ಗಾಂಧಿ ಸಿನೆಮಾ ಬರುವ ಮೊದಲು ಗಾಂಧೀಜಿಯ ಬಗ್ಗೆ ಜಗತ್ತಿಗೆ ತಿಳಿದೇ ಇರಲಿಲ್ಲ ಎನ್ನುವ ಮೂಲಕ ಮೋದಿ ಏನನ್ನು ಹೇಳಬಯಸಿದ್ದಾರೆ?
ಅಗ್ನಿವೀರ್ ಬಗ್ಗೆ ಮೋದಿ ಮಾತಾಡುವುದಿಲ್ಲ, ನಿರುದ್ಯೋಗ, ಬೆಲೆಯೇರಿಕೆ ಬಗ್ಗೆ ಮೋದಿ ಮಾತಾಡುವುದಿಲ್ಲ, ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಮೋದಿ ಮಾತಾಡುವುದಿಲ್ಲ. ಆದರೆ ಮಂಗಳಸೂತ್ರ, ಮುಸ್ಲಿಮ್, ಮಟನ್, ಮುಜ್ರಾ, ಮಚಲಿ, ಮಂದಿರ ಎಂದು ಮಾತಾಡುವ ಮೂಲಕ ವಿಪಕ್ಷಗಳು ಎತ್ತುವ ಗಂಭೀರ ವಿಚಾರಗಳನ್ನೆಲ್ಲ ಮರೆಸಿಬಿಡುವ ರೀತಿಯಲ್ಲಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುತ್ತಾರೆ. ಈಗ ಗಾಂಧೀಜಿ ಜಗತ್ತಿಗೆ ಗೊತ್ತೇ ಇರಲಿಲ್ಲ ಎಂಬ ಮಾತು ಬಂದಿದೆ. ಗಾಂಧೀಜಿಯ ಬಗ್ಗೆ ಜಗತ್ತಿಗೆ ತಿಳಿದೇ ಇರಲಿಲ್ಲ ಎನ್ನುವ ಮೂಲಕ ಮೋದಿ ಏನನ್ನು ಹೇಳಬಯಸಿದ್ದಾರೆ?
ಮೋದಿಯವರು ಪ್ರಧಾನಿಯಾಗುವ ಮೊದಲು ಭಾರತ ಜಾಗತಿಕವಾಗಿ ಯಾರಿಗೂ ಗೊತ್ತೇ ಇರಲಿಲ್ಲ, ಮೋದಿ ಬಂದ ನಂತರವೇ ಭಾರತಕ್ಕೆ ಬೇರೆ ದೇಶಗಳಲ್ಲಿ ಗೌರವ ಸಿಕ್ಕಿದ್ದು ಎಂದು ಮೋದಿ ಭಕ್ತರು ಹಸಿ ಹಸಿ ಸುಳ್ಳು ಹೇಳುತ್ತಲೇ ಬಂದಿದ್ದಾರೆ, ಈಗಲೂ ಹೇಳುತ್ತಲೇ ಇದ್ದಾರೆ. ಈಗ ಅದಕ್ಕೆ ಇನ್ನೊಂದು ಸೇರ್ಪಡೆ ಆಗಿದೆ.
ಇತ್ತೀಚೆಗೆ ಬಾಯಿ ಬಿಟ್ಟರೆ ಏನಾದರೂ ಒಂದು ಅಸಂಬದ್ಧ ಮಾತನಾಡುವ ಮೋದಿ ಈಗ ಮತ್ತೂ ಒಂದು ವಿಚಿತ್ರ ಹೇಳಿಕೆ ಕೊಟ್ಟಿದ್ದಾರೆ.
ಏನೆಂದರೆ, ಗಾಂಧಿ ಸಿನೆಮಾ ಬರುವ ಮೊದಲು ಯಾರಿಗೂ ಗಾಂಧೀಜಿಯ ಪರಿಚಯವೇ ಇರಲಿಲ್ಲವಂತೆ.
ಈ ಮಾತಿಗೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ.
ಒಬ್ಬ ಪ್ರಧಾನಿ ಇಷ್ಟರ ಮಟ್ಟಿಗೆ ಹಾಸ್ಯಾಸ್ಪದವಾಗಿ ನಡೆದುಕೊಳ್ಳಬಾರದಾಗಿತ್ತು.
ರಿಚರ್ಡ್ ಅಟೆನ್ಬರೋ ನಿರ್ದೇಶನದ ಗಾಂಧಿ ಸಿನೆಮಾ ಬಂದದ್ದು 1982ರಲ್ಲಿ. ಆದರೆ ಅವರು 1962ರಲ್ಲೇ ಆ ಸಿನೆಮಾ ಮಾಡಲು ನಿರ್ಧರಿಸಿದ್ದರು.
ಗಾಂಧಿ ಹತ್ಯೆಯಾದ ಎರಡು ವರ್ಷಗಳ ನಂತರ ಅಂದರೆ 1950ರಲ್ಲೇ ಲೂಯಿ ಫಿಷರ್ ಗಾಂಧೀಜಿಯ ಜೀವನ ಚರಿತ್ರೆ ಬರೆಯುತ್ತಾರೆ. ಆ ಪುಸ್ತಕವನ್ನು 1962ರಲ್ಲಿ ಓದಿದ ಬಳಿಕ ರಿಚರ್ಡ್ ಅಟೆನ್ಬರೋಗೆ ಗಾಂಧೀಜಿ ಕುರಿತು ಸಿನೆಮಾ ಮಾಡಲೇಬೇಕೆಂಬ ಮನಸ್ಸಾಯಿತು.
ಅದಕ್ಕಾಗಿ ಅವರು ಭಾರತಕ್ಕೆ ಬಂದರು, ನೆಹರೂ ಅವರನ್ನು ಕಂಡರು. ಆಗ ನೆಹರೂ ಒಂದು ಮಾತನ್ನು ಅಟೆನ್ಬರೋಗೆ ಹೇಳಿದ್ದರು.
ಗಾಂಧಿ ಕೂಡ ದೌರ್ಬಲ್ಯಗಳನ್ನು ಹೊಂದಿದ್ದರು. ಅವರ ಹಿರಿಮೆಗಳ ಜೊತೆ ಅವನ್ನೂ ತೋರಿಸಿ. ಬರೀ ಮಹಾತ್ಮನ ಚೌಕಟ್ಟಿನಲ್ಲಿ ಅವರನ್ನು ಕಟ್ಟಿ ಹಾಕಬೇಡಿ. ಗಾಂಧೀಜಿಯ ಹಿರಿಮೆಯನ್ನು ತಿಳಿಯಲು ಅವೇ ಮುಖ್ಯ ಎಂದಿದ್ದರು ನೆಹರೂ.
1982ರಲ್ಲಿ ಆ ಸಿನೆಮಾ ಬಿಡುಗಡೆಯಾಯಿತು. ಆಗ ‘ನ್ಯೂಯಾರ್ಕ್ ಟೈಮ್ಸ್’ನಲ್ಲಿ ಬಂದಿರುವ ಲೇಖನದ ಶೀರ್ಷಿಕೆ ‘‘A 20 year struggle brings gandhi on screen’’ ಎಂದು. ಅಂದರೆ ಈ ಸಿನೆಮಾಕ್ಕಾಗಿ ಇಪ್ಪತ್ತು ವರ್ಷ ಕೆಲಸ ಮಾಡಿದ್ದರು.
ಆ ಸಿನೆಮಾವನ್ನು ಅಟೆನ್ಬರೋ ಹಲವರಿಗೆ ಸಮರ್ಪಿಸಿದ್ದರು. ಅಂತಹ ವ್ಯಕ್ತಿಗಳಲ್ಲಿ ನೆಹರೂ ಕೂಡ ಒಬ್ಬರಾಗಿದ್ದರು. ನೆಹರೂ ಅವರ ಪ್ರೇರಣೆ ಮತ್ತು ಭರವಸೆಯಿಲ್ಲದೆ ಈ ಸಿನೆಮಾ ಮಾಡುವುದು ಸಾಧ್ಯವಿರಲಿಲ್ಲ ಎಂದು ಸಿನೆಮಾದ ಸಮರ್ಪಣೆಯಲ್ಲಿ ಅಟೆನ್ಬರೋ ಹೇಳಿದ್ದರು.
ಇನ್ನೊಂದು ವಿಷಯವೇನೆಂದರೆ, ಅಟೆನ್ಬರೋ ಸಿನೆಮಾಕ್ಕೆ ಮೊದಲು 1968ರಲ್ಲಿ ಭಾರತ ಸರಕಾರದ ಫಿಲ್ಮ್ ಡಿವಿಜನ್ ಗಾಂಧೀಜಿಯವರ ಬಗ್ಗೆ 5 ಗಂಟೆಗಳ ಸಾಕ್ಷ್ಯಚಿತ್ರ ಮಾಡಿತ್ತು.
ಅಲ್ಲದೆ ಸ್ವತಃ ಭಾರತ ಸರಕಾರ ಕೂಡ ಅಟೆನ್ಬರೋ ಸಿನೆಮಾಕ್ಕೆ ನೆರವಾಗಿತ್ತು ಮತ್ತು ಆ ಮೂಲಕ ಅದರ ನಿರ್ಮಾಣದಲ್ಲಿ ಭಾರತದ ಪಾತ್ರವೂ ಇತ್ತು.
ಆದರೆ ಮೋದಿಯವರ ಪ್ರಕಾರ ಆ ಸಿನೆಮಾಕ್ಕೆ ಮೊದಲು ಯಾರಿಗೂ ಗಾಂಧೀಜಿ ಗೊತ್ತೇ ಇರಲಿಲ್ಲ.
ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಅಂತಹ ಯಾರಿಗೂ ಗಾಂಧಿ ಕಡಿಮೆಯವರಾಗಿರಲಿಲ್ಲ ಎಂಬುದು ಬಹುಶಃ ಮೋದಿಯವರಿಗೆ ಗೊತ್ತಿಲ್ಲ.
ಅಟ್ಲಾಂಟಾದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಕುರಿತ ಸಂಗ್ರಹಾಲಯವಿದೆ. ಅದರ ಪ್ರಾಂಗಣದಲ್ಲಿ ಕೂಡ ನಮ್ಮ ಗಾಂಧೀಜಿಯ ಪ್ರತಿಮೆ ನಿಲ್ಲಿಸಲಾಗಿದೆ.
ಗಾಂಧಿಯ ಬದುಕು ಮತ್ತವರ ಅಹಿಂಸಾ ತತ್ವ ತನ್ನ ಮೇಲೆ ಬಹುದೊಡ್ಡ ಪ್ರಭಾವ ಬೀರಿದೆ ಎಂದು ಮಾರ್ಟಿನ್ ಲೂಥರ್ ಕಿಂಗ್ ಅದೆಷ್ಟೋ ಬಾರಿ ತನ್ನ ಭಾಷಣಗಳಲ್ಲಿ ಹೇಳಿರುವುದು ದಾಖಲಾಗಿದೆ.
ಸ್ವತಃ ಮಾರ್ಟಿನ್ ಲೂಥರ್ ಕಿಂಗ್ ಅವರ ರಾಜಕೀಯ ನಿಲುವಿನಲ್ಲಿ ಗಾಂಧಿಯ ಛಾಪು ಇದ್ದುದನ್ನು ವಿದ್ವಾಂಸರು ಗಮನಿಸಿದ್ದಾರೆ.
ಇಂತಹ ಮಾರ್ಟಿನ್ ಲೂಥರ್ ಕಿಂಗ್ ಎಲ್ಲರಿಗೂ ಗೊತ್ತು. ಆದರೆ ಅವರ ಮೇಲೆ ಪ್ರಭಾವ ಬೀರಿದ್ದ ಗಾಂಧೀಜಿ ಮಾತ್ರ ಮೋದಿಯವರ ಪ್ರಕಾರ ಯಾರಿಗೂ ಗೊತ್ತಿರಲಿಲ್ಲ.
ನೆಲ್ಸನ್ ಮಂಡೇಲಾ ಅವರನ್ನು ‘ದಕ್ಷಿಣ ಆಫ್ರಿಕಾದ ಗಾಂಧಿ’ ಎಂದೇ ಕರೆಯಲಾಗುತ್ತದೆ. ಆದರೆ ಅದಕ್ಕೆ ಸ್ಫೂರ್ತಿಯಾಗಿದ್ದ ಗಾಂಧೀಜಿ ಮಾತ್ರ ಮೋದಿಯವರ ಪ್ರಕಾರ ಜಗತ್ತಿನಲ್ಲಿ ಯಾರಿಗೂ ಗೊತ್ತಿರಲಿಲ್ಲ.
ಜೈಲಿನಿಂದ ಬಿಡುಗಡೆಯಾದ ಹೊತ್ತಲ್ಲಿ ಮಂಡೇಲಾ ತನ್ನ ಬದುಕಿನ ಪ್ರೇರಣೆಯೆಂದು ಗಾಂಧೀಜಿಯನ್ನು ನೆನಪಿಸಿಕೊಂಡಿದ್ದು ದಾಖಲಾಗಿದೆ.
ಗಾಂಧೀಜಿಯ ಸತ್ಯಾಗ್ರಹದ ಮಾರ್ಗವನ್ನು ಮಂಡೇಲಾ ನೆನಪಿಸಿಕೊಂಡಿದ್ದರು. ಗಾಂಧಿಯನ್ನು ಪವಿತ್ರ ಯೋಧ ಎಂದಿದ್ದರು.
ಅಂತಹ ಗಾಂಧೀಜಿ, ಮೋದಿಯವರ ಪ್ರಕಾರ ಜಗತ್ತಿನಲ್ಲಿ ಯಾರಿಗೂ ಗೊತ್ತೇ ಇರಲಿಲ್ಲ.
ಮೋದಿ ಏನೋ ಹೇಳಿದರೆಂದು ಚರಿತ್ರೆಯೇನೂ ಬದಲಾಗಲಾರದು, ಗಾಂಧಿಯ ಘನತೆಗೇನೂ ಧಕ್ಕೆಯಾಗಲಾರದು.ಆದರೆ ಅಂಥದೊಂದು ಮಾತು ಹೇಳುವವರಿಗೇ ನಾಚಿಕೆಯಾಗಬೇಕು.
ಕನಿಷ್ಠ ಅವರ ಎದುರಲ್ಲಿ ಕೂತ ಆ್ಯಂಕರ್‌ಗಳಾದರೂ ಮೋದಿಯವರಿಗೆ, ಗಾಂಧೀಜಿ ಬಗ್ಗೆ ಅದಕ್ಕೂ ಮೊದಲೇ ಬಹಳಷ್ಟು ಜನ ತಿಳಿದುಕೊಂಡಿದ್ದರು ಎಂಬ ಒಂದು ಮಾತು ಹೇಳಬಹುದಿತ್ತು. ಹೇಳಬೇಕಿತ್ತಲ್ಲವೇ?.
ಆದರೆ ಅವರು ಕೂತಿರುವುದು ದೇಶದ ಪ್ರಧಾನಿಯ ಸಂದರ್ಶನಕ್ಕಲ್ಲ, ಮೋದಿಯ ದರ್ಶನಕ್ಕೆ.
ಆ ದರ್ಶನ ಸಿಕ್ಕಿದ್ದು ಅವರ ಭಾಗ್ಯ, ಅವರ ವೃತ್ತಿ ಜೀವನ ಅದರಲ್ಲೇ ಸಾರ್ಥಕವಾಯಿತು ಎಂದು ಭಾವಿಸಿ ಎದ್ದು ಬಂದವರು ಅವರು.
ಇದೇ ಮೋದಿಯವರು 2018 ಸೆಪ್ಟಂಬರ್ 30ರ ಮನ್ ಕಿ ಬಾತ್‌ನಲ್ಲಿ ‘‘ಮಹಾತ್ಮಾ ಗಾಂಧಿಯವರ ವಿಚಾರಗಳಿಂದ ಇಡೀ ಜಗತ್ತೇ ಪ್ರಭಾವಿತವಾಗಿತ್ತು. ಮಾರ್ಟಿನ್ ಲೂಥರ್ ಕಿಂಗ್ ಆಗಲಿ, ನೆಲ್ಸನ್ ಮಂಡೇಲಾ ಆಗಲಿ ಅಂತಹ ಎಷ್ಟೋ ಮೇರುವ್ಯಕ್ತಿಗಳು ಗಾಂಧಿಯವರಿಂದ ಪ್ರೇರಣೆ ಪಡೆದಿದ್ದರು. ಜನರ ಸಮಾನತೆ ಮತ್ತು ಘನತೆಗಾಗಿ ಹೋರಾಡುವ ಶಕ್ತಿ ಅವರಿಗೆ ಗಾಂಧೀಜಿಯ ಮೂಲಕ ಬಂದಿತ್ತು ಎಂದಿದ್ದರು!.
1931ರಲ್ಲಿ ಗಾಂಧೀಜಿ ಮತ್ತು ಮಹಾನ್ ಕಲಾವಿದ ಚಾರ್ಲಿ ಚಾಪ್ಲಿನ್ ಮುಖಾಮುಖಿಯಾಗಿದ್ದರು.
ಚಾಪ್ಲಿನ್‌ನ ‘ದಿ ಗ್ರೇಟ್ ಡಿಕ್ಟೇಟರ್’ ಸಿನೆಮಾದ ಕಡೆಯಲ್ಲಿ ಒಂದು ಪಾತ್ರದ ಮೂಲಕ ಬರುವ ಮಾತುಗಳಲ್ಲಿ ಇರುವುದು ಗಾಂಧೀಜಿಯವರ ವಿಚಾರಧಾರೆಯೇ ಆಗಿದೆ.
ಆ ಸಿನೆಮಾ ಜರ್ಮನ್ ಸರ್ವಾಧಿಕಾರಿ ಹಿಟ್ಲರ್ ಕುರಿತ ವಿಡಂಬನೆಯಾಗಿತ್ತು. ಆ ಚಿತ್ರದಲ್ಲಿ ಹಿಟ್ಲರ್‌ನ ಹಿಂಸೆಯ ಕುರಿತ ಚಿತ್ರಣದ ಬಳಿಕ ಚಾಪ್ಲಿನ್ ಗಾಂಧೀಜಿಯ ವಿಚಾರಗಳನ್ನು ಹೇಳಿದ್ದರು.
ಆದರೆ ಮೋದಿಯವರ ಪ್ರಕಾರ ಮಾತ್ರ ಗಾಂಧೀಜಿ ಮೊನ್ನೆಮೊನ್ನೆಯವರೆಗೂ ಜಗತ್ತಿನಲ್ಲಿ ಯಾರಿಗೂ ಗೊತ್ತೇ ಇರಲಿಲ್ಲ.
ಅಗ್ನಿವೀರ್ ಬಗ್ಗೆ ಮೋದಿ ಮಾತಾಡುವುದಿಲ್ಲ, ನಿರುದ್ಯೋಗ, ಬೆಲೆಯೇರಿಕೆ ಬಗ್ಗೆ ಮೋದಿ ಮಾತಾಡುವುದಿಲ್ಲ, ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಮೋದಿ ಮಾತಾಡುವುದಿಲ್ಲ.
ಆದರೆ ಮಂಗಳಸೂತ್ರ, ಮುಸ್ಲಿಮ್, ಮಟನ್, ಮುಜ್ರಾ, ಮಚಲಿ, ಮಂದಿರ ಎಂದು ಮಾತಾಡುವ ಮೂಲಕ ವಿಪಕ್ಷಗಳು ಎತ್ತುವ ಗಂಭೀರ ವಿಚಾರಗಳನ್ನೆಲ್ಲ ಮರೆಸಿಬಿಡುವ ರೀತಿಯಲ್ಲಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುತ್ತಾರೆ. ಈಗ ಗಾಂಧೀಜಿ ಜಗತ್ತಿಗೆ ಗೊತ್ತೇ ಇರಲಿಲ್ಲ ಎಂಬ ಮಾತು ಬಂದಿದೆ. ಗಾಂಧೀಜಿಯ ಬಗ್ಗೆ ಜಗತ್ತಿಗೆ ತಿಳಿದೇ ಇರಲಿಲ್ಲ ಎನ್ನುವ ಮೂಲಕ ಮೋದಿ ಏನನ್ನು ಹೇಳಬಯಸಿದ್ದಾರೆ?
ದೇಶವಿದೇಶಗಳಲ್ಲೆಲ್ಲ ಗಾಂಧಿಯನ್ನು ಗೌರವಿಸಲಾಗುತ್ತದೆ. ನೂರಾರು ದೇಶಗಳಲ್ಲಿ ಗಾಂಧಿಯ ಪ್ರತಿಮೆಗಳಿವೆ.
ಪ್ರಧಾನಿ ಕಚೇರಿಯಲ್ಲಿಯೂ ಗಾಂಧೀಜಿ ಪ್ರತಿಮೆಯಿದೆ. ಆದರೆ ಮೋದಿಯ ಮಾತಿನಲ್ಲಿ, ನಡೆಯಲ್ಲಿ, ವಿಚಾರದಲ್ಲಿ ಗಾಂಧೀಜಿ ಎಷ್ಟರ ಮಟ್ಟಿಗಿದ್ದಾರೆ ಎನ್ನುವುದು ಆಮೇಲಿನ ಮಾತು.
ಯಾವ ನೋಟ್‌ಗಳನ್ನು ಮೋದಿ ಬ್ಯಾನ್ ಮಾಡಿ ಲಕ್ಷಾಂತರ ಜನರ ಸಂಕಷ್ಟಕ್ಕೆ ಕಾರಣರಾದರೋ ಆ ನೋಟುಗಳ ಮೇಲೆ ಕೂಡ ಗಾಂಧಿಯ ಚಿತ್ರವಿತ್ತಲ್ಲವೇ?
ಯಾವ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ 13 ವರ್ಷ ಮೋದಿ ಇದ್ದರೋ ಆ ರಾಜ್ಯದ ರಾಜಧಾನಿಗೂ ಗಾಂಧಿನಗರ ಎಂದೇ ಹೆಸರಿದೆಯಲ್ಲವೇ?
ದೇಶಾದ್ಯಂತ ಗಾಂಧಿ ಹೆಸರಿನಲ್ಲಿ ಸಾವಿರಾರು ಶಿಕ್ಷಣ ಸಂಸ್ಥೆಗಳಿವೆ, ಅಧ್ಯಯನ ಕೇಂದ್ರಗಳಿವೆ. ವೋಟಿಗಾಗಿ ಗಾಂಧಿ ಹೆಸರು ಬಳಸುವ ರಾಜಕಾರಣವೂ ಈ ದೇಶದಲ್ಲಿ ಬೃಹತ್ ಸ್ವರೂಪದ್ದೇ ಆಗಿದೆ.
ಈವರೆಗೆ ವೋಟಿಗಾಗಿ ಹಲವು ನಾಯಕರು ಗಾಂಧಿ ಹೆಸರು ಬಳಸಿದ್ದರೆ, ಈಗ ಮೋದಿ ಚುನಾವಣಾ ವಿಷಯಗಳನ್ನು ಅಡಗಿಸುವ ತಂತ್ರವಾಗಿ ಗಾಂಧಿ ಹೆಸರನ್ನು ಬಳಸಿದ್ದಾರೆ.
ಈಗ ಹೀಗೆ ಹೇಳಿರುವ ಮೋದಿ, ಮುಂದೆ ತನಗಿಂತ ಮೊದಲು ದೇಶದಲ್ಲಿದ್ದ ಪ್ರಧಾನ ಮಂತ್ರಿಗಳ ಬಗ್ಗೆ ಹೊರಗಿನ ಪ್ರಪಂಚಕ್ಕೆ ಗೊತ್ತೇ ಇರಲಿಲ್ಲ ಎಂದು ಹೇಳಿದರೂ ಅಚ್ಚರಿಪಡಬೇಕಾಗಿಲ್ಲ ಅಲ್ಲವೇ?