ಪರಿಶಿಷ್ಟರ SCSP ಮತ್ತು TSP ಗೆ ನಿಗದಿಯಾದ ಮೊತ್ತದಿಂದ 14 ಸಾವಿರ ಕೋಟಿಯನ್ನು ಗ್ಯಾರಂಟಿಯ ಮೂಲಕ ವ್ಯಯ ಮಾಡುವ ಸರ್ಕಾರದ ನಿರ್ಧಾರ ಖಂಡನಾರ್ಹ

Update: 2024-07-06 08:28 GMT
Editor : Ashfaq | Byline : ಶಿವಸುಂದರ್

ಮಾನ್ಯ ಮುಖ್ಯಮಂತ್ರಿಗಳೇ, ನಿನ್ನೆಯ ಸಂಪುಟ ಸಭೆಯಲ್ಲಿ ತಮ್ಮ ಸರ್ಕಾರ ಪರಿಶಿಷ್ಟರ SCSP ಮತ್ತು TSP ಗೆ ನಿಗದಿಯಾದ 39121 ಕೋಟಿ ಮೊತ್ತದಲ್ಲಿ 14282 ಕೋಟಿಯನ್ನು ಗ್ಯಾರಂಟಿಯ ಮೂಲಕ ವ್ಯಯಮಾಡುವ ತೀರ್ಮಾನ ಮಾಡಿದ್ದೀರಿ. ಇದು SCSP ಮತ್ತು TSP ಗಳ ಮೂಲ ಆಶಯಗಳಿಗೆ ವಿರುದ್ಧವಾಗಿದೆ.

ಏಕೆಂದರೆ SCSP ಮತ್ತು TSP ಯೋಜನೆಗಳು ಒಟ್ಟಾರೆ ಸಮಾಜದ ಬಡತನ ನಿವಾರಣಾ ಯೋಜನೆಗಳ ಉದ್ದೇಶದಿಂದ ರೂಪಿತಗೊಂಡಿದ್ದಲ್ಲ. ಉಳಿದ ಸಮಾಜಕ್ಕೂ ಹಾಗೂ ಪರಿಶಿಷ್ಟ ಸಮಾಜಕ್ಕೂ ಇರುವ ಅಭಿವೃದ್ಧಿ ಅಂತರವನ್ನು ಕಡಿಮೆಮಾಡುವ ಸಲುವಾಗಿ ರೂಪಿತಗೊಂಡಿದ್ದು.

ಸರ್ಕಾರವು ರೂಪಿಸುವ ಇತರ ಬಡತನ ನಿರ್ಮೂಲನ ಯೋಜನೆಗಳು ಶ್ರೇಣೀಕೃತ ಸಮಾಜದಲ್ಲಿ ಸಾಮಾಜಿಕ ತಾರತಮ್ಯಗಳ ಕಾರಣಗಳಿಂದಾಗಿ ಹಿಂದುಳಿದ ಪರಿಶಿಷ್ಟರಿಗೆ ಆದ್ಯತೆಯನ್ನು ನೀಡುವುದಿಲ್ಲ. ಹೀಗಾಗಿ ಏನೇ ಅಭಿವೃದ್ಧಿಯಾದರೂ ಪರಿಶಿಷ್ಟರಿಗೂ ಮತ್ತು ಉಳಿದ ಸಮಾಜಕ್ಕೂ ಇರುವ ಅಂತರ ಮುಂದುವರೆಯುತ್ತಲೇ ಇರುತ್ತದೆ.

ಆ ಕಾರಣದಿಂದಾಗಿಯೇ SCSP ಮತ್ತು TSP ಯೋಜನೆಗಳು ಇತರ ಬಡತನ ನಿವಾರಣೆ ಯೋಜನೆಗಳ ಜೊತೆಗೆ, ಹೆಚ್ಚುವರಿಯಾಗಿ ವಿಶೇಷವಾಗಿ, ಪರಿಶಿಷ್ಟರ ಅಭಿವೃದ್ಧಿ ಅಂತರವನ್ನು ಕಡಿತಗೊಳಿಸಲು ರೂಪಿಸಲಾಗಿದೆ.

ಇತರ ಬಡತನ ನಿವಾರಣಾ ಯೋಜನೆಗಳ ಜೊತೆಗೆ ಹೆಚ್ಚುವರಿಯಾಗಿ SCSP ಮತ್ತು TSP ಯೋಜನೆಗಳಿರಬೇಕೇ ವಿನಃ ಬಡತನ ನಿವಾರಣಾ ಯೋಜನೆಗಳಲ್ಲಿ ಪರಿಶಿಷ್ಟರ ಪಾಲು ಎಂದು ಎತ್ತಿಡುವುದರಿಂದ ಈ ಅಂತರ ನಿವಾರಣೆ ಎಂಬ ವಿಶೇಷ ಉದ್ದೇಶವೇ ವಿಫಲವಾಗುತ್ತದೆ.

ಗ್ಯಾರಂಟಿ ಯೋಜನೆಗಳು ನಾಡಿನ ಒಟ್ಟಾರೆ ಬಡತನ ನಿವಾರಣಾ ತಾತ್ಕಾಲಿಕ ಯೋಜನಗಳಾಗಿವೆ. ನಾಡಿನ ಎಲ್ಲಾ ಬಡವರಂತೆ ಬಡ ಪರಿಶಿಷ್ಟರೂ ಅದರ ಫಲಾನುಭವಿಗಳಾಗಬೇಕು. ಅದು ಸರ್ಕಾರದ ಒಟ್ಟಾರೆ ವೆಚ್ಚದ ಭಾಗವಾಗಬೇಕೇ ವಿನಃ ಪರಿಶಿಷ್ಟರ ಅಂತರ ಕಡಿಮೆ ಮಾಡುವ SCSP ಮತ್ತು TSP ಯಂಥ ವಿಶೇಷ ವೆಚ್ಚಗಳ ಭಾಗವಾಗಬಾರದು. ಹಾಗೆ ಮಾಡುವ ಮೂಲಕ ಪರಿಶಿಷ್ಟರಿಗೆ ಮಾಡಬೇಕಾದ ವಿಶೇಷ ವೆಚ್ಚಗಳನ್ನು ಮತ್ತು ವಿಶೇಷ ಆದ್ಯತೆಗಳನ್ನು ಸರ್ಕಾರ ನಿರಾಕರಿಸಿದಂತಾಗುತ್ತದೆ. ಇದು ಸಾಮಾಜಿಕ ನ್ಯಾಯದ ಕ್ರಮವಾಗುವುದಿಲ್ಲ. ಬದಲಿಗೆ ಸಾಮಾಜಿಕ ಅನ್ಯಾಯ ಕ್ರಮವಾಗುತ್ತದೆ.

ಈ ಸಾಲಿನಲ್ಲಿ ಗ್ಯಾರಂಟಿಗಳಿಗಾಗಿ ಸರ್ಕಾರ 52 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದೆ. ಈಗ ಪರಿಶಿಷ್ಟರಿಗೆ ಮಾತ್ರ ವ್ಯಯ ಮಾಡಬೇಕಿದ್ದ SCSP ಮತ್ತು TSP ಯೋಜನೆಗಳಿಗೆ ನಿಗದಿಯಾಗಿರುವ 39121 ಕೋಟಿ ರೂ. ಮೊತ್ತದಲ್ಲಿ ರೂ. 14282 ಕೋಟಿಯನ್ನು ಗ್ಯಾರಂಟಿಯ ಮೂಲಕ ವ್ಯಯಮಾಡುವ ತೀರ್ಮಾನ ಮಾಡಲಾಗಿದೆ.

ಅಂದರೆ ಒಟ್ಟಾರೆ ರಾಜ್ಯದಲ್ಲಿ ಗ್ಯಾರಂಟಿಗಳಿಗಾಗಿ ವ್ಯಯವಾಗಲಿರುವ 52 ಸಾವಿರ ಕೋಟಿಯಲ್ಲಿ 14282 ಕೋಟಿಯನ್ನು ಅಂದರೆ ಒಟ್ಟಾರೆ ಗ್ಯಾರಂಟಿ ವೆಚ್ಚದ ಶೇ. 27 ರಷ್ಟು ಹಣವನ್ನು ಪರಿಶಿಷ್ಟರಿಗೆಂದೇ ಮೀಸಲಿಡಬೇಕಿರುವ SCSP ಮತ್ತು TSP ನಿಧಿಯಿಂದ ವೆಚ್ಚವಾಗುತ್ತಿದೆ ಎಂದಾಯ್ತು. ಅಂದರೆ ಶೇ. 27 ರಷ್ಟು. ಹಾಗಿದ್ದಲ್ಲಿ ರಾಜ್ಯದಲ್ಲಿ ಪರಿಶಿಷ್ಟರ ಜನಸಂಖ್ಯೆ ಶೇ. 27 ಆಗಿದ್ದು ಯಾವಾಗ? ಮತ್ತು ಈ ಗ್ಯಾರಂಟಿ ಯೋಜನೆಗಳಲ್ಲಿ ಶೇ. 27 ರಷ್ಟು ಫಲಾನುಭವಿಗಳು ಪರಿಶಿಷ್ಟರು ಎಂಬ ಅಧ್ಯಯನವನ್ನೇನಾದರೂ ಸರ್ಕಾರ ಮಾಡಿದೆಯೇ?

ಉದಾಹರಣೆಗೆ 2024-25 ರ ಬಜೆಟ್ಟಿನ ಪ್ರಕಾರ ಶಕ್ತಿ ಯೋಜನೆಗೆ 5105 ಕೋಟಿ ರೂ. ತೆಗೆದಿಡಲಾಗಿದೆ. ಇಂದು ಸರ್ಕಾರ ಶಕ್ತಿ ಯೋಜನೆಗೆ SCSP ಮತ್ತು TSP ಗೆ ಮೀಸಲಾದ ಮೊತ್ತದಿಂದ 1451 ಕೋಟಿ ವಿನಿಯೋಗಿಸಲಾಗುವುದು ಎಂದು ಹೇಳಿದೆ. ಅಂದರೆ ಶಕ್ತಿ ಯೋಜನೆಯ ಶೇ. 34 ರಷ್ಟನ್ನು SCSP ಮತ್ತು TSP ಯಿಂದ ಭರಿಸಲಾಗುತ್ತಿದೆ ಎಂದಾಗಲಿಲ್ಲವೇ? ಇದು ಯಾವ ರೀತಿ ಸಮರ್ಥನೀಯ ?

ಆದ್ದರಿಂದ ಮುಖ್ಯಮಂತ್ರಿಗಳೇ, ಗ್ಯಾರಂಟಿ ವೆಚ್ಚವನ್ನು SCSP ಮತ್ತು TSP ಗೆ ಮೀಸಲಾದ ಮೊತ್ತದಿಂದ ಭರಿಸುವ ಯೋಜನೆಯನ್ನು ಕೂಡಲೇ ಕೈಬಿಡಿ. ಗ್ಯಾರಂಟಿಗೆ ಯೋಜನೆಗಳು ಮುಂದುವರೆಯಲೇಬೇಕು. ಆದರೆ ಅದಕ್ಕೆ ನೀವು ಉಳ್ಳವರಿಂದ ಶುಲ್ಕ, ದಂಡ, ತೆರಿಗೆ, ಇತ್ಯಾದಿಗಳ ಮೂಲಕ ಸಂಗ್ರಹಿಸುವ ಸಾಮಾಜಿಕ ನ್ಯಾಯದ ಕ್ರಮಗಳನ್ನು ಅನುಸರಿಸಬೇಕೆಂದು ಆಗ್ರಹಿಸುತ್ತೇನೆ.

-ಶಿವಸುಂದರ್

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ಶಿವಸುಂದರ್

contributor

Similar News