ಚೀನಾ... ಪ್ಲೀಸ್ ಮೇಕ್ ಇನ್ ಇಂಡಿಯಾ!
ಈಗ ಭಾರತವು ಜಾಗತಿಕ ಮಾರುಕಟ್ಟೆಯಲ್ಲಿ ಪ್ರಸ್ತುತವೆನ್ನಿಸಿಕೊಂಡು ಉಳಿಯಲು, ಒಂದು ನಿರ್ಣಯಕ್ಕೆ ಬರುವುದು ಅನಿವಾರ್ಯ ಆಗಿಬಿಟ್ಟಿದೆ. ಇರುವ ಆಯ್ಕೆಗಳು ಎರಡು. ಒಂದೋ ಚೀನಾದ ಸರಬರಾಜು ಸರಪಳಿಯ ಭಾಗವಾಗುವುದು; ಇಲ್ಲವೇ ಭಾರತದಲ್ಲಿ ಹೂಡಿಕೆಗೆ ಚೀನಾವನ್ನು ಆಹ್ವಾನಿಸುವುದು. ಭಾರತದ ಆರ್ಥಿಕ ಸಲಹೆಗಾರರು ಇದರಲ್ಲಿ ಎರಡನೇ ಆಯ್ಕೆ ನಮಗೆ ಸೂಕ್ತ ಎಂದು ಸರಕಾರಕ್ಕೆ ಸೂಚಿಸಿದ್ದಾರೆ.
ಭಾರತ ಸರಕಾರದ ವಿದೇಶಾಂಗ ನೀತಿ ಮತ್ತು ವಿದೇಶಿ ಹೂಡಿಕೆ ನೀತಿಗಳು ಈಗ ಸಂಪೂರ್ಣವಾಗಿ ಒಂದು ಸುತ್ತು ಬಂದಿವೆ. ಉಕ್ರೇನ್ ಕದನದ ಕಾರಣದಿಂದಾಗಿ ರಶ್ಯ ಜೊತೆ ಮುನಿಸಿಕೊಂಡಿದ್ದ ಐರೋಪ್ಯ ರಾಷ್ಟ್ರಗಳಿಗೆ ಪೆಟ್ರೋಲಿಯಂ ಸರಬರಾಜನ್ನು, ಭಾರತ ತಾನೇ ರಶ್ಯದಿಂದ ಆಮದು ಮಾಡಿಕೊಂಡು ನಿರ್ವಹಿಸಿದ ‘ವ್ಯಾವಹಾರಿಕ ಯಶಸ್ಸಿನಿಂದ’ ಪ್ರೇರಣೆಗೊಂಡ ಯೋಚನೆಯೊಂದು ಇಲ್ಲಿ ಹಿನ್ನೆಲೆಯಲ್ಲಿ ಕೆಲಸ ಮಾಡಿರುವಂತೆ ಕಾಣಿಸುತ್ತಿದೆ.
ಆಗಿರುವುದು ಇಷ್ಟು: ಸೋಮವಾರ (ಜುಲೈ ೨೨) ಲೋಕಸಭೆಯಲ್ಲಿ ಮಂಡಿತವಾದ ೨೦೨೩-೨೪ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ, ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರರಾವ್ ಅವರು ಹೊಸದೊಂದು ಫಾರ್ಮುಲಾವನ್ನು ಸರಕಾರದ ಪರಿಶೀಲನೆಗಾಗಿ ಮುಂದಿಟ್ಟಿದ್ದಾರೆ. ಉತ್ಪಾದನೆಯ ಜಾಗತಿಕ ವ್ಯಾಲ್ಯೂಚೈನ್‌ನಲ್ಲಿ ಹೆಚ್ಚಿನ ಪಾಲು ಪಡೆಯುವ ಮತ್ತು ಭಾರತದ ರಫ್ತು ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನೇರವಾಗಿ ಚೀನಾವನ್ನೇ ಭಾರತದಲ್ಲಿ ಹೂಡಿಕೆಗೆ ಆಹ್ವಾನಿಸಬೇಕು ಎಂಬ ಸಲಹೆ ಅದು!
ಚೀನಾ ಜೊತೆ ಮುನಿಸಿನ ಕಾರಣದಿಂದಾಗಿ, ಅಮೆರಿಕ ಮತ್ತು ಯುರೋಪ್‌ಗಳು ಅಲ್ಲಿಂದ ಕಚ್ಚಾಮಾಲುಗಳನ್ನು ಸರಬರಾಜು ಪಡೆಯಲು ಹಿಂಜರಿಯುತ್ತಿವೆ. ಈ ಹಿನ್ನೆಲೆಯಲ್ಲಿ, ಭಾರತವು ಚೀನಾದಿಂದ ಆ ಸರಕುಗಳನ್ನು ಆಮದು ಮಾಡಿಕೊಂಡು, ಅಲ್ಲಿಂದ ಅಮೆರಿಕ-ಯುರೋಪಿಗೆ ಮರುರಫ್ತು ಮಾಡುವ ಬದಲು, ಸ್ವತಃ ಚೀನಾಕ್ಕೇ ಭಾರತದಲ್ಲಿ ನೇರ ಹೂಡಿಕೆ ಮಾಡಲು ಆಹ್ವಾನ ನೀಡಬೇಕೆಂದು ಆರ್ಥಿಕ ಸಮೀಕ್ಷೆ ಸೂಚಿಸುತ್ತಿದೆ.
ಈಗ ಭಾರತ-ಚೀನಾ ಸಂಬಂಧಗಳು ೨೦೧೯ರಲ್ಲಿ ಇದ್ದಂತೆ ಉಳಿದಿಲ್ಲ. ಆ ವರ್ಷ ಅಕ್ಟೋಬರ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ -ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ ಸಹಿತ ಶೃಂಗಸಭೆ ನಡೆಸಿದ್ದರು. ಮರುವರ್ಷ, ೨೦೨೦ ಜೂನ್ ತಿಂಗಳಿನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಗಡಿ ಸಂಘರ್ಷ ಸಂಭವಿಸಿದ ಬಳಿಕ, ಪರಸ್ಪರ ಸಂಬಂಧಗಳು ಸತತವಾಗಿ ಕೆಡುತ್ತಲೇ ಬಂದಿವೆ. ಈ ಗದ್ದಲದ ಪರಿಣಾಮವಾಗಿ, ೨೦೨೦ರ ಎಪ್ರಿಲ್ ೧೭ರಂದು, ಭಾರತ ಸರಕಾರ ಒಂದು ಹೊಸ ನಿಯಮ ತಂದು, ಭಾರತದ ಗಡಿಯಂಚಿನ ದೇಶಗಳು ಭಾರತ ಸರಕಾರದ ಒಪ್ಪಿಗೆ ಇಲ್ಲದೆ ಭಾರತದಲ್ಲಿ ಹೂಡಿಕೆ ಮಾಡುವಂತಿಲ್ಲ ಎಂದು ವಿಧಿಸಿತ್ತು ಮತ್ತು ಆ ಬಳಿಕ ಟಿಕ್‌ಟಾಕ್, ವಿ ಚಾಟ್ ಸೇರಿದಂತೆ ೨೦ಕ್ಕೂ ಮಿಕ್ಕಿ ಜನಪ್ರಿಯ ಚೀನಿ ಆಪ್ಲಿಕೇಷನ್‌ಗಳನ್ನು ನಿಷೇಧಿಸಲಾಗಿತ್ತು. ಹೊಸ ನಿಯಮದನ್ವಯ ಇಲ್ಲಿಯ ತನಕ, ೨೦೨೩ರ ಹೊತ್ತಿಗೆ, ಚೀನಾದ ಸುಮಾರು ೫೦,೦೦೦ ಕೋಟಿ ರೂ.ಗಳ ಹೂಡಿಕೆ ಪ್ರಸ್ತಾವಗಳನ್ನು ಭಾರತ ತಿರಸ್ಕರಿಸಿದೆಯಂತೆ.
ವ್ಯಾವಹಾರಿಕವಾಗಿ ಇಷ್ಟೊಂದು ದೂರ ಸರಿದ ಬಳಿಕ, ಈಗ ಏಕಾಏಕಿ ಮತ್ತೆ ಚೀನಾ ಜೊತೆ ವ್ಯಾವಹಾರಿಕ ಸಾಮೀಪ್ಯ ಬೇಕೆಂದೆನಿಸುವುದಕ್ಕೆ ಕಾರಣ ಏನು?
ಅಮೆರಿಕ ಮತ್ತು ಐರೋಪ್ಯ ಸಮುದಾಯದ ದೇಶಗಳು, ಕಚ್ಚಾವಸ್ತುಗಳಿಗಾಗಿ ಚೀನಾ ಮಾತ್ರವಲ್ಲದೆ ಏಶ್ಯದ ಇನ್ನೊಂದು ದೇಶದ ಜೊತೆ ವ್ಯಾವಹಾರಿಕ ಸಂಪರ್ಕ ಇರಿಸಿಕೊಳ್ಳುವ ನೀತಿ (ಚೀನಾ +೧) ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ, ವಿಯೆಟ್ನಾಂ, ಥೈವಾನ್, ಇಂಡೋನೇಶ್ಯ, ದ. ಕೊರಿಯಾದಂತಹ ದೇಶಗಳು ಆ ಸ್ಥಾನಕ್ಕೆ ಸ್ಪರ್ಧೆಗಿಳಿದಿವೆ; ಚೀನಾದ ಹೂಡಿಕೆಯನ್ನು ತಮ್ಮ ದೇಶಗಳಲ್ಲಿ ಹೆಚ್ಚಿಸಿಕೊಳ್ಳುತ್ತಿವೆ. ಹಾಗಾಗಿ ಈಗ ಭಾರತವು ಜಾಗತಿಕ ಮಾರುಕಟ್ಟೆಯಲ್ಲಿ ಪ್ರಸ್ತುತವೆನ್ನಿಸಿಕೊಂಡು ಉಳಿಯಲು, ಒಂದು ನಿರ್ಣಯಕ್ಕೆ ಬರುವುದು ಅನಿವಾರ್ಯ ಆಗಿಬಿಟ್ಟಿದೆ. ಇರುವ ಆಯ್ಕೆಗಳು ಎರಡು. ಒಂದೋ ಚೀನಾದ ಸರಬರಾಜು ಸರಪಳಿಯ ಭಾಗವಾಗುವುದು; ಇಲ್ಲವೇ ಭಾರತದಲ್ಲಿ ಹೂಡಿಕೆಗೆ ಚೀನಾವನ್ನು ಆಹ್ವಾನಿಸುವುದು. ಭಾರತದ ಆರ್ಥಿಕ ಸಲಹೆಗಾರರು ಇದರಲ್ಲಿ ಎರಡನೇ ಆಯ್ಕೆ ನಮಗೆ ಸೂಕ್ತ ಎಂದು ಸರಕಾರಕ್ಕೆ ಸೂಚಿಸಿದ್ದಾರೆ.
ಯಾಕೆ ಹೀಗಾಯಿತು?
೨೦೧೪ರ ಸೆಪ್ಟಂಬರ್ ೨೫ರಂದು ಪ್ರಧಾನಮಂತ್ರಿ ಮೋದಿಯವರು ತನ್ನ ಸರಕಾರದ ಫ್ಲಾಗ್‌ಶಿಪ್ ಕಾರ್ಯಕ್ರಮ ‘ಮೇಕ್ ಇನ್ ಇಂಡಿಯಾ’ವನ್ನು ಭಾರೀ ಪ್ರಚಾರದೊಂದಿಗೆ ಉದ್ಘಾಟಿಸಿದ್ದರು. ಅದರ ಗುರಿಗಳಿದ್ದುದು ಮೂರು.
೧. ದೇಶದ ಕೈಗಾರಿಕಾ ಉತ್ಪಾದಕತೆಯನ್ನು ವಾರ್ಷಿಕ ಶೇ. ೧೨-೧೪ ದರದಲ್ಲಿ ಹೆಚ್ಚಿಸುವುದು.
೨. ಕೈಗಾರಿಕಾ ಉತ್ಪಾದಕತೆಯನ್ನು ೨೦೨೨ರ ಹೊತ್ತಿಗೆ ಜಿಡಿಪಿಯ ಶೇ. ೨೫ಕ್ಕೆ ಏರಿಸುವುದು.
೩. ಕೈಗಾರಿಕಾ ಉತ್ಪಾದನೆ ವಲಯದಲ್ಲಿ ೨೦೨೨ರ ಒಳಗೆ ೧೦ ಕೋಟಿ ಉದ್ಯೋಗ ಸೃಷ್ಟಿ.
ಇನ್ನೊಂದು ತಿಂಗಳಲ್ಲಿ, ಮೇಕ್ ಇನ್ ಇಂಡಿಯಾಕ್ಕೆ ೧೦ ವರ್ಷ ಆಗಲಿದೆ. ಆದರೆ, ಈ ಮೂರೂ ಗುರಿಗಳನ್ನು ತಲುಪಲು ದೇಶ ದಯನೀಯವಾಗಿ ವಿಫಲಗೊಂಡಿದೆ. ದೇಶದ ಕೈಗಾರಿಕಾ ಉತ್ಪಾದಕತೆಯು ವಾರ್ಷಿಕ ಸರಾಸರಿ ಶೇ. ೫.೯ ದರದಲ್ಲಿ ಬೆಳೆಯುತ್ತಿದೆ; ಉತ್ಪಾದಕತೆ ಜಿಡಿಪಿಯ ಶೇ. ೧೬ ಪ್ರಮಾಣದ ಆಸುಪಾಸಿನಲ್ಲೇ ಅಟಕಾಯಿಸಿಕೊಂಡಿದೆ; ಎಲ್ಲಕ್ಕಿಂತ ಕಳವಳಕಾರಿಯಾಗಿ, ಕೈಗಾರಿಕಾ ವಲಯದ ಉದ್ಯೋಗಗಳಲ್ಲಿ ಏರಿಕೆ ಆಗುವುದರ ಬದಲು, ಇಳಿಕೆ ಆಗಿದೆ. (೨೦೧೧-೧೨ರಲ್ಲಿ ಕೈಗಾರಿಕಾ ಉದ್ಯೋಗಗಳ ಪ್ರಮಾಣ ಶೇ. ೧೨.೬ ಇದ್ದುದು ೨೦೨೧-೨೨ಕ್ಕೆ ಶೇ. ೧೧.೬ಕ್ಕೆ ಇಳಿದಿದೆ ಎಂದು ಸರಕಾರದ್ದೇ ಅಂಕಿಸಂಖ್ಯೆಗಳು ಹೇಳುತ್ತಿವೆ.)
ಸ್ಪಷ್ಟ ನೀತಿಯಿಲ್ಲದೆ, ಕೇವಲ ಸೇವಾಕ್ಷೇತ್ರ (ಮಾಹಿತಿ ತಂತ್ರಜ್ಞಾನ)ಕ್ಕೆ ಅತಿ ಪ್ರೋತ್ಸಾಹ ಮತ್ತು ಮೂಲಸೌಕರ್ಯ ಸುಧಾರಣೆಯ ಹೆಸರಲ್ಲಿ ‘ಆನಿ’ಗಳಿಗೆ ಸಂಪತ್ತಿನ ಸಂಚಯನಕ್ಕೆ ಅವಕಾಶ ಮಾಡಿಕೊಟ್ಟು, ಸರಕಾರ ೧೦ ವರ್ಷ ಕಣ್ಣು ಮುಚ್ಚಿ ಕುಳಿತಿತ್ತು. ಸಾಮಾಜಿಕ ಒತ್ತಡಗಳು ಆರಂಭಗೊಳ್ಳತೊಡಗಿದಾಗ, ‘ಆತ್ಮನಿರ್ಭರ ಭಾರತ’ ಎಂದು ಹೇಳಿ, ೨೦೨೦ರ ಹೊತ್ತಿಗೆ ಇಲೆಕ್ಟ್ರಾನಿಕ್ ಉತ್ಪಾದನಾ ರಂಗಕ್ಕೆ ಉತ್ಪಾದನೆ ಆಧರಿತ ಇನ್ಸೆಂಟಿವ್ (ಪಿಎಲ್‌ಐ) ನೀಡುವ ಯೋಜನೆ ಆರಂಭಿಸಲಾಯಿತು ಮತ್ತು ಅದನ್ನು ೧೦ ಕ್ಷೇತ್ರಗಳಿಗೆ, ಆ ಬಳಿಕ ಒಟ್ಟು ೧೪ ಕ್ಷೇತ್ರಗಳಿಗೆ ವಿಸ್ತರಿಸಲಾಯಿತು. ಇದು ಮೊಬೈಲ್ ಫೋನ್ ಅಸೆಂಬ್ಲಿಂಗ್, ಸೆಮಿಕಂಡಕ್ಟರ್ ಕ್ಷೇತ್ರಗಳಂತಹ ಕಡಿಮೆ ಕೌಶಲದ ‘ಸ್ಕ್ರೂಡ್ರೈವರ್’ ಉದ್ಯೋಗಗಳನ್ನು ಸಣ್ಣ ಪ್ರಮಾಣದಲ್ಲಿ ಹೆಚ್ಚಿಸಿತೇ ಹೊರತು, ನಿರುದ್ಯೋಗ ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡಲಿಲ್ಲ. ಪಿಎಲ್‌ಐ ಯೋಜನೆಯು ಶ್ರೀಮಂತ ಶೇ. ೧ ಜನರ ಸಬ್ಸಿಡಿಯಾಯಿತೇ ಹೊರತು ಉದ್ಯೋಗ ಸೃಷ್ಟಿಗೆ ಹೆಚ್ಚು ಸಹಾಯ ಮಾಡಲಿಲ್ಲ.
ಚುನಾವಣೆ ಫಲಿತಾಂಶದ ಪಾಠ
೨೦೨೪ರ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿಯವರಿಗೆ ನಿರೀಕ್ಷಿತ ಫಲಿತಾಂಶ ಸಿಕ್ಕದಿರುವುದಕ್ಕೆ, ನಿರುದ್ಯೋಗದ ಕುರಿತು ಯುವಜನರಲ್ಲಿ ಇರುವ ಹತಾಶೆ ಮಹತ್ವದ ಪಾತ್ರ ವಹಿಸಿದೆ ಎಂಬುದನ್ನು ಸರಕಾರ ಕಡೆಗೂ ಅರ್ಥಮಾಡಿಕೊಂಡಂತಿದೆ. ಮಂಗಳವಾರದ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಉದ್ಯೋಗ ಸೃಷ್ಟಿಗಾಗಿಯೇ ಎಂಪ್ಲಾಯ್‌ಮೆಂಟ್ ಲಿಂಕ್ಡ್ ಇನ್ಸೆಂಟಿವ್ (ಇಎಲ್‌ಐ) ಯೋಜನೆಯನ್ನು ಪ್ರಕಟಿಸಿದ್ದಾರೆ. ನಿರುದ್ಯೋಗಿಗಳಿಗೆ ಮಾತ್ರವಲ್ಲದೆ, ಉದ್ಯೋಗ ಸೃಷ್ಟಿಗೆ ಸಹಾಯ ನೀಡುವ ಕೈಗಾರಿಕೆಗಳ ಮಾಲಕರಿಗೂ ಈ ಇನ್ಸೆಂಟಿವ್ ನೀಡಲು ಯೋಜಿಸಿದ್ದಾರೆ.
ಇಷ್ಟು ಮಾತ್ರವಲ್ಲದೆ, ಮೋದಿ ೩.೦ ಸರಕಾರವು ಪಿಎಲ್‌ಐ ೨.೦ಗೆ ಸನ್ನದ್ಧವಾಗುತ್ತಿದ್ದು, ೧೫ ಕೈಗಾರಿಕಾ ವಲಯಗಳು ಹಾಗೂ ೧೨ ಸೇವಾ ವಲಯಗಳನ್ನು ಈ ಎರಡನೇ ಹಂತದ ಪಿಎಲ್‌ಐ ವ್ಯಾಪ್ತಿಗೆ ತರಲು ಉದ್ದೇಶಿಸಿದೆ. ಈ ಪಿಎಲ್‌ಐ ಮತ್ತು ಇಎಲ್‌ಐಗಳು, ಎಂಎಸ್‌ಎಂಇ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್‌ನಲ್ಲಿ ನೀಡಲಾಗಿರುವ ಪ್ರೋತ್ಸಾಹಗಳು ಎಷ್ಟರ ಮಟ್ಟಿಗೆ ಉದ್ಯೋಗಸೃಷ್ಟಿ ಮಾಡಲಿವೆ ಎಂಬುದನ್ನು ಕಾದು ನೋಡಬೇಕಿದೆ.
ಒಂದಂತೂ ಸ್ಪಷ್ಟ. ನಮ್ಮ ಡೆಮೊಗ್ರಾಫಿಕ್ ಡಿವೈಡೆಂಡ್‌ನ ಪೂರ್ಣ ಲಾಭ ಪಡೆಯಲು, ದೇಶದ ಉದ್ಯೋಗಾಕಾಂಕ್ಷಿಗಳಿಗೆ ಕೇವಲ ‘ಸ್ಕ್ರೂಡ್ರೈವರ್’ ಕೌಶಲ ಕಲಿಸಿ ಕುಳ್ಳಿರಿಸಿದರೆ ಸಾಕಾಗುವುದಿಲ್ಲ. ನಾಳೆ ಹೊರಗಿನಿಂದ ಬಂದ ಈ ಉತ್ಪಾದಕರು, ಬೇರೆ ಕಡೆ ‘ಚೀಪ್ ಲೇಬರ್’ ಸಿಗಲಿದೆ ಎಂದು ಇಲ್ಲಿ ಅಂಗಡಿ ಮುಚ್ಚಿ ಹೋದರೆ, ನಮ್ಮ ಉತ್ಪಾದಕ ಪ್ರಾಯವರ್ಗದ ಜನಸಮುದಾಯ ನಡುನೀರಿನಲ್ಲಿ ದಿಕ್ಕೆಡಬೇಕಾಗುತ್ತದೆ. ಇದರ ಬದಲು ನಿಜಕ್ಕೂ ದೇಶ ‘ಆತ್ಮನಿರ್ಭರ’ ಆಗುವಂತಹ, ಇಲ್ಲಿನ ಬದುಕಿಗೆ ಅಗತ್ಯವಿರುವ ಮತ್ತು ಪರಿಸರಕ್ಕೆ ಸಹ್ಯವಿರುವ, ಎಂಎಸ್‌ಎಂಇ ವಲಯಕ್ಕೆ ಉಪಯುಕ್ತವಾಗುವಂತಹ ಕೌಶಲಗಳೊಂದಿಗೆ ದೇಶದ ಉತ್ಪಾದಕ ಪ್ರಾಯವರ್ಗವನ್ನು ದೀರ್ಘಕಾಲಿಕ ನೆಲೆಯಲ್ಲಿ ಸನ್ನದ್ಧಗೊಳಿಸುವ ಕೆಲಸವನ್ನು ಸರಕಾರ ಸಮರೋಪಾದಿಯಲ್ಲಿ ಕೈಗೊಳ್ಳುವುದೊಂದೇ ಸರಿಯಾದ ಹಾದಿ.