ಲಸಿಕೆ: ಅತಿ ಬುದ್ಧಿವಂತಿಕೆ, ಅತಿ ಮೂರ್ಖತನ ಎರಡೂ ತನಿಖೆ ಆಗಲಿ
ಲಸಿಕೆ ಬರುವಾಗ ಇಂಚಿಂಚಲ್ಲೂ ಮುಂದೆ ನಿಂತು ಪ್ರಚಾರ ಪಡೆದ, ತನ್ನ ಬೆನ್ನು ತಾನೇ ತಟ್ಟಿಕೊಂಡ ಸರಕಾರ, ಈಗ ಅದರ ಅಡ್ಡಪರಿಣಾಮಗಳ ಪ್ರಶ್ನೆ ಬಂದಾಗ, ಜನ ಅಕಾರಣವಾಗಿ ಸಾಯುತ್ತಿರುವಾಗ, ಅದಕ್ಕೆ ಕಾರಣಗಳನ್ನು ಪತ್ತೆ ಮಾಡಿ, ಅಪಾಯವರ್ಗದಲ್ಲಿ ಬರುವವರನ್ನು ಗುರುತಿಸಿ, ಅವರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಿ ಎಂದಾಗ, ಮುಂಚೂಣಿಯಲ್ಲಿ ನಿಲ್ಲುವ ಬದಲು ತಾರಮ್ಮಯ್ಯ ಆಡಿಸುತ್ತಿರುವುದು ಆಘಾತಕಾರಿ. ಈ ಎಲ್ಲ ಸಂಗತಿಗಳು ಕೂಡ ಸಮಗ್ರ ತನಿಖೆಗೆ ಅರ್ಹ.
ಆಸ್ಟ್ರಜೆನೆಕಾ ಔಷಧಿ ಕಂಪೆನಿ ತನ್ನ ಕೋವಿಡ್ ಲಸಿಕೆಯನ್ನು ಮಾರುಕಟ್ಟೆಯಿಂದ ಹಿಂದೆಗೆದುಕೊಂಡಿರುವುದು ಎರಡು ಹಂತಗಳಲ್ಲಿ ಹಲವಾರು ಪ್ರಶ್ನೆಗಳನ್ನು ಮೂಡಿಸಿದೆ. ಜಾಗತಿಕ ಹಂತದಲ್ಲಿ ಲಸಿಕೆಯ ಕುರಿತಾದ ಅತಿಬುದ್ಧಿವಂತಿಕೆ ಮತ್ತು ಭಾರತದ ಮಟ್ಟದಲ್ಲಿ ಲಸಿಕೆಯ ಕುರಿತು ತೋರಿಸಲಾಗಿದ್ದ ಅತಿಮೂರ್ಖತನ ಗಳೆರಡೂ ಈಗ ಜಗಜ್ಜಾಹೀರಾಗಿದ್ದು, ಇವೆರಡೂ ಸಮಗ್ರವಾಗಿ ತನಿಖೆ ಆದಾಗಲಷ್ಟೇ ಜಾಗತಿಕ ಆರೋಗ್ಯ ವ್ಯವಸ್ಥೆ ತಾನು ಈಗ ಕಳೆದುಕೊಂಡಿರುವ ಜನವಿಶ್ವಾಸವನ್ನು ಮರಳಿ ಗಳಿಸಿಕೊಳ್ಳುವುದು ಸಾಧ್ಯ.
ಅತಿ ಬುದ್ಧಿವಂತಿಕೆ
ಜಗತ್ತಿಗೆ ಕೋವಿಡ್ ಲಸಿಕೆ ತುರ್ತಾಗಿ ಲಭ್ಯವಾಗಲು, 2020 ಸೆಪ್ಟಂಬರ್ ವೇಳೆಗೆ ಉಚಿvi ಎಂಬ ಜಾಗತಿಕ ಲಸಿಕೆ ಒಕ್ಕೂಟ (ಇದು WHO, UNICEF, ವಿಶ್ವ ಬ್ಯಾಂಕ್, ಬಿಲ್ ಆ್ಯಂಡ್ ಮೆಲಿಂಡಾ ಗೇಟ್ ಫೌಂಡೇಷನ್ ಮತ್ತು ಐದು ದೇಶಗಳ ಸರಕಾರಗಳು ಸೇರಿದಂತೆ ಹಲವು ಸಂಘಟನೆಗಳ ಒಕ್ಕೂಟವಾಗಿದ್ದು, ಬಡ ರಾಷ್ಟ್ರಗಳಿಗೆ ಕಡಿಮೆ ದರದಲ್ಲಿ ಲಸಿಕೆ ಒದಗಿಸುವ ಉದ್ದೇಶ ಹೊಂದಿದೆ), CEPI (Coalition for Epidemic preparedness Innovations), WHO ಮತ್ತು UNICEFಗಳ ನಡುವೆ ಒಪ್ಪಂದವಾಗಿ, COVAX ಎಂಬ ಆಧಾರಸ್ತಂಭ ರೂಪುಗೊಂಡಿತ್ತು. ಇದು 2023 ಡಿಸೆಂಬರ್ ಕೊನೆಯ ತನಕ ಅಸ್ತಿತ್ವದಲ್ಲಿತ್ತು. ಲಸಿಕೆಗೆ ನೀತಿ, ನಿಯಮ, ಸುರಕ್ಷೆಗಳ ಹೊಣೆ ಇದ್ದುದು WHOನ SAGE (Strategic Advisory Group of Experts) ತಂಡಕ್ಕೆ. ಸುಮಾರು 7 ವಿವಿಧ ಲಸಿಕೆಗಳಿಗೆ ಅಔಗಿಂಘಿ ವೇದಿಕೆಯಾಗಿ ಕೆಲಸ ಮಾಡಿತ್ತು. 146 ದೇಶಗಳಲ್ಲಿ, 20 ಸಾವಿರ ಕೋಟಿ ಲಸಿಕೆಗಳನ್ನು ಈ ವ್ಯವಸ್ಥೆಯ ಅಡಿಯಲ್ಲಿ ಹಂಚಿಕೆ ಮಾಡಲಾಗಿದೆ.
ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿವಿಯ ಜೆನ್ನರ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಶೋಧಕಿ ಡಾ.ಆಡ್ರಿಯಾನ್ ಹಿಲ್ ಸಂಶೋಧಿಸಿದ ಕೋವಿಡ್ ಲಸಿಕೆಯನ್ನು ಆಸ್ಟ್ರಜೆನೆಕಾ ಸಂಸ್ಥೆ ಉತ್ಪಾದನೆ ಆರಂಭಿಸಿದ್ದು 2020 ಜೂನ್ 4ರಂದು. ಈ ಕುರಿತು Gavi, CEPI ಮತ್ತು ಆಸ್ಟ್ರಜೆನೆಕಾ ನಡುವೆ 75 ಕೋಟಿ ಡಾಲರ್‌ಗಳ ಒಪ್ಪಂದ ಆಗಿತ್ತು. COVAX ವ್ಯವಸ್ಥೆಯ ಮೂಲಕ ಹಂಚಿಕೆಯಾದ ಈ ಲಸಿಕೆ ಈಗ ಅಡ್ಡಪರಿಣಾಮಗಳ ಅಪವಾದಕ್ಕೆ ತುತ್ತಾಗಿದ್ದು, ಮಾರುಕಟ್ಟೆಯಿಂದ ಹೊರತೆರಳಿದೆ.
ಈಗ COVAX ವ್ಯವಸ್ಥೆ ಸಕ್ರಿಯವಿಲ್ಲ, ಆಸ್ಟ್ರಜೆನೆಕಾ ಮಾಡಿದಂತೆ, ಕೋವಿಡ್ ಲಸಿಕೆಗಳು ಒಂದೊಂದಾಗಿ ಮಾರುಕಟ್ಟೆಯಿಂದ ಹೊರತೆರಳತೊಡಗಿದರೆ, ಲಸಿಕೆಯ ದೀರ್ಘಕಾಲಿಕ ಅಡ್ಡಪರಿಣಾಮಗಳಿಗೆ ಹೊಣೆ ಹೊರಬೇಕಾದವರು ಯಾರು? ಸಹಜ ಹಾದಿಯಲ್ಲಿ ಸುಮಾರು 8-15 ವರ್ಷಗಳ ಕಾಲ ಸಮಗ್ರ ಸಂಶೋಧನೆಗಳ ಬಳಿಕ ಜನಬಳಕೆಗೆ ಸಿಗಬೇಕಾಗಿದ್ದ ಲಸಿಕೆಯೊಂದನ್ನು ಜಗನ್ಮಾರಿಯ ಹೆಸರಿನಲ್ಲಿ ಒಂದು ವರ್ಷದ ಒಳಗೇ ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಅತಿಬುದ್ಧಿವಂತಿಕೆಯ ಫಲವನ್ನು ಜಗತ್ತು ಈಗ ಉಣ್ಣುತ್ತಿದೆ. ವಿಜ್ಞಾನವನ್ನು ಸಹಜ ಹಾದಿಯಲ್ಲಿ ಮುನ್ನಡೆಸುವ ಹೊಣೆ ಹೊರಬೇಕಾಗಿದ್ದ Wಊಔನಂತಹ ಸಂಸ್ಥೆಗಳೇ ಈ ರೀತಿಯ ಅಪಸವ್ಯದ ಮುಂಚೂಣಿಯಲ್ಲಿರುವಾಗ, ಆಗಿರುವ ತಪ್ಪನ್ನು ಪರಿಶೀಲಿಸಿ ಸರಿಪಡಿಸಬೇಕಾಗಿರುವವರು ಯಾರು? ನಡೆದಿರುವ ಈ ಎಲ್ಲ ಚಾರಿತ್ರಿಕ ತಪ್ಪುಗಳ ಸಮಗ್ರ ತನಿಖೆ ನಡೆದು, ಮತ್ತೆ ಜಗನ್ಮಾರಿಗಳು ಬಂದಾಗ ಹೇಗೆ ಮುನ್ನಡೆಯಬೇಕೆಂಬ ಪಾಠ ಕಲಿಯುವುದು ಅಗತ್ಯವಲ್ಲವೆ?
ಅತಿ ಮೂರ್ಖತನ
2020 ಎಪ್ರಿಲ್ ತನಕವೂ ಅಮೆರಿಕದ ಕೊಡಾಜೆನಿಕ್ಸ್ ಜೊತೆ ಸೇರಿ ಕೋವಿಡ್ ಲಸಿಕೆ ಉತ್ಪಾದಿಸಲಿದ್ದೇವೆ ಎನ್ನುತ್ತಿದ್ದ ಭಾರತದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII), ಏಕಾಏಕಿ ಎಪ್ರಿಲ್ ಕೊನೆಯ ವಾರದಲ್ಲಿ ಆಸ್ಟ್ರಜೆನೆಕಾ ಲಸಿಕೆ ಲೈಸನ್ಸ್ ಪಡೆದು ಉತ್ಪಾದನೆ ನಡೆಸಲಿದ್ದೇವೆ ಎಂದು ಪ್ರಕಟಿಸಿತು. ಆಗಸ್ಟ್ ತಿಂಗಳಿನಲ್ಲಿ ಭಾರತದ 20 ರಾಜ್ಯಗಳಲ್ಲಿ ಆ ಲಸಿಕೆ ಸಂಶೋಧನಾ ಪ್ರಯೋಗಗಳು ಆರಂಭಗೊಂಡವು. ಡಿಸೆಂಬರ್ 7, 2020ರಂದು ಈ ಲಸಿಕೆ ಬಳಕೆಗೆ ಅನುಮತಿ ಕೋರಿ SII ಭಾರತ ಸರಕಾರಕ್ಕೆ ಅರ್ಜಿ ಸಲ್ಲಿಸಿತು ಮತ್ತು 2021 ಜನವರಿ 3ರಂದು ಭಾರತ ಸರಕಾರದ ಅಆSಅಔ, ಲಸಿಕೆಯ ನಿಯಂತ್ರಿತ ತುರ್ತು ಬಳಕೆಗೆ ಅನುಮತಿ ನೀಡಿತು. ಅಂದರೆ ಒಂದೇ ವರ್ಷದ ಒಳಗೆ ಭಾರತದಲ್ಲಿ ಎಲ್ಲ ವೈಜ್ಞಾನಿಕ ಸಂಶೋಧನಾ ಪ್ರಕ್ರಿಯೆಗಳು ಮುಗಿದವು!
ವಿಜ್ಞಾನ ಅದರದೇ ರೀತಿಯಲ್ಲಿ ಸಾಗುತ್ತಿರುವಾಗ, ಈ ದೇಶದ ರಾಜಕೀಯ ಕೂಡ ಅಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸಿತು. 2020ರ ಎಪ್ರಿಲ್ 20ರಂದು ದೇಶವನ್ನುದ್ದೇಶಿಸಿ ಮಾತನಾಡಿದ ಭಾರತದ ಪ್ರಧಾನಮಂತ್ರಿಗಳು, ಭಾರತದ ವಿಜ್ಞಾನಿಗಳು ಕಿರು ಅವಧಿಯಲ್ಲಿ ನಮ್ಮದೇ ಲಸಿಕೆ ತಯಾರಿಸುತ್ತಿದ್ದಾರೆ. ಭಾರತ ಜಗತ್ತಿನಲ್ಲೇ ಅತಿ ಅಗ್ಗದ ಲಸಿಕೆ ಹೊಂದಲಿದೆ, ಅದರ ಅನುಮತಿ ಪ್ರಕ್ರಿಯೆಗಳಿಗೆ ವೇಗ ನೀಡಿದ್ದು, ಎರಡು ‘ಮೇಡ್ ಇನ್ ಇಂಡಿಯಾ’ ಲಸಿಕೆಗಳೊಂದಿಗೆ ಜಗತ್ತಿನ ಅತಿದೊಡ್ಡ ಲಸಿಕೆ ಆಂದೋಲನವನ್ನು ಶೀಘ್ರ ಆರಂಭಿಸಲಿದ್ದೇವೆ ಎಂದು ಪ್ರಕಟಿಸಿದ್ದರು.
2020 ನವೆಂಬರ್ 28ರಂದು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಕಾರ್ಖಾನೆಗೆ ಸ್ವತಃ ಪ್ರಧಾನಮಂತ್ರಿಗಳು ಭೇಟಿ ನೀಡಿ, ಲಸಿಕೆ ಕುರಿತ ಸಂಚಲನ ಹೆಚ್ಚಿಸಿದ್ದರು. ಈ ನಡುವೆ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್‌ಗಳ ಮಾಲಕರ ನಡುವೆ, ಅವರ ಲಸಿಕೆಯಲ್ಲಿರುವುದು (ಕೊವ್ಯಾಕ್ಸಿನ್) ಬರೀ ನೀರು-ಇವರು ಲಸಿಕೆ ಕೊಟ್ಟಾಗ (ಕೋವಿಶೀಲ್ಡ್) ಕಾಣಿಸಿಕೊಳ್ಳುತ್ತಿರುವ ಜ್ವರ ತಗ್ಗಿಸಲು ಪಾರಾಸೆಟಮಾಲ್ ನೀಡುತ್ತಿದ್ದಾರೆ ಎಂದೆಲ್ಲ ಕೋಳಿಜಗಳ ನಡೆದಾಗ ‘ಉನ್ನತ ಮಟ್ಟದಲ್ಲಿ’ ಅವರನ್ನು ಸುಮ್ಮನಿರಿಸಬೇಕಾಯಿತು.
2021ರ ಜನವರಿ 16ರಂದು ಪ್ರಧಾನಮಂತ್ರಿಗಳು ಭಾರತದಲ್ಲಿ ಲಸಿಕೆ ನೀಡಿಕೆ ಅಭಿಯಾನವನ್ನು ಆರಂಭಿಸಿ, ‘ಲಸಿಕೋತ್ಸವ’ಕ್ಕೆ ಹಾದಿ ತೆರೆದರು. ಇದಲ್ಲದೇ 93 ದೇಶಗಳಿಗೆ COVAX ಒಪ್ಪಂದದ ಭಾಗವಾಗಿ ಲಸಿಕೆಗಳನ್ನು ನೀಡಿದ್ದನ್ನೂ, ‘ಇದು ವ್ಯಾಕ್ಸೀನ್ ಮೈತ್ರಿ’; ಜಗತ್ತಿಗೇ ಲಸಿಕೆ ಸರಬರಾಜು ಮಾಡುತ್ತಿರುವ ದೇಶ ನಮ್ಮದು ಎಂದೆಲ್ಲ ಪ್ರಚಾರ ಪಡೆಯಲಾಯಿತು. ಈ ನಡುವೆ ಎರಡನೇ ಅಲೆಯ ಅಬ್ಬರದ ವೇಳೆ, ಎಂಟು ತಿಂಗಳ ಕಾಲ ಲಸಿಕೆ ದೇಶದಿಂದ ಹೊರಹೋಗಲು ನಿಷೇಧ ಹೇರಿದ್ದರಿಂದಾಗಿಯೂ ಭಾರತ ಸುದ್ದಿಯಲ್ಲಿತ್ತು.
ದೇಶದಲ್ಲಿ ಲಸಿಕೆಯನ್ನು ಪರೋಕ್ಷವಾಗಿ ಕಡ್ಡಾಯಗೊಳಿಸಿ, ಎಲ್ಲರೂ ಲಸಿಕೆ ಪಡೆದುಕೊಳ್ಳು ವಂತೆ ಒತ್ತಡ ಹೇರಿದ್ದು ಒಂದೆಡೆಯಾದರೆ, ಇನ್ನೊಂದೆಡೆ, ಲಸಿಕೆಗೆ ಕೇಂದ್ರ ಸರಕಾರ 35,000 ಕೋಟಿ ರೂ.ಗಳನ್ನು ತೆಗೆದಿರಿಸಿದೆ ಎಂದು ಪ್ರಕಟಿಸಿದ ಹೊರತಾಗಿಯೂ, ರಾಜ್ಯ ಸರಕಾರಗಳು ತಮಗೆ ಅಗತ್ಯ ಇರುವ ಲಸಿಕೆಯನ್ನು ತಾವೇ ಹಣತೆತ್ತು ಖರೀದಿಸಲಿ ಎಂಬ ನಿಲುವು; ಚುನಾವಣೆ ಕಾಲದಲ್ಲಿ ಕೆಲವು ರಾಜ್ಯಗಳಿಗೆ ಉಚಿತ ಲಸಿಕೆ ನೀಡಿದ್ದು... ಇವೆಲ್ಲ ಸೇರಿ ಗೊಂದಲ ಎದ್ದಾಗ, ಸುಪ್ರೀಂ ಕೋರ್ಟು 2021 ಮೇ 03ರಂದು ಚಾಟಿ ಬೀಸಿ, ಸಂವಿಧಾನದ 14, 21ನೇ ವಿಧಿಗಳ ಅನ್ವಯ ಕೇಂದ್ರ ಸರಕಾರವೇ ಲಸಿಕೆಗಳನ್ನು ಉತ್ಪಾದಕರ ಜೊತೆ ಚರ್ಚಿಸಿ, ದರ ನಿರ್ಧರಿಸಿ, ಜನರಿಗೆ ಉಚಿತವಾಗಿ ಒದಗಿಸಬೇಕೆಂದು ಹೇಳಿತು. ಕಡೆಗೆ ಜೂನ್ 7, 2021ರಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು, 18 ವರ್ಷ ಮೇಲ್ಪಟ್ಟವರಿಗೆಲ್ಲ ಭಾರತ ಸರಕಾರ ಲಸಿಕೆಯನ್ನು ಉಚಿತವಾಗಿ ನೀಡಲಿದೆ ಎಂದು ಪ್ರಕಟಿಸಿದರು. ಅಕ್ಟೋಬರ್‌ನಲ್ಲಿ ಲಸಿಕೆ 100 ಕೋಟಿ ಜನರಿಗೆ ನೀಡಿದ್ದನ್ನು ಸಂಭ್ರಮಿಸಿ, ಮತ್ತೊಮ್ಮೆ ದೇಶವನ್ನುದ್ದೇಶಿಸಿ ಅವರು ಮಾತನಾಡಿದ್ದರು.
ಇಷ್ಟೆಲ್ಲ ಆಗಿ, ಈಗ ಲಸಿಕೆಯ ಅಡ್ಡಪರಿಣಾಮಗಳ ಸುದ್ದಿ ಬರತೊಡಗಿದಾಗ, ದೇಶದೆಲ್ಲೆಡೆ ಹೃದಯಾಘಾತ, ಕುಸಿದು ಬಿದ್ದು ಸಾವಿನ ಪ್ರಶ್ನೆಗಳು ಏಳತೊಡಗಿದಾಗ, ಅದಕ್ಕೂ ಲಸಿಕೆಗೂ ಸಂಬಂಧಗಳಿವೆಯೇ ಎಂದು ಪರಿಶೀಲಿಸಲು ಕೋರಿಕೊಂಡಾಗ, ಸರಕಾರ ಬಾಯಿ ತೆರೆಯುತ್ತಿಲ್ಲ. ಅದಕ್ಕಿಂತ ದೊಡ್ಡ ದುರಂತ ಎಂದರೆ, ಕೋವಿಡ್ ಅಥವಾ ಕೋವಿಡ್ ಲಸಿಕೆಯ ದೀರ್ಘಕಾಲಿಕ/ಅಡ್ಡ ಪರಿಣಾಮಗಳ ಕುರಿತಾದ ನಿಗಾ ವ್ಯವಸ್ಥೆಯನ್ನು ಕೂಡ ಸರಕಾರ ಇಂದು ಹೊಂದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ಕೋವಿಡ್ ಲಸಿಕೆಯ ಅಪಾಯಗಳಿಗಿಂತ ಲಾಭ ಹೆಚ್ಚು; ಅದು ದೇಶದ ಜನರ ಜೀವ ಉಳಿಸಿದೆ ಎಂಬ ಹಾರುತ್ತರ ಸಿಗುತ್ತಿದೆ.
ಲಸಿಕೆ ಬರುವಾಗ ಇಂಚಿಂಚಲ್ಲೂ ಮುಂದೆ ನಿಂತು ಪ್ರಚಾರ ಪಡೆದ, ತನ್ನ ಬೆನ್ನು ತಾನೇ ತಟ್ಟಿಕೊಂಡ ಸರಕಾರ, ಈಗ ಅದರ ಅಡ್ಡಪರಿಣಾಮಗಳ ಪ್ರಶ್ನೆ ಬಂದಾಗ, ಜನ ಅಕಾರಣವಾಗಿ ಸಾಯುತ್ತಿರುವಾಗ, ಅದಕ್ಕೆ ಕಾರಣಗಳನ್ನು ಪತ್ತೆ ಮಾಡಿ, ಅಪಾಯವರ್ಗದಲ್ಲಿ ಬರುವವರನ್ನು ಗುರುತಿಸಿ, ಅವರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಿ ಎಂದಾಗ, ಮುಂಚೂಣಿಯಲ್ಲಿ ನಿಲ್ಲುವ ಬದಲು ತಾರಮ್ಮಯ್ಯ ಆಡಿಸುತ್ತಿರುವುದು ಆಘಾತಕಾರಿ. ಈ ಎಲ್ಲ ಸಂಗತಿಗಳು ಕೂಡ ಸಮಗ್ರ ತನಿಖೆಗೆ ಅರ್ಹ.