ನ್ಯೂಕ್ಲಿಯರ್‌ ವಿದ್ಯುತ್ತಿಗೆ ರಿವರ್ಸ್‌ ಇಂಜಿನಿಯರಿಂಗ್

ನ್ಯೂಕ್ಲಿಯರ್ ರಿಯಾಕ್ಟರ್‌ಗಳು ಹಾನಿಗೊಂಡರೆ, ಆ ಪರಿಸರಕ್ಕೆ ಮಾರಕ ಎಂಬುದನ್ನು ಚರ್ನೋಬೈಲ್, ಫುಕುಷಿಮಾ ದುರಂತಗಳು ತೋರಿಸಿಕೊಟ್ಟಿವೆ. ಈ ನಿಟ್ಟಿನಲ್ಲಿ ಒಂದು ನಿಯಂತ್ರಕ ಚೌಕಟ್ಟು ಇನ್ನೂ ಸಿದ್ಧಗೊಂಡಿಲ್ಲ. ಮೇಲಾಗಿ, ವಿಕಿರಣಶೀಲ ನ್ಯೂಕ್ಲಿಯರ್ ವೇಸ್ಟ್ ನಿರ್ವಹಣೆ ಖಾಸಗಿ ರಂಗದ ಕೈಗೆ ಸಿಕ್ಕಾಗ ಅದು ಎಷ್ಟು ಸುರಕ್ಷಿತ ಎಂಬುದು ಇನ್ನೂ ಸ್ಪಷ್ಟವಿಲ್ಲ.

Update: 2024-08-24 06:23 GMT

ಜುಲೈ 23ರಂದು ತನ್ನ 2024-25ನೇ ಸಾಲಿನ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘‘ವಿಕಸಿತ ಭಾರತದಲ್ಲಿ ನ್ಯೂಕ್ಲಿಯರ್ ಇಂಧನವು ಮಹತ್ವದ ಪಾತ್ರ ವಹಿಸಲಿದೆ. ಖಾಸಗಿ ಕ್ಷೇತ್ರದ ಸಹಯೋಗದಲ್ಲಿ ಭಾರತ್ ಸ್ಮಾಲ್ ರಿಯಾಕ್ಟರ್‌ಗಳ ಸ್ಥಾಪನೆ, ಅದಕ್ಕಾಗಿ ಹೊಸ ತಂತ್ರಜ್ಞಾನಗಳ ಸಂಶೋಧನೆಗೆ ಸರಕಾರ ಆರ್ಥಿಕ ಸಹಾಯ ಒದಗಿಸಲಿದೆ. ಮಧ್ಯಂತರ ಬಜೆಟ್‌ನಲ್ಲಿ ಸಂಶೋಧನೆಗಳಿಗೆಂದು ಮೀಸಲಿಡಲಾಗಿದ್ದ ಒಂದು ಲಕ್ಷ ಕೋಟಿ ರೂ.ಗಳ ಕಾರ್ಪಸ್ ನಿಧಿಯಲ್ಲಿ ಈ ಯೋಜನೆಗೂ ಹಣ ಮೀಸಲಿಡಲಾಗುವುದು’’ ಎಂದು ಹೇಳಿದ್ದರು. ವಿದ್ಯುತ್ ಉತ್ಪಾದನೆಯ ಅತ್ಯಂತ ದುಬಾರಿ ವಿಧಾನವಾದ ನ್ಯೂಕ್ಲಿಯರ್ ವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ಅಗತ್ಯವಿರುವ ದುಡ್ಡು ಎಲ್ಲಿಂದ ಬರುತ್ತದೆ? ಅದು ಪರಿಸರಕ್ಕೆ ಎಷ್ಟು ಸುರಕ್ಷಿತ? ಇದಕ್ಕೆ ಕಾನೂನು ಚೌಕಟ್ಟಿನ ಸ್ಥಿತಿ ಏನಿದೆ? ಈ ಅಪಾಯಕಾರಿ ತಂತ್ರಜ್ಞಾನವನ್ನು ಖಾಸಗಿಯವರ ಕೈಗೆ ವರ್ಗಾಯಿಸುವುದರ ಪರಿಣಾಮಗಳೇನು? ಎಂಬೆಲ್ಲ ಪ್ರಶ್ನೆಗಳು ಇನ್ನೂ ಶೈಶವದಲ್ಲಿಯೇ ಇವೆ. ಆದರೆ ಭಾರತ್ ಸ್ಮಾಲ್ ರಿಯಾಕ್ಟರ್‌ಗಳು ಭಾರೀ ಸುದ್ದಿಯಲ್ಲಿವೆ.

2070ರ ಹೊತ್ತಿಗೆ ಪರಿಸರದಲ್ಲಿ ಕಾರ್ಬನ್ ಹೊರಸೂಸುವಿಕೆ ಶೂನ್ಯಕ್ಕಿಳಿಸಿಕೊಳ್ಳುವ ಧಾವಂತದಲ್ಲಿರುವ ಜಗತ್ತು 2050ರ ಹೊತ್ತಿಗೆ ನ್ಯೂಕ್ಲಿಯರ್ ಮೂಲದ ವಿದ್ಯುತ್ ಉತ್ಪಾದನೆಯನ್ನು ಈಗಿರುವುದರ ಮೂರು ಪಟ್ಟು ಹೆಚ್ಚಿಸಿಕೊಳ್ಳುವುದಕ್ಕೆ ನಿರ್ಧರಿಸಿದೆ. ಸಿಒಪಿ28 ತೆಗೆದುಕೊಂಡಿರುವ ಈ ತೀರ್ಮಾನಕ್ಕೆ, ಬಿಲ್‌ಗೇಟ್ಸ್ ತರಹದ ಜಾಗತಿಕ ‘ಡ್ರೈವಿಂಗ್ ಸೀಟಿನ’ ಹಕ್ಕುದಾರರ ಪೂರ್ಣ ಆಶೀರ್ವಾದ ಇರುವಂತಿದೆ. ಇದೇ ಹಾದಿಯಲ್ಲಿ ಭಾರತವೂ ಕೂಡ 2031-32ರ ಹೊತ್ತಿಗೆ ಭಾರತದ ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹಾಲಿ ಇರುವ 8,180 ಮೆಗಾವಾಟ್‌ನಿಂದ 22,480 ಮೆಗಾವಾಟ್‌ಗಳಿಗೆ (ಅಂದರೆ ಮೂರು ಪಟ್ಟು) ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ ಎಂದು ಭಾರತದ ಅಣುಶಕ್ತಿ ಇಲಾಖೆಯ ಸಚಿವ ಡಾ. ಜಿತೇಂದ್ರ ಸಿಂಗ್ ಸಂಸತ್ತಿನಲ್ಲಿ ಮೊನ್ನೆ ಹೇಳಿದ್ದರು. (PIB Release ID: 2037046) ಸದ್ಯಕ್ಕೆ ಭಾರತದ ವಿದ್ಯುತ್ ಉತ್ಪಾದನೆಯಲ್ಲಿ ನ್ಯೂಕ್ಲಿಯರ್ ಇಂಧನದ ಪಾಲು ಕೇವಲ ಶೇ. 2.76. ನಮ್ಮಲ್ಲಿ ಸದ್ಯ 8 ಪರಮಾಣು ವಿದ್ಯುತ್ ಉತ್ಪಾದನಾ ಕೇಂದ್ರಗಳಿದ್ದು, ಅಲ್ಲಿರುವ 24 ರಿಯಾಕ್ಟರ್‌ಗಳಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಈಗ 21 ಹೊಸ ರಿಯಾಕ್ಟರ್‌ಗಳು (ಸಾಮರ್ಥ್ಯ 15,300 ಮೆಗಾವಾಟ್) ಸ್ಥಾಪನೆಯ ಬೇರೆಬೇರೆ ಹಂತಗಳಲ್ಲಿವೆ.

► ಕಾನೂನು ಜಿಡುಕುಗಳು

ಭಾರತದಲ್ಲಿ ಅಟಾಮಿಕ್ ಎನರ್ಜಿ ಕಾಯ್ದೆ 1962ರ ಅಡಿಯಲ್ಲಿ, ನ್ಯೂಕ್ಲಿಯರ್ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಅಧಿಕಾರ ಇರುವುದು ಕೇವಲ ಭಾರತ ಸರಕಾರಕ್ಕೆ ಮಾತ್ರ. ಈ ಕಾಯ್ದೆಯ ಸೆಕ್ಷನ್ 3ಕ್ಕೆ ತಿದ್ದುಪಡಿ ಆಗದೇ, ಸರಕಾರ - ಸಾರ್ವಜನಿಕ ವಲಯದ ಕಂಪೆನಿಗಳನ್ನು ಬಿಟ್ಟು ಬೇರೆ ಖಾಸಗಿಯವರು ಈ ಕ್ಷೇತ್ರಕ್ಕೆ ಬರಲು ಅವಕಾಶ ಇಲ್ಲ. ಇದಲ್ಲದೆ, 2010ರಲ್ಲಿ ಜಾರಿಗೆ ಬಂದಿರುವ ನ್ಯೂಕ್ಲಿಯರ್ ಅವಘಡಗಳಿಗೆ ನಾಗರಿಕ ಹೊಣೆಗಾರಿಕೆ ಕಾಯ್ದೆ (ಎನ್‌ಸಿಎಲ್‌ಡಿ-2010) ಕೂಡ ಖಾಸಗಿಯವರ ರಂಗಪ್ರವೇಶಕ್ಕೆ ದೊಡ್ಡ ಅಡ್ಡಿಯಾಗಿದೆ. 2015ರಲ್ಲಿ ‘ಸರಕಾರಿ ಕಂಪೆನಿ’ಯ ವ್ಯಾಖ್ಯಾನ ಬದಲಾದ ಮೇಲೆ, ಅಲ್ಲಿಯ ತನಕ ಕೇವಲ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐಎಲ್) ಉಸ್ತುವಾರಿಯಲ್ಲಿದ್ದ ಪರಮಾಣು ವಿದ್ಯುತ್ ಉತ್ಪಾದನಾ ರಂಗಕ್ಕೆ ಎನ್‌ಟಿಪಿಸಿ ಇಳಿಯುವುದು ಸಾಧ್ಯವಾಯಿತು.

ಹಾಗಾಗಿ ಈ ಕಾನೂನುಗಳಲ್ಲಿ ತಿದ್ದುಪಡಿ ಆಗುವ ತನಕ ಭಾರತದಲ್ಲಿ ಪರಮಾಣು ವಿದ್ಯುತ್ ರಂಗಕ್ಕೆ ಖಾಸಗಿ ಪ್ರವೇಶ ಸಾಧ್ಯವಿಲ್ಲ. ಇದಲ್ಲದೆ, ಭಾರತದ ಪರಮಾಣು ಶಕ್ತಿ ನಿಯಂತ್ರಣ ಮಂಡಳಿ ಕಡೆಯಿಂದ ಈ ಹೊಸ ತಂತ್ರಜ್ಞಾನಕ್ಕೆ ಸುರಕ್ಷಾ ನಿಯಮಗಳು ಇನ್ನಷ್ಟೇ ರೂಪುಗೊಳ್ಳಬೇಕಿವೆ. ಭಾರತದ ನ್ಯೂಕ್ಲಿಯರ್ ರಿಯಾಕ್ಟರ್‌ಗಳ ನಿರ್ವಹಣೆ ಅಂತರ್‌ರಾಷ್ಟ್ರೀಯ ಮಾನದಂಡಗಳೊಂದಿಗೆ ಸಮದಂಡಿಯಾಗುವ ನಿಟ್ಟಿನಲ್ಲಿ ನ್ಯೂಕ್ಲಿಯರ್ ಆಡಿಟ್ ಅಥಾರಿಟಿಯನ್ನು ಅಂತರ್‌ರಾಷ್ಟ್ರೀಯ ಅಟಾಮಿಕ್ ಎನರ್ಜಿ ಏಜನ್ಸಿಯ ಸಹಯೋಗದಲ್ಲಿ ಸ್ಥಾಪಿಸಲು ಕ್ರಮಗಳಾಗುತ್ತಿವೆಯಂತೆ. ನೀತಿ ಆಯೋಗ 2023ರ ಮೇ ತಿಂಗಳಿನಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಬದಲಾವಣೆಗಳಿಗೆ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ (ಎಸ್‌ಎಂಆರ್) ಪಾತ್ರದ ಕುರಿತು ವರದಿಯೊಂದನ್ನು ಸಿದ್ಧಪಡಿಸಿ ಸರಕಾರಕ್ಕೆ ಒಪ್ಪಿಸಿದೆ. ಅದು ತನ್ನ ವರದಿಯಲ್ಲಿ ಸರಕಾರ ಈ ನಿಟ್ಟಿನಲ್ಲಿ ಸಾಗಬೇಕಿರುವ ಹಾದಿ ಸರಳವಾದದ್ದಲ್ಲ ಎಂದು ಸ್ಪಷ್ಟವಾಗಿ ಸೂಚಿಸಿದೆ.

► ಖಾಸಗಿ ತಯಾರಿಗಳು

ನ್ಯೂಕ್ಲಿಯರ್ ರಿಯಾಕ್ಟರ್‌ಗಳ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು ಖಾಸಗಿ ರಂಗಕ್ಕೆ ಬಾಗಿಲು ತೆರೆಯಲಾಗುತ್ತಿದೆ ಎಂಬ ಸುದ್ದಿ ಕೇಳಿಸುತ್ತಲೇ, ಭಾರತದಲ್ಲಿ ‘ಖಾಸಗಿ ರಂಗ’ದ ವ್ಯಾಖ್ಯಾನವನ್ನೇ ಬದಲಿಸಿರುವವರೆಲ್ಲ ನೆಟ್ಟಗಾಗಿದ್ದಾರೆ. ಅದೇ ಅದಾನಿ, ಅಂಬಾನಿ ಜೊತೆಗೆ ಟಾಟಾ ಮತ್ತು ವೇದಾಂತ ಗುಂಪುಗಳು ಈ ಕುರಿತು ಆಸಕ್ತಿ ತೋರಿಸಿದ್ದು, ತಲಾ 40,000 ಕೋಟಿ ರೂ.ಗಳ ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ.

ಈ ನಡುವೆ, ಗುಜರಾತ್ ಮೂಲದ ಮೇಹುಲ್ ಷಾ ಎಂಬವರ ಕ್ಲೀನ್ ಕೋರ್ ಥೋರಿಯಂ ಎನರ್ಜಿ ಎಂಬ ಅಮೆರಿಕನ್ ಕಂಪೆನಿಯಿಂದ ಈ ಸಣ್ಣ ರಿಯಾಕ್ಟರ್‌ಗಳಿಗೆ ಬೇಕಾಗಿರುವ ಹೊಸ ಇಂಧನವನ್ನು ಪಡೆಯಲು ನಿರ್ಧರಿಸಲಾಗಿದೆ ಎಂಬ ಸುದ್ದಿ ತಿರುಗಾಡುತ್ತಿದೆ.ANEEL (ಅಡ್ವಾನ್ಸ್ಡ್

ನ್ಯೂಕ್ಲಿಯರ್ ಎನರ್ಜಿ ಫಾರ್ ಎನ್‌ರಿಚ್ಡ್ ಲೈಫ್) ಎಂಬ ಥೋರಿಯಂ ಹಾಗೂ HALEU (ಯುರೇನಿಯಂನ ಒಂದು ವಿಶಿಷ್ಟ ವಿಧ) ಮಿಶ್ರಣದ ಈ ಇಂಧನಕ್ಕೆ ಮೇಹುಲ್ ಅವರ ಕಂಪೆನಿ ಪೇಟೆಂಟ್ ಹೊಂದಿದೆಯಂತೆ. ಪ್ರತಿದಿನ ಬದಲಿಸಬೇಕಿರುವ ಸಾಂಪ್ರದಾಯಿಕ ಯುರೇನಿಯಂ ಇಂಧನ ಬಳಸುವ ಎನ್‌ಪಿಸಿಐಎಲ್ ರಿಯಾಕ್ಟರ್‌ಗಳು, ಅವುಗಳ ಜೀವನಾವಧಿಯಾದ 60 ವರ್ಷಗಳಲ್ಲಿ, ತಲಾ ಸುಮಾರು 1.75ಲಕ್ಷದಷ್ಟು ಇಂತಹ ವಿಕಿರಣಶೀಲ ಇಂಧನ ಬಂಡಲ್‌ಗಳನ್ನು ಬದಲಿಸಬೇಕಾಗುತ್ತದೆ ಆದರೆ ಅದೇ ಅವಧಿಗೆ ತಮ್ಮ ಕಂಪೆನಿಯ ಹೊಸ ಇಂಧನದ ಕೇವಲ 22,000 ಬಂಡಲ್‌ಗಳು ಸಾಕಾಗುತ್ತವೆ, ಹಾಗಾಗಿ ನ್ಯೂಕ್ಲಿಯರ್ ವೇಸ್ಟ್ ಉತ್ಪಾದನೆಯಾಗುವ ಪ್ರಮಾಣದಲ್ಲಿ ಶೇ. 85 ಕಡಿಮೆ ಆಗಲಿದೆ ಎಂದು ಮೇಹುಲ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಹೊಸ ತಂತ್ರಜ್ಞಾನ ಅಮೆರಿಕದಲ್ಲಿನ್ನೂ ಪರಿಶೀಲನೆಯಲ್ಲಿರುವಾಗಲೇ, ಭಾರತ ಇದೇ ತಂತ್ರಜ್ಞಾನವನ್ನು ತನ್ನ ಭಾರತ್ ರಿಯಾಕ್ಟರ್‌ಗಳಿಗೆ ಬಳಸಲಿದೆ ಎಂಬ ಸುದ್ದಿ ಅಧಿಕಾರಸ್ಥರ ಕಾರಿಡಾರ್‌ಗಳಲ್ಲಿ ಓಡಾಡುತ್ತಿದೆ.

► ರಿವರ್ಸ್ ಇಂಜಿನಿಯರಿಂಗ್!

ಭಾರತ್ ಸ್ಮಾಲ್ ರಿಯಾಕ್ಟರ್‌ಯೋಜನೆಯಲ್ಲಿ ಯಾವುದು ಮೊದಲು ಆಗಬೇಕೋ ಅದು ಕಡೆಗೆ ಮತ್ತು ಯಾವುದು ಕಡೆಗೆ ಆಗಬೇಕೋ ಅದು ಮೊದಲು ನಡೆಯುತ್ತಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ.

ನ್ಯೂಕ್ಲಿಯರ್ ಹಾದಿಯಲ್ಲಿ ಪ್ರತೀ ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಲು 2.5ಲಕ್ಷದಿಂದ 6 ಲಕ್ಷ ರೂ.ಗಳ ವೆಚ್ಚ ಬರುತ್ತದೆ. ಇಷ್ಟೊಂದು ದುಬಾರಿ ದರದಲ್ಲಿ, ಕೇವಲ ಐದಾರು ವರ್ಷಗಳಲ್ಲಿ ಇನ್ನೂ 15,000 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಲು ಅಗಾಧ ಪ್ರಮಾಣದಲ್ಲಿ ಹಣ ಅಗತ್ಯವಿದೆ.

ವಿಕಿರಣಶೀಲ ಇಂಧನ ಚೀನಾ ಹಾಗೂ ರಶ್ಯಗಳ ಹಿಡಿತದಲ್ಲಿದೆ. ಥೋರಿಯಂ ಭಾರತದಲ್ಲಿ ವ್ಯಾಪಕವಾಗಿ ಲಭ್ಯ ಇದೆಯೆಂದಾದರೂ, ಅದನ್ನು ಗಣಿಗಾರಿಕೆ ನಡೆಸಿ ಹೊರತೆಗೆಯುವ ಖರ್ಚು ಬೇರೆ ಇದೆ. ಜೊತೆಗೆ ತನ್ನ ತಂತ್ರಜ್ಞಾನವನ್ನು ಉಚಿತವಾಗಿ ಕೊಡುವ ಮೇಹುಲ್ ಅವರ ಕಂಪೆನಿ, ಉತ್ಪಾದನೆಯಾದ ಪ್ರತೀ ಮೆಗಾವಾಟ್ ವಿದ್ಯುತ್ತಿಗೆ ಜೀವನದುದ್ದಕ್ಕೂ ರಾಯಲ್ಟಿ ಪಡೆಯುವ ಯೋಚನೆಯಲ್ಲಿ ಇರುವಂತಿದೆ!

ನ್ಯೂಕ್ಲಿಯರ್ ರಿಯಾಕ್ಟರ್‌ಗಳು ಹಾನಿಗೊಂಡರೆ, ಆ ಪರಿಸರಕ್ಕೆ ಮಾರಕ ಎಂಬುದನ್ನು ಚರ್ನೋಬೈಲ್, ಫುಕುಷಿಮಾ ದುರಂತಗಳು ತೋರಿಸಿಕೊಟ್ಟಿವೆ. ಈ ನಿಟ್ಟಿನಲ್ಲಿ ಒಂದು ನಿಯಂತ್ರಕ ಚೌಕಟ್ಟು ಇನ್ನೂ ಸಿದ್ಧಗೊಂಡಿಲ್ಲ. ಮೇಲಾಗಿ, ವಿಕಿರಣಶೀಲ ನ್ಯೂಕ್ಲಿಯರ್ ವೇಸ್ಟ್ ನಿರ್ವಹಣೆ ಖಾಸಗಿ ರಂಗದ ಕೈಗೆ ಸಿಕ್ಕಾಗ ಅದು ಎಷ್ಟು ಸುರಕ್ಷಿತ ಎಂಬುದು ಇನ್ನೂ ಸ್ಪಷ್ಟವಿಲ್ಲ. ಉಡುಪಿಯಲ್ಲಿ ಉಷ್ಣವಿದ್ಯುತ್ ಸ್ಥಾವರದ ಹೆಸರಿನಲ್ಲಿ ಬೂದಿಮಳೆ ಸುರಿಸಿದವರೇ ಈ ಯೋಜನೆಗೂ ಉಮೇದ್ವಾರರು!

ಇಲ್ಲಿಯವರೆಗೆ ಭಾರತ ನ್ಯೂಕ್ಲಿಯರ್ ವೇಸ್ಟ್ ಇರದಂತೆ ‘ಕ್ಲೋಸ್ಡ್ ನ್ಯೂಕ್ಲಿಯರ್ ಫ್ಯೂಲ್ ಸೈಕಲ್’ ವಿಧಾನವನ್ನು ಅನುಸರಿಸುತ್ತಿತ್ತು. ಆದರೆ HALEU ಇಂಧನ ರೀಸೈಕಲ್ ಮಾಡಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಈ ಹೊಸ ತಂತ್ರಜ್ಞಾನದ ಸುರಕ್ಷತೆಯ ಬಗ್ಗೆ ಅಧ್ಯಯನ ಇನ್ನಷ್ಟೇ ನಡೆಯಬೇಕಿದೆ.

ವಾಸ್ತವ ಹೀಗಿದ್ದರೂ, ಸರಕಾರದ ರಿವರ್ಸ್ ಇಂಜಿನಿಯರಿಂಗ್ ತಂತ್ರದ ಕಾರಣದಿಂದಾಗಿ ‘ಭಾರತ್ ಸ್ಮಾಲ್ ರಿಯಾಕ್ಟರ್’ಗಳು ಭಾರೀ ಸುದ್ದಿಯಲ್ಲಿವೆ!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News