ಪಿಎಂ ಇಂಟರ್ನ್‌ಶಿಪ್ ಯೋಜನೆ: ಕೆಲಸ ಮಾಡುವ ಮೂಲಕ ಕಲಿಕೆ ಕಲ್ಪನೆಯ ಸಾರ್ವತ್ರೀಕರಣ
ಭಾರತದ 3ನೇ ಶ್ರೇಣಿಯ ನಗರದ ರಾಜ್ಯ ವಿಶ್ವವಿದ್ಯಾಲಯ ಕಾಲೇಜಿನಿಂದ ಪದವಿ ಪಡೆದ ವಾಣಿಜ್ಯ ಪದವೀಧರೆ ರೀನಾ ಅವರನ್ನು ಕಲ್ಪಿಸಿಕೊಳ್ಳಿ. ಅವರ ಕಾಲೇಜಿನಲ್ಲಿ ಪ್ಲೇಸ್ಮೆಂಟ್ ಸೆಲ್ (ಉದ್ಯೋಗ ಕೋಶ) ಇಲ್ಲ ಮತ್ತು ಅವರ ಅತ್ಯುತ್ತಮ ಶೈಕ್ಷಣಿಕ ಸಾಧನೆಯ ಹೊರತಾಗಿಯೂ, ಅವರ ಶಿಕ್ಷಣದ ನಂತರದ ಆಯ್ಕೆಗಳು ಸರಕಾರಿ ಉದ್ಯೋಗ ಪರೀಕ್ಷೆಗೆ ತಯಾರಿ ನಡೆಸುವುದು, ಹತ್ತಿರದ ಶಾಲೆಯಲ್ಲಿ ಕಲಿಸುವುದು (ಇದಕ್ಕಾಗಿ ಅವರು ಯೋಗ್ಯತೆಯನ್ನು/ಸಾಮರ್ಥ್ಯವನ್ನು ಹೊಂದಿರಬಹುದು ಅಥವಾ ಇಲ್ಲದಿರಬಹುದು) ಅಥವಾ ಮದುವೆಯಾಗುವುದಕ್ಕೆ ಸೀಮಿತವಾಗಿದೆ. ಒಟ್ಟಾರೆಯಾಗಿ, ಭಾರತದ ಮೂರನೇ ಒಂದು ಭಾಗದಷ್ಟು ಯುವಜನರು (15-29 ವರ್ಷ ವಯಸ್ಸಿನವರು) ಮತ್ತು ಅದರ ಅರ್ಧಕ್ಕಿಂತ ಹೆಚ್ಚು ಯುವತಿಯರು ಶಿಕ್ಷಣ, ಉದ್ಯೋಗ ಅಥವಾ ತರಬೇತಿಯಲ್ಲಿಲ್ಲ (https://tinyurl.com/yd675u5j). ಇದಲ್ಲದೆ, ಭಾರತದ ಯುವಜನರ ದೊಡ್ಡ ಸಮೂಹ ಖಾಸಗಿ ಕಂಪೆನಿಗಳಿಗೆ ನೇಮಕಗೊಳ್ಳುವುದು ತುಂಬಾ ದೂರದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ, ಯುವ ಸಬಲೀಕರಣಕ್ಕೆ ಸರಕಾರ ಬದ್ಧತೆಯಿಂದ ಅನುಷ್ಠಾನಕ್ಕೆ ತಂದಿರುವ ಅನುಕೂಲಕರವಾದ ಮಾರುಕಟ್ಟೆ ಆಧಾರಿತ ಮತ್ತು ಯುವ-ಚಾಲಿತ ಪ್ರಧಾನಮಂತ್ರಿ ಇಂಟರ್ನ್ ಶಿಪ್ ಯೋಜನೆ (ಪಿ.ಎಂ.ಐ.ಎಸ್.)ಅನುಕೂಲಕರವಾದ ಪರಿಹಾರವನ್ನು ನೀಡುತ್ತದೆ.
ನಿರ್ದಿಷ್ಟ ಯುವಜನರ ಗುಂಪಿಗೆ ಟಾಪ್ -500 ಕಂಪೆನಿಗಳಲ್ಲಿ 12 ತಿಂಗಳ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸಲು ಪಿಎಂಐಎ ಯನ್ನು ವಿನ್ಯಾಸಗೊಳಿಸಲಾಗಿದೆ. 21-24 ವರ್ಷ ವಯಸ್ಸಿನವರು, ಕಡಿಮೆ ಆದಾಯದ ಕುಟುಂಬಗಳಿಂದ ಬಂದವರು ಮತ್ತು ಮೆಟ್ರಿಕ್ಯುಲೇಷನ್‌ನಿಂದ ಪದವಿಯವರೆಗಿನ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವವರು (ಐಐಟಿ ಪದವೀಧರರು, ಸಿಎಗಳು, ಇತ್ಯಾದಿಯವರನ್ನು ಹೊರತುಪಡಿಸಿ) ಇದಕ್ಕೆ ಅರ್ಹರು. ಈ ಯೋಜನೆಯು ಮಾಸಿಕ ರೂ. 5,000 ಸ್ಟೈಫಂಡ್ (ಭತ್ತೆ)ನೀಡುತ್ತದೆ, ಇದಕ್ಕೆ ಸರಕಾರ (ರೂ. 4,500) ಮತ್ತು ಕಂಪೆನಿ (ರೂ. 500) ಜಂಟಿಯಾಗಿ ಧನಸಹಾಯ ನೀಡುತ್ತದೆ. ಇದಲ್ಲದೆ ರೂ. 6,000 ವನ್ನು ಇತರ ವೆಚ್ಚವಾಗಿ ನೀಡುತ್ತದೆ. ಯೋಜನೆಯ ಪ್ರಾಯೋಗಿಕ ಹಂತವು 2024ರ ವೇಳೆಗೆ 1.25 ಲಕ್ಷ ಯುವಜನರಿಗೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿದೆ, ಐದು ವರ್ಷಗಳಲ್ಲಿ ಒಂದು ಕೋಟಿ ಯುವಜನರಿಗೆ ಇಂಟರ್ನ್‌ಶಿಪ್‌ಗೆ
ಅನುಕೂಲ ಮಾಡಿಕೊಡುವ ಗುರಿಯನ್ನು ಇದು ಹೊಂದಿದೆ. ಕಂಪೆನಿಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ಈ ಯೋಜನೆಯಡಿ ಖರ್ಚು ಮಾಡಲು ವಿನಿಯೋಗಿಸಬಹುದು.
ಇಂಟರ್ನ್‌ಶಿಪ್ ವ್ಯವಸ್ಥೆಗಳು ಯುವ ಆಕಾಂಕ್ಷಿಗಳು ಮತ್ತು ಉದ್ಯೋಗದಾತರ ನಡುವಿನ ಪರಸ್ಪರ ಪ್ರಯೋಜನಕಾರಿ ವ್ಯವಸ್ಥೆ ಎಂದು ಬಹಳ ಹಿಂದಿನಿಂದಲೂ ಅರ್ಥಮಾಡಿಕೊಳ್ಳಲಾಗಿದೆ. ಶಿಕ್ಷಣ ಸಂಶೋಧಕರು ಮತ್ತು ಕಲಿಕಾ ವಿಜ್ಞಾನಿಗಳು ಕೆಲಸ ಆಧಾರಿತ ಕಲಿಕೆಯ ಮಹತ್ವವನ್ನು ಗುರುತಿಸಿದ್ದಾರೆ. ಡೇವಿಡ್ ಕೋಲ್ಬ್ಸ್, ಜಾನ್ ಡೀವಿ, ಕರ್ಟ್ ಲೆವಿಸ್ ಮತ್ತು ಇತರರು ಸೇರಿದಂತೆ ವಿದ್ವಾಂಸರು ವಿವಿಧ ಅಂತರ್‌ರಾಷ್ಟ್ರೀಯ ಅಧ್ಯಯನಗಳಲ್ಲಿ ಪ್ರಾಯೋಗಿಕ ಕಲಿಕೆಯ ವಿಧಾನಗಳು ಕೆಲಸದ ಕಾರ್ಯಪಡೆಯ ಅಭಿವೃದ್ಧಿಗೆ ಪ್ರಮುಖ ಸಾಧನಗಳಾಗಿವೆ ಎಂದು ಸಾಬೀತು ಮಾಡಿದ್ದಾರೆ. ಇಂಟರ್ನ್‌ಶಿಪ್‌ಗಳು ಸಂವಹನ, ಸಹಯೋಗ, ಸೃಜನಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಅಭಿವೃದ್ಧಿಪಡಿಸುತ್ತವೆ.
ಯುವ ಆಕಾಂಕ್ಷಿಗಳಿಗೆ, ಪಿಎಂಐಎಸ್ ಅಡಿಯಲ್ಲಿ ಇಂಟರ್ನ್‌ಶಿಪ್‌ಗಳು ಅವಕಾಶಗಳು ಮಾತ್ರವಲ್ಲದೆ ಪರಿವರ್ತಕ ಅನುಭವಗಳಾಗಿರುತ್ತವೆ. ಅವರು ಕಾರ್ಪೊರೇಟ್ ಕೆಲಸದ ನೈಜ ಜಗತ್ತಿಗೆ ಒಡ್ಡಿಕೊಳ್ಳುತ್ತಾರೆ, ಇದು ದೇಶಾದ್ಯಂತದ ಹೆಚ್ಚಿನ ಕಾಲೇಜುಗಳಲ್ಲಿ ಕಲಿಸಿದಂತೆ ತುಲನಾತ್ಮಕವಾಗಿ ಹೆಚ್ಚು ರಚನಾತ್ಮಕ ಮತ್ತು ಸ್ಥಿರವಾದ ಶಿಕ್ಷಣ ಪ್ರಪಂಚಕ್ಕಿಂತ ಸಾಕಷ್ಟು ಭಿನ್ನವಾಗಿರುತ್ತದೆ. ತಮ್ಮ ಅತ್ಯುತ್ತಮ ವೃತ್ತಿಜೀವನದ ಹಾದಿಯನ್ನು ಅಭಿವೃದ್ಧಿಪಡಿಸುವುದು ಮತ್ತು ಗುರುತಿಸುವುದರ ಜೊತೆಗೆ, ಆಕಾಂಕ್ಷಿಗಳು ಜವಾಬ್ದಾರಿಯನ್ನು ನಿರ್ವಹಿಸುವುದು, ಸಮಸ್ಯೆಯನ್ನು ಪರಿಹರಿಸುವುದು, ನಿರ್ಧಾರ ತೆಗೆದುಕೊಳ್ಳುವುದು, ತಂಡದ ರೀತಿಯಲ್ಲಿ ಕೆಲಸ ಮತ್ತು ಸಮಯ ನಿರ್ವಹಣೆಯಲ್ಲಿ ತರಬೇತಿಯನ್ನು ಸಹ ಪಡೆಯಬಹುದು.
ಇಂಟರ್ನ್‌ಶಿಪ್‌ಗಳಿಂದ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳ ಪ್ರತಿಭಾವಂತ, ಪ್ರಾಮಾಣಿಕ ಮತ್ತು ಬದ್ಧತೆಯುಳ್ಳ ಯುವಜನರು ಎದುರಿಸುವ ಅಡೆ ತಡೆಗಳು ನಿವಾರಣೆಯಾಗುತ್ತವೆ. ಪ್ರವೇಶ ಮಟ್ಟದಲ್ಲಿ ಎದುರಾಗುವ ಅಡೆತಡೆಗಳನ್ನು ಇವು ಮುರಿಯುತ್ತವೆ, ಇದರಲ್ಲಿ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವುದು, ಇ-ಮೇಲ್ ಶಿಷ್ಟಾಚಾರ, ಕಂಪ್ಯೂಟರ್ ಬಳಸುವುದು, ಎಂಎಸ್ ಆಫೀಸ್ ಅಥವಾ ವಿಶ್ವಾಸಾರ್ಹ ಮತ್ತು ಹೆಚ್ಚು ಸೂಕ್ತವಾದ ಮಾಹಿತಿಗಾಗಿ ಇಂಟರ್ನೆಟ್‌ನಲ್ಲಿ ಹುಡುಕುವಂತಹ ಮೂಲಭೂತ ಕೌಶಲ್ಯಗಳು ಒಳಗೊಂಡಿರುತ್ತವೆ. ಭಾರತದ ಪ್ರಮುಖ ಸಂಸ್ಥೆಗಳು ಮತ್ತು ವೃತ್ತಿಪರ ಕೋರ್ಸ್ ಗಳಲ್ಲಿ ಇಂಟರ್ನ್‌ಶಿಪ್‌ಗಳು ರೂಢಿಯಾಗಿದ್ದರೂ, ವೃತ್ತಿ ಸಲಹೆ ಮತ್ತು ಉದ್ಯೋಗ-ಆಧಾರಿತ ನೆಟ್ವರ್ಕಿಂಗ್ ಕೊರತೆಯಿಂದಾಗಿ ಹೆಚ್ಚಿನ ಯುವಜನರು ಹಾಜರಾಗುವ ರಾಜ್ಯ ವಿಶ್ವವಿದ್ಯಾನಿಲಯಗಳು ಮತ್ತು ಕಡಿಮೆ ಪ್ರಸಿದ್ಧ ಕಾಲೇಜುಗಳಲ್ಲಿ ಅವು ಅಸಾಮಾನ್ಯವಾಗಿ ಉಳಿದಿವೆ. ಪಿಎಂಐಎಸ್ ಮೂಲಕ ಸಾಮೂಹಿಕ ಮಟ್ಟದ ಇಂಟರ್ನ್‌ಶಿಪ್‌ಗಳು ಮೆಟ್ರೋ ಅಲ್ಲದ ನಗರಗಳ ಯುವಜನರಿಗೆ ಅವಕಾಶಗಳೆಂಬ ಆಟದ ಮೈದಾನಗಳನ್ನು ಸಮತೋಲನಗೊಳಿಸುತ್ತವೆ ಮತ್ತು ಸಂಭಾವ್ಯ ಉದ್ಯೋಗಗಳಿಗೆ ಬಾಗಿಲು ತೆರೆಯುತ್ತವೆ. ವೈಯಕ್ತಿಕ ಮಟ್ಟದಲ್ಲಿ, ಹೊಸ ಆರ್ಥಿಕ ಸ್ವಾತಂತ್ರ್ಯವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಯುವ ಮನಸ್ಸುಗಳನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ಉನ್ನತ ಗುರಿಯನ್ನು ಹೊಂದಲು ಪ್ರೇರೇಪಿಸುತ್ತದೆ. ಯುವತಿಯರಿಗೆ, ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಯಂ-ಮೌಲ್ಯದ ಪ್ರಜ್ಞೆಯು ಮದುವೆಯ ವಯಸ್ಸು ಮತ್ತು ವಿವಾಹಪೂರ್ವ ನಿಬಂಧನೆಗಳನ್ನು ಒಳಗೊಂಡಂತೆ ಜೀವನದ ನಿರ್ಧಾರಗಳನ್ನು ಬದಲಾಯಿಸುವಂತೆ ಮಾಡುವ ಅವಕಾಶಗಳನ್ನು ಒದಗಿಸುತ್ತದೆ.
ಉದ್ಯೋಗದಾತರಿಗೆ, ಇಂಟರ್ನ್‌ಶಿಪ್‌ಗಳು ದೀರ್ಘಕಾಲೀನ ಉದ್ಯೋಗಕ್ಕೆ ಸೂಕ್ತ , ಸಮರ್ಥ ಅಭ್ಯರ್ಥಿಯನ್ನು ಪರೀಕ್ಷಿಸಿ ಆಯ್ಕೆ ಮಾಡಿಕೊಳ್ಳಲು ಉತ್ತಮ ಕಡಿಮೆ-ವೆಚ್ಚದ ಪ್ರಯೋಗಗಳು ಮಾತ್ರವಲ್ಲದೆ, ಕೌಶಲ್ಯಗಳ ಅಂತರವನ್ನು ಕಡಿಮೆ ಮಾಡಲು ಮತ್ತು ಅವರ ಸಿಎಸ್‌ಆರ್ ವಿನಿಯೋಗವನ್ನು ಪೂರೈಸಲು ಒಂದು ಕಾರ್ಯತಂತ್ರದ ಸಾಧನವಾಗಿದೆ.
12 ತಿಂಗಳುಗಳಲ್ಲಿ, ಕಂಪೆನಿಯು ಇಂಟರ್ನ್‌ನ (ಪ್ರಶಿಕ್ಷಣಾರ್ಥಿಯ) ಐಕ್ಯೂ ಮತ್ತು ಇಕ್ಯೂ ಅನ್ನು ನಿಖರವಾಗಿ ಗಮನಿಸಬಹುದು ಮತ್ತು ವರ್ತನೆಗಾಗಿ ನೇಮಕ ಮಾಡಿಕೊಳ್ಳುವ ಮತ್ತು ಕೌಶಲ್ಯಕ್ಕಾಗಿ ತರಬೇತಿ ಎಂಬ ಹೆಚ್ಚು ಪ್ರಚೋದಿತ ಕಾರ್ಯತಂತ್ರವನ್ನು ವಿಶ್ವಾಸದಿಂದ ಅನುಸರಿಸಬಹುದು.
ವಿಸ್ತಾರ ವ್ಯಾಪ್ತಿಯಲ್ಲಿ ಆರ್ಥಿಕತೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಪಿಎಂಐಎಸ್ ರಾಷ್ಟ್ರೀಯ ಶಿಕ್ಷಣ ನೀತಿ 2020 ರೊಂದಿಗೆ ಹೊಂದಿಕೆಯಾಗಿದೆ ಮತ್ತು ಯುವ ಉದ್ಯೋಗವನ್ನು ಉತ್ತೇಜಿಸಲು ಹಾಗೂ ಅವಕಾಶವಂಚಿತ ಹಿನ್ನೆಲೆಯ ಯುವಜನರಿಗೆ ಉದ್ಯೋಗಾವಕಾಶಗಳಲ್ಲಿ ಸಮಾನತೆಯನ್ನು ತರಲು ತಕ್ಷಣದ ಸಮಯೋಚಿತ ಕ್ರಮವಾಗಿದೆ. ಉತ್ತೀರ್ಣರಾಗಿ ಹೊರ ಬಂದ ಹೊಸಬರಿಗೆ ಫಿನಿಶಿಂಗ್ ಶಾಲೆಯಾಗಿ (ನೈಪುಣ್ಯ ಕಲಿಸುವ ಶಾಲೆಯಾಗಿ) ಕಾರ್ಯನಿರ್ವಹಿಸುವ ಮೂಲಕ, ಇಂಟರ್ನ್‌ಶಿಪ್‌ಗಳು ಆರ್ಥಿಕತೆಯ ಮೇಲಿನ ‘ಉದ್ಯೋಗಾವಕಾಶ ವಿಲ್ಲದ ಪ್ರತಿಭೆ’ಯ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಎಐ(ಕೃತಕ ಬುದ್ಧಿಮತ್ತೆ)ನ ಮುಂಬರುವ ಯುಗದಲ್ಲಿ ಶಿಕ್ಷಣದಿಂದ ಉದ್ಯೋಗಕ್ಕೆ ಅಂತಹ ಮಾರ್ಗವು ಹೆಚ್ಚು ನಿರ್ಣಾಯಕವಾಗಿರುತ್ತದೆ, ಅಲ್ಲಿ ಬದಲಾವಣೆಗೆ ಹೊಂದಿಕೊಳ್ಳುವಿಕೆ ಮತ್ತು ಜೀವನ ಕೌಶಲ್ಯಗಳಿಂದ ಉದ್ಯೋಗದ ಸೂಕ್ತತೆಯನ್ನು ನಿರ್ಧರಿಸಲಾಗುತ್ತದೆ. ದೀರ್ಘಾವಧಿಯಲ್ಲಿ, ಇದು ಉತ್ಪಾದನಾ ವಲಯದಲ್ಲಿ ಬಂಡವಾಳ-ಕಾರ್ಮಿಕ ಅನುಪಾತದ ಮೇಲೂ ಪ್ರಭಾವ ಬೀರಬಹುದು.
ಕಂಪೆನಿಗಳಲ್ಲಿ ಹೆಚ್ಚಿನ ಸಂಖ್ಯೆಯ ಇಂಟರ್ನ್‌ಗಳಿಗೆ ಭೌತಿಕವಾಗಿ ಅವಕಾಶ ನೀಡುವುದು, ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಿಂದ ಇಂಟರ್ನ್‌ಗಳನ್ನು ನೇಮಿಸಿಕೊಳ್ಳಲು ಅಗ್ರ 500 ಕಂಪೆನಿಗಳನ್ನು ಪಡೆಯುವುದು ಮತ್ತು ಆಕಾಂಕ್ಷಿಯು ತನ್ನ ಪಟ್ಟಣದಿಂದ ಸ್ಥಳಾಂತರಗೊಳ್ಳಬೇಕಾದ ಸಂದರ್ಭದಲ್ಲಿ ಮಾಸಿಕ ಸ್ಟೈಫಂಡ್‌ನ ಸಮರ್ಪಕತೆ ಅಲ್ಲಿ ಸವಾಲಾಗಿ ಉಳಿಯಲಿದೆ ಎಂದು ಹೇಳಲಾಗುತ್ತದೆ. ಇಲ್ಲಿ, ರಿಮೋಟ್ ಕೆಲಸ, ಮೆಟ್ರೋಯೇತರ ಕಡೆಯಲ್ಲಿರುವ ಕಚೇರಿಗಳು ಮತ್ತು ಕಾರ್ಖಾನೆಗಳಲ್ಲಿ ನೇಮಕಾತಿ ಮತ್ತು ಕಂಪೆನಿಯಿಂದ ಹೆಚ್ಚುವರಿ ಸ್ಟೈಫಂಡ್‌ಗಳು ಸಂಭವನೀಯ ಪರಿಹಾರಗಳಾಗಿವೆ.
ಹೀಗಾಗಿ ಪಿಎಂಐಎಸ್ ಉದ್ಯೋಗ ಸೃಷ್ಟಿಗೆ ವೇಗವರ್ಧಕವಾಗಿದೆ, ವ್ಯಾಪಕ ಪ್ರಚಾರ ಮತ್ತು ನಿಖರವಾದ ಅನುಷ್ಠಾನಕ್ಕೆ ಅದು ಕರೆ ನೀಡುತ್ತದೆ, ಭಾರತದ ಜನಸಂಖ್ಯಾ ಲಾಭಾಂಶಕ್ಕೆ ಉತ್ತಮವಾಗಿ ಹೊಂದಿಕೊಳ್ಳುವ ಗುರಿಯನ್ನು ನಿರಂತರವಾಗಿ ಹೊಂದಿದೆ. ಈ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ ಕಾರ್ಪೊರೇಟ್ ಸಂಸ್ಥೆಗಳು ತೋರಿಸಿದ ಹೆಚ್ಚಿನ ಆಸಕ್ತಿಯು ಭಾರತೀಯ ಯುವಜನರನ್ನು ಕೌಶಲ್ಯಯುಕ್ತಗೊಳಿಸುವ, ಅವರ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಮತ್ತು ಅವರ ಜೀವನೋಪಾಯವನ್ನು ಹೆಚ್ಚಿಸುವ ಅಂತಿಮ ಗುರಿಯನ್ನು ಹೊಂದಿರುವ ಈ ಯೋಜನೆ ಭವಿಷ್ಯದಲ್ಲಿ ಉತ್ತಮ ಸಾಧನೆ ದಾಖಲಿಸುವ ನಿರೀಕ್ಷೆ ಇದೆ.
(ವಿ. ಅನಂತನಾಗೇಶ್ವರನ್ ಭಾರತ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದಾರೆ. ದೀಕ್ಷಾ ಸುಪ್ಯಾಲ್ ಬಿಶ್ತ್ ಭಾರತೀಯ ಆರ್ಥಿಕ ಸೇವೆಯಲ್ಲಿ ಅಧಿಕಾರಿಯಾಗಿದ್ದಾರೆ. ಅವರ ಅಭಿಪ್ರಾಯಗಳು ವೈಯಕ್ತಿಕವಾಗಿವೆ).