ಒಕ್ಕಲಿಗರು ಮತ್ತು ಶೂದ್ರ ಸಮುದಾಯಗಳು ಎದುರಿಸಬೇಕಾದ ನಿಜವಾದ ಸವಾಲುಗಳು
ಕುವೆಂಪು ಅವರ ಶಿಷ್ಯ ಮತ್ತು ಶೂದ್ರರ ಕಲ್ಯಾಣಕ್ಕೆ ಬದ್ಧರಾದ ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ದಿನಾಂಕ 13-10-2023ರಂದು ಮೈಸೂರಿನ ಪುರಭವನದ ಆವರಣದಲ್ಲಿ ಜರುಗಿದ ಮಹಿಷ ದಸರಾ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಬಗ್ಗೆ ಕುವೆಂಪು ಅವರ ವಿಚಾರಧಾರೆಗಳನ್ನು ಯಥಾವತ್ತಾಗಿ ಉಲ್ಲೇಖಿಸಿದ್ದಾರೆ. ಇದನ್ನು ಮನುವಾದಿಗಳ ನಿಯಂತ್ರಣದಲ್ಲಿರುವ ಮಾಧ್ಯಮಗಳ ಪ್ರತಿನಿಧಿಗಳು ಎಲ್ಲೆ ಮೀರಿ ವೈಭವೀಕರಿಸಿ ಒಕ್ಕಲಿಗ ಸಮುದಾಯ ಭಗವಾನರ ವಿರುದ್ಧ ಕೆರಳುವಂತೆ ಮಾಡಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಇತ್ತೀಚೆಗೆ ಮೈಸೂರಿನಲ್ಲಿ ಜರುಗಿದ ‘ಮಹಿಷ ದಸರಾ’ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಕೆ.ಎಸ್. ಭಗವಾನ್ ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಮಾತನಾಡಿರುವುದು ರಾಜ್ಯದಾದ್ಯಂತ ತೀವ್ರ ಖಂಡನೆ ಮತ್ತು ಪ್ರತಿಭಟನೆಗಳಿಗೆ ಎಡೆಮಾಡಿಕೊಟ್ಟಿದೆ. ವಾಸ್ತವವಾಗಿ ಒಕ್ಕಲಿಗರು ಎಂದರೆ ಕೃಷಿ ಸಂಸ್ಕೃತಿಯ ವಾರಸುದಾರರು, ಅನ್ನದಾತರು, ಶ್ರಮದಾತರು ಮತ್ತು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರಧಾರಿಗಳು ಎಂದು ಅರ್ಥ. ಒಕ್ಕಲಿಗರು ಜಗತ್ತಿನ ಎಲ್ಲೆಡೆ ಧರ್ಮಾತೀತವಾಗಿ ಮತ್ತು ಜಾತ್ಯತೀತವಾಗಿ ಜೀವಿಸುವ ಪ್ರಮುಖ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಇವರನ್ನು ರಾಷ್ಟ್ರಕವಿ ಕುವೆಂಪು ಸೇರಿದಂತೆ ಅನುಭಾವಿಗಳು ನೇಗಿಲ ಯೋಗಿ ಎಂದು ಪ್ರೀತಿಪೂರ್ವಕವಾಗಿ ಸಂಬೋಧಿಸಿದ್ದಾರೆ. ಅಸಂಖ್ಯಾತ ಒಕ್ಕಲಿಗರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಇಂದಿಗೂ ಕೂಡ ದುರ್ಬಲರಾಗಿಯೇ ಉಳಿದಿದ್ದಾರೆ.
1974ರಲ್ಲಿ ವಿಶ್ವಜ್ಞಾನಿ, ಅನುಭಾವಿ ಮತ್ತು ದಾರ್ಶನಿಕ ಕುವೆಂಪು ಸಭೆಯೊಂದರಲ್ಲಿ ಹೇಳಿದ್ದು ಹೀಗೆ: ‘‘ಒಕ್ಕಲಿಗರು ಮಹಾ ಮೂಢರು, ಅನ್‌ಕಲ್ಚರ್ಡ್ ಬ್ರೂಟ್ಸ್ ಮತ್ತೊಬ್ಬರಿಲ್ಲ. ಎಲ್ಲೋ ನಾಲ್ಕು ಜನ ಓದಿಕೊಂಡು ಮುಂದುವರಿದಿರುವುದು ಬೇರೆ ತರಹ ಇರಬಹುದು. ನಾನು ಹೇಳೋದು ಸಾಮಾನ್ಯ ಜನರನ್ನು ಕುರಿತು. ಅವರೆಲ್ಲ ಯಾಕೆ ಹಾಗೆ ಹಿಂದುಳಿದವರು? ಅವರನ್ನು ಹಾಗೆ ಮಾಡಿದವರು ಯಾರು? ಈ ಹಾರುವರು. ಹಾರುವರನ್ನು ಅನುಸರಿಸೋಕೆ ಹೋಗಿ ಇವರೆಲ್ಲ ಕೆಟ್ಟರು. ಎಜುಕೇಷನ್ ಇನ್‌ಸ್ಟಿಟ್ಯೂಟ್ ತೆರೆದು ಜ್ಞಾನ ಪ್ರಸಾರ ಮಾಡುವುದರ ಮೂಲಕ ಇವರನ್ನು ಸರಿಯಾದ ದಾರಿಗೆ ತರಬಹುದು. ಲಿಂಗಾಯತರು ಪರವಾಗಿಲ್ಲ. ಶಾಲಾ ಕಾಲೇಜು ಅದೂ ಇದೂ ಮಾಡುತ್ತಿದ್ದಾರೆ. ಅವರೂ ವೀರಶೈವ ಧರ್ಮ ಬಿಟ್ಟು ಇನ್ನೇನೂ ಹೇಳಲ್ಲ. ಅದು ತಪ್ಪು.
ಮುಂದುವರಿಯೋಕೆ ಏನೂ ಮಾಡಿಕೊಳ್ಳದೇ ಇರೋರು ಈ ಒಕ್ಕಲಿಗರು. ಹಾರುವರ ಕಡೆಗೆ ಹೋಗ್ಬೇಡಿ, ಅವರನ್ನು ಅನುಸರಿಸಬೇಡಿ ಅಂತ ಹೇಳ್ಬೇಕು. ಯಾಕೆಂದರೆ ನಾನು ದ್ವೇಷದಿಂದ ಹೇಳ್ತಾಯಿಲ್ಲ. ಹಾರುವರು ಎಲ್ಲರನ್ನೂ ಸಮಾನತೆಯಿಂದ ನೋಡಲ್ಲ. ನೀವು ಶೂದ್ರರು ಅಂತ್ಲೇ ನೋಡೋದು. ಇದನ್ನೆಲ್ಲಾ ನಾನು ನಮ್ಮ ಜನಕ್ಕೆ ಬಿಡಿಸಿ ಹೇಳ್ಬೇಕು. ನಮ್ ಜನ ಅಂದ್ರೆ ಬರೀ ಒಕ್ಕಲಿಗರಿಗೆ ಮಾತ್ರ ಹೇಳ್ತಾಯಿಲ್ಲ. ಇಡೀ ಶೂದ್ರರನ್ನೇ ಕುರಿತು ಹೇಳ್ತಿದ್ದೀನಿ. ನಿಜವಾದ ಜನಜಾಗೃತಿ ಆಗ್ಬೇಕಾದ್ರೆ ಇದೆಲ್ಲಾ ಆಗ್ಬೇಕು. ಸ್ವಾತಂತ್ರ್ಯ ಬಂದ್ಮೇಲೆ ನಮ್ಮ ದೇಶ ಜಾತ್ಯತೀತ ಅಂತ ಆಗಿದೆ.’’
(ಕುವೆಂಪು ಸಮಗ್ರ ಗದ್ಯ, ಸಂಪುಟ 2, ಪುಟ 1028-29).
ಕುವೆಂಪು ಅವರು ರಾಷ್ಟ್ರೀಯ ಮುಖ್ಯವಾಹಿನಿ ಮತ್ತು ಅಭಿವೃದ್ಧಿ ಅವಕಾಶಗಳಿಂದ ವಂಚಿತರಾದ ಶೂದ್ರರನ್ನು ಜಾಗೃತಿಗೊಳಿಸಿ ಪ್ರಗತಿ ಪಥದಲ್ಲಿ ಮುನ್ನಡೆಸಲು ತಮ್ಮ ಬದುಕಿನುದ್ದಕ್ಕೂ ಅವಿರತ ಬೌದ್ಧಿಕ ಅಭಿಯಾನ ನಡೆಸಿದರು. ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವ, ಸಮಾಜವನ್ನು ವಿಭಜಿಸುತ್ತಿರುವ ಮತ್ತು ಪುರಾಣಗಳನ್ನು ಸೃಷ್ಟಿಸಿ ಶೂದ್ರ ಸಮುದಾಯಗಳನ್ನು ಅನಭಿವೃದ್ಧಿ ಸ್ಥಿತಿಯಲ್ಲಿ ನಿರಂತರವಾಗಿ ಇಡಲು ಬ್ರಾಹ್ಮಣಶಾಹಿ ನಡೆಸಿದ ಸಂಚುಗಳ ವಿರುದ್ಧ ಕುವೆಂಪು ಸಾಮಾಜಿಕ ಕಳಕಳಿಯಿಂದ ಇಂತಹ ವಿಚಾರಗಳನ್ನು ಜನರಿಗೆ ತಲುಪಿಸಿ ಸಾಮಾಜಿಕ ಪರಿವರ್ತನೆ ಮತ್ತು ಸಬಲೀಕರಣಕ್ಕಾಗಿ ಸಾಹಿತ್ಯವನ್ನು ಪ್ರಬಲ ಅಸ್ತ್ರವನ್ನಾಗಿ ಪ್ರಜ್ಞಾಪೂರ್ವಕವಾಗಿ ಬಳಸಿದರು. ಶಿಕ್ಷಣದ ಬ್ರಾಹ್ಮಣೀಕರಣದ ವಿರುದ್ಧ ಕುವೆಂಪು ನಡೆಸಿದ ಹೋರಾಟ ಅವಿಸ್ಮರಣೀಯ.
ಈ ಘಟನೆ ನಂತರ ಕೆಲವು ಸ್ಥಾಪಿತ ಹಿತಾಸಕ್ತಿಗಳು ಕುವೆಂಪುರವರು ಕ್ಷಮಾಪಣೆ ಕೇಳಬೇಕೆಂದು ಒತ್ತಾಯಿಸಿದಾಗ ‘‘ನನ್ನ ಈ ಭಾಷಣಕ್ಕೆ ನಾನು ಕ್ಷಮಾಪಣೆ ಕೇಳಬೇಕೆಂದು ಕೆಲವು ಮಾಧ್ವರೂ, ಮಾಧ್ವ ಸಂಘಗಳೂ ಅರಚಿಕೊಳ್ಳುತ್ತಿವೆ. ದುಷ್ಟ ತತ್ವಗಳಿಂದ ಮನುಕುಲಕ್ಕೆ ಶತಮಾನಗಳಿಂದ ಅನ್ಯಾಯ, ಅವಹೇಳನ ಮತ್ತು ಅಪಪ್ರಚಾರ ಮಾಡುತ್ತಾ ಬಂದಿರುವವರು ಸಮಸ್ತ ಮಾನವರ ಕ್ಷಮಾಪಣೆ ಕೇಳಿಕೊಳ್ಳಬೇಕೇ ಹೊರತು ಅದನ್ನು ಖಂಡಿಸಿದ ನಾನಲ್ಲ’’ ಎಂಬ ದಿಟ್ಟ ಉತ್ತರವನ್ನು ದಿನಾಂಕ 11-07-1974ರಂದು ಕುವೆಂಪು ನೀಡಿದರು.
ಕುವೆಂಪು ಅವರ ಶಿಷ್ಯ ಮತ್ತು ಶೂದ್ರರ ಕಲ್ಯಾಣಕ್ಕೆ ಬದ್ಧರಾದ ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ದಿನಾಂಕ 13-10-2023ರಂದು ಮೈಸೂರಿನ ಪುರಭವನದ ಆವರಣದಲ್ಲಿ ಜರುಗಿದ ಮಹಿಷ ದಸರಾ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಬಗ್ಗೆ ಕುವೆಂಪು ಅವರ ವಿಚಾರಧಾರೆಗಳನ್ನು ಯಥಾವತ್ತಾಗಿ ಉಲ್ಲೇಖಿಸಿದ್ದಾರೆ. ಇದನ್ನು ಮನುವಾದಿಗಳ ನಿಯಂತ್ರಣದಲ್ಲಿರುವ ಮಾಧ್ಯಮಗಳ ಪ್ರತಿನಿಧಿಗಳು ಎಲ್ಲೆ ಮೀರಿ ವೈಭವೀಕರಿಸಿ ಒಕ್ಕಲಿಗ ಸಮುದಾಯ ಭಗವಾನರ ವಿರುದ್ಧ ಕೆರಳುವಂತೆ ಮಾಡಿರುವುದು ದುರದೃಷ್ಟಕರ ಸಂಗತಿಯಾಗಿದೆ. ಕುವೆಂಪು ಅವರು ‘‘ಮನುವ್ಯಾದಿಗಳ ಈ ಕಿರುಚಾಟ ಅರಚಾಟ ಆವಾಗಲೂ ಇತ್ತು, ಈಗಲೂ ಇದೆ’’ ಎಂದು ಪ್ರತಿಕ್ರಿಯೆ ನೀಡಿದ್ದರು. ಮುಗ್ಧರು, ಶ್ರಮಜೀವಿಗಳು ಮತ್ತು ರಾಷ್ಟ್ರನಿರ್ಮಾಪಕರೂ ಆದ ಒಕ್ಕಲಿಗರು ಬ್ರಾಹ್ಮಣ್ಯದ ಕಪಿಮುಷ್ಟಿಯಿಂದ ಹೊರಬಂದು ಋಷಿ ಸಂಸ್ಕೃತಿಯನ್ನು ತಿರಸ್ಕರಿಸಿ ಕೃಷಿ ಸಂಸ್ಕೃತಿಯನ್ನು ಸುಸ್ಥಿರಗೊಳಿಸಿ ಸ್ವಾಭಿಮಾನಿಗಳು ಮತ್ತು ಸ್ವಾವಲಂಬಿಗಳಾಗಿ ಬದುಕಬೇಕೆಂದು ನೀಡಿರುವ ಕುವೆಂಪು ವಿಚಾರಧಾರೆಯನ್ನು ಪ್ರೊ. ಭಗವಾನ್ ಅಕ್ಷರಶಃಮಹಿಷ ದಸರಾ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರೊ. ಭಗವಾನರ ಮಾತುಗಳಿಂದ ಒಕ್ಕಲಿಗ ಸಮುದಾಯ ಕೆರಳುವ ಮತ್ತು ನರಳುವ ಅವಶ್ಯಕತೆ ಇಲ್ಲ. ದಲಿತರು, ಆದಿವಾಸಿಗಳು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಲ್ಲಿಯೂ ಒಕ್ಕಲುತನವನ್ನೇ ನಂಬಿ ಬದುಕುತ್ತಿರುವ ನೇಗಿಲ ಯೋಗಿಗಳು. ಪ್ರೊ. ಭಗವಾನರ ಮಾತುಗಳಿಂದ ಬೇಸರಗೊಳ್ಳುವ ಅನಿವಾರ್ಯತೆ ಇಲ್ಲ. ಪ್ರೊ. ಭಗವಾನರು ಯಾವುದೇ ವೇದಿಕೆಯಲ್ಲಿಯೂ ಒಂದು ಧರ್ಮ ಅಥವಾ ಜನಾಂಗದ ಮನಸ್ಸನ್ನು ನೋಯಿಸುವ ಮಾತುಗಳನ್ನು ಆಡದಿರಲಿ ಎಂಬುದು ಅವರ ಹಿತೈಷಿಯಾಗಿ ನನ್ನ ವೈಯಕ್ತಿಕ ಮನವಿ. ಶೋಷಿತ ಸಮುದಾಯಗಳು ಬ್ರಾಹ್ಮಣ್ಯದ ವಿರುದ್ಧ ಜಾಗೃತರಾಗಿ ಒಗ್ಗೂಡಿ ಹೋರಾಟ ನಡೆಸಿ ರಾಜ್ಯಾಧಿಕಾರವನ್ನು ಗಳಿಸುವುದು ಒಕ್ಕಲಿಗರು ಮತ್ತಿತರ ಶೂದ್ರ ಸಮುದಾಯಗಳಿಗೆ ನಿಜವಾಗಿಯೂ ಇಂದಿನ ಬಹುದೊಡ್ಡ ಸವಾಲಾಗಿದೆ.