ಕಾಪು ಲೈಟ್‌ ಹೌಸ್ ಬೀಚ್‌ಗೆ ಉದ್ಯಾನವನದ ಸ್ಪರ್ಶ

Update: 2024-03-05 04:40 GMT

ಕಾಪು: ದೇಶ ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಕಾಪು ಬೀಚ್‌ನ ಬಂಡೆಗಳ ಮೇಲಿರುವ ಲೈಟ್‌ಹೌಸ್ ಪರಿಸರದಲ್ಲಿ ಉದ್ಯಾನವನ ನಿರ್ಮಿಸುವ ಮೂಲಕ ಪ್ರವಾಸಿಗರನ್ನು ಇನ್ನಷ್ಟು ಬರಸೆಳೆಯುವಂತೆ ಮಾಡಲಾಗಿದೆ.

ಪ್ರಥಮ ಹಂತದಲ್ಲಿ 1.4 ಕೋಟಿ ರೂ. ವೆಚ್ಚದಲ್ಲಿ ಕಾಪು ಲೈಟ್‌ಹೌಸ್ ಬಳಿ ಅಭಿವೃದ್ಧಿ ಕಾರ್ಯಗಳು ಈಗಾಗಲೇ ನಡೆದಿವೆ. ಆವರಣಗೋಡೆ, ಆಕರ್ಷಕವಾದ ಪ್ರವೇಶ ದ್ವಾರ ಹಾಗೂ ಟಿಕೆಟ್ ಕೌಂಟರ್ ನಿರ್ಮಿಸಲಾಗಿದೆ. ಶೌಚಗೃಹ, ಮಕ್ಕಳ ಉದ್ಯಾನವನ, ತೋಟಗಾರಿಕೆಯೊಂದಿಗೆ ಹುಲ್ಲುಹಾಸು ನಿರ್ಮಾಣಗೊಂಡಿದೆ. ಈ ಉದ್ಯಾನವನಕ್ಕೆ ತೆರಳುವವರಿಗೆ ಟಿಕೆಟ್ ವ್ಯವಸ್ಥೆ ಮಾಡಲಾಗಿಲ್ಲದೆ ಲೈಟ್‌ಹೌಸ್ ಮೇಲೆ ತೆರಳುವವರಿಗೂ ಇಲ್ಲಿಯೇ ಟಿಕೆಟ್ ನೀಡಲಾಗುತ್ತಿದೆ. ಈ ಮುಂಚೆ ಲೈಟ್‌ಹೌಸ್ ಪಕ್ಕದಲ್ಲಿ ಇರುವ ಕೌಂಟರ್‌ನಲ್ಲಿ ಟಿಕೆಟ್ ನೀಡಲಾಗುತ್ತಿತ್ತು.

ವಾಹನ ನಿಲುಗಡೆಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ಹಂತದಲ್ಲಿ ಗೋಪುರ, ವಾಟರ್ ಬಾಡಿಸ್, ರೆಸ್ಟೋರೆಂಟ್, ವಸ್ತು ಸಂಗ್ರಹಾಲಯ, ಲೈಟ್‌ಹೌಸ್ ಬಂಡೆಗೆ ಹೊಂದಿಕೊಂಡಂತೆ ಇರುವ ಇನ್ನೊಂದು ಬಂಡೆಗೆ ಅಧುನಿಕ ವಿನ್ಯಾಸದಲ್ಲಿ ಗ್ಲಾಸ್ ಬ್ರಿಡ್ಜ್, ಬಂಡೆಗೆ ಪೂಟ್‌ಪಾತ್ ನಿರ್ಮಾಣ ಯೋಜನೆಗೆ ಪ್ರಸ್ತಾವ ಸಿದ್ಧಪಡಿಸಲಾಗಿದೆ.

ಪ್ರಮುಖ ಪ್ರವಾಸಿ ತಾಣ ಕಾಪು: ಕರಾವಳಿ ಭಾಗದ ಸಮುದ್ರ ತೀರಗಳಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿಯಿಂದಾಗಿ ಕಾಪು ತಾಲೂಕು ಪ್ರಮುಖ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿ ರೂಪು ಗೊಳ್ಳುತ್ತಿದೆ.

ಪಡುಬಿದ್ರೆಯ ಅಂತರ್‌ರಾಷ್ಟ್ರೀಯ ಮಾನ್ಯತೆಯ ಬ್ಲೂಫ್ಲ್ಯಾಗ್ ಬೀಚ್, ಪಡುಬಿದ್ರೆ ಮುಖ್ಯ ಬೀಚ್, ಐತಿಹಾಸಿಕ ಕಾಪು ಲೈಟ್ ಹಾಗೂ ಉದ್ಯಾವರ ಪಡುಕರೆ ಕಡಲತೀರ ಪ್ರವಾಸಿಗರ ಆಕರ್ಷಣೀಯ ತಾಣಗ ಳಾಗುತ್ತಿವೆ. ಹೆಜಮಾಡಿಯಿಂದ ಉದ್ಯಾವರದವರೆಗಿನ ಕಡಲ ತೀರ ಪ್ರದೇಶವನ್ನೊಂದಿರುವ ಕಾಪುವಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುದಾನ ಬಳಸಿಕೊಂಡು ಅಭಿವೃದ್ಧಿ ಯೋಜನೆಗಳು ರೂಪುಗೊಳ್ಳುತ್ತಿವೆ.

ಆಗಬೇಕಿದೆ ಬೀಚ್ ರಸ್ತೆಗಳ ಅಭಿವೃದ್ಧಿ: ಕಾಪು ಲೈಟ್‌ಹೌಸ್ ಬೀಚ್‌ಗೆ ಬರುವ ಪ್ರವಾಸಿಗರಿಗೆ ರಸ್ತೆ ಸಂಪರ್ಕ ಸಮಸ್ಯೆ ಇದೆ. ರಾಷ್ಟ್ರೀಯ ಹೆದ್ದಾರಿಯ ಕೊಪ್ಪಲಂಗಡಿ, ಹೊಸ ಮಾರಿಗುಡಿ ಹಾಗೂ ಕೈಪುಂಜಾಲು ಮೂಲಕ ಕಾಪು ಬೀಚ್‌ಗೆ ತಲುಪಬಹುದು. ಆದರೆ ರಸ್ತೆ ಕಿರಿದಾಗಿದೆ. ಇದೇ ರೀತಿ ಪಡುಬಿದ್ರೆ ಮುಖ್ಯಬೀಚ್ ಹಾಗೂ ಬ್ಲೂಫ್ಲ್ಯಾಗ್ ಬೀಚ್ ರಸ್ತೆ ಸಂಪರ್ಕವೂ ಕಿರಿದಾಗಿದೆ. ಬೀಚ್ ಅಭಿವೃದ್ಧಿಗೊಳಿಸುವ ಮೊದಲು ರಸ್ತೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಬೇಕು. ಎಂಬುವುದು ಪ್ರವಾಸಿಗರ ಆಗ್ರಹವಾಗಿದೆ.

ಹೆಚ್ಚುತ್ತಿದೆ ಹೋಂ ಸ್ಟೇಗಳು: ಪ್ರವಾಸಿಗರನ್ನು ಆಕರ್ಷಿಸಲು ಇಲಾಖೆ ಹೋಂ ಸ್ಟೇ ಹಾಗೂ ರೆಸಾರ್ಟ್ ಗಳಿಗೆ ಉತ್ತೇಜನ ನೀಡುತ್ತಿದೆ. ಪ್ರವಾಸೋಧ್ಯಮದ ಹೆಸರಿನಲ್ಲಿ ಕಾಪು ತಾಲೂಕಿನಲ್ಲಿ ಅನಧಿಕೃತ ರೆಸಾರ್ಟ್ ಗಳು, ಹೋಂ ಸ್ಟೇಗಳು ಕಾರ್ಯಾಚರಿಸುತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರಲಾರಂಭಿಸಿದೆ.

ಪ್ರವಾಸೋದ್ಯಮ ಬೆಳವಣಿಗೆಯೊಂದಿಗೆ ಪಡುಬಿದ್ರೆ, ಎರ್ಮಾಳು, ಮೂಳೂರು, ಕಾಪು, ಶಿರ್ವ ಭಾಗದಲ್ಲಿ ಈಗಾಗಲೇ ಹೊಟೇಲ್, ರೆಸಾರ್ಟ್ 13 ಮತ್ತು 17 ಹೋಮ್‌ಸ್ಟೇಗಳ ನಿರ್ಮಾಣವಾಗಿವೆ. ಇನ್ನಷ್ಟು ನಿರ್ಮಾಣ ಹಂತದಲ್ಲಿವೆ. ಪಾರಂಪರಿಕ ಶೈಲಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ರೆಸಾರ್ಟ್ ಹಾಗೂ ಹೋಂ ಸ್ಟೇಗಳೂ ಪ್ರವಾಸಿಗರನ್ನು ಆಕರ್ಷಿಸುವ ಪೈಪೋಟಿಯಲ್ಲಿವೆ. ಆದರೆ ಇಲ್ಲಿ ಇದಕ್ಕಿತಂತಲೂ ಅಧಿಕ ಹೋಂ ಸ್ಟೇಗಳು, ರೆಸಾರ್ಟ್‌ಗಳು ಯಾವುದೇ ನೋಂದಣೆ ಆಗದೆ ಕಾರ್ಯಾಚರಿಸುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಬಂಡಾವಳ ಶಾಹಿಗಳ ಪ್ರಭಾವದಿಂದ ಕರಾವಳಿ ಸಮುದ್ರತೀರದಲ್ಲಿ ನಾಯಿ ಕೊಡೆಗಳಂತೆ ದಿನಕ್ಕೊಂದು ಹೋಂ ಸ್ಟೇಗಳು ತಲೆ ಎತ್ತುತ್ತಿದೆ. ಇದರಲ್ಲಿ ರಾಜಕೀಯ ವ್ಯಕ್ತಿಗಳು, ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆ. ಸರಕಾರದ ಕಾನೂನುಗಳನ್ನು ಬದಿಗಿರಿಸಿ ಹೋಂ ಸ್ಟೇಗಳ ನಿರ್ಮಣವಾಗುತ್ತಿದೆ ಎಂದು ದಲಿತ ಮುಖಂಡ ಶೇಖರ್ ಹೆಜಮಾಡಿ ಆರೋಪಿಸಿದ್ದಾರೆ.

ಜನಸಾಮಾನ್ಯರು ತಮ್ಮ ವಾಸ್ತವ್ಯದ ಮನೆಗಳ ದುರಸ್ತಿಗೂ ಪರಗಾನಿಗೆಗೆ ಗ್ರಾಮ ಪಂಚಾಯತ್‌ಗೆ ಅರ್ಜಿ ನೀಡಿದರೆ ಸಿಆರ್‌ಝೆಡ್ ನಿಯಮ ಉಲ್ಲಂಘಿನೆ ಯಾಗುತ್ತದೆ ಎಂದು ಕಾನೂನಿನ ಪಾಠ ಮಾಡುವ ಇಲಾಖೆಗಳು, ಅಧಿಕಾರಿಗಳು ಶಾಮೀಲಾಗಿದ್ದಾರೆ. ಯವುದೇ ಕಾರಣಕ್ಕೂ ಕಾನೂನನ್ನು ಗಾಳಿಗೆ ತೂರಿ ಹೋಂ ಸ್ಟೇಗಳಿಗೆ ಪರವಾನಿಗೆ ನೀಡುವದನ್ನು ನಿರ್ಬಂಧಿಸಬೇಕು ಎಂದು ಮುಖಂಡ ಶೇಖರ್ ಹೆಜಮಾಡಿ ಆಗ್ರಹಿಸಿದ್ದಾರೆ.

ಕಾಪು ಲೈಟ್‌ಹೌಸ್‌ಗೆ 124 ವರ್ಷಗಳ ಇತಿಹಾಸ

ಈಸ್ಟ್ ಇಂಡಿಯಾ ಕಂಪೆನಿ ಆಡಳಿತದ (1901) ವೇಳೆ ನಿರ್ಮಾಣಗೊಂಡಿರುವ, ಪ್ರಸಕ್ತ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿರುವ ಮತ್ತು ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಹೊಂದಿರುವ ಕಾಪು ಲೈಟ್‌ಹೌಸ್ 124ನೇ ವರ್ಷಾಚರಣೆ ಯಲ್ಲಿದೆ. ಕೇಂದ್ರ ಸರಕಾರದ ಬಂದರು, ನೌಕಾ ಸಾರಿಗೆ ಹಾಗೂ ಜಲಮಾರ್ಗಗಳ ಸಚಿವಾಲಯ, ದೀಪಸ್ತಂಭಗಳು ಮತ್ತು ದೀಪ ನೌಕೆಗಳ ನಿರ್ದೇಶನಾಲಯದ ಮೂಲಕ ಕಾಪು ಲೈಟ್‌ಹೌಸ್ ಸೇರಿ ದೇಶದ 75 ಲೈಟ್‌ಹೌಸ್‌ಗಳಲ್ಲಿ ನಡೆಸಿದ ಅಭಿವೃದ್ಧಿ ಯೋಜನೆಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ತಾಣಗಳಾಗಿ ಅದು ಮಾರ್ಪಟ್ಟಿದೆ.

ಕರ್ನಾಟಕ ಕರಾವಳಿಯಲ್ಲಿ ಬಂಡೆ ಮತ್ತು ಬಿಳಿ ಹೊಯಿಗೆಯನ್ನು ಹೊಂದಿರುವ ಅಪರೂಪದ ಕಡಲ ಕಿನಾರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಪು ಬೀಚ್‌ನ 21 ಮೀಟರ್ ಎತ್ತರದ ಬಂಡೆಯ ಮೇಲೆ ಬ್ರಿಟೀಷ್ ಆಡಳಿತ ಕಾಲದಲ್ಲಿ ಕಾಪು ದೀಪ ಸ್ಥಂಭ (ಕಾಪು ಲೈಟ್ ಹೌಸ್) ನಿರ್ಮಾಣಗೊಂಡಿತ್ತು. ಸೀಮೆ ಎಣ್ಣೆಯ ಇಂಧನದಿಂದ ಬೆಳಗುತ್ತಿದ್ದ ಪ್ರಿಸ್ ಹೊಳಪಿನ ದೀಪವು, ಪ್ರಸಕ್ತ ಆಧುನಿಕತೆಯ ಸ್ಪರ್ಶದೊಂದಿಗೆ ವಿದ್ಯುತ್ ಬೆಳಕಿನ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ವಿಶಾಲ ಪ್ರದೇಶದವರೆಗೂ ದೀಪದ ಬೆಳಕು ಚೆಲ್ಲುವಂತೆ ಮಾಡಲಾಗಿದೆ. ಸಮುದ್ರ ಮಟ್ಟದಿಂದ 21 ಮೀಟರ್ ಎತ್ತರದ ಏಕ ಬಂಡೆಯ ಮೇಲೆ ನಿರ್ಮಾಣಗೊಂಡಿರುವ 34 ಮೀಟರ್ ಎತ್ತರದಲ್ಲಿರುವ ಕಾಪು ಲೈಟ್‌ಹೌಸ್ ಪ್ರತೀ ದಿನ ರಾತ್ರಿ ಮೈಲುಗಟ್ಟಲೆ ದೂರದವರೆಗೂ ಬೆಳಕನ್ನು ಹಾಯಿಸುವ ಮೂಲಕ ಮೀನು ಗಾರರು ಮತ್ತು ಸಮುದ್ರಯಾನಿಗಳನ್ನು ದಡದತ್ತ ತಲುಪಿಸುವ ದಾರಿ ದೀಪವಾಗಿ ಕಾರ್ಯನಿರ್ವಹಿಸುತ್ತಿದೆ.

ಖಾಸಗಿ ಹಾಗೂ ಸರಕಾರಿ ಸಹಭಾಗಿತ್ವದಲ್ಲಿ ಲೈಟ್‌ಹೌಸ್ ಬಂಡೆಗೆ ಹೊಂದಿಕೊಂಡಂತೆ ಇರುವ ಇನ್ನೊಂದು ಬಂಡೆಗೆ ಅಧುನಿಕ ವಿನ್ಯಾಸದಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣ, ಲೈಟ್‌ಹೌಸ್ ಬಂಡೆಗೆ ಸಂಪರ್ಕಿಸಲು ಪೂಟ್‌ಪಾತ್ ನಿರ್ಮಾಣ ಯೋಜನೆಗೆ ಪ್ರಸ್ತಾವ ಸಲ್ಲಿಸಲಾ ಗಿದೆ. ಈ ಹಿಂದೆ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದ ೫ ಕೋಟಿ ರೂ. ವೆಚ್ಚದ ಪ್ರಸ್ತಾವಕ್ಕೆ ಆಡಳಿತಾತ್ಮಕ ಮಂಜೂರಾತಿ ದೊರೆಯಬೇಕಿದೆ. ಕಾಪು ಲೈಟ್ ಹೌಸ್ ಮತ್ತು ಬೀಚ್‌ನ ಸುತ್ತಲಿನಲ್ಲಿ ಹಂತ ಹಂತವಾಗಿ ವಿವಿಧ ಮೂಲ ಸೌಕರ್ಯಗಳನ್ನು ಜೋಡಿಸಲಾಗುವುದು.

 ಕುಮಾರ್, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ ಉಡುಪಿ

ಆಧುನಿಕ ತಂತ್ರಜ್ಞಾನದ ಬೆಳವಣಿಗೆಯಿಂದ ಜಲಮಾರ್ಗದಲ್ಲಿ ಸಂಚರಿಸುವ ನೌಕೆ, ದೋಣಿಗಳಿಗೆ ಜಿಪಿಎಸ್ ಅಳವಡಿಕೆಯಾಯಿತು. ಇದು ಸಮುದ್ರದಲ್ಲಿ ಅವುಗಳು ಸಂಚಾರ ಹಾಗೂ ಇರುವಿಕೆಗೆ ಸ್ಪಷ್ಟ ಮಾಹಿತಿ ನೀಡ ಲಾರಂಭಿಸಿದರೂ, ಲೈಟ್‌ಹೌಸ್‌ಗಳ ಮಹತ್ವ ಕುಗ್ಗಲಿಲ್ಲ. ಲೈಟ್‌ಹೌಸ್ ಪ್ರದೇಶಗಳು ಕ್ರಮೇಣ ಪ್ರವಾಸಿಗರನ್ನು ಆಕರ್ಷಿಸುವ ತಾಣಗಳಾಗಿ ರೂಪುಗೊಳ್ಳುತ್ತಿವೆೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆ ಮೂಲಕ ಕಾಪು ಲೈಟ್‌ಹೌಸ್ ಅಭಿವೃದ್ಧಿಗೆ ಇನ್ನಷ್ಟು ಯೋಜನೆ ಹಾಕಿಕೊಳ್ಳಲಾಗಿದೆ.

 -ಗುರ್ಮೆ ಸುರೇಶ್ ಶೆಟ್ಟಿ, ಶಾಸಕ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಹಮೀದ್ ಪಡುಬಿದ್ರೆ

contributor

Similar News