ಅತಿ ಶ್ರೀಮಂತ ಪಕ್ಷದ ದುಂದುವೆಚ್ಚಕ್ಕೆ ಹಣದ ಮೂಲ ಯಾವುದು?
ಇಡೀ ದೇಶದ ಜನಸಾಮಾನ್ಯರು ಕಡುಕಷ್ಟದಲ್ಲಿರುವಾಗ, ದೇಶದ ಆರ್ಥಿಕತೆಯೇ ಕುಸಿದಿರುವಾಗ, ಬಿಜೆಪಿ ಮಾತ್ರ ಶ್ರೀಮಂತವಾಗುತ್ತಲೇ ಹೋಗಿದೆ. ಅದು ಘೋಷಿಸಿಕೊಂಡಿರುವುದಕ್ಕೂ, ದೇಶದೆಲ್ಲೆಡೆ ಅದು ಅತ್ಯಾಧುನಿಕ ಕಚೇರಿ ಕಟ್ಟಡಗಳನ್ನು ನಿರ್ಮಿಸಲು ಮತ್ತು ಚುನಾವಣೆಗಾಗಿ ಖರ್ಚು ಮಾಡುತ್ತಿರುವ ಹಣಕ್ಕೂ ಭಾರೀ ಅಂತರವಿದೆ. ಇಂತಹದೊಂದು ಸತ್ಯವನ್ನು ‘ದಿ ವೈರ್’ ವರದಿ ಬಹಿರಂಗಪಡಿಸಿದೆ. ಎಂ. ರಾಜಶೇಖರ್ ಅವರ ಆ ವರದಿ ಬಿಚ್ಚಿಡುತ್ತಿರುವ ಸತ್ಯಗಳು ಎಲ್ಲೂ ಚರ್ಚೆಯಾಗುತ್ತಲೇ ಇಲ್ಲ. ಯಾವ ಚಾನಲ್‌ಗಳೂ, ಪತ್ರಿಕೆಗಳೂ ಈ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಪ್ರಧಾನಿಯ ಡಝನ್ ಗಟ್ಟಲೆ ಇಂಟರ್‌ವ್ಯೆ ಆಗುತ್ತಿದ್ದರೂ ಅಲ್ಲೂ ಈ ಪ್ರಶ್ನೆ ಬರಲೇ ಇಲ್ಲ.
2014ರಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಮೋದಿ, ಎಲ್ಲಾ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಪಕ್ಷದ ಕಚೇರಿಗಳನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸುವ ಘೋಷಣೆ ಮಾಡಿದ್ದರು.
ಅದರ ಮಾರನೇ ವರ್ಷವೇ ದೇಶದ 694 ಜಿಲ್ಲೆಗಳ ಪೈಕಿ 635 ಜಿಲ್ಲೆಗಳಲ್ಲಿ ಹೊಸ ಕಚೇರಿಗಳ ನಿರ್ಮಾಣಕ್ಕೆ ಬಿಜೆಪಿ ನಿರ್ಧರಿಸಿತು.
2023ರ ಮಾರ್ಚ್ ಹೊತ್ತಿಗೆ ಈ ಗುರಿಯನ್ನು ವಿಸ್ತರಿಸಿ, 887 ಕಚೇರಿಗಳನ್ನು ಕಟ್ಟಲು ಉದ್ದೇಶಿಸಲಾಯಿತು.
ಸ್ವಲ್ಪ ಊಹಿಸಿ ನೋಡಿ... ದೇಶಾದ್ಯಂತ 887 ಅತ್ಯಾಧುನಿಕ ಕಟ್ಟಡಗಳು!
ಆಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರಕಟಿಸಿದ್ದ ಪ್ರಕಾರ, 290 ಜಿಲ್ಲಾ ಕಚೇರಿಗಳ ಕೆಲಸ ಪೂರ್ಣಗೊಂಡು, ಉಳಿದವುಗಳ ಕಾಮಗಾರಿ ಮುಂದುವರಿದಿತ್ತು.
ಬಿಜೆಪಿಯನ್ನು ಜಗತ್ತಿನಲ್ಲೇ ಅತಿ ಶ್ರೀಮಂತ ಪಕ್ಷ ಎನ್ನಲಾಗುತ್ತದೆ. ಅದಕ್ಕೆ ಜಗತ್ತಿನ ಇನ್ನಾವುದೇ ರಾಜಕೀಯ ಪಕ್ಷದ ಕಚೇರಿಗಿಂತಲೂ ತನ್ನ ಕಚೇರಿ ದೊಡ್ಡದು ಎಂದು ಹೇಳಿಕೊಳ್ಳುವುದಕ್ಕೂ ಬಹಳ ಆಸೆ.
2018ರಲ್ಲಿ ಮಧ್ಯ ದಿಲ್ಲಿಯ ದೀನ್ ದಯಾಳ್ ಉಪಾಧ್ಯಾಯ್ ಮಾರ್ಗದಲ್ಲಿ 1 ಲಕ್ಷ 70,000 ಚದರಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಬಿಜೆಪಿಯ ಹೈಟೆಕ್ ಹಾಗೂ ಅಷ್ಟೇ ವಿಲಾಸಿ ಪ್ರಧಾನ ಕಚೇರಿ ಕಟ್ಟಡ ಉದ್ಘಾಟನೆ ನಡೆಯಿತು.
ಆಗ ಅಮಿತ್ ಶಾ ಅವರೇ ಹಾಗೆ ಹೇಳಿಕೊಂಡಿದ್ದರು.
ಬಿಜೆಪಿಯ ಈ ಹಿಂದಿನ ಪ್ರಧಾನ ಕಚೇರಿ ಅಶೋಕ ರಸ್ತೆಯಲ್ಲಿದ್ದು, ಅದನ್ನು ಈಗಲೂ ತನ್ನ ಐಟಿ ಸೆಲ್‌ನ ಪ್ರಧಾನ ಕಚೇರಿ ಮತ್ತು ಚುನಾವಣಾ ವಾರ್ ರೂಂ ಆಗಿ ಬಳಸುತ್ತಿದೆ.
ಬಿಜೆಪಿ ತನ್ನ ಹೈಟೆಕ್ ಕಚೇರಿಗಳ ನಿರ್ಮಾಣ ವಿಚಾರದಲ್ಲಿ ತೋರಿಸುತ್ತಿರುವ ಈ ಉತ್ಸಾಹ ದೇಶವೇ ಸಂಕಷ್ಟದಲ್ಲಿರುವ ಈ ಹೊತ್ತಿನಲ್ಲಿ ಒಂದು ಬಗೆಯ ವಿರೋಧಾಭಾಸವಾಗಿ ಕಾಣಿಸದೇ ಇರುವುದಿಲ್ಲ. ಆದರೆ, ಬಿಜೆಪಿಗೇನೂ ಅಂಥ ಚಿಂತೆ ಇದ್ದಂತಿಲ್ಲ.
ದೇಶದ ಸಾಮಾನ್ಯ ಜನರೆಲ್ಲ ಆರ್ಥಿಕವಾಗಿ ಹೈರಾಣಾಗಿರುವಾಗ ಬಿಜೆಪಿ ಮಾತ್ರ ಶ್ರೀಮಂತವಾಗುತ್ತಿದೆ.
ಚುನಾವಣೆಗಳಿಗಾಗಿ ವಿಪಕ್ಷಗಳನ್ನು ಮೀರಿಸುವಂತೆ ವೆಚ್ಚ ಮಾಡುತ್ತಿದೆ ಮಾತ್ರವಲ್ಲ, ಕೋಟ್ಯಂತರ ಮೌಲ್ಯದ ರಿಯಲ್ ಎಸ್ಟೇಟ್ ಆಸ್ತಿಗಳನ್ನೂ ಮಾಡಿಕೊಂಡಿದೆ.
ಮೊದಲು ಬಿಜೆಪಿಯ ಘೋಷಿತ ವಾರ್ಷಿಕ ಆದಾಯ ಎಷ್ಟು ಎಂಬುದನ್ನು ನೋಡೋಣ.
ಬಳಿಕ, ಬಚ್ಚಿಡಲಾಗಿರುವ ಸತ್ಯಗಳ ಕಡೆ ಗಮನ ಹರಿಸೋಣ.
ಬಿಜೆಪಿಯ ವಾರ್ಷಿಕ ಘೋಷಿತ ಆದಾಯ
2014-15ರಲ್ಲಿ 970 ಕೋಟಿ ರೂ.
2015-16ರಲ್ಲಿ 570 ಕೋಟಿ ರೂ.
2016-17ರಲ್ಲಿ 1034 ಕೋಟಿ ರೂ.
2017-18ರಲ್ಲಿ 1027 ಕೋಟಿ ರೂ.
2018-19ರಲ್ಲಿ 2410 ಕೋಟಿ ರೂ.
2019-20ರಲ್ಲಿ 3623 ಕೋಟಿ ರೂ.
2020-21ರಲ್ಲಿ 752 ಕೋಟಿ ರೂ.
2021-22ರಲ್ಲಿ 1917 ಕೋಟಿ ರೂ.
2022-23ರಲ್ಲಿ 2360 ಕೋಟಿ ರೂ.
ಅಂದರೆ, 2014ರಿಂದ 2023ರವರೆಗೆ ಅದರ ಒಟ್ಟು ಘೋಷಿತ ಆದಾಯ 14,663 ಕೋಟಿ ರೂ.
ಆದರೆ, ಇದೆಷ್ಟು ನಿಜ? ಇಲ್ಲಿ ಏಕೆ ಒಂದು ಪ್ರಶ್ನೆ ಮುನ್ನೆಲೆಗೆ ಬಾರದೇ ಉಳಿದಿದೆ?
ಯಾಕೆಂದರೆ, ಬಿಜೆಪಿ ದೊಡ್ಡ ಪ್ರಮಾಣದಲ್ಲಿ ವೆಚ್ಚ ಮಾಡುತ್ತಿರುವುದು ಅದರ ಕಟ್ಟಡಗಳಿಗಾಗಿ.
2019ರ ಮತ್ತು ಈಗಿನ ಚುನಾವಣೆಗಳಲ್ಲಿ ಅದರ ಖರ್ಚು ವಿಪಕ್ಷಗಳನ್ನು ಮೀರಿಸುತ್ತಿದೆ.
ಬೇರೆ ಪಕ್ಷಗಳನ್ನು ಹಣಿಯುವುದಕ್ಕೂ, ಅಧಿಕಾರ ಕಸಿಯು ವುದಕ್ಕೂ ಅದು ಭಾರೀ ಪ್ರಮಾಣದಲ್ಲಿ ಖರ್ಚು ಮಾಡುತ್ತಿದೆ.
ವಿಪಕ್ಷಗಳ ನಾಯಕರು ಮತ್ತು ತನ್ನ ವಿರೋಧಿಗಳೆಂದು ಅದು ಯಾರ ಬಗ್ಗೆ ಅನುಮಾನ ಹೊಂದಿದೆಯೋ ಅವರ ವಿರುದ್ಧ ಕಣ್ಣಿಡಲು ಪೆಗಾಸಸ್ ಮತ್ತಿತರ ಹೈಟೆಕ್ ಸ್ಪೈವೇರ್ ಗಳನ್ನು ಅದು ತನ್ನ ಅಧಿಕಾರದ ಮೂಲಕ ಬಳಸಿರುವ ಆರೋಪಗಳಿವೆ.
ಹಾಗಾದರೆ ಬಿಜೆಪಿ ಬಳಿ ಒಟ್ಟು ಎಷ್ಟು ಹಣವಿದೆ?
ಬಿಜೆಪಿಯ ಬಗ್ಗೆ ಬರೆದವರಾಗಲೀ, ರಾಜಕೀಯ ವಿಶ್ಲೇಷಕರಾಗಲೀ, ಅದರ ಗೆಲುವಿನ ಬಗ್ಗೆ ಬರೆಯುವವರಾಗಲೀ, ಅದು ಬೇರೆ ಸರಕಾರ ಉರುಳಿಸಿ ತಾನು ಅಧಿಕಾರ ಹಿಡಿಯುವುದರ ಬಗ್ಗೆ ಹೇಳುವವರಾಗಲೀ ಅದರ ಬಳಿ ಎಷ್ಟು ದುಡ್ಡಿದೆ ಎಂಬ ಪ್ರಶ್ನೆಯನ್ನು ಕೇಳಿದ್ದು ಅಥವಾ ಹೇಳಿದ್ದು ತೀರಾ ಕಡಿಮೆ. ಮತ್ತಿದು ಉದ್ದೇಶಪೂರ್ವಕವಾಗಿಯೇ ಮರೆಮಾಚಲಾಗಿರುವ ವಿಚಾರ ಎಂಬುದಂತೂ ಸ್ಪಷ್ಟ.
ಅಧಿಕಾರಕ್ಕೆ ಬಂದ ಈ 10 ವರ್ಷಗಳಲ್ಲಿ ಅದರ ಜೇಬು ಎಷ್ಟೊಂದು ದೊಡ್ಡದಾಗಿದೆ ಎಂಬುದು ದೇಶದ ಜನತೆಗೆ ಗೊತ್ತಾಗದ ಹಾಗಾಗಿದೆ.
ಆದರೂ, ಪಕ್ಷ ತನ್ನ ಕಚೇರಿಗಳ ನಿರ್ಮಾಣಕ್ಕಾಗಿ ಮತ್ತು ಚುನಾವಣಾ ಪ್ರಚಾರಕ್ಕಾಗಿ ಮಾಡುವ ಎರಡು ದೊಡ್ಡ ಪ್ರಮಾಣದ ವೆಚ್ಚಗಳ ಕಡೆ ನೋಡಿಕೊಂಡರೆ,
ಅದು ಘೋಷಿಸಿಕೊಂಡ 14,663 ಕೋಟಿ ರೂ. ಆದಾಯದಾಚೆಗೂ ಬೇರೆಯದೇ ಸತ್ಯವೊಂದಿದೆ ಎಂಬುದು ಕಾಣಿಸುತ್ತದೆ.
ಮೊದಲಿಗೆ, ಬಿಜೆಪಿ ತನ್ನ ಹೊಸ ಕಟ್ಟಡಗಳಿಗೆ ಮಾಡುತ್ತಿರುವ ಖರ್ಚು ಎಷ್ಟು?
2014ರಿಂದ 2023ರ ಅವಧಿಯಲ್ಲಿನ ಅದರ ವಾರ್ಷಿಕ ವರದಿಗಳ ಪ್ರಕಾರ, ಭೂಮಿ ಮತ್ತು ಕಟ್ಟಡಗಳಿಗಾಗಿ ಅದು ಮಾಡಿರುವ ಖರ್ಚು 1,124 ಕೋಟಿ ರೂ.
2014-15ರಲ್ಲಿ 38.4 ಕೋಟಿ ರೂ.
2015-16ರಲ್ಲಿ 28 ಕೋಟಿ ರೂ.
2016-17ರಲ್ಲಿ 87 ಕೋಟಿ ರೂ.
2017-18ರಲ್ಲಿ 154 ಕೋಟಿ ರೂ.
2018-19ರಲ್ಲಿ 153 ಕೋಟಿ ರೂ.
2019-20ರಲ್ಲಿ 131 ಕೋಟಿ ರೂ.
2020-21ರಲ್ಲಿ 265 ಕೋಟಿ ರೂ.
2021-22ರಲ್ಲಿ 81 ಕೋಟಿ ರೂ.
2022-23ರಲ್ಲಿ 187 ಕೋಟಿ ರೂ.
2016ರಲ್ಲಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದ್ದ ಪ್ರಕಾರ,
ಒಡಿಶಾದಲ್ಲಿನ ಪ್ರತೀ ಜಿಲ್ಲಾ ಕಚೇರಿಗಾಗಿ ಬಿಜೆಪಿ ಮಾಡಿದ್ದ ವೆಚ್ಚ 2 ಕೋಟಿಯಿಂದ 3 ಕೋಟಿವರೆಗೂ ಇತ್ತು. ಅಂದರೆ, 36 ಕಚೇರಿಗಳಿಗಾಗಿ ಒಟ್ಟು ರೂ. 80 ಕೋಟಿ. 8 ವರ್ಷಗಳಷ್ಟು ಹಿಂದಿನ ಕಥೆ ಅದು.
ಭೂಮಿಯ ಬೆಲೆ ಮತ್ತು ನಿರ್ಮಾಣ ವೆಚ್ಚದಲ್ಲಿನ ಈಗಿನ ಜಂಪ್ ಗಮನಿಸಿದರೆ, ಆ 80 ಕೋಟಿ ರೂ. ಈಗೆಷ್ಟಾಗಿರಬಹುದು ಎಂಬ ಒಂದು ಅಂದಾಜು ಮಾಡಿಕೊಳ್ಳಬಹುದು.
ಉದಾಹರಣೆಗೆ,
ತಮಿಳುನಾಡಿನ ಕೃಷ್ಣಗಿರಿ ಕಚೇರಿ ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಹೊಸೂರಿನ ಕೈಗಾರಿಕಾ ಪ್ರದೇಶದಿಂದ ಕೇವಲ ಮೂವತ್ತು ನಿಮಿಷಗಳ ದೂರದಲ್ಲಿದೆ.
ಅಲ್ಲಿ ಜಮೀನಿನ ದರ ಪ್ರತೀ ಚದರ ಅಡಿಗೆ 5,000 ರೂ. ಮತ್ತು ಪ್ಲ್ಯಾಟ್‌ಗೆ ಸುಮಾರು 5 ಕೋಟಿ ರೂ. ಇದೆ ಎನ್ನಲಾಗುತ್ತದೆ.
ಮೂಲ ನಿರ್ಮಾಣಕ್ಕೆ ಪ್ರತೀ ಚದರ ಅಡಿಗೆ 1,500 ರೂ. ನಿಂದ 3,000 ರೂ.ವರೆಗೂ ಹೋಗಬಹುದು ಎಂಬುದು ಒಂದು ಅಂದಾಜು. ಈ ಲೆಕ್ಕದಲ್ಲಿ, ಕೃಷ್ಣಗಿರಿ ಕಚೇರಿಯ ನಿರ್ಮಾಣ ವೆಚ್ಚ ಕನಿಷ್ಠ 1.5 ಕೋಟಿ ರೂ.ನಿಂದ ಸುಮಾರು 3 ಕೋಟಿವರೆಗೂ ಇರಬಹುದು.
2023ರ ಮಾರ್ಚ್‌ನಲ್ಲಿ ನಡ್ಡಾ 290 ಕಚೇರಿಗಳನ್ನು ಪೂರ್ಣಗೊಳಿಸಿರುವುದಾಗಿ ಹೇಳಿದ್ದರು. ಅಂದರೆ ಕೇವಲ ಜಿಲ್ಲಾ ಕಚೇರಿಗಳ ಮೇಲೆ ಬಿಜೆಪಿ ಖರ್ಚು ಮಾಡಿರುವುದು 870 ಕೋಟಿ ರೂ.
ಎಲ್ಲಾ 887 ಜಿಲ್ಲಾ ಕಚೇರಿಗಳಿಗೆ ಅದರ ಯೋಜಿತ ವೆಚ್ಚ ರೂ. 2,661 ಕೋಟಿ. ದೊಡ್ಡ ನಗರಗಳಲ್ಲಂತೂ ಅದು ದೊಡ್ಡ ಕಚೇರಿಗಳನ್ನೇ ನಿರ್ಮಿಸುತ್ತಿದೆ.
ಬಿಜೆಪಿಯ ಗುವಾಹಟಿ ಕಚೇರಿಗೆ 25 ಕೋಟಿ ರೂ.,
ಭೋಪಾಲ್ ಕಚೇರಿಗೆ 100 ಕೋಟಿ ರೂ. ವೆಚ್ಚವಾಗಿದೆ.
ಪ್ರತೀ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಒಂದು ದೊಡ್ಡ ಕಚೇರಿ ಎಂದು ಭಾವಿಸಿದರೆ, ತಲಾ 25 ಕೋಟಿ ರೂ. ವೆಚ್ಚ ಎಂದುಕೊಂಡರೆ ಮತ್ತೆ 900 ಕೋಟಿ ರೂ.
ಅದು ಸೇರಿ 3,500 ಕೋಟಿ ರೂ. ಇದು ಇನ್ನೂ ಜಾಸ್ತಿಯಾಗಲೂ ಬಹುದು.
ಇನ್ನು, ಜಿಲ್ಲಾ ಕಚೇರಿಗಳಿಗೆ 3 ಕೋಟಿ ರೂ.ಗಿಂತ ಹೆಚ್ಚು ವೆಚ್ಚವಾಗಬಹುದು.
ಉದಾಹರಣೆಗೆ, ಒಡಿಶಾದಲ್ಲಿ, ಭೂಮಿಯ ಮಾರುಕಟ್ಟೆ ಬೆಲೆ ಮಾರಾಟ ಪತ್ರದಲ್ಲಿ ನಮೂದಿಸಲಾಗುವ ಬೆಲೆಗಿಂತ ಹೆಚ್ಚು ಎನ್ನಲಾಗುತ್ತದೆ.
ಬಿಜೆಪಿ ತನ್ನ ದಿಲ್ಲಿ ಪ್ರಧಾನ ಕಚೇರಿಯೊಂದಕ್ಕೇ 700 ಕೋಟಿ ಖರ್ಚು ಮಾಡಿದೆ ಎಂಬುದು ಕಾಂಗ್ರೆಸ್ ನಾಯಕ ಕಮಲ್ ನಾಥ್ ಆರೋಪ.
ಕಟ್ಟಡಗಳ ವಿಚಾರವಾಯಿತು.
ಇನ್ನು ಎರಡನೆಯದಾಗಿ, ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಎಷ್ಟು ಖರ್ಚು ಮಾಡುತ್ತಿದೆ.
2015ರಿಂದ 2023ರ ಅವಧಿಯಲ್ಲಿನ ಬಿಜೆಪಿಯ ವಾರ್ಷಿಕ ವರದಿಗಳಲ್ಲಿ ಉಲ್ಲೇಖಿಸಿರುವ ಪ್ರಕಾರ, ಅದರ ಚುನಾವಣಾ ಪ್ರಚಾರ ವೆಚ್ಚ ಒಟ್ಟು 5,744 ಕೋಟಿ ರೂ.
ಆದರೆ, ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ (ಸಿಎಂಎಸ್) ನಂತಹ ಸ್ವತಂತ್ರ ಅಧ್ಯಯನಗಳು ಹೇಳಿರುವ ಪ್ರಕಾರ,
2019ರ ಚುನಾವಣೆಯೊಂದರಲ್ಲೇ ಬಿಜೆಪಿ ಮಾಡಿರುವ ವೆಚ್ಚ 27,000 ಕೋಟಿ ರೂ.!
ಇನ್ನು ಬಿಜೆಪಿ ಅಭ್ಯರ್ಥಿಗಳು ಮಾಡಿರುವ ವೆಚ್ಚ ಪ್ರತೀ ಕ್ಷೇತ್ರಕ್ಕೆ ಚುನಾವಣಾ ಆಯೋಗ ನಿಗದಿಪಡಿಸಿರುವ 1 ಕೋಟಿ ರೂ. ಮಿತಿಯನ್ನು ದಾಟಿದೆ ಎಂಬ ಮಾತುಗಳಿವೆ.
ಸಿಎಂಎಸ್ ಪ್ರಕಾರ, 2019ರ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಒಟ್ಟು ವೆಚ್ಚ, ಅಂದರೆ 60,000 ಕೋಟಿ ರೂಪಾಯಿಯಲ್ಲಿ ಬಿಜೆಪಿಯ ಪಾಲು ಸುಮಾರು ಶೇ.45ರಷ್ಟು.
1998ರ ಒಟ್ಟು ಚುನಾವಣಾ ವೆಚ್ಚದಲ್ಲಿ ಬಿಜೆಪಿಯ ಪಾಲು ತುಂಬಾ ಕಡಿಮೆ, ಅಂದರೆ ಶೇ.20ರಷ್ಟಿತ್ತು.
2024ರ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ಒಟ್ಟು ಚುನಾವಣಾ ವೆಚ್ಚ 1,35,000 ಕೋಟಿ ರೂ. ಎನ್ನಲಾಗುತ್ತಿದೆ.
ಈ ಒಟ್ಟು ಖರ್ಚಿನಲ್ಲಿ ಪಕ್ಷದ ಖರ್ಚು ಪಾಲು 2019ರಂತೆಯೇ ಇದ್ದರೆ, ಅದು 60,750 ಕೋಟಿ ರೂ. ಆಗಬಹುದು.
ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿಯೊಂದೇ ಮಾಡುತ್ತಿರುವ ಖರ್ಚು ಅಂದಾಜು 60,750 ಕೋಟಿ ರೂ.
ಅಂದರೆ ಈ ಎರಡು ಲೋಕಸಭಾ ಚುನಾವಣೆಗಳಲ್ಲಿನ ಬಿಜೆಪಿಯ ವೆಚ್ಚ ಒಟ್ಟು 87,750 ಕೋಟಿ ರೂ.
2024ರಲ್ಲೂ 27 ಸಾವಿರ ಕೋಟಿ ರೂ. ಖರ್ಚು ಮಾಡಿದ್ದರೆ, ಬಿಜೆಪಿ ಒಟ್ಟು 54 ಸಾವಿರ ಕೋಟಿ ರೂ. ಖರ್ಚು ಮಾಡಿದಂತಾಯಿತು.
ವಿಧಾನಸಭೆ ಚುನಾವಣೆಗಳಲ್ಲಿಯೂ ಬಿಜೆಪಿ ಎಲ್ಲ ವಿಪಕ್ಷಗಳನ್ನು ಮೀರಿಸಿದೆ.
ಕೆಲವರು ಹೇಳುತ್ತಿರುವ ಪ್ರಕಾರ, ಛತ್ತೀಸ್‌ಗಡ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಪ್ರತೀ ಕ್ಷೇತ್ರದಲ್ಲಿ 3 ಕೋಟಿಯಿಂದ 4 ಕೋಟಿವರೆಗೂ ಖರ್ಚು ಮಾಡಿದೆ.
ಇದು ಅಭ್ಯರ್ಥಿಗಳಿಗೆ ಪಕ್ಷ ನೀಡಿರುವ ಹಣದ ಲೆಕ್ಕ ಮಾತ್ರ. ಇನ್ನು ಸೋಷಿಯಲ್ ಮೀಡಿಯಾ ಮತ್ತಿತರ ವೆಚ್ಚ ಬೇರೆಯೇ ಇರುತ್ತದೆ.
ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯ ವೆಚ್ಚದ ಮಿತಿ 40 ಲಕ್ಷ ರೂ. ಮಾತ್ರ ಎಂಬುದನ್ನು ಗಮನಿಸಿದರೆ, ಬಿಜೆಪಿ ಮಾಡಿರುವ ವೆಚ್ಚ ಯಾವ ಮಟ್ಟದಲ್ಲಿದೆ ಎಂಬುದು ಗೊತ್ತಾಗುತ್ತದೆ.
ದೇಶದಲ್ಲಿ ಒಟ್ಟು 4,123 ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಹತ್ತು ವರ್ಷಗಳಲ್ಲಿ ಎರಡು ಬಾರಿ ಚುನಾವಣೆಗಳು ನಡೆದಿವೆ.
ಪ್ರತಿಯೊಂದರಲ್ಲೂ ಬಿಜೆಪಿ ಮಾಡಿರುವ ವೆಚ್ಚ ಸರಾಸರಿ ಬರೀ 2 ಕೋಟಿ ರೂ. ಎಂದುಕೊಂಡರೂ, ವಿಧಾನಸಭಾ ಚುನಾವಣೆಯಲ್ಲಿನ ಅದರ ಖರ್ಚು 16,492 ಕೋಟಿ ರೂ.
ಹಾಗಾದರೆ ಬಿಜೆಪಿಗೆ ಈ ಪರಿ ಕೋಟಿ ಕೋಟಿ ಹಣ ಎಲ್ಲಿಂದ ಬರುತ್ತಿದೆ?
ಕಟ್ಟಡಗಳ ನಿರ್ಮಾಣ ಮತ್ತು ಚುನಾವಣಾ ಪ್ರಚಾರಕ್ಕಾಗಿಯೇ ಬಿಜೆಪಿಯ ವೆಚ್ಚ ರೂ. 74,053 ಕೋಟಿಯಿಂದ 1,07,803 ಕೋಟಿವರೆಗೆ ಇದೆ.
ಅಂದರೆ ಇದು, 2014ರಿಂದ 2023ರ ಅವಧಿಯಲ್ಲಿನ ಅದರ ಘೋಷಿತ ಆದಾಯವಾಗಿರುವ ರೂ. 14,663 ಕೋಟಿಗಳಿಗಿಂತ 5ರಿಂದ 7 ಪಟ್ಟು ಹೆಚ್ಚು.
ಚುನಾವಣಾ ಬಾಂಡ್‌ಗಳಿಂದ ಅದು ಭಾರೀ ಮೊತ್ತದ ದೇಣಿಗೆ ಪಡೆದಿದೆ ಎನ್ನಲಾಗುತ್ತಿದೆ. ಆದರೆ ಆ ಮೊತ್ತ ಇದರ ಶೇ.10ರಷ್ಟೂ ಅಲ್ಲ.
ಬಿಜೆಪಿಯ ಖರ್ಚುಗಳನ್ನೊಮ್ಮೆ ಗಮನಿಸಿ.
ಜಿಲ್ಲಾ ಕಚೇರಿಗಳು -2,661 ಕೋಟಿ ರೂ.
ಇತರ ಕಟ್ಟಡಗಳು -900 ಕೋಟಿ ರೂ.
ರಾಜ್ಯ ಚುನಾವಣೆಗಳು -16,492 ಕೋಟಿ ರೂ.
ಲೋಕಸಭೆ ಚುನಾವಣೆಗಳು -54,000 ಕೋಟಿಯಿಂದ 87,750 ಕೋಟಿ ರೂಪಾಯಿ.
ಮೇಲ್ನೋಟಕ್ಕೆ ಕಟ್ಟಡ ನಿರ್ಮಾಣ ಮತ್ತು ಪ್ರಚಾರ ವೆಚ್ಚಗಳು ಬಿಜೆಪಿಯ ದೊಡ್ಡ ಮೊತ್ತದ ವೆಚ್ಚಗಳಾಗಿ ಕಾಣಿಸುತ್ತವೆ.
ಆದರೆ ಇದರ ಎದುರಲ್ಲಿ ಮರೆಯಾಗಿ ಹೋಗಬಹುದಾದ ಇತರ ಖರ್ಚುಗಳು ಕೂಡ ಕಡಿಮೆಯವಲ್ಲ.
ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಪದೇ ಪದೇ ವಿಪಕ್ಷಗಳ ಸರಕಾರಗಳನ್ನು ಉರುಳಿಸಿದೆ. ಇದಕ್ಕಾಗಿ ವಿಪಕ್ಷಗಳ ಶಾಸಕರನ್ನು ಸೆಳೆದಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಪ್ರಕಾರ, 2021ರ ಮಾರ್ಚ್ ಹೊತ್ತಿಗೆ ಬೇರೆ ಪಕ್ಷಗಳ 182 ಶಾಸಕರು ಬಿಜೆಪಿ ಸೇರಿದ್ದಾರೆ.
ಪತ್ರಕರ್ತೆ ಸುನೇತ್ರಾ ಚೌಧರಿ ಅವರ ಪ್ರಕಾರ, 2024ರ ಮಾರ್ಚ್ ವೇಳೆಗೆ ಬಿಜೆಪಿ ಸೇರಿದ ಶಾಸಕರ ಸಂಖ್ಯೆ 444ಕ್ಕೆ ಮುಟ್ಟಿದೆ.
ತನಿಖಾ ಸಂಸ್ಥೆಗಳ ತೂಗುಗತ್ತಿಯಿಂದ ಪಾರಾಗಲು ವಿಪಕ್ಷಗಳ ಶಾಸಕರು ಬಿಜೆಪಿ ಸೇರಿ ಬಚಾವಾದದ್ದಿದೆ. ಮತ್ತೆ ಕೆಲವು ಶಾಸಕರು ಬಿಜೆಪಿ ಒಡ್ಡಿದ ಕೋಟಿ ಕೋಟಿ ಹಣದ ಆಮಿಷಕ್ಕೆ ಬಲಿಯಾದರು ಎಂಬ ಆರೋಪವಿದೆ.
ಈ ವರ್ಷದ ಮಾರ್ಚ್‌ನಲ್ಲಿ ಅರವಿಂದ ಕೇಜ್ರಿವಾಲ್ ಅವರು 7 ಎಎಪಿ ಶಾಸಕರಿಗೆ ಬಿಜೆಪಿ ತಲಾ 25 ಕೋಟಿ ರೂ. ಆಮಿಷ ಒಡ್ಡಿತ್ತೆಂದು ಆರೋಪಿಸಿದ್ದರು.
ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 50 ಕೋಟಿ ರೂ. ಆಮಿಷ ಒಡ್ಡಿದ್ದಾಗಿ ಎಪ್ರಿಲ್‌ನಲ್ಲಿ ಆರೋಪಿಸಿದ್ದರು.
2022ರಲ್ಲಿ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮಿತ್ ಪಾಟ್ಕರ್ ಅವರು, ಗೋವಾದ 8 ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ರೂ. 40 ಕೋಟಿಯಿಂದ 50 ಕೋಟಿವರೆಗೂ ಕೊಟ್ಟು ಸೆಳೆದುಕೊಂಡಿದೆ ಎಂದಿದ್ದರು.
ತೆಲಂಗಾಣದಲ್ಲಿ ನಾಲ್ವರು ಬಿಆರ್‌ಎಸ್ ಶಾಸಕರಿಗೆ ಬಿಜೆಪಿ ರೂ. 50 ಕೋಟಿಯಿಂದ 100 ಕೋಟಿವರೆಗೂ ಆಫರ್ ಮಾಡಿತ್ತು ಎಂಬ ಆರೋಪವಿದ್ದು, ಅದನ್ನು ಸಿಬಿಐ ತನಿಖೆ ಮಾಡುತ್ತಿದೆ.
ತನಿಖಾ ಸಂಸ್ಥೆಗಳಾಗಲೀ, ಚುನಾವಣಾ ಆಯೋಗವಾಗಲೀ ಈ ಆರೋಪಗಳ ಬಗ್ಗೆ ಹೌದೆಂದೂ ಹೇಳಿಲ್ಲ, ಇಲ್ಲವೆಂದೂ ಹೇಳಿಲ್ಲ.
ಇನ್ನು ದೇಶದಲ್ಲಿ ಪೆಗಾಸಸ್ ಕಾರ್ಯಾಚರಣೆಗೆ ಹಣ ಕೊಟ್ಟವರು ಯಾರೆಂಬುದು ಅಸ್ಪಷ್ಟವಾಗಿಯೇ ಉಳಿದಿದೆ.
ಸರಕಾರಿ ಇಲಾಖೆಗಳೇ ಅದನ್ನು ಮಾಡಿದ್ದರೆ ಅದು ಸಾರ್ವಜನಿಕ ಹಣದ ದುರ್ಬಳಕೆ.
ಬಿಜೆಪಿ ಮಾಡಿದ್ದಲ್ಲಿ ಅದರ ಹಣಕಾಸಿನ ವಿಚಾರವಾಗಿ ಇನ್ನಷ್ಟು ಗಂಭೀರ ಅನುಮಾನಗಳು ಮೂಡುತ್ತವೆ.
ಪೆಗಾಸಸ್‌ನಂತಹ ಸ್ಪೈವೇರ್ ತೀರಾ ದುಬಾರಿಯಾಗಿದ್ದು, ಪ್ರತೀ ಫೋನ್‌ನಲ್ಲಿ ಅದನ್ನು ಇಡಲು 3.7 ಕೋಟಿ ರೂ. ಖರ್ಚಾಗುತ್ತದೆ ಎನ್ನಲಾಗಿದೆ.
ಕರ್ನಾಟಕಲ್ಲಿ ಬಿಜೆಪಿ ಆಡಳಿತದ ವೇಳೆ 40 ಪರ್ಸೆಂಟ್ ಕಮಿಷನ್ ಬಗ್ಗೆ ಗುತ್ತಿಗೆದಾರರ ದೂರಿನ ಬಗ್ಗೆ ಕೇಳಿದೆವು.ಕಡೆಗೆ ಅದೇ ಬಿಜೆಪಿ ಸೋಲಿಗೂ ಮುಖ್ಯ ಕಾರಣಗಳಲ್ಲಿ ಒಂದಾಯಿತು.
ಇನ್ನು ರಾಜಕೀಯ ಪ್ರಭಾವವಿರುವ ಕಂಪೆನಿಗಳು ಟೆಂಡರ್‌ಗಳನ್ನು ಪಡೆಯಲು ಬಳಸುವ ಒಳಮಾರ್ಗಗಳು ಮತ್ತು ಅಂತಹ ಖಾಸಗಿ ಕಂಪೆನಿಗಳಿಂದ ಹಣ ಕೊಳ್ಳೆ ಹೊಡೆಯುವುದಕ್ಕೆ ಬಿಜೆಪಿಯಂತಹ ರಾಜಕೀಯ ಪಕ್ಷ ಆಡುವ ಆಟ ಇವೆಲ್ಲವೂ ಚುನಾವಣಾ ಬಾಂಡ್ ಮೂಲಕ ಬಯಲಾಗಿವೆ.
ಕಡೆಗೂ ಲೂಟಿಯಾಗುವುದು ಈ ದೇಶದ ಸಾರ್ವಜನಿಕರ ಹಣ, ಜನಸಾಮಾನ್ಯರ ಹಣ.
ಈ ರಾಜಕೀಯ ಆಟದ ನಡುವೆ ಕಷ್ಟ ಅನುಭವಿಸುವವರು, ಹೈರಾಣಾಗುವವರು ಕೂಡ ಅದೇ ಜನಸಾಮಾನ್ಯರು.
ರಸ್ತೆಗಳು ಕಳಪೆಯಾಗಿ ನಿರ್ಮಾಣಗೊಂಡಾಗ ಮೈಲೇಜ್ ಕಡಿಮೆಯಾಗಿ, ಜನರು ಪೆಟ್ರೋಲ್ ಮತ್ತು ಡೀಸೆಲ್‌ಗೆ ಮಾಡುವ ಖರ್ಚು ಹೆಚ್ಚುತ್ತದೆ.
ರಾಜಕೀಯ ಪ್ರಭಾವವಿರುವ ಕಂಪೆನಿಗಳು ಸರಕಾರದಿಂದ ಲಾಭ ಮಾಡಿಕೊಂಡಾಗ ಇತರ ಕಂಪೆನಿಗಳು ತೋರಿಸುವ ನಿಧಾನ ಗತಿ ದೇಶದಲ್ಲಿ ಉದ್ಯೋಗ ಬಿಕ್ಕಟ್ಟಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮರಳುಗಾರಿಕೆ ಮತ್ತು ಮದ್ಯದಂತಹ ವ್ಯವಹಾರಗಳು ರಾಜಕಾರಣಿಗಳ ಪಾಲಾದಾಗ ರಾಜ್ಯದ ಆದಾಯ ಕುಸಿಯುತ್ತದೆ.
ಸರಕಾರಿ ಇಲಾಖೆಗಳಿಗೆ ಹಂಚಿಕೆಯಾಗುವ ಹಣ ಕಡಿಮೆಯಾದಾಗ ಆರೋಗ್ಯ ಮತ್ತು ಶಿಕ್ಷಣದ ಮೇಲಿನ ಜನರ ಖರ್ಚು ಹೆಚ್ಚಾಗುತ್ತದೆ.
ಹೀಗೆಲ್ಲಾ ಆದಾಗ, ಮದರ್ ಆಫ್ ಡೆಮಾಕ್ರಸಿಯ 80 ಕೋಟಿ ಬಡವರು ಉಚಿತ ಪಡಿತರವನ್ನೇ ನೆಚ್ಚಿ ಬದುಕಬೇಕಾಗುತ್ತದೆ.
ಆದರೆ ಅವರನ್ನು ಪ್ರತಿನಿಧಿಸುವ, ತಾನು ಫಕೀರ, ತನ್ನಲ್ಲಿ ಏನೇನೂ ಇಲ್ಲ ಎಂದು ಹೇಳಿಕೊಳ್ಳುವ ವ್ಯಕ್ತಿಯ ಕೈಯಲ್ಲಿರುವ ಪಕ್ಷ ಮಾತ್ರ ಜಗತ್ತಿನ ಅತ್ಯಂತ ಶ್ರೀಮಂತ ಪಕ್ಷವಾಗಿ ಕೊಬ್ಬುವ ವಿರೋಧಾಭಾಸ ಸೃಷ್ಟಿಯಾಗುತ್ತದೆ.
ಬಿಜೆಪಿ ಖಜಾನೆಯಲ್ಲಿ ಕೂಡ ಹೀಗೆಯೇ ಕುರುಡು ಕಾಂಚಾಣ ಕುಣಿಯುತ್ತಿದೆ.
ಅದಕ್ಕೆ ಮತ ಹಾಕಿ ಅಧಿಕಾರಕ್ಕೆ ಏರಿಸಿದ ಜನರು ಮಾತ್ರ ಅಚ್ಚೇ ದಿನಕ್ಕೆ ಕಾದು ಕಾದು ಹೈರಾಣಾಗಿದ್ದಾರೆ.
ಕೃಪೆ: thewire.in