು ಕೇವಲ ಮುಸ್ಲಿಮರ ಜನಸಂಖ್ಯೆಯಲ್ಲಿ ಮಾತ್ರವೇ? ಇತರೆಲ್ಲ ಸಮುದಾಯಗಳ ಜನಸಂಖ್ಯೆ ಹಾಗೆಯೇ ಸ್ಥಗಿತವಾಗಿ ಉಳಿದು ಬಿಟ್ಟಿತೇ?
ಖಂಡಿತ ಇಲ್ಲ. ಪ್ರಸ್ತುತ ಆರು ದಶಕಗಳ ಅವಧಿಯಲ್ಲಿ ದೇಶದ ಹಿಂದೂಗಳ ಸಂಖ್ಯೆ 30.4 ಕೋಟಿಯಿಂದ 96.6 ಕೋಟಿಗೆ ಏರಿತ್ತು. ಅಂದರೆ 60 ವರ್ಷಗಳಲ್ಲಿ ಮುಸ್ಲಿಮರ ಸಂಖ್ಯೆಯಲ್ಲಿ ಸುಮಾರು 5 ಪಟ್ಟು ಹೆಚ್ಚಳವಾಗಿದ್ದರೆ ಇದೇ ಅವಧಿಯಲ್ಲಿ ಹಿಂದೂಗಳ ಸಂಖ್ಯೆ 4 ಪಟ್ಟು ಹೆಚ್ಚಿತ್ತು. ಹಾಗೆಯೇ 1951ರಲ್ಲಿ 80 ಲಕ್ಷದಷ್ಟಿದ್ದ ಕ್ರೈಸ್ತರ ಜನಸಂಖ್ಯೆ 2011ರ ಹೊತ್ತಿಗೆ 2.8 ಕೋಟಿಯಷ್ಟಾಗಿತ್ತು. ಅಂದರೆ ಅಲ್ಲೂ 3.5 ಪಟ್ಟು ಹೆಚ್ಚಳವಾಗಿತ್ತು.
1951ರಲ್ಲಿ ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ದೇಶದ ಒಟ್ಟು ಜನಸಂಖ್ಯೆಯ ಶೇ. 84.1 ಇತ್ತು. ‘ಜನಸಂಖ್ಯಾ ಜಿಹಾದ್’ ಎಂಬ ಕಾಲ್ಪನಿಕ ಸಂಚಿನ ಫಲವಾಗಿ 60 ವರ್ಷಗಳಲ್ಲಿ ಈ ಸಂಖ್ಯೆ ಶೇ. 10 ಅಥವಾ ಶೇ. 20ರ ಮಟ್ಟಿಗೇನೂ ಕುಸಿದು ಬಿಟ್ಟಿಲ್ಲ. 2011ರ ಜನಗಣತಿಯಿಂದ ಸ್ಪಷ್ಟವಾಗಿರುವಂತೆ ಈಗಲೂ ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಶೇ. 79.80ರಷ್ಟಿದೆ. ಕುಸಿತದ ಹೆಸರಲ್ಲಿ ರೋದಿಸಬಯಸುವವರು ಹೆಚ್ಚೆಂದರೆ 60 ವರ್ಷಗಳಲ್ಲಿ ಈ ಸಂಖ್ಯೆ ಶೇ. 4.3ರಷ್ಟು ಕುಸಿದಿದೆ ಎಂದು ರೋದಿಸಬಹುದಷ್ಟೇ.
ಐದು ಪಟ್ಟು ಅಥವಾ ನಾಲ್ಕು ಪಟ್ಟು ಎಂಬ ಪದಗಳನ್ನು ಕೇಳಿದೊಡನೆ ಕೆಲವರು ಬೆಚ್ಚುವುದುಂಟು. ಅಂಥವರು ಗಮನಿಸಬೇಕು:
ನಿಜವಾಗಿ ಇವು 60 ವರ್ಷಗಳಲ್ಲಿ ಆಗಿರುವ ಬೆಳವಣಿಗೆಯ ಒಟ್ಟು ಪ್ರಮಾಣವೇ ಹೊರತು ವಾರ್ಷಿಕ ಹೆಚ್ಚಳದ ದರವೇನೂ ಅಲ್ಲ.
1951ರಲ್ಲಿ ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ದೇಶದ ಒಟ್ಟು ಜನಸಂಖ್ಯೆಯ ಶೇ. 84.1 ಇತ್ತು. ‘ಜನಸಂಖ್ಯಾ ಜಿಹಾದ್’ ಎಂಬ ಕಾಲ್ಪನಿಕ ಸಂಚಿನ ಫಲವಾಗಿ 60 ವರ್ಷಗಳಲ್ಲಿ ಈ ಸಂಖ್ಯೆ ಶೇ. 10 ಅಥವಾ ಶೇ. 20ರ ಮಟ್ಟಿಗೇನೂ ಕುಸಿದು ಬಿಟ್ಟಿಲ್ಲ. 2011ರ ಜನಗಣತಿಯಿಂದ ಸ್ಪಷ್ಟವಾಗಿರುವಂತೆ ಈಗಲೂ ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಶೇ. 79.80ರಷ್ಟಿದೆ. ಕುಸಿತದ ಹೆಸರಲ್ಲಿ ರೋದಿಸಬಯಸುವವರು ಹೆಚ್ಚೆಂದರೆ 60 ವರ್ಷಗಳಲ್ಲಿ ಈ ಸಂಖ್ಯೆ ಶೇ. 4.3ರಷ್ಟು ಕುಸಿದಿದೆ ಎಂದು ರೋದಿಸಬಹುದಷ್ಟೇ. ಹಾಗೆಯೇ, 1951ರಲ್ಲಿ ಶೇ. 9.8 ರಷ್ಟಿದ್ದ ಮುಸ್ಲಿಮ್ ಜನಸಂಖ್ಯೆ 2011ರ ಹೊತ್ತಿಗೆ ಶೇ. 70 ಅಥವಾ ಶೇ. 80ರ ಮಟ್ಟಿಗೆ ಬೆಳೆದು ನಿಲ್ಲುವ ಬದಲು ಕೇವಲ ಶೇ. 14.23 ಮಟ್ಟಕ್ಕೆ ಮಾತ್ರ ಬೆಳೆದಿದೆ - ಅಂದರೆ 60 ವರ್ಷಗಳಲ್ಲಿ ದೇಶದ ಮುಸ್ಲಿಮರ ಜನಸಂಖ್ಯೆಯಲ್ಲಿ ಆಗಿರುವ ವೃದ್ಧಿ ಶೇ. 4.43 ಮಾತ್ರ. ರೋದಿಸಲೇ ಬೇಕೆಂದಿರುವವರು ಇದನ್ನು ತೋರಿಸಿ ತಲೆಬಡಿದುಕೊಂಡು ರೋದಿಸಬಹುದಷ್ಟೆ.
ಕೋವಿಡ್‌ನಿಂದಾಗಿ 2021ರ ಜನಗಣತಿ ನಡೆಯಲಿಲ್ಲ ವಾದ್ದರಿಂದ, ಆಮೂಲಕ ಪ್ರಕಟವಾಗಬೇಕಾಗಿದ್ದ ಅದೆಷ್ಟೋ ಮಾಹಿತಿಗಳು ಹಾಗೆಯೇ ಅಜ್ಞಾತವಾಗಿ ಉಳಿದುಕೊಂಡಿವೆ.
ಭಾರತದಲ್ಲಿ ಮುಸ್ಲಿಮ್ ಜನಸಂಖ್ಯೆ ಹಿಂದೂ ಜನಸಂಖ್ಯೆಗೆ ಸಮಾನವಾಗಿ ಬಿಡುವ ಸಾಧ್ಯತೆ
ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಭಾರೀ ವೇಗವಾಗಿ ಹೆಚ್ಚುತ್ತಿದೆ, ಶೀಘ್ರವೇ ಇಲ್ಲಿ ಮುಸ್ಲಿಮರ ಜನಸಂಖ್ಯೆಯು ಹಿಂದೂಗಳ ಸಂಖ್ಯೆಗೆ ಸಮಾನ ವಾಗಲಿದೆ ಮಾತ್ರವಲ್ಲ, ಹಿಂದೂಗಳ ಸಂಖ್ಯೆಯನ್ನು ಮೀರಲಿದೆ ಎಂದೆಲ್ಲಾ ವದಂತಿಗಳನ್ನು ಹಬ್ಬಿ ಹಿಂದೂಗಳನ್ನು ಬೆದರಿಸಲು ಪ್ರಯತ್ನಿಸುವವರು ಈ ಅಂಶಗಳ ಕುರಿತು ಒಂದೋ ಅಜ್ಞರಾಗಿರುತ್ತಾರೆ ಅಥವಾ ಇವುಗಳನ್ನು ಉದ್ದೇಶಪೂರ್ವಕ ಮರೆಮಾಚುತ್ತಾರೆ. ಉದಾಹರಿಸಬೇಕೆಂದರೆ ಒಂದು ವಿಲಕ್ಷಣ ಥಿಯರಿ ಹೀಗಿದೆ:
1991 ಮತ್ತು 2001ರ ನಡುವೆ ಒಂದು ದಶಕದಲ್ಲಿ ಹಿಂದೂಗಳ ಜನಸಂಖ್ಯೆಯು ವಾರ್ಷಿಕ ಶೇ. 1.83 ದರದಲ್ಲಿ ವೃದ್ಧಿಯಾಗಿತ್ತು. ಇದೇ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆಯು ಶೇ. 2.62ರಷ್ಟು ವಾರ್ಷಿಕ ದರದಲ್ಲಿ ವೃದ್ಧಿಯಾಗಿತ್ತು. ಎರಡೂ ಸಮುದಾಯಗಳ ಜನಸಂಖ್ಯೆಯು ಇದೇ ದರದಲ್ಲಿ ಹೆಚ್ಚುತ್ತಾ ಇದ್ದರೆ 220 ವರ್ಷಗಳ ಬಳಿಕ ಅಂದರೆ ಕ್ರಿ.ಶ. 2233ರಲ್ಲಿ ಭಾರತದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ಜನಸಂಖ್ಯೆ ಸಮಾನವಾಗಲಿದೆ. ಬೆದರುಬೊಂಬೆ ತೋರಿಸಿ ಜನರನ್ನು ಹೆದರಿಸುವವರು ಎರಡು ಶತಮಾನಗಳ ಆಚೆಗಿರುವ ಈ ಸಾಧ್ಯತೆಯನ್ನೂ ಒಂದು ಅಸ್ತ್ರವಾಗಿ ಬಳಸಲು ಪ್ರಯತ್ನಿಸಬಹುದು. ನೋಡಿ, ನಾವಿದನ್ನು ಹೇಳಿರಲಿಲ್ಲವೇ ಎಂದು ಸಂಭ್ರಮಿಸುತ್ತಾ ಹುಚ್ಚರಂತೆ ನಲಿದಾಡಬಹುದು. ಆದರೆ ಅವರು ಮತ್ತವರ ಸಂಭಾವ್ಯ ಬಲಿಪಶುಗಳು ನೆನಪಿಡಬೇಕು-ಇದು ಸಾಧ್ಯವಾಗಬೇಕಿದ್ದರೆ ಎರಡೂ ಸಮುದಾಯಗಳ ಜನಸಂಖ್ಯೆಯ ವೃದ್ಧಿಯು 1991 ಮತ್ತು 2001ರ ಮಧ್ಯೆ ಇದ್ದ ದರದಲ್ಲೇ ಮುಂದಿನ 220 ವರ್ಷಗಳವರೆಗೂ ಯಾವುದೇ ಏರುಪೇರು ಇಲ್ಲದೆ ಸತತ ಮುಂದುವರಿಯುತ್ತಿರಬೇಕು. ಮಾತ್ರವಲ್ಲ ಈ ಲೆಕ್ಕಾಚಾರದ ಅತ್ಯಂತ ಹಾಸ್ಯಾಸ್ಪದ ಆಯಾಮವೇನೆಂದರೆ, ಜನಸಂಖ್ಯೆಯಲ್ಲಿ ವೃದ್ಧಿಯ ಪ್ರಸ್ತುತ ದರವು ಮುಂದಿನ ಎರಡು ಶತಮಾನಗಳ ಕಾಲ ಹಾಗೆಯೇ ಮುಂದುವರಿದರೆ ಕ್ರಿ.ಶ.2244ರಲ್ಲಿ ಭಾರತದಲ್ಲಿ 5,600 ಕೋಟಿ ಹಿಂದೂಗಳಿರುತ್ತಾರೆ ಮತ್ತು 5,600 ಕೋಟಿ ಮುಸ್ಲಿಮರಿರುತ್ತಾರೆ. ಹಿಂದೂ ಮತ್ತು ಮುಸ್ಲಿಮರ ಒಟ್ಟು ಜನಸಂಖ್ಯೆ 11,200 ಕೋಟಿಯಷ್ಟಿರುತ್ತದೆ. ಇಂದು ಸಂಪೂರ್ಣ ಜಗತ್ತಿನ ಜನಸಂಖ್ಯೆ 800 ಕೋಟಿಯಷ್ಟಿದೆ. ಅಂದರೆ ಕ್ರಿ.ಶ.2244ರಲ್ಲಿ ಭಾರತ ಎಂಬ ಒಂದೇ ದೇಶದ ಜನ ಸಂಖ್ಯೆ ಇಂದಿನ ಒಟ್ಟು ಜಾಗತಿಕ ಜನಸಂಖ್ಯೆಗೆ ಹೋಲಿಸಿದರೆ 14 ಪಟ್ಟು ಅಧಿಕವಾಗಿರುತ್ತದೆ. ಹೇಗಿದ್ದೀತು ಆ ನಮ್ಮ ಭವ್ಯ ಭಾರತ!
ಸರಿ. ಮುಸ್ಲಿಮರ ಸಂಖ್ಯೆ ಹಿಂದೂಗಳಿಗೆ ಸಮಾನವಾಗಿ ಬಿಡುವ ಸಾಧ್ಯತೆಯನ್ನು ಸಾಮಾನ್ಯ ಗಣಿತದ ಮೂಲಕ ಸಾಬೀತು ಪಡಿಸಿದ್ದಾಯಿತು. ಇನ್ನು ಕ್ರೈಸ್ತರ ಕುರಿತು ಲೆಕ್ಕಾಚಾರ ಮಾಡಬೇಡವೇ? ಕ್ರೈಸ್ತರು ಭಾರೀ ಸಂಖ್ಯೆಯಲ್ಲಿ ಭಾರತೀಯರನ್ನು ಮತಾಂತರಿಸುತ್ತಲೇ ಇರುತ್ತಾರೆ, ದೇಶದಲ್ಲಿ ಅವರ ಜನಸಂಖ್ಯೆ ಕೂಡಾ ಕ್ಷಿಪ್ರವಾಗಿ ಹೆಚ್ಚುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿವೆ. ಹಾಗಾದರೆ ಭಾರತದಲ್ಲಿ ಎಂದಾದರೂ ಕ್ರೈಸ್ತರ ಜನಸಂಖ್ಯೆ ಹಿಂದೂಗಳ ಜನಸಂಖ್ಯೆಗೆ ಸಮಾನವಾಗಿ ಬಿಡುವ ಸಾಧ್ಯತೆ ಇದೆಯೇ? ಖಂಡಿತ ಇದೆ. ಅದನ್ನು ಖಾತ್ರಿ ಪಡಿಸಲು ಮತ್ತೆ ನಾವು ಮೇಲೆ ಪ್ರಸ್ತಾಪಿಸಿದ ಸರಳ ಗಣಿತಕ್ಕೆ ಶರಣುಹೋಗೋಣ:
1991 ಮತ್ತು 2001ರ ನಡುವೆ ಭಾರತದ ಕ್ರೈಸ್ತರ ಜನಸಂಖ್ಯೆಯು ಪ್ರತಿವರ್ಷ ಶೇ. 2.36ರಂತೆ ಹೆಚ್ಚಳ ಕಂಡಿತ್ತು. ಅವರ ಜನಸಂಖ್ಯೆ ಇದೇ ದರದಲ್ಲಿ ಹೆಚ್ಚುತ್ತಲೇ ಹೋದರೆ ಮತ್ತು ಈ ಅವಧಿಯಲ್ಲಿದ್ದ ಹಿಂದೂಗಳ ಜನಸಂಖ್ಯಾ ವೃದ್ಧಿಯ ದರವು ಅದೇ ರೀತಿ ಮುಂದುವರಿದರೆ 670 ಬಳಿಕ ಅಂದರೆ ಕ್ರಿ.ಶ.2671ರಲ್ಲಿ ಭಾರತದ ಕ್ರೈಸ್ತರ ಸಂಖ್ಯೆ ಆಗಿನ ಭಾರತದ ಹಿಂದೂಗಳ ಸಂಖ್ಯೆಗೆ ಸಮಾನವಾಗಲಿದೆ. ಆದರೆ ಆಗ ಪ್ರಸ್ತುತ ಎರಡೂ ಸಮುದಾಯಗಳ ಜನಸಂಖ್ಯೆ ಎಷ್ಟಿರುತ್ತದೆ ಗೊತ್ತೇ? 195 ಟ್ರಿಲಿಯನ್.
ಅಂದರೆ 195 ಲಕ್ಷ ಕೋಟಿ. ಅಷ್ಟು ಹಿಂದೂಗಳು ಮತ್ತು ಅಷ್ಟು ಕ್ರೈಸ್ತರು. ಸಾಲದ್ದಕ್ಕೆ ಪಕ್ಕದಲ್ಲೇ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಬೇರೆ ಇರುತ್ತಾರೆ. ಇದನ್ನೆಲ್ಲಾ ಊಹಿಸುವುದಕ್ಕೂ ಅಸಾಮಾನ್ಯ ಮಟ್ಟದ ಹುಚ್ಚುತನ ಮತ್ತು ವಿಕೃತ ಮನಸ್ಸು ಬೇಕಾಗುತ್ತದೆ.
ಊಹೆ ಎಂಬುದು ಲಗಾಮಿಲ್ಲದ ಹುಚ್ಚು ಕುದುರೆಯಂತೆ. ಲಗಾಮು ಇಲ್ಲವೆಂದಮೇಲೆ ಅದು ಯಾವ ದಿಕ್ಕಿನಲ್ಲೂ ಓಡಬಹುದು, ಎಷ್ಟು ವೇಗವಾಗಿಯೂ ಓಡಬಹುದು. ಯಾವ ನೆಲೆಯನ್ನೂ ತಲುಪಬಹುದು. ಆದರೆ ಮಾನವ ಸಮಾಜಗಳ ಚರಿತ್ರೆ ನೋಡಿದರೆ ಅದು ಆ ರೀತಿ ಲಗಾಮಿಲ್ಲದೆ ಮುನ್ನುಗ್ಗುತ್ತಾ ಹೋಗುವುದಿಲ್ಲ. ಕೆಲವೊಮ್ಮೆ ತುಂಬಾ ಸರಳ ಮತ್ತು ಕೆಲವೊಮ್ಮೆ ಸಾಕಷ್ಟು ಸಂಕೀರ್ಣವಾದ ಹಲವಾರು ಗಣನೀಯ ಅಂಶಗಳು ಅವುಗಳ ಚಲನೆಯ ದಿಕ್ಕು, ವೇಗ, ದೂರ, ಗುರಿ ಇತ್ಯಾದಿಗಳನ್ನು ನಿಯಂತ್ರಿಸುತ್ತಾ, ಪ್ರಭಾವಿಸುತ್ತಾ ಇರುತ್ತವೆ.
(ನಾಳಿನ ಸಂಚಿಕೆಗೆ)