ವಾಷಿಂಗ್ ಮಷೀನು ಮತ್ತದರ ‘ಸ್ವಿಚ್ಚು’

ಕರೆತಂದು ಕಂತೆಹಾಕಿಕೊಂಡಿರುವ ಬೇರೆ ಪಕ್ಷಗಳ ರಾಜಕಾರಣಿಗಳನ್ನು ಬಿಜೆಪಿ ವಾಷಿಂಗ್ ಮಷೀನಿಗೆ ತುಂಬಲಾಗಿರುವುದು ಹೊರನೋಟಕ್ಕೆ ಕಾಣಿಸುತ್ತಿದೆ. ಆದರೆ, ನಾಗಪುರದಲ್ಲಿರುವ ವಾಷಿಂಗ್ ಮಷೀನಿನ ‘ಸ್ವಿಚ್ ಆನ್ ಆಗದಿದ್ದರೆ’, ಆಗ ಏನಾದೀತು? ಮತ್ತು ಆ ಸ್ವಿಚ್, ‘ಊಹಿಸಿರುವಂತೆ ಆಫ್ ಆಗಿರದಿದ್ದರೆ’ ಆಗ ಏನಾದೀತು?!!

Update: 2024-05-04 06:03 GMT

ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಸಂಘ ಪರಿವಾರದ ತಾಯಿಬೇರು ಆರೆಸ್ಸೆಸ್ ಪಾತ್ರದ ಬಗ್ಗೆ ಬಹಳ ಕುತೂಹಲಕರ ಸಂಗತಿಗಳು, ವದಂತಿಗಳ ರೂಪದಲ್ಲಿ ಹರಿದಾಡುತ್ತಿವೆ. ಈ ಬಾರಿಯ ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ಸಂಗತಿಗಳು ಅಂತರ್ಗಾಮಿನಿಯಾಗಿ ಹರಡುತ್ತಿರುವುದರಿಂದ, ಈ ಆರೆಸ್ಸೆಸ್ ಕುರಿತ ವದಂತಿಗಳೂ ಅದರ ಜೊತೆಜೊತೆಯಾಗಿಯೇ ಹರಡುತ್ತಿದ್ದು, ಎದ್ದು ಕಾಣಿಸುತ್ತಿಲ್ಲ. ಆರೆಸ್ಸೆಸ್ ಕುರಿತ ಒಂದು ನಿರ್ದಿಷ್ಟ ವದಂತಿಯನ್ನು ಸ್ವಲ್ಪ ಪ್ರತ್ಯೇಕಿಸಿ ನೋಡುವುದು ಸಾಧ್ಯವೇ ಎಂಬ ಪ್ರಯತ್ನ ಇದು.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳು ಮುಗಿದ ಬೆನ್ನಿಗೇ, ಕಳೆದ ವರ್ಷ ಮೇ 23ರಂದು, ಆರೆಸ್ಸೆಸ್ ಮುಖವಾಣಿ ‘ಆರ್ಗನೈಸರ್’ ಒಂದು ಸಂಪಾದಕೀಯ ಬರೆದಿತ್ತು. ‘Karnataka results: Opportune time for Introspection’ ಶೀರ್ಷಿಕೆಯಲ್ಲಿ ಬರೆಯಲಾಗಿದ್ದ ಈ ಸಂಪಾದಕೀಯ, 2024ರ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ಬಿಜೆಪಿಗೆ ಸ್ಪಷ್ಟ ಶಬ್ದಗಳಲ್ಲಿ ಒಂದು ಬಲವಾದ ಸಂದೇಶ ನೀಡಿತ್ತು: ‘‘ಬಿಜೆಪಿಗೆ ಪರಿಸ್ಥಿತಿಯನ್ನು ಅವಲೋಕಿಸಿಕೊಳ್ಳಲು ಇದು ಸಕಾಲ. ಪ್ರಾದೇಶಿಕ ಮಟ್ಟದಲ್ಲಿ ಪ್ರಬಲ ನಾಯಕತ್ವ ಮತ್ತು ಪರಿಣಾಮಕಾರಿ ಆಡಳಿತ ಇಲ್ಲದಿದ್ದರೆ, ಪ್ರಧಾನಮಂತ್ರಿ ಮೋದಿಯವರ ಚರಿಷ್ಮಾ ಮತ್ತು ಸೈದ್ಧಾಂತಿಕ ಅಂಟಿನ ರೂಪದಲ್ಲಿರುವ ಹಿಂದುತ್ವ (ಗೆಲುವಿಗೆ) ಸಾಕಾಗುವುದಿಲ್ಲ. ರಾಜ್ಯ ಮಟ್ಟದಲ್ಲಿ ಆಡಳಿತ ಪರಿಣಾಮಕಾರಿಯಾಗಿದ್ದರೆ ಮಾತ್ರ ಹಿಂದುತ್ವದ ಸಿದ್ಧಾಂತ ಮತ್ತು ಪ್ರಧಾನಿ ಮೋದಿಯವರ ನಾಯಕತ್ವಗಳು ಧನಾತ್ಮಕ ಅಂಶಗಳಾಗಿ ಒದಗಿಬರುತ್ತವೆ.’’

ಈ ಸಂಪಾದಕೀಯದ ಮಾತುಗಳು ಕೇವಲ ಅಕ್ಷರಗಳಾಗಿ ಉಳಿದಂತಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಎರಡು ಬಗೆಯ ಹಿಂದುತ್ವಗಳು ತಳಮಟ್ಟದಲ್ಲಿ ಕಾಣಸಿಕ್ಕಿವೆ. ಒಂದು ನಾಗಪುರ ಮೂಲದ ಹಿಂದುತ್ವವಾದರೆ ಇನ್ನೊಂದು ಮೋದಿ ಚರಿಷ್ಮಾ ಪ್ರೇರಿತ ಹಿಂದುತ್ವ ಎಂಬುದು ಕರ್ನಾಟಕದಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ತಳಮಟ್ಟದಲ್ಲಿ ಕಂಡವರ ಅನಿಸಿಕೆ. ಮೊದಲನೆಯ ವರ್ಗದ ಹಿಂದುತ್ವ, ಈ ಬಾರಿ ಪರಿಸ್ಥಿತಿಯ ಬಗ್ಗೆ ನಿರಾಶೆ, ಅಸಹಾಯಕತೆಗಳ ನಿಟ್ಟುಸಿರು ಹೊಂದಿದ್ದರೆ, ಎರಡನೆಯದು ಎಂದಿನಂತೆ ಉಬ್ಬಾಳ್ತನದ ಪ್ರದರ್ಶನದಲ್ಲಿತ್ತು. ಹೊರನೋಟಕ್ಕೆ ಎದ್ದು ಕಾಣಿಸದ ಈ ಸೂಕ್ಷ್ಮವಾದ ವಿಭಜನೆ, ಈ ಬಾರಿಯ ಚುನಾವಣೆ ಫಲಿತಾಂಶಗಳ ಮೇಲೆ ಪ್ರಭಾವ ಬೀರಲಿದೆಯೇ? ಹೌದೆಂದಾದರೆ ಎಷ್ಟು ಪ್ರಭಾವ ಬೀರಲಿದೆ? ಎಂಬುದು ಬಹಳ ಕುತೂಹಲಕರ.

80-90ರ ದಶಕಗಳಲ್ಲಿ ಬಿಜೆಪಿ ನಾಯಕ ಕೆ.ಆರ್. ಮಲ್ಖಾನಿ ಅವರು ಹರಿಬಿಟ್ಟಿದ್ದ ‘‘ಪಾರ್ಟಿ ವಿದ್ ಅ ಡಿಫರೆನ್ಸ್’’ ಎಂಬ ಗುರುತು, ಈಗ 2014ರಿಂದ ಈಚೆಗೆ, ಬಿಜೆಪಿ ಪಾಲಿಗೆ ಸಂಪೂರ್ಣವಾಗಿ ಅಪ್ರಸ್ತುತಗೊಂಡಿದೆ. ಕಳೆದ ಹತ್ತು ವರ್ಷಗಳಲ್ಲಿ ಹಿಂದುತ್ವದ ಎಪಿಸೆಂಟರ್ ನಾಗಪುರದಿಂದ ದಿಲ್ಲಿಯ ಪಿಎಂಒಗೆ ಜಾಗ ಬದಲಾಯಿಸಿದೆ. ಎದ್ದು ಕಾಣಿಸುವಂತೆ, ಕಾಂಗ್ರೆಸ್ ಅಥವಾ ಬೇರೆ ಪ್ರತಿಪಕ್ಷಗಳಲ್ಲಿದ್ದ ಕಳಂಕಿತ, ಹಗರಣದ ಹೊರೆ ಹೊತ್ತಿರುವ ಹಲವು ಪ್ರಮುಖ ನಾಯಕರನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಬಿಜೆಪಿಯ ಚುನಾವಣೆ ಗೆಲ್ಲುವ ಯಂತ್ರದ ಈ ಕ್ರಮವು, ಪ್ರತಿಪಕ್ಷಗಳಿಗೆ ಬಲವಾದ ಅಸ್ತ್ರವನ್ನು ಒದಗಿಸಿದೆ. ಆದಾಯ ತೆರಿಗೆ ಇಲಾಖೆ, ಅನುಷ್ಠಾನ ನಿರ್ದೇಶನಾಲಯ, ಸಿಬಿಐನಂತಹ ತನ್ನ ಆಯಕಟ್ಟಿನ ಬಲಗಳನ್ನು ಬಳಸಿಕೊಂಡು ಕಳಂಕಿತ ನಾಯಕರನ್ನೆಲ್ಲ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅವರು ಬಿಜೆಪಿ ವಾಷಿಂಗ್ ಮಷೀನಿನಲ್ಲಿ ಶುದ್ಧರಾಗಿ ಕಳಂಕಮುಕ್ತರಾಗುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ನೆರೇಟಿವ್ ಗಟ್ಟಿಗೊಳ್ಳುತ್ತಿದೆ.

ರಾಜಕೀಯವಾಗಿ ಪ್ರಬಲ ಜಾಗಕ್ಕೆ ಬರುವ ತನಕವೂ ತನ್ನ ಸ್ಲೇಟನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿದ್ದ ಆರೆಸ್ಸೆಸ್‌ಗೆ, ಈಗ ಪ್ರಬಲ ಜಾಗದಲ್ಲಿ ಕುಳಿತು, 10 ವರ್ಷಗಳ ಕಾಲ ತನ್ನ ಪರಿವಾರದ ಆಡಳಿತವನ್ನು ನೋಡಿದ ಬಳಿಕ, ಎಲ್ಲವನ್ನೂ ಸಮರ್ಥಿಸಿಕೊಳ್ಳುವುದು ಮೊದಲಿನಷ್ಟು ಸುಲಭವಿಲ್ಲ ಎಂದು ಅರ್ಥವಾಗತೊಡಗಿದೆ. ಅಬ್ ಕೀ ಬಾರ್ 400 ಪಾರ್ ಘೋಷಣೆ ಹೊರಟ ಬಳಿಕ, ‘‘ಸಂವಿಧಾನಕ್ಕಿಂತ ಹೊರತಾದ ಬೇರೆ ಅಧಿಕಾರ ಕೇಂದ್ರವಿಲ್ಲ’’, ‘‘ಸಂವಿಧಾನದಲ್ಲಿ ಹೇಳಲಾಗಿರುವ ಮೀಸಲಾತಿಗಳನ್ನು ಆರೆಸ್ಸೆಸ್ ಬೆಂಬಲಿಸುತ್ತದೆ’’ ಎಂಬಂತಹ ಹೇಳಿಕೆಗಳ ಮೂಲಕ ಅಗತ್ಯ ಕೋರ್ಸ್ ಕರೆಕ್ಷನ್‌ಗಳನ್ನು ಆರೆಸ್ಸೆಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಕಾಲಕಾಲಕ್ಕೆ ಮಾಡುತ್ತಾ ಬಂದಿದ್ದಾರೆ. ಸಾಂವಿಧಾನಿಕ ಚೌಕಟ್ಟಿನ ಒಳಗಿನ ಸಂಗತಿಗಳನ್ನು ಹೀಗೆ ಸ್ಪಷ್ಟಪಡಿಸಿದಷ್ಟು ಸುಲಭವಾಗಿ, ಬಿಜೆಪಿ ನೇತೃತ್ವದ ಸರಕಾರದಲ್ಲಿರಬಹುದಾದ ಭ್ರಷ್ಟಾಚಾರದ, ನೈತಿಕತೆಯ, ಆಡಳಿತ ವೈಫಲ್ಯಗಳ ಮತ್ತು ಹೊಂದಾಣಿಕೆ ರಾಜಕಾರಣದ ಪ್ರಶ್ನೆಗಳನ್ನು ವಿಶ್ವಾಸದಿಂದ ಉತ್ತರಿಸುವ ಸ್ಥಿತಿಯಲ್ಲಿ ಇಂದು ಆರೆಸ್ಸೆಸ್ ಉಳಿದಿಲ್ಲ. ಈ ಕಾರಣದಿಂದಾಗಿಯೇ ಅಲ್ಲೊಂದು ಕಂದಕ ಮೂಡಿರುವುದು ನಿಧಾನಕ್ಕೆ ಕಾಣಿಸತೊಡಗಿದೆ.

ಈ ವರ್ಷ ಜನವರಿ 22ರಂದು ರಾಮಮಂದಿರ ಪ್ರತಿಷ್ಠೆಯ ವೇಳೆಗೆ ಸಂಘಪರಿವಾರ ಮುಂದಿನ ನಾಲ್ಕು ತಿಂಗಳುಗಳಲ್ಲಿ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಲಿರುವ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿತ್ತು. ಪ್ರತಿಷ್ಠೆ ಸಮಾರಂಭಕ್ಕೆ ಮುನ್ನ ದೇಶದಾದ್ಯಂತ 19.39 ಕೋಟಿ ಕುಟುಂಬಗಳನ್ನು ಅಕ್ಷತೆಯೊಂದಿಗೆ ತಲುಪಲಾಗಿದೆ ಎಂದು ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ ಹೇಳಿಕೆ ನೀಡಿದ್ದರು. ಚುನಾವಣೆಗೆ ಕೆಲವೇ ದಿನಗಳ ಮುನ್ನ ಇಂತಹದೊಂದು ಜನಸಂಪರ್ಕ ಎಕ್ಸರ್ಸೈಸ್ ನಡೆದಿರುವುದು ಯಾವುದೇ ರಾಜಕೀಯ ಪಕ್ಷದ ಮಟ್ಟಿಗೆ ಬಹಳ ಮಹತ್ವಾಕಾಂಕ್ಷೆಯ ಬೆಳವಣಿಗೆ. 2020ರ ಆಗಸ್ಟ್ 05ರಂದು ಅಯೋಧ್ಯೆಯಲ್ಲಿ ನಡೆದ ಭೂಮಿಪೂಜನಕ್ಕೆ ಮತ್ತು ಆ ಬಳಿಕ, ಜನವರಿ 22, 2024ರ ಪ್ರಾಣ ಪ್ರತಿಷ್ಠೆಗಳೆರಡಕ್ಕೂ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಧಾನಮಂತ್ರಿಗಳ ಜೊತೆ ಹಾಜರಿದ್ದರು. ಆದರೆ, ಈ ಬೃಹತ್ ಜನಸಂಪರ್ಕ, ತಯಾರಿ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆ ಈಗ ಎರಡು ಹಂತಗಳ ಚುನಾವಣೆ ಮುಗಿಯುವ ವೇಳೆಗೂ, ಊಹಿಸಿದ್ದಂತಹ ಅಭೂತಪೂರ್ವ ಚುನಾವಣಾ ಸಂಗತಿ ಆಗಿರದಿರುವುದು ಕುತೂಹಲಕರ. ಆದರೆ ಮೇ 01ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಯೋಧ್ಯೆ ಭೇಟಿ ಮತ್ತು ಆ ಬಳಿಕ ಮೇ 05ರಂದು (ನಾಳೆ) ಅಯೋಧ್ಯೆಯಲ್ಲಿ ಪ್ರಧಾನಮಂತ್ರಿಗಳ ರೋಡ್ ಶೋ ನಿಗದಿಯಾಗಿದ್ದು, ಉತ್ತರಭಾರತದಲ್ಲಿ ಅವುಗಳ ಚುನಾವಣಾ ಪರಿಣಾಮಗಳನ್ನು ಕಾದು ನೋಡಬೇಕಿದೆ.

1925ರಲ್ಲಿ ಆರಂಭಗೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಇಂದು ದೇಶದಾದ್ಯಂತ 45 ಪ್ರಾಂತಗಳಲ್ಲಿ 73,117 ದೈನಂದಿನ ಶಾಖೆಗಳನ್ನು ನಡೆಸುತ್ತಿದೆ; 60 ಲಕ್ಷದಷ್ಟು ಸ್ವಯಂಸೇವಕರನ್ನು ಹೊಂದಿರುವ ಬೃಹತ್ ಸಂಘಟನೆಯಾಗಿದೆ. ಚುನಾವಣೆಗಳ ಕಾಲದಲ್ಲಿ ಸಹಜವಾಗಿಯೇ ತನ್ನ ಸೈದ್ಧಾಂತಿಕ ಕವಲಾಗಿರುವ ಬಿಜೆಪಿ ಪರವಾಗಿ ಚುನಾವಣಾ ಪ್ರಚಾರದಲ್ಲಿ, ಆಯಕಟ್ಟಿನ ಜಾಗಗಳಲ್ಲಿ ಚುನಾವಣಾ ತಂತ್ರಗಾರಿಕೆಯಲ್ಲಿ ಅದು ತೊಡಗಿಕೊಳ್ಳುವುದು ಸಾಮಾನ್ಯ ದೃಶ್ಯವಾಗಿತ್ತು. ಆದರೆ 2024ರ ಈ ಚುನಾವಣೆಗಳಲ್ಲಿ ಆರೆಸ್ಸೆಸ್ ಹಿಂದಿನಷ್ಟು ಪ್ರಖರವಾಗಿ ತನ್ನನ್ನು ತೊಡಗಿಸಿಕೊಂಡಿಲ್ಲ ಎಂಬುದು ತಳಮಟ್ಟದಲ್ಲಿ ಚುನಾವಣೆಗಳನ್ನು ಗಮನಿಸಿದವರ ಅಭಿಪ್ರಾಯ. ಇದು ಸತ್ಯವಾಗಿದ್ದರೆ, ಇಂತಹದೊಂದು ನಿರ್ಧಾರದ ಹಿಂದಿರುವ ಚಿಂತನೆಗಳು ಮತ್ತು ಅದರ ಸಂಭಾವ್ಯ ಪರಿಣಾಮಗಳು ಬಹಳ ಕುತೂಹಲಕರ.

ಅಂತಿಮವಾಗಿ ಪ್ರಶ್ನೆ ಇಷ್ಟೇ. ಕರೆತಂದು ಕಂತೆಹಾಕಿಕೊಂಡಿರುವ ಬೇರೆ ಪಕ್ಷಗಳ ರಾಜಕಾರಣಿಗಳನ್ನು ಬಿಜೆಪಿ ವಾಷಿಂಗ್ ಮಷೀನಿಗೆ ತುಂಬಲಾಗಿರುವುದು ಹೊರನೋಟಕ್ಕೆ ಕಾಣಿಸುತ್ತಿದೆ. ಆದರೆ, ನಾಗಪುರದಲ್ಲಿರುವ ವಾಷಿಂಗ್ ಮಷೀನಿನ ‘ಸ್ವಿಚ್ ಆನ್ ಆಗದಿದ್ದರೆ’, ಆಗ ಏನಾದೀತು? ಮತ್ತು ಆ ಸ್ವಿಚ್, ‘ಊಹಿಸಿರುವಂತೆ ಆಫ್ ಆಗಿರದಿದ್ದರೆ’ ಆಗ ಏನಾದೀತು?!!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News