ಪ್ಯಾರಿಸ್ ಒಲಿಂಪಿಕ್ಸ್ | ಮಹಿಳೆಯರ ಟಿಟಿ : 16ರ ಸುತ್ತು ಪ್ರವೇಶಿಸಿ ದಾಖಲೆ ನಿರ್ಮಿಸಿದ ಮಣಿಕಾ
ಹೊಸದಿಲ್ಲಿ: ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ ಟೇಬಲ್ ಟೆನ್ನಿಸ್ ನಲ್ಲಿ ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಭಾರತದ ಮಣಿಕಾ ಬಾತ್ರಾ ಇತಿಹಾಸ ಸೃಷ್ಟಿಸಿದ್ದಾರೆ.
2018ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಬಾತ್ರಾ, ಸೋಮವಾರ ನಡೆದ ಪಂದ್ಯದಲ್ಲಿ ತಮಗಿಂತ ಅಧಿಕ ರ‍್ಯಾಂಕಿಂಗ್ ಹೊಂದಿರುವ ಫ್ರಾನ್ಸ್ ಆಟಗಾರ್ತಿ ಪ್ಯಾಟ್ರಿಕಾ ಪಾವಡೆ ಅವರ ವಿರುದ್ಧ 4-0 ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ, ಅಂತಿಮ 16ರ ಸುತ್ತು ತಲುಪಿದ ಭಾರತದ ಮೊಟ್ಟಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
19 ವರ್ಷ ವಯಸ್ಸಿನ ಪಾವಡೆ ಪೋಷಕರು 2003ರಲ್ಲಿ ಪುದುಚೇರಿಯಿಂದ ವಲಸೆ ಬಂದು ಫ್ರಾನ್ಸ್ ನಲ್ಲಿ ನೆಲೆಸಿದ್ದಾರೆ. ಮಣಿಕಾ ಅವರು ಪಾವಡೆ ವಿರುದ್ಧ 11-9, 11-6, 11-9, 11-7 ಅಂತರದ ಜಯ ಸಾಧಿಸಿದರು.
ಟೋಕಿಯೊ ಒಲಿಂಪಿಕ್ಸ್ ನ ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಅಚಂತಾ ಶರತ್ ಕಮಲ್ ಅಂತಿಮ 32ರ ಸುತ್ತು ತಲುಪಿದ್ದು ಈವರೆಗಿನ ದಾಖಲೆಯಾಗಿತ್ತು. ರ್ಯಾಂಕಿಂಗ್ ನಲ್ಲಿ ಎದುರಾಳಿಗಿಂತ 10 ಸ್ಥಾನಗಳಷ್ಟು ಹಿಂದಿರುವ 28ನೇ ರ‍್ಯಾಂಕಿಂಗ್ ನ ಮಣಿಕಾ ಮುಂದಿನ ಹಂತದ ಸ್ಥಾನವನ್ನು ಖಾತರಿಪಡಿಸಿಕೊಳ್ಳುವ ಹೋರಾಟದಲ್ಲಿ ಕೌಶಲ ಮತ್ತು ಬದ್ಧತೆಯನ್ನು ಪ್ರದರ್ಶಿಸಿ ಗಮನ ಸೆಳೆದರು.
ಮಣಿಕಾ ಕಳೆದ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಅಂತಿಮ 32ರ ಸುತ್ತು ತಲುಪಿ ಈ ಸಾಧನೆ ಮಾಡಿದ ಮೊದಲ ಮಹಿಳಾ ಟಿಟಿ ಪಟು ಎನಿಸಿಕೊಂಡಿದ್ದರು. ಇದೀಗ ತಮ್ಮ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ.