ಯುವಶಕ್ತಿಯ ಮುಂದಿರುವ ಇಂದಿನ ಸವಾಲುಗಳು

Update: 2024-01-12 07:00 GMT

ಪ್ರಸಕ್ತ ಸಂದರ್ಭದಲ್ಲಿ ಭಾರತ ಹಲವಾರು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದೆ. ಅವುಗಳಲ್ಲಿ ಭವಿಷ್ಯದ ಭಾರತದ ತಲೆಮಾರು ಎಂದೆನಿಸಿಕೊಂಡಿರುವ ಯುವಶಕ್ತಿಯು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುವುದು ದೇಶದ ಪ್ರಗತಿಯ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ.

ನಿರುದ್ಯೋಗ, ಶಿಕ್ಷಣ, ಜಾತಿ ತಾರತಮ್ಯ, ಆರ್ಥಿಕ ಅಸಮಾನತೆ, ಒತ್ತಡ, ಖಿನ್ನತೆ, ಆತ್ಮಹತ್ಯೆ, ಹಸಿವು, ಆರೋಗ್ಯ, ನಾಯಕತ್ವ, ಆತ್ಮವಿಶ್ವಾಸ ಹೀಗೆ ಇನ್ನು ಹತ್ತು ಹಲವಾರು ಸಮಸ್ಯೆಗಳಿಂದ ಯುವಶಕ್ತಿ ಬಳಲುತ್ತಿದೆ. ಈ ಕಾರಣಕ್ಕಾಗಿ ತನ್ನ ಬೌದ್ಧಿಕ ಮತ್ತು ದೈಹಿಕ ಶ್ರಮ-ಸಾಮರ್ಥ್ಯಗಳನ್ನು ಸರಿಯಾದ ಕ್ರಮದಲ್ಲಿ ಮತ್ತು ಸರಿಯಾದ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ಬಳಸಲಾಗದೇ ದೂಷಣೆಗೆ ಗುರಿಯಾಗುತ್ತಿದೆ. ಕುಟುಂಬದ ಒತ್ತಡ, ಸಮಾಜದ ಅಪಮಾನಗಳಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ ಯುವಶಕ್ತಿಯ ಬೌದ್ಧಿಕ ಮತ್ತು ದೈಹಿಕ ಶ್ರಮ-ಸಾಮರ್ಥ್ಯಗಳನ್ನು ದೇಶದ ಅಭಿವೃದ್ಧಿಗೆ ಬಳಕೆಯಾಗುವಂತಹ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ನಮ್ಮನ್ನಾಳುವ ಸರಕಾರಗಳು ವಿಫಲವಾಗಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

ಬೃಹತ್ ಪ್ರಮಾಣದ ಯುವಶಕ್ತಿಯು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಶಿಕ್ಷಣಕ್ಕೆ ಆದ್ಯ ಸ್ಥಾನ. ಇಂದಿನ ಶಿಕ್ಷಣ ವ್ಯವಸ್ಥೆಯು/ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಸ್ವತಂತ್ರ ಆಲೋಚನೆಯನ್ನೇ ಹೊಸಕಿಹಾಕಿವೆ. ಸದಾ ಒತ್ತಡದಲ್ಲಿ ಬದುಕುವ ಆಂತಂಕಕಾರಿ ಸ್ಥಿತಿಯನ್ನು ನಿರ್ಮಾಣ ಮಾಡಿಬಿಟ್ಟಿವೆ. ಐದು ವರ್ಷಗಳಿಂದ ಉಪನ್ಯಾಸಕಳಾಗಿ ಕಾರ್ಯ ನಿರ್ವಹಿಸುತ್ತಿರುವ ನನಗೆ ಸ್ನಾತಕೋತ್ತರ ಪದವಿಗೆ ಬರುವ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಗಮನಿಸಿದಾಗ ದಿಗ್ಭ್ರಾಂತಿಯುಂಟಾಗುತ್ತದೆ. ಶಿಕ್ಷಣ ಎನ್ನುವುದು ವಿದ್ಯಾರ್ಥಿಗಳನ್ನು ಸ್ವತಂತ್ರ ಆಲೋಚನಾ ಶಕ್ತಿಯನ್ನು, ವಿಷಯ ವಿಶ್ಲೇಷಣಾ ಸಾಮರ್ಥ್ಯ ವನ್ನು, ವಿಮರ್ಶಾಗುಣವನ್ನು ಬೆಳೆಸಿ ಸೃಜನಶೀಲತೆಯೆಡೆಗೆ ಕೊಂಡೊಯ್ದು, ವಿವೇಕಿಗಳನ್ನಾಗಿಯೂ, ಸ್ವಾಭಿಮಾನಿಗಳನ್ನಾಗಿಯೂ ಹಾಗೂ ಸ್ವಾವಲಂಬಿಗಳನ್ನಾಗಿಯೂ ಮಾಡಬೇಕಿರು ವುದು ಈ ಸಂಸ್ಥೆಗಳ ಜವಾಬ್ದಾರಿಯಾಗಬೇಕಿತ್ತು. ಆದರೆ ಅಂಕಗಳನ್ನು ಗಿಟ್ಟಿಸಿಕೊಳ್ಳುವ, ಪ್ರತಿಯೊಂದಕ್ಕೂ ಸ್ಪರ್ಧೆಗಿಳಿಯುವ ಮನೋಪ್ರವೃತ್ತಿಯನ್ನಷ್ಟೇ ಕಲಿಸುತ್ತಿವೆ. ಸೆಮಿಸ್ಟರ್ ಸ್ಕೀಮ್‌ಗಳು, ಅಸೈನ್‌ಮೆಂಟ್‌ಗಳು, ಇಂಟರ್‌ನಲ್ ಅಂಕಗಳು, ವಿದ್ಯಾರ್ಥಿಗಳ ಕೈಗಳನ್ನು ಬಿಗಿದಿರುವುದು ಮಾತ್ರವಲ್ಲದೆ ಅವರ ಪ್ರಶ್ನಿಸುವ ಮನಸ್ಥಿತಿಯನ್ನೇ ಕೊಂದುಹಾಕಿ ವಿದ್ಯಾರ್ಥಿ ಚಳವಳಿಯನ್ನೇ ನಾಶವಾಗಿಸಿದೆ.

ಪಠ್ಯವನ್ನು ಹೊರತುಪಡಿಸಿ ಬೇರೇನನ್ನೂ ಓದಲು ಸಮಯಾವಕಾಶವೇ ಸಿಗದಂತೆ ಮಾಡಿರುವುದು ದುರಂತವೇ ಸರಿ. ಇದಕ್ಕಾಗಿಯೇ ಶಿಕ್ಷಣದಲ್ಲಿ ವೈಚಾರಿಕ, ವೈಜ್ಞಾನಿಕ ಮತ್ತು ವಿಚಾರಪರತೆಯಂತಹ ಮಹೋನ್ನತ ಆಶಯಗಳನ್ನು, ಮೌಲ್ಯಾಧಾರಿತ ಅಂಶಗಳನ್ನು ಶಿಕ್ಷಣದಲ್ಲಿ ಸೇರಿಸಿಕೊಳ್ಳಬೇಕು. ಈ ಕೊರತೆ ವಿದ್ಯಾರ್ಥಿ ಯುವಜನರಲ್ಲಿ ಮಾತ್ರವಲ್ಲದೆ ಶಾಲಾಶಿಕ್ಷಣದಿಂದ ಹಿಡಿದು ಉನ್ನತಶಿಕ್ಷಣ ಸಂಸ್ಥೆಗಳ ಬೋಧಕರಲ್ಲಿಯೂ ಇದೆ. ಇದು ಈ ಎರಡು ವರ್ಗದ ಮನೋವಿಕಾಸಕ್ಕೆ ಮಾರಕವಾದದ್ದು. ವೈಜ್ಞಾನಿಕ ಆಲೋಚನಾ ಕ್ರಮನ್ನು ಇವರಲ್ಲಿ ಮೂಡಿಸದಿದ್ದರೆ ಮತೀಯ ಶಕ್ತಿಗಳ ಕೈಗಳಲ್ಲಿ ಅಸ್ತ್ರಗಳಾಗಿ ದೇಶದ ಏಕತೆಗೆ ಧಕ್ಕೆ ತಂದು ಸಹೋದರತೆ, ಸಹಿಷ್ಣುತೆಯನ್ನು ನಾಶಮಾಡುವಂತಹ ಶಕ್ತಿಗಳಾಗಿ ಮಾರ್ಪಡುತ್ತಾರೆ.

ಯುವಜನತೆಗೆ ವಯಸ್ಸಿಗೆ ಸರಿಯಾಗಿ ಉದ್ಯೋಗಗಳು ಸಿಗದಿದ್ದಾಗ ಕುಟುಂಬದ ಒತ್ತಡ ದಿಂದ ಮತ್ತು ಸಮಾಜದ ಅಪಮಾನಗಳಿಂದ ಖಿನ್ನತೆಗೆ ದೂಡಲ್ಪಡುತ್ತಾರೆ. ಬೌದ್ಧಿಕ ದಾರಿದ್ರ್ಯ ಮತ್ತು ನಿರುದ್ಯೋಗವು ಸೃಷ್ಟಿಮಾಡುವ ಆರ್ಥಿಕ ಬಾರದಿಂದಾಗಿ ಆಧುನಿಕ ಜೀವನ ಶೈಲಿಯ ವೇಗಕ್ಕೆ ಸಮನಾಗಿ ಹೆಜ್ಜೆಹಾಕಲು ಸಾಧ್ಯವಾಗದೆ, ಕುಟುಂಬವನ್ನು ಸಂತೈಸಲಾಗದೆ ಮಾನಸಿಕ ನೆಮ್ಮದಿ ಕಳೆದುಕೊಂಡು, ಆತುರದ ನಿರ್ಧಾರಗಳಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ವರದಿಯ ಪ್ರಕಾರ ಕಳೆದ 50 ವರ್ಷಗಳಲ್ಲಿ 2021ರಲ್ಲಿಯೇ ಅತ್ಯಧಿಕ ಪ್ರಮಾಣದ ಆತ್ಮಹತ್ಯಾ ಪ್ರಕರಣಗಳು ದಾಖಲಾಗಿವೆ. ಅಂದರೆ 2021ರಲ್ಲಿ 1,64,033 ಜನ ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ-2021ರ ಅಂಕಿಅಂಶದ ಪ್ರಕಾರ 13,056 ಆತ್ಮಹತ್ಯೆಗಳು ದಾಖಲಾಗಿರುವುದು ಆತಂಕಕಾರಿ ಸಂಗತಿ. ಇದು ಭಾರತದ ಒಟ್ಟು ಆತ್ಮಹತ್ಯಾ ಪ್ರಕರಣದಲ್ಲಿ ಶೇ.8ರಷ್ಟು.

ಇವೆಲ್ಲಕ್ಕೂ ಕಳಸಪ್ರಾಯದಂತೆ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಸಮೂಹ ಮಾಧ್ಯಗಳು ನಮ್ಮ ಯುವಶಕ್ತಿಯನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಉತ್ಕಟನೆಯಿಂದ ಮಾಡುತ್ತಿವೆ. ಮೇಲಿನ ಸಮಸ್ಯೆಗಳನ್ನು ಗುರುತಿಸುವ ಬುದ್ಧಿಶಕ್ತಿ, ನೋಡುವ ಕಣ್ಣು, ಕೇಳುವ ಕಿವಿಗಳನ್ನು ಕಿತ್ತುಕೊಂಡು ತಮಗೆ ಬೇಕಾದ ದ್ವೇಷದ ಅಜೆಂಡಾಗಳನ್ನು ಮೆದುಳುಗಳಲ್ಲಿ ತುಂಬುವ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆ. ಜಾತಿ- ಧರ್ಮ-ದೇವರ ಹೆಸರಿನಲ್ಲಿ ಯುವಶಕ್ತಿಯ ಬುದ್ಧಿಯನ್ನು ವೈಕಲ್ಯಗೊಳಿಸಿ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಚಿಂತನೆಯನ್ನೇ ಮಾಡದಂತೆ ನೋಡಿಕೊಳ್ಳುವಲ್ಲಿ ಮಾಧ್ಯಮಗಳ ಪಾತ್ರ ಹಿರಿದಾದದ್ದು.

ಹೀಗೆ ಸಾಲು ಸಾಲು ಸಮಸ್ಯೆಗಳಲ್ಲಿ ಬಳಲುತ್ತಿರುವ ಯುವಶಕ್ತಿಯ ಸರಿತಪ್ಪುಗಳನ್ನು ತಿದ್ದುವ, ವಿಶ್ವಾಸವನ್ನು ತುಂಬಿ ಸತ್ತಿರುವ ಮನೋಸ್ಥೈರ್ಯವನ್ನು ಎಚ್ಚರಿಸುವ, ಮನೋಬಲವನ್ನು ದೃಢಗೊಳಿಸುವ, ಹೆಪ್ಪುಗಟ್ಟಿದ ರಕ್ತವನ್ನು ಚಲಿಸುವಂತೆ ಮಾಡುವ ಬಹುತ್ವದ ನಾಯಕತ್ವದ ಶೂನ್ಯತೆಯನ್ನು ಯುವಶಕ್ತಿ ಎದುರಿಸುತ್ತಿದೆ. ಕ್ರೀಡೆ, ಸಿನೆಮಾ, ರಾಜಕೀಯ ನಾಯಕರನ್ನೇ ದೈವೀಕರಿಸಿ ಆರಾಧಿಸುವ ಯುವಜನತೆಗೆ ನೈಜನಾಯಕನ ವ್ಯಕ್ತಿತ್ವದ ಪರಿಚಯವೇ ಇಲ್ಲ. ಅಂತಹ ಮಹಾನ್ ನಾಯಕತ್ವಗಳು ಗತಿಸಿಹೋಗಿದ್ದು ಹೊಸತಲೆಮಾರಿನ ಯುವ ನಾಯಕತ್ವದ ಕೊರತೆಯು ಸವಾಲಾಗಿ ನಿಂತಿರುವುದು ಈ ಹೊತ್ತಿನ ವ್ಯಂಗ್ಯವಲ್ಲದೇ ಮತ್ತೇನು!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಪದ್ಮಶ್ರೀ ಟಿ.

contributor

Similar News