400ಕ್ಕೂ ಅಧಿಕ ಸೀಟು ಗೆಲ್ಲುತ್ತೇವೆ ಎನ್ನುತ್ತಿದ್ದವರು 220ಕ್ಕೆ ಇಳಿದಾರೇ?

ಚುನಾವಣೆ ಫಲಿತಾಂಶ ಈ ಬಾರಿ ಏನಿರಬಹುದು ಎಂಬ ಕುತೂಹಲದ ಹೊತ್ತು ಇದು. ಎಲ್ಲರೂ ಈಗ ಲೆಕ್ಕಾಚಾರದಲ್ಲೇ ಮುಳುಗಿದ್ದಾರೆ. ಅದರಲ್ಲೂ ರಾಜಕೀಯ ವಿಶ್ಲೇಷಕರು, ಚುನಾವಣಾ ತಜ್ಞರಿಗೆ ಈಗ ಎಲ್ಲಿಲ್ಲದ ಬೇಡಿಕೆ. 400ಕ್ಕೂ ಅಧಿಕ ಸೀಟು ಗೆಲ್ಲುತ್ತೇವೆ ಎನ್ನುತ್ತಿದ್ದ ಬಿಜೆಪಿ ಕಥೆ ಏನಾಗಬಹುದು? ಅದೆಲ್ಲಿಗೆ ತಲುಪಬಹುದು? ಇದು ಕೂಡ ಈಗಿರುವ ಬಹುದೊಡ್ಡ ಕುತೂಹಲ. ಖ್ಯಾತ ವಿಶ್ಲೇಷಕ, ಲೇಖಕ ಪರಕಾಲ ಪ್ರಭಾಕರ್ ‘ದಿ ವೈರ್’ನಲ್ಲಿ ಕರಣ್ ಥಾಪರ್‌ಗೆ ನೀಡಿದ ಸಂದರ್ಶನದಲ್ಲಿ ಬಹಳ ಸ್ಪಷ್ಟವಾದ ಮಾತುಗಳಲ್ಲಿ ಬಿಜೆಪಿ ಪಡೆಯಬಹುದಾದ ನಂಬರ್ ಬಗ್ಗೆ ಹೇಳಿದ್ದಾರೆ.

Update: 2024-05-17 06:56 GMT

ಲೋಕಸಭೆ ಚುನಾವಣೆಯ ನಾಲ್ಕು ಹಂತಗಳು ಮುಗಿದಿವೆ ಮತ್ತು ಸುಮಾರು ಶೇ.70ರಷ್ಟು ಸೀಟುಗಳ ಮತಗಳು ಇವಿಎಂ ಸೇರಿಯಾಗಿದೆ.

ಚುನಾವಣೆ ಫಲಿತಾಂಶ ಈ ಬಾರಿ ಏನಿರಬಹುದು ಎಂಬ ಕುತೂಹಲದ ಹೊತ್ತು ಇದು. ಎಲ್ಲರೂ ಈಗ ಲೆಕ್ಕಾಚಾರದಲ್ಲೇ ಮುಳುಗಿದ್ದಾರೆ. ಅದರಲ್ಲೂ ರಾಜಕೀಯ ವಿಶ್ಲೇಷಕರು, ಚುನಾವಣಾ ತಜ್ಞರಿಗೆ ಈಗ ಎಲ್ಲಿಲ್ಲದ ಬೇಡಿಕೆ.

400ಕ್ಕೂ ಅಧಿಕ ಸೀಟು ಗೆಲ್ಲುತ್ತೇವೆ ಎನ್ನುತ್ತಿದ್ದ ಬಿಜೆಪಿ ಕಥೆ ಏನಾಗಬಹುದು? ಅದೆಲ್ಲಿಗೆ ತಲುಪಬಹುದು? ಇದು ಕೂಡ ಈಗಿರುವ ಬಹುದೊಡ್ಡ ಕುತೂಹಲ.

ಖ್ಯಾತ ವಿಶ್ಲೇಷಕ, ಲೇಖಕ ಪರಕಾಲ ಪ್ರಭಾಕರ್ ‘ದಿ ವೈರ್’ ನಲ್ಲಿ ಕರಣ್ ಥಾಪರ್ಗೆ ನೀಡಿದ ಸಂದರ್ಶನದಲ್ಲಿ ಬಹಳ ಸ್ಪಷ್ಟವಾದ ಮಾತುಗಳಲ್ಲಿ ಬಿಜೆಪಿ ಪಡೆಯಬಹುದಾದ ನಂಬರ್ ಬಗ್ಗೆ ಹೇಳಿದ್ದಾರೆ.

ಪರಕಾಲ ಪ್ರಭಾಕರ್ ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ.

ಮತದಾನದ ಎಲ್ಲ ಹಂತಗಳು ಮುಗಿದಾಗ ಬಿಜೆಪಿ ಪಾಲಿಗೆ 220ರಿಂದ 230 ಸೀಟುಗಳು ದಕ್ಕಬಹುದು ಎನ್ನುತ್ತಾರೆ ಅವರು.

ಅದೂ ಕೂಡ ದೊಡ್ಡ ಮಟ್ಟದಲ್ಲಿ ಅದಕ್ಕೆ ಮುನ್ನಡೆ ಸಿಕ್ಕಿದೆ ಎನ್ನುವಾಗಿನ ಸನ್ನಿವೇಶದಲ್ಲಿ ಅಷ್ಟನ್ನು ಗೆಲ್ಲುವ ಸಾಧ್ಯತೆಯಿದೆ.

ಇಲ್ಲದೇ ಹೋದಲ್ಲಿ 220ಕ್ಕಿಂತಲೂ ಕಡಿಮೆ ಸೀಟುಗಳನ್ನಷ್ಟೇ ಅದು ಗೆಲ್ಲಬಹುದು ಎನ್ನುತ್ತಾರೆ ಪ್ರಭಾಕರ್.

ಇನ್ನು ಎನ್‌ಡಿಎ ಮಿತ್ರಪಕ್ಷಗಳು ಒಟ್ಟಾರೆ ಗೆಲ್ಲುವ ಸೀಟುಗಳು 35ರಿಂದ 43 ಇರಬಹುದು ಎನ್ನುತ್ತಾರೆ ಅವರು.

ಅಂದರೆ, ಬಿಜೆಪಿ ಸೇರಿದಂತೆ ಎನ್‌ಡಿಎ ಗೆಲ್ಲಬಹುದಾದ ಸೀಟುಗಳು: ಒಟ್ಟಾರೆ 255ರಿಂದ 265.

ಇಲ್ಲಿ ಮತ್ತೊಂದು ಮಾತನ್ನೂ ಪರಕಾಲ ಸೇರಿಸುತ್ತಾರೆ.

ಎನ್‌ಡಿಎ ಜೊತೆಗಿರುವ ಯಾವುದೇ ಪಕ್ಷದ್ದು ಸೈದ್ಧಾಂತಿಕವಾಗಿರುವುದಕ್ಕಿಂತ ಹೆಚ್ಚಾಗಿ, ಸಾಂದರ್ಭಿಕ ಮೈತ್ರಿಯಾಗಿದೆ. ಮತ್ತವು ಬಿಜೆಪಿ ಸ್ವತಂತ್ರವಾಗಿ ನಿರೀಕ್ಷಿತ ಮಟ್ಟದ ಸೀಟುಗಳನ್ನು ಗೆಲ್ಲದೇ ಹೋದಲ್ಲಿ ಮೈತ್ರಿ ಮುರಿದುಕೊಂಡು ಹೊರಹೋಗುವಂತಹವೇ ಆಗಿವೆ.

ಇಂತಹದೊಂದು ನಿಶ್ಚಿತ ಅಂದಾಜನ್ನು ಅವರು ಯಾವ ಆಧಾರದ ಮೇಲೆ ಮಾಡುತ್ತಿದ್ಧಾರೆ ಎಂಬ ಪ್ರಶ್ನೆ ಸಹಜ.

ಅಂಕಿಅಂಶ ಆಧಾರಿತ ಪರಿಮಾಣಾತ್ಮಕ ಅಧ್ಯಯನದ ಆಧಾರದ ಮೇಲೆ ಇದನ್ನು ಹೇಳುತ್ತಿಲ್ಲ ಎನ್ನುವುದನ್ನು ಪರಕಾಲ ಸ್ಪಷ್ಟಪಡಿಸುತ್ತಾರೆ.

ದೇಶಾದ್ಯಂತದ ತಮ್ಮ ಪ್ರವಾಸ ಮತ್ತು ವಿವಿಧ ಕ್ಷೇತ್ರಗಳ ಜನರೊಂದಿಗಿನ ಸಂವಾದ ಆಧರಿಸಿದ ಈ ಅಂದಾಜನ್ನು ಎರಡು ಅಥವಾ ಮೂರು ನೆಲೆಗಳಿಂದ ಕಂಡುಕೊಂಡಿರುವುದಾಗಿ ಹೇಳುತ್ತಾರೆ ಅವರು.

ಹಿಂದಿನ ಡೇಟಾಗಳನ್ನು ಗಮನಿಸಿದರೆ, ಬಿಜೆಪಿ ಜನಸಂಘವಾಗಿದ್ದಾಗ ಪಡೆದ ಮತಗಳು ಯಾವತ್ತೂ ಶೇ.9ರಿಂದ ಶೇ.10ರಷ್ಟನ್ನು ದಾಟಿದ್ದಿಲ್ಲ.

ಬಿಜೆಪಿ ಎಂದು ಬದಲಾದ ಮೇಲೆ ಮುಟ್ಟಿದ ಗರಿಷ್ಠ ಮತಹಂಚಿಕೆ 1998ರಲ್ಲಿ ಶೇ.25ರಷ್ಟು ಇರಬಹುದು.

2004, 2009ರ ಬಿಜೆಪಿ ಮತ ಪ್ರಮಾಣವನ್ನು ನೋಡಲು ಹೋಗುತ್ತಿಲ್ಲ. ಯಾಕೆಂದರೆ ಆಗ ಅದು ಬಹಳ ಕೆಳಮಟ್ಟದಲ್ಲಿತ್ತು. 2009ರಲ್ಲಿ ಕೂಡ ಅದು ಪಡೆದ ಮತ ಶೇ.18ರಷ್ಟು ಮಾತ್ರವಿತ್ತು.

2014ರಲ್ಲಿ ಬಿಜೆಪಿ ಗೆದ್ದಿದ್ದು ಹಿಂದುತ್ವ ಪಿಚ್ ಮೂಲಕ ಆಗಿರಲಿಲ್ಲ. ಆಗಿನ ಕದನ ಹಿಂದೂ-ಮುಸ್ಲಿಮ್ ಆಗಿರಲಿಲ್ಲ. ಅದು ಒಂದೆಡೆ ಇದ್ದರೂ, ನಿರುದ್ಯೋಗ, ಬಡತನ ಇನ್ನೊಂದೆಡೆ ಇತ್ತು. ಅದಕ್ಕೆ ಪೂರಕವಾಗಿ ಭ್ರಷ್ಟಾಚಾರ ವಿರೋಧಿ ಅಲೆಯಿತ್ತು. ಬಹುತೇಕ ನಗರ ಪ್ರದೇಶದವರು, ಮಧ್ಯಮ ವರ್ಗದವರು, ವೃತ್ತಿಪರರು, ಸುಶಿಕ್ಷಿತರು ಬಿಜೆಪಿಯತ್ತ ಒಲವು ತೋರಿದ್ದರು. ಜೊತೆಗೆ ಮೋದಿಯ ವರ್ಚಸ್ಸು ಕೂಡ ಕೆಲಸ ಮಾಡಿತ್ತು.

ಆಗ ಅದು ಪಡೆದ ಮತಗಳು ಶೇ.31ರ ಷ್ಟಾಗಿತ್ತು ಮತ್ತು ಅದು ಮಿತ್ರಪಕ್ಷಗಳ ಬಲವೂ ಸೇರಿ ಬಂದಿದ್ದಾಗಿತ್ತು.

ಒಂದು ಕ್ಷೇತ್ರದಲ್ಲಿ ಬಿಜೆಪಿಗೆ ಇಷ್ಟು ಮತಗಳಿವೆ ಎಂದಾದರೆ ಅದು ಕೇವಲ ಬಿಜೆಪಿಯದ್ದೇ ಮತಗಳಲ್ಲ. ಅದರ ಮಿತ್ರಪಕ್ಷಗಳದ್ದು ಸೇರಿ ಅಷ್ಟು ಮತಗಳು ಎಂದರ್ಥ.

ಈ ಬಗೆಯಲ್ಲಿ ಲೆಕ್ಕ ಹಾಕಿಕೊಂಡರೆ, ಶೇ.25ರಷ್ಟಿದ್ದದ್ದು ಶೇ.4ರಿಂದ ಶೇ.5ರಷ್ಟು ಏರಿಕೆಯಾದದ್ದು ಮಿತ್ರಪಕ್ಷಗಳಿಂದಾಗಿ.

ಅಲ್ಲಿಗೆ ಶೇ.27ರಿಂದ ಶೇ.29ರಷ್ಟು ಮತಗಳು. ಅದು ಪುಲ್ವಾಮಾ, ಬಾಲಾಕೋಟ್ ವಿದ್ಯಮಾನಗಳ ಪ್ರಭಾವದ ಕಾರಣದಿಂದಾಗಿಯೂ ಸೇರಿದ ಮತಗಳಿದ್ದವು.

ಆದರೆ ಈಗ ದುರಾಡಳಿತ, ಸಮರ್ಪಕ ಆರ್ಥಿಕ ನಿರ್ವಹಣೆಯ ಕೊರತೆ, ಭ್ರಷ್ಟಾಚಾರ, ಅದರಲ್ಲೂ ಚುನಾವಣಾ ಬಾಂಡ್ ಹಗರಣ- ಇವೆಲ್ಲದರ ಪರಿಣಾಮವಾಗಿ ಅದರ ಮತಹಂಚಿಕೆ ಈ ಮೊದಲಿದ್ದ ಶೇ.23 ಅಥವಾ ಶೇ.24ರ ಪ್ರಮಾಣಕ್ಕೇ ಕುಸಿಯಬಹುದು. ಇದು ತನ್ನ ಅಂದಾಜಿನ ಆಧಾರ ಎನ್ನುತ್ತಾರೆ ಪರಕಾಲ.

ಈ ಆಧಾರದಲ್ಲಿ, ಬಿಜೆಪಿ ಸ್ವತಂತ್ರವಾಗಿ 220ಕ್ಕಿಂತಲೂ ಹೆಚ್ಚು ಸೀಟುಗಳನ್ನು ಗೆಲ್ಲಲಾರದು.

2014ರ ನಂತರ ಬಿಜೆಪಿ ಪಡೆದ ಹೆಚ್ಚುವರಿ ಮತಗಳು ಅದರ ತೀವ್ರ ಹಿಂದುತ್ವ ಅಜೆಂಡಾದ ಪರಿಣಾಮವಾಗಿತ್ತೇ ಎಂಬುದರ ಬಗ್ಗೆ ಬಿಜೆಪಿಯೊಳಗೆ ಮಾತ್ರವಲ್ಲ, ವಿಶ್ಲೇಷಕರಲ್ಲೂ ಗೊಂದಲವಿದೆ. ಮತ್ತದು ಹೌದು.

2014ರಲ್ಲಾಗಲೀ 2019ರಲ್ಲಾಗಲೀ ಹಿಂದುತ್ವ ವಿಚಾರ ತೀರಾ ಮುನ್ನೆಲೆಯಲ್ಲಿರಲಿಲ್ಲ.

2014ರಲ್ಲಿ ಭ್ರಷ್ಟಾಚಾರ ಮತ್ತಿತರ ವಿಷಯಗಳಿದ್ದರೆ, 2019ರಲ್ಲಿ ಪುಲ್ವಾಮಾ, ಬಾಲಾಕೋಟ್ ಇದ್ದವು. ಆದರೆ ಹಿಂದುತ್ವ ವಿಚಾರವೇ ತೀವ್ರವಾಗಿ ಮುನ್ನೆಲೆಗೆ ಬಂದಿರುವ ಈಗ ಜನರು ನಿರುದ್ಯೋಗ, ಬೆಲೆಯೇರಿಕೆ, ಆರ್ಥಿಕ ದುರಾಳ್ವಿಕೆಯ ವಿಚಾರದಲ್ಲಿ ಹೊಂದಿರುವ ಕಳವಳ ಬಿಜೆಪಿಗೆ ಮಾರಕವಾಗಲಿದೆ. ಅಂದರೆ ಹಿಂದುತ್ವದ ಬಲವಿದೆ ಎಂದು ಬಿಜೆಪಿ ಅಂದುಕೊಳ್ಳುತ್ತಿದ್ದರೆ, ಸಮಸ್ಯೆಯಲ್ಲಿರುವ ಜನರನ್ನು ಅದು ಆಕರ್ಷಿಸಲಾರದ ಹಿನ್ನೆಲೆಯಲ್ಲಿ ಬಿಜೆಪಿಗೆ ಸಮಸ್ಯೆಯಾಗಲಿದೆ.

ತೆಲಂಗಾಣದಲ್ಲಿ 2019ರಲ್ಲಿ 4 ಸೀಟುಗಳನ್ನು ಗೆದ್ದಿದ್ದ ಎನ್‌ಡಿಎಗೆ ಈ ಬಾರಿ ಅವನ್ನು ಉಳಿಸಿಕೊಳ್ಳುವುದೂ ಕಷ್ಟವಾಗಬಹುದು.

ಆಂಧ್ರದಲ್ಲಿ ಟಿಡಿಪಿ ಜೊತೆ ಮೈತ್ರಿ ಹಿನ್ನೆಲೆಯಿಂದಾಗಿ ಒಂದೆರಡು ಸೀಟುಗಳನ್ನು ಗೆಲ್ಲುವ ಸಾಧ್ಯತೆಯಿದ್ದು, ಒಂದು ಸೀಟನ್ನಂತೂ ಗೆಲ್ಲಬಹುದು.

ಒಟ್ಟಾರೆ 5 ಸೀಟುಗಳನ್ನು ಅದು ಪಡೆಯುವಂತೆ ಕಾಣುತ್ತದೆ.

ತಮಿಳುನಾಡು, ಕೇರಳದಲ್ಲಿ ನೋಡುವುದಾದರೆ,

ಕಳೆದ ಚುನಾವಣೆಯಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ಆಗದ ರಾಜ್ಯಗಳೆಂದರೆ ತಮಿಳುನಾಡು ಮತ್ತು ಕೇರಳ. ಪರಕಾಲ ಹೇಳುವ ಪ್ರಕಾರ, ಈ ಸಲವೂ ಆ ಎರಡೂ ರಾಜ್ಯಗಳಲ್ಲಿ ಬಿಜೆಪಿ ಒಂದೇ ಒಂದು ಸೀಟು ಗೆಲ್ಲುವುದಕ್ಕೂ ಅವಕಾಶವಿಲ್ಲ.

ಬಿಜೆಪಿ ಆ ಎರಡು ರಾಜ್ಯಗಳಲ್ಲಿ ನೆಲೆ ಕಂಡುಕೊಳ್ಳಲು ತೀವ್ರ ಪ್ರಯತ್ನ ಹಾಕಿರುವುದರ ನಡುವೆಯೂ ಅದಕ್ಕೆ ಅಲ್ಲಿ ಗೆಲುವಿನ ಅವಕಾಶವಿಲ್ಲ ಎಂದು ಪರಕಾಲ ದೃಢವಾಗಿ ಹೇಳುತ್ತಾರೆ.

ರಾಜಕೀಯ ನಾಯಕರು ಅಷ್ಟು ಗೆಲ್ಲುತ್ತೇವೆ, ಇಷ್ಟು ಗೆಲ್ಲುತ್ತೇವೆ ಎಂದು ಹೇಳುವುದು ಚುನಾವಣಾ ಪ್ರಚಾರದ ಭಾಗವಾಗಿರುತ್ತದೆ ಎಂಬುದು ಪರಕಾಲರ ಅಭಿಪ್ರಾಯ.

ಇನ್ನು ಕರ್ನಾಟಕದಲ್ಲಿ ಕಳೆದ ಬಾರಿ ಗೆದ್ದಿದ್ದ ಸೀಟುಗಳಲ್ಲಿ 12ರಿಂದ 15ರಷ್ಟನ್ನು ಬಿಜೆಪಿ ಈ ಬಾರಿ ಕಳೆದುಕೊಳ್ಳಲಿದೆ ಎನ್ನುತ್ತಾರೆ ಪರಕಾಲ. ಅಂದರೆ ಸುಮಾರು 10ರಿಂದ 12 ಸೀಟುಗಳನ್ನು ಮಾತ್ರವೇ ಕರ್ನಾಟಕದಲ್ಲಿ ಗೆಲ್ಲಲು ಬಿಜೆಪಿಗೆ ಸಾಧ್ಯವಾಗಬಹುದು.

ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ನಷ್ಟವಾಗಲಿದೆ ಎಂಬುದು ಅವರ ಅಂದಾಜು.

ದಕ್ಷಿಣ ಭಾರತದ 129 ಮತ್ತು ಪುದುಚೇರಿಯ ಒಂದು ಸ್ಥಾನ ಸೇರಿದಂತೆ ಒಟ್ಟು 130 ಸ್ಥಾನಗಳಲ್ಲಿ ಕರ್ನಾಟಕ 10ರಿಂದ 12, ತೆಲಂಗಾಣ ಮತ್ತು ಆಂಧ್ರಪದೇಶ 5 ಬಿಜೆಪಿ ಗೆಲ್ಲಬಹುದಾದ ಸೀಟುಗಳು ಎಂದು ಪರಕಾಲ ಹೇಳುತ್ತಾರೆ.

ಕಳೆದ ಬಾರಿ ಬಿಜೆಪಿ ಈ 130 ಸ್ಥಾನಗಳಲ್ಲಿ 29 ಸ್ಥಾನಗಳನ್ನು ಗೆದ್ದಿತ್ತು ಎಂಬುದನ್ನು ಇಲ್ಲಿ ಗಮನಿಸಬಹುದು.

ಅಂದರೆ ಪರಕಾಲ ಹೇಳುವ ಪ್ರಕಾರ, 12 ಸೀಟುಗಳನ್ನು ದಕ್ಷಿಣ ಭಾರತದಲ್ಲಿ ಬಿಜೆಪಿ ಕಳೆದುಕೊಳ್ಳಲಿದೆ. ಕಳೆದ ಬಾರಿ ಗೆದ್ದದ್ದರಲ್ಲಿ ಅರ್ಧದಷ್ಟನ್ನು ಕಳೆದುಕೊಂಡರೂ ಅಚ್ಚರಿಯಿಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಅಂದರೆ ಹೆಚ್ಚುಕಡಿಮೆ 15 ಸೀಟುಗಳು ಬಿಜೆಪಿ ಕೈತಪ್ಪಲಿವೆ.

ಇನ್ನು ಉತ್ತರ ಭಾರತದ ವಿಚಾರಕ್ಕೆ ಬರುವುದಾದರೆ,

ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ 2019ರಲ್ಲಿ ಅಲ್ಲಿ ಗೆದ್ದಿದ್ದು 80ರಲ್ಲಿ 62 ಸ್ಥಾನಗಳು.ಆದರೆ ಈ ಸಲ ಹೆಚ್ಚೆಂದರೆ ಅದು 50 ಸ್ಥಾನಗಳನ್ನು ಮಾತ್ರ ಗೆಲ್ಲಬಹುದು ಎನ್ನುವುದು ಪರಕಾಲ ಅಂದಾಜು. 12ರಿಂದ 15 ಸೀಟುಗಳು ಅಲ್ಲಿ ಬಿಜೆಪಿ ಕೈತಪ್ಪುವ ಸಾಧ್ಯತೆಯಿದೆ. 12 ಸೀಟುಗಳನ್ನಂತೂ ಅದು ಖಂಡಿತವಾಗಿ ಕಳೆದುಕೊಳ್ಳಲಿದೆ.

ಇನ್ನು ಬಿಹಾರದಲ್ಲಿ ಕಳೆದ ಬಾರಿ ಬಿಜೆಪಿ ಗೆದ್ದಿದ್ದು 17 ಸ್ಥಾನಗಳು. ಈ ಬಾರಿ 6ರಿಂದ 7 ಸ್ಥಾನಗಳನ್ನು ಅದು ಕಳೆದುಕೊಳ್ಳುವುದು ನಿಶ್ಚಿತ.

ಹಿಂದಿ ಭಾಷಿಕ ರಾಜ್ಯಗಳಲ್ಲಿ ಏನಾಗಬಹುದು ಎಂಬುದನ್ನು ಪರಕಾಲ ಲೆಕ್ಕ ಹಾಕಿರುವುದು ಹೀಗೆ:

ಮಧ್ಯಪ್ರದೇಶದಲ್ಲಿ 3 ಸೀಟುಗಳನ್ನು, ರಾಜಸ್ಥಾನದಲ್ಲಿ 5 ಸೀಟುಗಳನ್ನು ಕಳೆದುಕೊಳ್ಳಬಹುದು.

ಛತ್ತೀಸ್‌ಗಡ, ಜಾರ್ಖಂಡ್‌ಗಳೆರಡೂ ಸೇರಿ 10 ಸ್ಥಾನಗಳನ್ನು ಕಳೆದುಕೊಳ್ಳಬಹುದು.

ಹರ್ಯಾಣದಲ್ಲಿ 7ರಿಂದ 8 ಸೀಟುಗಳು ಖೋತಾ.

ದಿಲ್ಲಿಯಲ್ಲಿ 5ರಿಂದ 6 ಸೀಟುಗಳು ಬಿಜೆಪಿಯ ಕೈತಪ್ಪಲಿವೆ. ದಿಲ್ಲಿಯಲ್ಲಿ ಒಂದು ಅಥವಾ ಎರಡು ಸೀಟುಗಳು ಹೋಗಬಹುದು ಎಂದು ಬಿಜೆಪಿ ಅಂದುಕೊಳ್ಳುತ್ತಿದೆ. ಆದರೆ ಅದು ತೀರಾ ಮೇಲುಮೇಲಿನ ಅಂದಾಜು ಎನ್ನುತ್ತಾರೆ ಪರಕಾಲ.

ಅವರ ಪ್ರಕಾರ ಈ 6 ರಾಜ್ಯಗಳಲ್ಲಿ ಬಿಜೆಪಿ ಈ ಬಾರಿ 30 ಸ್ಥಾನಗಳನ್ನು ಕಳೆದುಕೊಳ್ಳಲಿದೆ.

ಇನ್ನು ಮಹಾರಾಷ್ಟ್ರ ಮತ್ತು ಬಂಗಾಳಗಳಲ್ಲಿ ನೋಡುವುದಾದರೆ,

2019ರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ 23 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಸುಮಾರು 12 ಸ್ಥಾನಗಳನ್ನು ಅದು ಅಲ್ಲಿ ಕಳೆದುಕೊಳ್ಳಬಹುದು. ಅಂದರೆ ಅರ್ಧಕ್ಕರ್ಧದಷ್ಟು ಸ್ಥಾನಗಳು ಬಿಜೆಪಿ ಕೈತಪ್ಪಲಿವೆ.

ಬಂಗಾಳದಲ್ಲಿ ಕಳೆದ ಬಾರಿ ಬಿಜೆಪಿ ಗೆದ್ದಿದ್ದ ಸ್ಥಾನಗಳು 18. ಈ ಬಾರಿ ಕನಿಷ್ಠ 4 ಅಥವಾ 5 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಅಂದರೆ ಅದರ ಬಲ ಅಲ್ಲಿ 13 ಅಥವಾ 14 ಸ್ಥಾನಗಳಿಗೆ ಇಳಿಯಲಿದೆ. ಈ ಬಾರಿ ಬಂಗಾಳದಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಬಹುದು ಎಂಬ ವಾದಗಳನ್ನು ಪರಕಾಲ ಅಲ್ಲಗಳೆಯುತ್ತಾರೆ.

ಹಿಂದಿನ ಮತಹಂಚಿಕೆಯಂಥ ಅಂಶಗಳನ್ನು ಮಾತ್ರವಲ್ಲದೆ, ಬಂಗಾಳದ ಒಟ್ಟು ರಾಜಕೀಯ ಭೌಗೋಳಿಕತೆಯನ್ನು ತಾವು ಅಧ್ಯಯನ ಮಾಡಿರುವುದಾಗಿ ಅವರು ಹೇಳುತ್ತಾರೆ.

ಅಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ಎರಡು ಬೇರೆಯಾಗಿ ಕಣದಲ್ಲಿರುವುದೇ ‘ಇಂಡಿಯಾ’ ಒಕ್ಕೂಟಕ್ಕೆ ವರದಾನವಾಗಲಿದೆ ಎಂಬುದು ಪರಕಾಲ ಅಭಿಪ್ರಾಯ.

ಇನ್ನು ಗುಜರಾತ್‌ನಲ್ಲಿ ಕಳೆದೆರಡೂ ಚುನಾವಣೆಗಳಲ್ಲಿ ಎಲ್ಲ ಸ್ಥಾನಗಳನ್ನೂ ಬಿಜೆಪಿ ತನ್ನದಾಗಿಸಿಕೊಂಡಿತ್ತು.

ಈ ಬಾರಿ ಸುಮಾರು 5 ಸ್ಥಾನಗಳನ್ನು ಅದು ಕಳೆದುಕೊಳ್ಳಬಹುದು ಎಂಬುದು ಪರಕಾಲ ಲೆಕ್ಕಾಚಾರ. ಕಡಿಮೆ ಮತಗಳ ಅಂತರದಿಂದ ಅದು ಈ ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನುತ್ತಾರೆ.

ಒಟ್ಟಾರೆಯಾಗಿ, ಕಳೆದ ಬಾರಿ ಗೆದ್ದುದರಲ್ಲಿ ಸುಮಾರು ಅರ್ಧಕ್ಕರ್ಧದಷ್ಟು ಸ್ಥಾನಗಳನ್ನು ಬಿಜೆಪಿ ದಕ್ಷಿಣ ಭಾರತದಲ್ಲಿ ಕಳೆದುಕೊಳ್ಳಲಿದೆ.

ಉತ್ತರ ಭಾರತದಲ್ಲಿ ಕನಿಷ್ಠ 65ರಿಂದ 75 ಸೀಟುಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ.

ಉತ್ತರ ಭಾರತದ ಸನ್ನಿವೇಶದ ವಿಚಾರವಾಗಿ ಎರಡು ಅಂಶಗಳನ್ನು ಬಹಳ ಪ್ರಮುಖವಾಗಿ ಪರಕಾಲ ಗಮನಿಸುತ್ತಾರೆ.

ಒಂದು, ಅಲ್ಲಿ ಬಿಜೆಪಿ ಹೊಸದಾಗಿ ಯಾವುದೇ ಸ್ಥಾನಗಳನ್ನು ಗೆಲ್ಲುವುದು ಸಾಧ್ಯವಿಲ್ಲ. ಎರಡು, ಕಳೆದ ಬಾರಿ ಗೆದ್ದ ಸೀಟುಗಳನ್ನು ಉಳಿಸಿಕೊಳ್ಳುವುದೂ ಅದಕ್ಕೆ ಕಷ್ಟವಾಗಲಿದೆ.

ಈಶಾನ್ಯ ಭಾರತದಲ್ಲಿಯೂ ಅದಕ್ಕೆ ಪರಿಸ್ಥಿತಿ ಹಿತಕರವಾಗಿಲ್ಲ. ಈಶಾನ್ಯ ಭಾರತದಲ್ಲಿನ ನಷ್ಟ ಸೇರಿಸಿಕೊಂಡರೆ, ಅದು 80ರಿಂದ 95 ಸೀಟುಗಳವರೆಗೆ ಕಳೆದುಕೊಳ್ಳಲಿದೆ.

ಒಡಿಶಾದಲ್ಲಿಯೂ ಅದಕ್ಕೆ ಕಳೆದ ಸಲದ ಸ್ಥಾನಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ ಎಂದಿದ್ದಾರೆ ಪರಕಾಲ.

ಉತ್ತರ ಭಾರತ, ಈಶಾನ್ಯ ಭಾರತದಲ್ಲಿ 87 + ದಕ್ಷಿಣ ಭಾರತದಲ್ಲಿ 15 ಅಂದರೆ ಸುಮಾರು 102 ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ ಎನ್ನುತ್ತಾರೆ ಪರಕಾಲ ಪ್ರಭಾಕರ್.

2019ರಲ್ಲಿ ಬಿಜೆಪಿ ಗೆದ್ದಿದ್ದು 303 ಸ್ಥಾನಗಳು.

ಈಗ 102 ಸೀಟುಗಳನ್ನು ಕಳೆದುಕೊಂಡರೆ ಸುಮಾರು 201 ಸ್ಥಾನಗಳನ್ನಷ್ಟೇ ಗೆಲ್ಲುವುದು ಸಾಧ್ಯ.

ಅಂದರೆ 220 ಎಂದು ಅಂದಾಜಿಸುತ್ತಿರುವುದಕ್ಕಿಂತ ಕಡಿಮೆ. ಏನೇ ಆದರೂ, 220ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವಿಲ್ಲ ಎಂದೇ ಪರಕಾಲ ನಿಶ್ಚಿತವಾಗಿ ಹೇಳುತ್ತಾರೆ.

ವಿಪಕ್ಷ ಒಕ್ಕೂಟ ಸರಕಾರ ರಚಿಸಲಿದೆ ಎಂಬುದರ ಬಗ್ಗೆ ಅವರಿಗೆ ಸದ್ಯಕ್ಕೆ ಖಚಿತತೆಯಿದೆ.

ಬಿಜೆಪಿ ನೇತೃತ್ವದ ಸರಕಾರ ಇತಿಹಾಸದ ಭಾಗವಾಗಲಿದೆ, 2024ರ ಜೂನ್‌ನಲ್ಲಿ ಖಂಡಿತವಾಗಿಯೂ ಬಿಜೆಪಿಯೇತರ, ಎನ್‌ಡಿಎಯೇತರ ಸರಕಾರ ಬರಲಿದೆ ಎಂದಿದ್ದಾರೆ ಪರಕಾಲ.

ಆದರೆ ಅದನ್ನು ಯಾವ ಪಕ್ಷ ನಿರ್ದಿಷ್ಟವಾಗಿ ಮುನ್ನಡೆಸಲಿದೆ, ಯಾರು ಪ್ರಧಾನಿಯಾಗಲಿದ್ದಾರೆ ಎಂಬುದನ್ನು ಅವರು ಹೇಳಬಯಸಿಲ್ಲ.

ಬಿಜೆಪಿ ಈ ಮಟ್ಟದಲ್ಲಿ ಕಳಪೆ ಪ್ರದರ್ಶನ ತೋರಿಸಿದರೆ, ನರೇಂದ್ರ ಮೋದಿ ಭವಿಷ್ಯ ಏನು?

ಈ ಪ್ರಶ್ನೆಯನ್ನು ಸಂಕೀರ್ಣವಾದುದು ಎಂದು ನೋಡುತ್ತಾರೆ ಅವರು.

ಆದರೆ ಜಗತ್ತಿನ ಇತಿಹಾಸವನ್ನು ಗಮನಿಸಿದರೆ, ಬಹುತೇಕ ಎಲ್ಲಾ ಸರ್ವಾಧಿಕಾರಿಗಳೂ ಕಂಡಿರುವುದು ದುರಂತ ಅಂತ್ಯ ಎಂದು ಸೂಚ್ಯಾರ್ಥದ ಉತ್ತರವನ್ನು ಪರಕಾಲ ಕೊಟ್ಟಿದ್ದಾರೆ.

(ಕೃಪೆ: thewire.in)

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಸ್. ಸುದರ್ಶನ್

contributor

Similar News