ಖರ್ಗೆಯವರೇಕೆ ಮಾಧ್ಯಮಗಳಿಗೆ ಕಾಣುವುದಿಲ್ಲ?

Update: 2024-05-18 08:22 GMT

ಮಡಿಲ ಮೀಡಿಯಾಗಳು ಸ್ಪರ್ಧೆಗೆ ಬಿದ್ದಂತೆ ಮೋದಿ ಭಜನೆಯಲ್ಲಿ ಬಿಝಿಯಾಗಿವೆ. ಮೋದಿ ಎದ್ದರೂ, ಕೂತರೂ ಏನು ಮಾಡಿದರೂ, ಏನೂ ಮಾಡದಿದ್ದರೂ ಅದೆಲ್ಲವೂ ದೇಶಕ್ಕಾಗಿ ಅವರು ಮಾಡುವ ಕಠಿಣ ಪರಿಶ್ರಮ ಎಂದೇ ಬಣ್ಣಿಸಲಾಗುತ್ತಿದೆ.

ಆದರೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ, 81 ವರ್ಷ ವಯಸ್ಸಿನ ಮಲ್ಲಿಕಾರ್ಜುನ ಖರ್ಗೆಯವರು ಈ ವಯಸ್ಸಲ್ಲಿ ಎಷ್ಟು ಕಠಿಣ ಪರಿಶ್ರಮ ಪಡುತ್ತಿದ್ದಾರೆ, ಹೇಗೆ ಒಂದು ವೈರುಧ್ಯಗಳೇ ತುಂಬಿ ತುಳುಕುವ ಮೈತ್ರಿ ಕೂಟವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ, ಹೇಗೆ ತಮ್ಮ ನಿಷ್ಠೆ ಹಾಗೂ ಅನುಭವದಿಂದ ಕಾಂಗ್ರೆಸ್‌ಗೆ ಒಂದು ಸ್ಪಷ್ಟ ದಿಕ್ಕು ತೋರಿಸುತ್ತಿದ್ದಾರೆ, ಹೇಗೆ ದೇಶದ ಪ್ರತೀ ರಾಜ್ಯವನ್ನೂ, ಅಲ್ಲಿನ ಒಂದೊಂದು ಕ್ಷೇತ್ರವನ್ನೂ ಅವರು ತಿಳಿದು ಕೊಂಡಿದ್ದಾರೆ? ಹೇಗೆ ಯಾವುದೇ ವಿಷಯದ ಬಗ್ಗೆ ಸುಲಲಿತವಾಗಿ ಮಾತಾಡುತ್ತ್ತಾರೆ... ಇದ್ಯಾವುದನ್ನೂ ಮಡಿಲ ಮೀಡಿಯಾಗಳು ತೋರಿಸುವುದೇ ಇಲ್ಲ.

ಈ ಎಲ್ಲದರ ಕುರಿತು ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಅವರ ಖರ್ಗೆಯವರ ಬಗ್ಗೆ ಮಾಡಿದ ವಿಶೇಷ ವೀಡಿಯೋ ಕಾರ್ಯಕ್ರಮದ ಕೆಲವೊಂದು ಅಂಶಗಳನ್ನು ಇಲ್ಲಿ ನೀಡಲಾಗಿದೆ:

81 ವರ್ಷದ ಮಲ್ಲಿಕಾರ್ಜುನ ಖರ್ಗೆಯವರ ಶಕ್ತಿಯ ಬಗ್ಗೆ ಎಲ್ಲಿಯೂ ಚರ್ಚೆಯಾಗುವುದಿಲ್ಲ. ಆದರೆ ಪ್ರತೀ ಸಂದರ್ಶನದಲ್ಲೂ 74 ವರ್ಷದ ಮೋದಿ ಅವರಿಗೆ ಇಷ್ಟೊಂದು ಶಕ್ತಿ ಎಲ್ಲಿಂದ ಬರುತ್ತದೆ ಎಂದು ಕೇಳಲಾಗುತ್ತಿದೆ.

ಈ ಪ್ರಶ್ನೆಯೇ ನಗು ತರಿಸುತ್ತದೆ. ಆದರೆ, ಪತ್ರಕರ್ತರು ಈ ಪ್ರಶ್ನೆಯನ್ನು ಮೋದಿಗೆ ಕೇಳುವುದು ನಿಲ್ಲುತ್ತಿಲ್ಲ. ಮೋದಿಗೆ ಶಕ್ತಿ ಎಲ್ಲಿಂದ ಬರುತ್ತದೆ ಎಂದು ತಿಳಿಯುವುದೇ ಈ ಮಡಿಲ ಮೀಡಿಯಾಗಳ ಪತ್ರಕರ್ತರಿಗೆ ದೊಡ್ಡ ಕೆಲಸವಾಗಿರುವಂತಿದೆ.

ಈ ದೇಶದಲ್ಲಿ ಲಕ್ಷಾಂತರ ಜನ ದುಡಿಯುತ್ತಾರೆ, ಅವರಿಗೆ ನಿತ್ಯವೂ ಕೆಲಸವಿರುತ್ತದೆ. ಬಿಸಿಲು, ಮಳೆಯೆನ್ನದೆ ದುಡಿಯುವವರಿದ್ಧಾರೆ, ರವಿವಾರವೂ ಬಿಡುವಿರದೆ ದುಡಿದು ಕುಟುಂಬವನ್ನು ಸಾಕಬೇಕಾದ ಅನಿವಾರ್ಯತೆ ಇದ್ದವರೂ ಕೋಟ್ಯಂತರ ಜನ ಇದ್ದಾರೆ.

ಆದರೆ ಈ ನಿರ್ಲಜ್ಜ ಮಡಿಲ ಮೀಡಿಯಾಗಳ ಪತ್ರಕರ್ತರಿಗೆ ಅದಾವುದೂ ಕಾಣುವುದಿಲ್ಲ. ಅವರನ್ನು ಕಾಡುತ್ತಿರುವ ಅತಿ ದೊಡ್ಡ ಪ್ರಶ್ನೆ - ಮೋದಿಗೆ ಶಕ್ತಿ ಎಲ್ಲಿಂದ ಬರುತ್ತದೆ?

ಭಾರತದ ಪ್ರಧಾನಿ ವಿಚಾರದಲ್ಲಿ ಮಾತ್ರವೇ ವಿಶೇಷವಾಗಿ ಎತ್ತಲಾಗುವ ಪ್ರಶ್ನೆ ಇದು. ಆದರೆ ದೇಶಾದ್ಯಂತ ಪ್ರಚಾರದಲ್ಲಿ ತೊಡಗಿರುವ ಖರ್ಗೆ ಅವರ ಬಗ್ಗೆ ಇದೇ ಪ್ರಶ್ನೆಯನ್ನು ಯಾರೂ ಕೇಳುವುದಿಲ್ಲ.

ಖರ್ಗೆಯವರಿಗೆ ಮೋದಿಗಿಂತ ಜಾಸ್ತಿ ವಯಸ್ಸಾಗಿದೆ. ಅವರೂ ದೇಶಾದ್ಯಂತ ಸುತ್ತುತ್ತಿದ್ದಾರೆ, ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಜವಾಬ್ದಾರಿ ಹೊತ್ತಿದ್ದಾರೆ, ಚುನಾವಣಾ ಪ್ರಚಾರದಲ್ಲಿ ನಿರಂತರ ತೊಡಗಿದ್ದಾರೆ. ಆದರೆ ಯಾವ ಪತ್ರಕರ್ತರೂ ಅವರನ್ನು ನಿಮಗೆ ಇಷ್ಟು ಶಕ್ತಿ ಎಲ್ಲಿಂದ ಬರುತ್ತದೆ ಎಂದು ಕೇಳಿದ್ದಿಲ್ಲ.

ಕರ್ನಾಟಕದಿಂದ ಬಂದ ನಾಯಕ ಖರ್ಗೆಯವರು ಉತ್ತರ ಪ್ರದೇಶದಲ್ಲಿ ದಖನಿ ಹಿಂದಿಯಲ್ಲಿ ಮಾತನಾಡುತ್ತ, ಮೋದಿ ಸುಳ್ಳುಗಳಿಗೆ ಪ್ರತ್ಯುತ್ತರ ಕೊಡುತ್ತಿರುವ ಬಗ್ಗೆ ಅವರಲ್ಲೊಬ್ಬರೂ ಗಮನ ಹರಿಸುವುದೇ ಇಲ್ಲ.

ಉತ್ತರ ಪ್ರದೇಶದ ಮಹಾರಾಜಾ ಗಂಜ್‌ನಲ್ಲಿ ಮಾತನಾಡುವಾಗ ಖರ್ಗೆ ಅದೆಷ್ಟು ತಯಾರಿ ಮಾಡಿಕೊಂಡು ಹೋಗಿದ್ದರು ಎಂಬುದನ್ನು ಗಮನಿಸಿದರೆ, ಖರ್ಗೆ ಸೀನಿಯರ್ ರಾಜಕಾರಣಿ ಎಂಬುದಕ್ಕಿಂತ ಹೆಚ್ಚಾಗಿ ಸೀರಿಯಸ್ ರಾಜಕಾರಣಿ ಎಂಬುದು ಎದ್ದುಕಾಣುತ್ತದೆ.

ಬರೆದ ಭಾಷಣವೇ ಕೈಯಲ್ಲಿದ್ದರೂ, ಖರ್ಗೆ ಅದನ್ನು ಬರೀ ಓದಿ ಒಪ್ಪಿಸುವ ಕೆಲಸ ಮಾಡಲಿಲ್ಲ. ಅವರಿಗೆ ಜನರೊಂದಿಗೆ ಮಾತನಾಡುವ ರೀತಿಯಲ್ಲಿಯೇ ಭಾಷಣ ಮಾಡುವ ಶೈಲಿ ಕರಗತ.

ನೆಹರೂ ಅವರ ಅತ್ಯಂತ ಸಮರ್ಥ ಸಮರ್ಥಕರೊಬ್ಬರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆಂದರೆ ಅವರು ಮಲ್ಲಿಕಾರ್ಜುನ ಖರ್ಗೆ.

ಖರ್ಗೆ ಎಷ್ಟು ಸಮರ್ಥ ನಾಯಕರೆಂಬುದಕ್ಕೆ, ಇತ್ತೀಚೆಗೆ ಬಹಿರಂಗ ಚರ್ಚೆಗಾಗಿ ಮೋದಿ ಮತ್ತು ರಾಹುಲ್ ಅವರಿಗೆ ಆಹ್ವಾನ ಬಂದಾಗ, ರಾಹುಲ್ ಅವರು ಹೇಳಿದ ಮಾತೊಂದು ಸಾಕ್ಷಿ. ತಾವು ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ಹೇಳಿದ ರಾಹುಲ್ ಅವರು ತಾವು ಮಾತ್ರವಲ್ಲ, ತಮ್ಮ ಪಕ್ಷದ ಅಧ್ಯಕ್ಷ ಖರ್ಗೆಯವರು ಕೂಡ ಚರ್ಚೆಗೆ ತಯಾರಿದ್ದಾರೆ ಎಂದು ಹೇಳಿದ್ದರು.

ಆದರೆ ಮಡಿಲ ಮೀಡಿಯಾಗಳಿಗೆ ಮಾತ್ರ ಖರ್ಗೆ ತಾಕತ್ತು ಕಾಣಿಸುವುದೇ ಇಲ್ಲ.

ಕಾಂಗ್ರೆಸ್ ಪಕ್ಷದ ವಿಚಾರ ಬಂದಾಗ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ಮಾತ್ರವೇ ಗಮನಿಸುವ ಪತ್ರಕರ್ತರು ಖರ್ಗೆಯವರನ್ನು ಗಮನಿಸುವುದೇ ಇಲ್ಲ.

ರಾಹುಲ್ ಅವರಂಥ ಕಾಂಗ್ರೆಸ್ ನಾಯಕರು ಒಂದು ವಿಚಾರವನ್ನು ಬಹಳ ಸ್ಪಷ್ಟವಾಗಿ ಹೇಳುತ್ತ ಬಂದಿದ್ದಾರೆ. ತಮ್ಮ ಹೋರಾಟ ಯಾವುದೇ ಒಬ್ಬ ವ್ಯಕ್ತಿಯ ವಿರುದ್ಧವಲ್ಲ, ಬದಲಾಗಿ ಸಿದ್ಧಾಂತದ ವಿರುದ್ಧ ಎಂಬ ಮಾತು ಅದು.

ಖರ್ಗೆ ಕೂಡ ಅದನ್ನೇ ಬಹಳ ಸ್ಪಷ್ಟವಾಗಿ ಹೇಳುತ್ತಿದ್ದಾರೆ.

ಮೋದಿಯ ವಿರುದ್ಧವಾಗಲೀ, ಆದಿತ್ಯನಾಥ್ ವಿರುದ್ಧವಾಗಲೀ, ತಮ್ಮ ಹೋರಾಟವಲ್ಲ. ವೈಯಕ್ತಿಕವಾಗಿ ಅವರ ವಿರುದ್ಧ ತಾವು ಕದನಕ್ಕಿಳಿದಿಲ್ಲ. ಇದು ಎರಡು ವಿಚಾರಧಾರೆಗಳ ನಡುವಿನ ಲಡಾಯಿಯಾಗಿದೆ ಎನ್ನುತ್ತಾರೆ ಖರ್ಗೆ.

ಬಡವರಿಗಾಗಿ, ರೈತರಿಗಾಗಿ, ಕಾರ್ಮಿಕರಿಗಾಗಿ, ದಲಿತರಿಗಾಗಿ, ಆದಿವಾಸಿಗಳಿಗಾಗಿ ಯಾವುದು ಬೇಕಾಗಿದೆಯೋ ಆ ದಾರಿಯನ್ನು ನಾವು ಮತ್ತು ನಮ್ಮ ಮೈತ್ರಿಪಕ್ಷಗಳು ಆರಿಸಿಕೊಂಡಿರುವುದಾಗಿ ಖರ್ಗೆ ಹೇಳುತ್ತಿದ್ದಾರೆ.

ಖರ್ಗೆಯವರು ಇಷ್ಟು ಖಡಕ್ ಆಗಿ ಯುಪಿಯಲ್ಲಿ ಮಾತನಾಡುತ್ತಿರುವುದನ್ನು ನೋಡಿದರೆ ಅವರು ಆಗ್ರಾದಿಂದಲೂ ಚುನಾವಣೆಗೆ ಸ್ಪರ್ಧಿಸಬಹುದಿತ್ತು ಎನ್ನಿಸುತ್ತದೆ.

ಚುನಾವಣೆ ಆರಂಭವಾಗುವುದಕ್ಕೂ ಮುಂಚಿನಿಂದಲೇ ಖರ್ಗೆ ದೇಶಾದ್ಯಂತ ತಮ್ಮ ಕೆಲಸ ಶುರು ಮಾಡಿದ್ದರು. ಖರ್ಗೆಯವರ ಶಕ್ತಿ ಅವರೊಬ್ಬ ದಲಿತ ನಾಯಕ ಎಂಬುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರೊಬ್ಬ ಅಂಬೇಡ್ಕರ್‌ವಾದಿಯಂತೆ ಮಾತ್ರವಲ್ಲ, ಗಾಂಧಿವಾದಿಯಂತೆಯೂ ಕಾಣಿಸುವ ನಾಯಕರಾಗಿದ್ದಾರೆ.

ಮೋದಿ ಎಂದೂ ಖರ್ಗೆಗೆ ಸವಾಲೆಸೆಯುವ ದುಸ್ಸಾಹಸ ಮಾಡಿಲ್ಲ. ಯಾಕೆಂದರೆ ರಾಜಕೀಯ ನಾಯಕನಾಗಿ ಖರ್ಗೆಯವರ ವ್ಯಾಪ್ತಿ ದೊಡ್ಡದಿದೆ. ಬಿಜೆಪಿಯ ಯಾರೂ ಖರ್ಗೆಯವರ ವಿರುದ್ಧ ಮಾತನಾಡುವ ಧೈರ್ಯ ಮಾಡದಿರುವುದು ಇದೇ ಕಾರಣಕ್ಕೆ. ಖರ್ಗೆ ಆಕ್ರಮಣಕಾರಿ ನಾಯಕ ಎಂಬುದು ಅವರಿಗೆಲ್ಲ ಗೊತ್ತಿದೆ.

‘‘ಹಿಂದೂ-ಮುಸ್ಲಿಮರ ವಿರುದ್ಧ ಜಗಳ ಹಚ್ಚುವುದನ್ನು ಬಿಟ್ಟರೆ ಮೋದಿ ಏನು ಮಾಡುತ್ತಾರೆ?’’ ಎಂಬ ಪ್ರಶ್ನೆಯನ್ನು ಅವರು ಯುಪಿಯಲ್ಲಿ ಜನರೆದುದು ನಿಂತು ಕೇಳಬಲ್ಲರು. ಕಾಂಗ್ರೆಸ್ ನಿಮ್ಮ ಮೀಸಲಾತಿ ಕಸಿದು ಮುಸ್ಲಿಮರಿಗೆ ನೀಡಲಿದೆ ಎಂಬ ಮೋದಿ ಸುಳ್ಳುಗಳಿಗೆ ಖರ್ಗೆ ಸಮರ್ಥವಾಗಿ ಉತ್ತರಿಸಬಲ್ಲರು.

ದಲಿತರಿಗೆ ಮೀಸಲಾತಿ ಕೊಟ್ಟಿದ್ದು ಅಂಬೇಡ್ಕರ್ ಹೊರತು ನೀವಲ್ಲ. ನೀವು ಬಿಜೆಪಿಯವರು ಕೊಡುವವರಲ್ಲ, ತೆಗೆದುಕೊಳ್ಳುವವರು. ಹಾಳು ಮಾಡುವವರು ಎಂದು ಖರ್ಗೆ ಕಟುವಾಗಿ ವಿಮರ್ಶಿಸಬಲ್ಲರು.

ಅವರ ಭಾಷಣ ಭಾವುಕತೆಯದ್ದಲ್ಲ. ಬದಲಾಗಿ ತಾರ್ಕಿಕತೆ ಮತ್ತು ಸತ್ಯವನ್ನು ಆಧರಿಸಿದ್ದು. ಅವರು ತಮಗೆ ಮತ ಹಾಕಿ ಎಂದು ಕೇಳದೆ, ಮತದಾರರ ನಡುವೆಯೂ ಪ್ರಜಾಸತ್ತೆಯ ಮೌಲ್ಯಗಳನ್ನು ಬಿತ್ತುವ ನಾಯಕ. ಯೋಚಿಸಿ ಮತ ಹಾಕಬೇಕೇ ಹೊರತು ಭಾವುಕರಾಗಿ ಮತ ಹಾಕುವುದಲ್ಲ ಎನ್ನುವ ಮೂಲಕ ಖರ್ಗೆಯವರು ತೋರಿಸುವ ಪ್ರಜಾಸತ್ತೆಯ ದಾರಿ ಮಹತ್ವದ್ದು.

ಆದರೆ ಮೋದಿ ಜನರನ್ನು ಭಾವುಕತೆಯಲ್ಲಿ ಮುಳುಗಿಸಿ ಮರುಳುಗೊಳಿಸುವುದನ್ನೇ ಮಾಡಿಕೊಂಡು ಬಂದವರು. ಯಾಕೆಂದರೆ ಅವರ ಬಳಿ ಹೇಳಿಕೊಳ್ಳುವುದಕ್ಕೆ ಸಾಧನೆಯೂ ಇಲ್ಲ, ಎದುರಿಸುವುದಕ್ಕೆ ಸತ್ಯದ ಬಲವೂ ಇಲ್ಲ.

ದಲಿತ ಸಮುದಾಯದಿಂದ ಬಂದ ಖರ್ಗೆ, ಇಷ್ಟು ದೊಡ್ಡ ಪದವಿಯವರೆಗೆ ಮುಟ್ಟುವ ಹಾದಿಯಲ್ಲಿನ ಅವರ ಸಂಘರ್ಷಗಳೇನೂ ಸಣ್ಣದಿಲ್ಲ. ಖರ್ಗೆಯವರ ಬದುಕು ಮತ್ತು ರಾಜಕೀಯ ಸಂಘರ್ಷದ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿರುವುದು ಸಾಧ್ಯವಿಲ್ಲ. ಯಾಕೆಂದರೆ ಖರ್ಗೆಯವರ ಬಗ್ಗೆ ಮೀಡಿಯಾಗಳು ಹೆಚ್ಚೇನೂ ಹೇಳುವ ಶ್ರಮ ವಹಿಸಿಯೇ ಇಲ್ಲ.

ಯುಪಿಯಲ್ಲಿ ಜನರ ಅನುಕೂಲಕ್ಕಾಗಿ ಯಾವ ಕೆಲಸ ಮಾಡಿದ್ದೀರಿ ಹೇಳಿ ಎಂದು ಮೋದಿಗೆ ಸವಾಲೆಸೆಯುವ ಗಟ್ಟಿತನವನ್ನು ಖರ್ಗೆ ತೋರಿಸುವಾಗ, ಅವರ ಸತ್ಯದ ತಾಕತ್ತು ಮತ್ತು ಮೋದಿಯ ಸುಳ್ಳುಗಳ ಪೊಳ್ಳುತನ ಸ್ಪಷ್ಷವಾಗುತ್ತದೆ.

ತಮಗೆ ಮೂವರು ಗುರುಗಳು ಎಂದು ಅಂಬೇಡ್ಕರ್ ಹೇಳುತ್ತಿದ್ದರು. ಮೊದಲನೆಯವರು ಗೌತಮ ಬುದ್ಧ, ಎರಡನೆಯವರು ಸಂತ ಕಬೀರ ಮತ್ತು ಮೂರನೆಯವರು ಮಹಾತ್ಮ ಫುಲೆ. ಈ ಮೂವರ ಮಾರ್ಗದರ್ಶನದಲ್ಲಿ ನಡೆಯುವುದಾಗಿ ಅವರು ಹೇಳುತ್ತಿದ್ದರು ಎಂಬುದನ್ನು ನೆನಪಿಸುವ ಖರ್ಗೆ, ಯಾರ್ಯಾರದೋ ಮರ್ಜಿಗೆ ಮಣಿಯಬೇಕಾದ ಅಗತ್ಯವಿಲ್ಲ ಎಂಬುದನ್ನು ಸೂಚಿಸುತ್ತಾರೆ.

ಖರ್ಗೆ ಖಂಡಿತವಾಗಿಯೂ ವಿಭಿನ್ನ ರೀತಿಯ ಮುತ್ಸದ್ದಿ ನಾಯಕ. ಅವರು ಯಾರನ್ನೋ ಹಿಂಬಾಲಿಸುವ ನಾಯಕ ಅಲ್ಲ. ಸುದ್ದಿಗೋಷ್ಠಿಯಲ್ಲಿ ಮುಕ್ತವಾಗಿ ಮಾತಾಡುವುದಕ್ಕೆ ಹಿಂಜರಿಯುವ ಪಕ್ಷಾಧ್ಯಕ್ಷ ಅಲ್ಲ. ಆದರೆ ಚುನಾವಣೆ ಶುರುವಾದ ಮೇಲೆ ಬಿಜೆಪಿ ಅಧ್ಯಕ್ಷ ನಡ್ಡಾ ಅದೆಷ್ಟು ಸುದ್ದಿಗೋಷ್ಠಿ ಮಾಡಿದ್ದಾರೆ?

ಕಾಂಗ್ರೆಸ್‌ನಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ನಂತರ ದೇಶಾದ್ಯಂತ ಪ್ರಚಾರದಲ್ಲಿ ತೊಡಗಿರುವ ಒಬ್ಬನೇ ನಾಯಕ ಮಲ್ಲಿಕಾರ್ಜುನ ಖರ್ಗೆ. ದಕ್ಷಿಣ ಭಾರತದ ನಾಯಕನೊಬ್ಬ ಕಾಂಗ್ರೆಸ್ ಅಧ್ಯಕ್ಷರಾಗಿ ಕೇರಳದಲ್ಲೂ ಮಾತನಾಡುತ್ತಾರೆ, ಯುಪಿಯ ಮಹಾರಾಜ್ ಗಂಜ್‌ಲ್ಲಿಯೂ ಮಾತನಾಡುತ್ತಾರೆ. ಗುಜರಾತ್‌ನಲ್ಲೂ ಮಾತನಾಡುತ್ತಾರೆ. ಮಹಾರಾಷ್ಟ್ರದಲ್ಲೂ ಮಾತನಾಡುತ್ತಾರೆ. ಬಿಹಾರದಲ್ಲೂ ಮಾತನಾಡುತ್ತಾರೆ. ಬಂಗಾಳ, ಒಡಿಶಾಗಳಲ್ಲಿಯೂ ಮಾತನಾಡುತ್ತಾರೆ.

ಯುಪಿ ಜನರಿಗೆ ಖರ್ಗೆ ಅಷ್ಟಾಗಿ ಗೊತ್ತಿರದೇ ಇರಬಹುದು. ಆದರೆ ಖರ್ಗೆ ಮಾತುಗಳು, ಅವರು ಎತ್ತಿದ ಪ್ರಶ್ನೆಗಳು ಬಹುಕಾಲ ಅವರನ್ನೇ ಕಾಡದೇ ಇರಲು ಸಾಧ್ಯವಿಲ್ಲ.

ಮೀಡಿಯಾಗಳ ಮೌನವನ್ನೋ ಕಡೆಗಣನೆಯನ್ನೋ ಮೀರಿಯೂ ನೆಲದಿಂದ ಬೆಳೆದು ನಿಂತ ಜನ ನಾಯಕ ಮಲ್ಲಿಕಾರ್ಜುನ ಖರ್ಗೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿ.ಎನ್. ಉಮೇಶ್

contributor

Similar News