ಹರ್ಯಾಣ: ಚುನಾವಣೆಗೆ ಮೊದಲೇ ಮೋದಿ ಸೋಲೊಪ್ಪಿಕೊಂಡರೆ?
ಹರ್ಯಾಣ ವಿಚಾರವಾಗಿ ಮೋದಿ ಚುನಾವಣೆಗೆ ಮೊದಲೇ ಸೋಲನ್ನು ಒಪ್ಪಿಕೊಂಡವರ ರೀತಿಯಲ್ಲಿ ಕಾಣಿಸುತ್ತಿದ್ದಾರೆ.ಹರ್ಯಾಣ ತಮಗೆ ಅನುಕೂಲಕರವಾಗಿಲ್ಲ ಎಂಬ ನಿಲುವಿಗೆ ಅವರು ಬಂದಿರುವಂತಿದೆ.
ಇನ್ನೊಂದೆಡೆ ರಾಹುಲ್ ಗಾಂಧಿ ತೋರುತ್ತಿರುವ ರಾಜಕೀಯ ಪ್ರಬುದ್ಧತೆ ಗಮನ ಸೆಳೆಯುತ್ತದೆ.
ಹರ್ಯಾಣದ ಸೋನಿಪಥ್‌ನಲ್ಲಿ ಬುಧವಾರ ಮೋದಿ ರ್ಯಾಲಿ ನಡೆದರೆ. ಇನ್ನೊಂದು, ರಾಹುಲ್ ಗಾಂಧಿಯವರ ರ್ಯಾಲಿ ಜಮ್ಮು-ಕಾಶ್ಮೀರದಲ್ಲಿ ನಡೆಯಿತು.
ಹಿಂದಿನ ಚುನಾವಣೆಗಳ ಸಂದರ್ಭದಲ್ಲೆಲ್ಲ ಬಿಜೆಪಿ ಗೆಲುವಿನ ಗ್ಯಾರಂಟಿ ನೀಡುತ್ತಿದ್ದ ಮೋದಿ, ಹರ್ಯಾಣ ಚುನಾವಣೆ ವಿಚಾರವಾಗಿ ಮಾತನಾಡುವಾಗ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದರೆ ಏನಾಗಲಿದೆ ಎಂದು ಹೇಳತೊಡಗಿದ್ದಾರೆ.
ಬಿಜೆಪಿಯ ನಯಾಬ್ ಸಿಂಗ್ ಸೈನಿ ಸರಕಾರ ಪರಿಶಿಷ್ಟ ಜಾತಿ ಮೀಸಲಾತಿಯ ಉಪವರ್ಗೀಕರಣವನ್ನು ಅನುಮೋದಿಸಿದ್ದರೂ, ಆ ವಿಚಾರ ಅಲ್ಲಿ ಚರ್ಚೆಯಲ್ಲೇ ಇಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತನ್ನ ಆಂತರಿಕ ಜಗಳದಲ್ಲಿ ಹರ್ಯಾಣವನ್ನು ಬರ್ಬಾದ್ ಮಾಡಿಬಿಡಲಿದೆ ಎಂದು ಹೇಳುವುದಕ್ಕೆ ಮೋದಿ ಮರೆಯುವುದಿಲ್ಲ.
ತಾವೇನು ಮಾಡಲಿದ್ದೇವೆ, ತಮ್ಮ ಬದ್ಧತೆ ಏನು ಎಂಬುದರ ಬಗ್ಗೆ ಏನನ್ನೂ ಹೇಳದ ಮೋದಿ, ಕಾಂಗ್ರೆಸ್ ವಿರುದ್ಧ ಜರೆಯುವುದಕ್ಕೇ ಆದ್ಯತೆ ನೀಡುತ್ತಾರೆ. ಹರ್ಯಾಣದಲ್ಲಿಯೂ ಹಾಗೆಯೇ ಆಗಿದೆ.
ಇನ್ನೊಂದೆಡೆ ರಾಹುಲ್ ಗಾಂಧಿ ಈ ದೇಶದ ಆರ್ಥಿಕ ವ್ಯವಸ್ಥೆ ಕಾರ್ಪೊರೇಟ್ ಹಿಡಿತಕ್ಕೆ ಹೋಗಿದೆ, ಹೇಗೆ ನಿರುದ್ಯೋಗ ಇಡೀ ಜನಸಾಮಾನ್ಯರ ಬದುಕಿನಲ್ಲಿ ಅಲ್ಲೋಲಕಲ್ಲೋಲ ತಂದಿದೆ ಎಂಬುದನ್ನು ಹರ್ಯಾಣದ ಸ್ಥಿತಿಯನ್ನು ಉಲ್ಲೇಖಿಸುತ್ತ ಹೇಳಿದ್ದಾರೆ.
ಇಡೀ ಸರಕಾರ ಅದಾನಿ-ಅಂಬಾನಿಯಂಥವರಿಗಾಗಿ ನಡೆಯುತ್ತಿದೆ. ಜಿಎಸ್‌ಟಿ ಒಂದು ಅಸ್ತ್ರವಾಗಿದೆ. ಜಮ್ಮು-ಕಾಶ್ಮೀರದ ಸಣ್ಣ ಉದ್ಯಮಿಗಳ ಮೇಲೆ ಆಕ್ರಮಣಕ್ಕೆ ಅದು ಅಸ್ತ್ರವಾಗಲಿದೆ. ನೋಟ್ ಬ್ಯಾನ್ ಕೂಡ ಆಯುಧವಾಗಿತ್ತು. ಇವು ನೀತಿಗಳಲ್ಲ, ಬದಲಾಗಿ ಆಯುಧಗಳು. ಈ ಆಯುಧಗಳ ಬಳಕೆ ತಮ್ಮ ದಾರಿಗೆ ಅಡ್ಡವಾಗಿರುವವರನ್ನು ನಿವಾರಿಸಿಕೊಳ್ಳುವುದಕ್ಕಾಗಿ ಆಗುತ್ತದೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಕಾಲದಲ್ಲಿ ಆರ್ಥಿಕತೆ ಎಂಬುದು ಹೇಗೆ ಅಸ್ತ್ರವಾಗಿದೆ ಎಂದು ರಾಹುಲ್ ವಿವರಿಸುವುದರೊಂದಿಗೆ, ಜಮ್ಮು-ಕಾಶ್ಮಿರ ಮತ್ತು ಹರ್ಯಾಣ ರಾಜ್ಯಗಳ ಚುನಾವಣೆಗಳಲ್ಲೂ ಅದು ಪ್ರಮುಖ ವಿಷಯವಾಗುವಂತೆ ರಾಹುಲ್ ಮಾಡಿದ್ದಾರೆ.
2014ರಿಂದ ಕೇಂದ್ರದಲ್ಲಿ ಮಾತ್ರವಲ್ಲ, ಹರ್ಯಾಣದಲ್ಲಿಯೂ ಬಿಜೆಪಿಯದ್ದೇ ಸರಕಾರವಿದೆ. ಈ ಅವಧಿಯಲ್ಲಿ ಆದ ಹೂಡಿಕೆ ಎಷ್ಟು, ಅದು ಎಷ್ಟು ಯುವಕರಿಗೆ ಸಿಕ್ಕಿತು, ಎಷ್ಟು ಉದ್ಯೋಗಗಳ ಸೃಷ್ಟಿಯಾಯಿತು, ಉತ್ಪಾದನಾ ವಲಯ ಹರ್ಯಾಣದಲ್ಲಿ ಏಕೆ ಹಳ್ಳ ಹಿಡಿಯಿತು, ಹರ್ಯಾಣದಲ್ಲಿನ ರೈತರು ಮತ್ತು ಕಾರ್ಮಿಕರ ಸಮಸ್ಯೆಗಳಲ್ಲಿ ಈ ಎಲ್ಲ ಪ್ರಶ್ನೆಗಳಿವೆ.
ಇದೆಲ್ಲದರ ಹಿನ್ನೆಲೆಯಲ್ಲಿ ತನ್ನ ಸೋಲಿನ ಸುಳಿವನ್ನು ಕಂಡಂತಿರುವ ಬಿಜೆಪಿ, ಚುನಾವಣೆ ಫಲಿತಾಂಶದ ನಂತರ ತಾನು ಮಾಡಬೇಕಿರುವುದರ ಲೆಕ್ಕಾಚಾರದಲ್ಲೂ ಬಿದ್ದಿರಬಹುದೆ?
ಅಪ್ಪಿತಪ್ಪಿ ಕಾಂಗ್ರೆಸ್ ಮ್ಯಾಜಿಕ್ ನಂಬರ್‌ಗಿಂತ ನಾಲ್ಕೈದು ಸೀಟುಗಳನ್ನಷ್ಟೇ ಹೆಚ್ಚು ಪಡೆದರೆ, ಆಪರೇಷನ್ ಕಮಲಕ್ಕೆ ಇಳಿಯಲಿದೆಯೆ ಬಿಜೆಪಿ?
ಎಲ್ಲ ರಾಜ್ಯಗಳಲ್ಲಿಯೂ ತಾನು ಗೆಲ್ಲದೇ ಇರುವ ಹೊತ್ತಲ್ಲೂ ಸರಕಾರ ಬೀಳಿಸಿ ಅಧಿಕಾರಕ್ಕೆ ಏರುತ್ತ ಬಂದ ಬಿಜೆಪಿ ಈಗಿನ ಹತಾಶ ಸ್ಥಿತಿಯಲ್ಲೂ ಅಂಥವೇ ಒಂದು ತಂತ್ರ ಹೆಣೆಯುತ್ತದೆಯೆ?
ಹರ್ಯಾಣದ ನಂತರ ಮಹಾರಾಷ್ಟ್ರದಲ್ಲೂ ಚುನಾವಣೆ ನಡೆಯಬೇಕಿದೆ. ಅಲ್ಲೇನು ನಡೆಯಲಿದೆ ಎಂಬುದು ಮತ್ತೊಂದು ಕುತೂಹಲ.
ಕಾರ್ಪೊರೇಟ್ ಹೂಡಿಕೆ ಹರಿದುಬರುವ ನಾಲ್ಕೈದು ದೊಡ್ಡ ರಾಜ್ಯಗಳಲ್ಲಿ ಹರ್ಯಾಣವೂ ಒಂದು. ಅಂಥ ಹೂಡಿಕೆಯಲ್ಲಿ ದೊಡ್ಡ ದೊಡ್ಡ ಕಾರ್ಪೊರೇಟ್ ಕುಳಗಳ ಪಾಲುದಾರಿಕೆ ಇದೆ.
ಇನ್ನು ಎಫ್‌ಡಿಐ. ಒಂದು ಕಾಲದಲ್ಲಿ ವಿದೇಶಿ ಹೂಡಿಕೆಯನ್ನು ವಿರೋಧಿಸಿದ್ದ ಬಿಜೆಪಿ ಈಗ ವಿದೇಶಿ ಹೂಡಿಕೆಗಾಗಿ ಕೇಳುತ್ತಿದೆ.
ಅಂಬಾನಿ-ಅದಾನಿಯಂಥ ಶ್ರೀಮಂತರ ಸಾಲ ಮನ್ನಾ ಮಾಡುವ ಮೋದಿ ಸರಕಾರ, ಬಡವರ ಬಿಡಿಗಾಸನ್ನೂ ಬಿಡದೆ ವಸೂಲಿ ಮಾಡುತ್ತದೆ. ಕಾರ್ಪೊರೇಟ್‌ಗಳ ಮರ್ಜಿಯಂತೆ ನಡೆಯುತ್ತದೆ, ಶ್ರೀಮಂತರು ಸಾಲ ಮಾಡಿ ತಪ್ಪಿಸಿಕೊಂಡು ಓಡಾಡಿದರೂ ಏನೂ ಮಾಡದ ಸರಕಾರ, ಬಡವರು ಸಾಲ ಮಾಡಿ ತೀರಿಸದಿದ್ದಲ್ಲಿ ಜೈಲಿಗೆ ಕಳಿಸುತ್ತಿದೆ ಎಂದಿದ್ದಾರೆ ರಾಹುಲ್.
ಹರ್ಯಾಣ ಚುನಾವಣೆ ಪ್ರಚಾರದಲ್ಲಿ ಪ್ರಧಾನಿಯಿಂದ ಹಿಡಿದು ಮುಖ್ಯಮಂತ್ರಿವರೆಗೆ ಎಲ್ಲರೂ ಕೈಗಾರಿಕೆ, ಕೃಷಿ ಬಗ್ಗೆ ಮಾತನಾಡುತ್ತಿದ್ದರೂ ಹಲವು ವಿಷಯಗಳಲ್ಲಿ ಮೌನ ವಹಿಸಿದ್ದಾರೆ.
ನಯಾಬ್ ಸಿಂಗ್ ಸೈನಿ ಸರಕಾರ ಪರಿಶಿಷ್ಟ ಜಾತಿ ಮೀಸಲಾತಿಯ ಉಪವರ್ಗೀಕರಣವನ್ನು ಅನುಮೋದಿಸಿದ್ದರೂ, ಅದರ ಬಗ್ಗೆ ಯಾವುದೇ ಚರ್ಚೆ ಇಲ್ಲ. ಹರ್ಯಾಣ ಚುನಾವಣೆಯ ಜಾತಿ ಸಮೀಕರಣದ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ವ್ಯಾಪಕ ಪ್ರಸಾರವಿದೆ. ಹಾಗಿದ್ದರೂ, ಆ ಮಹತ್ವದ ವಿಚಾರದಲ್ಲಿ ಬಿಜೆಪಿ ಏಕೆ ಏನನ್ನೂ ಹೇಳುತ್ತಿಲ್ಲ?
ಇಸ್ರೇಲ್‌ಗೆ ಕೆಲಸ ಹುಡುಕಿಕೊಂಡು ಹೋದವರಲ್ಲಿ ಹರ್ಯಾಣದ ಯುವಕರು ಮುಂಚೂಣಿಯಲ್ಲಿದ್ದರು. ರಾಜ್ಯದಲ್ಲಿ ಕೆಲಸ ಇಲ್ಲದ ಕಾರಣ ಅಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ.ಇದೆಲ್ಲವೂ ಹೇಗೆ ಚುನಾವಣೆಯಲ್ಲಿ ಪಾತ್ರ ವಹಿಸಲಿವೆ?
ಮೋದಿ ಸರಕಾರ ವಾಪಸ್ ಪಡೆದಿರುವ ಮೂರು ಕೃಷಿ ಕಾಯ್ದೆಗಳನ್ನು ಮತ್ತೆ ತರಬೇಕು ಎಂಬ ಕಂಗನಾ ಹೇಳಿಕೆ ಹರ್ಯಾಣ ಚುನಾವಣೆ ಹೊತ್ತಿಗೆ ಹೇಳಿರುವುದು, ಯಥಾ ಪ್ರಕಾರ ಬಿಜೆಪಿ ಅದರಿಂದ ದೂರ ಕಾಯ್ದುಕೊಂಡು, ಅದು ಅವರ ವೈಯಕ್ತಿಕ ಹೇಳಿಕೆ ಎಂದಿರುವುದು ನಡೆದಿದೆ.
ಮೋದಿಯಾಗಲೀ ಮುಖ್ಯಮಂತ್ರಿ ಸೈನಿಯಾಗಲೀ ಕೃಷಿ ಕಾನೂನುಗಳ ವಿಚಾರವಾಗಿ ಏನನ್ನೂ ಮಾತನಾಡುತ್ತಿಲ್ಲ.
ಒಂದು ವಿಚಾರವನ್ನು ಜನರ ಮಂದಿಟ್ಟು, ಪ್ರತಿಕ್ರಿಯೆ ಹೇಗಿರುತ್ತದೆ ಎಂದು ನೋಡುವುದು ಬಿಜೆಪಿ ಅನುಸರಿಸಿಕೊಂಡು ಬಂದ ತಂತ್ರವೇ ಆಗಿದೆ. ಈಗ ಕಂಗನಾ ಮೂಲಕ ಕೃಷಿ ಕಾಯ್ದೆಗಳ ಮರುಜಾರಿಯ ಪ್ರಸ್ತಾಪ ಮಾಡಿರುವುದು, ಮೋದಿ ಸರಕಾರದ ಇಂಗಿತವನ್ನೇ ಹೇಳುತ್ತಿದೆಯೇ?
ಹಾಗಾದಲ್ಲಿ ಇಡೀ ‘ಇಂಡಿಯಾ’ ಮೈತ್ರಿಕೂಟ ಅದಕ್ಕೆ ವಿರುದ್ಧವಾಗಿ ನಿಲ್ಲಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಸರಕಾರದ ನೀತಿಯನ್ನು ನಿರ್ಧರಿಸುವವರು ಯಾರು? ಬಿಜೆಪಿ ಸಂಸದರೋ ಅಥವಾ ಪ್ರಧಾನಿ ಮೋದಿಯೋ? ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಅದರಲ್ಲೂ ಹರ್ಯಾಣ ಮತ್ತು ಪಂಜಾಬ್‌ನ 700ಕ್ಕೂ ಹೆಚ್ಚು ರೈತರು ಹುತಾತ್ಮರಾದ ನಂತರವೂ ಬಿಜೆಪಿಯವರಿಗೆ ಸಮಾಧಾನವಾಗಲಿಲ್ಲ. ರೈತರಿಗೆ ಹಾನಿ ಮಾಡುವ ಯಾವುದೇ ಕ್ರಮ ಕೈಗೊಂಡರೆ ಮೋದಿ ಮತ್ತೊಮ್ಮೆ ಕ್ಷಮೆ ಯಾಚಿಸಬೇಕು. ರೈತರ ವಿರುದ್ಧದ ಬಿಜೆಪಿಯ ಯಾವುದೇ ಷಡ್ಯಂತ್ರವನ್ನು ಯಶಸ್ವಿಯಾಗಲು ಬಿಡುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ಹರ್ಯಾಣದ ಹಿರಿಯ ಕಾಂಗ್ರೆಸ್ ನಾಯಕಿ, ಸಂಸದೆ, ದಲಿತ ಸಮುದಾಯದ ಕುಮಾರಿ ಶೈಲಜಾ ಅವರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳನ್ನು ಶೈಲಜಾ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ನಾನು ಇವತ್ತು ಏನೇ ಆಗಿದ್ದರೂ ಅದು ಕಾಂಗ್ರೆಸ್‌ನಿಂದ. ‘‘ನಾನು ಪ್ರಚಾರಕ್ಕೆ ಹೋಗುತ್ತೇನೆ, ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುತ್ತೇವೆ’’ ಎಂದು ಹೇಳಿದ್ದಾರೆ. ಅಲ್ಲಿಗೆ ಕಾಂಗ್ರೆಸ್ ನೊಳಗೆ ದೊಡ್ಡ ಭಿನ್ನಮತವಿದೆ ಎಂಬ ಮೋದಿ ಹಾಗೂ ಮಡಿಲ ಮೀಡಿಯಾಗಳ ಅಬ್ಬರದ ಪ್ರಚಾರಕ್ಕೂ ಬ್ರೇಕ್ ಬಿದ್ದಿದೆ.
ಜಾತಿ ವಿಚಾರವಂತೂ ಹರ್ಯಾಣ ಚುನಾವಣೆಯಲ್ಲಿ ಬಹಳ ತೀವ್ರ ರೀತಿಯ ಪಾತ್ರ ವಹಿಸಲಿದೆ ಎಂಬುದು ಖಚಿತ.
90 ಕ್ಷೇತ್ರಗಳಲ್ಲಿ 38 ಸ್ಥಾನಗಳಿಗಾಗಿ ಜಾಟರ ನಡುವೆಯೇ ಪೈಪೋಟಿ ಎದ್ದಿದೆ. 36 ಸೀಟುಗಳಲ್ಲಿ ಮಾತ್ರವೇ ಬಿಜೆಪಿ ಮತ್ತು ಕಾಂಗ್ರೆಸ್ ಬೇರೆ ಬೇರೆ ಜಾತಿಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಜಾಟ್ ಸಮುದಾಯ ಬಿಜೆಪಿ ಮೇಲೆ ಭಾರೀ ಸಿಟ್ಟಲ್ಲಿದೆ. ಅದಕ್ಕೆ ಒಂದಲ್ಲ, ಎರಡಲ್ಲ, ನಾಲ್ಕು ಪ್ರಮುಖ ಕಾರಣಗಳಿವೆ.
ಅಗ್ನಿವೀರ ಯೋಜನೆಯಿಂದಾಗಿ ಸೇನೆಗೆ ಸೇರುವವರಲ್ಲಿ ಇರುವ ಆಕ್ರೋಶ, ರೈತರ ಆಂದೋಲನವನ್ನು ಬಿಜೆಪಿ, ಸಂಘ ಪರಿವಾರ ನಡೆಸಿಕೊಂಡ ರೀತಿ ಬಗ್ಗೆಯಿರುವ ಆಕ್ರೋಶ, ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಬಿಜೆಪಿ ನಡೆಸಿಕೊಂಡ ರೀತಿ ಹಾಗೂ ಜಾಟ್ ಸಮುದಾಯದ ಸಿಎಂ ಖಟ್ಟರ್‌ರನ್ನು ಬದಲಾಯಿಸಿ ಬೇರೆ ಸಮುದಾಯದ ಸಿಎಂ ನೇಮಕ ಮಾಡಿದ್ದು.
ಇವೆಲ್ಲವೂ ಬಿಜೆಪಿಗೆ ಬಹಳ ದುಬಾರಿಯಾಗಲಿದೆ ಎಂದೇ ಹೇಳಲಾಗುತ್ತಿದೆ.
ಇದರ ಪೂರ್ಣ ಲಾಭ ಪಡೆಯಲು ಕಾಂಗ್ರೆಸ್ ಜಾಟ್ ಸಮುದಾಯದ 28 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿಯಿಂದ ಜಾಟ್ ಸಮುದಾಯದ ಅಭ್ಯರ್ಥಿ ಆದವರು 16 ಮಂದಿ ಮಾತ್ರ.
ರಾಜಕೀಯ ಸಂಘರ್ಷದಲ್ಲಿ ಜಾತಿ ಸವಾಲು ಈ ಸಲದ ಚುನಾವಣೆಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿಯೇ ಕಾಣಿಸಲಿದೆ ಎಂಬುದು ಖಚಿತವಾಗುತ್ತಿದೆ.