ಗುಣಮಟ್ಟದ ಸೇವೆ ಕೇಳುತ್ತಿದೆ TRAI: ತಾರಮ್ಮಯ್ಯ ಆಡಿಸುತ್ತಿದೆಯೇ COAI?
BSNL, MTNL, VSNLನಂತಹ ಸಾರ್ವಜನಿಕ ಸಂಸ್ಥೆಗಳನ್ನು ಬಲಿಕೊಟ್ಟು, ಖಾಸಗಿಯವರಿಗೆ ದೇಶದ ಟೆಲಿಕಾಂ ವ್ಯವಸ್ಥೆಯನ್ನು ಹರಿವಾಣದಲ್ಲಿಟ್ಟು ಕೊಟ್ಟ ಬಳಿಕ, ಈಗ ಅವರು ನೀಡುತ್ತಿರುವ ಸೇವೆಯ ಗುಣಮಟ್ಟದ ಬಗ್ಗೆ ನಿಯಂತ್ರಣ ಪ್ರಾಧಿಕಾರ ಪ್ರಶ್ನಿಸಿದರೆ ಗುರ್ರೆನ್ನುವುದು ಮತ್ತು ಸೇವಾದಾತರೆಲ್ಲ ಕಾರ್ಟೆಲ್ ಮಾಡಿಕೊಂಡು, ಸಾರ್ವಜನಿಕ ಹಿತಾಸಕ್ತಿಗಳ ವಿರುದ್ಧ ವಾದಿಸುವುದು ಸತ್ಸಂಪ್ರದಾಯ ಅಲ್ಲ. ಜಾಗತಿಕವಾಗಿ ಒಪ್ಪಿತವಾದ ಗುಣಮಟ್ಟಗಳನ್ನು ಅನುಸರಿಸುವುದು ಅವರ ಕರ್ತವ್ಯ ಆಗಬೇಕಾಗಿತ್ತು. ಹಾಗಾಗುತ್ತಿಲ್ಲ ಎಂಬುದನ್ನು ಸರಕಾರ ಮತ್ತು ಸಾರ್ವಜನಿಕರಿಬ್ಬರೂ ಗಮನಿಸಿಕೊಳ್ಳಬೇಕಾಗಿದೆ.
ಉದಾರೀಕರಣ ಪ್ರಕ್ರಿಯೆ ತನ್ನ ಮೂಲ ಉದ್ದೇಶವನ್ನು ಮರೆತಾಗ, ಅದು ಆಯ್ದ ಕೆಲವರನ್ನು ಮಾತ್ರ ಒಳಗೊಳ್ಳುವ ಖಾಸಗೀಕರಣ ಪ್ರಕ್ರಿಯೆಯಾಗಿ ಮಾರ್ಪಡುತ್ತದೆ. ಈ ಖಾಸಗಿ ಹಿತಾಸಕ್ತಿಗಳ ಕಾರ್ಟೆಲ್ ಸರಕಾರದ ನೀತಿಗಳನ್ನು ತನ್ನ ಮೂಗಿನ ನೇರಕ್ಕೆ ಬಗ್ಗಿಸಿಕೊಳ್ಳಲು ಪ್ರಯತ್ನಿಸುತ್ತದೆ. ಇಂತಹದೊಂದು ಹದ ತಪ್ಪಿದ ಉದಾರೀಕರಣಕ್ಕೆ ಉದಾಹರಣೆ ಈಗ ಟೆಲಿಕಾಂ ರಂಗದಲ್ಲಿ ಗೋಚರಕ್ಕೆ ಬರತೊಡಗಿದೆ.
ಆಗಿರುವುದು ಇಷ್ಟು. ಭಾರತ ಸರಕಾರದ ಟೆಲಿಕಾಂ ವ್ಯವಸ್ಥೆ ಉದಾರೀಕರಣಗೊಂಡ ಬಳಿಕ, ಈ ವ್ಯವಸ್ಥೆಯ ನಿಯಂತ್ರಣಕ್ಕಾಗಿ ಸ್ಥಾಪಿತವಾಗಿರುವ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು (TRAI), 2023ರ ಜುಲೈ 25ರಂದು ಹಳೆಯ ನಿಯಮಗಳ ಜಾಗದಲ್ಲಿ ಹೊಸದಾಗಿ ಕೆಲವು ನಿಯಂತ್ರಕ ನಿಯಮಗಳನ್ನು ಪ್ರಕಟಿಸಿತ್ತು. Telecom Regulatory Authority of India Repealing Regulations, 2023 (02 of 2023) ಎಂಬ ಹೆಸರಿನ ಈ ಹೊಸ ನಿಯಮಗಳು ಟೆಲಿಕಾಂ ಸೇವೆಗಳ ಗುಣಮಟ್ಟ (ಕಿoS) ಸುಧಾರಣೆಯ ನಿಟ್ಟಿನಲ್ಲಿ, ಖಾಸಗಿ ಟೆಲಿಕಾಂ ಸೇವಾದಾತ ಕಂಪೆನಿಗಳಿಗೆ ಕೆಲವು ಹೊಸ ಷರತ್ತುಗಳನ್ನು ವಿಧಿಸಿತ್ತು. ಮಾತ್ರವಲ್ಲದೆ, ಸೇವೆಯಲ್ಲಿ ಚ್ಯುತಿಗಳಿಗೆ ಇನ್ಸೆಂಟಿವ್ ಕಡಿತಗಳಂತಹ ಶಿಸ್ತುಕ್ರಮಗಳನ್ನು ಸೂಚಿಸಿತ್ತು.
ಆದರೆ ಈ ಹೊಸ ನಿಯಮಗಳಿಗೆ ಟೆಲಿಕಾಂ ಸೇವಾದಾತ ಸಂಸ್ಥೆಗಳು ತಮ್ಮ ಸಮ್ಮತಿಯನ್ನು ನೀಡುತ್ತಿಲ್ಲ. ಮೊನ್ನೆ ಮಂಗಳವಾರ (ಎಪ್ರಿಲ್ 09) TRAI ಈ ಕುರಿತಾಗಿ ನಡೆಸಿದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡ ಭಾರತೀಯ ಸೆಲ್ಯೂಲರ್ ಆಪರೇಟರ್ಸ್ ಅಸೋಸಿಯೇಷನ್ (COAI) ಪ್ರತಿನಿಧಿಗಳು ಇದಕ್ಕೆ ಒಕ್ಕೊರಲಿನ ತಗಾದೆ ತೆಗೆದಿದ್ದಾರೆ. ಅಂದ ಹಾಗೆ, ಈ COAIಯು ಖಾಸಗಿ ಟೆಲಿಕಾಂ ಸೇವಾದಾತರಾಗಿರುವ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವಡಾಫೋನ್-ಐಡಿಯಾಗಳು ಒಳಗೊಂಡಿರುವ ಪ್ರಭಾವಿ ಸಂಘಟನೆಯಾಗಿದೆ.
TRAI ಹೇಳಿರುವುದೇನು?
ಈ ಹಿಂದೆ ಟೆಲಿಕಾಂ ಸೇವೆಗಳ ಗುಣಮಟ್ಟದ ಬಗ್ಗೆ TRAI ನಿಯಮಗಳನ್ನು ಪ್ರಕಟಿಸಿದ್ದು 2001ನೇ ಇಸವಿಯಲ್ಲಿ. ಅದು 2ಜಿ ಕಾಲದ್ದು. ಆಗ ಇದ್ದದ್ದು ಡಯಲ್ ಅಪ್ ಇಂಟರ್ನೆಟ್ ಸಂಪರ್ಕ ಮಾತ್ರ. ಈಗ ದೇಶ 6ಜಿಗೆ ಸಿದ್ಧತೆಯಲ್ಲಿದೆ. ದೇಶದಾದ್ಯಂತ 4ಜಿ ಮತ್ತು 5ಜಿ ತಂತ್ರಜ್ಞಾನಗಳು ಚಾಲ್ತಿಯಲ್ಲಿವೆ. ಅರ್ಥಾತ್, ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಸೇವೆಗಳು ವೈರ್ ಸಹಿತ/ರಹಿತವಾಗಿ ಲಭ್ಯವಿವೆ. ಇಂತಹ ಬದಲಾದ ಸನ್ನಿವೇಶದಲ್ಲಿ ಟೆಲಿಕಾಂ ಸೇವೆಗಳ ಗುಣಮಟ್ಟದ ಸುಧಾರಣೆಯ ಬಗ್ಗೆ TRAI ಕಡೆಯಿಂದ ಬಂದಿರುವ ಸೂಚನೆಗಳು ಬಹಳ ಸಕಾಲಿಕವೇ ಆಗಿವೆ. ಆದರೆ, COAI ಪ್ರತಿನಿಧಿಗಳು ಇದನ್ನು ಒಪ್ಪುತ್ತಿಲ್ಲವಂತೆ. ಗ್ರಾಹಕರ ಸೇವಾ ಗುಣಮಟ್ಟದ ಕುರಿತ ಅನುಭವಗಳು ನಿರ್ಧಾರವಾಗುವುದು ಅವರ ಸೆಲ್‌ಫೋನ್ ಉಪಕರಣದ ಗುಣಮಟ್ಟ, ಬಳಸುವ ಆ್ಯಪ್‌ಗಳು, ಲಭ್ಯವಿರುವ ಸ್ಪೆಕ್ಟ್ರಂನ ಪ್ರಮಾಣ, ನೆಟ್‌ವರ್ಕ್ ಹಾಗೂ ಆಕ್ಸೆಸ್ ನೋಡ್‌ಗಳ ನಡುವಿನ ಸಂಪರ್ಕದ ಗುಣಮಟ್ಟ (ಬ್ಯಾಕ್ ಹೌಲ್) ಮತ್ತು ಟೆಲಿಕಾಂ ಟವರ್ ಇತ್ಯಾದಿ ಮೂಲಸೌಕರ್ಯಗಳ ಸ್ಥಾಪನೆಗೆ ಹಾದಿಯ ಹಕ್ಕು (right of the way) ಮೊದಲಾದ ಅಂಶಗಳನ್ನು ಅವಲಂಬಿಸಿರುತ್ತವೆ ಎಂಬುದು ಅವರ ವಾದ. ಇವುಗಳನ್ನೆಲ್ಲ ಸರಿಪಡಿಸದೆ, ತಮ್ಮ ಮೇಲೆ ನಿಯಮಗಳನ್ನು ಬಿಗಿಗೊಳಿಸುವುದು ಸರಿಯಲ್ಲ ಎಂಬುದು COAI ಪ್ರತಿನಿಧಿಗಳ ನಿಲುವು. ಸರಕಾರದ ಈ ನಿಯಮಗಳನ್ನೆಲ್ಲ ಹಂತಹಂತವಾಗಿ ಅಳವಡಿಸಿಕೊಳ್ಳುವುದಕ್ಕೆ ಕನಿಷ್ಠ ಐದು ವರ್ಷಗಳ ಸಮಯಾವಕಾಶ ನೀಡಬೇಕೆಂದು ಅವರು ಬೇಡಿಕೆ ಮುಂದಿಟ್ಟಿದ್ದಾರೆ. ಇದೆಲ್ಲಕ್ಕಿಂತಲೂ ಅಚ್ಚರಿ ಎಂದರೆ, ಜಿಯೋ, ಏರ್‌ಟೆಲ್ ಮತ್ತು ವಡಾಫೋನ್-ಐಡಿಯಾ ಮೂರೂ ಪ್ರಮುಖ ಸಂಸ್ಥೆಗಳು ಬೇರೆಲ್ಲ ಸಂಗತಿಗಳಲ್ಲಿ ಪರಸ್ಪರ ಸ್ಪರ್ಧಿಗಳಾಗಿ ಮೇಲಾಟದಲ್ಲಿ ನಿರತರಾಗಿದ್ದರೂ, ಈ ವಿಚಾರದಲ್ಲಿ ಮಾತ್ರ ಏಕಕಂಠದಿಂದ ಸರಕಾರದ ಹೊಸನೀತಿಗೆ ವಿರೋಧ ಸೂಚಿಸಿವೆ.
ಗುಣಮಟ್ಟ ಸುಧಾರಣೆ ಸತತವಾಗಿ ನಡೆಯಬೇಕಾದ ಸಂಗತಿಯಾಗಿದೆ. 4ಜಿ ಅನುಷ್ಠಾನದ ಅವಧಿಯಲ್ಲಿ ಕಾಲ್‌ಡ್ರಾಪ್ (ಹಠಾತ್ ಆಗಿ ಕರೆಗಳು ನಿಷ್ಕ್ರಿಯಗೊಳ್ಳುವ) ಸಮಸ್ಯೆ ಇತ್ತು. ಅದನ್ನು ಹಂತಹಂತವಾಗಿ ಸುಧಾರಿಸಲಾಗಿದೆ. ಅದೇ ರೀತಿ ಈಗಲೂ ಕೂಡ ಅನುಷ್ಠಾನಕ್ಕೆ ಸಮಯ ಕೊಡಬೇಕು. ಸಮಯ ಕೊಡದೇ ಏಕಾಏಕಿ ಬಿಗಿ ನಿಯಮಗಳನ್ನು ಹೇರಬಾರದು ಎಂದು COAI ಪ್ರತಿನಿಧಿಗಳು ಅಭಿಪ್ರಾಯ ಪಟ್ಟಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ.
5ಜಿ ತಂತ್ರಜ್ಞಾನ ಬಳಕೆಯ ವೇಳೆ, ನೆಟ್‌ವರ್ಕ್ ಸ್ಲೈಸಿಂಗ್ ತಂತ್ರದ (ಅಂದರೆ ಒಂದೇ ನೆಟ್‌ವರ್ಕ್‌ನಲ್ಲಿ ಹಲವು ಪ್ರತ್ಯೇಕ ಉಪನೆಟ್‌ವರ್ಕ್‌ಗಳನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ರೂಪಿಸುವುದು) ಮೇಲೆ ಕಣ್ಣಿಟ್ಟುಕೊಂಡಿರುವ ಈ ಖಾಸಗಿ ಸಂಸ್ಥೆಗಳು, ಅದರಿಂದ ಸಾಮಾನ್ಯ ಟೆಲಿಕಾಂ ಗ್ರಾಹಕರ ಮೇಲೆ ದುಷ್ಪರಿಣಾಮಗಳಾಗುವುದಿಲ್ಲ ಎಂದು ವಾದ ಮಾಡುತ್ತಿವೆ.
ಸೇವೆಗಳ ಗುಣಮಟ್ಟ ಸುಧಾರಣೆಯ ದೃಷ್ಟಿಯಿಂದ ನೆಟ್‌ವರ್ಕ್ ಡೌನ್ ಟೈಮನ್ನು ಟವರ್ (ಬೇಸ್ ಸ್ಟೇಶನ್) ವ್ಯಾಪ್ತಿಯ ಬದಲು ವೈಯಕ್ತಿಕ ಫೋನ್‌ಗಳ ಮಟ್ಟದಲ್ಲಿ ಲೆಕ್ಕಾಚಾರ ಮಾಡಬೇಕು ಮತ್ತು ಡೇಟಾ ಒಂದು ಫೋನಿನಿಂದ ಇನ್ನೊಂದು ಫೋನಿಗೆ ತಲುಪುವ ಸಮಯದ ಗಾತ್ರ (ಲೇಟೆನ್ಸಿ)ವನ್ನು 4ನಿ-5ಜಿ ತಂತ್ರಜ್ಞಾನಗಳ ಹಿನ್ನೆಲೆಯಲ್ಲಿ ಈಗಿರುವ 250 ಮೈಕ್ರೊ ಸೆಕೆಂಡುಗಳಿಂದ 100 ಮೈಕ್ರೊ ಸೆಕೆಂಡುಗಳಿಗೆ ತಗ್ಗಿಸಬೇಕೆಂಬ TRAI ಸೂಚನೆಗೂ ಟೆಲಿಕಾಂ ಸೇವಾದಾತರು ಒಲ್ಲೆ ಎಂದು ಸಬೂಬುಗಳನ್ನು ಹೇಳುತ್ತಿದ್ದಾರಂತೆ.
ಇಷ್ಟೆಲ್ಲ ಅಭಿಪ್ರಾಯಭೇದಗಳು ಇರುವ ಹಿನ್ನೆಲೆಯಲ್ಲಿ ಟೆಲಿಕಾಂ ಸೇವಾದಾತರಿಗೆ ತಮ್ಮ ಪ್ರತಿಕ್ರಿಯೆಗಳನ್ನು ಎಪ್ರಿಲ್ 22ರ ಒಳಗೆ ತನಗೆ ನೀಡುವಂತೆ ಖಿಖಂI ನಿರ್ದೇಶಿಸಿದೆ. ಇವೆಲ್ಲ ಎಲ್ಲಿಗೆ ತಲುಪಲಿದೆ ಎಂಬುದು ಸಾರ್ವತ್ರಿಕ ಚುನಾವಣೆಗಳ ಬಳಿಕ ಗೊತ್ತಾಗಬಹುದು.
ಸಾರ್ವಜನಿಕರು ಗಮನಿಸಬೇಕಾದದ್ದು
BSNL, MTNL, VSNLನಂತಹ ಸಾರ್ವಜನಿಕ ಸಂಸ್ಥೆಗಳನ್ನು ಬಲಿಕೊಟ್ಟು, ಖಾಸಗಿಯವರಿಗೆ ದೇಶದ ಟೆಲಿಕಾಂ ವ್ಯವಸ್ಥೆಯನ್ನು ಹರಿವಾಣದಲ್ಲಿಟ್ಟು ಕೊಟ್ಟ ಬಳಿಕ, ಈಗ ಅವರು ನೀಡುತ್ತಿರುವ ಸೇವೆಯ ಗುಣಮಟ್ಟದ ಬಗ್ಗೆ ನಿಯಂತ್ರಣ ಪ್ರಾಧಿಕಾರ ಪ್ರಶ್ನಿಸಿದರೆ ಗುರ್ರೆನ್ನುವುದು ಮತ್ತು ಸೇವಾದಾತರೆಲ್ಲ ಕಾರ್ಟೆಲ್ ಮಾಡಿಕೊಂಡು, ಸಾರ್ವಜನಿಕ ಹಿತಾಸಕ್ತಿಗಳ ವಿರುದ್ಧ ವಾದಿಸುವುದು ಸತ್ಸಂಪ್ರದಾಯ ಅಲ್ಲ. ಜಾಗತಿಕವಾಗಿ ಒಪ್ಪಿತವಾದ ಗುಣಮಟ್ಟಗಳನ್ನು ಅನುಸರಿಸುವುದು ಅವರ ಕರ್ತವ್ಯ ಆಗಬೇಕಾಗಿತ್ತು. ಹಾಗಾಗುತ್ತಿಲ್ಲ ಎಂಬುದನ್ನು ಸರಕಾರ ಮತ್ತು ಸಾರ್ವಜನಿಕರಿಬ್ಬರೂ ಗಮನಿಸಿಕೊಳ್ಳಬೇಕಾಗಿದೆ.
ಟೆಲಿಕಾಂ ಸೇವೆಯದು ಈ ಕಥೆ ಆಗಿರುವಾಗ, ಇನ್ನು ದೇಶದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿಯವರ ಕೈಗೆ ಕೊಡಲು ಭಾರತ ಸರಕಾರ ಕಳೆದ 5-6 ವರ್ಷಗಳಿಂದ ಭರಪೂರ ಪ್ರಯತ್ನದಲ್ಲಿದೆ. ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದರೆ, ಆಗ ಈ ಖಾಸಗಿ ಕಾರ್ಟೆಲ್‌ಗಳು ಯಾವ ರೀತಿಯಲ್ಲಿ ವರ್ತಿಸಬಹುದೆಂಬುದನ್ನು ಊಹಿಸಿದರೆ ಆತಂಕವಾಗುತ್ತದೆ. ಇನ್ನು ಕೆಲವೇ ವರ್ಷಗಳಲ್ಲಿ ವಿದ್ಯುತ್ ದೇಶದ ಅತಿದೊಡ್ಡ ಇಂಧನ ಮೂಲ ಅನ್ನಿಸಿಕೊಳ್ಳಲಿದೆ ಮತ್ತು ಈಗಾಗಲೇ ಅದರ ಉತ್ಪಾದನೆ ಬಹುತೇಕ ಖಾಸಗಿ ಕೈಸೇರಿದೆ. ಹಾಗಾಗಿ ತಮ್ಮದೇ ಉತ್ಪಾದನೆಯ ವಿದ್ಯುತ್ತನ್ನು ತಾವೇ ಗ್ರಾಹಕರಿಗೆ ವಿತರಿಸುವ ವ್ಯವಸ್ಥೆ ಮಾಡಿಕೊಂಡ ಸನ್ನಿವೇಶದಲ್ಲಿ, ಖಾಸಗಿಯವರು ತಮ್ಮ ಲಾಭ-ಸ್ವಾರ್ಥ ಬಿಟ್ಟು ಸಾರ್ವಜನಿಕರ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಂಡು, ಸೇವೆಗೆ ಸನ್ನದ್ಧರಾಗಿರುತ್ತಾರೆಂಬುದು ಕನಸಿನ ಮಾತು.
ಹಾಗಾಗಿ, ಟೆಲಿಕಾಂ ಕ್ಷೇತ್ರದ ಈ ಎಲ್ಲ ಬೆಳವಣಿಗೆಗಳು, ಉದಾರೀಕರಣದ ಹೆಸರಲ್ಲಿ ನಡೆದಿರುವ ಖಾಸಗೀಕರಣದ ಅಪಾಯಗಳ ಬಗ್ಗೆ ದೇಶಕ್ಕೆ ಪಾಠ ಆಗಬೇಕು.