ನಿರುದ್ಯೋಗ ನಿವಾರಣೆಗೆ ಪಕೋಡ ಸಾಲದೆಂಬ ಬಜೆಟ್ 'ಜ್ಞಾನೋದಯ

Update: 2024-07-24 07:41 GMT

ಹಣಕಾಸು ಸಚಿವರು ಮಂಗಳವಾರ ಲೋಕಸಭೆಗೆ ಮಂಡಿಸಿದ ‘ವಿಕಸಿತ ಭಾರತ’ದತ್ತ ಸಾಗುವ ಬಜೆಟ್ ಕಡೆಗೂ ನಿರುದ್ಯೋಗವು ದೇಶವನ್ನು ಕಾಡುತ್ತಿರುವ ಒಂದು ದೊಡ್ಡ ಸಮಸ್ಯೆ ಎಂದು ಗಂಭೀರವಾಗಿ ಪರಿಗಣಿಸಿದ್ದಾರೆೆ. ನಿರುದ್ಯೋಗ ನಿವಾರಣೆಗಾಗಿ ದೊಡ್ಡ ಪ್ರಮಾಣದಲ್ಲಿ (ಸುಮಾರು 4.1ಕೋಟಿ ಯುವಜನರಿಗೆ) ಉದ್ಯೋಗಕ್ಕೆ ಪ್ರೋತ್ಸಾಹ, ಉದ್ಯೋಗದಾತರಿಗೆ ಪ್ರೋತ್ಸಾಹ, ಅಲ್ಲದಿದ್ದರೆ ಉನ್ನತ ಶಿಕ್ಷಣಕ್ಕೆ ಹಾದಿ ತೆರೆಯುವ ಹಲವು ಕ್ರಮಗಳನ್ನು ಈ ಬಜೆಟ್ ಪ್ರಕಟಿಸಿದ್ದಾರೆ. ಹೆಚ್ಚಿ ನಂಶ 2024ರ ಸಾರ್ವತ್ರಿಕ ಚುನಾವಣಾ ಫಲಿತಾಂಶಗಳ ಬಲುದೊಡ್ಡ ಫಲಶ್ರುತಿ ಇದು.

ತನ್ನ ಉದಾರೀಕರಣದ ಅಜೆಂಡಾವನ್ನು ಕಾರ್ಪೊರೇಟೀಕರಣ ಎಂದು ಅರ್ಥಮಾಡಿಕೊಂಡೇ ಕಳೆದ 10 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಕೇಂದ್ರ ಸರಕಾರ, ಈ ಬಜೆಟ್ ಮೂಲಕ ಮಹತ್ವದ ಕೋರ್ಸ್ ಕರೆಕ್ಷನ್ ಒಂದನ್ನು ಮಾಡಿಕೊಂಡಿದೆ. ಅದೇನೆಂದರೆ, ಮುಂದಿನ ಹಂತದ ಉದಾರೀಕರಣದ ಕ್ರಮಗಳಿಗೆ ಸಂಬಂಧಿಸಿ, ಸರಕಾರವು ಇಲ್ಲಿಯ ತನಕ ಭಾಜಾ ಭಜಂತ್ರಿಗಳೊಂದಿಗೆ ಮಾಡುತ್ತಿದ್ದುದನ್ನು ಇನ್ನು ಮುಂದೆ, ಈ ಹಿಂದಿನ UPA ಸರಕಾರದ ಮಾದರಿಯಲ್ಲೇ ‘ಕದ್ದು-ಮುಚ್ಚಿ’ ಮಾಡಲು ಹೊರಟಂತೆ ಕಾಣಿಸುತ್ತಿದೆ. ಕೃಷಿ, ಸಹಕಾರ, ಭೂಮಿ, ವಿದ್ಯುತ್ ಇತ್ಯಾದಿಗಳಿಗೆ ಸಂಬಂಧಿಸಿ ರಕಾರ ಪ್ರಕಟಿಸಿರುವ ಕ್ರಮಗಳು ಈ ಸಾಧ್ಯತೆಗಳತ್ತ ಬೊಟ್ಟು ಮಾಡುತ್ತಿವೆ.

ತನ್ನ ಉಳಿವಿಗಾಗಿ ಎರಡು ಊರುಗೋಲುಗಳನ್ನು ಅವಲಂಬಿಸಿರುವ ಹಾಲೀ NDA ಸರಕಾರ, ಆ ಎರಡೂ ಊರುಗೋಲುಗಳನ್ನು ಬಲಪಡಿಸಲು, ಬಜೆಟ್‌ನಲ್ಲಿ ಆಂಧ್ರ ಮತ್ತು ಬಿಹಾರಗಳಿಗೆ ಭರಪೂರ ಕೊಡುಗೆಗಳನ್ನು ಬಿಡಿಬಿಡಿಯಾಗಿ ಪ್ರಕಟಿಸಿದೆ; ಈ ಕ್ರಮ, ಆ ಊರುಗೋಲುಗಳನ್ನು ಸಂತುಷ್ಟಪಡಿಸಿದೆಯೇ ಎಂಬುದು ಮುಂದಿನ ದಿನಗಳಲ್ಲಿ ಕಾಣಸಿಗಲಿದೆ.

ಈ ಮೂರು ಅಂಶಗಳು, ಈ ಬಾರಿಯ ಬಜೆಟನ್ನು ಗಮನಿಸಿದಾಗ ತಕ್ಷಣಕ್ಕೆ ಎದ್ದು ಕಾಣಿಸಿದ ಅಂಶಗಳು.

ಹೊಂಡ ಮುಚ್ಚಬೇಕೆಂಬ ಎಚ್ಚರ

ರಿಸರ್ವ್ ಬ್ಯಾಂಕು 2.11ಲಕ್ಷ ಕೋಟಿ ರೂ.ಗಳ ತನ್ನ ಲಾಭಾಂಶವನ್ನು ಭಾರತ ಸರಕಾರಕ್ಕೆ ಇತ್ತೀಚೆಗೆ ಹಸ್ತಾಂತರಿಸಿತ್ತು. ಈ ಅನಿರೀಕ್ಷಿತ ಆದಾಯದ ಹಿನ್ನೆಲೆಯಲ್ಲಿ ಸಮೃದ್ಧ ಕೊಡುಗೆಗಳ ಬಜೆಟ್ ಒಂದನ್ನು ಬಹುತೇಕ ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಬಹಳ ಎಚ್ಚರದಿಂದ ಹೆಜ್ಜೆ ಇಟ್ಟಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ (FRMB)ಯ ಅಡಿಯಲ್ಲಿ ತಲುಪಬೇಕಾಗಿರುವ ಗುರಿಯು ಗುರುತರವಾಗಿರುವುದನ್ನು ಗಮನದಲ್ಲಿ ಇರಿಸಿಕೊಂಡು, ಅತಿಯಾದ ಜನಪ್ರಿಯ ಘೋಷಣೆಗಳತ್ತ ಹೋಗಿಲ್ಲ.

FRMB ಕಾಯ್ದೆಯ ಅನ್ವಯ, 2024-25ರ ಒಳಗೆ ಸರಕಾರದ ಒಟ್ಟು ಸಾಲ GDP ೪೦ಶೇ. ನ ಒಳಗೆ ಸೀಮಿತಗೊಳ್ಳಬೇಕು. ಕೋವಿಡ್ ಹೊಡೆತದ ಕಾರಣದಿಂದಾಗಿ ಇದು ಸಾಧ್ಯವಾಗಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಸರಕಾರದ ಸಾಲದ ಪ್ರಮಾಣ, ಇನ್ನೂ GDP 56.8ಶೇ.ಗಿಂತ ಕೆಳಗೆ ಇಳಿದಿಲ್ಲ. ಅದೇ ರೀತಿ, ಕಾನೂನು ಪ್ರಕಾರ, ಸರಕಾರದ ಹಣಕಾಸು ಕೊರತೆ GDP 3%ಗಿಂತ ಕಡಿಮೆ ಇರಬೇಕು. ಸದ್ಯ ಅದು GDP 4.9ಶೇ. ನಷ್ಟಿದೆ. ಸರಕಾರ ಈ ಹಣಕಾಸು ಕೊರತೆಯನ್ನು 2025-26ರ ಹೊತ್ತಿಗಾದರೂ GDP4.5ಶೇ.ಗಿಂತ ಕೆಳಗೆ ತರುವ ಅನಿವಾರ್ಯತೆ ಹೊಂದಿದೆ. ಹಾಗಾಗಿ, ಹಣಕಾಸಿನ ಸನ್ನಿವೇಶದ ಎಚ್ಚರದೊಂದಿಗೆ ಬಜೆಟ್ ಮಂಡಿಸಲಾಗಿದೆ.

ಆನಿಗಳಿಗೆ ಹಾನಿ ಆಗದಂತೆ ಎಚ್ಚರ

ಬೇರೆಲ್ಲ ಎಚ್ಚರ ಇದ್ದರೂ, ಆರ್ಥಿಕ ಅಸಮತೋಲನ ನಿವಾರಣೆಯತ್ತ ಹೆಜ್ಜೆ ಹಾಕುವ ‘ಜ್ಞಾನೋದಯ’ ಮಾತ್ರ ಈ ಸರಕಾರಕ್ಕೆ ಇನ್ನೂ ಆಗಿರುವಂತಿಲ್ಲ. ಅಸಮತೋಲನ ನಿವಾರಣೆಗಾಗಿ ಸರಕಾರವು ಎಲ್ಲ ಆರ್ಥಿಕ ತಜ್ಞರು ಹೇಳುತ್ತಾ ಬಂದಿರುವಂತೆ, ಅತಿ ಶ್ರೀಮಂತರಿಗೆ ಈ ಬಜೆಟ್‌ನಲ್ಲಿ ಸ್ವಲ್ಪ ಹೆಚ್ಚಿನ ತೆರಿಗೆ ಹೊರೆ ವಿಧಿಸುವ ನಿರೀಕ್ಷೆ ಇತ್ತು. ಆದರೆ, ಸರಕಾರ ಅದನ್ನು ಮಾಡಿಲ್ಲ. ಈ ಬಜೆಟ್‌ನಲ್ಲೂ ಸರಕಾರ ತನ್ನ ಆದಾಯದ 19ಶೇ. (11.87ಲಕ್ಷ ಕೋಟಿ ರೂ.)ನ್ನು ಆದಾಯ ತೆರಿಗೆಯಿಂದಲೂ, 17 ಶೇ. (10.20ಲಕ್ಷ ಕೋಟಿ ರೂ.)ನ್ನು ಕಾರ್ಫೋರೇಟ್ ತೆರಿಗೆಗಳಿಂದಲೂ, 18ಶೇ. (10.62ಲಕ್ಷ ಕೋಟಿ ರೂ.)ನ್ನು GSTಯಿಂದಲೂ ಸಂಗ್ರಹಿಸುವ ಉದ್ದೇಶ ಹೊಂದಿದೆ. ಅಂದರೆ, ಕಾರ್ಪೊರೇಟ್‌ಗಳ ತೆರಿಗೆ ಹೊರೆ, ಜನಸಾಮಾನ್ಯರದಕ್ಕಿಂತ ಕಡಿಮೆ. ಇದಲ್ಲದೇ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PL), ಎಂಪ್ಲಾಯ್‌ಮೆಂಟ್ ಲಿಂಕ್ಡ್ ಇನ್ಸೆಂಟಿವ್ (ELI) ಗಳೆಂಬ ನವಸಬ್ಸಿಡಿಗಳು; ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡುವಾಗ ವಯಬಿಲಿಟಿ ಗ್ಯಾಪ್ ಫಂಡಿಂಗ್ (GF) ಮೂಲಕ ಕಾರ್ಪೊರೇಟ್‌ಗಳಿಗೆ ಸರಕಾರದ ಕಿಸೆಯಿಂದ ನಷ್ಟ ಭರ್ತಿ.. ಹೀಗೆ ಉದ್ದಾನುದ್ದಕ್ಕೂ ಕಾರ್ಪೊರೇಟ್‌ಗಳಿಗೆ ಹೊರೆ ಆಗದಂತೆ ಎಚ್ಚರ ವಹಿಸಲಾಗಿದೆ.

ಇತರ ಗಮನಾರ್ಹ ಸಂಗತಿಗಳು

ಸೋಮವಾರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರು ಬಿಡುಗಡೆ ಮಾಡಿರುವ ಆರ್ಥಿಕ ಸಮೀಕ್ಷೆಯು 2024-25ಕ್ಕೆ 7ಶೇ. GDP ಬೆಳವಣಿಗೆಯನ್ನು ನಿರೀಕ್ಷಿಸಿದ್ದರೆ, ಹಾಲಿ ಸರಕಾರ ತನ್ನ 48.20 ಲಕ್ಷ ಕೋಟಿ ರೂ.ಗಳ ಗಾತ್ರದ ಬಜೆಟ್ ಮೂಲಕ 10.5ಶೇ. GDP ಬೆಳವಣಿಗೆಯ ದರವನ್ನು ನಿರೀಕ್ಷಿಸಿದೆ.

ಈ ವರ್ಷಕ್ಕೆ 11,11,111 ಕೋಟಿ ರೂ.ಗಳನ್ನು (GDPಯ 3.4ಶೇ.) ಕ್ಯಾಪೆಕ್ಸ್ ಹೂಡಿಕೆಗಳಿಗೆಂದು ತೆಗೆದಿರಿಸಲಾಗಿದ್ದರೂ, ಅದರಲ್ಲಿ ಇಷ್ಟು ವರ್ಷಗಳ ಸಂಪ್ರದಾಯದಂತೆ, ರೈಲ್ವೆ-ರಸ್ತೆಗಳ ಬಗ್ಗೆ ಹೆಚ್ಚು ಸ್ಪಷ್ಟವಾದ ಉಲ್ಲೇಖಗಳಿಲ್ಲ; ಪುಂಖಾನುಪುಂಖವಾಗಿ ವರದಿಯಾಗುತ್ತಿರುವ ಕಳಪೆ ಕಾಮಗಾರಿಗಳ ನಿಯಂತ್ರಣಕ್ಕೂ ಯಾವುದೇ ಕ್ರಮ ಇಲ್ಲ. ಆದರೆ, ರಾಜ್ಯಗಳಿಗೆ ಕ್ಯಾಪೆಕ್ಸ್ ಚಟುವಟಿಕೆಗಳಿಗೆಂದು 1.5 ಲಕ್ಷ ಕೋಟಿ ರೂ.ಗಳನ್ನು ದೀರ್ಘಕಾಲಿಕ ಸಾಲದ ರೂಪದಲ್ಲಿ ನೀಡುವ ಬಗ್ಗೆ ಪ್ರಕಟಿಸಲಾಗಿದೆ.

ವಿದ್ಯುತ್ ಕ್ಷೇತ್ರದಲ್ಲಿ ಇಲ್ಲಿಯ ತನಕ ಇಲೆಕ್ಟ್ರಿಕ್ ವಾಹನ, ಬ್ಯಾಟರಿ ನಿರ್ವಹಣೆ, ಹೈಡ್ರೋಜನ್ ಇಂಧನ ಎಂದೆಲ್ಲ ಹರಿದಾಡುತ್ತಿದ್ದ ಸರಕಾರದ ಚಿಂತನೆಗಳು, ಏಕಾಏಕಿ ಕಿರು ಅಣುವಿದ್ಯುತ್ ಸ್ಥಾವರಗಳತ್ತ ಹರಿದಂತಿದೆ. ಜೊತೆಗೆ, ವಿದ್ಯುತ್ ಸ್ಟೋರೇಜ್ ಕುರಿತು ನೀತಿಯೊಂದನ್ನು ರೂಪಿಸಲು ಸರಕಾರ ಮುಂದಾಗುತ್ತಿದೆ. ಇವೆಲ್ಲವನ್ನೂ ಬದಲಾಗುತ್ತಿರುವ ಸನ್ನಿವೇಶದಲ್ಲಿ, ವಿದ್ಯುತ್ ಖಾಸಗೀಕರಣದ ಚುಕ್ಕಿಗಳನ್ನಾಗಿಯೇ ಜನಸಾಮಾನ್ಯರು ಗುರುತಿಸಬೇಕು.

ಒಕ್ಕೂಟ ವ್ಯವಸ್ಥೆಯೊಳಗೆ ಕೇಂದ್ರ-ರಾಜ್ಯ ಸಂಬಂಧಗಳ ಚರ್ಚೆ ಜೋರಾಗಿರುವ ಈ ಸನ್ನಿವೇಶದಲ್ಲಿ, ಭಾರತ ಸರಕಾರ ‘‘ರಾಜ್ಯಗಳ ಅಭಿವೃದ್ಧ್ದಿಯಾದಾಗಲೇ ದೇಶ ಅಭಿವೃದ್ಧಿ’’ ಎಂದು ಬಾಯಿಮಾತಿಗೇನೂ ಕೊರತೆ ಮಾಡಿಲ್ಲ. ಆದರೆ, ‘‘ಒಂದು ದೇಶ ಒಂದು ತೆರಿಗೆ’’ ಎಂದು ತಾನು ಗಂಟು ಕಟ್ಟಿಕೊಂಡ ಹಣಕಾಸಿನ ಮರುಹಂಚಿಕೆಯಲ್ಲಿ ಉದಾರತೆ ತೋರುವ ಬದಲು, ರಾಜ್ಯಗಳಿಗೆ ಪ್ರತಿಯೊಂದಕ್ಕೂ ತನ್ನ ಬೊಕ್ಕಸದಿಂದ ದೀರ್ಘಕಾಲಿಕ ಸಾಲಗಳ ಆಫರ್ ನೀಡುತ್ತಿದೆ. ಆ ಮೂಲಕ ಕೇಂದ್ರವು ರಾಜ್ಯಗಳನ್ನು ತನ್ನ ಶಾಶ್ವತ ಸಾಲಗಾರರನ್ನಾಗಿಸುವ ಹುನ್ನಾರದಲ್ಲಿ ಇರುವಂತಿದೆ. ಆ ಸಂಪನ್ಮೂಲಗಳೆಲ್ಲ ರಾಜ್ಯಗಳಲ್ಲೇ ಹುಟ್ಟಿದಂತಹವು. ಆ ಸಂಪನ್ಮೂಲಗಳ ಬಳಕೆಯನ್ನು ರಾಜ್ಯಗಳ ವಿವೇಚನೆಗೆ ಬಿಟ್ಟು ವಿಕೇಂದ್ರೀಕೃತ ವ್ಯವಸ್ಥೆ ರೂಪಿಸುವ ಬದಲು, ತನ್ನ ಮೂಗಿನ ನೇರಕ್ಕೆ ತಾನು ವಿಧಿಸಿದ ಷರತ್ತುಗಳ ಮೇರೆಗೇ ರಾಜ್ಯಗಳು ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಬೇಕೆಂಬ ನಿಲುವಿಗೆ ಕೇಂದ್ರ ಸರಕಾರ ತಲುಪಿದಂತಿದೆ. ಭೂಮಿ, ಶ್ರಮಿಕರು, ಬಂಡವಾಳ, ಉದ್ಯಮಶೀಲತೆ ಮತ್ತು ತಂತ್ರಜ್ಞಾನಗಳ ನಿರ್ವಹಣೆಯ ಹೊಣೆಯನ್ನು ರಾಜ್ಯಗಳಿಗೆ ಹೊರಿಸಿ, ತಾನು ಕಾಸು ಚೆಲ್ಲಿ-ಕಾಸು ಬೆಳೆಯುವ ‘ವ್ಯಾಪಾರಿ’ ಆಗುವುದು, ಸರಕಾರದ ‘‘ಉದಾರೀಕರಣದ ಮುಂದಿನ ಹಂತ’’ದಂತೆ ಕಾಣಿಸುತ್ತಿದೆ.

ಈ ಬಾರಿ ಚುನಾವಣೆಗೆ ಮುನ್ನ ಬಿಜೆಪಿ ‘ಮೋದಿ ಕೀ ಗ್ಯಾರಂಟಿ’ ಎಂಬ ಹೆಸರಿನಲ್ಲಿ ಸಂಕಲ್ಪಪತ್ರವನ್ನು ಪ್ರಕಟಿಸಿತ್ತು. ಜೊತೆಗೆ, 2047ರ ವಿಕಸಿತ ಭಾರತದತ್ತ ಸಾಗುವ ಅಮೃತಕಾಲದ ಸಂಕಲ್ಪ ಇದು ಎಂದು ಹೇಳಲಾಗಿತ್ತು. ಆದರೆ, ಈ ಗ್ಯಾರಂಟಿಗಳಲ್ಲಿ ಈಗಾಗಲೇ ಇರುವ ಕೆಲವು ಕಾರ್ಯಕ್ರಮಗಳು ಹಾಗೇ ಮುಂದುವರಿಯಲಿವೆ ಎಂಬುದನ್ನು ಬಿಟ್ಟರೆ, ಹೊಸದಾಗಿ ಹೆಚ್ಚಿನವೇನೂ ಸೇರ್ಪಡೆ ಆದಂತಿಲ್ಲ. ಸಣ್ಣ ಉದಾಹರಣೆ: ಬಡವರಿಗೆ ಉಚಿತ ವಿದ್ಯುತ್, ಮೂರು ಕೋಟಿ ಲಾಖ್‌ಪತಿ ದೀದಿಯರು, ಸ್ವಸಹಾಯ ಸಂಘಗಳ ಬಲಪಡಿಸುವಿಕೆ, ಗಿಗ್ ಕೆಲಸಗಾರರ- ವಲಸೆ ಕಾರ್ಮಿಕರ ಸಂಘಟಿತ ಸುಧಾರಣೆ ಇತ್ಯಾದಿ ಹಲವು ಸಂಗತಿಗಳ ಬಗ್ಗೆ ಈ ವರ್ಷದ ಬಜೆಟ್ ಚಕಾರ ಎತ್ತುತ್ತಿಲ್ಲ.

ದೇಶ ಆತ್ಮನಿರ್ಭರಗೊಳ್ಳುವ ಸರಕಾರದ ಮಾತು, ಬರೀ ಬಾಯಿ ಮಾತಾಗಿ ಉಳಿಯುವ ಸಾಧ್ಯತೆಗಳೇ ಹೆಚ್ಚು. ಏಕೆಂದರೆ, ಸೋಮವಾರ ಆರ್ಥಿಕ ಸಮೀಕ್ಷೆ ಬಿಡುಗಡೆ ಮಾಡಿರುವ ಆರ್ಥಿಕ ಮುಖ್ಯ ಸಲಹೆಗಾರರು, ಚೀನಾದ ಜೊತೆ ದೇಶದ ಆಮದು-ರಫ್ತು ಸಂತುಲನ ಹದಗೆಟ್ಟಿರುವುದನ್ನು ಸರಿಪಡಿಸಲು, ಸ್ವತಃ ಚೀನಾಕ್ಕೆ ಭಾರತದಲ್ಲಿ ಬಂದು ಉತ್ಪಾದನೆಯಲ್ಲಿ ತೊಡಗಿಕೊಳ್ಳಲು ಹೂಡಿಕೆ ಮಾಡುವಂತೆ ಆಹ್ವಾನಿಸಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ! ಇಂಡೋನೇಶ್ಯ, ವಿಯೆಟ್ನಾಂನಂತಹ ದೇಶಗಳು ಕಡಿಮೆ ವೆಚ್ಚದ ಕಾರ್ಮಿಕ ಬಲದೊಂದಿಗೆ ಜಾಗತಿಕ ಉತ್ಪಾದನಾ ಹಬ್ ಆಗುವಲ್ಲಿ ಭಾರತಕ್ಕೆ ಬಲವಾದ ಸ್ಪರ್ಧೆ ನೀಡುತ್ತಿವೆ. ಪಾಶ್ಚಿಮಾತ್ಯ ಜಗತ್ತಿನ ಚೀನಾ+1 ತಂತ್ರಗಾರಿಕೆಯ ಹಿನ್ನೆಲೆಯಲ್ಲಿ ಭಾರತ ನೇರವಾಗಿ ಚೀನಾವನ್ನೇ ಭಾರತದಲ್ಲಿ ಹೂಡಿಕೆಗೆ ಕರೆಯುವ ಚಿಂತನೆಯಲ್ಲಿರುವುದು, ಭಾರತದ ಹಾಲಿ ಜಾಗತಿಕ ಸಂಬಂಧಗಳ ಹಿನ್ನೆಲೆಯಲ್ಲಿ ಮಹತ್ವದ ಬೆಳವಣಿಗೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ರಾಜಾರಾಂ ತಲ್ಲೂರು

contributor

Similar News