ಕರಿಮೆಣಸು ಕೊಯ್ಲಿಗೆ ಅಲ್ಯುಮಿನಿಯಂ ಏಣಿ ಬಳಕೆ; ಕಾರ್ಮಿಕರಿಗೆ ವಿದ್ಯುತ್ ತಂತಿ ತಗಲುವ ಭೀತಿ

Update: 2024-03-26 06:16 GMT

ಮಡಿಕೇರಿ: ಕೊಡಗು ಜಿಲ್ಲಾದ್ಯಂತ ಕಾಫಿ ಕೊಯ್ಲು ಪೂರ್ಣಗೊಂಡು ಇದೀಗ ಕಾಳುಮೆಣಸು ಕೊಯ್ಲು ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಬೆಳೆಗಾರರು ಮತ್ತು ಕಾರ್ಮಿಕರು ಕೊಯ್ಲು ಕೆಲಸದಲ್ಲಿ ನಿರತರಾಗಿದ್ದಾರೆ.

ಆದರೆ, ಕೊಯ್ಲಿನ ಸಂದರ್ಭದಲ್ಲಿ ಅಲ್ಯುಮಿನಿಯಂ ಏಣಿಗಳನ್ನೇ ಹೆಚ್ಚಾಗಿ ಬಳಸುತ್ತಿರುವುದರಿಂದ ವಿದ್ಯುತ್ ತಂತಿಗೆ ಏಣಿ ಸ್ಪರ್ಶಿಸಿ ಕಳೆದ ಆರು ವರ್ಷಗಳಲ್ಲಿ ೩೫ಕ್ಕೂ ಹೆಚ್ಚು ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಆದರೂ, ಜಿಲ್ಲೆಯಲ್ಲಿ ಕರಿಮೆಣಸು ಕೊಯ್ಲು ಮಾಡಲು ಅಲ್ಯುಮಿನಿಯಂ ಏಣಿಗಳನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ.

ಕೊಡಗಿನ ಬಹುತೇಕ ತೋಟಗಳಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಮರಗಳ ಪಕ್ಕದಲ್ಲೇ ಕಾಣಸಿಗುತ್ತವೆ. ಕರಿಮೆಣಸು ಕೊಯ್ಲು ಮಾಡುವಾಗ ಎಷ್ಟೇ ಎಚ್ಚರ ವಹಿಸಿದ್ದರೂ ಆಕಸ್ಮಿಕವಾಗಿ ಅಲ್ಯುಮಿನಿಯಂ ಏಣಿ ವಿದ್ಯುತ್ ತಂತಿಗೆ ತಗಲಿ ಕಾರ್ಮಿಕರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಕರಿಮೆಣಸು ಕೊಯ್ಲಿಗೆ ಮಾತ್ರವಲ್ಲದೆ ಇತ್ತೀಚಿನ ವರ್ಷಗಳಲ್ಲಿ ಮರ ಕಪಾತ್ ಸಂದರ್ಭದಲ್ಲೂ ಅಲ್ಯುಮಿನಿಯಂ ಏಣಿಯನ್ನು ತೋಟಗಳಲ್ಲಿ ಬಳಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ಕಾಣೆಯಾದ ಬಿದಿರಿನ ಏಣಿಗಳು: ಕೆಲ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಕರಿಮೆಣಸು ಕೊಯ್ಲು ಮಾಡಲು ಬಿದಿರಿನ ಏಣಿಗಳನ್ನು ಬಳಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಬಿದಿರು ಕಾಡ್ಗಿಚ್ಚು, ಕಟ್ಟೆ ರೋಗದಿಂದ ನಾಶಗೊಂಡು ಬೆರಳೆಣಿಕೆಯಷ್ಟು ತೋಟಗಳಲ್ಲಿ ಮಾತ್ರ ಬಿದಿರಿನ ಏಣಿಗಳು ಕಾಣ ಸಿಗುತ್ತಿವೆ. ಹೊಸ ಆವಿಷ್ಕಾರ ಹಾಗೂ ಆಧುನಿಕತೆಯ ಪರಿಣಾಮ ಅಲ್ಯುಮಿನಿಯಂ ಹಾಗೂ ಕಬ್ಬಿಣದ ಏಣಿಗಳನ್ನು ಬಳಸಲಾಗುತ್ತಿವೆ. ಇದರ ಪರಿಣಾಮ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕರು ಜೀವ ಕಳೆದುಕೊಳ್ಳುತ್ತಿದ್ದಾರೆ.

ಅಲ್ಯುಮಿನಿಯಂ ಏಣಿ ಬಳಸುವುದಾದರೆ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿದ್ಯುತ್ ತಂತಿ ಹಾದು ಹೋದ ಜಾಗದಲ್ಲಿ ಬಳಸಲೇಬಾರದು. ಏಣಿ ಉಪಯೋಗಿಸುವ ಸಂದರ್ಭದಲ್ಲಿ ಸಂಬಂಧಿಸಿದ ತೋಟಗಳ ಮಾಲಕರು ಜೊತೆಯಲ್ಲಿದ್ದು, ಮಾರ್ಗದರ್ಶನ ಮಾಡುವುದು ಅನಿವಾರ್ಯವಾಗಿದೆ. ಅಲ್ಲದೆ, ಕಾರ್ಮಿಕರು ಎಚ್ಚರ ವಹಿಸಬೇಕಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೆಚ್ಚು ಸಂಬಳ ಕೊಡುತ್ತಾರೆ ಎಂದು ಹೇಳಿ ನಾವು ಕಾಳುಮೆಣಸು ಕೊಯ್ಲು ಕೆಲಸಕ್ಕೆ ಹೋಗುತ್ತೇವೆ. ತೋಟಗಳಲ್ಲಿ ವಿದ್ಯುತ್ ಲೈನ್‌ಗಳಿದ್ದು, ಅಲ್ಯುಮಿನಿಯಂ ಏಣಿಯನ್ನು ಬಳಸುವಾಗ ಭಯ ಆಗುತ್ತದೆ. ರಸ್ತೆ ಬದಿಗಳಲ್ಲಿ ಕೊಯ್ಲು ಮಾಡುವಾಗ ಅತೀ ಎಚ್ಚರಿಕೆಯಿಂದ ಇರುತ್ತೇವೆ. ಈ ಹಿಂದೆ ಬಿದಿರಿನ ಏಣಿಗಳನ್ನು ಬಳಸಿ ನಾವು ಕಾಳುಮೆಣಸು ಕೊಯ್ಲು ಮಾಡುತ್ತಿದ್ದೆವು. ಆದರೆ, ಕಳೆದ ಹತ್ತು ವರ್ಷಗಳಿಂದ ತೋಟಗಳಲ್ಲಿ ಬಿದಿರಿನ ಏಣಿಗಳೇ ಇಲ್ಲದಂತಾಗಿದೆ.

-ಚೆಟ್ಟಳ್ಳಿ, ಕಾಳುಮೆಣಸು ಕೊಯ್ಲು ಮಾಡುವ ಕಾರ್ಮಿಕ

ಅಲ್ಯುಮಿನಿಯಂ ಏಣಿ ಇತ್ತೀಚಿನ ವರ್ಷಗಳಲ್ಲಿ ಎಲ್ಲರೂ ಬಳಸುತ್ತಿರುವುದು ಸಾಮಾನ್ಯವಾಗಿವೆ. ಅದರಲ್ಲೂ ಕೆಲವು ವರ್ಷಗಳಲ್ಲಿ ಇದರ ಬಳಕೆಯಿಂದ ವಿದ್ಯುತ್ ಸ್ಪರ್ಶಗೊಂಡು ಸಾವು-ನೋವು ಸಂಭವಿಸುತ್ತಿರುವುದು ಖೇದಕರ ವಿಷಯ. ಬಿದಿರಿನ ಏಣಿ ಮೊದಲಿನ ತರ ಸಿಗುತ್ತಿಲ್ಲ. ಕಾರ್ಮಿಕರು ಅಲ್ಯುಮಿನಿಯಂ ಏಣಿಯನ್ನೇ ಹೆಚ್ಚು ಅವಲಂಬಿಸಿದ್ದಾರೆ.

-ಐತಿಚಂಡ ಪ್ರಕಾಶ್, ಕರಡ ಗ್ರಾಮದ ಬೆಳೆಗಾರ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎಂ.ಇಸ್ಮಾಯಿಲ್ ಕಂಡಕರೆ

contributor

Similar News