ಸೆಪ್ಟಂಬರ್ 23ರ ವಾಣಿಜ್ಯ ಶೃಂಗಸಭೆ

Update: 2024-09-30 05:01 GMT

ಸೆಪ್ಟಂಬರ್ 23 ರಂದು ಭಾರತೀಯ ವಿಜ್ಞಾನ ಸಂಸ್ಥೆ (IISc) ಯು, ತನ್ನ ಪ್ರಸಿದ್ಧ ಜೆ. ಎನ್. ಟಾಟಾ ಸಭಾಂಗಣದಲ್ಲಿ ಭಾರತ-ಇಸ್ರೇಲ್ ವಾಣಿಜ್ಯ ಶೃಂಗಸಭೆಯೊಂದನ್ನು ಹಮ್ಮಿಕೊಂಡಿತು. ಪ್ರತಿರಕ್ಷಣೆ, ಶಕ್ತಿ ಮತ್ತು ನೀರಿನ ಕ್ಷೇತ್ರಗಳು ಈ ಶೃಂಗಸಭೆಯ ವಿಷಯಗಳಾಗಿದ್ದವು. ಶೃಂಗಸಭೆಯ ಪೋಸ್ಟರಲ್ಲಿ IIScಯ ವಾಣಿಜ್ಯೋದ್ಯಮಿ (entrepreunership) ಪ್ರೋತ್ಸಾಹಿತ EntIISc ಘಟಕವನ್ನು ಕ್ಯಾಂಪಸ್ ಪಾರ್ಟನರ್ ಆಗಿಯೂ, IISc, Indian Chamber of International, ಮೈಸೂರು ಲ್ಯಾನ್ಸರ್ಸ್ ಹೆರಿಟೇಜ್ ಫೌಂಡೇಶನ್ ಮತ್ತು ತಿಂಕ್ ಇಂಡಿಯಾ ಇವನ್ನು ಸಹನಿರ್ವಾಹಕರಾಗಿಯೂ ಉಲ್ಲೇಖಿಸಲಾಗಿತ್ತು. ಪ್ರಕಟಿಸಿದ ಕಾರ್ಯಕ್ರಮದ ಪ್ರಕಾರ IIScಯಿಂದಲ್ಲದೆ, ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ಬೆಂಗಳೂರು (IIM-B) ಹಾಗೂ ರಾಷ್ಟ್ರೀಯ ಉನ್ನತ ಸಂಶೊಧನಾ ಸಂಸ್ಥೆ (NIAS) ಯ ವಿದ್ವಾಂಸರ ಹಾಗೂ ಇಸ್ರೇಲಿನ ಕಂಪೆನಿ ಪ್ರತಿನಿಧಿಗಳ ಉಪನ್ಯಾಸಗಳಿದ್ದವು. ಸಂಜೆ ಹೈಫಾ ಡೇ ಎಂಬ ಶೀರ್ಷಿಕೆಯಡಿಯಲ್ಲಿ, ಕರ್ನಾಟಕ ಸರಕಾರದ ಮುಖಂಡರ ಮತ್ತು ಇಸ್ರೇಲಿನ ರಾಜತಂತ್ರಜ್ಞರ ಭಾಷಣಗಳನ್ನೊಡಗೂಡಿದ ವಿಶೇಷ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು.

ಇಸ್ರೇಲ್ ಸರಕಾರವು ಫೆಲೆಸ್ತೀನ್ ಜನತೆಯ ನರಸಂಹಾರ ನಡೆಸುತ್ತಿರುವಂತೆಯೇ, ದೇಶದಲ್ಲಿಯೇ ಶ್ರೇಷ್ಠ ವೈಜ್ಞಾನಿಕ ಮತ್ತು ಶಿಕ್ಷಣ ಸಂಸ್ಥೆ ಎಂದೆನಿಸಿಕೊಂಡಿರುವ ಭಾರತೀಯ ವಿಜ್ಞಾನ ಸಂಸ್ಥೆ (IIS) ಯು ಇಸ್ರೇಲ್‌ನ ಜೊತೆ ಇಂತಹ ಶೃಂಗಸಭೆಯನ್ನು ಹಮ್ಮಿಕೊಂಡಿದ್ದು ಹಲವೆಡೆ ಅತ್ಯಂತ ಆಕ್ರೋಶಕ್ಕೆ ಕಾರಣವಾಯಿತು. ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಉತ್ಕೃಷ್ಟತೆಯನ್ನು ಎತ್ತಿಹಿಡಿಯುವುದೆಂದು ಹೇಳಿಕೊಳ್ಳುವ IIScಯು, ಗಾಝಾದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಧ್ವಂಸ ಮಾಡಿರುವ ಇಸ್ರೇಲ್‌ನೊಂದಿಗೆ, ಅದೂ ಕೂಡ ಮಿಲಿಟರಿ ಕ್ಷೇತ್ರದಲ್ಲಿ, ಸಂಬಂಧಗಳನ್ನು

ಹೆಚ್ಚಿಸುವುದು ತೀರ ಅಸಮಂಜಸವೆಂಬುದರಲ್ಲಿ ಎರಡು ಮಾತಿಲ್ಲ. ಇಸ್ರೇಲ್‌ನ ನರಮೇಧವನ್ನು ಅಂತರ್‌ರಾಷ್ಟ್ರೀಯ ನ್ಯಾಯಾಲಯ (International court of justice) ಹಾಗೂ ಸಂಯುಕ್ತ ರಾಷ್ಟ್ರ ಸಂಘ ಖಂಡಿಸಿವೆ. ಇಸ್ರೇಲ್ ಎಸಗುತ್ತಿರುವ ಹತ್ಯಾಕಾಂಡವೂ, ಇಸ್ರೇಲ್ ಸರಕಾರಕ್ಕೆ ವಿವಿಧ ದೇಶಗಳು ನೀಡುತ್ತಿರುವ ಶಸ್ತ್ರಾಸ್ತ್ರಗಳ ಪೂರೈಕೆಯೂ ತಕ್ಷಣ ನಿಲ್ಲಬೇಕೆಂದು ಜಗತ್ತಿನಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇವೆಲ್ಲವುಗಳ ಅರಿವು IIScಗಿಲ್ಲವೇ? ಈ ಶೃಂಗಸಭೆಯನ್ನು ನಡೆಸಿ IISc ಇಸ್ರೇಲ್‌ನ ಧ್ವಂಸಾತ್ಮಕ ದಾಳಿಗಳನ್ನು ಸಮರ್ಥಿಸಿದಂತಾಗಿದೆ.

ಅಲ್ಲದೆ ಇಸ್ರೇಲ್ ಫೆಲೆಸ್ತೀನನ್ನು ಶಸ್ತ್ರಾಸ್ತ್ರ ಸಂಶೋಧನೆಯ ಪ್ರಯೋಗಶಾಲೆಯಾಗಿ ಬಳಸುತ್ತಿದೆಯೆಂದು ಹಲವಾರು ಆಪಾದನೆಗಳಿವೆ. ಹಾಗಿರುವಾಗ, ಅತಿ ಜಾಗರೂಕತೆ ವಹಿಸುವ ಬದಲು IIScಯು ಸೇರಿ ಮೇಲ್ಕಂಡ ಉಚ್ಚ ಸಂಸ್ಥೆಗಳು ಇಸ್ರೇಲ್‌ನಲ್ಲಿಯ ಮಿಲಿಟರಿ ಕ್ಷೇತ್ರಕ್ಕೆ ಸಂಬಂಧಿಸಿದ ವಾಣಿಜ್ಯ ಅವಕಾಶಗಳನ್ನು ಪ್ರೋತ್ಸಾಹಿಸುವುದರಲ್ಲಿ ಧುಮುಕಿವೆ. ವೈಜ್ಞಾನಿಕ ಸಂಶೋಧನೆಯು ನೈತಿಕತೆಯ ಚೌಕಟ್ಟಿನಲ್ಲಿ ಜರುಗಬೇಕಾದುದು ಅತಿ ಮುಖ್ಯವೆಂದು ಹಿರೋಶಿಮಾ-ನಾಗಾಸಾಕಿಯ ಪ್ರಕರಣಗಳನ್ನೊಡಗೂಡಿದ ಇತಿಹಾಸ ಸಾರಿ ಹೇಳುತ್ತದೆ. ಆದರೆ IIScಯು ತನ್ನ ಕ್ರಿಯೆಗಳಲ್ಲಿ ನೈತಿಕತೆಯನ್ನು ಪೂರ್ತಿ ಬದಿಗಿಟ್ಟಂತಿದೆ.

IIScಯ ಕೆಲವು ಪ್ರಾಚಾರ್ಯರು ಮತ್ತು ವಿದ್ಯಾರ್ಥಿಗಳು ಹಾಗೂ ಇನ್ನಷ್ಟು ಇತರ ವಿದ್ವಾಂಸರು, ನಾಗರಿಕರು ಸೇರಿ 1500 ಗಿಂತ ಹೆಚ್ಚೇ ಜನರು IIScಯ ನಿರ್ದೇಶಕರಿಗೆ ಸಭೆಗೆ ಮುಂಚೆಯೇ ಸಾಮೂಹಿಕ ಬಹಿರಂಗ ಪತ್ರ ಬರೆದು ತಮ್ಮ ವಿರೋಧ ವ್ಯಕ್ತಪಡಿಸಿ ಸಭೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದ್ದರು. ಆದರೂ ತನ್ನದೇ ವಿದ್ಯಾರ್ಥಿಗಳ ಹಾಗೂ ವೈಜ್ಞಾನಿಕ ಸಮುದಾಯದ ಖೇದವನ್ನು IIScಯು ನಿರ್ಲಕ್ಷಿಸಿತು. ಶೃಂಗ ಸಭೆಯ ದಿನ IIScಯ ಸುಮಾರು 20 ವಿದ್ಯಾರ್ಥಿಗಳು ಅಲ್ಲಿಯ ಪ್ರತಿಷ್ಠಿತ ಟಾಟಾ ಪ್ರತಿಮೆಯ ಮಗ್ಗುಲಲ್ಲಿ ಪ್ರತಿಭಟನೆ ನಡೆಸಿದರು. ಸಂಸ್ಥೆಯ ಬಾಗಿಲ ಬದಿ ನಾಗರಿಕರಿಂದ ಸುದ್ದಿ ಗೋಷ್ಠಿಯೂ ನಡೆಯಿತು. ಮರುದಿನ, IIScಯು ತಾನು ಶೃಂಗ ಸಭೆಗೆ ಸಭಾಂಗಣವನ್ನು ಬಾಡಿಗೆಗೆ ನೀಡಿದರೇ ವಿನಃ, ಸಭೆಯೊಂದಿಗೆ ಬೇರೆ ಯಾವ ಸಂಬಂಧವೂ ಇಲ್ಲ ಎಂಬ ಸ್ಪಷ್ಟೀಕರಣವನ್ನು ನೀಡಿದೆಯೆಂದು ಮಾಧ್ಯಮಗಳಲ್ಲಿ ವರದಿಯಾಯಿತು. ಆದರೆ ಮತ್ತೆ EntIIScಯ ಘಟಕವಾಗಿರುವ IIScಯ ಸಹನಿರ್ವಹಣೆ ಹಾಗೂ EntIIScಯಲ್ಲಿರುವ IISc

ವಿದ್ಯಾರ್ಥಿಗಳು ಶೃಂಗಸಭೆಯಲ್ಲಿ ಕಾರ್ಯಕರ್ತರಾಗಿದ್ದರದ್ದೇನು? ಅಲ್ಲದೆ, IIScಯ ವಿದ್ವಾಂಸರು ಸಭೆಯಲ್ಲಿ ಭಾಷಣ ಕೊಡಲಿಲ್ಲವೇ? ಆದ್ದರಿಂದ ಈ ಸ್ಪಷ್ಟೀಕರಣ ನೈಜಾತೀತವೇ ಸರಿ.

ಭಾರತ-ಇಸ್ರೇಲ್ ವಾಣಿಜ್ಯ ಶೃಂಗಸಭೆಯ ಮತ್ತೊಂದು ವಿಚಿತ್ರ ಅಂಶವನ್ನು ಗಮನಿಸಬೇಕಾಗಿದೆ.

ಶೃಂಗಸಭೆಯ ಸಹನಿರ್ವಾಹಕರಲ್ಲಿ ಮೈಸೂರು ಲ್ಯಾನ್ಸರ್ಸ್ ಹೆರಿಟೇಜ್ ಫೌಂಡೇಶನ್ ಸೇರಿದೆ. ಮೈಸೂರು ಲ್ಯಾನ್ಸರ್ಸ್ ಅಂದರೆ, ಹತ್ತೊಂಭತ್ತನೇ ಶತಮಾನದ ಕೊನೆಯಲ್ಲಿ ಬ್ರಿಟಿಷ್ ವಸಾಹತುಶಾಹಿಗಳ ಕೈಕೆಳಗೆ ಅಧಿಕಾರ ವಹಿಸಿದ್ದ ಮೈಸೂರು ಮಹಾರಾಜರ ಖಾಸಗಿ ಸೈನಿಕರು. ಹಾಗೆಯೇ ಜೋಧಪುರ ಮತ್ತು ಹೈದರಾಬಾದ್‌ನಲ್ಲೂ ಜೋಧಪುರ ಲ್ಯಾನ್ಸರ್ಸ್ ಮತ್ತು ಹೈದರಾಬಾದ್ ಲ್ಯಾನ್ಸರ್ಸ್ ಎಂಬ ಸೈನಿಕರಿದ್ದರು. 1918 ರಲ್ಲಿ ಫೆಲೆಸ್ತೀನ್‌ನಲ್ಲಿ ಬ್ರಿಟಿಷ್ ಸಾಮ್ರಾಜ್ಯ ಮತ್ತು ಟರ್ಕಿಯ ಒಟ್ಟೊಮಾನ್ ಸಾಮ್ರಾಜ್ಯದ ನಡುವೆ ನಡೆದ ಕದನದಲ್ಲಿ ಹೋರಾಡಲು, ಬ್ರಿಟಿಷ್ ಸರಕಾರದ ಮೇರೆಗೆ ಈ ಎಲ್ಲಾ ಸೈನಿಕರನ್ನು ಫೆಲೆಸ್ತೀನ್‌ಗೆ ಹಡಗುಗಳಲ್ಲಿ ಕರೆದೊಯ್ಯಲಾಯಿತು. ಅವರು ಕದನದಲ್ಲಿ ಬ್ರಿಟಿಷ್ ವಸಾಹತುಶಾಹಿಗಳ ಪರವಾಗಿ ಹೋರಾಡಿದರು. 23 ಸೆಪ್ಟ್ಟಂಬರ್ 1918 ರಂದು ಫೆಲೆಸ್ತೀನ್‌ನ ಬಂದರವಾಗಿದ್ದ ಹೈಫಾ ಎಂಬ ನಗರದಲ್ಲಿ ಟರ್ಕಿಯ ಒಟ್ಟೊಮಾನ್ ಸಾಮ್ರಾಜ್ಯದ ಸೇನೆ ಬ್ರಿಟಿಷ್ ಸೇನೆಯ ಕೈಯಲ್ಲಿ ಸೋಲನ್ನನುಭವಿಸಿತು. ಈ ಕದನದಲ್ಲಿ ಲ್ಯಾನ್ಸರ್ಸ್ ಸೈನಿಕರು ತೋರಿದ ಶೌರ್ಯವನ್ನು ಅಮರವಾಗಿಸಲು ಬ್ರಿಟಿಷ್ ಸರಕಾರವು ಶಿಲ್ಪಮೂರ್ತಿಯೊಂದನ್ನು ದಿಲ್ಲಿಯ ತೀನ್ ಮೂರ್ತಿ ಕಟ್ಟಡದ ಅಂಗಣದಲ್ಲಿ ನಿರ್ಮಿಸಿತು. ಈ ಕಲಾಕೃತಿಯಲ್ಲಿ ಮೂವರು ಯೋಧರನ್ನು ಮೇಲಿನ ಮೂರು ಲ್ಯಾನ್ಸರ್ಸ್ ಘಟಕಗಳ ಪ್ರತಿನಿಧಿಗಳಾಗಿ ಬಿಂಬಿಸಿರುವುದನ್ನು, ರಾಷ್ಟ್ರೀಯ ಸಂಗ್ರಹಾಲಯವಾಗಿ ಮಾರ್ಪಾಟಾಗಿರುವ ತೀನ್ ಮೂರ್ತಿ ಕಟ್ಟಡದ ಅಂಗಣದಲ್ಲಿ ಈಗಲೂ ಕಾಣಬಹುದು. ಬೆಂಗಳೂರಿನಲ್ಲೂ ಕೂಡ ಜೆ. ಸಿ. ನಗರದಲ್ಲಿ ಮೈಸೂರು ಲ್ಯಾನ್ಸರ್ಸ್ ಗೆ ಸ್ಮಾರಕ ಸ್ತಂಭವೊಂದಿದೆ. ಮೈಸೂರು ಲ್ಯಾನ್ಸರ್ಸ್ ಅವರ ಸಂತತಿಯವರ ಮನೆಗಳಲ್ಲಿ ಕದನದಿಂದ ಪಡೆದಿರುವಂತಹ ಖಡ್ಗ ಇತ್ಯಾದಿ ವಸ್ತುಗಳಿವೆಯೆಂದೂ ವರದಿಗಳಾಗಿವೆ.

ಮೈಸೂರು ಲ್ಯಾನ್ಸರ್ಸ್ ಸೈನಿಕರು ತಮ್ಮ ದೊರೆಗಳ ಅಪ್ಪಣೆಯನ್ನು ಅನುಸರಿಸಿ ವಸಾಹತುಶಾಹಿ ಬ್ರಿಟಿಷ್ ಸರಕಾರದ ಪರವಾಗಿ ಕದನಕ್ಕಿಳಿದದ್ದು ನಿಜವಿದ್ದರೂ, ಅವರ ಶೌರ್ಯ, ತ್ಯಾಗಗಳನ್ನು ಅವರ ವಂಶಜರು ಸ್ಮರಿಸಿಕೊಂಡು ಸಂಭ್ರಮಿಸುವುದು ಅತ್ಯಂತ ಸಹಜ. ಅಂತೆಯೇ ಈ ವಂಶಜರು ನಿರ್ಮಿಸಿರುವ ಸಂಸ್ಥೆಯಾದ ಮೈಸೂರು ಲ್ಯಾನ್ಸರ್ಸ್ ಸ್ಮಾರಕ ಪ್ರತಿಷ್ಠಾನವು, ಬೆಂಗಳೂರಿನ ಮೈಸೂರು ಲ್ಯಾನ್ಸರ್ಸ್ ಸ್ಮಾರಕದ ಮಗ್ಗುಲಲ್ಲಿ 23 ಸೆಪ್ಟಂಬರ್‌ನ್ನು ಹೈಫಾ ದಿನವಾಗಿ ಆಚರಿಸುತ್ತಾ ಬಂದಿರುವುದು ಹಲವು ಸಲ ವರದಿಯಾಗಿವೆ. ಇದೂ ಸಹಜವೇ. ಆದರೆ ಅತ್ಯಾಶ್ಚರ್ಯದ ವಿಷಯವೇನೆಂದರೆ, ಅವರು ಹೈಫಾ ದಿನಾಚರಣೆಯ ಅಂಗವಾಗಿ ಇಸ್ರೇಲ್‌ನ ಬಾವುಟವನ್ನು ಅನಾವರಿಸುತ್ತಿರುವುದು.

ಹೈಫಾ ಫೆಲೆಸ್ತೀನ್‌ನ ಬಂದರ್ ನಗರವಾಗಿತ್ತು. ಅಲ್ಲಿ 1918 ರ ಕಾಳಗ ನಡೆದ ಮೂವತ್ತು ವರ್ಷಗಳ ನಂತರವೇ, ಅಂದರೆ 1948 ರಲ್ಲಿ ಹೈಫಾದಲ್ಲಿ ನಕ್ಬಾ ನಡೆದು, ಇಸ್ರೇಲ್ ಹೈಫಾ ನಗರವನ್ನು ವಶಪಡಿಸಿಕೊಂಡಿತ್ತು. ಹೈಫಾದ ಅನೇಕ ಮೂಲ ನಿವಾಸಿಗಳು ತಮ್ಮ ಆಸ್ತಿ ಸ್ವತ್ತುಗಳನ್ನು ಕಳಕೊಂಡು ಹೈಫಾದಿಂದ ತೊಲಗಬೇಕಾಯಿತು. ಇಸ್ರೇಲ್ ಆಗಷ್ಟೇ ಹೊಸತಾಗಿ ಘೋಷಿಸಲ್ಪಟ್ಟ ರಾಷ್ಟ್ರವೆಂದು ಹಲವೆಡೆ ಮಾತ್ರ ಪರಿಗಣಿಸಲಾಗಿತ್ತು. ಮೈಸೂರು ಲ್ಯಾನ್ಸರ್ಸನ್ನಂತೂ 1920 ರಲ್ಲೇ ವಿಸರ್ಜಿಸಲಾಗಿತ್ತು. ಆದ್ದರಿಂದ ಮೈಸೂರು ಲ್ಯಾನ್ಸರ್ಸಿಗೂ ಇಸ್ರೇಲ್‌ಗೂ ಯಾವ ಐತಿಹಾಸಿಕ ಸಂಬಂಧವೂ ಇಲ್ಲ. ಬೆಂಗಳೂರಿನ ಮೈಸೂರು ಲ್ಯಾನ್ಸರ್ಸ್ ಸ್ಮಾರಕದ ಮೇಲೆ ಕೂಡ ಗಾಝಾ - ಮೆಗ್ಗಿಡೊ - ಶಾರನ್ - ಡಮಾಸ್ಕಸ್ - ಫೆಲೆಸ್ತೀನ್ ಎಂದು ಅತ್ಯಂತ ಸ್ಪಷ್ಟವಾಗಿ ಕೆತ್ತಿಸಲಾಗಿರುವುದನ್ನು ನಾವು ನೋಡಬಹುದು. ಇಸ್ರೇಲ್‌ನ ಉಲ್ಲೇಖ ಎಲ್ಲಿಯೂ ಇಲ್ಲ.

ಹೀಗಿರುವಾಗ ಮೈಸೂರು ಲ್ಯಾನ್ಸರ್ಸಿನ ವಂಶಜರು ತಮ್ಮ ಪೂರ್ವಜರ ಶೌರ್ಯದ ಸ್ಮರಣೆಗಳಾದ ಪಿತ್ರಾರ್ಜಿತ ಬಳುವಳಿಯನ್ನು ಇಸ್ರೇಲ್ ಕಬ್ಜಾ ಮಾಡಿಕೊಳ್ಳಲು ಅವಕಾಶ ನೀಡುತ್ತಿರುವುದು ಯಾವ ಕಾರಣಕ್ಕೆ? ೧೯೧೮ರ ಕದನ ಅತ್ಯಂತ ಗಾಢ ಪರಿಣಾಮ ಬೀರಿದ್ದು ಹೈಫಾದ ಮೂಲ ನಿವಾಸಿಗಳ

ಮೇಲೆ. ಆ ಕದನದ ಸೋಲು-ಗೆಲುವುಗಳು ಅವರ ಒಳಿತಿಗೋ ಅಲ್ಲವೋ ಎಂಬುದು ವಿವಾದಾಸ್ಪದ ವಿಷಯ. ಆದರೆ

ಕದನದ ಐತಿಹಾಸಿಕ ಸಂಬಂಧವಂತೂ, ಲ್ಯಾನ್ಸರ್ಸ್ ಅವರ ವಂಶಜರದ್ದು ಇದ್ದಂತೆಯೇ ಹೈಫಾದ ಮೂಲ ನಿವಾಸಿಗಳ ವಂಶಜರದ್ದೂ ಕೂಡ.

ಮೈಸೂರು ಲ್ಯಾನ್ಸರ್ಸ್ ತಮ್ಮ ಒಡೆಯರ ಅಪ್ಪಣೆಯಂತೆ ಕದನದಲ್ಲಿ ಹೋರಾಡಿದಾಗ ವಸಾಹತುಶಾಹಿಗಳ ಉದ್ದೇಶ ಏನಿದ್ದಿದ್ದರೂ, ಸೈನಿಕರಲ್ಲಿ, ಆ ನಾಡಿನ, ಅಂದರೆ ಫೆಲೆಸ್ತೀನ್‌ನ ಜನತೆಯನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂಬ ಭಾವನೆಯೇ ಸಹಜ ಮತ್ತು ಸಂಭಾವ್ಯ ಎಂದೆನ್ನಬಹುದು. ಆ ಜನತೆಯ ಸಂತತಿಯವರೇ ಇಂದು ಇಸ್ರೇಲ್‌ನ ಧ್ವಂಸಾತ್ಮಕ ದಾಳಿಗಳಿಗೆ ತುತ್ತಾಗುತ್ತಿದ್ದಾರೆ. ಅಂದರೆ 1918 ರ ಕದನದ ನಿಜವಾದ ಐತಿಹಾಸಿಕ ವಾರಸುದಾರರನ್ನು ಬಿಟ್ಟು, ಬದಲಾಗಿ ಮೈಸೂರು ಲ್ಯಾನ್ಸರ್ಸ್ ಸ್ಮಾರಕ ಪ್ರತಿಷ್ಠಾನವು ಈ ಕದನಕ್ಕೆ ಯಾವುದೇ ಸಂಬಂಧವಿಲ್ಲದ ಇಸ್ರೇಲ್‌ನೊಂದಿಗೆ ಕೈಜೋಡಿಸಿರುವ ಕಾರಣವಾದರೂ ಏನು? ಅದೂ, ಫೆಲೆಸ್ತೀನ್ ಹತ್ಯಾಕಾಂಡ ನಡೆಯುತ್ತಿರುವಂತೆಯೇ 41000 ಕ್ಕೂ ಹೆಚ್ಚು ಜನರ, ಹೆಚ್ಚಾಗಿ ಮಹಿಳೆ ಮತ್ತು ಮಕ್ಕಳ ಹತ್ಯೆಗೆ ಕಾರಣರಾಗಿರುವ ಇಸ್ರೇಲ್ ಸರಕಾರದ ಬಾವುಟ ಹಾರಿಸಿದ್ದು ಮಾತ್ರವಲ್ಲ, ಹೈಫಾ ದಿನದಂದೇ ಇಸ್ರೇಲ್ ಜೊತೆ ಮಿಲಿಟರಿ ಕ್ಷೇತ್ರದಲ್ಲಿ ವಾಣಿಜ್ಯ ಲೇವಾದೇವಿ ಹೆಚ್ಚಿಸಲು ದ್ವಿಪಕ್ಷೀಯ ಶೃಂಗಸಭೆಯನ್ನು ಜೆ.ಎನ್. ಟಾಟಾ ಆಡಿಟೋರಿಯಮ್‌ನಲ್ಲಿ ಹಮ್ಮಿಕೊಂಡಿತು. ಅಂದರೆ, ತಮ್ಮ ಶೂರ ಪೂರ್ವಜರೇ ಬಿಡುಗಡೆ ಮಾಡಿದವರ ವಂಶಜರ ನರಮೇಧವನ್ನಾಧರಿಸಿರುವ ಲಾಭಕೋರತನವನ್ನು ಪ್ರೋತ್ಸಾಹಿಸಿದಂತೆ ಅಲ್ಲವೇ ಎಂಬ ಪ್ರಶ್ನೆ ಎದ್ದು ಬರುತ್ತದೆ.

ಕರ್ನಾಟಕ ಸರಕಾರದ ಮುಖಂಡರು ಕೊನೆಯ ಘಳಿಗೆಯಲ್ಲಿ ಕಾರ್ಯಕ್ರಮದಲ್ಲಿನ ಭಾಷಣವನ್ನು ರದ್ದುಪಡಿಸಿ ವಿವಾದದಿಂದ ಪಾರಾದರು. ಆದರೆ ವರದಿಯಾಗಿರುವ ಮತ್ತೊಂದು ಉಪಕಥೆಯೇನೆಂದರೆ, ಇಸ್ರೇಲ್‌ನಲ್ಲಿ ಭಾರತದ ರಾಯಭಾರಿಗಳು ಮೈಸೂರು ಲ್ಯಾನ್ಸರ್ಸ್‌ರ ಶೌರ್ಯವನ್ನು ಹೈಫಾ ದಿನ ಮೂಲಕ ಹೈಫಾದಲ್ಲಿ ಆಚರಿಸುತ್ತಾ ಬಂದಿದ್ದಾರೆ ಮಾತ್ರವಲ್ಲ, ಭಾರತ ಸೈನ್ಯದ ಹೈಫಾ ದಿನಾಚರಣೆಯನ್ನು ಹಲವು ಮಾಧ್ಯಮದವರು ಇಸ್ರೇಲಿನ ಹೈಫಾದ ವಿಮೋಚನೆಯೆಂದು ವರದಿ ಮಾಡುತ್ತಿದ್ದಾರೆ! ಅಂತೆಯೇ 23 ಸೆಪ್ಟೆಂಬರ್ ಸನ್ನಿವೇಶದ ಹಾಗೂ IIScಯ ಶೃಂಗಸಭೆಯ ವಿಪರ್ಯಾಸಗಳು ಅನೇಕ. ಸಭೆಯ ಸಹನಿರ್ವಾಹಕರೆಂದು ಉಲ್ಲೇಖಿಸಿರುವ ತಿಂಕ್ ಇಂಡಿಯಾದ ಜಾಲತಾಣದಲ್ಲಿ ತಾವು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಅಂಗವೆಂದು ಹೇಳಿರುವುದರಿಂದ, ತಿಂಕ್ ಇಂಡಿಯಾ

ಇಸ್ರೇಲ್‌ನ ಕಾರ್ಯಗಳನ್ನು ಸಮರ್ಥಿಸುವುದು ಸಮಂಜಸವೇ ಇರಬಹುದು. ಆದರೆ ಇತರ ಸಹನಿರ್ವಾಹಕರದ್ದೇನು? ನೈಜ ಇತಿಹಾಸದ ಬಗ್ಗೆ ಮೈಸೂರು ಲ್ಯಾನ್ಸರ್ಸ್ ಅವರ ಸಂತತಿಯವರಲ್ಲಿ, IIScಯ ಆಡಳಿತ ಮಂಡಳಿಯಲ್ಲಿ ಹಾಗೂ ನಮ್ಮ ಮೇಧಾವಿ ರಾಯಭಾರಿ ಅಧಿಕಾರಿಗಳಲ್ಲಿ ಕ್ಷಮಾರ್ಹ ಮೆದುಳು ಮಂಕು ಕವಿಯಿತೆನ್ನಬೇಕೇ?

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ಪ್ರಜ್ವಲ್ ಶಾಸ್ತ್ರಿ

contributor

Similar News