ಹೊಸ ಸರಕಾರ ಕೃಷಿ ಕ್ಷೇತ್ರದಲ್ಲಿ ನೈಜ ಕಾಳಜಿ ವಹಿಸೀತೇ?

Update: 2024-06-22 06:28 GMT

ಮೂರನೇ ಬಾರಿಗೆ ಪ್ರಧಾನಿಯಾದ ಬಳಿಕ ತಮ್ಮ ಕ್ಷೇತ್ರ ವಾರಣಾಸಿಗೆ ಮೋದಿ ನೀಡಿದ ಮೊದಲ ಭೇಟಿಯನ್ನು ಅಬ್ಬರವೇರುವಂತೆ ಮಾಡಿರುವುದು ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ- ಕಿಸಾನ್) ಅಡಿ ದೇಶದ ಒಟ್ಟು 9.26 ಕೋಟಿ ರೈತರಿಗೆ ಮೊನ್ನೆ ಒಟ್ಟು 20 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ವಾರಣಾಸಿಯಲ್ಲಿ ಜೂನ್ 18ರಂದು ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ ಕಾರ್ಯಕ್ರಮದಲ್ಲಿ ಮೋದಿ ಈ ಹಣ ಬಿಡುಗಡೆ ಮಾಡುವ ಮೂಲಕ ಮಿಂಚಿದ್ದಾರೆ.

ಈ ಯೋಜನೆಯನ್ನು 2019ರ ಮಧ್ಯಂತರ ಬಜೆಟ್‌ನಲ್ಲಿ ಶುರು ಮಾಡಲಾಯಿತು. ಇದರ ಅಡಿಯಲ್ಲಿ ರೈತರಿಗೆ ವರ್ಷಕ್ಕೆ 6,000 ರೂ. ನಗದು ವರ್ಗಾವಣೆ ಮಾಡಲಾಗುತ್ತದೆ. ಇದನ್ನು ತಲಾ 2,000 ರೂ.ಗಳಂತೆ ಮೂರು ಸಮಾನ ಕಂತುಗಳಲ್ಲಿ ವಿತರಿಸಲಾಗುತ್ತದೆ. ಅಂತಹ 16 ಕಂತುಗಳನ್ನು ಈಗಾಗಲೇ ಪಾವತಿಸಲಾಗಿತ್ತು. ಈಗ ಬಿಡುಗಡೆಯಾಗಿರುವುದು 17ನೇ ಕಂತು.

ಹಿಂದಿನ ಎರಡು ಅವಧಿಗಳಲ್ಲಿ ಮೋದಿ ಸರಕಾರ ರೈತರಿಗಾಗಿ ಮಾಡಿದ್ದಾದರೂ ಏನು ಎಂಬ ಪ್ರಶ್ನೆ ಇದ್ದೇ ಇದೆ. ಈ ಸಲದ ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿಯೂ ರೈತರಿಗಾಗಿ ಬಿಜೆಪಿ ಹೊಸ ಯಾವ ಭರವಸೆಯನ್ನೂ ನೀಡಿರಲಿಲ್ಲ. ಅಷ್ಟು ಮಾತ್ರವಲ್ಲ, ಈ ಹಿಂದಿನ ರೈತರ ಆದಾಯ ಡಬಲ್ ಭರವಸೆಯನ್ನೂ ಈ ಬಾರಿ ಪ್ರಣಾಳಿಕೆಯಿಂದ ತೆಗೆಯಲಾಗಿತ್ತು.

ಕಳೆದ ಕೆಲವು ವರ್ಷಗಳಿಂದ ರೈತರು ತಮ್ಮ ಕಷ್ಟವನ್ನು ಸತತವಾಗಿ ಹೇಳಿಕೊಳ್ಳುತ್ತಲೇ ಬಂದಿದ್ದಾರೆ. ತಮಗೆ ನ್ಯಾಯಯುತವಾಗಿ ಸಲ್ಲಬೇಕಿರುವುದನ್ನು ಕೇಳುವುದಕ್ಕಾಗಿ ರೈತರು ಮತ್ತೆ ಮತ್ತೆ ಬೀದಿಗೆ ಇಳಿದಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಅಂದರೆ ಎಂಎಸ್‌ಪಿ ಖಾತರಿಗಾಗಿ ರೈತರ ಬೇಡಿಕೆಗಳ ಬಗ್ಗೆಯೂ ಹಿಂದಿನ ಅವಧಿಯಲ್ಲಿ ಮೋದಿ ಸರಕಾರ ಮೌನವಾಗಿತ್ತು. ಬಿಜೆಪಿ ಪ್ರಣಾಳಿಕೆಯಲ್ಲಿ ಕೂಡ ಅದರ ಬಗ್ಗೆ ಮೌನ ವಹಿಸಲಾಗಿತ್ತು.

ಚುನಾವಣಾ ಪ್ರಚಾರದಲ್ಲಿಯೂ ಬಿಜೆಪಿಯಾಗಲೀ ಮೋದಿಯಾಗಲೀ ರೈತರ ಯೋಗಕ್ಷೇಮದ ವಿಷಯವನ್ನೇ ಪ್ರಸ್ತಾಪಿಸಿರಲಿಲ್ಲ.

‘ಮೋದಿ ಕಿ ಗ್ಯಾರಂಟಿ’ ಎಂದೆಲ್ಲ ಅಬ್ಬರ ಮಾಡುತ್ತಿದ್ದ ಬಿಜೆಪಿ ಈಗ ಹಾಗೆ ಹೇಳಲಾರದ ಸ್ಥಿತಿಯಲ್ಲಿದೆ.

ಈ ಸಲದ್ದು ಬಿಜೆಪಿ ಸರಕಾರವೂ ಅಲ್ಲ, ಮೋದಿ ಸರಕಾರವೂ ಅಲ್ಲ. ಇದು ಪಕ್ಕಾ ಎನ್‌ಡಿಎ ಸರಕಾರ.

ಹೀಗಾಗಿ ಮೋದಿ ಕಿ ಗ್ಯಾರಂಟಿ ಎನ್ನುವುದು ಹಿಂದೆ ಸರಿದಿರುವ ಹೊತ್ತಿನಲ್ಲಿ, ಬಹುಮತ ಸಿಗದಿದ್ದರೂ, ಜನರಿಗಾಗಿ ಮೋದಿ ದೊಡ್ಡ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಬಿಂಬಿಸುವ ಯತ್ನವೊಂದು ನಾಜೂಕಾಗಿ ನಡೆದಿರುವ ಹಾಗೆ ಕಾಣಿಸುತ್ತಿದೆ.

ಮತ್ತೆ ಪ್ರಧಾನಿಯಾದ ಬಳಿಕ ವಾರಣಾಸಿಗೆ ಮೋದಿ ನೀಡಿದ ಮೊದಲ ಭೇಟಿಯನ್ನು ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ ಸಮ್ಮೇಳನವಾಗಿ ರೂಪಿಸಿದ್ದರ ಹಿಂದೆ ಇರುವುದು ಇದೇ ತಂತ್ರಗಾರಿಕೆ.

ಮೊನ್ನೆ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್‌ಗೆ ಮೊದಲು ಪಿಎಂ-ಕಿಸಾನ್ ಯೋಜನೆಯಡಿ ರೈತರಿಗೆ ವರ್ಗಾವಣೆಯಾಗುವ ಹಣದ ಮೊತ್ತ ಹೆಚ್ಚಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಹಾಗೇನೂ ಆಗಲಿಲ್ಲ.ಯೋಜನೆ ಶುರುವಾಗಿದ್ದಾಗ ಇದ್ದಷ್ಟೇ ಮೊತ್ತವನ್ನು ಮುಂದುವರಿಸಲಾಗಿದೆ. ಅಷ್ಟನ್ನೇ ಬಿಡುಗಡೆ ಮಾಡಲಾಗುತ್ತಿದೆ.

ಆದರೆ ಈ ಯೋಜನೆಯೇ ಹೊಸದೇನೋ ಎಂದು ಅನ್ನಿಸುವ ಹಾಗೆ ಅಬ್ಬರದ ಪ್ರಚಾರದೊಂದಿಗೆ ಅದ್ದೂರಿಯಾಗಿ ವಿತರಿಸುವುದು ನಡೆಯುತ್ತಿದೆ.

ಈ ಯೋಜನೆ 2019ರಲ್ಲಿ ಪ್ರಾರಂಭವಾದಾಗ ಸ್ವಲ್ಪಮಟ್ಟಿಗೆ ಚರ್ಚೆಯಾಗಿತ್ತು. ಕೃಷಿಯಲ್ಲಿನ ಬಿಕ್ಕಟ್ಟಿಗೆ ಇದು ಸಮರ್ಪಕ ಪರಿಹಾರವೇನಲ್ಲ, ಸೂಕ್ತವೂ ಅಲ್ಲ ಎಂಬ ಮಾತುಗಳು ಆಗ ಕೇಳಿಬಂದಿದ್ದವು.

ಪ್ರತೀ ರೈತನಿಗೆ 6,000 ರೂ. ನಗದು ವರ್ಗಾಯಿಸುವ ಈ ಯೋಜನೆ ರೈತರ ಕಷ್ಟ ತೀರಿಸುವ ಮತ್ತು ಅವರನ್ನು ಸಾಲದ ಅಪಾಯದಿಂದ ಪಾರು ಮಾಡುವ ನಿಟ್ಟಿನಲ್ಲಿ ತೀರಾ ಸಣ್ಣ ಮೊತ್ತ.

ಕೃಷಿ ವಲಯದಲ್ಲಿ ಗಮನಿಸಲೇಬೇಕಿರುವ ಇನ್ನೂ ಹಲವು ಬಿಕ್ಕಟ್ಟುಗಳಿವೆ. ಜನಸಂಖ್ಯೆಯ ಶೇ.45ಕ್ಕಿಂತ ಹೆಚ್ಚು ಜನರು ಇನ್ನೂ ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ ಕಳೆದ ದಶಕದಲ್ಲಿ ಒಟ್ಟು ಖರ್ಚು ಮತ್ತು ಜಿಡಿಪಿ ಅನುಪಾತದಲ್ಲಿ ಕೃಷಿಯಲ್ಲಿನ ಸಾರ್ವಜನಿಕ ಹೂಡಿಕೆ ಕಡಿಮೆಯಾಗುತ್ತಿದೆ. ಕೃಷಿ ಕ್ಷೇತ್ರ ಪ್ರತೀ ವರ್ಷವೂ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಹವಾಮಾನ ಬದಲಾವಣೆ ಸಂಬಂಧಿತ ಆಪತ್ತುಗಳು ಕೂಡ ರೈತರನ್ನು ಕಾಡುತ್ತಿವೆ.

ಈ ಎಲ್ಲ ಬಿಕ್ಕಟ್ಟುಗಳ ನಡುವೆ ಸರಕಾರ ಅಬ್ಬರ ತೋರಿಸುತ್ತ ಮಾಡುತ್ತಿರುವುದು ತೀರಾ ಸಣ್ಣ ಪ್ರಯತ್ನ ಮಾತ್ರ ಎಂಬುದು ವಾಸ್ತವ.

ರೈತರ ಸುದೀರ್ಘ ಪ್ರತಿಭಟನೆಯ ಬಳಿಕ ಮೋದಿ ಸರಕಾರ ಮೂರು ಹೊಸ ಕೃಷಿ ಮಸೂದೆಗಳನ್ನೇನೋ ಹಿಂದೆಗೆದುಕೊಂಡಿತ್ತು. ಆದರೆ ರೈತರ ಪ್ರತಿಭಟನೆಗಳ ಹಿಂದಿನ ಕಳವಳ ಮತ್ತು ಕಳಕಳಿಗೆ ಇವತ್ತಿಗೂ ಸರಿಯಾದ ಸ್ಪಂದನೆ ಮತ್ತು ಪರಿಹಾರ ಮೋದಿ ಸರಕಾರದಿಂದ ದೊರೆತಿಲ್ಲ.

ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ, ಕೃಷಿಯಲ್ಲಿ ಹೆಚ್ಚಿದ ಹೂಡಿಕೆ, ಬೆಳೆ ವೈವಿಧ್ಯೀಕರಣ, ಒಳಹರಿವು ಮತ್ತು ಸಾಲದ ಅವಕಾಶಗಳು, ಬೆಳೆ ವಿಮೆ, ಆರ್‌ಡಿ ಮತ್ತು ವಿಸ್ತರಣಾ ಸೇವೆಗಳಲ್ಲಿ ಸುಧಾರಣೆಗಳು, ತಾತ್ಕಾಲಿಕ ವ್ಯಾಪಾರ ನೀತಿಗಳು, ಡಬ್ಲ್ಯಟಿಒ ನಿರ್ಬಂಧಗಳು, ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆ ಕಡಿತ, ಮಾರುಕಟ್ಟೆಗಳ ವಿಸ್ತರಣೆ ಹೀಗೆ ಮಾಡಲೇಬೇಕಿರುವುದರ ಪಟ್ಟಿ ಸಣ್ಣದಿಲ್ಲ. ಆದರೆ, ಆಗಿರುವುದೇನು ಎಂಬ ಪ್ರಶ್ನೆಗೆ ಯಾರೂ ಮಹತ್ವ ಕೊಡುತ್ತಲೇ ಇಲ್ಲ.

ಇದೇ ವಾರಣಾಸಿ ಕಾರ್ಯಕ್ರಮದಲ್ಲಿ ‘ಕೃಷಿ ಸಖಿ’ ಹೆಸರಿನ 30 ಸಾವಿರಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳಿಗೂ ತರಬೇತಿ ಪ್ರಮಾಣ ಪತ್ರ ವಿತರಣೆ ನಡೆಯಿತು. ದೇಶಾದ್ಯಂತ ಇರುವ ಕೃಷಿ ಸಹಾಯಕ ಮಹಿಳೆಯರ ಗುಂಪುಗಳಿಗೆ ನೀಡಲಾಗುವ ತರಬೇತಿ ಪ್ರಮಾಣ ಪತ್ರ ಇದಾಗಿದೆ.

ಇಲ್ಲಿ ಮಹಿಳೆಯರನ್ನು ಸ್ವಯಂಸೇವಕರು ಅಥವಾ ಅರೆ ಕೆಲಸಗಾರರು ಎಂದೇ ನೋಡಲಾಗುತ್ತದೆ. ಅವರಿಗೆ ಕಡಿಮೆ ಸಂಬಳ ಮತ್ತವರು ಅಸಂಘಟಿತ ವಲಯದವರಾಗಿಯೇ ಉಳಿದುಬಿಡುತ್ತಾರೆ. ರೈತರಿಗಾಗಿ ನಡೆಯುವ ಕಾರ್ಯಕ್ರಮದಲ್ಲೂ ಮಹಿಳೆಯರನ್ನು ರೈತರಂತೆ ಪರಿಗಣಿಸದೆ, ಸ್ವಯಂಸೇವಕರನ್ನಾಗಿ ಮಾಡಿರುವುದು ನಿಜಕ್ಕೂ ವಿಪರ್ಯಾಸ.

ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆ ಅಂದರೆ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ (ಪಿಎಲ್‌ಎಫ್‌ಎಸ್) 2022-23ರ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕೆಲಸ ಮಾಡುವವರಲ್ಲಿ ಶೇ.75ರಷ್ಟು ಮಹಿಳೆಯರು ಕೃಷಿ ಕ್ಷೇತ್ರವೊಂದರಲ್ಲಿಯೇ ಇದ್ದಾರೆ.ಅವರಲ್ಲಿ ಶೇ.52ರಷ್ಟು ಗ್ರಾಮೀಣ ಮಹಿಳೆಯರು ಕುಟುಂಬದ ಕೆಲಸದಲ್ಲಿ ಸಹಾಯಕರು ಎಂದು ಪರಿಗಣಿಸಲ್ಪಡುವವರಾಗಿದ್ದಾರೆ.

ಭೂಮಾಲಕತ್ವ ಅತ್ಯಂತ ಕರಾಳವಾಗಿದೆ ಎಂಬುದು ಗೊತ್ತೇ ಇರುವ ವಿಚಾರ. ಈ ಸ್ಥಿತಿಯಲ್ಲಿ ಕೃಷಿ ಕೆಲಸಗಳ ದೊಡ್ಡ ಹೊರೆಯನ್ನು ಹೊರುವವರು ಮಹಿಳೆಯರು. ಹೀಗಿದ್ದೂ ಅವರನ್ನು ರೈತರು ಎಂದು ಪರಿಗಣಿಸಲಾಗುವುದಿಲ್ಲ. ಪಿಎಂ-ಕಿಸಾನ್ ಅಡಿಯಲ್ಲಿಯೂ ಮಹಿಳೆಯರ ಈ ಹಣೆಬರಹ ಬದಲಾಗಿಲ್ಲ. ಈ ವರ್ಷದ ಆರಂಭದಲ್ಲಿ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿದ್ದ ಡೇಟಾ ಪ್ರಕಾರ, ಈ ಯೋಜನೆಯ ಫಲಾನುಭವಿಗಳಲ್ಲಿ ಮಹಿಳೆಯರ ಪಾಲು ಶೇ.25ಕ್ಕಿಂತ ಕಡಿಮೆ.

ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದ ಕೆಲವು ವಿಶ್ಲೇಷಣೆಗಳ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಕಳೆದುಕೊಂಡಿದೆ.

ಗ್ರಾಮೀಣ ಪ್ರದೇಶದ ಅನೇಕ ತೊಂದರೆಗಳು, ನಿಶ್ಚಿತ ಆದಾಯ ಇಲ್ಲದ ಸ್ಥಿತಿ, ಕೃಷಿ ಆದಾಯ ತೀರಾ ಕಳಪೆಯಾಗಿರುವುದು ಮತ್ತು ಹೆಚ್ಚುತ್ತಿರುವ ನಿರುದ್ಯೋಗ - ಇವೆಲ್ಲದರ ಪರಿಣಾಮ ಅದೆಂದು ಹೇಳಲಾಗುತ್ತಿದೆ.

ಇಂತಹದೊಂದು ಜನಾದೇಶದಿಂದ ಬಿಜೆಪಿಯೇನಾದರೂ ಪಾಠ ಕಲಿತಿದ್ದರೆ, ಗ್ರಾಮೀಣ ಪ್ರದೇಶಗಳ ಕಡೆ, ಅದರಲ್ಲೂ ಕೃಷಿ ಕ್ಷೇತ್ರದ ಕಡೆಗೆ ಆದ್ಯತೆ ಮೇರೆಗೆ ಅದು ಈಗ ಗಮನ ಹರಿಸಬೇಕು. ಅದನ್ನು ಬಿಟ್ಟು, ಯಾವುದಕ್ಕೂ ಆಗದ ಇಂತಹ ಅಬ್ಬರಗಳಿಂದ ಏನೇನೂ ಪ್ರಯೋಜನ ಆಗದು.

10 ವರ್ಷಗಳನ್ನು ಅಬ್ಬರ ಮತ್ತು ಸುಳ್ಳುಗಳಲ್ಲಿಯೇ ಕಳೆದು, ಈಗ ಅತಂತ್ರ ಎನ್ನುವಂಥ ಸ್ಥಿತಿಯಲ್ಲಿರುವ ಕೇಂದ್ರ ಸರಕಾರ ಇನ್ನಾದರೂ ಈ ದೇಶದ ಅನ್ನದಾತನ ಬಗ್ಗೆ ನಿಜವಾದ ಕಾಳಜಿಯನ್ನು ತೋರಿಸಬೇಕಿದೆ, ಶೋಕಿಯನ್ನು ಬಿಡಬೇಕಾಗಿದೆ.

ಕೃಪೆ: thewire.in

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ದೀಪಾ ಸಿನ್ಹಾ

contributor

Similar News