ಮತಾಂತರ ನಿಗ್ರಹ ಕಾನೂನು ರದ್ದು: ಹುಸಿಯಾದ ಕಾಂಗ್ರೆಸ್ ಭರವಸೆ

ಹಿಂದಿನ ಬಿಜೆಪಿ ಸರಕಾರವು 2022, ಮೇ 17ರಂದು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿದ್ದ ಈ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ಹಾಲಿ ಆಡಳಿತಾರೂಢ ಕಾಂಗ್ರೆಸ್ ಭರವಸೆ ನೀಡಿತ್ತು,ಆದರೆ ಅದು ಈ ಭರವಸೆಯನ್ನು ಮರೆತಂತಿದೆ.

Update: 2024-10-26 08:41 GMT

ಆಮಿಷಗಳನ್ನೊಡ್ಡುವ ಮೂಲಕ ಜನರನ್ನು ಮತಾಂತರಿಸುತ್ತಿರುವ ಸುಳ್ಳು ಆರೋಪದಲ್ಲಿ ತಮ್ಮನ್ನು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕುಗಳ ರಕ್ಷಣಾ ಕಾನೂನು(ಮತಾಂತರ ನಿಗ್ರಹ ಕಾಯ್ದೆ) ಅಡಿ ಬಂಧಿಸಿ ಜೈಲಿಗೆ ತಳ್ಳಲಾಗುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.

ಹಾವೇರಿ ಜಿಲ್ಲೆಯ ನಿವಾಸಿ, ದಲಿತ ವ್ಯಕ್ತಿ ಸೋಮಣ್ಣ(ಹೆಸರು ಬದಲಿಸಲಾಗಿದೆ) ಇವರಲ್ಲೊಬ್ಬರು. ಕಳೆದ ವರ್ಷದ ಫೆಬ್ರವರಿಯಲ್ಲಿ ಅವರ ಮನೆಗೆ ನುಗ್ಗಿದ್ದ ಜನರ ಗುಂಪೊಂದು ಆಮಿಷಗಳನ್ನೊಡ್ಡಿ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿರುವ ಆರೋಪ ಹೊರಿಸಿದಾಗ ಅವರ ಸಂಕಷ್ಟ ಆರಂಭಗೊಂಡಿತ್ತು. ಅವರ ವಿರುದ್ಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆಗಾಗಿ ಹಲವಾರು ಬಾರಿ ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ. ಆದರೆ ಸೋಮಣ್ಣ ಹೇಳುವಂತೆ ಅಂದು ನಡೆದಿದ್ದು ಜಾತಿ ಅಪರಾಧವಾಗಿದ್ದು,ಅವರ ಮೇಲೆ ದಾಳಿ ನಡೆಸಿದವರು ಮತಾಂತರ ನಿಗ್ರಹ ಕಾಯ್ದೆಯಡಿ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಅದನ್ನು ಮುಚ್ಚಿ ಹಾಕಿದ್ದರು.

ಕರ್ನಾಟಕ ರಾಜ್ಯ ಅಪರಾಧ ದಾಖಲೆಗಳ ಘಟಕವು ಆರ್‌ಟಿಐ ಉತ್ತರದಲ್ಲಿ ಒದಗಿಸಿರುವ ಮಾಹಿತಿಯಂತೆ ಮೇ 2022ರಿಂದ ಜೂ.30,2024ರವರೆಗೆ ಮತಾಂತರ ನಿಗ್ರಹ ಕಾಯ್ದೆಯಡಿ 30 ಪ್ರಕರಣಗಳು ದಾಖಲಾಗಿದ್ದು,34ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ಈ ಪೈಕಿ 21 ಪ್ರಕರಣಗಳು ಬಿಜೆಪಿ ಸರಕಾರದ ಅಧಿಕಾರಾವಧಿಯಲ್ಲಿ ಮತ್ತು 9 ಪ್ರಕರಣಗಳು ಮೇ 2023ರಲ್ಲಿ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ನಂತರ ದಾಖಲಾಗಿವೆ.

ಪ್ರಕರಣ ದಾಖಲಿಸಲ್ಪಟ್ಟಿರುವ ಕೆಲವು ವ್ಯಕ್ತಿಗಳು, ವಕೀಲರು ಮತ್ತು ಪೊಲೀಸರೊಂದಿಗೆ ನಡೆಸಿದ ಸಂವಾದಗಳು ಕಾಯ್ದೆಯನ್ನು ಹೆಚ್ಚಾಗಿ ಕಿರುಕುಳ ನೀಡಲು ಸಾಧನವಾಗಿ ಮತ್ತು ಕೆಲವು ಸಂದರ್ಭಗಳಲ್ಲಿ ವೈಯಕ್ತಿಕ ಸೇಡನ್ನು ತೀರಿಸಿಕೊಳ್ಳಲು ಬಳಸಲಾಗುತ್ತಿದೆ ಎನ್ನುವುದನ್ನು ಸೂಚಿಸಿವೆ.

ಸೋಮಣ್ಣ ತನ್ನ ವಿರುದ್ಧ ಎಫ್‌ಐಆರ್ ದಾಖಲಾಗುವ ಎರಡು ತಿಂಗಳ ಮುನ್ನ ಪ್ರಾರ್ಥನೆಗಳನ್ನು ಆಯೋಜಿಸುವ ಚೆನ್ನೈ ಮೂಲದ ಫ್ರೆಂಡ್ಸ್ ಮಿಶನರಿ ಪ್ರೇಯರ್ ಬ್ಯಾಂಡ್‌ನ ಸದಸ್ಯನಾಗಿ ಸೇವೆ ಸಲ್ಲಿಸಲು ಹಾವೇರಿ ಜಿಲ್ಲೆಯ ಬಾಳಂಬೀಡ್‌ನಲ್ಲಿ ವಾಸ್ತವ್ಯ ಆರಂಭಿಸಿದ್ದರು. ಅಲ್ಲಿ ಅವರು ರವಿವಾರಗಳಂದು ಅರ್ಧ ಗಂಟೆಯ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದರು. ಅಲ್ಲಿ ಹಾಡೊಂದನ್ನು ಹಾಡಿದ ಬಳಿಕ ಜನರು ವೈಯಕ್ತಿಕ ಪ್ರಾರ್ಥನೆಗಳನ್ನು ನಡೆಸುತ್ತಿದ್ದರು. ಹಲವರು ಕ್ರಿಸ್ತನನ್ನು ಪ್ರಾರ್ಥಿಸುತ್ತಿದ್ದರು, ಆದರೆ ಜೈನರು ಮತ್ತು ಬ್ರಾಹ್ಮಣರೂ ಈ ಪ್ರಾರ್ಥನಾ ಸಭೆಗಳಿಗೆ ಸೇರುತ್ತಿದ್ದರು. ಗುಂಪಿನ ದಾಳಿಯ ಬಳಿಕ ಸೋಮಣ್ಣ ಸ್ನೇಹಿತರ ಸಲಹೆ ಮೇರೆಗೆ ನೆರೆಯ ಗದಗ ಜಿಲ್ಲೆಯ ಚರ್ಚೊಂದರಲ್ಲಿ ವಾಸವಾಗಿದ್ದು, ಹಾವೇರಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ.

ರಾಜ್ಯದಲ್ಲಿ 2022, ಅ.13ರಂದು ಮತಾಂತರ ನಿಗ್ರಹ ಕಾಯ್ದೆಯಡಿ ಮೊದಲ ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿತ್ತು. ‘ಲವ್ ಜಿಹಾದ್’ಮತ್ತು ‘ಕ್ರಿಶ್ಚಿಯನ್ ಮಿಷನರಿಗಳ’ಗಳ ಕುರಿತು ನಿರಂತರ ಬಲಪಂಥೀಯ ಪ್ರಚಾರದ ಹಿನ್ನೆಲೆಯಲ್ಲಿ ಕಾಯ್ದೆಯಲ್ಲಿಯ ಮತಾಂತರಕ್ಕೆ ‘ಆಮಿಷ’ ಪದದ ಅಸ್ಪಷ್ಟತೆಯು ಅಲ್ಪಸಂಖ್ಯಾತರು ನಡೆಸುವ ದತ್ತಿ ಕಾರ್ಯಗಳ ಬಗ್ಗೆಯೂ ಅನುಮಾನವನ್ನುಂಟು ಮಾಡುತ್ತದೆ ಮತ್ತು ಅವರ ಮೇಲಿನ ದಾಳಿಗಳನ್ನು ಕಾನೂನುಬದ್ಧಗೊಳಿಸುತ್ತದೆ ಎಂದು ನ್ಯಾಯವಾದಿ ಮತ್ತು ಪಿಯುಸಿಎಲ್ ಸದಸ್ಯೆ ಮಾನವಿ ಅತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಧರ್ಮವು ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದೆ. ಸರಕಾರವು ಅದರಲ್ಲಿ ಹಸ್ತಕ್ಷೇಪ ಮಾಡಬಾರದು,ಹಾಗೆ ಮಾಡಿದರೆ ಅದು ಸಂವಿಧಾನವು ಒದಗಿಸಿರುವ ವ್ಯಕ್ತಿಯ ಧರ್ಮದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಬೆಂಗಳೂರಿನ ಸಾಮಾಜಿಕ ಹೋರಾಟಗಾರ ಶಿವಸುಂದರ್ ಹೇಳಿದರು.

ಕೃಪೆ:  www.thenewsminute.com

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಅನಿಷಾ ಶೇಠ್ www.thenewsminute.com

contributor

Similar News