ಅಮೆರಿಕ-ರಶ್ಯದ ಈಗಿನ ಬೆಳವಣಿಗೆಯಿಂದ ಭಾರತ ಕಲಿಯಬೇಕಾದ ಪಾಠವೇನು?

Update: 2025-03-09 11:34 IST
ಅಮೆರಿಕ-ರಶ್ಯದ ಈಗಿನ ಬೆಳವಣಿಗೆಯಿಂದ ಭಾರತ ಕಲಿಯಬೇಕಾದ ಪಾಠವೇನು?
  • whatsapp icon

ಈಗ ನೇಟೊಗೆ ಸೇರುವ ಉಕ್ರೇನ್‌ನ ಕನಸು ನಾಶವಾಗಿದೆ. ಝೆಲೆನ್‌ಸ್ಕಿಯನ್ನು ಅವಮಾನಿಸಿ ಶ್ವೇತಭವನದಿಂದ ಹೊರಹಾಕಲಾದ ನಂತರ, ಅಮೆರಿಕ ರಶ್ಯ ವಿರುದ್ಧದ ಎಲ್ಲಾ ಸೈಬರ್ ಕಾರ್ಯಾಚರಣೆಗಳನ್ನು ನಿಲ್ಲಿಸಿತು.

ಈಗಿನ ಭೌಗೋಳಿಕ ರಾಜಕೀಯ ತಿರುವು ಈಗ ಯುರೋಪ್ ಕಡೆ ಗಮನ ಹೋಗುವಂತೆ ಮಾಡಿದೆ.

ಶ್ವೇತಭವನದಲ್ಲಿನ ಅವಮಾನದ ನಂತರ ಎಲ್ಲಾ ಯುರೋಪ್‌ಯನ್ ನಾಯಕರು ಯುರೋಪ್‌ಯನ್ ಭದ್ರತಾ ಸಮ್ಮೇಳನದಲ್ಲಿ ಝೆಲೆನ್‌ಸ್ಕಿಯನ್ನು ಬೆಂಬಲಿಸಿದ್ದಾರೆ. ಆದರೆ ಪ್ರಶ್ನೆ, ಯುರೋಪ್ ಬಳಿ ಅಮೆರಿಕದಂತೆಯೇ ಹಣ, ರಾಜಕೀಯ ಶಕ್ತಿ ಮತ್ತು ಶಸ್ತ್ರಾಸ್ತ್ರಗಳು ಇವೆಯೇ ಎಂಬುದು.

ಪಶ್ಚಿಮದ ಬ್ಯಾಂಕುಗಳಲ್ಲಿ ರಶ್ಯದ ಸುಮಾರು 300 ಬಿಲಿಯನ್ ಡಾಲರ್‌ನಷ್ಟು ಸಂಪತ್ತು ಇದೆ. ಹೀಗಿರುವಾಗ ಈ ಹಣವನ್ನು ಬಳಸಿಕೊಂಡು ಉಕ್ರೇನ್ ಸಹಾಯಕ್ಕೆ ಯುರೋಪ್ ನಿಲ್ಲಬಹುದು. ಹಾಗೇನಾದರೂ ಆದರೆ ಇನ್ನುಮುಂದೆ ಪ್ರಜಾಪ್ರಭುತ್ವ ಜಗತ್ತಿನ ನಾಯಕ ಎಂಬ ಅಮೆರಿಕದ ಸ್ಥಾನವನ್ನು ಯಾರೂ ಒಪ್ಪಲಿಕ್ಕಿಲ್ಲ.

ಟ್ರಂಪ್ ನಡೆ ರಶ್ಯಕ್ಕೆ ತುಂಬಾ ಖುಷಿ ತಂದಿದೆ. ಪುಟಿನ್ ವಕ್ತಾರರು ಟ್ರಂಪ್ ವಿದೇಶಾಂಗ ನೀತಿ ರಶ್ಯದ ದೃಷ್ಟಿಕೋನದೊಂದಿಗೆ ಹೊಂದಿಕೆಯಾಗುತ್ತದೆ ಎಂದು ಹೇಳುತ್ತಾರೆ.

ಇದರಿಂದಾಗಿ ಟ್ರಂಪ್ ರಶ್ಯದ ಏಜೆಂಟರೇ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಜನರು ಕೇಳುತ್ತಿದ್ದಾರೆ. ಟ್ರಂಪ್ ವಿರುದ್ಧ ಏನಾದರೂ ಗಂಭೀರ ರಹಸ್ಯವನ್ನು ರಶ್ಯ ಇಟ್ಟುಕೊಂಡು ಟ್ರಂಪ್ ಅವರನ್ನು ಬೆದರಿಸುತ್ತಿದೆಯೇ ಎಂಬ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ.

ಮೊದಲನೆಯದಾಗಿ, ಉಕ್ರೇನ್‌ನೊಂದಿಗಿನ ಟ್ರಂಪ್ ನಡವಳಿಕೆ. ಆನಂತರ, ಅವರು ಕೆನಡಾದ ಮೇಲೆ ಹಲವು ಸುಂಕಗಳನ್ನು ವಿಧಿಸಿದರು. ಟ್ರಂಪ್ ಈಗ ರಶ್ಯದ ಮೇಲೆ ಗಮನ ಕೇಂದ್ರೀಕರಿಸಲಿದ್ದಾರೆ.

ಬೇರೆ ಯಾವುದೇ ದೇಶ, ಯಾವುದೇ ಗುಂಪು, ಅಮೆರಿಕದಂತೆ ರಾಜಕೀಯ ಶಕ್ತಿ, ಹಣಬಲ ಅಥವಾ ಉಕ್ರೇನ್ ಅನ್ನು ಉಳಿಸುವ ಧೈರ್ಯವನ್ನು ಹೊಂದಿದೆಯೇ?

ಝೆಲೆನ್‌ಸ್ಕಿಯನ್ನು ಅವಮಾನಿಸಿದ್ದು ಪೂರ್ವ ಯೋಜಿತ ಎಂದು ಹೊಸ ಜರ್ಮನ್ ಚಾನ್ಸೆಲರ್ ಸ್ಪಷ್ಟವಾಗಿ ಹೇಳಿದ್ದಾರೆ.

ಉಕ್ರೇನ್ ಅನ್ನು ಬಲವಂತ ಮಾಡಲು ಒಂದು ಯೋಜನೆ ಇತ್ತು. ಖನಿಜ ಒಪ್ಪಂದಕ್ಕೆ ಸಹಿ ಹಾಕಬೇಕೆಂದು ಒತ್ತಡ ಹೇರಲಾಗಿತ್ತು.

ಯುರೋಪ್‌ನಲ್ಲಿ ಪುಟಿನ್ ಅವರನ್ನು ಯಾರೂ ಇಷ್ಟಪಡುವುದಿಲ್ಲ. ಅದರಿಂದಾಗಿಯೇ ಯುರೋಪ್‌ಯನ್ ಭದ್ರತಾ ಸಮ್ಮೇಳನದಲ್ಲಿ ಝೆಲೆನ್‌ಸ್ಕಿಗೆ ದೊಡ್ಡ ಮಟ್ಟದಲ್ಲಿ ಬೆಂಬಲ ಸಿಕ್ಕಿತು.

ಈ ನಡುವೆ, ಯುರೋಪ್‌ನಲ್ಲಿ ಅಮೆರಿಕದ ನೆಲೆಗಳನ್ನು ಮುಚ್ಚುವ ಮಾತುಗಳು ನಡೆಯುತ್ತಿವೆ. ಅಮೆರಿಕನ್ ಹಡಗುಗಳನ್ನು ಇಂಧನ ತುಂಬಿಸದಂತೆ ಕೇಳಲಾಗುತ್ತಿದೆ.

ಟ್ರಂಪ್ ಅವರ ಅಧಿಕೃತ ಭೇಟಿಯನ್ನು ರದ್ದುಗೊಳಿಸಲು ಅಥವಾ ಡೌನ್ ಗ್ರೇಡ್ ಮಾಡಲು ಕೇಳಲಾಗುತ್ತಿದೆ.

ಅಮೆರಿಕ ವಿರುದ್ಧ ನಿಲ್ಲಲು ದೊಡ್ಡ ಅವಕಾಶವೊಂದು ಯುರೋಪ್‌ಗೆ ಸಿಕ್ಕಿದಂತಿದೆ.

ಪುಟಿನ್ ಅಥವಾ ಅವರ ಭರವಸೆಗಳನ್ನು ನಂಬಬಹುದೇ ಅಥವಾ ಇಲ್ಲವೇ ಎಂಬುದರ ಕುರಿತು ಯುರೋಪ್‌ನಲ್ಲಿ ಯಾವುದೇ ಚರ್ಚೆಯಿಲ್ಲ. ಪುಟಿನ್‌ರನ್ನು ಕಿಂಚಿತ್ತೂ ನಂಬಲು ಸಾಧ್ಯವಿಲ್ಲ ಎಂದು ಯುರೋಪ್‌ಗೆ ತಿಳಿದಿದೆ.

ಉಕ್ರೇನ್‌ಗೆ ಸಹಾಯ ಮಾಡಲು ಬೇಕಾದಷ್ಟು ಹಣ ಮತ್ತು ಸೈನಿಕ ಬಲ ಯುರೋಪ್ ಬಳಿ ಇದೆಯೇ? ಅಮೆರಿಕ ಮತ್ತು ಯುರೋಪ್‌ನ ಜಿಡಿಪಿ ಸರಿಸುಮಾರು ಒಂದೇ ತರ ಇದ್ದರೂ ಸೈನ್ಯ ಬಲದಲ್ಲಿ ಯುರೋಪ್ ತುಂಬಾ ಹಿಂದೆ ಉಳಿದಿದೆ. ಹೀಗಿರುವಾಗ ಇದನ್ನು ರಶ್ಯದ ಹಣ ಬಳಸಿ ತನ್ನ ಸೈನ್ಯ ಬಲವನ್ನು ಅಭಿವೃದ್ಧಿಪಡಿಸುವ ಅವಕಾಶವಾಗಿ ಯುರೋಪ್ ನೋಡುತ್ತಿದೆ.

ಈ ಮೊದಲೇ ಹೇಳಿದಂತೆ ರಶ್ಯದ ಹಣವನ್ನು ಯುರೋಪ್ ಫ್ರೀಜ್ ಮಾಡಿ ಇಟ್ಟಿದೆ. ಈ ಫ್ರೀಜ್ ಮಾಡಿದ ಹಣದಿಂದ ಬರುವಂತಹ ಬಡ್ಡಿಯನ್ನು ಈಗಾಗಲೇ ಉಕ್ರೆನ್ ಸಹಾಯಕ್ಕೆ ಬಳಸಲಾಗುತ್ತಿದೆ. ಹೀಗಿರುವಾಗ ಈ ಇಡೀ ಮೊತ್ತವನ್ನು ಉಕ್ರೆನ್ ಸಹಾಯಕ್ಕಾಗಿ ಯುರೋಪ್ ಬಳಸಬಹುದೇ ಎಂಬುದು ಅತಿ ದೊಡ್ಡ ಪ್ರಶ್ನೆ.

ಕಾನೂನಾತ್ಮಕವಾಗಿ ಯೂರೋಪ್ ರಶ್ಯದ ಹಣ ಖರ್ಚು ಮಾಡಬಹುದೇ ಎಂಬುದು ಇನ್ನೊಂದು ಪ್ರಶ್ನೆ.

ಇದಕ್ಕೂ ಉತ್ತರವನ್ನು ಯುರೋಪ್ ಕಂಡುಕೊಂಡಿದೆ.

ರಶ್ಯ ಯುದ್ಧಾಪರಾಧಗಳನ್ನು ಮಾಡಿದೆ ಎಂದು ಅಂತರ್‌ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಹೇಳಿದೆ. ಹೀಗಿರುವಾಗ ತಾನು ಮಾಡಿದ ಹಾನಿಗೆ ರಶ್ಯ ಪರಿಹಾರ ನೀಡಬೇಕು. ಈ ರೀತಿ ಪರಿಹಾರ ನೀಡಿದರೆ ಮಾತ್ರ ಜಪ್ತಿ ಮಾಡಿದ ಹಣ ಹಿಂದಿರುಗಿಸಲಾಗುವುದು ಎಂದು ಯುರೋಪ್ ಹೇಳಬಹುದು.

ಅಮೆರಿಕ ಉಕ್ರೆನ್‌ಗೆ ಕೈಕೊಟ್ಟ ಬಳಿಕ ಇನ್ನು ಯಾರನ್ನೂ, ನೇಟೊವನ್ನೂ ಸಹ ನಂಬಲು ಸಾಧ್ಯವಿಲ್ಲ ಎಂದು ಯುರೋಪ್‌ಗೆ ಅರ್ಥವಾಗಿದೆ. ಹಾಗಾಗಿ ತಮ್ಮ ಸೈನ್ಯಬಲವನ್ನು ಹೆಚ್ಚಿಸಲು ಯುರೋಪ್ ಮುಂದಾಗಿದೆ. ದೊಡ್ಡ ಮಟ್ಟದಲ್ಲಿ ಆ ಕಡೆ ಹೂಡಿಕೆ ಮಾಡಲು ಮುಂದಾಗಿದೆ.

ಇಂಗ್ಲೆಂಡ್ 5 ಸಾವಿರ ಕ್ಷಿಪಣಿಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಆದರೆ ಯುರೋಪ್ ಉಕ್ರೇನ್‌ಗೆ ಸಹಾಯ ಮಾಡಲು ಬಯಸಿದರೆ ಇನ್ನೂ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಉಕ್ರೇನ್ ಶರಣಾಗಬೇಕಾಗುತ್ತದೆ.

ಉಕ್ರೇನ್ ಸೋತರೆ, ಪುಟಿನ್ ಗೆಲುವಿನಿಂದ ಟ್ರಂಪ್‌ಗೆ ಏನು ಸಿಗುತ್ತದೆ? ಇದು ಆತಂಕಕಾರಿ ವಿಷಯ.

ಟ್ರಂಪ್ ಅಮೆರಿಕವನ್ನು ಶ್ರೀಮಂತ ಉದ್ಯಮಿಗಳ ಕೂಟವೇ ಆಳುವ ದೇಶವನ್ನಾಗಿ ಪರಿವರ್ತಿಸಲು ಬಯಸುತ್ತಾರೆಯೇ? ಟ್ರಂಪ್ ಗೆಳೆಯ ಎಲಾನ್ ಮಸ್ಕ್ ಅಮೆರಿಕವನ್ನು ರಶ್ಯದ ರೂಪವನ್ನಾಗಿ ಮಾಡಲು ಬಯಸುತ್ತಾರೆಯೇ?

ಟ್ರಂಪ್ ಮತ್ತೆ ಅಧಿಕಾರಕ್ಕೆ ಬಂದ ಕೇವಲ ಒಂದು ತಿಂಗಳಿನಲ್ಲಿ ಪ್ರಜಾಪ್ರಭುತ್ವ ಕುರಿತ ಪಶ್ಚಿಮದ ವ್ಯಾಖ್ಯಾನ ಈಗ ನಮ್ಮ ಕಣ್ಣೆದುರೇ ಛಿದ್ರವಾಗುತ್ತಿದೆ.

ಕೆನಡಾವನ್ನು ಅಮೆರಿಕದ ಭಾಗ ಮಾಡಿ, ಗಾಝಾವನ್ನು ಪ್ರವಾಸೋದ್ಯಮ ಕ್ಷೇತ್ರ ಮಾಡಿ, ಗ್ರೀನ್‌ಲ್ಯಾಂಡ್ ನಮಗೆ ಮಾರಿ ಬಿಡಿ, ಡೆನ್ಮಾರ್ಕ್ ಫಿನ್‌ಲ್ಯಾಂಡ್ ಅನ್ನು ಬಿಡಬೇಕು, ಈ ರೀತಿ ಅನೇಕ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಗಳನ್ನು ಟ್ರಂಪ್ ನೀಡಿದ್ದಾರೆ.

ಅಮೆರಿಕನ್ನರು ಇದು ಶಾಂತಿ ಮಾತುಕತೆಯಲ್ಲ ಎಂಬುದನ್ನು ಅರ್ಥಮಾಡಿ ಕೊಳ್ಳುತ್ತಿದ್ದಾರೆ.

ಮಾಜಿ ಪೋಲಿಷ್ ಅಧ್ಯಕ್ಷರು ಟ್ರಂಪ್‌ಗೆ ಪತ್ರ ಬರೆದಿದ್ದು, ಝೆಲೆನ್‌ಸ್ಕಿಯನ್ನು ಹೇಗೆ ಅವಮಾನಿಸಲಾಗಿದೆ ಎಂಬುದನ್ನು ನೋಡಿ ಗಾಬರಿಗೊಂಡಿದ್ದಾಗಿ ಹೇಳಿದ್ದಾರೆ.

ತಮ್ಮ ದೇಶವನ್ನು ರಕ್ಷಿಸಲು ಸಾಯಲು ಸಿದ್ಧರಾಗಿರುವ ಉಕ್ರೇನಿಯನ್ ಸೈನಿಕರಿಗೆ ನಾವು ಕೃತಜ್ಞತೆಯನ್ನು ತೋರಿಸಬೇಕು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಈ ಪತ್ರದಲ್ಲಿ ಇನ್ನೊಂದು ವಿಷಯವನ್ನು ನೆನಪಿಸಲಾಗಿದೆ.

ಯುದ್ಧವನ್ನು ಉಕ್ರೇನ್ ಪ್ರಾರಂಭಿಸಿತು ಎಂದು ಹಲವರು ಹೇಳುತ್ತಾರೆ. ಆದರೆ 1994 ರಲ್ಲಿ ಯುಎಸ್‌ಎಸ್‌ಆರ್ ಪತನವಾದಾಗ ಕಥೆ ಪ್ರಾರಂಭವಾಯಿತು. ಉಕ್ರೆನ್ ಬಳಿ ಇದ್ದ ಎಲ್ಲಾ ಪರಮಾಣು ದಾಸ್ತಾನು ಒಪ್ಪಿಸುವಂತೆ ಆಗ ಹೇಳಲಾಗಿತ್ತು. ನಿಮ್ಮ ಸುರಕ್ಷತೆ ನಮ್ಮ ಜವಾಬ್ದಾರಿ ಎಂದು ಆಗ ರಶ್ಯ, ಚೀನಾ ಮತ್ತು ಅಮೆರಿಕ ಹೇಳಿದ್ದವು. ಉಕ್ರೇನ್‌ಗೆ ಅನೇಕ ಸುಳ್ಳುಗಳನ್ನು ಹೇಳಲಾಯಿತು.

ಅಂದು ಉಕ್ರೇನ್ ಒಪ್ಪದೇ ಇದ್ದಿದ್ದಲ್ಲಿ ಇಂದು ಉಕ್ರೇನ್ 3ನೇ ಅತಿದೊಡ್ಡ ಪರಮಾಣು ದಾಸ್ತಾನು ಹೊಂದಿರುತ್ತಿತ್ತು. ಆದರೆ ಉಕ್ರೇನ್ ಬಗ್ಗೆ ತುಂಬಾ ಸುಳ್ಳುಗಳನ್ನು ಹರಡಲಾಗಿದೆ. ಹೀಗಿರುವಾಗ ಭಾರತದ ನಿಲುವು ಏನಿರಬೇಕು?

ಭಾರತ ಈ ವರೆಗೂ ಟ್ರಂಪ್ ಹೇಳಿದಂತೆ ನಡೆದುಕೊಂಡಿದೆ. ಅಕ್ರಮ ವಲಸಿಗರನ್ನು ಹಿಂಪಡೆದುಕೊಳ್ಳಿ ಎಂದು ಹೇಳಿ ಅವರನ್ನು ಕೈಕೋಳ ಹಾಕಿ ಹಿಂದಿರುಗಿಸಿದಾಗ ಅದಕ್ಕೂ ಭಾರತ ಒಪ್ಪಿತು. ಟಾರಿಫ್ ಕಡಿಮೆ ಮಾಡಿ ಅಂತ ಅಮೆರಿಕ ಹೇಳಿದಾಗ ಅದಕ್ಕೂ ಒಪ್ಪಿತು. ಡಾಲರ್ ಅನ್ನು ಬದಲಿಸಲು ಮುಂದಾಗಬೇಡಿ ಎಂದು ಟ್ರಂಪ್ ಹೇಳಿದಾಗ ಅದಕ್ಕೂ ಭಾರತ ಮಣಿಯಿತು.

ಟ್ರಂಪ್ ಚೀನಾವನ್ನು ಎದುರಿಸಲು ಇದನ್ನು ಮಾಡುತ್ತಿದ್ದಾರೆ ಎಂದು ನಾವು ತಪ್ಪಾಗಿ ಅರ್ಥಮಾಡಿಕೊಂಡಿದ್ದೇವೆ.

ಟ್ರಂಪ್‌ಗೆ ಚೀನಾದ ಅಧ್ಯಕ್ಷರ ಬಗ್ಗೆಯೂ ಹೆಚ್ಚಿನ ಗೌರವವಿದೆ. ನಾಳೆ ಚೀನಾ ನಮ್ಮ ಮೇಲೆ ದಾಳಿ ಮಾಡಿದರೆ ಅಮೆರಿಕ ಯಾರ ಪರವಾಗಿ ನಿಲುವು ತೆಗೆದುಕೊಳ್ಳುತ್ತದೆ? ಅಥವಾ ಅಮೆರಿಕ ನಮ್ಮಿಂದ ಖನಿಜ ಒಪ್ಪಂದವನ್ನು ಕೇಳುತ್ತದೆಯೇ? ಒಪ್ಪಂದಕ್ಕೆ ಸಹಿ ಹಾಕಿ ನಂತರ ಸಹಾಯ ಮಾಡುವ ಕುರಿತು ಯೋಚಿಸುವ ಅಂತ ಅಮೆರಿಕ ಹೇಳುತ್ತದೆಯೆ?

ಒಂದು ವಿಷಯ ಸ್ಪಷ್ಟವಾಗಿದೆ, ಇಂದಿನ ಜಗತ್ತಿನಲ್ಲಿ ಯಾರಿಗೂ ಯಾವುದೇ ಖಾಯಂ ಮಿತ್ರರಾಷ್ಟ್ರಗಳಿಲ್ಲ. ಯಾರೂ ಯಾವಾಗ ಬೇಕಿದ್ದರೂ ಪಲ್ಟಿ ಹೊಡೆಯಬಹುದು.

ಇಲ್ಲಿ ಇನ್ನೊಂದು ವಿಷಯವಿದೆ. ಒಪ್ಪಂದಗಳು ಮಾತ್ರ ಟ್ರಂಪ್‌ಗೆ ಬಹುಮುಖ್ಯ. ಮಿತ್ರ ರಾಷ್ಟ್ರಗಳು ಎಂಬ ಹೊಣೆ ಟ್ರಂಪ್‌ಗೆ ಬೇಡ.

ಯುಎಸ್ ಮತ್ತು ರಶ್ಯ ಒಟ್ಟಿಗೆ ಬಂದರೆ ಅದು ನಮಗೆ ಕೆಟ್ಟದು. ನಾವು ಎರಡರಿಂದಲೂ ಲಾಭ ಪಡೆಯುತ್ತಿದ್ದೆವು, ಈಗ ಅವರು ಒಟ್ಟಿಗೆ ಇದ್ದಾರೆ. ಹಾಗಾದರೆ ನಮಗೆ ಕಷ್ಟ ಮತ್ತು ಚೀನಾದ ಅಪಾಯವೂ ಹೆಚ್ಚಾಗುತ್ತದೆ.

ಈ ಎಲ್ಲಾ ಭೌಗೋಳಿಕ ರಾಜಕೀಯ ಚಟುವಟಿಕೆಗಳಿಂದಾಗಿ, ನಾವು ನಮ್ಮ ರಕ್ಷಣೆಯನ್ನು ಹೆಚ್ಚಿಸಿಕೊಳ್ಳಬೇಕು. ನಾವು ಹಿಂದೂ ಮುಸ್ಲಿಮ್ ರಾಜಕೀಯವನ್ನು ಬಿಟ್ಟು ನಿಜವಾದ ಸಮಸ್ಯೆಗಳ ಬಗ್ಗೆ ಚರ್ಚಿಸದೆ ಇದ್ದರೆ ತುಂಬಾ ತಡವಾಗಿ ಹೋಗಬಹುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಎಚ್.ಕೆ.

contributor

Similar News