ಉಡುಪಿ-ಚಿಕ್ಕಮಗಳೂರು: ಹಾಲಿ ಸಂಸದೆಯ ಮೇಲಿನ ಜನತೆಯ ಅಸಮಾಧಾನ ಕಾಂಗ್ರೆಸ್‌ಗೆ ಲಾಭ ತಂದೀತೇ?

ಕ್ಷೇತ್ರ ಪುನರ್ವಿಂಗಡಣೆ ಬಳಿಕ ನಡೆದ ನಾಲ್ಕು ಚುನಾವಣೆಗಳಲ್ಲಿ ಮೂರರಲ್ಲಿ ಬಿಜೆಪಿಯೇ ಗೆದ್ದಿರುವುದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗಮನ ಸೆಳೆಯುವ ಸಂಗತಿ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ತನ್ನ ಹಿಡಿತ ಕಾಯ್ದುಕೊಂಡಿದೆ. ಕಾಂಗ್ರೆಸ್‌ನಲ್ಲಿ ಹಲವರು ಕಣಕ್ಕಿಳಿಯುವ ಇಚ್ಛೆ ಹೊಂದಿದ್ದರೂ, ಪಕ್ಷದ ತೀರ್ಮಾನಕ್ಕಾಗಿ ಕಾದಿದ್ದಾರೆ. ಬಿಜೆಪಿಯಲ್ಲೂ ಅಭ್ಯರ್ಥಿ ಯಾರೆಂಬುದು ಸ್ಪಷ್ಟವಿಲ್ಲ.

Update: 2024-02-21 06:28 GMT

ಸರಣಿ- 19

ಕೆಲವು ಪ್ರಾಥಮಿಕ ಮಾಹಿತಿಗಳು

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಾಕ್ಷರತೆ ಪ್ರಮಾಣ ಶೇ.75.3

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿಧಾನಸಭಾ ಕ್ಷೇತ್ರಗಳು 8.

ಅವೆಂದರೆ, ಕುಂದಾಪುರ, ಉಡುಪಿ, ಕಾಪು, ಕಾರ್ಕಳ, ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಹಾಗೂ ತರೀಕೆರೆ.

4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು, 4 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಒಟ್ಟು ಮತದಾರರು -15,59,896

ಪುರುಷರು -7,58,008

ಮಹಿಳೆಯರು -8,01,845

ಇತರರು -43

ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾರರ ಸಂಖ್ಯೆಯಲ್ಲಿ ಸುಮಾರು 46,000ದಷ್ಟು ಹೆಚ್ಚಳವಾಗಿದೆ. 2019ರಲ್ಲಿ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 15,13,231 ಇತ್ತು.

ಕ್ಷೇತ್ರ ಪುನರ್ವಿಂಗಡಣೆ ನಂತರದ ಚುನಾವಣೆಗಳಲ್ಲಿ 2012ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವುದನ್ನು ಹೊರತುಪಡಿಸಿದರೆ, ಉಳಿದಂತೆ 2009, 2014 ಹಾಗೂ 2019ರ ಚುನಾವಣೆಗಳಲ್ಲಿ ಬಿಜೆಪಿಯೇ ಗೆದ್ದಿದೆ.

ಆ ನಾಲ್ಕೂ ಚುನಾವಣೆಗಳಲ್ಲಿನ ಮತ ಹಂಚಿಕೆ ವಿವರ:

2019 ಬಿಜೆಪಿಗೆ ಶೇ.62.43, ಜೆಡಿಎಸ್‌ಗೆ ಶೇ.32.07

2014 ಬಿಜೆಪಿಗೆ ಶೇ. 56.20, ಕಾಂಗ್ರೆಸ್‌ಗೆ ಶೇ.38.63

2012 ಕಾಂಗ್ರೆಸ್‌ಗೆ ಶೇ.46.75, ಬಿಜೆಪಿಗೆ ಶೇ.41.39

2009 ಬಿಜೆಪಿಗೆ ಶೇ.48.09, ಕಾಂಗ್ರೆಸ್‌ಗೆ ಶೇ.44.86

ಕ್ಷೇತ್ರ ಮರುವಿಂಗಡಣೆಗೂ ಮುಂಚಿನಿಂದ 2004ರವರೆಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರಗಳಾಗಿದ್ದ ಉಡುಪಿ ಹಾಗೂ ಚಿಕ್ಕಮಗಳೂರು ಸಂಸದೀಯ ಕ್ಷೇತ್ರಗಳು, 2008ರಲ್ಲಿ ನಡೆದ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು.

ಈ ಎರಡು ಜಿಲ್ಲೆಗಳ ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವೆಂಬ ಹೊಸ ಕ್ಷೇತ್ರ ರಚಿಸಲಾಯಿತು.

ಪಶ್ಚಿಮ ಕರಾವಳಿ ಹಾಗೂ ಪಶ್ಚಿಮ ಘಟ್ಟದ ಮೇಲಿನ ಮಲೆನಾಡು ಸಮ್ಮಿಳಿತವಾಗಿ ಈ ಕ್ಷೇತ್ರದ ರಚನೆಯಾಗಿದೆ.

ಮೊದಲು ಉಡುಪಿ, ಬ್ರಹ್ಮಾವರ, ಕುಂದಾಪುರ, ಕಾರ್ಕಳ ಹಾಗೂ ಮುಲ್ಕಿ ವಿಧಾನಸಭಾ ಕ್ಷೇತ್ರಗಳು ಸೇರಿ ಅಂದು ದಕ್ಷಿಣ ಕನ್ನಡ ಉತ್ತರ ಕ್ಷೇತ್ರ ರಚನೆಯಾಗಿತ್ತು.

1952ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಉಳ್ಳಾಲ ಶ್ರೀನಿವಾಸ ಮಲ್ಯ ಅಲ್ಲಿನ ಸಂಸದರಾಗಿ ಆಯ್ಕೆಯಾಗಿದ್ದರು.

ದಕ್ಷಿಣ ಕನ್ನಡ ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಬಿ.ಶಿವರಾವ್ ಸಂಸದರಾಗಿದ್ದರು.

1956ರ ಲೋಕಸಭಾ ಚುನಾವಣೆ ವೇಳೆ ಕರಾವಳಿ ಪ್ರದೇಶ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡು ಉಡುಪಿ ಎಂಬ ಲೋಕಸಭಾ ಕ್ಷೇತ್ರ ಉದಯವಾಯಿತು.

1957ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಉಳ್ಳಾಲ ಶ್ರೀನಿವಾಸ ಮಲ್ಯ ಪಿಎಸ್‌ಪಿಯ ಮೋಹನ್ ರಾವ್ ಅವರನ್ನು ಸೋಲಿಸಿ ಉಡುಪಿಯ ಮೊದಲ ಸಂಸದರಾಗಿ ಆಯ್ಕೆಯಾದರು. 1962ರ ಚುನಾವಣೆಯಲ್ಲಿಯೂ ಮತ್ತೆ ಮೋಹನ್ ರಾವ್ ವಿರುದ್ಧ ಗೆಲ್ಲುವುದರೊಂದಿಗೆ ಸತತ ಮೂರು ಬಾರಿ ಸಂಸದರಾಗಿ ಆಯ್ಕೆಯಾದರು.

1967ರ ಚುನಾವಣೆಯಲ್ಲಿ ಸ್ವತಂತ್ರ ಪಾರ್ಟಿಯ ಜೆ.ಎಂ.ಲೋಬೊ ಪ್ರಭು ಕಾಂಗ್ರೆಸ್‌ನ ಎಸ್.ಎಸ್.ಕೊಳ್ಕೆಬೈಲ್ ವಿರುದ್ಧ ಗೆದ್ದರು. 1971ರಲ್ಲಿ ಪಿ.ರಂಗನಾಥ್ ಶೆಣೈ ಗೆಲುವಿನೊಂದಿಗೆ ಮತ್ತೆ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಹೋಯಿತು. ಅವರು ಜೆ.ಎಂ.ಲೋಬೊ ಪ್ರಭು ಅವರ ವಿರುದ್ಧ ಗೆದ್ದಿದ್ದರು.

1977ರಲ್ಲಿ ಕಾಂಗ್ರೆಸ್‌ನ ತೋನ್ಸೆ ಅನಂತ ಪೈ (ಟಿ.ಎ.ಪೈ) ಅವರು ಬಿಎಲ್‌ಡಿಯ ಡಾ.ವಿ.ಎಸ್.ಆಚಾರ್ಯರನ್ನು ಸೋಲಿಸಿದರು.

1980ರಿಂದ ಸತತ ಐದು ಬಾರಿ 1996ರವರೆಗೆ ಉಡುಪಿ ಲೋಕಸಭಾ ಕ್ಷೇತ್ರದಿಂದ ಗೆದ್ದವರು ದಿವಂಗತ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರು.

2004ರ ಚುನಾವಣೆಯ ವೇಳೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರಿದ ಮನೋರಮಾ ಮಧ್ವರಾಜ್ ಅವರು ವಿನಯಕುಮಾರ್ ಸೊರಕೆ ಅವರನ್ನು ಸೋಲಿಸಿ ಕ್ಷೇತ್ರ ಮತ್ತೆ ಬಿಜೆಪಿಯ ವಶವಾಗಲು ಕಾರಣರಾದರು.

ಇದರ ನಂತರ 2009ರ ಚುನಾವಣೆ ವೇಳೆ ಉಡುಪಿ ಲೋಕಸಭಾ ಕ್ಷೇತ್ರ ತನ್ನ ಅಸ್ತಿತ್ವ ಕಳೆದುಕೊಂಡು ವ್ಯಾಪ್ತಿಯನ್ನು ಮತ್ತೊಮ್ಮೆ ಬದಲಾಯಿಸಿಕೊಂಡು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಎಂದಾಯಿತು.

ಇನ್ನು, ಚಿಕ್ಕಮಗಳೂರು ಸಹ ತನ್ನ ವ್ಯಾಪ್ತಿಯನ್ನು ಎರಡು ಬಾರಿ ಬದಲಾಯಿಸಿಕೊಂಡಿತ್ತು. 1952ರಲ್ಲಿ ಮೈಸೂರು ರಾಜ್ಯದಲ್ಲಿ ಹಾಸನ-ಚಿಕ್ಕಮಗಳೂರು ಎಂಬುದು ಈ ಕ್ಷೇತ್ರದ ಹೆಸರಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್.ಸಿದ್ಧನಂಜಪ್ಪ ಸಂಸದರಾಗಿ ಚುನಾಯಿತರಾಗಿದ್ದರು.

1971 ಮತ್ತು 1977ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಡಿ.ಬಿ.ಚಂದ್ರೇಗೌಡ, 1978ರಲ್ಲಿ ಕ್ಷೇತ್ರವನ್ನು ಇಂದಿರಾ ಗಾಂಧಿ ಅವರಿಗಾಗಿ ಬಿಟ್ಟುಕೊಟ್ಟರು. 1978ರಲ್ಲಿ ನಡೆದ ಉಪಚುನಾವಣೆಯಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ ಐತಿಹಾಸಿಕ ಜಯ ಪಡೆದರು.

1980ರಲ್ಲಿ ಕಾಂಗ್ರೆಸ್ ಡಿ.ಎಂ.ಪುಟ್ಟೇಗೌಡ, 1984ರಲ್ಲಿ ಡಿ.ಕೆ. ತಾರಾದೇವಿ, 1989ರಲ್ಲಿ ಮತ್ತೆ ಡಿ.ಎಂ.ಪುಟ್ಟೇಗೌಡ, 1991ರಲ್ಲಿ ಮತ್ತೆ ಡಿ.ಕೆ.ತಾರಾದೇವಿ ಜಯ ಪಡೆದರೆ, 1996ರಲ್ಲಿ ಬಿ.ಎಲ್.ಶಂಕರ್ ಅವರ ಮೂಲಕ ಜನತಾದಳ ಇಲ್ಲಿ ಜಯ ದಾಖಲಿಸಿತು.

1998ರ ಬಳಿಕ ಕ್ಷೇತ್ರ ಬಿಜೆಪಿ ಕೈವಶವಾಯಿತು. ಡಿ.ಸಿ.ಶ್ರೀಕಂಠಪ್ಪ ಅವರ ಮೂಲಕ ಬಿಜೆಪಿ ಇಲ್ಲಿ 1998, 1999, 2004ರಲ್ಲಿ ಜಯಭೇರಿ ಬಾರಿಸಿತು.

2008ರ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಕ್ಷೇತ್ರ ತನ್ನ ಅಸ್ತಿತ್ವ ಕಳೆದುಕೊಂಡು ಉಡುಪಿಯೊಂದಿಗೆ ಸೇರಿಕೊಂಡಿತು.

2008ರಲ್ಲಿ ನಡೆದ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ವಿಧಾನಸಭಾ ಕ್ಷೇತ್ರ ಅಸ್ತಿತ್ವ ಕಳೆದುಕೊಂಡಿತು. ಮತ್ತೊಂದೆಡೆ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದೊಂದಿಗೆ ಸೇರಿತು. ಹಾಗೆಯೇ ಚಿಕ್ಕಮಗಳೂರಿನ ಕಡೂರು ಕ್ಷೇತ್ರವನ್ನು ಹಾಸನದೊಂದಿಗೆ ಸೇರಿಸಲಾಯಿತು.

ಅಂತಿಮವಾಗಿ ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಸೇರ್ಪಡೆಯೊಂದಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು.

ಕ್ಷೇತ್ರ ಪುನವರ್ವಿಂಗಡಣೆ ಬಳಿಕ 2009ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯ ಡಿ.ವಿ.ಸದಾನಂದ ಗೌಡ ಕಾಂಗ್ರೆಸ್ ನ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸಿದರು.

2012ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಡಿ.ವಿ. ಸದಾನಂದ ಗೌಡ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ನಡೆದ ಉಪಚುನಾವಣೆಯಲ್ಲಿ ಕೆ. ಜಯಪ್ರಕಾಶ್ ಹೆಗ್ಡೆ, ಬಿಜೆಪಿಯ ವಿ. ಸುನೀಲ್ ಕುಮಾರ್ ವಿರುದ್ಧ ಗೆದ್ದರು.

2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಶೋಭಾ ಕರಂದ್ಲಾಜೆ ಮತ್ತೆ ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸಿದರು.

2019ರಲ್ಲಿ ಸತತ ಎರಡನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ ಶೋಭಾ ಕರಂದ್ಲಾಜೆ ಜೆಡಿಎಸ್‌ನ ಪ್ರಮೋದ್ ಮಧ್ವರಾಜ್ ಅವರನ್ನು ಮೂರೂವರೆ ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.

ಸ್ಪಷ್ಟಗೊಳ್ಳದ ಸ್ಪರ್ಧಾ ಕಣ

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಈ ಬಾರಿಯ ಅಭ್ಯರ್ಥಿಗಳ ಕುರಿತಂತೆ ಯಾವುದೇ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ. ಕೆಲ ಸಮಯದ ಹಿಂದಿನವರೆಗೂ ಕಳೆದ ಚುನಾವಣೆಗಳಲ್ಲಿ ಜಯಗಳಿಸಿರುವ ಶೋಭಾ ಕರಂದ್ಲಾಜೆ ಈ ಬಾರಿ ಇಲ್ಲಿಂದ ಸ್ಪರ್ಧಿಸಲು ಉತ್ಸುಕರಾಗಿಲ್ಲ, ಅವರು ಬೆಂಗಳೂರು ಉತ್ತರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಇತ್ತೀಚಿನ ಒಂದೆರಡು ತಿಂಗಳಿನಿಂದ ಶೋಭಾ ಮತ್ತೆ ಇಲ್ಲಿಂದಲೇ ಸ್ಪರ್ಧಿಸುವ ಲಕ್ಷಣಗಳು ಕಾಣಿಸುತ್ತಿವೆ.

ಶೋಭಾ ನಿರೀಕ್ಷಿಸಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಪಟ್ಟ ಯಡಿಯೂರಪ್ಪ ಪುತ್ರ ವಿಜಯೇಂದ್ರರ ಪಾಲಾಗಿರುವುದರಿಂದ ಅವರು ಮತ್ತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳತೊಡಗಿದ್ದಾರೆ. ಇದು, ಅವರು ಮತ್ತೆ ಇಲ್ಲಿಂದಲೇ ಸ್ಪರ್ಧಿಸುವ ಸುಳಿವನ್ನು ನೀಡಿದೆ.

ಶೋಭಾರನ್ನು ಹೊರತುಪಡಿಸಿದರೆ ಉಡುಪಿ, ಚಿಕ್ಕಮಗಳೂರು ಜಿಲ್ಲೆಯಿಂದ ಸಾಕಷ್ಟು ಮಂದಿ ಸ್ಪರ್ಧಾಕಾಂಕ್ಷಿಗಳಿದ್ದಾರೆ. ಉಡುಪಿಯಿಂದ ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕೆ.ಉದಯಕುಮಾರ್ ಶೆಟ್ಟಿ, ಪ್ರಮೋದ್ ಮಧ್ವರಾಜ್ ಟಿಕೆಟ್ ಸಿಕ್ಕಿದರೆ ಸ್ಪರ್ಧಿಸುವ ಇಚ್ಛೆಯನ್ನು ಹೊಂದಿದ್ದಾರೆ.

ಕಳೆದ ಬಾರಿ ಶೋಭಾ ಎದುರು ಹೀನಾಯವಾಗಿ ಸೋತಿದ್ದ ಪ್ರಮೋದ್ ಮಧ್ವರಾಜ್ ಈಗ ಬಿಜೆಪಿ ಸೇರಿದ್ದು, ಲೋಕಸಭಾ ಅಭ್ಯರ್ಥಿಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಇದನ್ನು ಅವರು ಈಗಾಗಲೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಮತ್ತೊಂದೆಡೆ, ಚಿಕ್ಕಮಗಳೂರು ಜಿಲ್ಲೆಯಿಂದ ಸಿ.ಟಿ.ರವಿ ಹಾಗೂ ಶೃಂಗೇರಿಯ ಮಾಜಿ ಶಾಸಕ ಜೀವರಾಜ್ ಅವರು ಸ್ಪರ್ಧಿಸುವ ಇಚ್ಛೆಯನ್ನು ಪಕ್ಷದ ವೇದಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಬಿಜೆಪಿಯಲ್ಲಿ ಹೈಕಮಾಂಡ್ ಮಾತೇ ವೇದವಾಕ್ಯವಾಗಿರುವುದರಿಂದ ಅಲ್ಲಿಂದ ಬರುವ ಯಾವುದೇ ಸೂಚನೆಯನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕಾಗುತ್ತದೆ.

ಸಾಲದ್ದಕ್ಕೆ ಶೋಭಾ ವಿರುದ್ಧ ಉಡುಪಿಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಕಟ್ಟಾ ಬೆಂಬಲಿಗರಲ್ಲೇ ತೀವ್ರ ಅಸಮಾಧಾನವೂ ಇದೆ ಎಂಬ ವರದಿಗಳಿವೆ.

ಮೊನ್ನೆ ಮೀನುಗಾರರು ಶೋಭಾ ಅವರನ್ನು ಅಭಿವೃದ್ಧಿ ಕೆಲಸಗಳ ವಿಷಯದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡ ಹಾಗೂ ಅದಕ್ಕೆ ಶೋಭಾ ಕೂಡ ಗರಂ ಆಗಿ ಪ್ರತಿಕ್ರಿಯೆ ನೀಡಿರುವ ವೀಡಿಯೊ ವೈರಲ್ ಆಗಿದೆ.

ಈಗಾಗಲೇ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಐದು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಯುವಕರನ್ನು ನಿಲ್ಲಿಸಿ ಗೆಲ್ಲಿಸಿಕೊಂಡಿರುವ ಪಕ್ಷ, ಅದೇ ಪ್ರಯೋಗವನ್ನು ಲೋಕಸಭಾ ಚುನಾವಣೆಯಲ್ಲೂ ಮಾಡಲು ಹೋದರೆ ಆಗ ಚುನಾವಣೆಗೆ ಹೊಸ ಹುಮ್ಮಸ್ಸು ಬರಬಹುದು.

ಇನ್ನೂ ಚುರುಕುಗೊಳ್ಳದ ಕಾಂಗ್ರೆಸ್

ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಚುನಾವಣಾ ಸಿದ್ಧತೆ ಇನ್ನಷ್ಟೇ ಚುರುಕುಗೊಳ್ಳಬೇಕಿದೆ. ಉಡುಪಿ ಜಿಲ್ಲೆಯಲ್ಲಿ ಪಕ್ಷದ ಯಾವುದೇ ನಾಯಕರ ಹೆಸರು ಕೇಳಿಬರುತ್ತಿಲ್ಲ. ಜೋರಾಗಿ ಕೇಳಿಬರುತ್ತಿರುವ ಒಂದು ಹೆಸರು ಮಾಜಿ ಸಚಿವ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರದು.

ನಿಗದಿಯಾದಂತೆ ನವೆಂಬರ್ ಕೊನೆಯ ವಾರ ಅವರು ಹುದ್ದೆಯಿಂದ ನಿವೃತ್ತರಾಗಿದ್ದರೆ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತಿತ್ತು. ಆದರೆ ರಾಜ್ಯ ಸರಕಾರ ಕಾಂತರಾಜ್ ವರದಿಯನ್ನು ಅಂತಿಮಗೊಳಿಸಿ ಅಧಿಕೃತವಾಗಿ ಹಸ್ತಾಂತರಿಸಲು ಆಯೋಗದ ಅಧಿಕಾರಾವಧಿಯನ್ನು ಫೆಬ್ರವರಿ ತಿಂಗಳವರೆಗೆ ವಿಸ್ತರಿಸಿದೆ. ಹೀಗಾಗಿ ಈಗ ಅಧಿಕೃತವಾಗಿ ಬಿಜೆಪಿಯಲ್ಲಿರುವ ಜಯಪ್ರಕಾಶ್ ಹೆಗ್ಡೆ ನಿಜವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವರೇ ಎಂಬುದು ಹುದ್ದೆ ಅವಧಿ ಮುಗಿದ ಬಳಿಕವಷ್ಟೇ ಗೊತ್ತಾಗಲಿದೆ.

ಹೆಗ್ಡೆ ಬಿಟ್ಟರೆ ಉಡುಪಿಯಲ್ಲಿ ಅಭ್ಯರ್ಥಿಯಾಗುವ ಸಾಧ್ಯತೆ ಇರುವ ಮತ್ತೊಬ್ಬ ಕಾಂಗ್ರೆಸಿಗ ವಿನಯಕುಮಾರ್ ಸೊರಕೆ. ಆದರೆ ಸೊರಕೆಗೆ ಈ ಬಾರಿ ಉಡುಪಿಯಲ್ಲಿ ಸ್ಪರ್ಧಿಸುವ ಆಕಾಂಕ್ಷೆಯೇ ಇಲ್ಲವೆನ್ನಲಾಗುತ್ತಿದೆ. ಅವರು ದಕ್ಷಿಣ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ಹೊಂದಿದ್ದು, ವರಿಷ್ಠರ ಗಮನಕ್ಕೆ ಇದನ್ನು ತಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಇತ್ತೀಚೆಗೆ ಸರ್ವಾನುಮತದ ನಿರ್ಣಯವೊಂದನ್ನು ಕೈಗೊಂಡು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವನ್ನು ಹೈಕಮಾಂಡ್‌ಗೆ ಬಿಟ್ಟುಕೊಟ್ಟಿದೆ.

ಹೀಗಾಗಿ ಉಡುಪಿ ಜಿಲ್ಲೆಯಿಂದ ಕಾರ್ಕಳದ ಡಿ.ಆರ್.ರಾಜು ಅವರನ್ನು ಹೊರತುಪಡಿಸಿ ಯಾರೂ ಸಹ ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ಘೋಷಿಸಿಕೊಳ್ಳಲು ಈವರೆಗೆ ಮುಂದಾಗಿಲ್ಲ.

ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಕ್ಷದ ಹಾಲಿ ಜಿಲ್ಲಾಧ್ಯಕ್ಷ ಡಾ.ಅಂಶುಮತ್ ಗೌಡ, ಮಾಜಿ ಅಧ್ಯಕ್ಷ ಡಾ.ವಿಜಯಕುಮಾರ್, ಯುವ ವಕೀಲ ಹಾಗೂ ಉತ್ತಮ ವಾಗ್ಮಿ ಸುಧೀರ್ ಕುಮಾರ್‌ಮರೋಳಿ, ಚಿಕ್ಕಮಗಳೂರು ಕ್ಷೇತ್ರದ ಮಾಜಿ ಸಂಸದೆ ಡಿ.ಕೆ.ತಾರಾದೇವಿ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ, ಮಾಜಿ ಜಿಪಂ ಅಧ್ಯಕ್ಷೆ ರೇಖಾ, ಸಂದೀಪ ಗೌಡ ಅವರ ಹೆಸರು ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ.

ಚಿಕ್ಕಮಗಳೂರಿನ ಎಲ್ಲ ಐದು ವಿಧಾನ ಸಭಾ ಕ್ಷೇತ್ರಗಳನ್ನು ಗೆದ್ದಿರುವ ಅಲ್ಲಿನ ಕಾಂಗ್ರೆಸ್ ಸಮಿತಿ ಚುರುಕಾಗಿ ಈ ಬಾರಿ ಅಲ್ಲಿಯವರಿಗೆ ಸ್ಪರ್ಧಿಸುವ ಅವಕಾಶ ಸಿಗಬಹುದು ಎಂದು ನಿರೀಕ್ಷಿಸುತ್ತಿದೆ.

ಇತ್ತ ಉಡುಪಿ ಜಿಲ್ಲಾ ಕಾಂಗ್ರೆಸ್ ಎಲ್ಲ ಅಸೆಂಬ್ಲಿ ಕ್ಷೇತ್ರಗಳನ್ನೂ ಸೋತು ಸಂಘಟನಾತ್ಮಕವಾಗಿ ಬಹಳ ದುರ್ಬಲವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಿ.ಬಿ. ಶೆಟ್ಟಿಗಾರ್

contributor

Similar News