ಕರ್ನಾಟಕ ವಿಧಾನಮಂಡಲಕ್ಕೊಂದು ಬಹಿರಂಗ ಪತ್ರ: ಒಂದು ‘ಸುಭಗ ಪತ್ತೆ’ ಆಯೋಗ ರಚನೆಯಾಗಲಿ
‘ಸುಭಗ ಪತ್ತೆ ಆಯೋಗ’ ರಚನೆ ಆದ ಬಳಿಕ, ನಾಡಿನ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳು ಮೂರರಲ್ಲೂ ಯಾರಾದರೂ ಸುಭಗರು ಉಳಿದುಕೊಂಡಿದ್ದಾರೆಯೇ ಎಂದು ಕಂಡುಕೊಳ್ಳುವುದು ಸಾಧ್ಯವಾಗಬಹುದು ಎಂಬ ಒಂದು ಕ್ಷೀಣ ಆಸೆ ನಾಡಿಗೆ ಇದೆ. ದುರದೃಷ್ಟಕ್ಕೆ ಯಾರೂ ಉಳಿದಿರದಿದ್ದರೆ, ನಮ್ಮ ಸಮಸ್ಯೆಯು ಕಾರಣ ಗೊತ್ತಿಲ್ಲದ ‘ಐಡಿಯೊಪಾಥಿಕ್’ ಕಾಯಿಲೆ ಆಗಿ ಉಳಿದುಬಿಡುತ್ತದೆ. ಅದಕ್ಕೆ ಚಿಕಿತ್ಸೆ ಬೇರೆ ಇರುತ್ತದೆ.
ಕರ್ನಾಟಕ ವಿಧಾನಮಂಡಲದ ಮಾನ್ಯ ಸದಸ್ಯರೆಲ್ಲರನ್ನೂ ಉದ್ದೇಶಿಸಿ ಈ ಆಗ್ರಹ ಪತ್ರ:
ಮಾನ್ಯ ಜನಪ್ರತಿನಿಧಿಗಳೇ, ತಾವೀಗ ವಿಧಾನಮಂಡಲ ಅಧಿವೇಶನದ ನಡುವಿನಲ್ಲಿದ್ದೀರಿ. ತಮ್ಮಲ್ಲಿ ಒಂದು ಕೋರಿಕೆ ಇದೆ. ರಾಜ್ಯದ ಜನತೆಯ ಪರವಾಗಿ ತಾವೆಲ್ಲರೂ ಒಂದು ಸರ್ವಾನುಮತದ ನಿರ್ಣಯವನ್ನು ಸದನದಲ್ಲಿ ಮಂಡಿಸಿ, ಈ ಹದಿನಾರನೇ ಅಸೆಂಬ್ಲಿಯ ನಾಲ್ಕನೇ ಅಧಿವೇಶನ ಮುಗಿಯುವ ಮುನ್ನ ಅದಕ್ಕೆ ಸದನದ ಅಂಗೀಕಾರ ಪಡೆದುಕೊಳ್ಳಬೇಕು.
ಸದನದ ನಡಾವಳಿಗಳ ನಿಯಮ 146ರ ಅನ್ವಯ ವಿಧಾನಸಭೆ ನಿಮಗೆ ಈ ರೀತಿಯ ನಿರ್ಣಯವನ್ನು ಮಂಡಿಸುವ ಅಧಿಕಾರವನ್ನು ಕೊಡುತ್ತದೆ. ನೀವು ತೆಗೆದುಕೊಳ್ಳಬೇಕಾಗಿರುವ ನಿರ್ಣಯದ ಪಠ್ಯ ಈ ಕೆಳಗಿನಂತಿರಲಿ:
‘‘ಈ ಸದನವು ಕರ್ನಾಟಕ ರಾಜ್ಯದ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗಗಳಲ್ಲಿ ಭ್ರಷ್ಟಾಚಾರ ರಹಿತ, ಪ್ರಾಮಾಣಿಕ ಮತ್ತು ದಕ್ಷ ವ್ಯಕ್ತಿಗಳು ಯಾರಾದರೂ ಉಳಿದಿದ್ದಾರೆಯೇ ಎಂದು ಪತ್ತೆ ಹಚ್ಚಲು ಒಂದು ‘ಸುಭಗ ಪತ್ತೆ ಆಯೋಗ’ ರಚನೆ ಮಾಡಲು ತೀರ್ಮಾನಿಸಿದೆ. ರಚನೆಗೊಂಡ ಒಂದು ವರ್ಷದಲ್ಲಿ ಈ ಆಯೋಗವು ಸದನಕ್ಕೆ ತನ್ನ ವರದಿಯನ್ನು ಸಲ್ಲಿಸತಕ್ಕದ್ದು ಎಂದು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.’’
ತಾವು ನಾಡಿನ ಜನತೆಗೆ ಉತ್ತರದಾಯಿ ಜನಪ್ರತಿನಿಧಿ ಹೌದಾಗಿದ್ದಲ್ಲಿ, ಈ ನಿರ್ಣಯವನ್ನು ಸದನದಲ್ಲಿ ತಾವೆಲ್ಲ ಸರ್ವಾನುಮತದಿಂದ ಅಂಗೀಕರಿಸುವಿರಿ ಎಂಬ ಭರವಸೆ ಈ ನಾಡಿನ ಜನತೆಗೆ ಇದೆ. ಅದನ್ನು ನೀವು ಹುಸಿಗೊಳಿಸುವುದಿಲ್ಲ ಎಂದು ಭಾವಿಸುತ್ತೇನೆ.
***
ಯಾಕೆ ಈ ಆಗ್ರಹ ಪತ್ರ?
ಕಳೆದ ಹಲವು ವರ್ಷಗಳಿಂದ, ನಾಡಿನ ಜನರ ಸಮಸ್ಯೆಗಳನ್ನು ಕಾಳಜಿಯಿಂದ ಚರ್ಚಿಸಿ, ಅಗತ್ಯ ನೀತ್ಯಾತ್ಮಕ ತೀರ್ಮಾನಗಳನ್ನು ತೆಗೆದುಕೊಳ್ಳುವ ಗುರುತರ ಹೊಣೆ ಹೊತ್ತಿರುವ ವಿಧಾನಮಂಡಲದ ಬಹುಪಾಲು ಸಮಯ ಒಂದು ಬೃಹನ್ನಾಟಕದಲ್ಲಿಯೇ ಕಳೆದುಹೋಗುತ್ತಿದೆ. ಅದೇನೆಂದರೆ, ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಆಡಳಿತ ಪಕ್ಷದವರು ವಿರೋಧ ಪಕ್ಷದವರನ್ನೂ, ವಿರೋಧ ಪಕ್ಷದವರು ಆಡಳಿತ ಪಕ್ಷದವರನ್ನೂ ಭ್ರಷ್ಟ್ರರು, ಕಳ್ಳರು, ಸುಳ್ಳರು ಎಂದು ಆಪಾದಿಸುವುದು. ಅವರು ‘‘ನೀವು ಕಳ್ಳರು’’ ಎಂದರೆ, ಇವರು ‘‘ನೀವು ಅಧಿಕಾರದಲ್ಲಿದ್ದಾಗ ಇದನ್ನು ಮಾಡಿಲ್ಲವೇ?’’ ಎಂದು ತಿವಿಯುವುದು. ಗದ್ದಲದಲ್ಲಿ ಸದನ ಮುಂದೂಡುವುದು, ರಸ್ತೆಯಲ್ಲಿ ನಾಟಕ, ಕ್ಷೇತ್ರಗಳಲ್ಲಿ ನಾಟಕ, ರೆಸಾರ್ಟುಗಳಲ್ಲಿ ನಾಟಕ ಈ ಎಲ್ಲ ನಾಟಕಗಳನ್ನು ನೋಡಿ ನೋಡಿ ಸಾಕಾಗಿಬಿಟ್ಟಿದೆ. ಅಂದಹಾಗೆ, ಈ ಎಲ್ಲ ನಾಟಕಗಳೂ ಸದನದಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕೊಟ್ಟೇ ನಡೆದಿದ್ದರೂ, ಈವತ್ತಿನ ತನಕ ಈ ಹಗರಣಗಳಿಗೆ ಕಾರಣರಾಗಿರುವ ಯಾವುದೇ ಭ್ರಷ್ಟರಿಗಾಗಲೀ, ಯಾವುದೇ ನಾಡದ್ರೋಹಿಗಳಿಗಾಗಲೀ, ನೆಲದ ಕಾನೂನು ಕುಣಿಕೆ ಆದದ್ದನ್ನು ನಾಡು ಕಂಡಿಲ್ಲ. ಇಲ್ಲಿಯ ತನಕ ಬಹುತೇಕ ಯಾವುದೇ ಪ್ರಕರಣ ಅದರ ತಾರ್ಕಿಕ ಅಂತ್ಯ ಕಂಡದ್ದಿಲ್ಲ.
ನಾಡಿನ ಪ್ರಜೆಗಳಾದ ನಾವು ಮಾತ್ರ, ತಳಮಟ್ಟದಿಂದ ತುದಿಯ ತನಕ ಪ್ರತಿದಿನ, ಪ್ರತಿಕ್ಷಣ ಭ್ರಷ್ಟಾಚಾರದ ಬಿಸಿಯನ್ನು ಅನುಭವಿಸುತ್ತಲೇ ಬಂದಿದ್ದೇವೆ. ಲಂಚ, ಕಮಿಷನ್, ಪರ್ಸೆಂಟೇಜ್ ಇಲ್ಲದೆ ಯಾವ ಪಕ್ಷದ, ಯಾವುದೇ ಮಟ್ಟದ ಸರಕಾರದಲ್ಲೂ, ಯಾವುದೇ ಕೆಲಸ ಆಗುವುದಿಲ್ಲ ಎಂಬುದು ಈ ನಾಡಿನ ಆರು ಕೋಟಿ ಪ್ಲಸ್ ಜನಗಳಿಗೆ, ಪ್ರತಿಯೊಬ್ಬರಿಗೂ ಚೆನ್ನಾಗಿ ಗೊತ್ತಿರುವ ನಿತ್ಯ ಸತ್ಯ. ಹಾಗಾಗಿ, ಸದನದಿಂದ ನಾಡಿನ ಜನತೆಗೆ ನೀವು ‘ಭ್ರಷ್ಟಾಚಾರದ ಮೂಲದ ಕುರಿತು’ ತಲುಪಿಸಬೇಕಾಗಿರುವ ಯಾವುದೇ ಸಂದೇಶ ಬಾಕಿ ಉಳಿದಿಲ್ಲ.
ವಾಸ್ತವ ಹೀಗಿರುವಾಗ, ಪ್ರತೀ ಬಾರಿ ಅಧಿವೇಶನ ಸಮಾವೇಶಗೊಂಡಾಗಲೂ, ಈ ಭ್ರಷ್ಟಾಚಾರದ ಬಗ್ಗೆ ನೀವು ನಿಲುವಳಿ ಸೂಚನೆ ಮಾಡಿ, ಚರ್ಚೆ ಮಾಡಿ ಗುಡ್ಡೆ ಹಾಕುವುದು ಅಷ್ಟರಲ್ಲೇ ಇದೆ. ಸರಕಾರದ ಬಳಿ ಕೋಲ್ಡ್ ಸ್ಟೋರೇಜಿನಲ್ಲಿ ಕಳೆದ ಮೂರು-ನಾಲ್ಕು ದಶಕಗಳಲ್ಲಿ ವಿವಿಧ ಸರಕಾರಗಳು ಸ್ವೀಕರಿಸಿರುವ ತನಿಖಾ ವರದಿಗಳು, ಆಯೋಗದ ವರದಿಗಳು, ಶಿಫಾರಸುಗಳು ಇತ್ಯಾದಿ ಸದನದ ಸೊತ್ತುಗಳು- ಯಾವುದೇ ಕ್ರಮ ಇಲ್ಲದೇ ಕೊಳೆಯುತ್ತಿರುವಂತಹವು ಎಷ್ಟಿವೆ? ಅವನ್ನೆಲ್ಲ ತಾರ್ಕಿಕ ಅಂತ್ಯಕ್ಕೆ ಮುಟ್ಟಿಸದೆ, ಈಗ ನಡೆಸುತ್ತಿರುವ ಚರ್ಚೆಗಳು, ತನಿಖಾ ವರದಿಗಳೆಲ್ಲ ಕಾರ್ಯರೂಪಕ್ಕೆ ಬರುವುದು ಯಾವ ಶತಮಾನದಲ್ಲಿ? ಇದೆಲ್ಲ ಶುದ್ಧ ಸಮಯ ಹಾಳು ಮತ್ತು ಸಾರ್ವಜನಿಕ ದುಡ್ಡಿನ ಪೋಲು ಅಲ್ಲವೇ? ಈ ನಾಟಕಗಳನ್ನೆಲ್ಲ ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧತೆ ನಾಡಿನ ಜನರಲ್ಲಿ ಇಲ್ಲ ಅಂದುಕೊಂಡಿರಾ ಹೇಗೆ?!
ಹಾಗಾಗಿ ನಿಮ್ಮ ದಮ್ಮಯ್ಯ, ಈ ನಾಟಕಗಳನ್ನೆಲ್ಲ ಬಿಡಿ. ತಾವೆಲ್ಲ ಏನೆಂದು ನಾಡಿಗೆ ಗೊತ್ತಿದೆ.
ಭ್ರಷ್ಟರು ಯಾರೆಂದು ಕಂಡುಹಿಡಿಯುವುದು ಬಹಳ ಸುಲಭದ ಕೆಲಸ. ನಾಡಿನ ಜನತೆಗೆ ಈಗ ಇರುವ ಸಮಸ್ಯೆ ಅದಲ್ಲವೇ ಅಲ್ಲ. ಗ್ರಾಮ ಪಂಚಾಯತ್ ಮಟ್ಟದಲ್ಲೇ ಪ್ರತಿಯೊಬ್ಬ ಪ್ರಜೆಯೂ ‘ಭ್ರಷ್ಟರು ಯಾರು’ ಎಂದು ಗುರುತಿಸಬಲ್ಲರು. ನಾಡಿಗೆ ಈಗ ಎದುರಾಗಿರುವ ಸಮಸ್ಯೆ ಎಂದರೆ, ನಮ್ಮ ವ್ಯವಸ್ಥೆಯಲ್ಲಿ ಈಗಲೂ ಪ್ರಾಮಾಣಿಕರು ಯಾರಾದರೂ ಅಪ್ಪಿತಪ್ಪಿ ಉಳಿದುಕೊಂಡಿದ್ದಾರೆಯೇ? ಎಂಬ ಆತಂಕ. ಈ ಸಮಸ್ಯೆಯ ಪರಿಹಾರಕ್ಕಾಗಿಯೇ ವೈಜ್ಞಾನಿಕವಾದ ಹಾದಿಯೊಂದನ್ನು ನಾನು ಸೂಚಿಸುತ್ತಿರುವುದು.
ವೈದ್ಯಕೀಯ ರಂಗದಲ್ಲಿ ಡಿಫರೆನ್ಷಿಯಲ್ ಡಯಾಗ್ನೋಸಿಸ್ ಎಂಬ ವಿಧಾನವೊಂದಿದೆ. ರೋಗ ಲಕ್ಷಣಗಳು ಕಣ್ಣೆದುರೇ ಉಲ್ಬಣಿಸುತ್ತಿದ್ದು, ಅದು ಯಾವ ರೋಗವೆಂದು ಖಚಿತ ತೀರ್ಮಾನಕ್ಕೆ ಬರಲು ಸಾಧ್ಯವಾಗದಾಗ, ವೈದ್ಯರು ಡಿಫರೆನ್ಷಿಯಲ್ ಡಯಾಗ್ನೋಸಿಸ್ ಆರಂಭಿಸುತ್ತಾರೆ. ಈ ವಿಧಾನದಲ್ಲಿ ಬಂದಿರುವ ರೋಗವನ್ನು, ಕಾಣಿಸುತ್ತಿರುವ ರೋಗ ಲಕ್ಷಣಗಳನ್ನು ಆಧರಿಸಿ ‘ಯಾವ ರೋಗ ಅಲ್ಲ’ ಎಂಬುದನ್ನು ಗುರುತಿಸುತ್ತಾ ಬರಲಾಗುತ್ತದೆ.
ನಾಡಿನ ಸಾರ್ವಜನಿಕ ಬದುಕಿನಲ್ಲಿ ‘ಪ್ರಾಮಾಣಿಕತೆಗೆ’ ಇಂದು ಇಂತಹದೊಂದು ಗುರುತಿಸಲು ಕಷ್ಟವಾಗುವಂತಹ ಸ್ಥಿತಿ ಎದುರಾಗಿದ್ದು, ಅದಕ್ಕೆ ಡಿಫರೆನ್ಷಿಯಲ್ ಡಯಾಗ್ನೋಸಿಸ್ ಸರಿಯಾದ ಪರಿಹಾರ. ಇಲ್ಲಿ ಪ್ರಾಮಾಣಿಕರು ಯಾರು ಎಂದು ಅರಸುವ ಬದಲು, ಒಬ್ಬೊಬ್ಬರೇ ಭ್ರಷ್ಟರನ್ನು ರೂಲೌಟ್ ಮಾಡುತ್ತಾ ಸಾಗಬೇಕಾದ ಅಗತ್ಯ ಇದೆ. ಹೀಗೆ ಒಂದೊಂದೇ ರೂಲೌಟ್ ಆಗುತ್ತಾ ಬಂದಾಗ, ಬೇರೇನಲ್ಲದಿದ್ದರೂ ಆಯ್ಕೆಗಳು ಸೀಮಿತಗೊಳ್ಳುತ್ತವೆ. ಈ ರೂಲೌಟ್ ಮಾಡುವ ಪ್ರಕ್ರಿಯೆಗಾಗಿ, ಒಂದು ‘ಸುಭಗ ಪತ್ತೆ ಆಯೋಗ’ ರಚನೆ ಅನಿವಾರ್ಯ. ಇದಲ್ಲ ಎಂದಾದರೆ, ಪ್ರಾಮಾಣಿಕತೆ ಎಂಬುದು ಕೇವಲ ‘‘The Deaf Man Heard the Dumb Man Say That the Blind Man Saw the Lame Man Run.*’’ (ಹೆಳವ ಮನುಷ್ಯ ಓಡಿದ್ದನ್ನು ಕುರುಡು ಮನುಷ್ಯ ಕಂಡನೆಂದು ಮೂಖ ಮನುಷ್ಯ ಹೇಳಿದ್ದನ್ನು ಕಿವುಡು ಮನುಷ್ಯ ಕೇಳಿಸಿಕೊಂಡನು.) ಎಂಬ ಹೇಳಿಕೆಯಂತಾಗಿ ಉಳಿಯಲಿದೆ.
‘ಸುಭಗ ಪತ್ತೆ ಆಯೋಗ’ ರಚನೆ ಆದ ಬಳಿಕ, ನಾಡಿನ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳು ಮೂರರಲ್ಲೂ ಯಾರಾದರೂ ಸುಭಗರು ಉಳಿದುಕೊಂಡಿದ್ದಾರೆಯೇ ಎಂದು ಕಂಡುಕೊಳ್ಳುವುದು ಸಾಧ್ಯವಾಗಬಹುದು ಎಂಬ ಒಂದು ಕ್ಷೀಣ ಆಸೆ ನಾಡಿಗೆ ಇದೆ. ದುರದೃಷ್ಟಕ್ಕೆ ಯಾರೂ ಉಳಿದಿರದಿದ್ದರೆ, ನಮ್ಮ ಸಮಸ್ಯೆಯು ಕಾರಣ ಗೊತ್ತಿಲ್ಲದ ‘ಐಡಿಯೊಪಾಥಿಕ್’ ಕಾಯಿಲೆ ಆಗಿ ಉಳಿದುಬಿಡುತ್ತದೆ. ಅದಕ್ಕೆ ಚಿಕಿತ್ಸೆ ಬೇರೆ ಇರುತ್ತದೆ.
► ಇದು ರಶ್ಯನ್ ಕಲಾವಿದ ಮೈಖಲ್ ಲೆನ್ಸನ್ 1940ರಲ್ಲಿ ರಚಿಸಿದ ಒಂದು ಕಲಾಕೃತಿಯ ಶೀರ್ಷಿಕೆ.