ಖಂಜೂಸಿಗಳ ಕೈಯಲ್ಲಿ ಒಲಿಂಪಿಕ್ಸ್ ಪ್ರಸಾರ

Update: 2024-08-10 04:52 GMT

ರಾಷ್ಟ್ರೀಯ ಹಿತಾಸಕ್ತಿ ಇರುವ ಕ್ರೀಡಾ ಸುದ್ದಿಗಳು ಎಲ್ಲರಿಗೆ ತಲುಪುವಂತಾಗಬೇಕು ಎಂಬ ಅಂತರ್‌ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಆಶಯ, ಭಾರತದ ಸುಪ್ರೀಂ ಕೋರ್ಟಿನ ನಿರ್ದೇಶನ ಹಾಗೂ ಭಾರತ ಸರಕಾರದ ಕಾನೂನುಗಳೆಲ್ಲವನ್ನೂ ಬಹಳ ಚಾಲಾಕಿನಿಂದ ಬದಿಗೆ ಸರಿಸಿ, ಈ ಬಾರಿ ಒಲಿಂಪಿಕ್ಸ್ ಭಾರತದಲ್ಲಿ ಪ್ರಸಾರಗೊಳ್ಳುತ್ತಿದೆ. ಇದು ‘‘ದೇವರು ಕೊಟ್ಟರೂ ಪೂಜಾರಿ ಬಿಡ’’ ಎಂಬ ಸ್ಥಿತಿ!

ಪ್ಯಾರಿಸ್ 2024 ಒಲಿಂಪಿಕ್ಸ್, ಇನ್ನೇನು ಕೊನೆಯ ಹಂತ ತಲುಪುತ್ತಿದೆ. ಈ ಬಾರಿ ನೀವು ಏನೆಲ್ಲ ನೋಡಿದಿರಿ? ಏನೆಲ್ಲ ಮಿಸ್ ಮಾಡಿಕೊಂಡಿರಿ?

ವೈಯಕ್ತಿಕವಾಗಿ ನನಗೆ ಒಲಿಂಪಿಕ್ಸ್‌ನ ಬಲು ಇಷ್ಟದ ಭಾಗಗಳೆಂದರೆ ಸ್ವಿಮ್ಮಿಂಗ್, ಅದರಲ್ಲೂ ಸಿಂಕ್ರೊನೈಸ್ಡ್ ಸ್ವಿಮ್ಮಿಂಗ್, ಜಿಮ್ನಾಸ್ಟಿಕ್ಸ್, ಅತ್ಲೆೆಟಿಕ್ಸ್ (ಆರಂಭಿಕ ಹಂತದಿಂದಲೇ), ಡೈವಿಂಗ್, ಈಕ್ವೆಸ್ಟ್ರಿಯನ್, ಟ್ರಾಂಪೊಲಿನ್, ತೇಕ್ವಾಂಡೊ, ಫೆನ್ಸಿಂಗ್ ಈ ಕಣ್ಣಿನ ಹಬ್ಬಗಳಿಲ್ಲದೆ, ಒಲಿಂಪಿಕ್ಸ್ ಕಂಡ ತೃಪ್ತಿ ಪರಿಪೂರ್ಣವಾಗಿ ಸಿಗದು. ಈ ಬಾರಿ ನೀವೇನಾದರೂ ಈ ಎಲ್ಲ ಈವೆಂಟ್‌ಗಳನ್ನು ನೋಡುವುದು ಸಾಧ್ಯವಾಯಿತೇ? ಭಾರತ ಪಾಲ್ಗೊಳ್ಳುತ್ತಿರುವ (ಶಟಲ್ ಬ್ಯಾಡ್ಮಿಂಟನ್, ಶೂಟಿಂಗ್, ಟೇಬಲ್ ಟೆನಿಸ್, ಬಾಕ್ಸಿಂಗ್, ಹಾಕಿ ಹೀಗೆ ಕೆಲವೇ) ಈವೆಂಟ್‌ಗಳನ್ನು ಮತ್ತು ಚೂರುಪಾರು ಅತ್ಲೆೆಟಿಕ್ಸ್ ಬಿಟ್ಟರೆ ಬೇರೆ ಏನೇನು ಕಾಣಲು ಸಾಧ್ಯವಾಯಿತು?

ಈ ಬಾರಿ ಒಲಿಂಪಿಕ್ಸ್ ಭಾರತದಲ್ಲಿ ಕಳೆಗಟ್ಟಲೇ ಇಲ್ಲ. ಭಾರತಕ್ಕೆ ಹೆಚ್ಚು ಪದಕಗಳಿಲ್ಲದಿದ್ದರೂ, ಭಾರತೀಯರು (ಕ್ರಿಕೆಟ್ ಹೊರತುಪಡಿಸಿ) ಆಟವನ್ನು ಆನಂದಿಸುವ ಏಕೈಕ ಅಂತರ್‌ರಾಷ್ಟ್ರೀಯ ಪಂದ್ಯಾವಳಿ ಎಂದರೆ, ನಾಲ್ಕು ವರ್ಷಗಳಿಗೊಮ್ಮೆ ಬರುವ ಒಲಿಂಪಿಕ್ಸ್. ಈ ಬಾರಿ ಅಂತಿಮ ಪದಕ ಪಟ್ಟಿಯಲ್ಲಿ ಹೆಚ್ಚು ಪದಕಗಳೂ ಇಲ್ಲದಿದ್ದರೆ, ಪ್ಯಾರಿಸ್ ಒಲಿಂಪಿಕ್ಸ್ ನಮ್ಮ ನೆನಪಿನ ಪಟಲದಿಂದ ಬಲುಬೇಗ ಸರಿದುಹೋಗಲಿದೆ.

ಯಾಕೆ ಹೀಗಾಯಿತು? ಪರಿಸ್ಥಿತಿ ಹೀಗಾಗಿದೆ ಎಂಬುದನ್ನು ಮಾಧ್ಯಮಗಳಾದರೂ ನಿಮಗೆ ನೆನಪು ಮಾಡಿಕೊಟ್ಟವೇ?

ಖಂಜೂಸಿ ವ್ಯಾಪಾರಿಗಳ ಕೈಗೆ ಒಲಿಂಪಿಕ್ಸ್ ಪ್ರಸಾರದ ಏಕಸ್ವಾಮ್ಯದ ಹಕ್ಕು ಸಿಕ್ಕಿದ್ದರ ಫಲ ಇದು. ನಿಜಕ್ಕೂ ಏನಾಗಿದೆ ಎಂಬುದನ್ನು ವಿವರವಾಗಿ ನೋಡೋಣ.

ಒಲಿಂಪಿಕ್ ನಿಯಮಗಳು

ಗೇಮ್‌ನ ಜಾಗತಿಕ ಮಾಧ್ಯಮ ಹಕ್ಕುಗಳನ್ನು ಹೊಂದಿರುವ ಅಂತರ್‌ರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಚಾರ್ಟರ್‌ನಲ್ಲಿ, "The IOC takes all necessary steps in order to ensure the fullest coverage by the different media and the widest possible audience in the world for the Olympic Games." ಎಂದಿದೆ. ಐಒಸಿಯು, ಪ್ರತೀ ಒಲಿಂಪಿಕ್ಸ್‌ಗೆ ಪ್ರಸಾರದ ಹಕ್ಕುಗಳನ್ನು ಮಾರುವ ಕಿರಿಕಿರಿ ತಪ್ಪಿಸಲು2001ರಲ್ಲಿ, ತನ್ನದೇ ಒಲಿಂಪಿಕ್ ಪ್ರಸಾರ ಸೇವೆಗಳ ಘಟಕ (ಒಬಿಎಸ್) ಸ್ಥಾಪಿಸಿದೆ. ಅದರ ಮೂಲಕ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ, ಎಲ್ಲ ಕ್ರೀಡೆಗಳ ಚಿತ್ರೀಕರಣ ಮಾಡಿಸಿ, ಅದರ ಪ್ರಸಾರದ ಹಕ್ಕುಗಳನ್ನು ಜಗತ್ತಿನಾದ್ಯಂತ ಮಾರಾಟ ಮಾಡುವುದು ಈಗ ಸಂಪ್ರದಾಯ. ಇದು ಲಾಭದಾಯಕವಾದರೂ ವ್ಯಾಪಾರ ಅಲ್ಲ (Not for profit). ಇಲ್ಲಿ ಬಂದಹಣ ಮತ್ತೆ ಒಲಿಂಪಿಕ್ ಚಳವಳಿಯ ಅಭ್ಯುದಯಕ್ಕೇ ಬಳಕೆ ಆಗಬೇಕೆನ್ನುತ್ತದೆ ಐಒಸಿ ನಿಯಮ.

ಬೇರೆ ಕ್ರೀಡೆಗಳಂತೆ, ಇಲ್ಲಿ ಪ್ರಸಾರದ ಹಕ್ಕಿಗೆ ಬಿಡ್ಡಿಂಗ್ ಇರುವುದಿಲ್ಲ. ಅದು ಮಾತುಕತೆ ಮತ್ತು ಆ ಬಳಿಕದ ಒಪ್ಪಂದದ ಮೂಲಕ ನಿಗದಿ ಆಗುತ್ತದೆ. ವಾರ್ನರ್ ಬ್ರದರ್ಸ್, ಡಿಸ್ಕವರಿ, CMG, NBC, ಪೀಕಾಕ್, 9, CBC ಹೀಗೆ ಜಗತ್ತಿನ ಬೇರೆ ಬೇರೆ ಕಡೆ, ಬೇರೆ ಬೇರೆ ಪ್ರಮುಖ ಪ್ರಸಾರ ಸಂಸ್ಥೆಗಳು ಒಲಿಂಪಿಕ್ ರಸದೌತಣ ಬಡಿಸಲು ಸಿದ್ಧವಾಗಿವೆ. 2020ರ ಟೋಕಿಯೊ ಒಲಿಂಪಿಕ್ಸ್ ತನಕವೂ, ಭಾರತದಲ್ಲಿ ಸರಕಾರಿ ‘ದೂರದರ್ಶನ’ ಈ ಪ್ರಸಾರದ ಹಕ್ಕನ್ನು ಪಡೆಯುತ್ತಿತ್ತು. ಆದರೆ, ಈ ಬಾರಿ ಬದಲಾವಣೆ ಆಗಿದೆ. ಅಂಬಾನಿ ಬಳಗದ ಮಾಲಕತ್ವದಲ್ಲಿರುವ ವಯಾಕಾಂ 18 ಮೀಡಿಯಾ ಪ್ರೈ. ಲಿ. ಸಂಸ್ಥೆ, ಭಾರತ ಮಾತ್ರವಲ್ಲದೆ ಬಾಂಗ್ಲಾದೇಶ, ಭೂತಾನ್, ಮಾಲ್ದೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳಿಗೆ ಒಲಿಂಪಿಕ್ಸ್ ಪ್ರಸಾರದ ಹಕ್ಕನ್ನು ಒಬಿಎಸ್‌ನಿಂದ ಖರೀದಿಸಿದೆ. ಇದು ಸುಮಾರು 160 ಕೋಟಿ ರೂ.ಗಳ ಡೀಲ್ ಎಂದು ಇಂಗ್ಲೆಂಡಿನ ಗಾರ್ಡಿಯನ್ ಈ ಹಿಂದೆ ವರದಿ ಮಾಡಿತ್ತು. ಅಂಬಾನಿ ಬಳಗದ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪತ್ನಿ, ನೀತಾ ಅಂಬಾನಿ ಅವರು ಐಒಸಿಯಲ್ಲಿ ಭಾರತದ ಸದಸ್ಯೆ ಎಂಬುದನ್ನು ಇಲ್ಲಿ ಮರೆಯುವಂತಿಲ್ಲ. ಈ ಪದವಿ ಕೂಡ, ವಯಾಕಾಂಗೆ ಪ್ರಸಾರದ ಹಕ್ಕು ಸಿಗುವಲ್ಲಿ ಪಾತ್ರ ವಹಿಸಿರುವುದನ್ನು ಅಲ್ಲಗಳೆಯುವಂತಿಲ್ಲ. ವಯಾಕಾಂ ತನ್ನ sports18 1HD, 2HD ಮತ್ತು 3HD (ಹಿಂದಿ) ಮೂಲಕ ಮಾತ್ರವಲ್ಲದೆ, ಜಿಯೊ ಸಿನೆಮಾ ಮೂಲಕ ಒಲಿಂಪಿಕ್ ಕ್ರೀಡೆಗಳ ಲೈವ್ ಸ್ಟ್ರೀಮಿಂಗ್ ಮಾಡುತ್ತಿದೆ.

2007ರಲ್ಲಿ ಸರಕಾರ ಜಾರಿಗೆ ತಂದಿರುವ Sports Broadcasting Signals (Mandatory Sharing with Prasar Bharti) ಕಾಯ್ದೆಯ ಅನ್ವಯ, ಸರಕಾರಿ ಮಾಲಕತ್ವದ ದೂರದರ್ಶನ ಕೂಡ ಈ ‘ರಾಷ್ಟ್ರೀಯ ಮಹತ್ವದ’ ಕಾರ್ಯಕ್ರಮವನ್ನು ವಯಾಕಾಂನಿಂದ ಎರವಲು ಪಡೆದು ಪ್ರಸಾರ ಮಾಡುತ್ತಿದೆ.

ರುಚಿ ಕೆಡಿಸಿದ್ದು

ವೀರೇನ್ ರಸ್ಕಿನಾ (ಹಾಕಿ); ಸಾನಿಯಾ ಮಿರ್ಝಾ, ಸೋಮದೇವ್ (ಟೆನಿಸ್); ಪಾರುಪಳ್ಳಿ ಕಷ್ಯಪ್ (ಬ್ಯಾಡ್ಮಿಂಟನ್); ಅಂಜುಬಾಬಿ ಜಾರ್ಜ್, ಮುರಳಿ ಶ್ರೀಶಂಕರ್ (ಅತ್ಲೆಟಿಕ್ಸ್); ಸಾಕ್ಷಿ ಮಲಿಕ್ (ಕುಸ್ತಿ); ವಿಜೇಂದ್ರ ಸಿಂಗ್ (ಬಾಕ್ಸಿಂಗ್); ಸೌರವ್ ಘೋಷಲ್ (ಸ್ಕ್ವಾಷ್); ಅತಾನು ದಾಸ್ (ಆರ್ಚರಿ) ಅವರಂತಹ ದೇಶದ ಪ್ರಮುಖ ಕ್ರೀಡಾಪಟುಗಳನ್ನೇ ಪ್ಯಾರಿಸ್ ಒಲಿಂಪಿಕ್ಸ್ ಪ್ರಸಾರದ ಆ್ಯಂಕರ್/ವಿಷಯ ಪರಿಣತರಾಗಿ ಕರೆಸಿಕೊಂಡಿರುವ ವಯಾಕಾಂ ಒಳ್ಳೆಯ ಕೆಲಸವನ್ನೇ ಮಾಡಿದೆ. ಆದರೆ, ಬೆಳಗ್ಗೆ 11:30ರಿಂದ ರಾತ್ರಿ 2:೦೦ ಗಂಟೆಯ ತನಕವೂ ನಡೆಯುತ್ತಿರುವ ಈ ಪ್ರಸಾರದಲ್ಲಿ, ಕೇವಲ ಭಾರತ ಸ್ಪರ್ಧಿಸುತ್ತಿರುವ ಕ್ರೀಡೆಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ; ಹೆಚ್ಚೆಂದರೆ ಭಾರತದ ಸ್ಪರ್ಧೆಯ ಆಸುಪಾಸಿನಲ್ಲಿ ಅದೇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬೇರೆ ದೇಶಗಳ ಸ್ಪರ್ಧೆಗಳನ್ನು ಮಾತ್ರ ದೇಶದ ವೀಕ್ಷಕರಿಗೆ ತೋರಿಸಲಾಗುತ್ತಿದೆ.

ಸಾಮಾನ್ಯವಾಗಿ ಕಣ್ಣಿಗೆ ಹಬ್ಬ ಅನ್ನಿಸುವ, ಈ ಲೇಖನದ ಆರಂಭದಲ್ಲಿ ಹೇಳಲಾಗಿರುವ ಯಾವುದೇ ಕ್ರೀಡೆಗಳನ್ನು sports 18 ಚಾನೆಲ್‌ನಲ್ಲಿ ತೋರಿಸಲಾಗುತ್ತಿಲ್ಲ. ಹಾಗಾಗಿ ಈಜು, ಜಿಮ್ನಾಸ್ಟಿಕ್ಸ್, ಇಕ್ವೆಸ್ಟ್ರಿಯನ್ ಇತ್ಯಾದಿ ಸ್ಪರ್ಧೆಗಳು ಆರಂಭಿಕ ಹಂತದ ಅತ್ಲೆಟಿಕ್ಸ್ ಸ್ಪರ್ಧೆಗಳು ಯಾವುದೂ ಭಾರತೀಯರಿಗೆ ಕಾಣಸಿಕ್ಕಿದಂತಿಲ್ಲ. ಇನ್ನು ಅವನ್ನು ಪಾವತಿ ಚಾನೆಲ್‌ಗಳಲ್ಲಿ ತೋರಿಸಿದ್ದಾರೆಯೇ (ಜಿಯೊ ಸಿನೆಮಾ) ಗೊತ್ತಿಲ್ಲ. ಹೀಗೆ ತೋರಿಸದಿರಲು ಬೇರೆ ತಾಂತ್ರಿಕ ಕಾರಣಗಳಿವೆಯೇ ಎಂಬುದು ಸ್ಪಷ್ಟವಿಲ್ಲ. ಒಟ್ಟಾರೆ, ಒಲಿಂಪಿಕ್ಸ್ ಈ ಬಾರಿ ‘ಆನಿಗಳ’ ಕಾರಣದಿಂದಾಗಿ ನೀರಸವಾಗಿದೆ. ಸಾಮಾನ್ಯವಾಗಿ, ಇಂತಹ ಅಪರೂಪದ ಕ್ರೀಡಾ ಅನುಭವಗಳು ಎಳೆಯರಲ್ಲಿ ಕ್ರೀಡೆಗಳ ಕುರಿತು ಆಸಕ್ತಿ ಮೂಡಿಸುವ, ಪ್ರೇರಣೆ ಒದಗಿಸುವ ಸಾಮರ್ಥ್ಯ ಹೊಂದಿರುತ್ತವೆ. ಆದರೆ, ಉದಾರೀಕರಣದ ಫಲ ಉಣ್ಣುತ್ತಿರುವ ‘ಮಾರ್ಕೆಟಿಂಗ್ ದಾಳಿಕೋರರು’ ತಮ್ಮ ವ್ಯವಹಾರ ಹಿತಾಸಕ್ತಿಗಳ ರಕ್ಷಣೆಯ ಹೆಸರಿನಲ್ಲಿ, ದೇಶದ ಎಳೆಯರ ಕಣ್ಣುಗಳಲ್ಲಿ ಮೂಡಬಹುದಾದ ಕನಸುಗಳನ್ನೂ ಕೊಲ್ಲುತ್ತಿದ್ದಾರೆ.

ಇನ್ನೊಂದು ಗಮನಾರ್ಹ ಅಂಶ ಎಂದರೆ, ಇಂತಹ ಸನ್ನಿವೇಶಗಳು ಎದುರಾದಾಗ, ಅದನ್ನು ಮೊದಲ ಬಾರಿಗೆ ಜನರ ಗಮನಕ್ಕೆ ತರಬೇಕಾದುದು ದೇಶದ ಪ್ರಮುಖ ಮಾಧ್ಯಮಗಳು. ದುರದೃಷ್ಟವಶಾತ್, ಅವೆಲ್ಲವೂ ಇಂದು ಇದೇ ‘ಆನಿ’ ಬಳಗಗಳ ಕೈಯಲ್ಲಿವೆ. ಹಾಗಾಗಿ, ತಮ್ಮ ಧಣಿಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಯಾವುದನ್ನೂ ಅವು ಸುದ್ದಿ ಮಾಡುವುದೇ ಇಲ್ಲ.

ರಾಷ್ಟ್ರೀಯ ಹಿತಾಸಕ್ತಿ ಇರುವ ಕ್ರೀಡಾ ಸುದ್ದಿಗಳು ಎಲ್ಲರಿಗೆ ತಲುಪುವಂತಾಗಬೇಕು ಎಂಬ ಅಂತರ್‌ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಆಶಯ, ಭಾರತದ ಸುಪ್ರೀಂ ಕೋರ್ಟಿನ ನಿರ್ದೇಶನ ಹಾಗೂ ಭಾರತ ಸರಕಾರದ ಕಾನೂನುಗಳೆಲ್ಲವನ್ನೂ ಬಹಳ ಚಾಲಾಕಿನಿಂದ ಬದಿಗೆ ಸರಿಸಿ, ಈ ಬಾರಿ ಒಲಿಂಪಿಕ್ಸ್ ಭಾರತದಲ್ಲಿ ಪ್ರಸಾರಗೊಳ್ಳುತ್ತಿದೆ. ಇದು ‘‘ದೇವರು ಕೊಟ್ಟರೂ ಪೂಜಾರಿ ಬಿಡ’’ ಎಂಬ ಸ್ಥಿತಿ!

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ರಾಜಾರಾಂ ತಲ್ಲೂರು

contributor

Similar News