ʼಮೃತ ಅಗ್ನಿವೀರರಿಗೆ ಪರಿಹಾರʼ: ಮೋದಿ ಸರ್ಕಾರ ಹೇಳುತ್ತಿರುವುದರಲ್ಲಿ ನಿಜವೆಷ್ಟು -ಸುಳ್ಳೆಷ್ಟು?
ಲೋಕಸಭೆಯಲ್ಲಿ ಅಗ್ನಿವೀರರ ಬಗ್ಗೆ ನಡೆದ ಚರ್ಚೆಯಲ್ಲಿ ಮಧ್ಯಪ್ರವೇಶ ಮಾಡಿದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಮೃತರಾದ ಅಗ್ನಿವೀರರಿಗೆ ಒಂದು ಕೋಟಿ ಪರಿಹಾರ ಕೊಡಲಾಗುತ್ತಿದೆ ಎಂದೂ ಸದನವನ್ನು ತಪ್ಪುದಾರಿಗೆ ಎಳೆಯಬಾರದೆಂದು ಹೇಳಿದರು.
ಆನಂತರ ಮೃತರಾದ ಕೆಲವು ಅಗ್ನಿವೀರರ ಕುಟುಂಬಗಳ ಸದಸ್ಯರು ತಮಗೆ ರಾಜ್ಯ ಸರ್ಕಾರಗಳಿಂದ ಅಲ್ಪಸ್ವಲ್ಪ ಪರಿಹಾರ ಸಿಕ್ಕಿದೆಯೇ ವಿನಾ ಕೇಂದ್ರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ನೀಡಿರುವ ವಿಡಿಯೋ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಕಟಿಸಿದರು.
ಅದಕ್ಕೆ ಉತ್ತರವಾಗಿ ಸೇನೆಯು ಒಂದು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿ ರಾಹುಲ್ ಗಾಂಧಿಯವರು ಪ್ರಸ್ತಾಪಿಸಿದ ಅಜಯ್ ಸಿಂಗ್ ಎಂಬ ನಿರ್ದಿಷ್ಟ ಮೃತ ಅಗ್ನಿವೀರರ ಪ್ರಕರಣದಲ್ಲಿ ಈಗಾಗಲೇ 98 ಲಕ್ಷ ರೂ.ಪರಿಹಾರ ನೀಡಲಾಗಿದೆ ಎಂದು ಹೇಳಿದೆ. ಆದರೆ ಆ ಕುಟುಂಬ ಅದನ್ನು ನಿರಾಕರಿಸಿದೆ.
ಹಾಗಿದ್ದಲ್ಲಿ ಮೃತ ಅಗ್ನಿವೀರರಿಗೆ ಕೇಂದ್ರ ಸರ್ಕಾರ ಕೊಡುವ ಪರಿಹಾರವೆಷ್ಟು? ಇದರ ಬಗ್ಗೆ ಮತ್ತು ಅಗ್ನಿಪಥ ಯೋಜನೆಯ ವಿವರಗಳ ಬಗ್ಗೆ ಎರಡು ವರ್ಷಗಳ ಹಿಂದೆ ಮೋದಿ ಸರ್ಕಾರ ಹೊರಡಿಸಿರುವ ಅಧಿಕೃತ ಪ್ರಕಟಣೆ ಈ ವೆಬ್ ವಿಳಾಸದಲ್ಲಿ ಸಿಗುತ್ತದೆ:
https://loksabhadocs.nic.in/Refinput/New_Reference_Notes/English/15072022_141146_102120411.pdf
ಇದರ ಪ್ರಕಾರ, ಮೊದಲನೆಯದಾಗಿ ಎಲ್ಲಾ ಅಗ್ನಿವೀರರಿಗೂ ನಾಲ್ಕು ವರ್ಷದ ಸೇವಾವಧಿಗೆ ಸೀಮಿತವಾಗಿ 48 ಲಕ್ಷ ರೂ. ಜೀವವಿಮೆಯನ್ನು ಮಾಡಿಸಲಾಗುತ್ತದೆ. ಅಗ್ನಿವೀರರು ಮೃತರಾದಾಗ ಅಷ್ಟು ಮೊತ್ತದ ಹಣ ಜೀವವಿಮಾ ನಿಗಮದಿಂದ ಸಿಗುತ್ತದೆ. ಕೇಂದ್ರ ಸರ್ಕಾರದಿಂದಲ್ಲ.
ಎರಡನೆಯದಾಗಿ ಸೇವಾವಧಿಯಲ್ಲಿ ಮೃತರಾಗುವ ಅಗ್ನಿವೀರರ ಸಾವುಗಳನ್ನು ಮೋದಿ ಸರ್ಕಾರ ಮೂರು ಬಗೆಯಲ್ಲಿ ವಿಂಗಡಿಸುತ್ತದೆ.
1) ಸೇವಾವಧಿಯಲ್ಲಿದ್ದರೂ ಅಧಿಕೃತ ಸೇನಾ ಕರ್ತವ್ಯದಲ್ಲಿ ಇಲ್ಲದಾಗ ಸಂಭವಿಸುವ ಸಾವನ್ನು X ವರ್ಗದ ಸಾವು ಎಂದು ಪರಿಗಣಿಸುತ್ತದೆ.
2) ಕರ್ತವ್ಯ ನಿರ್ವಹಣೆ ಮಾಡುವಾಗ ಅಪಘಾತ ಹಾಗೂ ಅವಘಡ ಗಳಿಂದ ಸಂಭವಿಸುವ ಸಾವನ್ನು Y ವರ್ಗದ ಸಾವು ಎಂದು ಪರಿಗಣಿಸುತ್ತದೆ.
3) ಕರ್ತವ್ಯ ನಿರ್ವಹಣೆ ಮಾಡುವಾಗ ಶತ್ರುವಿನ ದಾಳಿಯಿಂದ ಆಗುವ ಸಾವನ್ನು Z ವರ್ಗದ ಸಾವು ಎಂದು ವಿಂಗಡಿಸುತ್ತದೆ.
ಮೋದಿ ಸರ್ಕಾರ Y ಮತ್ತು Z ವರ್ಗದ ಸಾವುಗಳಿಗೆ ಮಾತ್ರ ವಿಮಾ ಹಣದ ಜೊತೆಗೆ 44 ಲಕ್ಷ ರೂ. ಪರಿಹಾರವನ್ನು ಕೊಡುತ್ತದೆ. X ವರ್ಗದ ಸಾವುಗಳಿಗೆ ಕೇಂದ್ರ ಸರ್ಕಾರ ಯಾವ ಪರಿಹಾರವನ್ನು ಕೊಡುವುದಿಲ್ಲ. ಅವರಿಗೆ ಸಿಗುವುದು 48 ಲಕ್ಷ ರೂ. ಜೀವ ವಿಮೆ ಮಾತ್ರ.
ಇದಲ್ಲದೆ ಅಗ್ನಿಪಥ ಯೋಜನೆಯಲ್ಲಿ ಸೇರಿಕೊಂಡು ನಾಲ್ಕು ವರ್ಷಗಳಲ್ಲಿ ಕಡ್ಡಾಯವಾಗಿ ನಿವೃತ್ತರಾಗುವ ಅಗ್ನಿವೀರರಿಗೆ ನಂತರದಲ್ಲಿ ಪೆನ್ಶನ್ ಸೌಲಭ್ಯವಿಲ್ಲ. ಅವರಿಗೆ ಡಿಫೆನ್ಸ್ ಕ್ಯಾಂಟೀನ್ ಸೌಲಭ್ಯವಾಗಲೀ, ನಿವೃತ್ತ ಸೈನಿಕ ಎಂಬ ಅವಕಾಶವಾಗಲೀ ಇರುವುದಿಲ್ಲ.
ಹೀಗಾಗಿ ಪತ್ರಕರ್ತರು, ಮೋದಿಪರರು ಕೇಳಬೇಕಿರುವ ಪ್ರಶ್ನೆ:
ತಮ್ಮ ತುಂಬು ಯೌವ್ವನ (17-22 ವರ್ಷ )ವನ್ನು ದೇಶದ ರಕ್ಷಣಾ ಸೇವೆಗೆ ಅರ್ಪಿಸಿದರೂ ಅವರನ್ನು ಇತರ ಸೈನಿಕರಂತೆ ಪರಿಗಣಿಸದೆ ಗುತ್ತಿಗೆ ಕೆಲಸಗಾರರಂತೆ, ಎರಡನೇ ದರ್ಜೆ ಸೈನಿಕರಂತೆ , ಅವರ ಸಾವನ್ನು ಕೂಡ ಎರಡನೇ ದರ್ಜೆ ಸಾವಿನಂತೆ ಪರಿಗಣಿಸುವುದು ಅನ್ಯಾಯವಲ್ಲವೇ?
ಆದ್ದರಿಂದಲೇ ಈ ಅಗ್ನಿವೀರ ಯೋಜನೆಯನ್ನು ರದ್ದುಗೊಳಿಸಲು ಆಗ್ರಹಿಸಬೇಕು. ಹಾಗೂ ಅಗ್ನಿವೀರರನ್ನು ಮೊದಲಿನಂತೆ ಪೂರ್ಣಾವಧಿ ಪರಿಪೂರ್ಣ ಸೈನಿಕರನ್ನಾಗಿ ಪರಿಗಣಿಸಬೇಕು. ಅದು ಮಾತ್ರ ನೈಜ ದೇಶಪ್ರೇಮ. ಅದರ ಬದಲು ಪರಿಹಾರದ ಬಗ್ಗೆಯೂ ಅರ್ಧ ಸುಳ್ಳೂ ಹೇಳುವುದೂ ಸೈನಿಕರ ಸಾವನ್ನೂ ಶ್ರೇಣೀಕರಣ ಮಾಡಿ ಅರ್ಧಕ್ಕರ್ಧ ಪರಿಹಾರ ಕೊಡುವುದು ಹೀನಾಯ ದೇಶದ್ರೋಹ ಅಲ್ಲವೇ?
ಜಸ್ಟ್ ಆಸ್ಕಿಂಗ್
-ಶಿವಸುಂದರ್