ಆಯಿತಲ್ಲ...ಹೊರಡಿ ಖಾನೇಶುಮಾರಿಗೆ

ತನ್ನ ಇಚ್ಛಾಶಕ್ತಿ ಕೊರತೆಯ ಕಾರಣಕ್ಕೆ ಈಗಾಗಲೇ ಸಂಭವಿಸಿರುವ ಈ ಅನ್ಯಾಯದ ವಿಳಂಬವನ್ನು ಇನ್ನಷ್ಟು ಲಂಬಿಸುವ ಮೂಲಕ ಸರಕಾರ, ಎಲ್ಲರನ್ನು ಒಳಗೊಂಡು ಮುನ್ನಡೆಯಬೇಕೆಂಬ ಸಾಂವಿಧಾನಿಕ ಆಶಯಕ್ಕೆ ತಿಲಾಂಜಲಿ ನೀಡದಂತೆ ಹಕ್ಕೊತ್ತಾಯ ಮಾಡಬೇಕಿದೆ.

Update: 2024-06-15 05:12 GMT

‘‘ನಿಯತ್ ಸಹೀ ತೋ ನತೀಜೇ ಭೀ ಸಹೀ’’ (ನಿಯತ್ತು ಸರಿಯಾಗಿದ್ದರೆ ಫಲಿತಾಂಶಗಳೂ ಸರಿಯಾಗಿರುತ್ತವೆ) ಎಂಬುದು ಈ ಬಾರಿ ಚುನಾವಣೆ ಪ್ರಚಾರದ ವೇಳೆ ಪ್ರಧಾನಮಂತ್ರಿಯವರ ಬಾಯಿಯಿಂದ ಹಲವು ಬಾರಿ ಕೇಳಿಸಿತ್ತು. ಈಗ ಫಲಿತಾಂಶ ಬಂದಿದೆ. ಹೊಸ ಸರಕಾರ ತನ್ನ ಆದ್ಯತೆಗಳನ್ನು ಈಗಾಗಲೇ ಪ್ರಕಟಿಸಿದೆ, ತಾನು ಮೊದಲ 125 ದಿನಗಳ ಕಾರ್ಯಕ್ರಮ ಪಟ್ಟಿಯೊಂದಿಗೆ ಸನ್ನದ್ಧ ಎಂದು ಹೇಳಿಕೊಂಡಿದೆ.

ಯಾವುದೇ ನೀತ್ಯಾತ್ಮಕ ತೀರ್ಮಾನಗಳನ್ನು ಸರಕಾರ ತೆಗೆದುಕೊಳ್ಳುವಾಗ, ಅದರ ಹಿನ್ನೆಲೆಯಲ್ಲಿ ಆ ನೀತಿಗಳು ಯಾರಿಗೆ ತಲುಪಬೇಕೆಂಬ ಸ್ಪಷ್ಟ ಕಲ್ಪನೆ ಇರಬೇಕಾಗುತ್ತದೆ. ಅಂತಹದೊಂದು ಕಲ್ಪನೆ ಕೊಡಬೇಕಾದುದು, ದೇಶದ ಜನಗಣತಿ. ಭಾರತದಲ್ಲಿ ಜನಗಣತಿ ಈಗಾಗಲೇ ಮೂರು ವರ್ಷ ವಿಳಂಬವಾಗಿದೆ ಮತ್ತು ಸರಕಾರ ಎಲ್ಲ ತೀರ್ಮಾನಗಳನ್ನು ಇನ್ನೂ 2011ರ ಜನಗಣತಿ ಫಲಿತಾಂಶಗಳನ್ನು ಆಧರಿಸಿ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಡಿಜಿಟಲ್ ಇಂಡಿಯಾ ಎಂಬ ಕಿರೀಟಕ್ಕೆ ಇದು ಅಪಮಾನ ಎಂದು ಯಾರಿಗೂ ಇಲ್ಲಿಯ ತನಕ ಅನ್ನಿಸಿದಂತಿಲ್ಲ.

ನಿಯತ್ತಿನ ಮಾತು ಬಂದಾಗ, ಭಾರತ ಸರಕಾರಕ್ಕೆ ಅದು ಜಾರಿಗೆ ತಂದಿರುವ 128ನೇ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು ನೆನಪು ಮಾಡಿಕೊಡಬೇಕಿದೆ. 2023 ಸೆಪ್ಟಂಬರ್‌ನಲ್ಲಿ ಸಂಸತ್ತಿನ ವಿಶೇಷ ಅಧಿವೇಶನ ಕರೆದು ಮಂಡಿಸಲಾಗಿದ್ದ ‘ನಾರೀಶಕ್ತಿ ವಂದನ ಅಧಿನಿಯಮ್-2023’ ಅನ್ವಯ ದೇಶದ ಸಂಸತ್ತು ಮತ್ತು ವಿಧಾನಮಂಡಲಗಳಲ್ಲಿ ಶೇ. 33 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು. 2023 ಸೆಪ್ಟಂಬರ್ 29ರಂದು ರಾಷ್ಟ್ರಪತಿಗಳ ಅಂಕಿತ ಬಿದ್ದಿರುವ ಕಾಯ್ದೆ ಇದು. ಈ ಕಾಯ್ದೆ ಜಾರಿಗೆ ಬರಬೇಕಿದ್ದರೆ ಖಾನೇಶುಮಾರಿ (ಜನಗಣತಿ) ಮುಗಿಯಬೇಕು ಮತ್ತು ಹೊಸದಾಗಿ ಸಿಗಲಿರುವ ಜನಸಂಖ್ಯಾ ಲೆಕ್ಕಾಚಾರಗಳ ಅನ್ವಯ ಮಹಿಳಾ ಮೀಸಲು ಕ್ಷೇತ್ರಗಳ ನಿಗದಿಗೆ ಡೀಲಿಮಿಟೇಶನ್ ಪ್ರಕ್ರಿಯೆ ಆಗಬೇಕು. ಸರಿ. ಸಂಸತ್ತಿನಲ್ಲಿ ‘ಚರ್ಚಿಸಿ’, ಇಂತಹದೊಂದು ಮಹತ್ವದ ಕಾಯ್ದೆ ಜಾರಿಗೆ ತಂದ ರಾಜಕೀಯ ಪಕ್ಷಗಳು, ಚುನಾವಣೆ ಬಂದಾಗ ‘ಇನ್ ಲೆಟರ್-ಇನ್ ಸ್ಪಿರಿಟ್’ ಈ ಕಾಯ್ದೆಯ ತತ್ವವನ್ನಾದರೂ ಅನುಸರಿಸಿದವೇ?

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಇದ್ದ ಮಹಿಳಾ ಅಭ್ಯರ್ಥಿಗಳ ಒಟ್ಟು ಸಂಖ್ಯೆ 797. 543 ಒಟ್ಟು ಸೀಟುಗಳಲ್ಲಿ ಬಿಜೆಪಿ 300 ಸೀಟುಗಳಿಗೆ ಸ್ಪರ್ಧಿಸಿತ್ತು, 69 ಮಂದಿ ಮಹಿಳಾ ಅಭ್ಯರ್ಥಿಗಳು. ಅವರಲ್ಲಿ ಗೆದ್ದವರು 31 ಮಂದಿ. ಕಾಂಗ್ರೆಸ್ 328 ಸೀಟುಗಳಿಗೆ ಸ್ಪರ್ಧಿಸಿದ್ದು, 41 ಮಹಿಳಾ ಅಭ್ಯರ್ಥಿಗಳಿಗೆ ಟಿಕೇಟು ನೀಡಿತ್ತು. ಅವರಲ್ಲಿ ಗೆದ್ದವರು 13. ಕಳೆದ ಲೋಕಸಭೆಯಲ್ಲಿ 78 (ಶೇ. 14.4) ಮಹಿಳಾ ಸಂಸದರಿದ್ದರೆ, ಈ ಬಾರಿ ಅವರ ಸಂಖ್ಯೆ 74 (ಶೇ. 13.6)ಕ್ಕೆ ಇಳಿದಿದೆ.

ಕರ್ನಾಟಕದಲ್ಲಿ, ಈ ಸ್ಥಿತಿ ಇನ್ನಷ್ಟು ಕೆಟ್ಟದಿದೆ. ಇಲ್ಲಿ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಮಹಿಳೆಯರ ಒಟ್ಟು ಸಂಖ್ಯೆ 186 (ಒಟ್ಟು ಸ್ಪರ್ಧಿಗಳ ಶೇ. 7). ಅವರಲ್ಲಿ ಗೆದ್ದವರು ಕೇವಲ 10 (ಶೇ. 4.5) ಮಂದಿ ಮಾತ್ರ.

ಈ ಎಲ್ಲ ಅಂಕಿಸಂಖ್ಯೆಗಳು ‘ಪುರಾಣ ಹೇಳೋಕೆ; ಬದನೆಕಾಯಿ ತಿನ್ನೋಕೆ’ ಎಂಬುದು ಎಲ್ಲ ರಾಜಕೀಯ ಪಕ್ಷಗಳ ನಿಲುವು ಅನ್ನುವುದನ್ನು ಸ್ಪಷ್ಟಪಡಿಸುತ್ತವೆ. ಇನ್ನು ಖಾನೇಶುಮಾರಿ ನಡೆದು, ಅದರ ಫಲಿತಾಂಶಗಳು ಪ್ರಕಟಗೊಂಡು, ಕ್ಷೇತ್ರಗಳ ಮರುವಿಂಗಡಣೆ ಆಗಿ, ಮಹಿಳಾ ಮೀಸಲು ಕ್ಷೇತ್ರಗಳು ಪ್ರಕಟಗೊಳ್ಳುವ ಹೊತ್ತಿಗೆ ಇನ್ನೆಷ್ಟು ಚುನಾವಣೆಗಳು ಮುಗಿದಿರುತ್ತವೆಯೋ ಗೊತ್ತಿಲ್ಲ. ಸರಕಾರಗಳ ಇಂತಹ ಮನಸ್ಥಿತಿಗೆ ಪೂರ್ವೋ ದಾಹರಣೆಗಳೂ ದಂಢಿಯಾಗಿವೆ. 1951ರಿಂದಲೂ ಇಂತಹ ಹಲವು ವಿಳಂಬಗಳತ್ತ ಬೊಟ್ಟು ಮಾಡಬಹುದು. 2011ರ ಧರ್ಮ-ಭಾಷೆಗಳಿಗೆ ಸಂಬಂಧಿಸಿದ ಡೇಟಾ ಬಿಡುಗಡೆ ಆದುದು ಕ್ರಮವಾಗಿ 2015, 2018ರಲ್ಲಿ. 2011ರ ಸೋಷಿಯೊಎಕನಾಮಿಕ್ ಮತ್ತು ಜಾತಿ ಸೆನ್ಸಸ್ ಡೇಟಾಗಳು ಇನ್ನೂ ಬಿಡುಗಡೆ ಆಗಿಲ್ಲ; 2021, 22, 23ರ ಜನನ ಮರಣ ವರದಿಗಳು ಇನ್ನೂ ಪ್ರಕಟಗೊಂಡಿಲ್ಲ. ಇವೆಲ್ಲ ಲೇಟೆಸ್ಟ್ ಉದಾಹರಣೆಗಳು.

ಖಾನೇಶುಮಾರಿಗೆ ಅಸಹಜ ವಿಳಂಬ

28 ಮಾರ್ಚ್ 2019ರಂದು, 2021ರ ದಶವಾರ್ಷಿಕ ಜನಗಣತಿಗೆ ಪ್ರಕಟಣೆ ಹೊರಬಿದ್ದಿತ್ತು. 2020 ಎಪ್ರಿಲ್-ಸೆಪ್ಟಂಬರ್ ನಡುವೆ ಮೊದಲ ಹಂತದ ಮನೆ ಪಟ್ಟಿ ತಯಾರಿ ಮತ್ತು ಫೆಬ್ರವರಿ 2021ರ ಹೊತ್ತಿಗೆ ಎರಡನೇ ಹಂತದ ಜನಗಣತಿ ನಡೆಯಬೇಕಿತ್ತು. ಅದಕ್ಕಾಗಿ 8,754.23 ಕೋಟಿ ರೂ.ಗಳ ಅನುದಾನವನ್ನೂ ಸಂಸತ್ತು ಮಂಜೂರು ಮಾಡಿತ್ತು. ಅಂದಾಜು 30 ಲಕ್ಷ ಮಂದಿ ವಿವಿಧ ಹಂತದ ಅಧಿಕಾರಿಗಳು ಜನಗಣತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಿತ್ತು.

ಆದರೆ, ಕೋವಿಡ್ ಬಂದೆರಗಿತು. ಸರಕಾರ ಸೆನ್ಸಸ್ ಪ್ರಕ್ರಿಯೆಯನ್ನು ಮುಂದೂಡಿತು. ಕೋವಿಡ್ ಹಿಂದಾದ ಬಳಿಕವೂ ಸರಕಾರ ಜನಗಣತಿಗೆ ಮನ ಮಾಡಿಲ್ಲ. 2023ರ ಡಿಸೆಂಬರ್ 30ರಂದು ಭಾರತದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಅವರು ಪ್ರಕಟಣೆ ಹೊರಡಿಸಿ, ಜಿಲ್ಲೆ, ತೆಹಶೀಲ್, ನಗರಪಾಲಿಕೆ ಇತ್ಯಾದಿಗಳ ಆಡಳಿತ ಬೌಂಡರಿಯನ್ನು ನಿಗದಿ ಮಾಡುವ ದಿನಾಂಕವನ್ನು 30 ಜೂನ್ 2024ರ ತನಕ ವಿಸ್ತರಿಸಿದರು. ಇದರ ಅರ್ಥ 2024ರ ಅಕ್ಟೋಬರ್ ತನಕವೂ ಜನಗಣತಿ ಪ್ರಕ್ರಿಯೆ ಪ್ರಾರಂಭಗೊಳ್ಳುವುದು ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ. ಅದಕ್ಕಿಂತ ಹೆಚ್ಚಾಗಿ, ಈ ರೀತಿ, ಈ ಬಾರಿಯ ಜನಗಣತಿಯನ್ನು ಸರಕಾರ ಮುಂದೂಡಿದ್ದು ಇದು ಒಂಭತ್ತನೇ ಬಾರಿಗಂತೆ! ಈ ನಡುವೆ, 2022ರಲ್ಲಿ ಜನಗಣತಿ ನಿಯಮಗಳಿಗೆ ತಿದ್ದುಪಡಿ ಮಾಡಿ, ನಾಗರಿಕರು ಪ್ರಕ್ರಿಯೆ ಆರಂಭಗೊಂಡ ಬಳಿಕ ಸ್ವಯಂ ಅನ್ಯೂಮರೇಟ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

1881ರಿಂದ ಪ್ರತೀ 10 ವರ್ಷಕ್ಕೊಮ್ಮೆ ತಪ್ಪದೇ ನಡೆದುಕೊಂಡು ಬಂದಿರುವ ಜನಗಣತಿ ಪ್ರಕ್ರಿಯೆಯು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಹಾದಿ ತಪ್ಪಿದೆ. ಇದರಿಂದ ದೇಶದ ನೀತ್ಯಾತ್ಮಕ ರಂಗದಲ್ಲಿ ಆಗಲಿರುವ ಅನಾಹುತಗಳು ಒಂದೆರಡಲ್ಲ. ಬರಹದ ಆರಂಭದಲ್ಲಿ ವಿವರಿಸಿದಂತೆ, ಮಹಿಳಾ ಮೀಸಲಾತಿಗೆ ಸಂಬಂಧಿಸಿ, ಸರಕಾರ ತಾನು ರೂಪಿಸಿರುವ ಕಾನೂನನ್ನು ತಾನೇ ಕಡೆಗಣಿಸಿರುವುದು ಒಂದೆಡೆಯಾದರೆ, ಇನ್ನೊಂದೆಡೆ ದೇಶದ ಜನಸಂಖ್ಯೆಯ ಬಗ್ಗೆ ಇಂದು ಸರಿಯಾದ ಕಲ್ಪನೆ ಇಲ್ಲ. 2011ರ ಲೆಕ್ಕಾಚಾರದಂತೆ ದೇಶದ ಜನಸಂಖ್ಯೆಯಾಗಿರುವ 120 ಕೋಟಿಯನ್ನೇ ಆಧರಿಸಿ ಸರಕಾರ ಬಡವರು-ಶ್ರೀಮಂತರ ಲೆಕ್ಕ ಕೊಡುತ್ತಿದೆ. ಅಂದಾಜುಗಳ ಪ್ರಕಾರ, ದೇಶದ ಜನಸಂಖ್ಯೆ ಈಗ 140 ಕೋಟಿ ದಾಟಿದೆ. (ಈ ನಡುವೆ ಕೋವಿಡ್ ಎಷ್ಟು ಜನರನ್ನು ನುಂಗಿದೆ, ಆ ಬಳಿಕದ ಆರ್ಥಿಕ ಸಂಕಷ್ಟದ ಸಾವುಗಳು-ಕುಸಿದು ಸಾವಿನ ಪ್ರಕರಣಗಳು ಎಷ್ಟು ಜೀವಗಳನ್ನು ನುಂಗಿವೆ- ಅದೆಲ್ಲ ಕಳೆದು ಹಾಲೀ ದೇಶದ ಜನಸಂಖ್ಯೆ ಎಷ್ಟು ಎಂಬುದು ಯಾರಿಗೂ ಗೊತ್ತಿಲ್ಲ.) ಡಿಜಿಟಲ್ ಇಂಡಿಯಾ ತನ್ನ ನೀತಿಗಳನ್ನೆಲ್ಲ ಕಣ್ಣಂದಾಜಿನ ಮೇಲೇ ರೂಪಿಸುತ್ತಿದೆ. ಈ ಕಾರಣಕ್ಕೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಸುಮಾರು 10 ಕೋಟಿ ಅರ್ಹ ಬಡಜನರು ಹೊರಗುಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಸಂಸತ್ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆ ವಿಳಂಬವಾಗಿದೆ.

ತನ್ನ ಇಚ್ಛಾಶಕ್ತಿ ಕೊರತೆಯ ಕಾರಣಕ್ಕೆ ಈಗಾಗಲೇ ಸಂಭವಿಸಿರುವ ಈ ಅನ್ಯಾಯದ ವಿಳಂಬವನ್ನು ಇನ್ನಷ್ಟು ಲಂಬಿಸುವ ಮೂಲಕ ಸರಕಾರ, ಎಲ್ಲರನ್ನು ಒಳಗೊಂಡು ಮುನ್ನಡೆಯಬೇಕೆಂಬ ಸಾಂವಿಧಾನಿಕ ಆಶಯಕ್ಕೆ ತಿಲಾಂಜಲಿ ನೀಡದಂತೆ ಹಕ್ಕೊತ್ತಾಯ ಮಾಡಬೇಕಿದೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ರಾಜಾರಾಂ ತಲ್ಲೂರು

contributor

Similar News